Tag: ಬಿಜೆಪಿ

  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಲಿರುವ ಎಸ್‍ಎಂಕೆ

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಲಿರುವ ಎಸ್‍ಎಂಕೆ

    ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಹೊರಬಂದಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಮಾರ್ಚ್ 13ರಂದು ದೆಹಲಿಗೆ ದೌಡಾಯಿಸಲಿದ್ದಾರೆ.

    ಎಸ್‍ಎಂ ಕೃಷ್ಣ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಅಮಿತ್ ಷಾ ಮಾತುಕತೆ ವೇಳೆ ಬಿಜೆಪಿ ಸೇರ್ಪಡೆಗೆ ಅಂತಿಮ ದಿನಾಂಕ ನಿರ್ಧಾರವಾಗಲಿದ್ದು, ಬಹುತೇಕ ಮಾರ್ಚ್ 17 ರಂದು ದೆಹಲಿಯಲ್ಲೇ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಎಸ್‍ಎಂಕೆ ಬಿಜೆಪಿ ಸೇರ್ಪಡೆ ಸಾಧ್ಯತೆ ಇದೆ ಎನ್ನಲಾಗಿದೆ.

    ಬಿಜೆಪಿ ಸೇರ್ಪಡೆ ನಂತರ ರಾಜ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಎಸ್‍ಎಂ.ಕೃಷ್ಣ ಚಿಂತನೆ ನಡೆಸಿದ್ದಾರೆ. ನಂತರ ತಮ್ಮ ಬೆಂಬಲಿಗರನ್ನೂ ಎಸ್.ಎಂ.ಕೃಷ್ಣ ಬಿಜೆಪಿಗೆ ಕರೆತರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸೋಮವಾರದಂದು ಬೆಂಗಳೂರಿನ ಸದಾಶಿವನಗರದ ಕೃಷ್ಣ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್ ಭೇಟಿ ನೀಡಿ  ಬಿಜೆಪಿ ಸೇರ್ಪಡೆಗೆ ಅಧಿಕೃತ ಆಹ್ವಾನ ನೀಡಿದ್ದರು. ಯಡಿಯೂರಪ್ಪ, ಎಸ್‍ಎಂಕೆ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ರು.

    ಎಸ್‍ಎಂಕೆ ಭೇಟಿ ಬಳಿಕ ಮಾತನಾಡಿದ ಬಿಎಸ್‍ವೈ, ಎಸ್.ಎಂ ಕೃಷ್ಣ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ತಕ್ಷಣ ಬಿಜೆಪಿಗೆ ಬರುವಂತೆ ಮನವಿ ಮಾಡಿದ್ದೆವು. ಈಗ ಮತ್ತೆ ಕೃಷ್ಣ ಅವರಿಗೆ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದೇವೆ. ಆದಷ್ಟು ಬೇಗ ಅವರು ಬಿಜೆಪಿ ಸೇರುವ ವಿಶ್ವಾಸವಿದೆ ಎಂದು ಹೇಳಿದ್ದರು.

  • ವೀಡಿಯೋ: ದಿ.ಜಯಲಲಿತಾ, ಶಶಿಕಲಾರ ಹಾದಿಯಲ್ಲೇ ಹೋಗ್ತಿದ್ದಾರೆ ಬಿಎಸ್‍ವೈ!

    ವೀಡಿಯೋ: ದಿ.ಜಯಲಲಿತಾ, ಶಶಿಕಲಾರ ಹಾದಿಯಲ್ಲೇ ಹೋಗ್ತಿದ್ದಾರೆ ಬಿಎಸ್‍ವೈ!

    ಬೆಂಗಳೂರು: ತಮಿಳುನಾಡು ರಾಜ್ಯದ ರಾಜಕೀಯದ ಪ್ರಭಾವ ಕರ್ನಾಟಕದಲ್ಲೂ ಕಾಣುತ್ತಿದೆ. ಇತ್ತೀಚಿಗೆ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರ ಕಾಲಿಗೆ ಪಕ್ಷದ ಕೆಲ ಕಾರ್ಯಕರ್ತರು ನಯ, ವಿನಯ, ಭಯ, ಭಕ್ತಿಯಿಂದ ನಮಸ್ಕರಿಸುವುದು ಕಂಡುಬಂದಿದೆ.

    ಕಾಲಿಗೆ ನಮಸ್ಕರಿಸುವ ಪದ್ಧತಿ ತಮಿಳುನಾಡು ರಾಜಕೀಯದಲ್ಲಿ ಬಹುದಿನಗಳಿಂದ ನಡೆದುಕೊಂಡು ಬಂದಿದೆ. ದಿ. ಜಯಲಲಿತಾ ಅವರ ಕಾಲಿಗೆ ಪಕ್ಷದ ನಾಯಕರು ಸೇರಿದಂತೆ ಕಾರ್ಯಕರ್ತರು ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಜಯಲಲಿತಾರ ಕಾಲವಾದ ನಂತರ ಚಿನ್ನಮ್ಮ ಶಶಿಕಲಾರಿಗೆ ನಮಸ್ಕರಿಸುವುದು ಮುಂದುವರೆದಿತ್ತು.

    ಇದೀಗ ಕರ್ನಾಟಕದಲ್ಲೂ ಈ ಸಂಸ್ಕೃತಿ ಮುಂದುವರೆದಿದ್ದು, ರಾಜ್ಯದ ಪ್ರಭಾವಿ ನಾಯಕ ಬಿಎಸ್‍ವೈ ಅವರ ಕಾಲಿಗೆ ಕಾರ್ಯಕರ್ತರು ನಮಸ್ಕರಿಸುತ್ತಿದ್ದಾರೆ. ಆದ್ರೆ ಈ ಸಂಸ್ಕೃತಿ ಬೇಕಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ. ಇದನ್ನು ಗಮನಿಸಿದರೆ ಬಿಎಸ್‍ವೈ ಅವರ ರಾಜಕೀಯ ಜೀವನ ಜಯಲಲಿತಾ ಹಾಗೂ ಶಶಿಕಲಾರಂತೆ ಸಾಗುತ್ತಿರುವಂತೆ ಕಾಣಿಸುತ್ತಿದೆ.

    https://youtu.be/5e3obIdLcAU

     

  • ಸ್ಟೀಲ್ ಬ್ರಿಡ್ಜ್ ಆರೋಪ ಸಾಬೀತು ಮಾಡಿದ್ರೆ ಸೀತೆಯಂತೆ ಅಗ್ನಿಪ್ರವೇಶ ಮಾಡ್ತೀನಿ: ಜಾರ್ಜ್

    ಸ್ಟೀಲ್ ಬ್ರಿಡ್ಜ್ ಆರೋಪ ಸಾಬೀತು ಮಾಡಿದ್ರೆ ಸೀತೆಯಂತೆ ಅಗ್ನಿಪ್ರವೇಶ ಮಾಡ್ತೀನಿ: ಜಾರ್ಜ್

    ಬೆಂಗಳೂರು: ಸ್ಟೀಲ್ ಬ್ರಿಡ್ಜ್‍ಗೆ ಹಣ ನೀಡಿರುವ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪ ಸಾಬೀತು ಮಾಡಿದ್ರೆ ಸೀತೆಯಂತೆ ಅಗ್ನಿಪ್ರವೇಶ ಮಾಡ್ತೀನಿ ಅಂತಾ ಮತ್ತೊಮ್ಮೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

    ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಭೂ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದರು.

