Tag: ಬಿಡಿಎ

  • ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ: ವಿಶ್ವನಾಥ್

    ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ: ವಿಶ್ವನಾಥ್

    ನೆಲಮಂಗಲ: ರಾಜ್ಯದಲ್ಲಿ ವ್ಯಾಕ್ಸಿನ್ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಹಾಗುತ್ತಿಲ್ಲ. ಈ ಬಗ್ಗೆ ಆರೋಗ್ಯ ಸಚಿವರು ಕೇಂದ್ರದ ಸಚಿವರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಬಿಡಿಎ ಅಧ್ಯಕ್ಷ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸತ್ಯವನ್ನ ಹೊರ ಹಾಕಿದ್ದಾರೆ.

    ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂದು ಎನ್.ಜಿ.ಓ ದವರ ಜೊತೆಗೂಡಿ ವ್ಯಾಕ್ಸಿನ್ ಅನ್ನು ನೀಡಲಾಗುತ್ತಿದೆ ಇಂದು 500 ಜನರಿಗೆ ವ್ಯಾಕ್ಸಿನ್ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಸಹಕಾರದೊಂದಿಗೆ ವ್ಯಾಕ್ಸಿನ್ ವಿತರಣೆಯನ್ನು ಮಾಡಲಾಗುತ್ತಿದೆ ಎಂದರು.

    ಕಳೆದ 15 ದಿನಗಳಿಂದ 3000 ಜನರಿಗೆ ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ. ಹಾಗೆಯೇ ದಾಸನಪುರ ಹೋಬಳಿಯಲ್ಲಿ ಇಂದು ಮತ್ತು ನಾಳೆ 1500 ಜನರಿಗೆ ವ್ಯಾಕ್ಸಿನ್ ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ವ್ಯಾಕ್ಸಿನೇಷನ್ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಆಗುತ್ತಿಲ್ಲ. ಆದ್ದರಿಂದ ಅರೋಗ್ಯ ಸಚಿವರು ಕೇಂದ್ರದ ಸಚಿವರ ಜೊತೆಗೆ ಮಾತನಾಡುತ್ತಿದ್ದಾರೆ. ಜುಲೈ ಆಗಸ್ಟ್ ತಿಂಗಳ ಒಳಗಾಗಿ ಎಲ್ಲರಿಗೂ ಕೂಡ ಮೊದಲನೇ ಹಂತದ ಲಸಿಕೆ ಹಾಕಿಸಲಾಗುತ್ತದೆ ಎಂದು ತಿಳಿಸಿದರು.

    ಎಲ್ಲರೂ ಕೂಡ ಸರ್ಕಾರದ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಅಂಕಿ-ಅಂಶಗಳ ಪ್ರಕಾರ ವ್ಯಾಕ್ಸಿನೇಷನ್ ಪಡೆದವರಲ್ಲಿ ಸಾವು-ನೋವುಗಳು ಆಗಿರುವುದಿಲ್ಲ. ಎಲ್ಲೋ ಕೆಲವರಿಗೆ ಜ್ವರ ಬಂದಿದೆ ಅಷ್ಟೇ. ಈಗಿನ ಪರಿಸ್ಥಿತಿಯಲ್ಲಿ ಪೂರ್ಣ ರೋಗ ಕಡಿಮೆ ಮಾಡುವ ಔಷಧಿ ಯಾವುದು ಬಂದಿರುವುದಿಲ್ಲ. ವ್ಯಾಕ್ಸಿನೇಷನ್ ಮಾಡಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

  • ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    – ಸಾವಿರಾರು ಕೋಟಿ ಮೌಲ್ಯದ ಮೌಲ್ಯದ ಭೂ ಕಬಳಿಕೆ ಆರೋಪ
    – ಈ ಹಿಂದೆ ವಿರೋಧಿಸಿದ್ದ ಯೋಜನೆಗೆ ಬಿಜೆಪಿ ಮುಂದಾಗಿದ್ದೇಕೆ?

    ಬೆಂಗಳೂರು: ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ರವರು ಅಕ್ರಮವಾಗಿ ಹಣ ಮಾಡಲು ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇದ್ದಾರೆ. ಈಗ ಏಳು ಬಿಡಿಎ ಕಾಂಪ್ಲೆಕ್ಸ್ ಗಳ ಮರು ನಿರ್ಮಾಣ ಮಾಡುವ ಉದ್ದೇಶ ಕೂಡ ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡುವುದೇ ಆಗಿದೆ. ಇಂದಿರಾನಗರ, ಆಸ್ಟಿನ್ ಟೌನ್, ವಿಜಯನಗರ, ಸದಾಶಿವನಗರ ,ದೊಮ್ಮಲೂರು, ಎಚ್.ಎಸ್. ಆರ್ ಬಡಾವಣೆ ಸೇರಿದಂತೆ ಸೇರಿದಂತೆ ಯಾವುದೇ ಕಾರಣಕ್ಕೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಂಪ್ಲೆಕ್ಸ್ ಗಳನ್ನು ಒಡೆಯಲು ಹಾಗೂ ಅವು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

    ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಕೂಡ ಇದೇ ಯೋಜನೆಗೆ ಕೈಹಾಕಿತ್ತು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಆಗ ವಿರೋಧಿಸಿದ್ದ ಬಿಜೆಪಿಯವರೇ ಈಗ ಮರುನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ನಿಲುವು, ಅಧಿಕಾರದಲ್ಲಿದ್ದಾಗ ಮತ್ತೊಂದು ನಿಲುವು ತೆಗೆದುಕೊಳ್ಳುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

    ಬಿಡಿಎ ಕಾಂಪ್ಲೆಕ್ಸ್‍ಗಳು ಅಮೂಲ್ಯ ಸರ್ಕಾರಿ ಸ್ವತ್ತುಗಳು. ಮರುನಿರ್ಮಾಣದ ಹೆಸರಿನಲ್ಲಿ ಬರೋಬ್ಬರಿ 5,000 ಕೋಟಿ ರೂಪಾಯಿ ಮೌಲ್ಯದ ಅವುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಖಾಸಗಿಯವರಿಂದ ಬಿಡಿಎ ಅಧ್ಯಕ್ಷರಿಗೆ ಭಾರೀ ಪ್ರಮಾಣದ ಕಿಕ್‍ಬ್ಯಾಕ್ ಸಿಗಲಿದೆ. ಈಗ 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಬಿಟ್ಟುಕೊಟ್ಟು, ನಂತರ ಅದನ್ನು ಮತ್ತೆ 30 ವರ್ಷ ವಿಸ್ತರಿಸಲೂ ಅವಕಾಶ ನೀಡಲಾಗುತ್ತಿದೆ. ಆದರೆ 60 ವರ್ಷಗಳ ಬಳಿಕವೂ ಅವು ಸರ್ಕಾರದ ಸುಪರ್ದಿಗೆ ಮರಳುವುದಿಲ್ಲ. ದಿವ್ಯಶ್ರೀ ಚೇಂಬರ್ಸ್, ಚಿಕ್ಕಪೇಟೆಯಲ್ಲಿರುವ ಕೆಂಪೇಗೌಡ ಮಹಾರಾಜ ಕಾಂಪ್ಲೆಕ್ಸ್, ಗಾಂಧಿನಗರದಲ್ಲಿರುವ ಗುಪ್ತಾ ಮಾರುಕಟ್ಟೆಯು ಈಗಾಗಲೇ ಖಾಸಗಿಯವರ ಪಾಲಾಗಿದ್ದು, ಇವುಗಳನ್ನು ವಾಪಸ್ ಪಡೆಯಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ ಎಂದು ಎಂದು ಮೋಹನ್ ದಾಸರಿ ಹೇಳಿದರು.

    ಯೋಜನೆಯ ಗುತ್ತಿಗೆ ಪಡೆದಿರುವ ಎಂಬೆಸ್ಸಿ, ಮೇವರಿಕ್ ಹಾಗೂ ಎಂ-ಫಾರ್ ಸಂಸ್ಥೆಗಳೊಂದಿಗೆ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್‍ಗೆ ಲಿಂಕ್ ಇದೆ. ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿ ಕೆ.ಜೆ.ಜಾರ್ಜ್ ಮಾಲೀಕತ್ವದ ಎಂಬೆಸ್ಸಿ ಕಂಪನಿಯು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಉದಯ್ ಗರುಡಾಚಾರ್ ರವರ ಮೇವರಿಕ್ ಹಾಗೂ ಎಂ-ಫಾರ್ ಕಂಪನಿಗಳೊಂದಿಗೆ ಹಿಂದೆಯೂ ಅನೇಕ ಪ್ರಾಜೆಕ್ಟ್ ಗಳಲ್ಲಿ ಪಾಲುದಾರಿಕೆ ಹೊಂದಿತ್ತು. ಈಗಾಗಲೇ ಬಿಬಿಎಂಪಿ ಆಸ್ತಿಯಾಗಿದ್ದ ಎಂಜಿ ರಸ್ತೆಯ ಗರುಡಾಮಾಲ್ ಇವರುಗಳ ಪಾಲಾಗಿದೆ.

    ಪಿಪಿಪಿ ಮಾದರಿಯಲ್ಲಿ ಮರುನಿರ್ಮಾಣ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಮಾಡುತ್ತಿರುವ ಗೋಲ್‍ಮಾಲ್ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ

    ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಂಗ್ರೆಸ್- ಬಿಜೆಪಿ ಪಕ್ಷಗಳ ಪ್ರಭಾವಿ ನಾಯಕರುಗಳ ಒಡೆತನದ ಬಿಲ್ಡರ್ ಕಂಪೆನಿಗಳಿಗೆ ಬೆಂಗಳೂರಿನ ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಾರಾಸಗಟಾಗಿ ನುಂಗಲು ಹೊರಟಿರುವುದು ಬೆಂಗಳೂರಿಗರ ಪಾಲಿಗೆ ದುರ್ದೈವದ ಸಂಗತಿ.ಸಾರ್ವಜನಿಕರ ಆಸ್ತಿಯನ್ನು ಕೊಳ್ಳೆ ಹೊಡೆಯುವ ಈ ನಿರ್ಧಾರದಿಂದ ತಕ್ಷಣವೇ ಹಿಂದೆಸರಿಯದಿದ್ದರೆ ಆಮ್ ಆದ್ಮಿ ಪಾರ್ಟಿ ಭಾರೀ ಪ್ರತಿಭಟನೆ ಮಾಡಲಿದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರಾಯಚೂರು ನಗರಸಭೆಯಲ್ಲಿ ತಿಂಗಳ ಮಾಮೂಲಿ ಜಗಳ-ಅಧ್ಯಕ್ಷನ ವಿರುದ್ಧ ಜೀವಬೆದರಿಕೆ ದೂರು

  • ಮೂಲಭೂತ ಸೌಕರ್ಯ ನೀಡದೆ ನಿರ್ವಹಣೆ ಶುಲ್ಕ ಹೆಚ್ಚಳ: ಬಿಡಿಎ ವಿರುದ್ಧ ಬಡಾವಣೆ ನಿವಾಸಿಗಳ ಆಕ್ರೋಶ

    ಮೂಲಭೂತ ಸೌಕರ್ಯ ನೀಡದೆ ನಿರ್ವಹಣೆ ಶುಲ್ಕ ಹೆಚ್ಚಳ: ಬಿಡಿಎ ವಿರುದ್ಧ ಬಡಾವಣೆ ನಿವಾಸಿಗಳ ಆಕ್ರೋಶ

    ಬೆಂಗಳೂರು: ನಗರದ ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿರುವ ಬಿಡಿಎ ಸೈಟಿನ ನಿರ್ವಹಣಾ ಶುಲ್ಕವನ್ನು ಬಿಡಿಎ ಹೆಚ್ಚಳ ಮಾಡಿದ್ದು, ಬಿಡಿಎ ನಿರ್ಧಾರದ ವಿರುದ್ಧ ಕೆಂಪೇಗೌಡ ಬಡಾವಣೆಯ ಸೈಟಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಐದು ವರ್ಷದ ಹಿಂದೆ ಬೆಂಗಳೂರು ನಗಾರಭಿವೃದ್ದಿ ಪ್ರಾಧಿಕಾರ ಆರ್ಹ ಫಲಾನುಭಾವಿಗಳಿಗೆ ಸೈಟುಗಳ ಹಂಚಿಕೆ ಮಾಡಿತ್ತು. ಜೊತೆಗೆ ಸೈಟು ಹಂಚಿಕೆಯಾಗಿ ಐದು ವರ್ಷ ಕಳೆದೆರು ಮೂಲ ಭೂತ ಸೌಕರ್ಯ ಒದಗಿಸಿಲ್ಲ. ಮೂಲ ಭೂತ ಸೌಕರ್ಯ ಒದಗಿಸದೇ ನಿರ್ವಾಹಣೆ ಶುಲ್ಕ ಹೆಚ್ಚಳ ಮಾಡಿರುವುದು ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: 10 ದಿನದಲ್ಲಿ ಎಲ್ಲ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೂ ಲಸಿಕೆ

    ಈ ಬಗ್ಗೆ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ವಾಹಣ ಶುಲ್ಕ ಹೆಸರಲ್ಲಿ ಹೆಚ್ಚಿನ ಹೊರೆಯನ್ನು ಮಾಲೀಕರ ಮೇಲೆ ಹೇರುತ್ತಿದ್ದಾರೆ. 1200 ರಿಂದ 3600 ರೂ ತನಕ ವಾರ್ಷಿಕವಾಗಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ಇದರಿಂದ ಟ್ಯಾಕ್ಸ್ ನಮಗೆ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ. ಅಭಿವೃದ್ಧಿಯನ್ನೆ ಮಾಡದೇ ಟ್ಯಾಕ್ಸ್ ಗಳನ್ನು ಹಾಕುತ್ತಿರುವುದು ಸರಿಯಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ಶುಲ್ಕ ಹೆಚ್ಚಳ ನಮ್ಮ ಮೇಲೆ ಮತ್ತಷ್ಟು ಹೊರೆಯಾಗಲಿದೆ. ಜೊತೆಗೆ ಅಭಿವೃದ್ಧಿ ಮಾಡದೇ ಕೇವಲ ಶುಲ್ಕ ಹೆಚ್ಚಳ ಮಾಡುವುದು ಎಷ್ಟರಮಟ್ಟಿಗೆ ಸರಿ. ತಕ್ಷಣ ಬಿಡಿಎ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

  • ನಿಗದಿತ ಅವಧಿಯೊಳಗೆ ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯ ಪೂರ್ಣ: ಎಸ್.ಆರ್.ವಿಶ್ವನಾಥ್

    ನಿಗದಿತ ಅವಧಿಯೊಳಗೆ ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯ ಪೂರ್ಣ: ಎಸ್.ಆರ್.ವಿಶ್ವನಾಥ್

    ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ತುಂಬಿರುವ ಹೂಳೆತ್ತುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

    ಮಂಗಳವಾರ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರೊಂದಿಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ದೊಡ್ಡಬನಹಳ್ಳಿ ಮತ್ತು ಗುಂಜೂರು ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿದ ನಂತರ ವಿಶ್ವನಾಥ್ ಈ ವಿಷಯ ತಿಳಿಸಿದರು. ಬೆಳ್ಳಂದೂರು ಕೆರೆಯ ಹೂಳೆತ್ತುವುದು ಮತ್ತು ಇನ್ನಿತರೆ ಕಾಮಗಾರಿಗಳಿಗೆಂದು 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚು ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ಅಂದರೆ 2022 ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

    ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್:
    ದೊಡ್ಡಬನಹಳ್ಳಿ ಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕೂಡಲೇ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ನಿವಾಸಿಗಳ ಸಂಘಕ್ಕೆ ಕಚೇರಿಯನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್ ಮತ್ತು ಮಕ್ಕಳ ಆಟೋಟಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಓಪನ್ ಜಿಮ್ ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸದ್ಯದಲ್ಲಿಯೇ ಪ್ರಾಧಿಕಾರ ಅನುಮೋದನೆ ನೀಡಲಿದೆ ಎಂದು ಭರವಸೆ ನೀಡಿದರು.

    ಗುಂಜೂರು ಸಮಸ್ಯೆ ನಿವಾರಣೆಗೆ ಆಗಸ್ಟ್ 15 ಗಡುವು:
    ಇನ್ನು ಗುಂಜೂರು ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಎರಡು ಬೋರ್ ವೆಲ್ ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಶ್ವತ ವಿದ್ಯುತ್ ಸಂಪರ್ಕ, ಕಸ ವಿಲೇವಾರಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಿದರು. ಇದೇ ವೇಳೆ, ಕಾಮಗಾರಿಯಲ್ಲಿ ವಿಳಂಬ ಮತ್ತು ಲೋಪಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  • ಬಿಡಿಎ ಅಯುಕ್ತರಾಗಿ ರಾಜೇಶ್ ಗೌಡ ಅಧಿಕಾರ ಸ್ವೀಕಾರ

    ಬಿಡಿಎ ಅಯುಕ್ತರಾಗಿ ರಾಜೇಶ್ ಗೌಡ ಅಧಿಕಾರ ಸ್ವೀಕಾರ

    ಬೆಂಗಳೂರು: ಬಿಡಿಎ ನೂತನ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಎಂ.ಬಿ.ರಾಜೇಶ್ ಗೌಡ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

    ಈ ಸಂದರ್ಭದಲ್ಲಿ ನೂತನ ಆಯುಕ್ತರಿಗೆ ಶುಭ ಕೋರಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಪ್ರಾಧಿಕಾರ ಸಾರ್ವಜನಿಕರ ಸೇವೆಯ ಸಂಸ್ಥೆಯಾಗಿದ್ದು, ಸಾರ್ವಜನಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡುವ ಹೊಣೆ ಎಲ್ಲರದ್ದಾಗಿದೆ. ಸಣ್ಣಪುಟ್ಟ ಕೆಲಸಗಳಿಗಾಗಿ ಸಾರ್ವಜನಿಕರು ಬಿಡಿಎಗೆ ಅಲೆಯದಂತೆ ನೋಡಿಕೊಳ್ಳಬೇಕು. ಬಿಡಿಎ ಒಂದು ಕುಟುಂಬ ಇದ್ದಂತೆ. ಎಲ್ಲರೂ ಒಗ್ಗಟ್ಟಾಗಿ ಸಂಸ್ಥೆ ಮತ್ತು ಸಾರ್ವಜನಿಕರ ಏಳ್ಗೆಗಾಗಿ ಶ್ರಮಿಸಿ, ಸಂಸ್ಥೆಗೆ ಹೆಸರು ತರೋಣ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

    ನೂತನ ಆಯುಕ್ತ ರಾಜೇಶ್ ಗೌಡ ಮಾತನಾಡಿ, ಸಾರ್ವಜನಿಕರಿಗಾಗಿ ಇರುವ ಸಂಸ್ಥೆಯ ಉನ್ನತಿಗೆ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಡಿಎನ ಹಲವಾರು ಅಧಿಕಾರಿಗಳು ಇದ್ದರು.

  • ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ನೀವು ಬಾಡಿಗೆ ಮನೆಯಲ್ಲಿದ್ದೀರಾ? ಖರೀದಿಸಲು ಹೊಸ ಮನೆ ಹುಡುಕುತ್ತಿದ್ದೀರಾ? ಅದರಲ್ಲೂ ಕಡಿಮೆ ಬೆಲೆಗೆ ಗುಣಮಟ್ಟದ ಮನೆಯನ್ನೇ ಹುಡುಕುತ್ತಿದ್ದೀರಾ? ಹಾಗಾದ್ರೆ ನಿಮಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಗುಡ್‌ನ್ಯೂಸ್‌ ನೀಡಿದೆ.

    ಬಿಡಿಎ ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆಯನ್ನು ಪ್ರಾರಂಭಿಸಿದೆ. ಮಾಳಗಾಳ(ನಾಗರಬಾವಿ), ಕಣಿಮಿಣಿಕೆ(ಕುಂಬಳಗೋಡು), ಕೊಮ್ಮಘಟ್ಟ(ಕೆಂಗೇರಿ, ನೈಸ್ ರಸ್ತೆ ಬಳಿ), ವಲಗೇರಹಳ್ಳಿ(ಕೆಂಗೇರಿ), ದೊಡ್ಡಬನಹಳ್ಳಿ(ಕೆ.ಆರ್.ಪುರಂ) ಬಡಾವಣೆಗಳಲ್ಲಿ ವಿವಿಧ ಅಳತೆಯ 1,381 ಫ್ಲಾಟ್‍ಗಳು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

    ಈ ಹಿಂದೆ ಫ್ಲಾಟ್‍ಗಳನ್ನು ಖರೀದಿಸಲು ಪ್ರಾಧಿಕಾರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆ ಪ್ರಾರಂಭಿಸಿದೆ. ಸಾರ್ವಜನಿಕರು ಪ್ರಾಧಿಕಾರದ ವೆಬ್‍ಸೈಟ್ www.housing.bdabangalore.org ಗೆ ಭೇಟಿ ನೀಡಿ, ಫ್ಲಾಟ್‍ಗಳ ವಿವರ, ಬಡಾವಣೆಗಳ ಹೆಸರು, ನಕಾಶೆ, ಫ್ಲಾಟ್‍ಗಳ ಫೋಟೋ ಮತ್ತು ವೀಡಿಯೋ, ಫ್ಲಾಟ್‍ಗಳ ಸಂಖ್ಯೆ ಇವೆಲ್ಲವನ್ನೂ ವೀಕ್ಷಿಸಬಹುದು. ಫ್ಲಾಟ್‍ಗಳಿಗೆ ನಿಗದಿಪಡಿಸಿರುವ ದರಗಳಂತೆ ಆನ್‍ಲೈನ್ ಮೂಲಕವೇ ತಮಗಿಷ್ಟವಾದ ಫ್ಲಾಟ್‍ಗಳನ್ನು ಕಾಯ್ದಿರಿಸಬಹುದು.

    ಬಿಡಿಎ ಅಧ್ಯಕ್ಷರು ನಗರದ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿ, ವಸತಿ ಸಮುಚ್ಛಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆಗೊಳಿಸಿದ್ದಾರೆ ಹಾಗೂ ಕಾಮಗಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಆಟದ ಮೈದಾನ, ಉದ್ಯಾನವನ, ಮಕ್ಕಳ ಆಟಿಕೆಗಳು, ಜಿಮ್, ವೆಲ್‍ಫೇರ್ ಅಸೋಸಿಯೇಷನ್‍ಗೆ ಕಚೇರಿ ನಿರ್ಮಿಸಲು ಸ್ಥಳ ಕಾಯ್ದಿರಿಸುವುದು, ವಸತಿ ಸಮುಚ್ಛಯಗಳಿಗೆ ಸೌರ ಫಲಕಗಳನ್ನು ಅಳವಡಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.

  • ಮಿಡ್ ನೈಟ್ ಡೀಲ್ – ಬಿಡಿಎ ಹುಳುಕುಗಳು ಬಯಲು

    ಮಿಡ್ ನೈಟ್ ಡೀಲ್ – ಬಿಡಿಎ ಹುಳುಕುಗಳು ಬಯಲು

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಯುಕ್ತರ ನಡುವಿನ ಜಟಾಪಟಿ ಬಿಡಿಎ ಹುಳುಕುಗಳನ್ನು ಬಯಲು ಮಾಡಿದೆ.

    ಬಿಡಿಎಯಲ್ಲಿ ಮಿಡ್ ನೈಟ್ ಡೀಲ್ ನಡೆಯುತ್ತಿವೆ. ಎರಡು ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಸ್ವತಃ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಆರೋಪಿಸಿದ್ದಾರೆ. ನನಗೆ ಆಯುಕ್ತ ಮಹಾದೇವ್ ಸಹಕರಿಸುತ್ತಿಲ್ಲ, ಗೌರವ ನೀಡುತ್ತಿಲ್ಲ. ಒಂದು ಕಡತ ನೋಡೋಕು ಬಿಡಲ್ಲ. ಏನೊಂದು ಮಾಹಿತಿ ನೀಡಲ್ಲ. ತಮ್ಮ ಪಾಡಿಗೆ ತಾವು ತೀರ್ಮಾನ ತಗೋತಿದ್ದಾರೆ ಎಂದು ಎಸ್‍ಆರ್ ವಿಶ್ವನಾಥ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಾನು ಬೇಡ ಅಂದ್ರೂ ಕೂಡ ಭವಾನಿ ಸೊಸೈಟಿಗೆ 5 ಎಕರೆ ಭೂಮಿಯನ್ನು ಈಗಿನ ಬೆಲೆಯಲ್ಲಿ ನೀಡಲು ಆಯುಕ್ತರು ನಿರ್ಧರಿಸಿದ್ದಾರೆ. ನಿನ್ನೆ ರಾತ್ರಿ 10.45ರವರೆಗೂ ಬಿಡಿಎಯಲ್ಲಿ ಅಧಿಕಾರಿಗಳನ್ನು ಕೂರಿಸಿಕೊಂಡು ಈ ನಿರ್ಧಾರ ಮಾಡಿದ್ದಾರೆ. ಇದರಿಂದ ಬಿಡಿಎಗೆ 500 ಕೋಟಿ ಲಾಸ್ ಆಗಿದೆ ಎಂದು ಎಸ್‍ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ. ಈ ಹಿಂದೆ ಭವಾನಿಗೆ ಸೊಸೈಟಿಗೆ ಅಕ್ರಮವಾಗಿ ಜಮೀನು ಹಂಚಿಕೆಯಾದಾಗ ಎಸ್‍ಟಿ ಸೋಮಶೇಖರ್ ಅಧ್ಯಕ್ಷರಾಗಿದ್ರು. ಈ ಬಗ್ಗೆ ಸಿಎಂ ಜೊತೆ ಚರ್ಚಿಸ್ತೀನಿ ಅಂತಲೂ ವಿಶ್ವನಾಥ್ ಹೇಳಿದರು.

    ಬಿಡಿಎ ಉಪಕಾರ್ಯದರ್ಶಿ ಚಿದಾನಂದ್ ತಮ್ಮ ಸಂಬಂಧಿಕರಿಗೆ ಸೈಟು ಹಂಚಿಕೆ ಮಾಡಿದ್ದಾರೆ. ಕಾರ್ನರ್ ಸೈಟು, ಬಲ್ಕ್ ಅಲಾಟ್‍ಮೆಂಟ್, ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ. ಈ ರೀತಿಯಲ್ಲಿ 2ಸಾವಿರ ಕೋಟಿ ಮೊತ್ತದ ಹಗರಣ ನಡೀತಿದೆ ಎಂದು ಆರೋಪ ಮಾಡಿದರು. ಅಂತಿಮವಾಗಿ ಏನ್ ಮಾಡಬೇಕು ಅನ್ನೋದು ಗೊತ್ತು ಎನ್ನುವ ಮೂಲಕ ಪರೋಕ್ಷ ಎಚ್ಚರಿಕೆ ನೀಡಿದರು.

    ಈ ಬೆನ್ನಲ್ಲೇ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಬಿಡಿಎ ಆಯುಕ್ತ ಮಹಾದೇವ್, ನಾನು ಅಧ್ಯಕ್ಷರನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಆರು ತಿಂಗಳಲ್ಲಿ ಒಂದು ಸಾವಿರ ಕೋಟಿ ಉಳಿಸಿದ್ದೀನಿ ಎಂದು ತಿರುಗೇಟು ನೀಡಿದರು. ಎಲ್ಲವನ್ನು ಅಧ್ಯಕ್ಷರ ಗಮನಕ್ಕೆ ತರುವ ಅಗತ್ಯವಿಲ್ಲ. ಸಿಎಂಗೆ ದೂರು ಕೊಟ್ರೇ ನಾನು ನೋಡಿಕೊಳ್ಳುತ್ತೇನೆ. ಭವಾನಿ ಸೊಸೈಟಿಗೆ ಸಗಟು ಹಂಚಿಕೆ ಮಾಡಿಲ್ಲ. ಇದು ಪರ್ಯಾಯ ಜಾಗ. ನನಗೆ ಬೆದರಿಕೆ ಕರೆ ಬಂದಿದೆ. ಆದರೆ ಅವರ ಹೆಸರನ್ನು ಹೇಳಲ್ಲ ಎಂದ ಮಹಾದೇವ್, ಬಲ್ಕ್ ಅಲಾಟ್‍ಮೆಂಟ್ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

  • ಅದಾನಿ ಪವರ್ ಕಾರ್ಪೋರೇಷನ್‍ಗೆ ಹೆಚ್ಚುವರಿ ಹಣ ನೀಡುತ್ತಿಲ್ಲ: ಬೊಮ್ಮಾಯಿ

    ಅದಾನಿ ಪವರ್ ಕಾರ್ಪೋರೇಷನ್‍ಗೆ ಹೆಚ್ಚುವರಿ ಹಣ ನೀಡುತ್ತಿಲ್ಲ: ಬೊಮ್ಮಾಯಿ

    ಬೆಂಗಳೂರು: ಅದಾನಿ ಒಡೆತನದ ಪವರ್ ಕಾರ್ಪೋರೇಷನ್ ಗೆ ರಾಜ್ಯ ಸರ್ಕಾರ ಯಾವುದೇ ಹೆಚ್ಚುವರಿ ಹಣ ಕೊಡುತ್ತಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಬದಲಿಗೆ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಸಿಇಆರ್‍ಸಿ ಆದೇಶದ ಅನ್ವಯ ಪ್ರತಿ ಯುನಿಟ್ ಗೆ 1.45 ರೂ. ನಿಗದಿಪಡಿಸಲಾಗಿದೆ. ಕಲ್ಲಿದ್ದಲು, ಸುಣ್ಣದ ಕಲ್ಲು, ತೈಲದರ ಏರಿಳಿತ ಆದಾಗ ದರ ಹೆಚ್ವಳ ಆಗುತ್ತೆ. ಏಪ್ರಿಲ್ 2020 ರಿಂದ ಡಿಸೆಂಬರ್ 2020ರ ವರೆಗೆ ಪ್ರತಿ ಯುನಿಟ್‍ಗೆ ಕನಿಷ್ಠ 2.75 ರೂ. ಹಾಗೂ ಗರಿಷ್ಠ 3.72 ರೂ. ನಿಗದಿಪಡಿಸಲಾಗಿದೆ.

    ಕೆಇಆರ್ ಸಿ ಮತ್ತು ಸಿಇಆರ್ ಸಿ ನಿಯಮಾವಳಿ ಪ್ರಕಾರ ನಿಭಾಯಿಸಲಾಗುತ್ತಿದೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿ 1,600 ಕೋಟಿ ರೂ. ನಷ್ಟದಲ್ಲಿದೆ. ಹೆಚ್ಚುವರಿಯಾಗಿ ಯಾವುದೇ ಹಣ ಅದಾನಿ ಕಂಪನಿಗೆ ನೀಡಿಲ್ಲ. ನಿಯಮಗಳ ಅನ್ವಯ ಹಣ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಬಿಡಿಎ ನಿರ್ಮಿಸುತ್ತಿರುವ ಸಮುಚ್ಛಯಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಪ್ರಕಾಶ್ ರಾಥೋಡ್ ಬದಲಿಗೆ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಡಿಎದಿಂದ ಸದ್ಯ 31 ವಸತಿ ಸಮುಚ್ಛಯಗಳನ್ನ ನಿರ್ಮಿಸಲಾಗಿದೆ. ಈ ವರೆಗೆ ಸುಮಾರು 7,909 ಫ್ಲಾಟ್ ಮಾರಾಟವಾಗಿದೆ. 1,914 ಫ್ಲಾಟ್ ಮಾತ್ರ ಮಾರಾಟವಾಗದೇ ಬಾಕಿ ಇವೆ. ಅಲ್ಲದೆ ಹೊಸ 5,086 ಕಾಮಗಾರಿ ಚಾಲ್ತಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು. ಮೂಲಭೂತ ಸೌಕರ್ಯ ಇಲ್ಲದ ಕಡೆ ಕೂಡಲೇ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತೆ. ಗುಣಮಟ್ಟದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

  • ಬಿಡಿಎ ವೆಬ್‍ಸೈಟಿನಲ್ಲಿ ತಾಂತ್ರಿಕ ದೋಷ – ಸೈಟ್ ಬಿಡ್ಡಿಂಗ್ ಅವಧಿ ವಿಸ್ತರಣೆ

    ಬಿಡಿಎ ವೆಬ್‍ಸೈಟಿನಲ್ಲಿ ತಾಂತ್ರಿಕ ದೋಷ – ಸೈಟ್ ಬಿಡ್ಡಿಂಗ್ ಅವಧಿ ವಿಸ್ತರಣೆ

    ಬೆಂಗಳೂರು: ಬಿಡಿಎ ಕಾರ್ನರ್ ಸೈಟ್ ಇ ಹರಾಜು ವೇಳೆನಲ್ಲಿ ಪ್ರೊಕ್ಯೂರ್ಮೆಂಟ್ ವೆಬ್‍ಸೈಟಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಿಡ್ಡಿಂಗ್ ಅವಧಿಯನ್ನು ವಿಸ್ತರಣೆ ಮಾಡಿದೆ.

    ಇಂದು ಸಂಜೆ 6 ಗಂಟೆಗೆ ಬಿಡ್ಡಿಂಗ್ ಅಂತ್ಯವಾಗಬೇಕಿತ್ತು. ಆದರೆ ಸಂಜೆ 5:30ರ ವೇಳೆಗೆ ಇ ಪ್ರೊಕ್ಯೂರ್ಮೆಂಟ್ ವೆಬ್‍ಸೈಟಿನಲ್ಲಿ ದೋಷ ಕಾಣಿಸಿಕೊಂಡಿದೆ. ಇದಾದ ತಕ್ಷಣ ಬಿಡಿಐ ಆಯುಕ್ತ ಹೆಚ್. ಆರ್. ಮಹಾದೇವ್ ಅಧಿಕಾರಿಗಳ ಸಭೆ ಕರೆದಿದ್ದು, ಬಿಡ್ಡಿಂಗ್ ಅವಧಿಯನ್ನು ನಾಳೆ ಸಂಜೆ 6ರವರೆಗೆ ವಿಸ್ತರಣೆ ಮಾಡಿದ್ದಾರೆ.

    ಈಗಾಗಲೇ ಬಿಡ್ಡಿಂಗ್ ನಡೆದಿದ್ದು, 200 ಸೈಟಿಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಬಿಡ್ಡಿಂಗ್ ಬಂದಿವೆ. ಹೀಗಾಗಿ ವೈಬ್‍ಸೈಟಿನಲ್ಲಿ ಒಮ್ಮೆಲೇ ಎಲ್ಲರೂ ಬಿಡ್ ಮಾಡಿದ್ದರಿಂದ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಕಾರಣದಿಂದ ಬಿಡ್ಡಿಂಗ್ ಅವಧಿಯನ್ನು ನಾಳೆ ಸಂಜೆ 6ರವರೆಗೆ ವಿಸ್ತರಣೆ ಮಾಡಿರುವ ಆಯುಕ್ತ ಮಹದೇವ್ ಕೊನೆ ತನಕ ಕಾಯದೆ ಬಿಡ್ಡಿಂಗ್ ಮಾಡಲು ಮನವಿ ಮಾಡಿದ್ದಾರೆ.

  • ಬೆಂಗ್ಳೂರಿಗರೆ ಗಮನಿಸಿ, ನಕಲಿ ಹಕ್ಕು ಪತ್ರ ಸೃಷ್ಟಿಸಿ ಟೋಪಿ ಹಾಕ್ತಾರೆ ಎಚ್ಚರ

    ಬೆಂಗ್ಳೂರಿಗರೆ ಗಮನಿಸಿ, ನಕಲಿ ಹಕ್ಕು ಪತ್ರ ಸೃಷ್ಟಿಸಿ ಟೋಪಿ ಹಾಕ್ತಾರೆ ಎಚ್ಚರ

    – 1 ಸಾವಿರ ಮಂದಿಯಿಂದ 15 ಸಾವಿರ ಪಡೆದು ವಂಚನೆ
    – 50 ಜನರಿಗೆ ನಕಲಿ ಹಕ್ಕು ಪತ್ರ ವಿತರಣೆ

    ಬೆಂಗಳೂರು: ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಸೈಟ್ ಹಂಚುತ್ತೇವೆ ಎಂದು ಸುಳ್ಳು ಹೇಳಿ ಹಣ ಬಾಚುತ್ತಿದ್ದ ಜಾಲವೊಂದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ವಿಜಯನಂದಸ್ವಾಮಿ ಎಂದು ಗುರುತಿಸಲಾಗಿದೆ. ಈತ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಓಪನ್ ಮಾಡಿಕೊಂಡು ಬೆಂಗಳೂರು ಮೂಲಕ ರಮೇಶ್ ಎಂಬಾತನನ್ನು ಪರಿಚಯ ಮಾಡಿಕೊಂಡು ಇಬ್ಬರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡವಾಣೆಯಲ್ಲಿ ಸೈಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ.

    ನಿಮಗೆ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಕೊಡಿಸುತ್ತೇವೆ ಎಂದು ವಿಜಯಾನಂದ ಸ್ವಾಮಿ ಮತ್ತು ರಮೇಶ್ ಜನರನ್ನು ನಂಬಿಸಿದ್ದಾರೆ. ಜೊತೆಗೆ ತನ್ನ ರೈತ ಸಂಘದ ಹೆಸರಿನಲ್ಲಿ ಸದ್ಯರನ್ನಾಗಿ ನೋಂದಾಯಿಸಕೊಳ್ಳುವುದಾಗಿ ಹೇಳಿ ಸುಮಾರು 1000 ಜನರ ಬಳಿ ತಲಾ 15 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾನೆ. ಜೊತೆಗೆ ಅವರಿಗೆ ನಿವೇಶನದ ನಕಲಿ ಹಕ್ಕು ಪತ್ರವನ್ನು ನೀಡಿದ್ದಾರೆ. ಇವನ ಮಾತು ನಂಬಿ ಸುಮಾರು ಸಾವಿರ ಜನ ಮೋಸ ಹೋಗಿದ್ದಾರೆ.

    ಅಲ್ಲದೇ ಈಗಾಗಲೇ 50 ಜನರಿಗೆ ನಕಲಿ ಹಕ್ಕು ಪತ್ರಗಳನ್ನು ಹಂಚಿದ್ದಾರೆ. ಈ ಪತ್ರದಲ್ಲಿ ಬಿಡಿಎ ನಕಲಿ ರಬ್ಬರ್ ಸ್ಟಾಂಪ್ ಹಾಕಲಾಗಿದೆ ಹಾಗೂ ಅಯುಕ್ತರ ಸಹಿಯನ್ನು ಕೂಡ ನಕಲಿ ಮಾಡಲಾಗಿದೆ. ಜನರಿಗೆ ನಿವೇಶನ ಪತ್ರ ನೀಡಿ ಅವರಿಂದ 50 ಸಾವಿರದಿಂದ 3 ಲಕ್ಷದವರೆಗೆ ಹಣ ಪಡೆದಿದ್ದಾರೆ. ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸುಮಾರು 3000 ಜನಕ್ಕೆ ಈ ರೀತಿ ಮೋಸ ಮಾಡುವ ಯೋಜನೆ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    3 ಲಕ್ಷ ಕೊಟ್ಟು ಒಟ್ಟು ಆರು ನಿವೇಶದ ನಕಲಿ ಹಕ್ಕು ಪತ್ರಗಳನ್ನು ಪಡೆದುಕೊಂಡ ವ್ಯಕ್ತಿಯೊಬ್ಬರು ಪತ್ರದ ಅಸಲೀತವನ್ನು ಚೆಕ್ ಮಾಡಲು ಬೆಂಗಳೂರು ಪ್ರಾಧಿಕಾರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಅಧಿಕಾರಿಗಳಿಗೆ ಹಕ್ಕು ಪತ್ರವನ್ನು ನೀಡಿದಾಗ ಇವು ನಕಲಿ ಪತ್ರ ಎಂದು ತಿಳಿದಿದೆ. ಆಗ ತಕ್ಷಣ ಅಧಿಕಾರಿಗಳು ಕಾರ್ಯಚರಣೆ ಇಳಿದು ನಕಲಿ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಾನಂದ ಕಚೇರಿಗೆ ದಾಳಿ ಮಾಡಿ ನಕಲಿ ಹಕ್ಕು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.