Tag: ಬಿಬಿಎಂಪಿ ವಿಶೇಷ ಆಯುಕ್ತ

  • ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಚಿತಾಗಾರ ಮೀಸಲು – ಅಂತ್ಯಕ್ರಿಯೆಯ ವೆಚ್ಚ ಭರಿಸಲಿರೋ ಬಿಬಿಎಂಪಿ

    ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಚಿತಾಗಾರ ಮೀಸಲು – ಅಂತ್ಯಕ್ರಿಯೆಯ ವೆಚ್ಚ ಭರಿಸಲಿರೋ ಬಿಬಿಎಂಪಿ

    ಬೆಂಗಳೂರು: ಕೊರೊನಾದಿಂದ ಮತ್ತು ನಾನ್ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿತ್ತು. ಇದರಿಂದ ನಗರದಲ್ಲಿರುವ ಚಿತಾಗಾರದ ಬಳಿ ಜನರು, ಅಂಬುಲೆನ್ಸ್ ಸಾಲಾಗಿ ನಿಲ್ಲುತ್ತಿದ್ದವು. ಇದರಿಂದ ಬಿಬಿಎಂಪಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರಗಳನ್ನು ಮೀಸಲು ಮಾಡಿದೆ.

    ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಈ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಆದೇಶ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ವಿದ್ಯುತ್ ಚಿತಾಗಾರಗಳ ಮೀಸಲು ಜೊತೆಗೆ ಕೋವಿಡ್‍ನಿಂದ ಮೃತಪಟ್ಟವರ ಉಚಿತ ಶವ ಸಂಸ್ಕಾರಕ್ಕೂ ಬಿಬಿಎಂಪಿ ಆಯುಕ್ತ ಆದೇಶ ನೀಡಿದ್ದಾರೆ.

    ಆರ್.ಆರ್.ನಗರದ ಕೆಂಗೇರಿ ಚಿತಾಗಾರ, ಯಲಹಂಕದ ಮೇಡಿ ಅಗ್ರಹಾರ ಚಿತಾಗಾರ, ಬೊಮ್ಮನಹಳ್ಳಿ ಕಡ್ಲು ಚಿತಾಗಾರ ಮತ್ತು ಮಹಾದೇವಪುರ ಪುತ್ತೂರು ಚಿತಾಗಾರ ಈ ನಾಲ್ಕು ವಿದ್ಯುತ್ ಚಿತಾಗಾರಗಳನ್ನು ನಗರದಲ್ಲಿ ಬಿಬಿಎಂಪಿ ಮೀಸಲಿಟ್ಟಿದೆ. ಸಾಮಾನ್ಯ ಸಾವು ಹಾಗೂ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರದಿಂದ ಸಾಲು ಹೆಚ್ಚಾಗುತ್ತಿತ್ತು. ಹೀಗಾಗಿ ವಿದ್ಯುತ್ ಚಿತಾಗಾರಗಳಲ್ಲಿ ಆಗುತ್ತಿದ್ದ ಒತ್ತಡ ಕಡಿಮೆಗೊಳಿಸಲು ಚಿತಾಗಾರಗಳ ಮೀಸಲು ಮಾಡಲಾಗಿದೆ ಎಂದು ರಣದೀಪ್ ತಿಳಿಸಿದ್ದಾರೆ.

    ಇನ್ನೂ ಶವ ಸಂಸ್ಕಾರಕ್ಕೆ ನೀಡಲಾಗುವ ಪ್ರೋತ್ಸಾಹ ಧನವನ್ನು ಕೂಡ ಬಿಬಿಎಂಪಿ ಭರಿಸಲಿದೆ. ಸ್ಥಳೀಯವಾಗಿ ಚಟ್ಟ, ಮಡಕೆ, ದಹನ ಪ್ರಕ್ರಿಯೆಗೆ ಆಗುವ ಎಲ್ಲ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಅಲ್ಲದೇ ಬಿಬಿಎಂಪಿ ಕೋವಿಡ್‍ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ದರ ನಿಗದಿ ಮಾಡಲಾಗಿದೆ.

    ದಹನ ಶುಲ್ಕ 250, ಚಟ್ಟ 900, ಬೂದಿ ಪಾತ್ರೆ 100, ದಹನ ಕ್ರಿಯೆ ಸಿಬ್ಬಂದಿ ಪ್ರೋತ್ಸಾಹ ದರ 500 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಒಟ್ಟಾರೆ ಪ್ರತಿ ಶವ ಸಂಸ್ಕಾರಕ್ಕೆ ಒಟ್ಟು 1,750 ರೂಪಾಯಿಯನ್ನು ಬಿಬಿಎಂಪಿ ಭರಿಸಲಿದೆ. ಈ ಆದೇಶ ಇಂದಿನಿಂದಲೇ ಜಾರಿಯಾಗಲಿದೆ ಎಂದು ವಿಶೇಷ ಆಯುಕ್ತ ರಣದೀಪ್ ಆದೇಶ ಹೊರಡಿಸಿದ್ದಾರೆ.