    ಬಿಜೆಪಿಯಿಂದ ಸಮಸ್ಯೆ: ಈ ವೇಳೆ ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ಹಿಂದಿನ ಸರ್ಕಾರಕ್ಕೆ ದೂರದೃಷ್ಟಿ ಕೊರತೆ ಇತ್ತು. ಹೀಗಾಗಿ ಬೆಂಗಳೂರು ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ. ಇಂದು ನಗರದಲ್ಲಿ ಸಮಸ್ಯೆ ಆಗ್ತಿದೆ ಅಂದ್ರೆ ಅದಕ್ಕೆ ಕಾರಣ ಬಿಜೆಪಿ. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಸಾವಿರಾರು ಕೋಟಿ ಹಣ ನೀಡಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಆರೋಪಗಳನ್ನು ಎಸಗುತ್ತಿದೆ ಅಂತಾ ವಾಗ್ದಾಳಿ ನಡೆಸಿದರು

    ಡೈರಿ ಮುಂದಿಟ್ಟುಕೊಂಡು ಆರೋಪ: 2010ರಲ್ಲಿ ಹೆಬ್ಬಾಳ ಬ್ರಿಡ್ಜ್ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು ಬಿಜೆಪಿ ಸರ್ಕಾರ. ಆದ್ರೆ ಅಭಿವೃದ್ದಿ ಕೆಲಸಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಜನರಿಗೆ ಒಳ್ಳೆಯದಾಗಬಾರದೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಅಂತಾ ಆರೋಪಿಸುತ್ತಿದ್ದಾರೆ. ಗೋವಿಂದ ರಾಜು ಡೈರಿ ಇಟ್ಕೊಂಡು ಇದೀಗ ಸುಖಾ-ಸುಮ್ಮನೆ ಆರೋಪ ಮಾಡ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗಲೇ ಡೈರಿ ನನ್ನದಲ್ಲ ನನ್ನ ಸಹಿ ಅಲ್ಲ ಅಂತಾ ಗೋವಿಂದ ರಾಜು ಹೇಳಿದ್ದಾರೆ. ಮಾತ್ರವಲ್ಲದೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ 11 ತಿಂಗಳ ನಂತ್ರ ಆದಾಯ ತೆರಿಗೆ ಅಧಿಕಾರಿಗಳನ್ನು ಬಳಸಿಕೊಂಡು ಅವರೇ ಡೈರಿ ತಂದಿಟ್ಟು ಈಗ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು.

    ಕಪ್ಪು ಚುಕ್ಕೆಯಿಲ್ಲ: ಮಾರ್ಚ್ ತಿಂಗಳಿನಲ್ಲಿ ಐಟಿ ದಾಳಿ ಆಗಿರೋದು. ಆದ್ರೆ ಸೆಪ್ಟೆಂಬರ್‍ನಲ್ಲಿ ಸ್ಟೀಲ್ ಬ್ರಿಡ್ಜ್ ಟೆಂಡರ್ ಆಗಿದೆ. ಹೀಗಾಗಿ ಮಾರ್ಚ್ ನಲ್ಲೆ ಹೇಗೆ ಡೈರಿ ಬರೆಯೋಕೆ ಸಾಧ್ಯ. ಹಣ ಕೊಟ್ಟಿದ್ದಕ್ಕೆ ಸಾಕ್ಷಿ ಇದ್ರೆ ಬಿಡುಗಡೆ ಮಾಡಲಿ. ಡೈರಿಯಲ್ಲಿ 65 ಕೋಟಿ ಇದೆ ಅಂತ ಸುಳ್ಳು ಹೇಳಿ ಸಿದ್ದರಾಮಯ್ಯ ಕುಟುಂಬದ ಮೇಲೆ ಆರೋಪ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ಬೇರೆ ವಿಷಯ ಇಲ್ಲ ಅಂತ ಇದೀಗ ಕಿಕ್ ಬ್ಯಾಕ್ ಪ್ರಕರಣವನ್ನಿಟ್ಟುಕೊಂಡಿದ್ದಾರೆ. ಚುನಾವಣೆಗೆ ಬೇರೆ ವಿಷಯ ಇಲ್ಲದೆ ಇಂತಹ ಆರೋಪವನ್ನು ಬಿಜೆಪಿ ಮಾಡ್ತಿದೆ ಅಂತಾ ಗುಡುಗಿದ್ರು.

    ಮಾಧ್ಯಮದ ಮೇಲೆ ಕಿಡಿ: ಮೂರು ಮಂತ್ರಿಗಳು ಜೈಲಿಗೆ ಹೋಗ್ತಾರೆ ಅಂತ ಹೇಳಿದ್ರು ಇದುವರೆಗೂ ಯಾವುದೇ ದಾಖಲೆ ಬಿಟ್ಟಿಲ್ಲ. ಯಾರೂ ಜೈಲಿಗೂ ಹೋಗಿಲ್ಲ.400 ಕೋಟಿ ರೂ. ಸ್ಟೀಲ್ ಬ್ರಿಡ್ಜ್‍ಗೆ ಹಣ ನೀಡಿದ ದಾಖಲೆ ಇದೆ ಅಂತಾರೆ. ಸ್ಟೀಲ್ ಬ್ರಿಡ್ಜ್ ನಲ್ಲಿ ನಾವು ಅಕ್ರಮ ಮಾಡಿದ್ದೀವಿ ಅಂತ ಆರೋಪ ಸಾಬೀತು ಮಾಡಿದ್ರೆ ಏನೇ ಶಿಕ್ಷೆ ಕೊಟ್ರು ಅನುಭವಿಸುತ್ತೇನೆ. ಆದ್ರೆ ಈ ದಾಖಲೆಯನ್ನು ಕೂಡ ಬಿಟ್ಟಿಲ್ಲ. ಇವುಗಳ ಬಗ್ಗೆ ಮಾಧ್ಯಮಗಳು ಕೂಡ ಪ್ರಶ್ನೆ ಮಾಡಲ್ಲ ಅಂತಾ ಹರಿಹಾಯ್ದರು.

    ಬಿಡಿಎ ಅಧಿಕಾರಿಗಳ ಮೇಲೆ ಎಸಿಬಿ ದಾಳಿ: ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿರುವ ಕುರಿತು ಮಾತನಾಡಿದ ಅವರು, ದಾಳಿ ಆದ ಅಧಿಕಾರಿಗಳ ಮೇಲೆ ರಿಪೋರ್ಟ್ ಕಳಿಸಲಿ ನಂತ್ರ ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ. ರಾಜಕೀಯ ಮಾಡಿ ಸ್ಟೀಲ್ ಬ್ರಿಡ್ಜ್ ಕ್ಯಾನ್ಸಲ್ ಮಾಡಿದ್ರು. ಪಿತೂರಿ, ಕುತಂತ್ರ ಮಾಡಿ ಯೋಜನೆ ಕೈ ಬಿಡುವಂತೆ ಬಿಜೆಪಿಯವರು ಮಾಡಿದ್ರು. ಮುಂದೆ ಜನರೇ ಅವರಿಗೆ ತಕ್ಕ ಪಾಠ ಕಲಿಸ್ತಾರೆ ಜಾರ್ಜ್ ಹೇಳಿದ್ದಾರೆ.

  • ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

    ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

    ಬೆಂಗಳೂರು: ಕರ್ನಾಟಕ ಸರ್ಕಾರ ಸ್ಟೀಲ್ ಸೇತುವೆ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟಿರುವುದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಡೈರಿ ಹೋರಾಟಕ್ಕೆ ಸಿಕ್ಕ ಜಯ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.

    ಈ ಸಂಬಂಧ ಅವರು ‘ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಸ್ಟೀಲ್ ಬ್ರಿಡ್ಜ್ ಯೋಜನೆ ಕೈ ಬಿಟ್ಟ ತಕ್ಷಣ ಡೈರಿಯಲ್ಲಿನ ಬರವಣಿಗೆ ಮಾಯವಾಗುವುದಿಲ್ಲ. ಡೈರಿ ಕುರಿತು ಬಿಜೆಪಿ ಮಾಡುತ್ತಿದ್ದ ಆರೋಪಕ್ಕೆ ಇದೊಂದು ಸಾಕ್ಷಿಯಷ್ಟೇ ಎಂದು ಬರೆದು ಸುರೇಶ್ ಕುಮಾರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ವಿಧಾನಸೌಧದಲ್ಲಿ ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕರ ಜೊತೆ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಅಧಿಕೃತವಾಗಿ ತಿಳಿಸಿದರು.

    ಸ್ಟೀಲ್ ಸೇತುವೆಯಿಂದ  65 ಕೋಟಿ ರೂ. ಹಣವನ್ನು ಸಿಎಂ ತೆಗೆದುಕೊಂಡಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಬೆಳಗ್ಗೆ ಸಂಜೆಯಾದರೆ ಈ ಆರೋಪ ಕೇಳಿ ಕೇಳಿ ಸಾಕಾಗಿದೆ. ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಒಂದು ರೂಪಾಯಿ ಯಾರಿಗೂ ಕೊಟ್ಟಿಲ್ಲ ಎಂದು ಜಾರ್ಜ್ ಹೇಳಿದರು.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಸ್ಟೀಲ್ ಸೇತುವೆಯಿಂದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರದ ಸ್ಮಾರಕ ಅಂತಾ ಬಿಂಬಿಸಲಾಗುತ್ತಿದೆ. ಸ್ಟೀಲ್ ಬ್ರಿಡ್ಜ್ ನಿಂದ ಸರ್ಕಾರಕ್ಕೆ ಏಕೆ ಕೆಟ್ಟ ಹೆಸರು ತೆಗೆದುಕೊಳ್ಳಬೇಕು? ಚುನಾವಣೆ ಬಳಿಕ ಯಾರು ಬರುತ್ತಾರೋ ಅವರು ಮಾಡುತ್ತಾರೆ ಬಿಡಿ ಎಂದು ತಿಳಿಸಿದರು.

    ಸ್ಟೀಲ್ ಬ್ರಿಡ್ಜ್ ಸಂಬಂಧ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂ. ಕಿಕ್‍ಬ್ಯಾಕ್ ಹೋಗಿದೆ. ಐಟಿ ದಾಳಿ ವೇಳೆ ಪತ್ತೆಯಾದ ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಕಪ್ಪದ ಬಗ್ಗೆ ಬರವಣಿಗೆ ಸಾಕ್ಷಿ ಇದೆ ಅಂತಾ ಬಿಎಸ್‍ವೈ ಆರೋಪಿಸಿದ್ದರು.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ ?: ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಬಳಿಕ ಈ ಯೋಜನೆಯಲ್ಲಿ ಡೀಲ್ ಆಗಿದೆ ಅಂತಾ ಬಿಜೆಪಿ ಆರೋಪಿಸಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಳಂಬವಾಗಿತ್ತು. ಈ ನಡುವೆ ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು.

  • ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಬೆಂಗಳೂರು: ವಿವಾದಿತ ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಯೋಜನೆಯನ್ನು ಕೈಬಿಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ.

    ಕಪ್ಪ ಡೈರಿಯ ವಿಚಾರವಾಗಿ ಆರೋಪ ಮಾಡಿದ್ದ ಬಿಜೆಪಿಗೆ ತಿರುಗೇಟು ನೀಡಲು ಸಿದ್ದು ಮಾಸ್ಟರ್‍ಪ್ಲಾನ್ ಮಾಡಿದ್ದು, ಅಚ್ಚರಿಯ ತೀರ್ಮಾನ ಪ್ರಕಟಿಸಲು ಸಜ್ಜಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.

    ಸ್ಟೀಲ್ ಬ್ರಿಡ್ಜ್ ಸಂಬಂಧ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂ. ಕಿಕ್‍ಬ್ಯಾಕ್ ಹೋಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದ್ರು. ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಕಪ್ಪದ ಬಗ್ಗೆ ಬರವಣಿಗೆ ಸಾಕ್ಷಿ ಇದೆ ಅಂತಾ ಬಿಎಸ್‍ವೈ ಆರೋಪಿಸಿದ್ದರು.

    ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಸಿಲುಕ್ಕಿದ್ದ ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ಸ್ಟೀಲ್‍ ಬ್ರಿಡ್ಜ್ ನಿರ್ಮಾಣವನ್ನೇ ಕೈಬಿಡಲು ತೀರ್ಮಾನ ಮಾಡಿದ್ದು, ಆರೋಪ ಮಾಡಿದ್ದ ಬಿಜೆಪಿಗೆ ಟಾಂಗ್ ಕೊಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ ?: ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1856 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಬಳಿಕ ಈ ಯೋಜನೆಯಲ್ಲಿ ಡೀಲ್ ಆಗಿದೆ ಅಂತಾ ಬಿಜೆಪಿ ಆರೋಪಿಸಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಳಂಬವಾಗಿತ್ತು. ಈ ನಡುವೆ ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ ಬ್ರಿಡ್ಜ್ ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು.

  • ಯಾರು ಬೇಕಾದ್ರು ಬಿಡಬಹುದು, ಬರಬಹುದು ಜೆಡಿಎಸ್ ಮುಳುಗಲ್ಲ: ಎಚ್‍ಡಿಕೆ

    ಯಾರು ಬೇಕಾದ್ರು ಬಿಡಬಹುದು, ಬರಬಹುದು ಜೆಡಿಎಸ್ ಮುಳುಗಲ್ಲ: ಎಚ್‍ಡಿಕೆ

    ಬೆಂಗಳೂರು: ಜೆಡಿಎಸ್ ಪಕ್ಷವನ್ನು ಯಾರು ಬೇಕಾದ್ರು ಬಿಟ್ಟು ಹೋಗಬಹುದು, ಬರಬಹುದು ಯಾರಿಂದಲೂ ಪಕ್ಷ ಮುಳುಗಿ ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

    ಕುಮುಟಾದ ಮಾಜಿ ಶಾಸಕ ದಿನಕರ್ ಶೆಟ್ಟಿ, ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವ್ರು ಯಾರನ್ನ ಬೇಕಾದ್ರು ಕರೆದುಕೊಂಡು ಹೋಗಬಹುದು. ಅದಕ್ಕೆ ಪರ್ಯಾಯ ವ್ಯಕ್ತಿಗಳ ಇದ್ದೇ ಇರುತ್ತಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡ್ತೀವಿ ಎಂದು ತಿಳಿಸಿದರು.

