ನವದೆಹಲಿ: ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿಗೆ ಎಸ್‍ಪಿ ಕಾಂಗ್ರೆಸ್ ಮೈತ್ರಿಕೂಟ, ಬಿಎಸ್‍ಪಿ ಧೂಳೀಪಟವಾಗಿದೆ. ಹೀಗಾಗಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳನ್ನು ಇಲ್ಲಿ ನೀಡಲಾಗಿದೆ.
1. ಮೋದಿ ಮುಖ:
ಉತ್ತರ ಪ್ರದೇಶದಲ್ಲಿ ಮೋದಿ ಮುಖವನ್ನು ಇಟ್ಟುಕೊಂಡೇ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೋದಿಗಾಗಿ ಬಿಜೆಪಿ ಮತ ನೀಡಿ ಎಂದಿದ್ದು ವರವಾಗಿದೆ. ಅಷ್ಟೇ ಅಲ್ಲದೇ ಮೋದಿ ತಮ್ಮ ಭಾಷಣದಲ್ಲಿ ಸ್ಕ್ಯಾಮ್(ಸಮಾಜವಾದಿ, ಕಾಂಗ್ರೆಸ್, ಅಖಿಲೇಶ್ ಯಾದವ್, ಮಾಯಾವತಿ), ಕಸಬ್ (ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಹುಜನ ಸಮಾಜವಾದಿ ಪಾರ್ಟಿ) ಹೋಲಿಸಿ ವಾಗ್ದಾಳಿ ನಡೆಸುವ ಮೂಲಕ ಮೂರು ಪಕ್ಷಗಳ ಒಂದೇ ತಟ್ಟೆಗೆ ತಂದು ಬಿಜೆಪಿ ಪರ ಅಲೆಯನ್ನು ಸೃಷ್ಟಿಸುವಲ್ಲಿ ಸಫಲರಾದರು.
2. ನೋಟ್‍ಬ್ಯಾನ್:
ನವೆಂಬರ್ 8ರ ನೋಟು ಬ್ಯಾನ್ ಬಳಿಕ ಬಿಜೆಪಿ ವಿವಿಧ ರಾಜ್ಯಗಳ ಸ್ಥಳೀಯ ಆಡಳಿತ ಮತ್ತು ಪಾಲಿಕೆ ಚುನಾವಣೆ ಯಶಸ್ಸನ್ನು ಗಳಿಸಿತ್ತು. ಈ ಫಲಿತಾಂಶ ಉತ್ತರ ಪ್ರದೇಶದಲ್ಲಿ ಪರಿವರ್ತನೆಯಾಗಿದೆ. ಬಿಎಸ್‍ಪಿ, ಕಾಂಗ್ರೆಸ್, ಎಸ್‍ಪಿ ನೋಟ್‍ಬ್ಯಾನ್ ವಿರುದ್ಧ ಎಷ್ಟೇ ಪ್ರತಿಭಟಿಸಿದರೂ ಜನ ಮಾತ್ರ ಬಿಜೆಪಿಗೆ ಮತ ನೀಡಿದ್ದಾರೆ.
3. ಎಸ್‍ಪಿ ಆಂತರಿಕ ಕಿತ್ತಾಟ:
ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಶಿವಪಾಲ್ ಜಗಳದಿಂದಾಗಿ ಜನ ರೋಸಿ ಹೋಗಿದ್ದರು. ತದ ನಂತರ ನಮ್ಮಲ್ಲಿ ಒಗ್ಗಟ್ಟು ಇದೆ ಎಂದು ಬಿಂಬಿಸಿದ್ದರು. ಆದರೆ ಇವರ ಕಿತ್ತಾಟ ನಾಟಕವನ್ನು ನೋಡುತ್ತಿದ್ದ ಜನ ಈ ಬಾರಿ ಬಿಜೆಪಿಯ ಕೈ ಹಿಡಿದಿದ್ದಾರೆ.
4. ಕಾಂಗ್ರೆಸ್ ಮೈತ್ರಿಕೂಟ:
ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಬಿಹಾರದಲ್ಲಿ ಯಶಸ್ವಿಯಾದಂತೆ ಉತ್ತರ ಪ್ರದೇಶಲ್ಲಿ ಎಸ್‍ಪಿ ಜೊತೆಗೂಡಿ ಮೈತ್ರಿ ಮಾಡಿಕೊಂಡಿತ್ತು. ಆದರೆ ಪ್ರಶಾಂತ್ ಕಿಶೋರ್ ಈ ತಂತ್ರಗಾರಿಕೆ ವೈಫಲ್ಯ ಕಂಡಿದ್ದು ಮೈತ್ರಿಕೂಟಕ್ಕೆ ಹೀನಾಯ ಸೋಲಾಗಿದೆ. ಆಡಳಿತ ವಿರೋಧಿ ಅಲೆ ಇರುವಾಗಲೇ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಬಿಜೆಪಿ ಗೆಲ್ಲಲು ವರದಾನವಾಯ್ತು.
