Tag: ಬಿತ್ತನೆ

  • ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಚಿಕ್ಕಬಳ್ಳಾಪುರ: ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ದಿನ ಅಂಗವಾಗಿ ಎಲ್ಲೆಲ್ಲೂ ಗಿಡಗಳನ್ನು ನೆಡುವುದರ ಮೂಲಕ ಆಚರಣೆ ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಗಗನಸಖಿ ಗಗನದಿಂದಲೇ ಬೀಜ ಬಿತ್ತನೆ ಮಾಡಿ ಗಮನಸೆಳೆದಿದ್ದಾರೆ.

    ಸಿಲಿಕಾನ್ ಸಿಟಿಯ ಬೆಡಗಿ, ಮಾಜಿ ಗಗನ ಸಖಿ, ಗಗನದಿಂದಲೇ ಪ್ಯಾರಾಗ್ಲೈಡಿಂಗ್ ಮೂಲಕ ಪಂಚಗಿರಿಗಳ ಸಾಲಲ್ಲಿ ಬೀಜದುಂಡೆ ಬಿತ್ತನೆ ಮಾಡಿದ್ದಾರೆ. ಈ ಮೂಲಕ ವಿಶೇಷವಾಗಿ ಪರಿಸರ ದಿನಾಚರಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹತ್ತಾರು ವರ್ಷಗಳ ಕಾಲ ಗಗನಸಖಿಯಾಗಿ ಕೆಲಸ ಮಾಡಿದ್ದ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ಅನಿತಾ ರಾವ್ ಭಾನುವಾರ ಚಿಕ್ಕಬಳ್ಳಾಪುರ ತಾಲೂಕಿನ ಪಂಚಗಿರಿಗಳಲ್ಲಿ ಪ್ಯಾರಾಮೋಟರಿಂಗ್ ಮೂಲಕ ಬೀಜದುಂಡನೆ ಬಿತ್ತನೆ ಮಾಡಿದರು. ಇದನ್ನೂ ಓದಿ: ಲಂಕಾಗೆ 3.3 ಟನ್‌ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು

    ಹೌದು, ಗಗನಸಖಿಯಾಗಿ ಕೆಲಸ ಮಾಡಿ, ಸಾಂಸಾರಿಕ ಜೀವನಕ್ಕೆ ಕಾಲಿಡುವ ಸಂದರ್ಭ ಗಗನಸಖಿ ಕೆಲಸಕ್ಕೆ ಗುಡ್‌ಬೈ ಹೇಳಿದರು. ಬಳಿಕ ಅನಿತಾ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕೆಲಸದ ಕಡೆ ಮುಖ ಮಾಡಿದ್ದಾರೆ. ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ನಂದಿಗಿರಿಧಾಮಗಳಲ್ಲಿ ಸುಮಾರು 70,000 ಬೀಜದ ಉಂಡೆಗಳನ್ನು ಹಾಕುವ ಮೂಲಕ ಬರದ ನಾಡಿನ ಬೆಟ್ಟ ಗುಡ್ಡಗಳಲ್ಲಿ ಕಾಡು ಬೆಳೆಸುವ ಕಾಯಕಕ್ಕೆ ಮುಂದಾಗಿದ್ದಾರೆ.

    ಈ ವೇಳೆ ಮಾತನಾಡಿದ ಅನಿತಾ ರಾವ್, ನಾವು ಪರಿಸರ ಬಳಸಿಕೊಳ್ಳುವುದರ ಜೊತೆಗೆ ಪರಿಸರಕ್ಕೆ ಕೊಡುಗೆಯನ್ನೂ ನೀಡಬೇಕು. ಅತಿ ಕಷ್ಟಕರ ಜಾಗಗಳಲ್ಲಿ ಅಂದರೆ, ಬೆಟ್ಟ ಗುಡ್ಡಗಳಲ್ಲಿ ಯಾರೂ ಹೋಗಿ ಗಿಡಗಳನ್ನು ನೆಡಲು ಸಾಧ್ಯವಿಲ್ಲ. ಹೀಗಾಗಿ ಪ್ಯಾರಾಮೋಟರ್, ಹೆಲಿಕಾಪ್ಟರ್, ಮೂಲಕ ಸೀಡ್ ಬಾಲ್‌ಗಳನ್ನು ಹಾಕಿ, ಗಿಡ ನೆಡಲು ಸಾಧ್ಯವಿದೆ. ಇಂದು ಪುಣೆಯಿಂದ ಪ್ಯಾರಾಮೋಟರ್ ತರಿಸಿ ಬಿತ್ತನೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂಮ್ ಕ್ಲಾಸ್ ಮಿಸ್ ಮಾಡ್ದೆ ಹಾಜರಾಗಿದ್ದ ಬೆಕ್ಕು – ಹ್ಯಾಟ್ ಕೊಟ್ಟ ವಿಶ್ವವಿದ್ಯಾಲಯ