    ಚುನಾವಣೆ ವರ್ಷದಲ್ಲಿ ಇದೆಲ್ಲ ಸಹಜ. ಇದಕ್ಕೆಲ್ಲ ಆತಂಕ ಗಾಬರಿಯಾಗುವುದಿಲ್ಲ. ಯಾರೇ ಪಕ್ಷ ಬಿಟ್ಟು ಹೋಗೋರು ಹೋಗಬಹುದು ಇರೋರು ಇರಬಹುದು. ನನ್ನ ಗುರಿ ಇರೋದು ಜನರ ಮುಂದೆ ಹೋಗೋದು ಅಷ್ಟೆ ಎಂದು ಎಚ್‍ಡಿಕೆ ಹೇಳಿದ್ರು.

    ಕೇಂದ್ರದ ವಿರುದ್ಧ ಗರಂ: ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು ಜನ್ರು ಸಾಯ್ತಿದ್ದಾರೆ. ಪರಿಹಾರವನ್ನು ಬಿಕಾರಿಗಳು ನೀಡಿದ ಹಾಗೆ ನೀಡಿದೆ. ಮೇಕೆದಾಟು ಡಿಪಿಆರ್(ಸಮಗ್ರ ಯೋಜನಾ ವರದಿ) ಆದ ಕೂಡಲೇ ತಮಿಳುನಾಡು ಸಿಎಂ ಪ್ರಧಾನಿಗೆ ಪತ್ರ ಬರೆದ್ರು. ತಕ್ಷಣ ಸಿಎಂಗೆ 24 ಗಂಟೆಯೊಳಗೆ ಭೇಟಿಗೆ ಪ್ರಧಾನಿಗಳು ಅವಕಾಶ ನೀಡ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಂಡವಾಳ ಇಷ್ಟೇ ಎಂದು ಕಿಡಿಕಾರಿದ್ರು.

    ಭರವಸೆ ಕೊಟ್ರೆ ದಾಖಲೆ ರಿಲೀಸ್: ಬಿಜೆಪಿ ಹೈಕಮಾಂಡ್‍ಗೆ ಚೆಕ್ ಮೂಲಕ ಬಿಎಸ್‍ವೈ ಹಣ ನೀಡಿರೋ ದಾಖಲಾತಿಗಳು ಯಾವಾಗಬೇಕಾದ್ರು ಬಿಡುಗಡೆ ಮಾಡಲು ಸಿದ್ಧ. ಅವ್ರು ಚೆಕ್ ಮೂಲಕ ಹಣ ನೀಡಿರುವ ದಾಖಲಾತಿ ನನ್ನ ಬಳಿ ಇದೆ. ಅದನ್ನ ರಿಲೀಸ್ ಮಾಡಿದ್ರೆ ಅವ್ರ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರು? ಈ ಬಗ್ಗೆ ಯಾರಾದ್ರೂ ಭರವಸೆ ಕೊಟ್ರೆ ದಾಖಲಾತಿ ಬಿಡುಗಡೆ ಮಾಡ್ತೀನಿ ಅಂದ್ರು.

    ವಿದ್ಯುತ್ ಖರೀದಿಯಲ್ಲಿ ಅಕ್ರಮ: ಇದೇ ವಿಚಾರವಾಗಿ ಶೋಭಾ ಕರಂದ್ಲಾಜೆಗೆ ತರಾಟೆಗೆ ತೆಗೆದುಕೊಂಡ ಅವ್ರು ನನ್ನ ಜೊತೆ ಹುಡುಗಾಟ ಆಡಬೇಡಿ. ಬಾಯ ಚಪಲಕ್ಕೆ ಹೇಳಿಕೆ ಕೊಡೋನು ನಾನಲ್ಲ. ಶೋಭಾ ಕರಂದ್ಲಾಜೆ ಅವರಿಂದ ನಾನು ತಿಳುವಳಿಕೆ ಕಲಿಯೋದು ಬೇಡ. ಯಾರು ಯಾರು ರಾಜ್ಯ ಸರ್ಕಾರದಲ್ಲಿ ಕೆಲವು ಕಂಟ್ರಾಕ್ಟ್ ನ್ನ ಅವಾರ್ಡ್ ಮಾಡಿ. ವಿದ್ಯುತ್ ಶಕ್ತಿ ಖರೀದಿ ಮಾಡುವಾಗ ಅವಾರ್ಡ್ ಮಾಡಿ ಯಾರು ಯಾರು ಅಕೌಂಟ್ ಗೆ ಚೆಕ್ ಮೂಲಕ ಹಣ ಪಡೆದಿದ್ದಾರೆ. ವೈಯಕ್ತಿಕ ಅಕೌಂಟ್ ಗಳಿಗೆ ಹಣ ಪಡೆದಿದ್ದಾರೆ ಅನ್ನೋ ಮಾಹಿತಿ ಇದೆ. ಪ್ರಚಾರಕ್ಕಾಗಿ ನಾನು ಆರೋಪ ಮಾಡ್ತಿಲ್ಲ ಅಂತ ಹೇಳುವ ಮೂಲಕ ಶೋಭಾ ಕರಂದ್ಲಾಜೆ ಅವಧಿಯಲ್ಲೂ ಅಕ್ರಮ ಆಗಿದೆ ಅನ್ನೊ ಹೊಸ ಬಾಂಬ್ ಸಿಡಿಸಿದ್ರು.

    ಬಿಎಸ್‍ವೈ ರೈತರಿಗಾಗಿ ಡಿ-ನೋಟಿಫಿಕೇಷನ್ ಮಾಡಿದ್ದೇನೆ ಅಂತಾರೆ ಅದರ ಬಗ್ಗೆ ಮಾತನಾಡಲು ಹೋದ್ರೆ ವೀರಶೈವರಿಗೆ ಅನ್ಯಾಯ ಮಾಡುವುದು ಬೇಡ ಅಂತಾರೆ. ವಿಧಾನಸೌಧದಲ್ಲಿ ಕಾರಿನಲ್ಲಿ ಸಿಕ್ಕ ಹಣ ಯಾರದ್ದು? ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು? ಪ್ರಕರಣ ಹಾಗೇ ಮುಚ್ಚಿ ಹಾಕಿದ್ದಾರೆ. ಈ ಬಗ್ಗೆ ಮೊದಲು ಉತ್ತರ ಕೊಡಲಿ ಅಂತ ಸವಾಲ್ ಹಾಕಿದ್ರು.

    ಡಿವಿಎಸ್‍ಗೆ ಸವಾಲ್: ಕೇಂದ್ರ ಸಚಿವ ಸದಾನಂದಗೌಡ ಚೆಕ್ ಬಿಡುಗಡೆ ಮಾಡಿದ ನಂತರ ಕ್ರಮ ತೆಗೆದುಕೊಳ್ಳುವ ಭರವಸೆ ಜನರಿಗೆ ಕೊಟ್ರೆ ಬಿಎಸ್‍ವೈ ನೀಡಿರುವ ಚೆಕ್ ಅವರಿಗೆ ಕಳಿಸಿಕೊಡಲು ಸಿದ್ಧ ಸದಾನಂದಗೌಡರು ಜನರಿಗೆ ಹೇಳಲಿ ಚೆಕ್ ರಿಲೀಸ್ ಆದ ಮೇಲೆ ನಾನು ಕ್ರಮ ತೆಗೆದುಕೊಳ್ಳವಂತೆ ನೋಡಿಕೊಳ್ತೀನಿ ಅಂತ. ಬೇಕಾದ್ರೆ ಅವ್ರ ಮನೆಗೆ ಚೆಕ್ ಕಳಿಸಲು ನಾನು ಸಿದ್ದ ಅಂತ ಡಿವಿಎಸ್ ಅವ್ರಿಗೆ ಸವಾಲ್ ಹಾಕಿದ್ರು.

