Tag: ಬಿರಿಯಾನಿ

  • ಲೆಗ್ ಪೀಸ್‍ಗಾಗಿ ಗಲಾಟೆ ಶುರು: ಕಿವಿ ಪೀಸ್ ಕಚ್ಚಿ ತೆಗೆಯೋ ಮೂಲಕ ಜಗಳ ಎಂಡ್

    ಲೆಗ್ ಪೀಸ್‍ಗಾಗಿ ಗಲಾಟೆ ಶುರು: ಕಿವಿ ಪೀಸ್ ಕಚ್ಚಿ ತೆಗೆಯೋ ಮೂಲಕ ಜಗಳ ಎಂಡ್

    ಉಡುಪಿ: ಚಾಲಕರಿಬ್ಬರು ಬಿರಿಯಾನಿಯ ಲೆಗ್ ಪೀಸ್‍ಗಾಗಿ ಗಲಾಟೆ ಮಾಡಿಕೊಂಡು, ಕೊನೆಗೆ ಕಿವಿ ಕಚ್ಚಿ ತಿನ್ನುವ ಮೂಲಕ ಜಗಳ ಕೊನೆಗೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

    ಚಾಲಕರಾದ ಮಧು ಮತ್ತು ಸುರೇಶ್ ಲೆಗ್ ಪೀಸ್‍ಗಾಗಿ ಜಗಳವಾಡಿದವರು. ಶ್ರೀಕೃಷ್ಣ ಮಠದ ಪಾರ್ಕಿಂಗ್ ಮೈದಾನದಲ್ಲಿ ಕುಡಿದ ಅಮಲಿನಲ್ಲಿದ್ದ ಇಬ್ಬರು ಕಿವಿ, ಮುಖ, ಕೈಗೆ ಕಚ್ಚಿಕೊಂಡು ವಿಲಕ್ಷಣವಾಗಿ ವರ್ತಿಸಿದ್ದಾರೆ.

    ನಡೆದಿದ್ದು ಏನು?
    ಸುರೇಶ ಹಾಗೂ ಮಧು ಒಂದೇ ತಟ್ಟೆಯಲ್ಲಿ ತಿಂದು, ಉಂಡು-ಕುಡಿದ ಸ್ನೇಹಿತರು. ಇಂದು ಉಡುಪಿಯ ಕೃಷ್ಣಮಠಕ್ಕೆ ಉತ್ತರ ಕರ್ನಾಟಕದಿಂದ ಪ್ರವಾಸಿಗರನ್ನು ಕರೆತಂದು ತಂದಿದ್ದರು. ಕುಡಿದ ಅಮಲಿನಲ್ಲಿ ಮಠದ ಪಾರ್ಕಿಂಗ್ ಜಾಗದಲ್ಲಿದ್ದ ಹೋಟೆಲ್‍ನಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಇಬ್ಬರೂ ಬಿರಿಯಾನಿಯ ಲೆಗ್ ಪೀಸ್ ಗಾಗಿ ನಡೆದ ಜಗಳ ಪ್ರಾರಂಭಿಸಿದ್ದು, ಪರಸ್ಪರ ಹೊಡೆದಾಡಿ ಕಿವಿ, ಮುಖ, ಕೈಗೆ ಕಚ್ಚಿಕೊಂಡ ವಿಲಕ್ಷಣ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಜಗಳದಲ್ಲಿ ಚಾಲಕ ಮಧು ಕಿವಿಯನ್ನು ಮತ್ತೊಬ್ಬ ಚಾಲಕ ಸುರೇಶ ಕಚ್ಚಿ ಹರಿದಿದ್ದಾನೆ. ಕುಡಿದ ಅಮಲಿನಲ್ಲಿ ಆತ ಬಿರಿಯಾನಿ ಜೊತೆಗೆ ಕಿವಿಯನ್ನೂ ತಿಂದಿರುವ ಶಂಕೆ ವ್ಯಕ್ತಪಾಗಿದೆ. ಪ್ರಕರಣದ ಕುರಿತು ಚಾಲಕ ಮಧು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

  • ಹಣ, ಎಣ್ಣೆ, ಸೀರೆ, ಕುಕ್ಕರ್ ಆಯ್ತು ಈಗ ಚುನಾವಣಾ ಅಧಿಕಾರಿಗಳಿಂದ ಬಿರಿಯಾನಿ ವಶ!