    ಅರಣ್ಯ ಇಲಾಖೆ ಸಹಯೋಗದೊಂದಿಗೆ 7 ಬಗೆಯ ಸುಮಾರು 100 ಕೆಜಿ ಬೀಜಗಳನ್ನು ಇಂದು ಬಿತ್ತನೆ ಮಾಡಲಾಗಿದೆ. 10 ವರ್ಷ ಗಗನಸಖಿಯಾಗಿ ಕೆಲಸ ಮಾಡಿರುವ ನಾನು ಈಗ ಮನೆಯಲ್ಲೇ ಕುಳಿತು ಕಾಲ ಕಳೆಯುವ ಬದಲು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದರು.

  • ಉಳುಮೆ ಮಾಡಿ, ಬೀಜ ಬಿತ್ತಿದ ರೇಣುಕಾಚಾರ್ಯ

    ಉಳುಮೆ ಮಾಡಿ, ಬೀಜ ಬಿತ್ತಿದ ರೇಣುಕಾಚಾರ್ಯ

    ದಾವಣಗೆರೆ: ಶಾಸಕ ರೇಣುಕಾಚಾರ್ಯ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಂಚಿನ ವೇಗದಲ್ಲಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನತೆಯ ಮನ ಗೆದ್ದಿದ್ದಾರೆ. ಅದೇ ರೀತಿ ಇದೀಗ ಉಳುಮೆ ಮಾಡಿ, ಬೀಜ ಬಿತ್ತುವ ಮೂಲಕ ತಮ್ಮ ಅಭಿಮಾನಿಯನ್ನು ಸಂತಸಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಅವರು ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಹೊನ್ನಾಳಿಗೆ ಆಗಮಿಸಿ, ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಬಿತ್ತನೆ ಕಾರ್ಯ ಮಾಡುತ್ತಿದ್ದರು, ಇವರು ಉಳುಮೆ ಮಾಡುತ್ತಿದ್ದ ಹೊಲದ ಬಳಿಯ ರಸ್ತೆಯಲ್ಲಿ ಸಾಗುತ್ತಿದ್ದ ಶಾಸಕ ಎಂ.ಪಿ.ರೇಣುಕಚಾರ್ಯ, ಜಮೀನಿಗೆ ಭೇಟಿ ನೀಡಿ ಅವರ ಅಪೇಕ್ಷೆಯಂತೆ ಜೊತೆಗೂಡಿ ಬೇಸಾಯ ಮಾಡಿ, ಬೀಜ ಬಿತ್ತುವ ಮೂಲಕ ಉತ್ಸಾಹ ತುಂಬಿದರು.

    ಶಾಸಕ ರೇಣುಕಾಚಾರ್ಯ ಮತ್ತೊಂದು ಮನಮುಟ್ಟುವ ಕೆಲಸ ಮಾಡಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿ ಮತ್ತೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈಗಾಗಲೇ ಹಲವು ದಿನಗಳಿಂದ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿ ಸೋಂಕಿತರ ಸೇವೆ ಮಾಡುತ್ತಿರುವ ರೇಣುಕಾಚಾರ್ಯ, ಕೇರ್ ಸೆಂಟರ್ ನಲ್ಲಿದ್ದ ಇಬ್ಬರು ಬಾಲಕಿಯರ ಹುಟ್ಟುಹಬ್ಬ ಆಚರಿಸಿದ್ದಾರೆ. ತಂದೆ, ತಾಯಿ ಊರಲ್ಲಿದ್ದರಿಂದ ಮಕ್ಕಳ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಯಾರೂ ಇಲ್ಲ ಎಂಬ ಕೊರಗನ್ನು ನೀಗಿಸಿದ್ದಾರೆ. ಬಾಲಕಿಯರಿಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಕೋರಿದ್ದಾರೆ.

  • ಧಾರವಾಡದಲ್ಲಿ ಧಾರಾಕಾರ ಮಳೆ- ಮನೆಗಳಿಗೆ ನುಗ್ಗಿದ ನೀರು, ರೈತರ ಮೊಗದಲ್ಲಿ ಮಂದಹಾಸ

    ಧಾರವಾಡದಲ್ಲಿ ಧಾರಾಕಾರ ಮಳೆ- ಮನೆಗಳಿಗೆ ನುಗ್ಗಿದ ನೀರು, ರೈತರ ಮೊಗದಲ್ಲಿ ಮಂದಹಾಸ

    ಧಾರವಾಡ: ಜಿಲ್ಲೆಯಲ್ಲಿ ಸಂಜೆ ಸುರಿದ ಧಾರಾಕಾರ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ನಗರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತವಾಯಿತು.