    ನನ್ನ ಮೇಲೆ ದ್ವೇಷದ ರಾಜಕಾರಣ ಮಾಡಿದ್ದೋರೆ ಬಿಜೆಪಿಯವರು. ಯಡಿಯೂರಪ್ಪ ನನ್ನ ಮೇಲೆ ದ್ವೇಷ ರಾಜಕಾರಣ ಮಾಡಿದ್ರು. ಅವರೇ ಹಾಕಿಸಿದ ಮೂರು ಕೇಸ್ ಎದುರಿಸುತ್ತಿದ್ದೇನೆ.ಬಿಜೆಪಿಯವರು ದ್ವೇಷ ರಾಜಕಾರಣ ಬಗ್ಗೆ ಮಾತನಾಡೋದು ಎಷ್ಟು ಸರಿ ಅಂತ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಚಾಲಕರಿಂದ ಮನವಿ: ಓಲಾ,ಉಬರ್ ಟ್ಯಾಕ್ಸಿ ಚಾಲಕರ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಬ್ ಚಾಲಕರು ಇಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವ್ರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ರು. ಬಳಿಕ ಮಾತಾಡಿದ ಕುಮಾರಸ್ವಾಮಿ ಸರ್ಕಾರದ ಜವಾಬ್ದಾರಿ ಮರೆತು ಅನ್ಯಾಯ ಮಾಡುತ್ತಿದೆ. ಸರ್ಕಾರ ಇವರ ಜವಾಬ್ದಾರಿ ತೆಗೆದುಕೊಳ್ಳುವ ಕಾರ್ಯ ಮಾಡಲೇಬೇಕು. ಇಂದು ಓಲಾ ಮತ್ತು ಉಬರ್ ಕಂಪನಿಗಳು ಸದೃಢವಾಗಿ ಬೆಳೆದಿದೆ. ಕಂಪನಿಗಳು ಬೆಳೆಯಲು ಕಾರಣ ಚಾಲಕರು. ಇಂದು ಅದನ್ನು ಓಲಾ ಮತ್ತು ಉಬರ್ ಕಂಪನಿಗಳು ಮರೆತಿದೆ. ನಾನು ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಳಿ ದೂರವಾಣಿ ಮೂಲಕ ಮಾತನ್ನಾಡಿದ್ದೇನೆ. ಒಂದು ಲಕ್ಷ ಮಂದಿ ಚಾಲಕರು ಇಂದು ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಓಲಾ ಮತ್ತು ಉಬರ್ ಕಂಪನಿಯ ಮಾಲೀಕರನ್ನು ಕರೆಸಿ ಮಾತನಾಡಬೇಕು ಅಂತ ಒತ್ತಾಯ ಮಾಡಿದ್ರು.

  • ತೆನೆ ಹೊರೆ ಇಳಿಸಿ ಕಮಲ ಹಿಡಿದ ದಿನಕರ್ ಶೆಟ್ಟಿ

    ತೆನೆ ಹೊರೆ ಇಳಿಸಿ ಕಮಲ ಹಿಡಿದ ದಿನಕರ್ ಶೆಟ್ಟಿ

    – ಮುಂದಿನ ತಿಂಗಳು ಮಾಜಿ ಶಾಸಕಿ ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆ

    ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮೊದಲೇ ಪಕ್ಷಾಂತರ ಪರ್ವ ಜೋರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಕ್ಷೇತ್ರದ ಮಾಜಿ ಶಾಸಕ ದಿನಕರ್ ಶೆಟ್ಟಿ ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಇಂದು ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಧ್ಯಕ್ಷ ಬಿಎಸ್ ಯಡಿಯರೂಪ್ಪ ಸಮ್ಮುಖದಲ್ಲಿ ದಿನಕರ್ ಶೆಟ್ಟಿ ಕಮಲ ಪಕ್ಷ ಸೇರ್ಪಡೆಯಾಗಿದ್ದಾರೆ. 2008ರಲ್ಲಿ ಜೆಡಿಎಸ್ ಶಾಸಕರಾಗಿ ದಿನಕರ್ ಶೆಟ್ಟಿ ಆಯ್ಕೆ ಆಗಿದ್ದರು.

    ಮಾಜಿ ಶಾಸಕಿ ಪರಿಮಳ ನಾಗಪ್ಪ ಕೂಡ ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರಲಿದ್ದಾರೆ. ಮಾರ್ಚ್ 16ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಪರಿಮಳ ನಾಗಪ್ಪ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಚಾಮರಾಜನಗರದಲ್ಲಿ ಪ್ರಭಾವಿ ನಾಯಕಿಯಾಗಿರುವ ಪರಿಮಳ ನಾಗಪ್ಪ ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ.

  • ಶಿವಮೊಗ್ಗ: ಬರಗಾಲದ ಬಿಸಿಲಲ್ಲಿ ಕ್ಷೇತ್ರಗಳ ಹುಡುಕಾಟ

    ಶಿವಮೊಗ್ಗ: ಬರಗಾಲದ ಬಿಸಿಲಲ್ಲಿ ಕ್ಷೇತ್ರಗಳ ಹುಡುಕಾಟ

    ಹಾಲಸ್ವಾಮಿ

    ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆ ಬರಗಾಲದಿಂದ ಕಂಗಾಲಾಗಿದೆ. ಬರ ಪರಿಹಾರಕ್ಕಾಗಿ ಬಿಜೆಪಿಯು ರಾಜ್ಯ ಸರ್ಕಾರದ ಜೊತೆಗೂ ಹಾಗೂ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿರುವ ಬಿಜೆಪಿ ಜೊತೆ ಹೋರಾಟ ಮಾಡುತ್ತಿವೆ. ಇವರ ಹೋರಾಟದ ಮುಖ್ಯಗುರಿ 14 ತಿಂಗಳ ನಂತರ ಬರಲಿರುವ ಚುನಾವಣೆಯೇ ಹೊರತು- ಬರ ಪರಿಹಾರ ಅಲ್ಲ. ಇದು ಎರಡೂ ಪಕ್ಷಗಳ ಇತ್ತೀಚಿನ ಪತ್ರಿಕಾಗೋಷ್ಠಿಗಳು, ಹೋರಾಟಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ.

