ಬೆಂಗಳೂರು: ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಇಬ್ಬರಲ್ಲಿ ದೃಢಪಟ್ಟಿದ್ದು, ಒಬ್ಬರ ಸಂಪರ್ಕಿತರ ಟ್ರಾವೆಲ್ ಹಿಸ್ಟರಿ ಲಭ್ಯವಾಗಿಲ್ಲ. ಹೀಗಾಗಿ ಹಲವರಲ್ಲಿ ರೂಪಾಂತರಿ ಇರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡು ಪ್ರಕರಣ ದೃಢಪಟ್ಟಿರುವ ಬಗ್ಗೆ ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಓಮಿಕ್ರಾನ್ ದೃಢಪಟ್ಟ 66 ವಯಸ್ಸಿನ ಒಬ್ಬ ವ್ಯಕ್ತಿ ನ.20ಕ್ಕೆ ಬೆಂಗಳೂರಿಗೆ ಬಂದಿದ್ದರು. ಪರೀಕ್ಷೆ ವೇಳೆ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅವರ ಸ್ವಾಬ್ ಅನ್ನು ಜಿನೋಟಿಕ್ ಲ್ಯಾಬ್‌ಗೆ ಕಳಿಸಲಾಗಿತ್ತು. ಒಮಿಕ್ರಾನ್ ಎಂದು ದೃಢಪಟ್ಟಿದೆ. ಅವರನ್ನು ಹೋಟೆಲ್‌ನಲ್ಲಿ ಕ್ವಾರಂಟೈನ್‌ಲ್ಲಿರಿಸಲಾಗಿತ್ತು. ಮೊದಲ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕದಲ್ಲಿದ್ದವರ ಮೇಲೆ ನಿಗಾವಹಿಸಲಾಗಿದೆ. ಎಲ್ಲರ ವರದಿಯೂ ನಗೆಟಿವ್ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್: ಸುಧಾಕರ್
ಎರಡನೇ ವ್ಯಕ್ತಿ 46 ವಯಸ್ಸಿನವರಾಗಿದ್ದು, ನ.24 ರಂದು ಬೆಂಗಳೂರಿಗೆ ಆಗಮಿಸಿದ್ದರು. ಮೊದಲು ಹೋಂ ಐಸೋಲೇಷನ್ ಮಾಡಲಾಗಿತ್ತು. ಅ ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 12 ಹಾಗೂ ದ್ವಿತೀಯ ಸಂಪರ್ಕದಲ್ಲಿ 205 ಮಂದಿ ಇದ್ದಾರೆ ಎಂದು ಗುರುತಿಸಲಾಗಿದೆ. ಅದರಲ್ಲಿ 5 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಈಗ 5 ಜನರ ಸ್ವಾಬ್ ಅನ್ನು ಜಿನೋಟಿಕ್ ಲ್ಯಾಬ್‌ಗೆ ಕಳಿಸಲಾಗಿದೆ. ಆದರೆ ಈ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇಲ್ಲ. ಅತನಿಗೆ ಸ್ಥಳೀಯವಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಇಬ್ಬರಿಗೆ ಪಾಸಿಟಿವ್ ಬಂದಿದೆ. ಓಮಿಕ್ರಾನ್ ದೃಢಪಟ್ಟಿರುವ ಎರಡನೇ ವ್ಯಕ್ತಿ ಆಸ್ಪತ್ರೆಯಲ್ಲಿದ್ದು, ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬೌರಿಂಗ್ ಆಸ್ಪತ್ರೆಯಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಸೋಂಕಿತರಿಗೆ ಬೆಡ್ ಮೀಸಲಿಡಲಾಗಿದೆ. ಓಮಿಕ್ರಾನ್ ಸೋಂಕಿತರು ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದುಕೊಂಡಿದ್ದಾರೆ. ಅವರ ಸಂಪರ್ಕದಲ್ಲಿದ್ದು, ಕೋವಿಡ್ ಪಾಸಿಟಿವ್ ಬಂದವರ ಸ್ವಾಬ್ ಅನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರ ವಿರುದ್ಧ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ನ್ಯಾಯಾಲಯದ ಆದೇಶವೊಂದನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿ, ತಡೆಯಾಜ್ಞೆ ತೆಗೆದುಕೊಳ್ಳುವ ಹತ್ತಾರು ಅವಕಾಶಗಳಿದ್ದರೂ ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ಡರ್‌ಗಳ ಪರವಾದ ಆದೇಶವನ್ನು ಹೊರಡಿಸುವ ಮೂಲಕ ಪಾಲಿಕೆಗೆ ಪ್ರತೀ ವರ್ಷ ನೂರಾರು ಕೋಟಿ ವಂಚನೆಯಾಗುವ ನಿರ್ಣಯ ತೆಗೆದುಕೊಂಡಿದ್ದಾರೆ. ಆ ಮೂಲಕ ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರಿಂದ ದೂರು ದಾಖಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ CREDAI ಸಂಸ್ಥೆಯ 360 ಕ್ಕೂ ಹೆಚ್ಚು ಬಿಲ್ಡರ್‌ಗಳು, BRAI ಸಂಸ್ಥೆಯ 300 ಕ್ಕೂ ಹೆಚ್ಚು ಬಿಲ್ಡರ್‌ಗಳು ಹಾಗೂ ಈ ಎರಡೂ ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳದ ನೂರಾರು ಮಂದಿ ಬಿಲ್ಡರ್‌ಗಳು ಬೃಹತ್ ವಾಣಿಜ್ಯ ಮತ್ತು ಬೃಹತ್ ವಸತಿ ಕಟ್ಟಡಗಳ ಸಂಕೀರ್ಣಗಳು/ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಕಳೆದ ಹತ್ತಾರು ವರ್ಷಗಳಿಂದ ತೊಡಗಿಕೊಂಡಿದ್ದು, ಬಿಬಿಎಂಪಿಯ ನಗರ ಯೋಜನೆ ಇಲಾಖೆಗೆ ಸದರಿ ಬಿಲ್ಡರ್‌ಗಳು ನ್ಯಾಯಯುತವಾಗಿ ಪಾವತಿಸಬೇಕಿದ್ದ ಕಟ್ಟಡ ನಿರ್ಮಾಣ ಸಂಬಂಧಿತ ನಕ್ಷೆ ಮಂಜೂರಾತಿ ಶುಲ್ಕದ ವಿನಾಯಿತಿ ಕೋರಿ, ಹತ್ತಕ್ಕೂ ಹೆಚ್ಚು ಮಂದಿ ಪ್ರತಿಷ್ಟಿತ ಬಿಲ್ಡರ್‌ಗಳು ಪ್ರತ್ಯೇಕವಾಗಿ ರಾಜ್ಯದ ಹೈಕೋರ್ಟ್‌ನಲ್ಲಿ Writ Petitionಗಳನ್ನು ದಾಖಲಿಸಿದ್ದರು. ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಲ್ಲಿ ಆದೇಶವೊಂದನ್ನು ನೀಡಿ, ಯಾವುದೇ ಬಿಲ್ಡರ್‌ಗಳು ಬಿಬಿಎಂಪಿ ನಕ್ಷೆ ಮಂಜೂರಾತಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂಬ ತೀರ್ಪನ್ನು ನೀಡಿರುತ್ತದೆ. ಪಾಲಿಕೆಯ ಹಿತಾಸಕ್ತಿಗೆ ವಿರುದ್ಧವಾಗಿರುವ ನ್ಯಾಯಾಲಯದ ಆದೇಶವನ್ನು ಪಾಲಿಕೆಯ ಮುಖ್ಯ ಆಯುಕ್ತರು, ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲು ಹಾಗೂ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಯನ್ನು ತರುವಂತಹ ಹತ್ತಾರು ಅವಕಾಶಗಳಿದ್ದರೂ ಇದರತ್ತ ಗಮನ ಕೊಡದೇ ಕಳೆದ ಒಂದು ತಿಂಗಳ ಹಿಂದೆ ನಡೆದಂತಹ CREDAI ಸಂಸ್ಥೆಯ ಸದಸ್ಯರೊಂದಿಗಿನ ಸಭೆಯಲ್ಲಿ ಬಿಲ್ಡರ್‌ಗಳ ಪರವಾದ ನಿಲುವನ್ನು ಪಡೆದಿರುವಂತಹದ್ದು ನಿಜಕ್ಕೂ ಆಘಾತಕಾರಿಯಾದಂತಹ ವಿಷಯ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಅಭಿಮಾನ ಆವೇಶವಾಗಬಾರದು, ಅಭಿಮಾನ ಹಾಡಿನಂತಿರಬೇಕು: ಪತ್ರ ಬರೆದ ಹಂಸಲೇಖ
ಬಿಬಿಎಂಪಿ ನಗರ ಯೋಜನೆ ಇಲಾಖೆಯ ಜಂಟಿ ನಿರ್ದೇಶಕರು (ಉತ್ತರ) ಆಗಿ ಕಾರ್ಯನಿರ್ವಹಿಸುತ್ತಿರುವ “ನಗರ ಯೋಜನೆ ಇಲಾಖೆ” ಹಾಗೂ “ಎರವಲು ಸೇವೆ”ಯಿಂದ ಬಂದಿರುವ ಮಂಜೇಶ್ ಅವರು ನಿರಂತರವಾಗಿ ಪಾಲಿಕೆಯ ಹಿತಾಸಕ್ತಿಗೆ ವಿರುದ್ಧವಾದ ನಡೆಗಳನ್ನು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ ಕುತಂತ್ರದ ಫಲದಿಂದ ಪಾಲಿಕೆಯ ಮುಖ್ಯ ಆಯುಕ್ತರು ಮಂಜೇಶ್ ಅವರೊಂದಿಗೆ ಶಾಮೀಲಾಗಿ ಪ್ರತಿಷ್ಟಿತ ಬಿಲ್ಡರ್‌ಗಳಿಂದ ಕೋಟ್ಯಂತರ ರೂಪಾಯಿಗಳಷ್ಟು ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ಪಡೆದು, 2008 ಕ್ಕೂ ಮೊದಲು ಇದ್ದಂತಹ ನಕ್ಷೆ ಮಂಜೂರಾತಿ ಶುಲ್ಕದ ಪದ್ಧತಿಯಂತೆ ಶುಲ್ಕ ವಸೂಲಿ ಮಾಡುವ ನಿರ್ಧಾರವನ್ನು ತೆಗೆದುಕೊಂಡು, ಈ ಸಂಬಂಧ ಆದೇಶವನ್ನೂ ಸಹ ಹೊರಡಿಸಿರುತ್ತಾರೆ ಎಂದು ದೂರಿದ್ದಾರೆ.
ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ 2008 ಕ್ಕೂ ಹಿಂದಿನ ನಕ್ಷೆ ಮಂಜೂರಾತಿ ಶುಲ್ಕವನ್ನು ಸಂಗ್ರಹಿಸಲು ಪಾಲಿಕೆ ಮುಂದಾಗುತ್ತಿರುವ ಪರಿಣಾಮದಿಂದ ಈಗಿನ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟು ಶುಲ್ಕವನ್ನು ಮಾತ್ರವೇ ಪಾಲಿಕೆಯು ಸಂಗ್ರಹಿಸಬೇಕಾಗಿರುತ್ತದೆ. ಪಾಲಿಕೆಯ ಮುಖ್ಯ ಆಯುಕ್ತರ ಆದೇಶದಂತೆ ಸಂಬಂಧಪಟ್ಟ ಬಿಲ್ಡರ್‌ಗಳು ಪಾಲಿಕೆಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಡಬೇಕಿದ್ದು, ಸದರಿ ಮುಚ್ಚಳಿಕೆ ಪತ್ರದಲ್ಲಿ ಮುಂದೆ ನ್ಯಾಯಾಲಯವು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿ, ಅವರು 2008 ಕ್ಕೂ ಹಿಂದಿನ ಪದ್ಧತಿಯಂತೆ ಶುಲ್ಕವನ್ನು ಪಾವತಿಸುವುದಾಗಿ ಬರೆದುಕೊಡಬೇಕಿರುತ್ತದೆ. ಈ ರೀತಿ ಬರೆದುಕೊಟ್ಟ ಬಿಲ್ಡರ್ ಗಳು ತಮ್ಮ ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರ ಗ್ರಾಹಕರಿಗೆ ವಾಣಿಜ್ಯ ಮಳಿಗೆಗಳನ್ನು ಅಥವಾ ವಸತಿ ಸಮುಚ್ಚಯಗಳನ್ನು ಮಾರಾಟ ಮಾಡಿರುತ್ತಾರಲ್ಲದೇ, ಅಂತಹ ಬಿಲ್ಡರ್‌ಗಳಿಂದ ಬಾಕಿ ಶುಲ್ಕವನ್ನು ಸಂಗ್ರಹಿಸುವುದು ನಿಜಕ್ಕೂ ಅಸಾಧ್ಯವಾದ ಕೆಲಸವಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಕೇಳಲಿದೆ ಜೆಸಿಬಿ ಸದ್ದು – ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವು
ಈಗಿನ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟನ್ನು ಮಾತ್ರ 2008 ಕ್ಕೂ ಹಿಂದೆ ವಸೂಲಿ ಮಾಡಲಾಗುತ್ತಿತ್ತು. ಬದಲಾದ ಸನ್ನಿವೇಶಗಳಲ್ಲಿ ಮತ್ತು ಬೆಂಗಳೂರು ಮಹಾನಗರದಲ್ಲಿ 2008 ರಲ್ಲಿದ್ದ ಭೂಮಿಯ ಬೆಲೆಗೂ ಪ್ರಸ್ತುತ ಇರುವ ಭೂಮಿಯ ಬೆಲೆಗೂ ಅಜಗಜಾಂತರ ವ್ಯತ್ಯಾಸವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ನಕ್ಷೆ ಮಂಜೂರಾತಿ ಶುಲ್ಕವನ್ನೂ ಸಹ 2008-09 ರಿಂದ ಏರಿಸಲಾಗಿತ್ತು. ಪ್ರಸ್ತುತ ಇರುವ ನಕ್ಷೆ ಮಂಜೂರಾತಿ ಶುಲ್ಕದ ಒಟ್ಟು ಶುಲ್ಕದ ಪೈಕಿ 2008 ಕ್ಕೂ ಹಿಂದೆ ಇದ್ದಂತಹ ಶುಲ್ಕ ವಸೂಲಾತಿ ಪದ್ಧತಿಯ ಅನ್ವಯ ಈಗಿರುವಂತಹ ನಕ್ಷೆ ಮಂಜೂರಾತಿ ಶುಲ್ಕದ ಶೇ. 22 ರಷ್ಟು ಮಾತ್ರ. ಉದಾಹರಣೆಗೆ ಪ್ರಸ್ತುತ ಯಾವುದೇ ಒಂದು ಕಟ್ಟಡದ ನಕ್ಷೆ ಮಂಜೂರಾತಿಗೆ 01 ಲಕ್ಷ ರೂಪಾಯಿ ಸಂಗ್ರಹವಾಗುತ್ತಿದ್ದರೆ, 2008 ಕ್ಕೂ ಹಿಂದಿನ ಪದ್ಧತಿಯಂತೆ ಕೇವಲ 22 ಸಾವಿರ ರೂಪಾಯಿಗಳಷ್ಟು ಮಾತ್ರ ಶುಲ್ಕವನ್ನು ವಸೂಲಿ ಮಾಡಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.
