Tag: ಬಿಜೆಪಿ

  • ‘ರಾಜ್ಯ, ರಾಷ್ಟ್ರೀಯ ಹೆದ್ದಾರಿಯ ಟೋಲ್‍ಗಳಲ್ಲಿ ವಿಐಪಿಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಿ’

    – ಪರಿಷತ್‍ನಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್, ಬಿಜೆಪಿ ಶಾಸಕರ ಪ್ರತಿಭಟನೆ

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಟೋಲ್‍ಗಳಲ್ಲಿ ಅಂಬುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಬೇಕು ಎಂದು ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ಸದಸ್ಯರು ಆಗ್ರಹಿಸಿದರು.

    ಈ ವೇಳೆ ಫೆಬ್ರವರಿ 13ರಂದು ಸಂಜೆ 5 ಗಂಟೆಗೆ ಈ ಬಗ್ಗೆ ಸಭೆ ಕರೆದು ಚರ್ಚಿಸೋಣ ಎಂದ ಲೋಕೋಪಯೋಗಿ ಸಚಿವ ಮಹದೇವಪ್ಪ ಉತ್ತರಕ್ಕೆ ಜೆಡಿಎಸ್- ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು. ಲೋಕೋಪಯೋಗಿ ಸಚಿವರು ಪ್ರತಿ ಬಾರಿ ಹೀಗೆ ಹೇಳುತ್ತಾರೆ, ಕೆಲವು ಟೋಲ್ ಅಲ್ಲ. ಎಲ್ಲ ಟೋಲ್ ಗಳಲ್ಲೂ ಈ ರೀತಿಯ ಸಮಸ್ಯೆಗಳಿವೆ ಅಂತಾ ಜೆಡಿಎಸ್ ಸದಸ್ಯ ಶರವಣ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸದನದ ಬಾವಿಗಿಳಿದು ಜೆಡಿಎಸ್, ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ರು.

    ಮಾಜಿ ಪ್ರಧಾನಿ ದೇವೇಗೌಡರಿಗೂ ಬಿಟ್ಟಿಲ್ಲ ಅಂದ್ರೆ ನಾಚಿಕೆ ಆಗಬೇಕು. ಸಚಿವರಾಗಿ ನೀವು ವಿಫಲರಾಗಿದ್ದೀರಾ ಎಂದ ಈಶ್ವರಪ್ಪ, ಎಲ್ಲರಿಗೂ ಟೋಲ್ ತೆಗೆದು ಬಿಡಿ ಅಂದ್ರು. ಇದಕ್ಕೆ ತಿರುಗೇಟು ನೀಡಿದ ಮಹದೇವಪ್ಪ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಯಲ್ಲಿದೆ. ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಅಂದ್ರು. ಮತ್ಯಾಕೆ ಸಭೆ ಮಾಡ್ತೀರಾ ಅಂತ ಈಶ್ವರಪ್ಪ ಟಾಂಗ್ ಕೊಟ್ಟರು. ಈ ವೇಳೆ ಈಶ್ವರಪ್ಪ ಮಹದೇವಪ್ಪ ನಡುವೆ ವಾಕ್ಸಮರ ನಡೀತು.

    ಮಧ್ಯಪ್ರವೇಶಿಸಿದ ಸಚಿವ ಡಿಕೆಶಿವಕುಮಾರ್ ನಮ್ಮ ಹೆಸ್ರಲ್ಲಿ ಪಾಸ್‍ಗಳು ದುರುಪಯೋಗ ಆಗ್ತಿದೆ. ನನ್ನ ಶಿಷ್ಯರು ಕಲರ್ ಜೆರಾಕ್ಸ್ ಮಾಡಿ, ಬಾರು, ವೈನ್ ಶಾಪ್ ಮುಂದೆ ವಾಹನ ನಿಲ್ಲಿಸುತ್ತಿದ್ದಾರೆ. ಈ ದುರುಪಯೋಗ ತಡೆಯಲು ಮ್ಯಾಗ್ನೆಟಿಕ್ ಐಡಿ ಕಾರ್ಡ್ ತರಲು ಚಿಂತಿಸಲಾಗಿದೆ. ಫೆಬ್ರವರಿ 13ರ ಸಭೆಯಲ್ಲಿ ಎಲ್ಲವನ್ನ ಚರ್ಚಿಸೋಣ ಅಂತ ವಾಕ್ಸಮರಕ್ಕೆ ತೆರೆ ಎಳೆದ್ರು.