    ಈ ನಡುವಿನ ಬಿಡುವು, ರಾಜಕಾರಣದ ನಡುವೆಯೇ ಬರದ ಮಾತು ನೆಪ ಮಾತ್ರಕ್ಕೆ ಬರುತ್ತಿದೆ. ಆದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳೂ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ಥಾನ ಗಳಿಸುವ ಸಮೀಕರಣಗಳಿಗೆ ಜೋತು ಬಿದ್ದಿವೆ. ಈ ಸಮೀಕರಣ, ತಂತ್ರಗಾರಿಕೆ ನಡುವೆ ಮೂರು ಪಕ್ಷಗಳ ನಾಯಕರು ಬಿಡುವು ಮಾಡಿಕೊಂಡು ಬರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮಾತನಾಡುತ್ತಿದ್ದಾರೆ ಎಂದರೆ ಬರದ ಬಗ್ಗೆ ಅವರಿಗೆ ಅರಿವಿದೆ ಅಂದುಕೊಂಡು ಮತದಾರರು ಸಮಾಧಾನ ಮಾಡಿಕೊಳ್ಳಬೇಕಷ್ಟೇ.

    ಬಿಎಸ್‍ವೈ ಕ್ಷೇತ್ರ ಬದಲಿಸುತ್ತಾರಾ?
    ಇತ್ತೀಚಿನ ದಿನಗಳಲ್ಲಿ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದ ವಿಷಯ ಇದು. ಯಡಿಯೂರಪ್ಪ ಅವರ ತಂತ್ರಗಾರಿಕೆಯ ಒಂದು ಭಾಗವಾಗಿ ಈ ಕ್ಷೇತ್ರ ಬದಲಾವಣೆಯ ವಿಷಯ ಹೊರ ಬಿದ್ದಿದೆ. ಇಂಥ ವಿಷಯ ಹೊರ ಬಿಟ್ಟು ಬರುವ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಗಮನಿಸಿ, ನಿರ್ಧಾರ ಕೈಗೊಳ್ಳುವುದು ಯಡಿಯೂರಪ್ಪ ಅವರ ತಂತ್ರ.

    1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗಕ್ಕೆ ಕಾಲಿಟ್ಟ ಬಿ.ಎಸ್.ಯಡಿಯೂರಪ್ಪ ಪುರಸಭೆ ಅಧ್ಯಕ್ಷ, ಶಾಸಕ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದಾರೆ. 2013ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಬಿ.ಎಸ್. ಯಡಿಯೂರಪ್ಪ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಾವು ಸತತವಾಗಿ ಆರು ಅವಧಿಯಿಂದ ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿದ್ದರು.

    ಈಗ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿ.ಎಸ್.ಯಡಿಯೂರಪ್ಪ ಘೋಷಣೆ ಆಗಿದ್ದಾರೆ. ಎಂದಿನಂತೆ ಶಿಕಾರಿಪುರದಲ್ಲೇ ಸ್ಪರ್ಧಿಸಿದರೆ ಮಗ ರಾಘವೇಂದ್ರ ಅವಕಾಶ ವಂಚಿತರಾಗುತ್ತಾರೆ. ಶಿಕಾರಿಪುರ ಬಿಟ್ಟರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಧೈರ್ಯ ಮಾಡುವುದು ಕಷ್ಟ.

    ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಕ್ಷೇತ್ರ ಬದಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಅಸ್ಥಿತ್ವವೇ ಇಲ್ಲದ ಭದ್ರಾವತಿಯಲ್ಲಿ ಅಥವಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸ್ಪರ್ಧಿಸಬಹುದು ಎಂಬ ಸೂಚನೆ ಕೊಟ್ಟಿದ್ದಾರೆ. ಇವರೆಡೂ ಕ್ಷೇತ್ರದಲ್ಲಿ ಭದ್ರಾವತಿ ಬಿಎಸ್‍ವೈ ಅವರಿಗೆ ಹೆಚ್ಚು ಸಲೀಸು. ವಿಐಎಸ್‍ಎಲ್ ಹಾಗೂ ಎಂಪಿಎಂ ಎರಡೂ ಭದ್ರಾವತಿ ನಗರದ ಎರಡು ಕಣ್ಣುಗಳಿದ್ದಂತೆ. ಎಂಪಿಎಂ ಈಗಾಗಲೇ ಖಾಸಗೀಕರಣದ ಬಾಗಿಲಲ್ಲಿ ನಿಂತಿದೆ. ವಿಐಎಸ್‍ಎಲ್ ಕೂಡ ಇದೇ ಹಾದಿ ಹಿಡಿದಿದೆ. ಇಂಥ ಸಂದರ್ಭದಲ್ಲಿ ಯಡಿಯೂರಪ್ಪ ಈ ಕ್ಷೇತ್ರ ಪ್ರತಿನಿಧಿಸಿದರೆ ಒಳ್ಳೆಯದು ಎಂಬ ಆಲೋಚನೆ ಅಲ್ಲಿನ ಅತೀ ದೊಡ್ಡ ಓಟ್ ಬ್ಯಾಂಕ್ ಆಗಿರುವ ಕಾರ್ಮಿಕರ ಮನದಲ್ಲಿದೆ.

    ಯಡಿಯೂರಪ್ಪ ಅವರು, ಕ್ಷೇತ್ರ ಬದಲಿಸುವೆ ಎಂಬ ಒಂದು ಮಾತು ತೇಲಿ ಬಿಟ್ಟಿದ್ದಾರೆ. ಅದು ಸುತ್ತಾ ಸುಳಿದು ಏನೇಲ್ಲಾ ಆಟವಾಡಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ.

    ಸಡ್ಡು ಹೊಡೆದ ಆಯನೂರು:
    ರಾಯಣ್ಣ ಬ್ರಿಗೇಡ್ ನಲ್ಲಿ ಇದ್ದೀನಿ? ಇಲ್ಲ? ಎಂದು ಕೆ.ಎಸ್.ಈಶ್ವರಪ್ಪ ಗೊಂದಲಕಾರಿ ಹೇಳಿಕೆಗಳನ್ನು ನೀಡುವ ಭರದಲ್ಲಿ ಒಮ್ಮೆ `ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಅಭ್ಯರ್ಥಿ ನನ್ನ ಬಿಟ್ಟು ಮತ್ತೆ ಯಾರಿದ್ದಾರೆ’ ಎಂದು ಪ್ರಶ್ನಿಸಿದ್ದರು. ಯಾರೂ ಇಲ್ಲ ಎನ್ನಬೇಡಿ ನಾನು ಇದಿನಿ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಸಡ್ಡು ಹೊಡೆದು ನಿಂತಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿ ಇನ್ನೂ ಒಂದೂವರೆ ವರ್ಷ ಅವಧಿ ಇರುವಾಗ ಮತ್ತೆ ವಿಧಾನಸಭೆಗೆ ಏಕೆ ಸ್ಪರ್ಧಿಸುತ್ತೀರಿ? ಮಾಜಿ ಸಂಸದ ಹಾಗೂ ಮಾಜಿ ಶಾಸಕನಾಗಿ ನಾನು ನಿರುದ್ಯೋಗಿ ಆಗಿ ಕೂತಿದಿನಿ. ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಿ. ಎರಡೂ ತಟ್ಟೆಯಲ್ಲೂ ನೀವೇ ಊಟ ಮಾಡಬೇಡಿ ಎಂದು ಕಟಕಿಯಾಡಿದ್ದಾರೆ.