    ಹಣ, ಎಣ್ಣೆ, ಸೀರೆ, ಕುಕ್ಕರ್ ಆಯ್ತು ಈಗ ಚುನಾವಣಾ ಅಧಿಕಾರಿಗಳಿಂದ ಬಿರಿಯಾನಿ ವಶ!

    ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆ ಫೋಷಣೆಯಾಗುತ್ತಿದ್ದಂತೆ ರಾಜ್ಯದೆಲ್ಲೆಡೆ ಚುನಾವಣಾ ಅಧಿಕಾರಿಗಳು ಭರ್ಜರಿಯಾಗಿ ಕಾರ್ಯಚರಣೆ ಮಾಡುತ್ತಿದ್ದಾರೆ.

    ಚುನಾವಣಾ ಅಧಿಕಾರಿಗಳು ಇಲ್ಲಿಯವರೆಗೆ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ, ಬಂಗಾರ, ಬೆಳ್ಳಿ, ಮದ್ಯ, ಸೀರೆ ಮತ್ತು ಕುಕ್ಕರ್ ಗಳನ್ನು ವಶಕ್ಕೆ ಪಡೆಯುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಚುಣಾವಣಾ ಅಧಿಕಾರಿಗಳು ಬಿರಿಯಾನಿಯನ್ನು ವಶಕ್ಕೆ ಪಡೆದಿದ್ದಾರೆ.

    ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಆರ್.ಎಂ.ಸಿಯಲ್ಲಿ ತಯಾರಿಸಲಾಗಿದ್ದ ಬಿರಿಯಾನಿಯನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಆಗಮನದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಬಿರಿಯಾನಿಯನ್ನು ತಯಾರಿಸಲಾಗಿತ್ತು.

    ಖಚಿತ ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಬಿರಿಯಾನಿಯನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರಿಗೆ ಈ ಬಿರಿಯಾನಿಯನ್ನ ತಯಾರಿಸಲಾಗಿತ್ತು.

  • ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲವೆಂದು ಹೆಂಡ್ತಿಯನ್ನ ಮನೆಯಿಂದ ಹೊರಗಟ್ಟಿದ!

    ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲವೆಂದು ಹೆಂಡ್ತಿಯನ್ನ ಮನೆಯಿಂದ ಹೊರಗಟ್ಟಿದ!

    ಹೈದರಾಬಾದ್: ಬಿರಿಯಾನಿ ಚೆನ್ನಾಗಿ ಮಾಡಲಿಲ್ಲವೆಂಬ ಕಾರಣಕ್ಕೆ ಪತಿ ತನ್ನನ್ನು ಮೆನಯಿಂದ ಹೊರಗಟ್ಟಿದ್ದಾರೆಂದು ಮಹಿಳೆಯೊಬ್ಬರು ಪೊಲೀಸರ ಮೊರೆ ಹೋದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಶುಕ್ರವಾರದಂದು ನಡೆದಿದೆ.

    ದೂರಿನ ಪ್ರಕಾರ ಪತಿ ಇದೇ ಕಾರಣಕ್ಕೆ ಮಹಿಳೆಯನ್ನು ಮನೆಯಿಂದ ಹೊರಹಾಕಿರುವುದು ಎರಡನೇ ಬಾರಿ. ಆರೋಪಿ ಪತಿ ರಾಜೇಂದ್ರ ಪ್ರಸಾದ್ ಕಂಪ್ಯೂಟರ್ ಎಂಜಿನಿಯರ್. ಮನೆಯಿಂದ ಹೊರಹಾಕಲ್ಪಟ್ಟ 25 ವರ್ಷದ ಪತ್ನಿ ಮಾನಸಾ ವಾರ್ದನ್ನೆಪೇಟೆಯ ಇಳ್ಳಾಂದ ಗ್ರಾಮದಲ್ಲಿ ಪತಿ ಮನೆ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದಾರೆ. ಮತ್ತೆ ತನ್ನನ್ನು ಮನೆಗೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಪತಿ ರಾಜೇಂದ್ರ ಕುಡುಕನಾಗಿದ್ದು, ಯಾವಾಗ್ಲೂ ಬಿರಿಯಾನಿ ಮಾಡುವಂತೆ ಕೇಳುತ್ತಿದ್ದರು. ತನಗೆ ಚೆನ್ನಾಗಿ ಅಡುಗೆ ಮಾಡಲು ಬರದ ಕಾರಣ ಇದೇ ವಿಷಯವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮಾನಸಾ ಆರೋಪಿಸಿದ್ದಾರೆ. ರಾಜೇಂದ್ರನ ಕುಟುಂಬದವರು ವರದಕ್ಷಿಣೆಗಾಗಿ ಡಿಮ್ಯಾಂಡ್ ಮಾಡಿದ್ದರು ಎಂದು ಕೂಡ ಮಾನಸಾ ಆರೋಪ ಮಾಡಿದ್ದಾರೆ.

    ಕಳೆದ ವರ್ಷ ನವೆಂಬರ್‍ನಲ್ಲಿ ಮಾನಸಾಗೆ ರಾಜೇಂದ್ರ ಜೊತೆ ಮದುವೆಯಾಗಿತ್ತು. ಆಕೆಯನ್ನು ಜನವರಿಯಲ್ಲಿ ಮೊದಲ ಬಾರಿಗೆ ಮನೆಯಿಂದ ಹೊರಹಾಕಿದ್ದ. ನಂತರ ಜೂನ್‍ನಲ್ಲಿ ಹಿರಿಯರು ಮಧ್ಯಪ್ರವೇಶಿಸಿ ಇಬ್ಬರಿಗೂ ರಾಜಿ ಮಾಡಿಸಿದ್ದರು. ಆದ್ರೆ ಶುಕ್ರವಾರದಂದು ಮತ್ತೆ ಕುಡಿದು ಬಂದ ರಾಜೇಂದ್ರ ಹೆಂಡತಿಗೆ ಬಿರಿಯಾನಿ ಮಾಡುವಂತೆ ಕೇಳಿದ್ದ. ಆದ್ರೆ ಬಿರಿಯಾನಿಯನ್ನ ರುಚಿಯಾಗಿ ಮಾಡಿಲ್ಲವೆಂದು ತನ್ನನ್ನು ಥಳಿಸಿ ಮನೆಯಿಂದ ಹೊರಹಾಕಿದ್ದಾಗಿ ಮಾನಸಾ ಹೇಳಿದ್ದಾರೆ.

    ಸ್ಥಳೀಯ ಮಹಿಳಾ ಹೋರಾಟಗಾರರು ಮಾನಸಾ ಬೆಂಬಲಕ್ಕೆ ಬಂದಿದ್ದು, ಅಧಿಕೃತವಾಗಿ ದೂರು ದಾಖಲಿಸಿಸಲು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಿಸಿದ ನಂತರ ಪೊಲೀಸರು, ಮಾನಸಾ ಪತಿ ಹಾಗೂ ಅತ್ತೆ ಮನೆಯವರೊಂದಿಗೆ ಕೌನ್ಸೆಲಿಂಗ್ ಮಾಡಲು ಪ್ರಯತ್ನಿಸಿದ್ದಾರೆ.

    ರಾಜೇಂದ್ರ ಹಾಗೂ ಆತನ ಮನೆಯವರು ಮಾನಸಾಗೆ ಕಿರುಕುಳ ನೀಡೋದು ಮುಂದುವರಿಸಿದ್ರೆ, ಅವರ ವಿರುದ್ಧ ಕೇಸ್ ದಾಖಲಿಸೋದಾಗಿ ಪೊಲೀಸರು ಹೇಳಿದ್ದಾರೆ.

  • ಜೆಟ್ ಏರ್ ವೇಸ್ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕೀಟ ಪ್ರಯಾಣಿಕ ಶಾಕ್ !

    ಜೆಟ್ ಏರ್ ವೇಸ್ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕೀಟ ಪ್ರಯಾಣಿಕ ಶಾಕ್ !

    ಹೈದರಾಬಾದ್: ಸೋಮವಾರ ಜೆಟ್ ಏರ್ ವೇಸ್ ಪ್ರಯಾಣಿಕರೊಬ್ಬರಿಗೆ ವಿಮಾನದ ಸಿಬ್ಬಂದಿ ನೀಡಿದ ಆಹಾರ ತಿನ್ನುವಾಗ ಕಹಿ ಅನುಭವವಾಗಿದೆ. ಆಗ ಆಹಾರವನ್ನು ಪರೀಶೀಲಿಸಿದಾಗ ಅದರಲ್ಲಿ ಕೀಟವೊಂದು ಕಂಡುಬಂದಿದೆ.