    ಸಭಾಪತಿ ಪೀಠದ ಮುಂದೆ ಬಿಜೆಪಿ ಜೆಡಿಎಸ್ ಪ್ರತಿಭಟಿಸಿ ಟೋಲ್ ಗೇಟ್‍ನಲ್ಲಿ ಶಾಸಕರೊಂದಿಗೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ತೋರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

  • ಅಧಿವೇಶನದಲ್ಲಿಂದು ಬರದ ಚರ್ಚೆ- ಸರ್ಕಾರದ ತರಾಟೆಗೆ ವಿಪಕ್ಷಗಳು ಸಜ್ಜು

    – ಕ್ಲಬ್ ಡ್ರೆಸ್‍ಕೋಡ್ ಬಗ್ಗೆ ವರದಿ ಮಂಡನೆ

    ಬೆಂಗಳೂರು: ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇವತ್ತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ. ಪ್ರತಿಪಕ್ಷ ಬಿಜೆಪಿ ವಂದನಾರ್ಪಣೆ ನಿರ್ಣಯದ ಚರ್ಚೆ ವೇಳೆ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ.

    ಬರ ಪರಿಹಾರ ಅಸಮರ್ಪಕ ನಿರ್ವಹಣೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಹಾಗೂ ಐಟಿ ದಾಳಿ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಸವಾರಿ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.

    ಈ ನಡುವೆ ಕಲಾಪದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಕ್ಲಬ್‍ಗಳ ಕಾರ್ಯಚಟುವಟಿಕೆಗಳು ಮತ್ತು ನಿಯಂತ್ರಣದ ಅಧ್ಯಯನದ ಸಮಿತಿ ವರದಿಯನ್ನ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಂಡಿಸಲಿದ್ದಾರೆ. ಕ್ಲಬ್‍ಗಳ ಡ್ರೆಸ್‍ಕೋಡ್‍ಗೆ ಕಡಿವಾಣ, ಅನಧಿಕೃತ ಬಾರ್ ಕೌಂಟರ್‍ಗಳ ಮೇಲೆ ಕಡಿವಾಣ ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಮಾಡುವ ಸಾಧ್ಯತೆ ಇದೆ.

     

  • ಉತ್ತರಾಖಂಡ್ ಬಿಜೆಪಿಯಲ್ಲಿ ಬಿಕ್ಕಟ್ಟು – 33 ಮುಖಂಡರ ಅಮಾನತು

    ಡೆಹ್ರಾಡೂನ್: ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಾಖಂಡ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಸಮೀಕ್ಷೆಗಳು ಹೇಳಿತ್ತು. ಆದರೆ ಮತದಾನಕ್ಕೆ ಇನ್ನು ಕೇವಲ 10 ದಿನಗಳು ಬಾಕಿಯಿರುವಾಗ ಉತ್ತರಾಖಂಡ್ ಕಮಲ ಪಾಳಯದಲ್ಲಿ ಕಂಪನ ಉಂಟಾಗಿದೆ.

    ಪಕ್ಷ ವಿರೋಧಿ ಚಟುವಟಿಕೆ ಮಾಡಿರೋ ಆರೋಪದಲ್ಲಿ ಉತ್ತರಾಖಂಡ್ ಬಿಜೆಪಿಯ 33 ಬಂಡಾಯ ನಾಯಕರನ್ನ 6 ವರ್ಷಗಳ ಕಾಲ ಅಮಾನತು ಮಾಡಿದೆ. ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ 13 ಮಂದಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದಕ್ಕೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಈ 13 ಮಂದಿ ವಿರುದ್ಧ ಬಿಜೆಪಿಯ ಬಂಡಾಯ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ.