    ಈ ರೀತಿ ಆಯನೂರು ಮಂಜುನಾಥ್ ಅವರು ಕೆ.ಎಸ್.ಈಶ್ವರಪ್ಪ ಅವರಿಗೆ ಬಹಿರಂಗವಾಗೇ ಸಡ್ಡು ಹೊಡೆದಿರುವುದು ಜಿಲ್ಲಾ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಬೇರೆ ಪಕ್ಷದ ಯಾರೇ ಅಭ್ಯರ್ಥಿಯಾದರೂ ಆಯನೂರು ಪ್ರಬಲ ಸ್ಪರ್ಧೆ ನೀಡಬಲ್ಲ ವ್ಯಕ್ತಿ. ವಿದ್ಯಾರ್ಥಿ ಹೋರಾಟಗಾರನಾಗಿ, ಕಾರ್ಮಿಕ ಮುಖಂಡರಾಗಿ ಜಿಲ್ಲೆಯಲ್ಲಿ ಹಲವು ಹೋರಾಟಗಳನ್ನು ಮಾಡಿದ ಆಯನೂರು ಅವರ ಅಹವಾಲನ್ನು ಬಿಜೆಪಿ ವರಿಷ್ಠರು ಗಣನೆಗೆ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕಷ್ಟೇ.

    ಈ ನಡುವೆ ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್, ಹೊನ್ನಾಳಿಯಿಂದ ಸ್ಪರ್ಧಿಸುವ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆದರೆ, ಹೊನ್ನಾಳಿಯ ರೇಣುಕಾಚಾರ್ಯ ಪಕ್ಷದ ವರಿಷ್ಠರು ಹಾಗೂ ಕ್ಷೇತ್ರದ ಜನತೆ ನನ್ನ ಕೈಬಿಡೊಲ್ಲ. ಪರಿಸ್ಥಿತಿ ಹೀಗಿದ್ದಾಗ ಬೇರೆ ಚಿಂತೆ ಯಾಕೆ ನಂಗೆ ಎನ್ನುತ್ತಿದ್ದಾರೆ.

    ಕುಮಾರ ಬಂಗಾರಪ್ಪ ಬಿಜೆಪಿಗೆ?
    ಮಾಜಿ ಸಿಎಂ ಸಾರೇಕೊಪ್ಪ ಬಂಗಾರಪ್ಪ ಅವರ ಹಿರಿಯ ಮಗ ಕುಮಾರ್ ಬಂಗಾರಪ್ಪ ಎಸ್‍ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದವರು. ಕಳೆದ ಮೂರೂ ಚುನಾವಣೆಗಳಲ್ಲೂ ಸೊರಬದಲ್ಲಿ ಸೋತವರು. ಸೋತು ಸುಣ್ಣವಾಗಿರುವ ಕುಮಾರ್ ರಾಜಕೀಯ ಅಸ್ತಿತ್ವಕ್ಕಾಗಿ ಹಾತೊರೆಯುತ್ತಿದ್ದಾರೆ.

    ತಮ್ಮ ರಾಜಕೀಯ ಏಳಿಗೆಗೆ ಕಾಗೋಡು ತಿಮ್ಮಪ್ಪ ಅಡ್ಡಿಯಾಗಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡವರು. ಇತ್ತೀಚೆಗೆ ತಮ್ಮ ಬೆಂಬಲಿಗರ ಸಭೆ ನಡೆಸಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಎಸ್.ಎಂ.ಕೃಷ್ಣ ಅವರ ಜೊತೆ ಗುರುತಿಸಿಕೊಂಡಿರುವ ಕುಮಾರ್ ಶೀಘ್ರವೇ ಬಿಜೆಪಿ ಸೇರುವ ಸಾಧ್ಯತೆ ಇದೆ. ಇವರ ಸೇರ್ಪಡೆಯಿಂದ ಬಿಜೆಪಿಗೆ ರಾಜ್ಯಮಟ್ಟದಲ್ಲಿ ಸ್ಟಾರ್ ಕ್ಯಾಂಪನೈರ್ ಒಬ್ಬರು ಸಿಗಬಹುದೇ ಹೊರತು ಜಿಲ್ಲೆಯಲ್ಲಿ ಹೆಚ್ಚಿನ ಲಾಭ ಆಗುವ ಸಾಧ್ಯತೆ ಕಡಿಮೆ. ಕಾಂಗ್ರೆಸ್ನಲ್ಲೇ ಸಲ್ಲದವರು ಬಿಜೆಪಿಯಲ್ಲಿ ಸಲ್ಲುತ್ತಾರೆ ಎಂದು ನಂಬುವುದು ಕಷ್ಟ. ಅದೂ ಅಲ್ಲದೆ, ಈ ಮುಂಚೆಯೇ ಒಮ್ಮೆ ಬಿಜೆಪಿಗೆ ಹೋಗಿ, ಅದು ಉಸಿರುಕಟ್ಟುವ ಪಕ್ಷ ಎಂದು ಜರಿದು ಹಿಂದೆ ಬಂದ ಅನುಭವ ಕುಮಾರ್ ಬಂಗಾರಪ್ಪ ಅವರಿಗೆ ಇದೆ.

    ಜೆಡಿಎಸ್ ಒಳ ಹೊಡೆತ: ಮುಂದೆ ಬರಲಿರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಜೆಡಿಎಸ್ ಜಿಲ್ಲಾ ಅಧ್ಯಕ್ಷರನ್ನು ಬದಲು ಮಾಡಲಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರ ಬಲಗೈ ಭಂಟ ಶ್ರೀಕಾಂತ್ ಅವರ ಬದಲು ನಿರಂಜನ ಅವರನ್ನು ಜಿಲ್ಲಾ ಜೆಡಿಎಸ್‍ಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಬೆವರಿಳಿಸಿದ್ದ ನಿರಂಜನ್ ಈ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿ ಇಟ್ಟಕೊಂಡು ಕೆಲಸ ಮಾಡುತ್ತಿದ್ದಾರೆ. ಬಹಿರಂಗ ಸಭೆಗಳಿಗಿಂತ ವೈಯಕ್ತಿಕ ಸಂಬಂಧಗಳ ಮೂಲಕ ಜನರನ್ನು ತಲುಪುವುದು ಹೆಚ್ಚು ಪರಿಣಾಮಕಾರಿ ಎಂಬ ಸೂತ್ರ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಫಲ ತಿಳಿಯಲು ಇನ್ನೂ 14 ತಿಂಗಳು ಕಾಯಬೇಕಷ್ಟೇ.

     

  • ಬಿಎಸ್‍ವೈಗೆ ಜನ್ಮದಿನದ ಶುಭ ಕೋರಲು ನೂಕುನುಗ್ಗಲು – ಧವಳಗಿರಿ ಮನೆಯ ಗಾಜು ಪುಡಿಪುಡಿ

    ಬಿಎಸ್‍ವೈಗೆ ಜನ್ಮದಿನದ ಶುಭ ಕೋರಲು ನೂಕುನುಗ್ಗಲು – ಧವಳಗಿರಿ ಮನೆಯ ಗಾಜು ಪುಡಿಪುಡಿ

    – ಕುಮಾರ್ ಬಂಗಾರಪ್ಪ ಬಿಜೆಪಿ ಸೇರೋದು ಕನ್ಫರ್ಮ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಬೆಳಗ್ಗೆಯಿಂದಲೇ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಗಣ್ಯರ ದಂಡೇ ಹರಿದುಬರುತ್ತಿದೆ.