5. ಮಾಯಾವತಿ ವೈಫಲ್ಯ:
ಹಿಂದುಳಿದ ವರ್ಗಗಳ ಮತಗಳನ್ನು ಪಡೆದು ದಲಿತ ಮಹಿಳಾ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಈ ಬಾರಿ ಚುನಾವಣಾ ನಡೆಯುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಂತೆ ಕಾಣುತಿತ್ತು. ಎಸ್‍ಪಿ ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಜೆಪಿಯ ಅಬ್ಬರದ ಪ್ರಚಾರ ನಡುವೆ ಬಿಎಸ್‍ಪಿ ಮಂಕಾಗಿತ್ತು. ಇದರ ಜೊತೆ ಹಣ ಪಡೆದು ಟಿಕೆಟ್ ಹಂಚಿಕೆ ಮಾಡಿದ್ದರು ಎನ್ನುವ ಆರೋಪವೂ ಮಾಯಾವತಿ ವಿರುದ್ಧ ಕೇಳಿ ಬಂದಿತ್ತು.
6. ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ:
ಕಾಂಗ್ರೆಸ್ ಎಸ್‍ಪಿಯ ಅಖಿಲೇಶ್ ಯಾದವ್ ಮುಂದಿನ ಮುಖ್ಯಮಂತ್ರಿ ಎಂದು ಪ್ರಕಟಿಸಿದ್ದರೆ, ಬಿಎಸ್‍ಪಿಯಿಂದ ಮಾಯಾವತಿ ಮುಖ್ಯಮಂತ್ರಿ ರೇಸ್‍ನಲ್ಲಿದ್ದರು. ಆದರೆ ಈ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿದೇ ಚುನಾವಣೆಗೆ ಇಳಿದಿತ್ತು. ಇದರಿಂದಾಗಿ ಬಿಜೆಪಿ ನಾಯಕರ ಆಂತರಿಕ ಜಗಳಕ್ಕೆ ಆಸ್ಪದವೇ ಇರಲಿಲ್ಲ. ಎಲ್ಲ ನಾಯಕರ ಹೋರಾಟ ಮತ್ತು ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ್ದು ಬಿಜೆಪಿಯ ಗೆಲುವಿಗೆ ಕಾರಣವಾಯ್ತು.
7. ಕೈ ಹಿಡಿದ ಯುವ ಮತದಾರರು:
ಈ ಹಿಂದಿನ ಜಾತಿ ರಾಜಕಾರಣವನ್ನು ಬಿಟ್ಟು ಬಿಜೆಪಿ ಈ ಬಾರಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಐಟಿ ಸೆಲ್ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ವೈಫಲ್ಯಗಳನ್ನು ಪ್ರಚಾರ ಮಾಡಿತ್ತು. ಈ ಪ್ರಚಾರದಿಂದಾಗಿ ಹೊಸ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ.
8. ಮೈತ್ರಿ ಲಾಭ:
ಬಿಜೆಪಿ ಅಪ್ನಾ ದಳ(ಎಸ್) ಮತ್ತು ಸುಹಲ್ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್‍ಬಿಎಸ್‍ಪಿ) ಜೊತೆ ಮೈತ್ರಿ ಮಾಡಿಕೊಂಡಿತ್ತು ಪೂರ್ವಾಂಚಲ ಮತ್ತು ಮಧ್ಯ ಉತ್ತರ ಪ್ರದೇಶದ ಪಟೇಲ್ ಕುಮಿ ದಳವನ್ನು ಅಪ್ನಾ ದಳ ಪ್ರತಿನಿಧಿಸಿದರೆ, ಎಸ್‍ಬಿಎಸ್‍ಪಿ 17 ಹಿಂದುಳಿದ ವರ್ಗಗಳನ್ನು ಪೂರ್ವ ಉತ್ತರ ಪ್ರದೇಶ ಪ್ರತಿನಿದಿಸುತ್ತದೆ. ಈ ಎರಡು ಪಕ್ಷಗಳ ಜೊತೆಗಿನ ಮೈತ್ರಿ ಬಿಜೆಪಿಗೆ ವರವಾಗಿದೆ.
9. ಹಿಂದುತ್ವ ಟ್ರಂಪ್ ಕಾರ್ಡ್:
19.98 ಕೋಟಿ ಜನ ಸಂಖ್ಯೆಯಲ್ಲಿ 14.05 ಕೋಟಿ ಮತದರಾರ ಪೈಕಿ ಹಿಂದುಳಿದ ವರ್ಗ ಶೇ.34.7, ದಲಿತರು ಶೇ. 20.5, ಮುಸ್ಲಿಮ್ ಶೇ.19, ಬ್ರಾಹ್ಮಣ ಶೇ.10.5, ಬುಡಕಟ್ಟು ಜನಾಂಗ ಶೇ.2, ವೈಶ್ಯ ಶೇ.4.3, ಠಾಕೂರ್ ಶೇ.7.6 ಮಂದಿ ಇದ್ದರು. ಆದರೆ ಬಿಜೆಪಿ ಯಾವೊಬ್ಬ ಮುಸ್ಲಿಮ್ ಧರ್ಮದ ವ್ಯಕ್ತಿಗೆ ಟಿಕೆಟ್ ಹಂಚಿಕೆ ಮಾಡಿರಲಿಲ್ಲ. ಈ ವಿಚಾರವನ್ನೇ ಇಟ್ಟುಕೊಂಡು ವಿರೋಧಿಗಳು ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದರು. ಆದರೆ ಬಿಜೆಪಿ ಹಿಂದುಳಿದ ವರ್ಗ, ಮೇಲ್ವರ್ಗ, ದಲಿತರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ವಿಜಯ ಸಾಧಿಸಿದೆ.
10. ಕೋಮು ಗಲಾಟೆ ಇಲ್ಲ:
ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೆ ಮುನ್ನ ಕೋಮು ಗಲಾಟೆ ನಡೆಯುವುದು ಉತ್ತರಪ್ರದೇಶಲ್ಲಿ ಸಾಮಾನ್ಯ. ಆದರೆ ಈ ಬಾರಿ ಒಂದೇ ಒಂದು ಕೋಮು ಗಲಾಟೆಯಾಗಿಲ್ಲ. ಮಂಗಳವಾರ ಲಕ್ನೋದಲ್ಲಿ ಶಂಕಿತ ಐಸಿಸ್ ಉಗ್ರನ ಹತ್ಯೆ ಮಾಡಲಾಗಿತ್ತು. ಆದರೆ ಈ ಎನ್‍ಕೌಂಟರ್ ಫೇಕ್ ಆಗಿದ್ದು, ಅಖಿಲೇಶ್ ಯಾದವ್ ಸರ್ಕಾರ ಚುನಾವಣೆಗೂ ಮುನ್ನ ಕೋಮುಗಲಾಟೆ ಸೃಷ್ಟಿಸಲು ಉಗ್ರ ನಿಗ್ರಹ ದಳದ ಮೂಲಕ ಈ ಎನ್‍ಕೌಂಟರ್ ಮಾಡಲಾಗಿದೆ ಎಂದು ಈಗ ಅಲ್ಲಿನ ಸ್ಥಳಿಯ ಮುಸ್ಲಿಮ್ ನಾಯಕರು ಆರೋಪಿಸಿದ್ದಾರೆ.
ಈ ಎಲ್ಲ ಕಾರಣದ ಜೊತೆಗೆ ಸರ್ಜಿಕಲ್ ಸ್ಟ್ರೈಕ್ ಎಫೆಕ್ಟ್, ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳು, ಮುಸ್ಲಿಂಯೇತರ ಓಬಿಸಿ ವರ್ಗ ಬಿಜೆಪಿಯನ್ನು ಕೈ ಹಿಡಿದ ಕಾರಣ ಬಿಜೆಪಿ ಈ ಬಾರಿ ಉತ್ತರ ಪ್ರದೇಶದಲ್ಲಿ ಜಯಭೇರಿ ಬಾರಿಸಿದೆ.
ಮಧ್ಯಾಹ್ನ 1 ಗಂಟೆಯ ಟ್ರೆಂಡ್ಸ್ ಪ್ರಕಾರ ಬಿಜೆಪಿ 307 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಎಸ್‍ಪಿ ಕಾಂಗ್ರೆಸ್ 82, ಬಿಎಸ್‍ಪಿ 18, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
2012ರ ಚುನಾವಣೆಯಲ್ಲಿ ಎಸ್‍ಪಿ 224, ಬಿಎಸ್‍ಪಿ 80, ಬಿಜೆಪಿ 47, ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ: ಬಿಹಾರ ಚುನಾವಣೆಯ ಸೋಲಿನ ಪಾಠದಿಂದಾಗಿ ಉತ್ತರಪ್ರದೇಶದಲ್ಲಿ ಜಯಭೇರಿ ಬಾರಿಸಿತು ಬಿಜೆಪಿ. ಪಕ್ಷ ಸಂಘಟನೆಯಾಗಿದ್ದು ಹೇಗೆ?