    ನಗರದ ಹೊರ ವಲಯದಲ್ಲಿ ಧಾರಾಕಾರ ಮಳೆಗೆ ಹೊಲಗಳಲ್ಲಿ ನೀರು ಹರಿದಿದ್ದರಿಂದ ಒಡ್ಡು ಒಡೆದವು. ನಗರದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಯಿತು. ಹಾವೇರಿ ಪೇಟೆಯ ಕಂಠಿ ಓಣಿಯಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿದ್ದರಿಂದ ಬೈಕ್ ಸವಾರರು ಪರದಾಟ ನಡೆಸಬೇಕಾಯಿತು.

    ರೈತರು ಕಳೆದ ಒಂದು ವಾರದಿಂದ ಹೊಲಗಳನ್ನು ಬಿತ್ತನೆಗೆ ಸಿದ್ಧ ಮಾಡಿಕೊಂಡು, ಮಳೆ ಬರುವುದನ್ನು ಕಾಯುತಿದ್ದರು. ಇವತ್ತು ಸುರಿದ ಮಳೆಯಿಂದ ಸಂತಸಗೊಂಡಿರುವ ರೈತರು, ಇನ್ನೆರಡು ದಿನಗಳಲ್ಲಿ ಬಿತ್ತನೆ ಮಾಡಲು ಆರಂಭ ಮಾಡಲಿದ್ದಾರೆ. ಇಗಾಗಲೇ ಬಿತ್ತನೆಗಾಗಿ ಬೀಜ ಹಾಗೂ ಗೊಬ್ಬರ ಖರೀದಿ ಮಾಡಿದ್ದು, ಹೊಲ, ಗದ್ದೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಬಿತ್ತನೆ ಮಾಡಲಿದ್ದಾರೆ.

  • ಎತ್ತುಗಳ ಬಾಡಿಗೆಗೆ ಹಣವಿಲ್ದೆ ಹೆಗಲ ಮೇಲೆ ನೊಗ ಹೊತ್ತು ಉಳುಮೆ ಮಾಡಿದ ರೈತರು

    ಎತ್ತುಗಳ ಬಾಡಿಗೆಗೆ ಹಣವಿಲ್ದೆ ಹೆಗಲ ಮೇಲೆ ನೊಗ ಹೊತ್ತು ಉಳುಮೆ ಮಾಡಿದ ರೈತರು

    ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಿದ ಬರಗಾಲದ ಪರಿಣಾಮ ಎಷ್ಟು ಘೋರವಾಗಿದೆ ಅಂದ್ರೆ ಈಗ ಮಳೆ ಬಂದರೂ ಹೊಲದಲ್ಲಿ ಬಿತ್ತನೆ ಮಾಡಲು ರೈತರಲ್ಲಿ ಹಣವಿಲ್ಲ. ಸಿಂಧನೂರು ತಾಲೂಕಿನ 4ನೇ ಮೈಲ್ ಕ್ಯಾಂಪ್‍ನಲ್ಲಿ ರೈತರು ಎತ್ತುಗಳ ಬಾಡಿಗೆ ಕೊಡಲು ಹಣವಿಲ್ಲದೆ ಸ್ವತಃ ತಾವೇ ಎತ್ತುಗಳಾಗಿ ನೋಗ ಹೊತ್ತು ಉಳುಮೆ ಮಾಡಿದ್ದಾರೆ.

    ಮೂರು ಜನ ರೈತರು ಎರಡು ಎಕರೆ ಜಮೀನನ್ನ ಹರಗಿ, ಹತ್ತಿ ಕಾಳು ಬಿತ್ತನೆ ಮಾಡಿದ್ದಾರೆ. ಗ್ರಾಮದ ರಾಮಲಿಂಗಪ್ಪ, ಪ್ರದೀಪ್ ಹಾಗೂ ವಿರೇಶ್ ತಾವೇ ನೊಗ ಹೊತ್ತು ಜಮೀನನ್ನ ಉಳುಮೆ ಮಾಡಿದ್ದಾರೆ.

    ಸತ್ಯನಾರಾಯಣ ಸ್ವಾಮಿ ಎಂಬವರ ಜಮೀನನ್ನ ಗುತ್ತಿಗೆ ಪಡೆದಿದ್ದ ಇವರು ಎತ್ತುಗಳಿಂದ ಉಳುಮೆ ಮಾಡಿದ್ರೆ ಒಂದು ದಿನಕ್ಕೆ ಒಂದು ಸಾವಿರ ರೂಪಾಯಿ ಬಾಡಿಗೆ ಕೊಡಬೇಕಾಗುತ್ತದೆ ಅಂತ ಎರಡು ದಿನ ಕಾಲ ತಾವೇ ನೊಗ ಹೊತ್ತು ಉಳುಮೆ ಮಾಡಿದ್ದಾರೆ.

    ಕಳೆದ ವರ್ಷ ಜೋಡಿ ಎತ್ತುಗಳನ್ನ ಹೊಂದಿದ್ದ ಪ್ರದೀಪ್ ಬರಗಾಲ ಹೊಡೆತಕ್ಕೆ ಸಾಲ ತೀರಿಸಲು ಎತ್ತು ಮಾರಿದ್ದರು. ಈಗ ಸ್ವತಃ ತಾವೇ ಎತ್ತುಗಳಾಗಿ ದುಡಿಯುತ್ತಿರುವುದು ರೈತನ ನಿಕೃಷ್ಠ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ.

  • ರೈತರೇ ಈಗಲೇ ಬಿತ್ತನೆ ಮಾಡಿ, ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

    ರೈತರೇ ಈಗಲೇ ಬಿತ್ತನೆ ಮಾಡಿ, ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

    ಚಾಮರಾಜನಗರ: ಈಗ ಮಳೆ ಬರ್ತಿದೆ. ಈಗಲೇ ಬಿತ್ತನೆ ಕಾರ್ಯ ಶುರು ಮಾಡಿ. ಒಂದು ವೇಳೆ ಬಿತ್ತನೆ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.

    ಬರಗಾಲದಲ್ಲಿ ರೈತರ ನೆರವಿಗೆ ಬಾರದ ಜಿಲ್ಲಾಡಳಿತ ಇದೀಗ ಎರಡು ಮೂರು ಬಾರಿ ಮಳೆ ಬಿದ್ದ ತಕ್ಷಣವೇ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಆದೇಶ ನೀಡಿದೆ. ಒಂದು ವೇಳೆ ಬಿತ್ತನೆ ಕಾರ್ಯದಲ್ಲಿ ತೊಡಿಗಿಕೊಳ್ಳದಿದ್ದರೆ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರೈತರ ಮೇಲೆ ಜಿಲ್ಲಾಧಿಕಾರಿಗಳು ಹಕ್ಕು ಚಲಾವಣೆ ಮಾಡಿದ್ದಾರೆ.

    ಡಿಸಿ ಒಬ್ಬ ಮೂರ್ಖ: ಇವಾಗ್ಲೇ ಬಿತ್ತನೆ ಮಾಡಿ ಎಂಬುವುದು ದುರಂಹಕಾರ ಆದೇಶ. ಬಿತ್ತನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಆದೇಶ ನೀಡಿದ್ದಾರೆ. ಕೂಡಲೇ ಅದನ್ನ ಹಿಂಪಡೆಯಬೇಕು. ಇದೊಂದು ನಾಚಿಕೆಗೇಡಿತನದ ಕೆಲಸ. ಡಿಸಿ ಒಬ್ಬ ಮೂರ್ಖ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಾಮರಾಜನಗರದಲ್ಲಿ ಕಳೆದ ಐದು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು, ಇದರಿಂದ ಮಣ್ಣಿನ ಸತ್ವ ಸಂಪೂರ್ಣ ಕಳೆದುಕೊಂಡಿದೆ. ಇದೀಗ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ತಕ್ಕ ಮಟ್ಟಿಗೆ ಮಳೆ ಆಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನನ್ನು ಉತ್ತು ಹದ ಮಾಡಿಕೊಂಡು ಮಣ್ಣನ್ನು ಫಲವತ್ತುಗೊಳಿಸುತ್ತಿದ್ದಾರೆ. ಹೀಗಿರುವಾಗ ಏಕಾ ಏಕಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಈ ಆದೇಶದಿಂದ ರೈತರು ಆಕ್ರೋಶಗೊಂಡಿದ್ದು, ಡಿಸಿ ತಮ್ಮ ಆದೇಶವನ್ನು ವಾಪಸ್ಸು ಪಡೆದು ರೈತರ ಕ್ಷಮೆ ಯಾಚನೆ ಮಾಡಬೇಕೆಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.