    ಸಚಿವರಾದ ಸುರೇಶ್ ಕುಮಾರ್, ವಿ.ಸೋಮಣ್ಣ, ಸಂಸದ ಭಗವಂತ ಖೂಬಾ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಬಿಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಶುಭಕೋರಿದ್ರು. ಇದೇ ವೇಳೆ ಬಿಎಸ್‍ವೈ ನಿವಾಸದ ಎದುರು ನೂಕುನುಗ್ಗಲು ಉಂಟಾಗಿದ್ದು, ನಿವಾಸದ ಹಾಲ್‍ನ ಗಾಜು ಪುಡಿ ಪುಡಿಯಾಗಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು. ಅದಕ್ಕಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನ್ನೋ ಸಂಕಲ್ಪ ಮಾಡಿದ್ದೇನೆ. ಬರಗಾಲ ಹಿನ್ನೆಲೆಯಲ್ಲಿ ಅದ್ಧೂರಿ ಬರ್ತ್‍ಡೇ ಆಚರಣೆ ಬೇಡ ಎಂದಿದ್ದೇನೆ. ಜೊತೆಗೆ ಇಂದು ತುಮಕೂರಿನ ಬೆಳ್ಳಾವಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ಕೊಡ್ತೀನಿ ಅಂತಾ ಹೇಳಿದ್ರು. ಬಳಿಕ ಯಡಿಯೂರಪ್ಪ ಶ್ರೀಗಳ ಆಶೀರ್ವಾದ ಪಡೆಯಲು ಸಿದ್ದಗಂಗಾ ಮಠಕ್ಕೆ ತೆರಳಿದ್ರು.

     

    ಕುಮಾರ್ ಬಂಗಾರಪ್ಪ ಬಿಜೆಪಿಗೆ: ಬರ್ತ್‍ಡೇ ದಿನವೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈಗೆ ಭರ್ಜರಿ ಗಿಫ್ಟ್ ಸಿಕ್ಕಿದ್ದು, ಕುಮಾರ್ ಬಂಗಾರಪ್ಪ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದು ಬಿಎಸ್‍ವೈ ಭೇಟಿಯಾಗಿ ಹುಟ್ಟುಹಬ್ಬದ ಶುಭಕೋರಿದ ಕುಮಾರ್ ಬಂಗಾರಪ್ಪ, ನಾವು ಬಿಎಸ್‍ವೈ ಜೊತೆಗಿದ್ದು ಶೀಘ್ರವೇ ಸುದ್ದಿಗೋಷ್ಠಿ ಕರೆದು ಅಧಿಕೃತವಾಗಿ ಪ್ರಕಟಿಸುತ್ತೇವೆ ಅಂತ ಹೇಳಿದ್ರು.

     

  • ಈಗಾಗಲೇ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ: ಲೆಹರ್ ಸಿಂಗ್

    ಈಗಾಗಲೇ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ: ಲೆಹರ್ ಸಿಂಗ್

    ಬೆಂಗಳೂರು: ನನ್ನ ಜೀವನದಲ್ಲಿ ನನಗೆ ಡೈರಿ ಬರೆದು ಅಭ್ಯಾಸವೇ ಇಲ್ಲ, ನಾನು ಡೈರಿ ಬರೆಯಲ್ಲ, ನನ್ನ ಸಹಿ ದುರುಪಯೋಗ ಪಡಿಸಿಕೊಳ್ಳಲಾಗಿದೆ, ಡೈರಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ, ನಾನು ಯಾವುದೇ ತನಿಖೆಗೆ ಸಿದ್ಧ ಅಂತಾ ವಿಧಾನಪರಿಷತ್ ಸದಸ್ಯ, ಬಿಜೆಪಿ ಸಹ ಖಜಾಂಚಿ ಲೆಹರ್ ಸಿಂಗ್ ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ಲೆಹರ್ ಎಂದೇ ನಾನು ಸಹಿ ಮಾಡೋದು. ಆದ್ರೆ ಡೈರಿಯಲ್ಲಿ ಲೆಹರ್ ಸಿಂಗ್ ಅಂತಿದೆ, ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿ ಇದು ತಪ್ಪಾಗಿದೆ. ಈಗಾಗಲೇ ಶುಕ್ರವಾರ ಬಿಜೆಪಿಯಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

    ಬೆಂಗಳೂರು ಪೊಲೀಸ್ ಕಮಿಷನರ್ ಗೂ ಇವತ್ತು ದೂರು ನೀಡಿದ್ದು, ಡಿಜಿಪಿಗೂ ನಾಳೆ ದೂರು ನೀಡುತ್ತೇನೆ. ಅಲ್ಲದೆ ನಕಲಿ ಡೈರಿ ಮೂಲ ಪತ್ತೆಗೆ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

    ಇದು ನನ್ನ ರಾಜಕೀಯ ಜೀವನದ ಪ್ರಥಮ ಸುದ್ದಿಗೋಷ್ಠಿ, ಇಲ್ಲಿವರೆಗೆ ಸುದ್ದಿಗೋಷ್ಠಿ ಮಾಡುವ ಯಾವುದೇ ಅನಿವಾರ್ಯತೆ ಬಂದಿರಲಿಲ್ಲ. ಇದೀಗ ಅನಿವಾರ್ಯತೆ ಬಂದಿರೋದ್ರಿಂದ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ, ನನ್ನ ವಿರುದ್ಧ ಬಿಡುಗಡೆ ಮಾಡಿರುವ ಡೈರಿ ವಿಚಾರವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಲೆಹರ್ ಸಿಂಗ್ ಹೇಳಿದರು.

    ಆಡ್ವಾನಿಯವರಿಗೆ ಲೆಹರ್ ಸಿಂಗ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಡ್ವಾಣಿಯವರು ನನ್ನ ತಂದೆ ಸಮಾನ, 4 ವರ್ಷದ ಬಳಿಕ ದಿನೇಶ್ ಗುಂಡೂರಾವ್ ಗೆ ನಾನು ಬರೆದ ಲೆಟರ್ ನೆನಪಾಗಿದೆ. ಲೆಟರ್ ಬಗ್ಗೆ ನಾನು ಮಾತಾಡಲ್ಲ, ನಮ್ಮ ಮನೆ ವಿಚಾರ ನಾನು ಬಹಿರಂಗ ಪಡಿಸಲ್ಲ ಅಂತಾ ಉತ್ತರ ನೀಡದೇ ಲೆಹರ್ ಸಿಂಗ್ ಜಾರಿಕೊಂಡ್ರು.

    ಯಡಿಯೂರಪ್ಪ ಭ್ರಷ್ಟ ಅನ್ನೋದಾದ್ರೆ ಅವರ ನೀಡುವ ದುಡ್ಡು ನಿಮಗ್ಯಾಕೆ ಎಂದು ಪ್ರಶ್ನಿಸಿ ಅಡ್ವಾಣಿಯವರಿಗೆ ಲೆಹರ್‍ಸಿಂಗ್ ಬರೆದಿದ್ದ ಪತ್ರವನ್ನು ನಿನ್ನೆ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ರು. ಆ ಬಗ್ಗೆ ಪ್ರತಿಕ್ರಿಯಿಸಿ, ನಾನು ಹಂಗೆ ಪತ್ರ ಬರದೇ ಇಲ್ಲ ಎಂದು ಹೇಳಿದ್ರು.