    ಅಮಾನತುಗೊಂಡಿರೋ 33 ಬಂಡಾಯ ನಾಯಕರು ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ 15ರಂದು ಉತ್ತರಾಖಂಡ್‍ನಲ್ಲಿ ಚುನಾವಣೆ ನಡೆಯಲಿದೆ.

  • ಎಸ್.ಎಂ.ಕೃಷ್ಣ ಬಿಜೆಪಿ ಸೇರುವುದು ಖಚಿತ: ಬಿಎಸ್‍ವೈ

    ಕಲಬುರಗಿ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆ ಖಚಿತವಾಗಿದ್ದು, ಈಗಾಗಲೇ ಎಲ್ಲಾ ಹಂತದ ಮಾತುಕತೆ ಮುಗಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಲಬುರಗಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಎಸ್.ಎಂ.ಕೃಷ್ಣ ರವರು ಯಾವುದೇ ಡಿಮ್ಯಾಂಡ್ ಇಟ್ಟು ಬಿಜೆಪಿಗೆ ಸೇರುತ್ತಿಲ್ಲ. ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವಿದೆ. ಹೀಗಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದಾರೆ. ಶ್ರೀನಿವಾಸ್ ಪ್ರಸಾದ್ ಹಾಗೂ ಕೃಷ್ಣ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಬಿಎಸ್‍ವೈ ಹೇಳಿದರು.

    ಮಂಡ್ಯ, ಚಾಮರಾಜನಗರ ಹಾಗೂ ಮೈಸೂರು ಭಾಗದಲ್ಲಿ ಅನೇಕರು ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದು, ಅವರೆಲ್ಲಾ ಬಿಜೆಪಿ ಸೇರಲು ಸಾಲಾಗಿ ನಿಂತಿದ್ದಾರೆ. ಹಿಂದಿನ ಮತ್ತು ಈಗಿನ ಯಡಿಯೂರಪ್ಪ ಒಂದೇ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

  • ಪಂಚರಾಜ್ಯ ಚುನಾವಣಾ ಕದನ ಆರಂಭ – ಗೋವಾ, ಪಂಜಾಬ್‍ನಲ್ಲಿಂದು ಮತದಾನ

    ಪಣಜಿ/ಚಂಡೀಘಢ: ನೋಟ್‍ಬ್ಯಾನ್ ಬಳಿಕ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಇವತ್ತು ಗೋವಾ ಮತ್ತು ಪಂಜಾಬ್ ವಿಧಾನಸಭೆಗಳಿಗೆ ಚುನಾವಣೆ ನಡೀತಿದೆ.

    ಗೋವಾದಲ್ಲಿ 40 ಹಾಗೂ ಪಂಜಾಬ್‍ನಲ್ಲಿ 117 ಸೀಟ್‍ಗಳಿವೆ. ಪಂಜಾಬ್‍ನಲ್ಲಿ ಅಕಾಲಿದಳ-ಬಿಜೆಪಿ ಮೈತ್ರಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದರೆ, ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಅಖಾಡಕ್ಕೆ ಇಳಿದಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಪಂಜಾಬ್‍ನಲ್ಲಿ ಕಾಂಗ್ರೆಸ್ ಹಾಗೂ ಆಪ್ ಮಧ್ಯೆ ಫೈಟ್ ಇದೆ.

    ಗೋವಾದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಾಯಕತ್ವದಲ್ಲಿ ಬಿಜೆಪಿ ಮತ ಯಾಚಿಸಿದ್ದರೆ, ಕಾಂಗ್ರೆಸ್ ಹಾಗೂ ಆಪ್ ಸಹ ಸ್ಪರ್ಧೆಯೊಡ್ಡುತ್ತಿವೆ. ಎರಡು ರಾಜ್ಯಗಳ ಫಲಿತಾಂಶ ಮಾರ್ಚ್ 11ಕ್ಕೆ ಹೊರ ಬೀಳಲಿದೆ.