    ಕೃಷ್ಣ ಮೋಹನ್ ಎಂಬವರು ಜೆಟ್ ಏರ್ ವೇಸ್ 9W7081/S24460 ವಿಮಾನದಲ್ಲಿ ಹೈದರಾಬಾದ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ವಿಮಾನದಲ್ಲಿ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ. ಬಿರಿಯಾನಿಯ ಒಳಗೆ ಕೀಟ ಇರುವುದು ಕಂಡು ಶಾಕ್ ಆಗಿದ್ದಾರೆ. ನಂತರ ಮೋಹನ್ ತಕ್ಷಣದಲ್ಲಿಯೇ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾರೆ.

    ವಿಮಾನದಲ್ಲಿ ಸಿಬ್ಬಂದಿಗೆ ದೂರು ನೀಡಲು ಯಾವುದೇ ಪೇಪರ್ ಗಳು ಲಭ್ಯವಿರಲಿಲ್ಲ. ಹಾಗಾಗಿ ಒಂದು ಚಿಕ್ಕ ಪೇಪರ್ ಅಲ್ಲಿ ದೂರನ್ನು ಬರೆದುಕೊಟ್ಟು ಬಂದಿದ್ದರು. ನಂತರ ಮುಂಬೈಯಲ್ಲಿ ವಿಮಾನದಿಂದ ಇಳಿದ ನಂತರ ಮೋಹನ್ ಇ ಮೇಲ್ ಮೂಲಕ ದೂರನ್ನು ಮುಂಬೈ ಜೆಟ್ ಏರ್ ವೇಸ್ ಗೆ ನೀಡಿದ್ದಾರೆ.

    ಇದುವರೆಗೂ ಮೋಹನ್ ಅವರಿಗೆ ಜೆಟ್ ಏರ್ ವೇಸ್ ಕಡೆಯಿಂದ ಯಾವುದೇ ತರಹದ ಉತ್ತರ ಬಂದಿಲ್ಲ ಎಂದು ತಿಳಿಸಿದ್ದಾರೆ.

  • ಹೈದರಾಬಾದ್ ಚಿಕನ್ ಬಿರಿಯಾನಿ ತಯಾರಿಸುವುದು ಹೇಗೆ?

    ಹೈದರಾಬಾದ್ ಚಿಕನ್ ಬಿರಿಯಾನಿ ತಯಾರಿಸುವುದು ಹೇಗೆ?

    ನೀವು ಹಲವಾರು ವೆರೈಟಿಯ ಚಿಕನ್ ಬಿರಿಯಾನಿಗಳನ್ನು ಸವಿದಿರುತ್ತೀರಿ. ಅದರಲ್ಲೂ ಹೈದರಾಬಾದ್ ಚಿಕನ್ ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದನ್ನು ಸವಿಯಲು ಹೋಟೇಲ್‍ಗೇ ಹೋಗಬೇಕು ಅಂತೇನೂ ಇಲ್ಲ. ನಿಮ್ಮ ಮನೆಯಲ್ಲೇ ಈ ಬಿರಿಯಾನಿಯನ್ನು ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:
    1. ಚಿಕನ್ – 1/2 ಕೆ.ಜಿ
    2. ಬಾಸುಮತಿ ಅಕ್ಕಿ – ಕಾಲು ಕೆ.ಜಿ
    3. ಅಕ್ಕಿ – ಕಾಲು ಕೆ.ಜಿ
    4. ಈರುಳ್ಳಿ – 3
    5. ಟೊಮಾಟೋ – 3
    6. ಪುದೀನಾ – ಅರ್ಧ ಕಟ್ಟು
    7. ಕೊತ್ತಂಬರಿಸೊಪ್ಪು – ಅರ್ಧ ಕಟ್ಟು
    8. ಹಸಿಮೆಣಸಿನಕಾಯಿ – 6
    9. ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಕಪ್
    10. ಕಸ್ತೂರಿ ಮೇತಿ – 2 ಚಮಚ
    11. ಹಾಲು – 1 ಕಪ್
    12. ಚಕ್ಕೆ ಲವಂಗ – 5-6
    13. ಪಲಾವ್ ಎಲೆ – 3
    14. ಜೀರಿಗೆ – 3 ಚಮಚ
    15. ಏಲಕ್ಕಿ – 3
    16. ಉಪ್ಪು – ರುಚಿಗೆ ತಕ್ಕಷ್ಟು
    17. ಅರಿಶಿಣ – ಅರ್ಧ ಚಮಚ
    18. ತುಪ್ಪ – 5 ಚಮಚ
    19. ಗೋಡಂಬಿ – 50 ಗ್ರಾಂ

    ಮಾಡುವ ವಿಧಾನ:
    1. ಬಾಸುಮತಿ ಅಕ್ಕಿ ಮತ್ತು ಮಾಮೂಲಿ ಅಕ್ಕಿ ಎರಡನ್ನೂ ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಒಂದು ಕುಕ್ಕರ್‍ನಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ, ಅದಕ್ಕೆ ಪಲಾವ್ ಎಲೆ, ಜೀರಿಗೆ, ಏಲಕ್ಕಿ, ಚಕ್ಕೆ ಲವಂಗ ಮತ್ತು ಕಸ್ತೂರಿ ಮೇತಿ ಹಾಕಿ ಕಡಿಮೆ ಉರಿಯಲ್ಲಿ ಘಮ ಬರುವ ತನಕ ಬಾಡಿಸಿ. ನಂತರ ಇದಕ್ಕೆ ತೊಳೆದ ಅಕ್ಕಿಯನ್ನು ಹಾಕಿ ಬೇಯಲು ಬೇಕಾಗುವಷ್ಟು ನೀರು, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ಹಾಲನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಕೂಗಿಸಿ. (ಅಕ್ಕಿ ಮುಕ್ಕಾಲು ಭಾಗ ಬೆಂದಿದ್ದರೆ ಸಾಕು)

    2. ಮತ್ತೊಂದು ಪ್ಯಾನ್(ಕಡಾಯಿ)ನಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಕರಿದು ತೆಗೆಯಿರಿ, ಅದೇ ಎಣ್ಣೆಯಲ್ಲಿ ಗೊಡಂಬಿ ಚೂರುಗಳನ್ನು ಕರಿದು ತೆಗೆದಿಡಿ. ಈಗ ಪ್ಯಾನ್‍ಗೆ ಸ್ವಲ್ಪ ಈರುಳ್ಳಿ, ಹಸಿಮೆಣಸಿನಕಾಯಿ, ಅರಿಶಿಣ ಮತ್ತು ಚಿಕನ್ ಹಾಕಿ ಚೆನ್ನಾಗಿ ಬಾಡಿಸಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಚಿಕನ್ ಅರ್ಧ ಬೆಂದ ನಂತರ ರುಬ್ಬಿದ ಟೊಮಾಟೋ, ಪುದೀನಾ, ಕೊತ್ತಂಬರಿಸೊಪ್ಪಿನ ಪೇಸ್ಟ್ ಸೇರಿಸಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ತಿರುವಿ, ಗ್ರೇವಿ ಗಟ್ಟಿಯಾಗುವ ತನಕ 10-15 ನಿಮಿಷ ಬೇಯಿಸಿ.

    3. ಒಂದು ದೊಡ್ಡ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲಿಗೆ ಬೇಯಿಸಿದ್ದ ಅನ್ನ ಹಾಕಿ, ಅದರ ಮೇಲೆ ಚಿಕನ್ ಗ್ರೇವಿಯನ್ನು ಹರಡಿ, ನಂತರ ಕರಿದ ಈರುಳ್ಳಿ ಮತ್ತು ಗೊಡಂಬಿಯನ್ನು ಉದುರಿಸಿ. ಈ ರೀತಿ 3-4 ಲೇಯರ್‍ಗಳು ಒಂದರ ಮೇಲೊಂದು ಹರಡಿ, ಗಾಳಿಯಾಡದಂತೆ ಫಾಯಿಲ್ ಪೇಪರ್(ಅಲುಮಿನಿಯಮ್ ಫಾಯಿಲ್ ಪೇಪರ್) ಅಥವಾ ಒಂದು ತಟ್ಟೆಯಿಂದ ಮುಚ್ಚಿ ಸ್ಟವ್ ಆಫ್ ಮಾಡಿ ಹಬೆಯಲ್ಲೇ ಬೇಯಲು ಬಿಡಿ. 10 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು ಸೌತೇಕಾಯಿಯ ರಾಯ್ತಾದೊಂದಿಗೆ ಸವಿಯಲು ಕೊಡಿ.

    ಗಮನಿಸಿ: ಅರಿಶಿಣದ ಬದಲಿಗೆ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿದರೆ ಇನ್ನೂ ರುಚಿ ಹೆಚ್ಚು.