ಅವೈಜ್ಞಾನಿಕ ಮತ್ತು ಬಿಲ್ಡರ್‌ಗಳ ಪರವಾದಂತಹ ನಿರ್ಧಾರವನ್ನು ತೆಗೆದುಕೊಂಡು ಪಾಲಿಕೆಗೆ ನೂರಾರು ಕೋಟಿ ರೂಪಾಯಿಗಳ ನಕ್ಷೆ ಮಂಜೂರಾತಿ ಶುಲ್ಕದ ವಸೂಲಾತಿಗೆ ಕಡಿವಾಣ ಹಾಕಲು ಹೊರಟಿರುವ ಪಾಲಿಕೆಯ ಆರ್ಥಿಕ ಹಿತಾಸಕ್ತಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿರುವ ಮತ್ತು ವಿಭಾಗೀಯ ಪೀಠದಲ್ಲಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಅಥವಾ ಅದಕ್ಕೆ ತಡೆಯಾಜ್ಞೆ ತೆಗೆದುಕೊಳ್ಳಲು ಹತ್ತಾರು ಅವಕಾಶಗಳಿದ್ದರೂ ಪಾಲಿಸದ ಆಯುಕ್ತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿಎಂ ಪತ್ರ ಬರೆಯಲಾಗಿದೆ. ಈ ಬಿಲ್ಡರ್‌ಗಳ ಪರವಾದಂತಹ ಪಾಲಿಕೆ ವಿರೋಧಿ ನಿರ್ಣಯವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.
ನಿರಂತರವಾಗಿ ಪಾಲಿಕೆ ವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಗೌರವ್ ಗುಪ್ತಾ ಅವರನ್ನು ಪಾಲಿಕೆಯ ಮುಖ್ಯ ಆಯುಕ್ತರ ಸ್ಥಾನದಿಂದ ಕೂಡಲೇ ಬದಲಿಸಬೇಕೆಂದು ಸಿಎಂಗೆ ಆಗ್ರಹಿಸಲಾಗಿದೆ.
ಬೆಂಗಳೂರು: ಮೊನ್ನೆಯಷ್ಟೇ ಬಿಬಿಎಂಪಿ ದಂಡ ಹಾಕುವ ನಿಯಮವನ್ನು ರೂಪಿಸಿದ್ದು, ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದವರಿಂದ ಒಟ್ಟು 51,700 ರೂ.ದಂಡವನ್ನು ಸಂಗ್ರಹಿಸಲಾಗಿದೆ.
Rs 51,700 in fines was collected from those not covering their mouth & noses mandatorily to stop the spread of #COVID19.
ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ ಒಟ್ಟು ರೂ. 51,700 ದಂಡವನ್ನು ಮಾರ್ಷಲ್ ಗಳು ವಸೂಲು ಮಾಡಿರುತ್ತಾರೆ. ನಿಯಮಗಳನ್ನು ಉಲ್ಲಂಘಿಸ ಬೇಡಿ, ಸುರಕ್ಷತೆಗೆ ಸಹಕರಿಸಿ. pic.twitter.com/6fIaAy4ONw
ಈ ಕುರಿತು ಟ್ವೀಟ್ ಮಾಡಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ 51,700 ರೂ. ದಂಡವನ್ನು ಮಾರ್ಷಲ್‍ಗಳು ಸಂಗ್ರಹಿಸಿದ್ದು, ನಿಯಮ ಉಲ್ಲಂಘಿಸಬೇಡಿ ಸುರಕ್ಷತೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಮೊನ್ನೆಯೇ ಆದೇಶ ಹೊರಡಿಸಿದ್ದ ಬಿಬಿಎಂಪಿ ಮಾಸ್ಕ್ ಧರಿಸದವರಿಗೆ ಮೊದಲ ಬಾರಿಗೆ 1 ಸಾವಿರ ರೂ. ದಂಡ, ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 2 ಸಾವಿರ ರೂ.ದಂಡ ವಿಧಿಸಲಾಗುತ್ತದೆ. ಅಲ್ಲದೆ ಶಿಕ್ಷೆಯನ್ನೂ ವಿಧಿಸಲಾಗುತ್ತಿದೆ ಎಂದು ತಿಳಿಸಿತ್ತು.
ಇದಾವುದಕ್ಕೂ ಸಾರ್ವಜನಿಕರು ಕ್ಯಾರೆ ಎನ್ನದೆ ಸಂಚರಿಸಿದ್ದು, ಹೀಗಾಗಿ ದಂಡ ವಿಧಿಸಲಾಗುತ್ತಿದೆ. 51 ಸಾವಿರ ರೂ.ಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. ಕೊರೊನಾ ಅವಾಂತರದ ಹಿನ್ನೆಲೆ ಮಾಸ್ಕ್ ಧರಿಸುವ ಕುರಿತು, ಎಲ್ಲೆಂದರಲ್ಲಿ ಉಗುಳುವ ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ದಂಡ ಹಾಕಲಾಗುತ್ತಿದ್ದು, ಅದೇ ರೀತಿ ಬೆಂಗಳೂರಿನಲ್ಲೂ ಬಿಬಿಎಂಪಿಯಿಂದ ದಂಡ ಹಾಕಲಾಗುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದಲೇ ದಂಡ ಹಾಕಲಾಗುತ್ತಿದೆ. ಸಾರ್ವಜನಿಕವಾಗಿ ಮಾಸ್ಕ್ ಹಾಕದಿದ್ದರೆ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಮಾಡಿದರೆ, ಮಾಸ್ಕ್ ವಿಲೇವಾರಿ ಸರಿಯಾಗಿ ಮಾಡದಿದ್ದರೆ ದಂಡ ಬೀಳುವುದು ಖಚಿತ. ಮುಲಾಜಿಲ್ಲದೆ ದಂಡ ವಿಧಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.
ಬೆಂಗಳೂರು: 10 ಕೋಟಿ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರವನ್ನ ಬಿಬಿಎಂಪಿ ಆಯುಕ್ತ ಸರ್ಕಾರದ ಬಳಿ ಕೇಳಿದ್ದಾರೆ. ಆದರೆ ಸರ್ಕಾರ ನಯವಾಗಿಯೇ ಈ ಬೇಡಿಕೆ ತಿರಸ್ಕರಿಸಿ ಮುಖಭಂಗ ಮಾಡಿದೆ.
ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪ್ರಕಾರ ಒಂದು ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಕಮಿಷನರ್ ಗೆ ಇದೆ. 1 ಕೋಟಿಯಿಂದ 3 ಕೋಟಿವರೆಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರ ಸ್ಥಾಯಿ ಸಮಿತಿಗಳಿಗೆ ಇದೆ. 3 ಯಿಂದ 10 ಕೋಟಿವರೆಗಿನ ಕಾಮಗಾರಿಗಳಿಗೆ ಕೌನ್ಸಿಲ್ ಅನುಮೋದನೆ ನೀಡುತ್ತದೆ. ಆದರೆ ಬಿಬಿಎಂಪಿ ಕಮಿಷನರ್ ಇದೆಲ್ಲವನ್ನ ಬೀಟ್ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದರು.
10 ಕೋಟಿವರೆಗಿನ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರ ತಮಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದಿಂದ ಆಯುಕ್ತರಿಗೆ ಮುಖಭಂಗ ಮಾಡಿ ಕೌನ್ಸಿಲ್‍ನಿಂದ ಅನುಮೋದನೆ ಪಡೆದುಕೊಂಡು ಪತ್ರ ಬರೆಯುವಂತೆ ಸೂಚನೆ ಸಿಕ್ಕಿದೆ.
ಬೆಂಗಳೂರು: ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಬೆಂಗಳೂರಲ್ಲೂ ಪರಿಷ್ಕರಣೆಗೆ ಕರೆ ನೀಡಲಾಗಿದೆ. ಈ ಮೂಲಕ ಮತದಾರರ ಪಟ್ಟಿ ನಿರೀಕ್ಷಿಸುತ್ತಿರುವವರಿಗೆ ಬಿಬಿಎಂಪಿ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಬಿ.ಹೆಚ್ ಅನಿಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅಕ್ಟೋಬರ್ 15 ರವರೆಗೆ ಕಾಲಾವಕಾಶ ನೀಡಲಾಗಿದೆ. ಹೊಸ ಮತದಾರರ ನೋಂದಣಿ ಅಥವಾ ಹೊಸ ಮತಗಟ್ಟೆಯಲ್ಲಿ ಹೆಸರು ಸೇರ್ಪಡೆಗಳಿದ್ದಲ್ಲಿ ಸಾರ್ವಜನಿಕರು ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಹುದು ಎಂದು ತಿಳಿಸಿದರು.
ಬೆಂಗಳೂರಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,514 ಮತಗಟ್ಟೆಗಳಿವೆ. ಈವರೆಗೆ 91,00,207 ಮತದಾರರಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿ ಇದ್ದಿದ್ದರಿಂದ ಮತದಾರರ ಲಟ್ಟಿ ಪರಿಶೀಲನೆ ತಡವಾಗಿ ಮಾಡಲಾಗುತ್ತಿದೆ. ಅರ್ಜಿಗಳ ಸ್ವೀಕರಿಸಿದ ಬಳಿಕ ಅಕ್ಟೋಬರ್ 16 ರಿಂದ ಮನೆಮನೆಗೆ ಹೋಗಿ ಪರಿಶೀಲಿಸಲಾಗುವುದು. ಮತಗಟ್ಟೆಗಿಂತ ಎರಡು ಕಿ.ಮೀ ಹೆಚ್ಚು ದೂರದಲ್ಲಿ ಮತದಾರ ಇರಬಾರದು. ಮತಗಟ್ಟೆಗಳ ಬದಲಾವಣೆ ಇದ್ದಲ್ಲಿಯೂ ಪರಿಷ್ಕರಣೆ ವೇಳೆ ಬದಲಾವಣೆ ಮಾಡಲಾಗುವುದು. ಫೆಬ್ರವರಿ 2002 ರಿಂದ ಜನವರಿ 2003ರ ವರೆಗೆ ಹುಟ್ಟಿದವರು ಹೊಸ ಮತದಾರರಾಗಲಿದ್ದು, ಈ ವೇಳೆ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಒಂದೇ ಕುಟುಂಬದ ಎಲ್ಲ ಸದಸ್ಯರು ಮತದಾರರಾಗಿ ಒಂದೇ ಸ್ಥಳದಲ್ಲಿ ಇರಬೇಕು. ಫಾರ್ಮ್ 7ರ ಮುಖೇನ ಒಂದಕ್ಕಿಂತ ಹೆಚ್ಚಿನ ನೋಂದಣಿ ಇದ್ದರೆ ತೆಗೆದು ಹಾಕುವುದು. ಮರಣವಾಗಿದ್ದರೆ ಅಥವಾ ಖಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದು ಹಾಕುವುದು. ಮತಗಟ್ಟೆಗಳು ಶಿಥಿಲವಾಗಿದ್ದರೆ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು. ಒಟ್ಟಿನಲ್ಲಿ ಎಲ್ಲ ಅರ್ಹ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳುವುದು ಸಮಗ್ರ ಪರಿಷ್ಕರಣೆಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತದಾರರು ಸಲ್ಲಿಸಬೇಕಾದ ವಿವರಗಳು:
1) ಪಾಸ್ ಪೋರ್ಟ್
2) ಚಾಲನಾ ಪರವಾನಗಿ
3) ಆಧಾರ್ ಪತ್ರ
4) ಪಡಿತರ ಚೀಟಿ
5) ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ
6) ಬ್ಯಾಂಕ್ ಪಾಸ್ ಬುಕ್
7) ರೈತರ ಗುರುತಿನ ಚೀಟಿ
8) ಚುನಾವಣಾ ಆಯೋಗ ನಮೂದಿಸಿರುವ ಇತರ ಯಾವುದೇ ದಾಖಲೆಗಳು
ಮತದಾರರಿಗೆ ಯಾವುದೇ ಗೊಂದಲಗಳಿದ್ದಲ್ಲಿ 1950 ಮತದಾರರ ಸಹಾಯವಾಣಿಗೆ ಕರೆ ಮಾಡಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.
ಬೆಂಗಳೂರು: ಇಂದಿರಾ ಕ್ಯಾಂಟೀನ್ ನಡೆಸಲು ದುಡ್ಡಿಲ್ಲ, ಮುಚ್ಚುವ ಹಂತ ತಲುಪಿವೆ ಎಂದು ಸ್ವತಃ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಇಂದು ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಉತ್ತರಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟಿನ್ ಇವೆ. 14.40 ಕೋಟಿ ಜನ ಈವರೆಗೆ ಊಟ ಮಾಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿತ್ತು. ವಿವಿಧ ಕಾಮಗಾರಿಗೆ ಹೆಚ್ಚುವರಿಯಾಗಿ 24.37 ಕೋಟಿ ರೂ. ಖರ್ಚಾಗಿದೆ. ರಾಜ್ಯ ಸರ್ಕಾರ 15 ಕೋಟಿ ಮಾತ್ರ ಬಿಡುಗಡೆ ಮಾಡಿತು ಎಂದು ತಿಳಿಸಿದ್ದಾರೆ.
2019-20 ರ ಸಾಲಿನ ಬಜೆಟ್ ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನಿಗೆ ಯಾವುದೇ ಹಣ ಮೀಸಲಿಡಲಿಲ್ಲ. ಎರಡು ಮತ್ತು ಮೂರನೇ ಪತ್ರವನ್ನು ಕೂಡ ಬರೆದಿದ್ದೆ. ಇವತ್ತಿಗೂ ಸರ್ಕಾರವಾಗಲಿ, ಪಾಲಿಕೆಯಲ್ಲಾಗಲಿ ಹಣ ಮೀಸಲಿಟ್ಟಿಲ್ಲ. ಇದೀಗ ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ಮಾಡಿ ಎಂದು ಬಿಬಿಎಂಪಿ ಸದಸ್ಯರ ಮುಂದೆ ವಿವರಿಸಿದರು.
ಆಯುಕ್ತರ ಈ ಹೇಳಿಕೆಯಿಂದ ಇಂದಿರಾ ಕ್ಯಾಟೀನ್ ಭವಿಷ್ಯ ಮುಂದಿನ 15 ದಿನಗಳಲ್ಲಿ ನಿರ್ಧಾರವಾಗಲಿದೆ. ಈ ಸುದ್ದಿ ಹೊರ ಬೀಳುತ್ತಲೇ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದು, ಬಿಜೆಪಿ ಇಂದಿರಾ ಮುಚ್ಚಲು ಮುಂದಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಎಚ್ಚರಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಕಟ್ಟಡ ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಪಬ್ಲಿಕ್ ಟಿವಿ ವರದಿ ಮೂಲಕ ಬೆಳಕು ಚೆಲ್ಲಿತ್ತು. ಅಕ್ರಮದ ವಾಸನೆ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡಿದೆ.