Tag: ಬಿಜೆಪಿ ಹೈ ಕಮಾಂಡ್

  • ಸಿದ್ದರಾಮಯ್ಯ ಸಹವಾಸ ಬೇಡ – ಯಡಿಯೂರಪ್ಪಗೆ ‘ಹೈ’ವಾರ್ನಿಂಗ್?

    ಸಿದ್ದರಾಮಯ್ಯ ಸಹವಾಸ ಬೇಡ – ಯಡಿಯೂರಪ್ಪಗೆ ‘ಹೈ’ವಾರ್ನಿಂಗ್?

    ಬೆಂಗಳೂರು: ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರಿಬ್ಬರೂ ಹಾವು ಮುಂಗುಸಿಯಂತೆ ಸದಾ ಕಚ್ಚಾಡುತ್ತಲೇ ಇರುತ್ತಾರೆ. ಆಡಳಿತ ಪಕ್ಷದ ವೈಫಲ್ಯಗಳ ವಿರುದ್ಧ ವಿರೋಧ ಪಕ್ಷದ ನಾಯಕ ಸದಾ ಟೀಕಿಸುತ್ತಲೇ ಇರುತ್ತಾನೆ. ವಿಪಕ್ಷ ನಾಯಕನ ಟೀಕೆಗೆ ಆಡಳಿತ ಪಕ್ಷದ ನಾಯಕ ತಿರುಗೇಟು ಕೊಡುತ್ತಲೇ ಇರುತ್ತಾನೆ. ಇದು ರಾಜಕಾರಣ ಎಂಬ ಸಿನಿಮಾ ಪರದೆಯ ಮೇಲೆ ನಿತ್ಯ ಕಾಣುವ ದೃಶ್ಯಗಳು.

    ಆದರೆ ಪರದೆ ಹಿಂದೆ ಅವರಿಬ್ಬರ ನಡುವಿನ ಸಂಬಂಧ ಹೇಗಿರುತ್ತದೆ? ಇದನ್ನು ಬಲ್ಲವರು ಕಡಿಮೆಯೇ. ಆದರೆ ಹಾಲಿ ಆಡಳಿತ ಪಕ್ಷದ ನಾಯಕ, ಸಿಎಂ ಯಡಿಯೂರಪ್ಪ ಮತ್ತು ವಿರೋಧ ಪಕ್ಷ ಕಾಂಗ್ರೆಸ್‍ನ ನಾಯಕ ಸಿದ್ದರಾಮಯ್ಯ ಇವರಿಬ್ಬರ ಸಂಬಂಧ, ಪರಸ್ಪರರ ಧೋರಣೆಗಳು ಬಹುಶ: ರಾಜಕೀಯ ಆಸಕ್ತರೆಲ್ಲರಿಗೂ ಗೊತ್ತಿರುವಂಥದ್ದೇ. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರೂ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂಬ ಆರೋಪ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸಿದ್ದರಾಮಯ್ಯ ಎಂದರೆ ಯಡಿಯೂರಪ್ಪಗೆ ಮೃದು ಧೋರಣೆ. ಯಡಿಯೂರಪ್ಪ ವಿಚಾರದಲ್ಲಿ ಸಿದ್ದರಾಮಯ್ಯ ಕಟು ಟೀಕೆ, ವಾಗ್ದಾಳಿ ನಡೆಸಲ್ಲ ಎನ್ನುವ ಆರೋಪ-ಅಪವಾದಗಳು ಇಬ್ಬರ ಮೇಲೂ ಇವೆ.

    ಈಗ ಅಸಲಿ ವಿಷಯ ಏನಂದ್ರೆ, ಇವರಿಬ್ಬರ ಈ ಅಡ್ಜಸ್ಟ್‍ಮೆಂಟ್ ಬಾಂಧವ್ಯ ಕಟ್ ಮಾಡಲು ಖುದ್ದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗಿದೆ. ಇವರಿಬ್ಬರ ಈ ವಿಚಿತ್ರ ಗೆಳೆತನದ ಮೇಲೆ ಹೈಕಮಾಂಡ್ ಕೆಂಗಣ್ಣು ಬೀರಿದೆಯಂತೆ. ಇವರಿಬ್ಬರ ಅಡ್ಜಸ್ಟ್ ಮೆಂಟ್ ರಾಜಕೀಯದಿಂದ ಹೈಕಮಾಂಡ್‍ಗೆ ಮುಜುಗರವಾಗಿದೆಯಂತೆ. ಹೀಗಾಗಿಯೇ ಇಬ್ಬರ ನಡುವೆ ಗೋಡೆ ಎಬ್ಬಿಸಲು ಹೈಕಮಾಂಡ್ ಮುಂದಾಗಿದೆ. ಸಿಎಂ ಯಡಿಯೂರಪ್ಪಗೆ ಹೈಕಮಾಂಡ್ ಈ ಕುರಿತು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ ಎನ್ನಲಾಗಿದೆ.

    ನಾಡಿದ್ದು ಫೆ.27 ರಂದು ಸಿಎಂ ಯಡಿಯೂರಪ್ಪ 78ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಡಿಯೂರಪ್ಪ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯಗೂ ಆಹ್ವಾನಿಸಲಾಗಿದೆ. ಸಮಾರಂಭದಲ್ಲಿ ಯಡಿಯೂರಪ್ಪ ಕುರಿತ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ, ಅಭಿನಂದನಾ ಭಾಷಣ ಮಾಡೋರು ಬೇರೆ ಯಾರೂ ಅಲ್ಲ ಇದೇ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರ ಮೇಲಿನ ಕಳಕಳಿಯಿಂದಲೇ ಯಡಿಯೂರಪ್ಪ ಅವರ ಕೈಯಿಂದಲೇ ತಮ್ಮ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿಸಲು ಇಚ್ಚಿಸಿದ್ದಾರೆ. ಇಂಥ ಸಂದರ್ಭದಲ್ಲೇ ಸರಿಯಾಗಿ ಯಡಿಯೂರಪ್ಪಗೆ ಹೈಕಮಾಂಡ್ ಶಾಕಿಂಗ್ ಮೆಸೇಜ್ ಬಂದು ತಲುಪಿದೆ ಎಂದು ಹೇಳಲಾಗುತ್ತಿದೆ.

    ಸಿದ್ದರಾಮಯ್ಯ ಮೇಲೆ ಸಾಫ್ಟ್ ಆಗಿದ್ದ ಬಿಎಸ್‍ವೈಗೆ ಹೈಕಮಾಂಡ್ ವಾರ್ನಿಂಗ್ ಮೆಸೇಜ್ ಕಳಿಸಿದೆ. ಯಡಿಯೂರಪ್ಪ – ಸಿದ್ದರಾಮಯ್ಯ ಗೆಳೆತನಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಹೈಕಮಾಂಡ್, ಸಿದ್ದರಾಮಯ್ಯರಿಂದ ದೂರ ಇರುವಂತೆ ಬಿಎಸ್‍ವೈಗೆ ಸಂದೇಶ ರವಾನಿಸಿದೆ ಎನ್ನಲಾಗಿದೆ.

    ಹೈಕಮಾಂಡ್ ಸಂದೇಶ ಏನು?
    ಸಿದ್ದರಾಮಯ್ಯ ಜತೆ ಅಂತರ ಕಾಯ್ದುಕೊಂಡಷ್ಟೂ ಉತ್ತಮ. ಸಿದ್ದರಾಮಯ್ಯರಿಂದ ದೂರ ಇದ್ದಷ್ಟು ಪಕ್ಷಕ್ಕೂ, ಸರ್ಕಾರಕ್ಕೂ ಲಾಭ. ಸಿದ್ದರಾಮಯ್ಯ ಜೊತೆ ಸಾಫ್ಟ್ ಫ್ರೆಂಡ್ ಶಿಪ್ ಸ್ಟಾಪ್ ಮಾಡಿ. ಜನತೆಗೆ ನಿಮ್ಮ ಮೃದು ಧೋರಣೆಯಿಂದ ಬೇರೆಯೇ ಸಂದೇಶ ಹೋಗುತ್ತದೆ. ರಾಜಕಾರಣದಲ್ಲಿ ವಿಪಕ್ಷ ನಾಯಕನ ಜತೆ ಸ್ನೇಹದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆಡಳಿತ ಪಕ್ಷದ ನಾಯಕ ವಿರೋಧ ಪಕ್ಷದ ನಾಯಕನ ಜೊತೆ ಹೇಗೆ ಇರಬೇಕು ಅಂತ ರಾಜಕೀಯ ಧರ್ಮ ಹೇಳುತ್ತದೋ ಹಾಗೆಯೇ ನೀವೂ ಇರಿ. ಕನಿಷ್ಟ ಈ ವಿಧಾನಸಭೆ ಅವಧಿವರೆಗಾದರೂ ಸಿದ್ದರಾಮಯ್ಯ ಗೆಳೆತನದಿಂದ ದೂರ ಇರಿ ಅಂತೆಲ್ಲ ಬಿಎಸ್‍ವೈಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಬರ್ತ್ ಡೇ ನೆಪದಲ್ಲಿ ಸಿದ್ದು ಜತೆ ಒಂದೇ ವೇದಿಕೆ ಹಂಚಿಕೊಳ್ಳಲು ಇಚ್ಚಿಸಿದ್ದ ಬಿಎಸ್‍ವೈಗೆ ಬಿಜೆಪಿ ಹೈಕಮಾಂಡ್ ಈ ಮೂಲಕ ‘ಹೈ’ಶಾಕ್ ಕೊಟ್ಟಿದೆ. ಬಿಎಸ್‍ವೈಗೆ ಹೈಕಮಾಂಡ್ ಸಂದೇಶ ಎಚ್ಚರಿಕೆ ಗಂಟೆ ಎಂದು ಬಿಜೆಪಿಯಲ್ಲಿ ಗುಸುಗುಸು ಕೂಡಾ ನಡೀತಿದೆ. ಹೈಕಮಾಂಡ್ ಸಂದೇಶದ ಬೆನ್ನಲ್ಲೇ ಪಕ್ಷದಲ್ಲಿ ಸಿದ್ದು-ಬಿಎಸ್‍ವೈ ಗೆಳೆತನದ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಹೈಕಮಾಂಡ್ ವಾರ್ನಿಂಗ್ ಬಂದ ಹಿನ್ನೆಲೆಯಲ್ಲಿ ಇನ್ಮುಂದೆ ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಸಂಬಂಧ ಹೇಗಿರಲಿದೆ? ಹಿಂದಿನಂತೆಯೇ ಇರುತ್ತಾರಾ ಅಥವಾ ಅಂತರ ಕಾಯ್ದುಕೊಳ್ಳುತ್ತಾರಾ? ಎಲ್ಲಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಯಡಿಯೂರಪ್ಪ ಬರ್ತ್ ಡೇ ಫಂಕ್ಷನ್ ಗೆ ಬರ್ತಾರಾ? ಬರಲ್ವಾ ಅನ್ನೋ ಟಾಕ್ ಸಹ ಪಕ್ಷದಲ್ಲಿ ಜೋರಾಗಿ ನಡೀತಿದೆ. ಈ ಮೂಲಕ ಹೈಕಮಾಂಡ್ ಮೆಸೇಜ್ ಯಡಿಯೂರಪ್ಪರನ್ನು ಧರ್ಮ ಸಂಕಟದಲ್ಲಿ ಸಿಕ್ಕಿಸಿದೆ ಎನ್ನಲಾಗಿದೆ.

  • ಬಿಎಸ್‍ವೈ ಒಬ್ಬಂಟಿಯಾಗಿದ್ದಾರೆ, ಫ್ರೀ ಹ್ಯಾಂಡ್ ಕೊಟ್ಟಿಲ್ಲ- ಎಸ್.ಆರ್.ಪಾಟೀಲ್

    ಬಿಎಸ್‍ವೈ ಒಬ್ಬಂಟಿಯಾಗಿದ್ದಾರೆ, ಫ್ರೀ ಹ್ಯಾಂಡ್ ಕೊಟ್ಟಿಲ್ಲ- ಎಸ್.ಆರ್.ಪಾಟೀಲ್

    – ಹೈ ಕಮಾಂಡ್ ಸಿಎಂ ನಿಯಂತ್ರಿಸುತ್ತಿದೆ

    ಬಾಗಲಕೋಟೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ನಡುವೆ ಮುಸುಕಿನ ಕಾಳಗ ಇದೆ. ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಬೆಂಬಲ ಇದೆ. ಆದರೆ ಯಡಿಯೂರಪ್ಪ ಅವರಿಗೆ ಫ್ರಿ ಹ್ಯಾಂಡ್ ಕೊಟ್ಟಿಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹರಿಹಾಯ್ದಿದ್ದಾರೆ.

    ತಂತಿ ಮೇಲೆ ನಡೆಯುತ್ತಿದ್ದೇನೆ ಎಂಬ ಸಿಎಂ ಬಿಎಸ್‍ವೈ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಕೆಲಸ ಕಾರ್ಯದಲ್ಲಿ ವರಿಷ್ಠರು ಅಡೆತಡೆ ಉಂಟು ಮಾಡುತ್ತಿರಬಹುದು. ಸಿಎಂಗೆ ವರಿಷ್ಠರಿಂದ ಮೂಗುದಾರ ಹಾಕುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಆದರೆ ಹೈ ಕಮಾಂಡ್ ಹಿಡಿತ ಸಾಧಿಸುತ್ತಿದೆ. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಪಚುನಾವಣೆ ನಂತರ ಯಡಿಯೂರಪ್ಪ ಅವರಿಗೆ ನಿಶ್ಚಿತವಾಗಿಯೂ ತೊಂದರೆ ಇದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು.

    ಅನರ್ಹ ಶಾಸಕರು ಸ್ಪರ್ಧೆ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. 15 ಸ್ಥಾನದಲ್ಲಿ ಕನಿಷ್ಟ 12 ಜನ ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗುತ್ತಾರೆ. ಬಿಜೆಪಿ ಮೇಲೆ ಇದು ಪರಿಣಾಮ ಬೀರುತ್ತದೆ. ಉಪಚುನಾವಣೆ ಬಳಿಕ ಬಿಎಸ್‍ವೈ ಸರ್ಕಾರಕ್ಕೆ ತೊಂದರೆ ಇದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಉಮೇಶ್ ಕತ್ತಿ ಅನರ್ಹರಿಗೆ ಟಿಕೆಟ್ ಕೊಟ್ಟರೆ ಹುಷಾರ್ ಅಂತ ಹೇಳುತ್ತಾರೆ. ಇತ್ತ ಸಿಎಂ ತಂತಿ ಮೇಲೆ ನಡೆಯುತ್ತಿದ್ದೇನೆ ಎನ್ನುತ್ತಾರೆ. ಬಿಜೆಪಿಯಲ್ಲಿ ಆಂತರಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮುಸುಕಿನ ಗುದ್ದಾಟಗಳು ನಡೆದಿವೆ. ಇವರ ಆಂತರಿಕ ಕಚ್ಚಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿ ಕಾರಿದರು.

    ಕೋರ್ಟ್ ಆದೇಶದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅನರ್ಹರನ್ನು ಯಾರೂ ಕ್ಷಮಿಸುವುದಿಲ್ಲ, ಕ್ಷೇತ್ರದ ಜನರು ಸಹ ಅವರನ್ನು ಕ್ಷಮಿಸುವುದಿಲ್ಲ. ಅವರ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ, ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಹೆಚ್.ಮುನಿಯಪ್ಪ ವಾಕ್ಸಮರದ ಕುರಿತು ಮಾತನಾಡಿದ ಅವರು, ನಾನು ಕೆ.ಎಚ್.ಮುನಿಯಪ್ಪ ಸ್ನೇಹಿತರು ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಪಕ್ಷದ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದಾರೆ. ಒಬ್ಬರಿಗೊಬ್ಬರು ಸಮಜಾಯಿಷಿ ನೀಡಿದ್ದಾರೆ. ಚರ್ಚೆ ಮಾಡಿದ್ದನ್ನೇ ಭಿನ್ನಾಭಿಪ್ರಾಯ ಎಂದು ತೋರಿಸಬಾರದು. ಇದು ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು.