Tag: ಬಿಜೆಪಿ ಸಂಸದ

  • ಸಂಸತ್‌ ಭವನ ಆವರಣದಲ್ಲಿ ಹೈಡ್ರಾಮಾ – ರಾಹುಲ್‌ ತಳ್ಳಿದ್ರಿಂದ ನಾನು ಬಿದ್ದೆ ಎಂದ ಬಿಜೆಪಿ ಸಂಸದ

    ಸಂಸತ್‌ ಭವನ ಆವರಣದಲ್ಲಿ ಹೈಡ್ರಾಮಾ – ರಾಹುಲ್‌ ತಳ್ಳಿದ್ರಿಂದ ನಾನು ಬಿದ್ದೆ ಎಂದ ಬಿಜೆಪಿ ಸಂಸದ

    -ಪ್ರತಾಪ್‌ ಸಾರಂಗಿಯ ತಳ್ಳಿದ ರಾಹುಲ್‌ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್‌ ಮಂಜುನಾಥ್‌!

    ನವದೆಹಲಿ: ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್‌ ನಡುವೆ ಕಿಚ್ಚುಹೊತ್ತಿಸಿದೆ. ಉಭಯ ಪಕ್ಷಗಳು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿ (Pratap Chandra Sarangi) ಕುಸಿದುಬಿದ್ದಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕಾಂಗ್ರೆಸ್‌ ಪ್ರತಿಭಟನೆ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿದ್ದ (BJP MPs Protest) ವೇಳೆ ಪ್ರತಾಪ್‌ ಸಾರಂಗಿ ಅವರನ್ನು ರಾಹುಲ್‌ ಗಾಂಧಿ ತಳ್ಳಿದ್ದು, ಸಾರಂಗಿ ಕುಸಿದು ಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರತಿಭಟನೆ ವೇಳೆ ಗಾಯಗೊಂಡ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್‌ ಮಂಜುನಾಥ್‌ ಅವರು ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನಾವು ಎಂದಿಗೂ ಅಂಬೇಡ್ಕರ್‌ರನ್ನ ಅವಮಾನಿಸುವುದಿಲ್ಲ.. ನನ್ನ ಹೇಳಿಕೆ ತಿರುಚಲಾಗಿದೆ: ಅಮಿತ್ ಶಾ

    ಬಿಜೆಪಿ vs ಕಾಂಗ್ರೆಸ್‌ ಪ್ರೊಟೆಸ್ಟ್‌:
    ಚಳಿಗಾಲದ ಅಧಿವೇಶನದಲ್ಲಿ ʻಸಂವಿಧಾನʼ ಕುರಿತ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಅಮಿತ್‌ ಶಾ ಅವರು ಮಾತನಾಡುತ್ತಾ, ʻಅಂಬೇಡ್ಕರ್‌ ಅಂಬೇಡ್ಕರ್‌ ಅಂಬೇಡ್ಕರ್‌ ಇದೊಂದು ಫ್ಯಾಷನ್‌ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತುʼ ಎಂದು ಹೇಳಿದ್ದರು. ಈ ಕುರಿತ ವೀಡಿಯೋಗಳನ್ನು ವಿಕ್ಷ ನಾಯಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವರು ರಾಜೀನಾಮೇ ನೀಡಬೇಕು, ಅಂಬೇಡ್ಕರ್‌ ವಿರುದ್ಧದ ಟೀಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಕಾಂಗ್ರೆಸ್‌ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

    ಮತ್ತೊಂದೆಡೆ ಕಾಂಗ್ರೆಸ್ ನಿಂದ ಅಂಬೇಡ್ಕರ್‌ಗೆ ಅನ್ಯಾಯವಾಗಿದೆ ಎನ್ನುವ ಪ್ಲೆ ಕಾರ್ಡ್ ಹಿಡಿದು ಬಿಜೆಪಿ ಸದಸ್ಯರು ಪ್ರತಿಭಟನೆಗಿಳಿದಿದ್ದಾರೆ. ಇತ್ತ ಬಿಜೆಪಿ ಸಂಸದರಿಂದಲೂ ಸಂಸತ್ ಆವರಣದಲ್ಲಿ ʻಕಾಂಗ್ರೆಸ್ ನಿಂದ ಅಂಬೇಡ್ಕರ್‌ಗೆ ಅನ್ಯಾಯವಾಗಿದೆʼ ಅನ್ನೋ ಪ್ಲೆ ಕಾರ್ಡ್ ಹಿಡಿದು ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆಯಲ್ಲಿ ಕರ್ನಾಟಕದ ಬಿಜೆಪಿ ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಜಗ್ಗೇಶ್ ಭಾಗಿಯಾಗಿದ್ದಾರೆ. ಇದನ್ನೂ ಓದಿ: ʼಒಂದು ದೇಶ, ಒಂದು ಚುನಾವಣೆʼ ಪರಿಶೀಲನೆಗೆ JPC ರಚನೆ – ಸಮಿತಿಯಲ್ಲಿ ಪ್ರಿಯಾಂಕಾ ಗಾಂಧಿ

    ಮೋದಿ ತಿರುಗೇಟು:
    ಇನ್ನೂ ಅಮಿತ್‌ ಶಾ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್‌ ಅಂಬೇಡ್ಕರ್‌ ಏನೇನು ಕೊಟ್ಟಿದೆ ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್‌ ಎಂದು ಹೇಳಿದ್ದರು. ಅಮಿತ್‌ ಶಾ ಅವರು ಸಂವಿಧಾನ ಶಿಲ್ಪಿ ಡಾ ಬಿ.ಆರ್‌ ಅಂಬೇಡ್ಕರ್‌ರನ್ನು ಕನಸಿನಲ್ಲಿಯೂ ಅವಮಾನಿಸಲು ಸಾಧ್ಯವಿಲ್ಲದ ಪಕ್ಷದಿಂದ ಬಂದವರು. ಕಾಂಗ್ರೆಸ್‌ ಅವರ ಹೇಳಿಕೆಯನ್ನು ತಿರುಚಿದೆ ಎಂದು ಹೇಳಿದ್ದಾರೆ.

    ಇನ್ನೂ ಸಿಎಂ ಸಿದ್ದರಾಮಯ್ಯ ಕೂಡ ಪತ್ರದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಂಬೇಡ್ಕರ್‌ರಂತಹ ಮಹಾನ್‌ ವ್ಯಕ್ತಿ ಈ ಭೂಮಿಯಲ್ಲಿ ಹುಟ್ಟದಿದ್ದರೆ ನಾನು ಊರಿನಲ್ಲಿ ಕುರಿ ಮೇಯಿಸಿಕೊಂಡು ಇರುತ್ತಿದ್ದೆ, ಅಮಿತ್‌ ಶಾ ಅವರು ಕೂಡ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Mumbai Boat Accident | ಸ್ಪೀಡ್‌ ಬೋಟ್‌ ಫೆರ್ರಿಗೆ ಡಿಕ್ಕಿ ಹೊಡೆಯಲು ಕಾರಣ ಏನು? ದುರಂತ ಹೇಗಾಯ್ತು?

  • ಹಂಗಾಮಿ ಲೋಕಸಭಾ ಸ್ಪೀಕರ್ ಆಗಿ ಬಿಜೆಪಿಯ ಭರ್ತೃಹರಿ ಮಹತಾಬ್ ನೇಮಕ

    ಹಂಗಾಮಿ ಲೋಕಸಭಾ ಸ್ಪೀಕರ್ ಆಗಿ ಬಿಜೆಪಿಯ ಭರ್ತೃಹರಿ ಮಹತಾಬ್ ನೇಮಕ

    ನವದೆಹಲಿ: ಒಡಿಶಾ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ (Bhartruhari Mahtab) ಅವರನ್ನು ಹಂಗಾಮಿ ಸ್ಪೀಕರ್ ಆಗಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ನೇಮಕ ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiran Rijiju) ಗುರುವಾರ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಎಕ್ಸ್‌ ಮಾಡಿರುವ ಸಚಿವರು, ಸಂವಿಧಾನದ ಪರಿಚ್ಛೇದ 95(1)ರ ಅಡಿಯಲ್ಲಿ ಲೋಕಸಭಾ ಸದಸ್ಯರಾದ ಭರ್ತೃಹರಿ ಮಹತಾಬ್ ಅವರನ್ನು ಸ್ಪೀಕರ್ ಆಗಿ ನೇಮಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

    ಅಲ್ಲದೇ ಹಂಗಾಮಿ ಸ್ಪೀಕರ್ ಸಹಾಯಕ್ಕೆ ಸುರೇಶ್ ಕೋಡಿಕುನ್ನಿಲ್, ತಾಳಿಕ್ಕೋಟ್ಟೈ ರಾಜುತೇವರ್ ಬಾಲು, ರಾಧಾ ಮೋಹನ್ ಸಿಂಗ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಸುದೀಪ್ ಬಂದೋಪಾಧ್ಯಾಯ ಇವರುಗಳನ್ನು ನೇಮಕ ಮಾಡಲಾಗಿದೆ. ಹೊಸ ಸ್ಪೀಕರ್ ಆಯ್ಕೆವರೆಗೂ ಕಾರ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ರಿಜಿಜು ಬರೆದುಕೊಂಡಿದ್ದಾರೆ.

  • ಸಾಮಾಜಿಕ ನ್ಯಾಯದ ಹರಿಕಾರ ಪ್ರಸಾದ್‌ – ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್‌ಡಿಡಿ ಸಂತಾಪ

    ಸಾಮಾಜಿಕ ನ್ಯಾಯದ ಹರಿಕಾರ ಪ್ರಸಾದ್‌ – ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್‌ಡಿಡಿ ಸಂತಾಪ

    ಬೆಂಗಳೂರು: ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು-ಚಾಮರಾಜನಗರ ಭಾಗದ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರು ನಿಧರಾಗಿದ್ದು, ಪ್ರಧಾನಿ ಮೋದಿ (PM  Modi) ಹಾಗೂ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD Devegowda) ಅವರು ಸಂತಾಪ ಸೂಚಿಸಿದ್ದಾರೆ.

    ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಸಾದ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ (Bengaluru Private Hospital) ನಸುಕಿನ ಜಾವ 1.27ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಮಾಜಿ ಪ್ರಧಾನಿಗಳಿಬ್ಬರೂ ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಗಳಲ್ಲಿ ಸಂತಾಪ ಸೂಚಿಸಿದ್ದಾರೆ.

    ಚಾಮರಾಜನಗರದ ಹಿರಿಯ ನಾಯಕ ಹಾಗೂ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ (Srinivasa Prasad) ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ತಮ್ಮ ಸಮಾಜ ಸೇವೆಗಳಿಂದಲೇ ಬಹಳ ಜನಪ್ರಿಯರಾಗಿದ್ದರು. ಅವರ ಅಗಲಿಕೆಯ ನೋವನ್ನು ಕುಟುಂಬ ವರ್ಗದವರಿಗೆ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ಮಾಜಿ ಕೇಂದ್ರ ಸಚಿವರು ಹಾಗೂ ಚಾಮರಾಜನಗರದ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀನಿವಾಸ್ ಪ್ರಸಾದ್ ಅವರು ನಿಧನರಾದ ವಾರ್ತೆ ಕೇಳಿ ಬಹಳ ದುಃಖವಾಗಿದೆ. ಅವರ ಅಗಲಿಕೆ ರಾಜಕೀಯಕ್ಕೆ‌ ತುಂಬಲಾರದ ನಷ್ಟ. ಅವರ ಅಗಲಿಕೆ ಭರಿಸುವ ಶಕ್ತಿಯನ್ನು ಕುಟುಂಬವರಿಗೆ ಮತ್ತು ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಪ್ರಸಾದ್‌ ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು – ಸಿಎಂ ಸಂತಾಪ

    ಪ್ರಸಾದ್‌ ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದರು – ಸಿಎಂ ಸಂತಾಪ

    – ಶ್ರೀನಿವಾಸ ಪ್ರಸಾದ್‌ ನಿಧನಕ್ಕೆ ಕಂಬನಿ ಮಿಡಿದ ಬಿಜೆಪಿ ನಾಯಕರು

    ಬೆಂಗಳೂರು: ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು-ಚಾಮರಾಜನಗರ ಭಾಗದ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರು ನಿಧರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಸೇರಿದಂತೆ ಅನೇಕ ಬಿಜೆಪಿ ನಾಯಕರು (BJP Leaders) ಕಂಬನಿ ಮಿಡಿದಿದ್ದಾರೆ.

    ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಸಾದ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ (Bengaluru Private Hospital) ನಸುಕಿನ ಜಾವ 1.27ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ್‌ ಪ್ರಸಾದ್‌ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?

    ಸಿದ್ದರಾಮಯ್ಯ:
    ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡುಮಾಡಿದೆ. ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ. ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದ ಶ್ರೀನಿವಾಸ ಪ್ರಸಾದ್ ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ.

    ಹಳೆಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಗೆಲುವಾಗಿದ್ದ ಪ್ರಸಾದ್ ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಇದನ್ನೂ ಓದಿ: ಸಾವಾದ್ರೂ ನಗುನಗುತ್ತಾ ಬೀಳ್ಕೊಡಿ ಅಂತಾ ತಂದೆ ಯಾವಾಗ್ಲೂ ಹೇಳ್ತಾ ಇದ್ರು: ಶ್ರೀನಿವಾಸ್ ಪ್ರಸಾದ್ ಮಗಳು

    ವಿಜಯೇಂದ್ರ:
    ಕೇಂದ್ರದ ಮಾಜಿ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ದಿಗಳಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ಅತೀವ ದುಃಖ ತರಿಸಿದೆ. ಅವರ ಅಗಲಿಕೆಯಿಂದ ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಮುಳುಗಿದಂತಾಗಿದೆ. ಅವರ ರಾಜಕೀಯ ಜೀವನದ ಕಡೇ ದಿನಗಳಲ್ಲಿ ಬಿಜೆಪಿಯನ್ನು ಆಯ್ದುಕೊಂಡು ಸಂಸದರಾಗಿ ಪಕ್ಷದ ತತ್ವ, ಸಿದ್ದಾಂತ ಹಾಗೂ ರಾಷ್ಟ್ರೀಯವಾದದ ಸತ್ವವನ್ನು ಜನರಿಗೆ ತಿಳಿಸುವಲ್ಲಿ ನಾಯಕತ್ವ ವಹಿಸಿದ್ದು ಬಿಜೆಪಿಯ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಸಾಕ್ಷೀಕರಿಸಿತ್ತು. ಪ್ರಸ್ತುತ ಕಾಲಮಾನದಲ್ಲಿ ಮಾನ್ಯ ಪ್ರಸಾದರ ಅನುಪಸ್ಥಿತಿ ರಾಷ್ಟ್ರರಾಜಕಾರಣದಲ್ಲೂ ಕೊರತೆ ಸೃಷ್ಟಿಸಿದಂತಾಗಿದೆ. ಅವರ ಅಗಲಿಕೆಯ ನೋವನ್ನು ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

    ಸಿ.ಟಿ ರವಿ:
    ದಕ್ಷಿಣ ಕರ್ನಾಟಕದ ದಲಿತಸೂರ್ಯ ಅಸ್ತಂಗತ. ಹಿರಿಯ ನಾಯಕರು, ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ವಿಧಿವಶರಾದ ಸುದ್ದಿ ನೋವನ್ನುಂಟು ಮಾಡಿದೆ. ಪ್ರಭಾವಿ ದಲಿತ ಮುಖಂಡರಾಗಿ , ಸಂಸದೀಯ ಪಟುವಾಗಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಇವರ ನಿಧನ ರಾಜ್ಯ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ,ಬಂಧು ಮಿತ್ರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    ಡಾ.ಕೆ ಸುಧಾಕರ್‌:
    ನಾಡಿನ ಮುತ್ಸದ್ಧಿ ನಾಯಕರಾದ ಶ್ರೀ ಶ್ರೀನಿವಾಸ ಪ್ರಸಾದ್ ಅವರ ನಿಧನದ ಸುದ್ದಿ ಆಘಾತ ಮೂಡಿಸಿದೆ. ಕೇಂದ್ರ ಹಾಗು ರಾಜ್ಯ ಸಚಿವರಾಗಿ, ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಸುಮಾರು ಐದು ದಶಕಗಳ ಸುದೀರ್ಘ ಸಾರ್ವಜನಿಕ ಜೀವನ ನಡೆಸಿದ ಶ್ರೀ ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆಯಿಂದ ನಮ್ಮ ನಾಡು ಒಬ್ಬ ಶ್ರೇಷ್ಠ ಜನನಾಯಕನನ್ನು ಕಳೆದುಕೊಂಡಿದೆ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರು, ಬಂಧು-ಮಿತ್ರರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

    ವಿ. ಸೋಮಣ್ಣ:
    ಹಿರಿಯ ರಾಜಕೀಯ ನಾಯಕರು ಹಾಗೂ ಸಂಸದರಾದ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ರವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

  • ಶ್ರೀನಿವಾಸ್‌ ಪ್ರಸಾದ್‌ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?

    ಶ್ರೀನಿವಾಸ್‌ ಪ್ರಸಾದ್‌ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?

    ಮೈಸೂರು: ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು–ಚಾಮರಾಜನಗರ ಭಾಗದ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ (V Srinivasa Prasad) ಅವರಿಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಸಾದ್‌ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ (Private Hospital) ನಸುಕಿನ ಜಾವ 1.27ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪ್ರಸಾದ್‌ ಅವರಿಗೆ ಪತ್ನಿ, ಮೂವರು ಪುತ್ರಿಯರು (ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್ ಮತ್ತು ಪೂನಂ ಪ್ರಸಾದ್) ಇದ್ದಾರೆ.

    ಕೆಲ ವರ್ಷಗಳಿಂದ ಬಿಗಡಾಯಿಸಿದ್ದ ಆರೋಗ್ಯ ಸ್ಥಿತಿ:
    75 ವರ್ಷ ವಯಸ್ಸಿನ ಪ್ರಸಾದ್‌ ಅವರು ಪ್ರಸಾದ್‌ ಅವರ ಕಳೆದ ಕೆಲ ವರ್ಷಗಳಿಂದ ಚೆನ್ನಾಗಿರಲಿಲ್ಲ. ಅದರಲ್ಲೂ ಕೊನೇ ಬಾರಿ ಸಂಸದರಾಗಿ ಆಯ್ಕೆಯಾದ ಮೇಲೆ ಸಾರ್ವಜನಿಕವಾಗಿ ಹೆಚ್ಚು ಗುರುತಿಸಿಕೊಂಡಿರಲಿಲ್ಲ. ಆದರೂ ಚಿಕಿತ್ಸೆ ನಡುವೆಯೂ ಅವರು ರಾಜಕೀಯ ಜೀವನ ಮುಂದುವರಿಸಿದ್ದರು. ಕಳೆದ ಏಳೆಂಟು ವರ್ಷಗಳ ಹಿಂದೆಯೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ ಹೊರ ದೇಶದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಅವರು ಚೇತರಿಸಿಕೊಂಡಿದ್ದರು. ಇದಾದ ಬಳಿಕ ಆಗಾಗ ಅವರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳು ಕಾಣಿಸಿಕೊಳ್ಳುತ್ತಿದ್ದವು. ಇದರ ನಡುವೆಯೇ ಬಿಜೆಪಿ ಸೇರಿ 2019ರ ಚುನಾವಣೆಯಲ್ಲಿ ಗೆದ್ದು ಸಂಸದರೂ ಆಗಿದ್ದರು.

    ಕಳೆದ ತಿಂಗಳಷ್ಟೇ ನಿವೃತ್ತಿ ಘೋಷಣೆ:
    ಅನಾರೋಗ್ಯ ತೀವ್ರವಾಗಿ ಬಿಗಡಾಯಿಸಿದ್ದರಿಂದ ಕಳೆದ ತಿಂಗಳು ಸಕ್ರೀಯ ರಾಜಕೀಯದಿಂದ ನಿವೃತ್ತಿ ಹೊಂದುತ್ತಿರುವುದಾಗಿ ಮೈಸೂರಿನಲ್ಲಿ ಘೋಷಿಸಿದ್ದರು. ಈ ಬಾರಿ ಅವರ ಅಳಿಯ ಡಾ.ಮೋಹನ್‌ ಅವರಿಗೆ ಚಾಮರಾಜನಗರದಿಂದ ಟಿಕೆಟ್‌ ಕೊಡಿಸುವ ಇರಾದೆಯನ್ನೂ ಪ್ರಸಾದ್‌ ಅವರು ಹೊಂದಿದ್ದರು. ಆದರೆ ಪಕ್ಷ ಡಾ.ಪ್ರಸಾದ್‌ ಅವರ ಬದಲು ಬಾಲರಾಜು ಅವರಿಗೆ ಚಾಮರಾಜನಗರದಲ್ಲಿ ಟಿಕೆಟ್‌ ನೀಡಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಆದ್ರೆ ಭಾನುವಾರ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿರುವುದಾಗಿ ವೈದ್ಯರ ಮೂಲಗಳು ತಿಳಿಸಿದ್ದವು. ದುರದೃಷ್ಟವಶಾತ್‌ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ.

    ಪ್ರಸಾದ್‌ ಬೆಳೆದು ಬಂದ ಹಾದಿ ಹೇಗಿದೆ?
    1947 ಆಗಸ್ಟ್ 6 ರಂದು ಮೈಸೂರಿನ ಅಶೋಕಪುರಂನ ಮಣೇಗಾರ್ ವೆಂಕಟಯ್ಯ ಅವರ ಪುತ್ರನಾಗಿ ಜನಿಸಿದ್ದ ವಿ. ಶ್ರೀನಿವಾಸಪ್ರಸಾದ್ ಮೈಸೂರು-ಚಾಮರಾಜನಗರ ಭಾಗದಲ್ಲಿ ಪ್ರಭಾವಿ ದಲಿತ ನಾಯಕನಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಅಂಬೇಡ್ಕರ್‌ ವಿಚಾರಧಾರೆಗಳನ್ನೇ ಉಸಿರಾಗಿಸಿಕೊಂಡಿದ್ದರು. ರಾಜಕೀಯದ ಏಳು-ಬೀಳುಗಳ ನಡುವೆ ಸ್ವಾಭಿಮಾನಕ್ಕೆ ಹೆಸರಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌ ತತ್ವ ಸಿದ್ಧಾಂತಗಳನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ.

    ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ:
    1974 ರಲ್ಲಿ ಕೃಷ್ಣರಾಜ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು. 1977ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಲೋಕದಳ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಬಳಿಕ 1978ರಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿಯೂ ಸೋಲು ಕಂಡಿದ್ದರು. ಬಳಿಕ ರಾಜಕೀಯ ಅನುಭವ ಹೊಂದಿದ್ದ ಅವರು 1980, 1984, 1989, 1991 4 ಬಾರಿ ಚಾಮರಾಜನಗರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.

    1998 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸೋಲು ಎದುರಿಸಬೇಕಾಯಿತು. 1999 ರಲ್ಲಿ ಲೋಕಶಕ್ತಿ ಬಿಜೆಪಿ ಸಂಯುಕ್ತ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕರ ಪೊರೈಕೆ ರಾಜ್ಯ ಖಾತೆ ಸಚಿವನಾಗಿ ಕಾರ್ಯ ನಿರ್ವಹಿಸಿದ್ದರು. 2008 ಹಾಗೂ 2013 ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರಸಾದ್‌ 2013 ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

    ಸಿದ್ದರಾಮಯ್ಯ ತಮ್ಮ ಸಂಪುಟದಿಂದ ಶ್ರೀನಿವಾಸ್‌ ಪ್ರಸಾದ್ ಅವರನ್ನು ಕೈಬಿಟ್ಟ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಸಾದ್‌ ಅವರು ಕೆಲ ದಿನಗಳಲ್ಲೇ ಬಿಜೆಪಿ ಸೇರ್ಪಡೆಯಾದರು. ನಂತರ 2017ರಲ್ಲಿ ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಎದುರಿಸಿದ ಅವರು, 2019ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ದಿವಂಗತ ಆರ್.‌ ಧ್ರುವನಾರಾಯಣ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಪ್ರಸಾದ್‌ 6 ಬಾರಿ ಸಂಸದರಾಗು ಹಾಗೂ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

  • ಬಿಜೆಪಿ ಟಿಕೆಟ್‌ ವಂಚಿತ, ಹತ್ರಾಸ್‌ ಸಂಸದ ಹೃದಯಾಘಾತದಿಂದ ನಿಧನ

    ಬಿಜೆಪಿ ಟಿಕೆಟ್‌ ವಂಚಿತ, ಹತ್ರಾಸ್‌ ಸಂಸದ ಹೃದಯಾಘಾತದಿಂದ ನಿಧನ

    ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‌ನ ಬಿಜೆಪಿ ಸಂಸದ ರಾಜವೀರ್ ದಿಲೇರ್ (Hathras BJP MP Rajveer Diler) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

    ವರದಿಗಳ ಪ್ರಕಾರ, ಸಂಸದರು ಅಲಿಘರ್‌ನಲ್ಲಿರುವ ತಮ್ಮ ನಿವಾಸದಲ್ಲಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋಹಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸಂಬಂಧಿಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಯೋಗಿ ಸಂತಾಪ: ಬಿಜೆಪಿ ಸಂಸದರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸಂತಾಪ ಸೂಚಿಸಿದ್ದಾರೆ. ಹತ್ರಾಸ್ ಲೋಕಸಭಾ ಕ್ಷೇತ್ರದ ಸಂಸದ ರಾಜವೀರ್ ಸಿಂಗ್ ದಿಲೇರ್ ಜಿ ಅವರ ಅಕಾಲಿಕ ನಿಧನವು ಬಿಜೆಪಿ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿದ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಭಗವಂತ ಶ್ರೀರಾಮನಲ್ಲಿ ಪ್ರಾರ್ಥನೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ತಮ್ಮ ಎಕ್ಸ್‌ ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Lok Sabha Election 2024: 14 ಕ್ಷೇತ್ರದಲ್ಲಿ 3 ದಿನ ಮದ್ಯ ಮಾರಾಟ ಬಂದ್

    ರಾಜವೀರ್ ದಿಲೇರ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಬಿಜೆಪಿ ಟಿಕೆಟ್‌ ಕೊಡಲು ನಿರಾಕರಿಸಿತ್ತು. ಬದಲಾಗಿ ಅನುಪ್ ಪ್ರಧಾನ್ ಅವರನ್ನು ಕಣಕ್ಕಿಳಿಸಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ರಾಜ್ವಿರ್ ದಿಲೇರ್ 260,208 ಮತಗಳ ಅಂತರದಿಂದ ಗೆದ್ದಿದ್ದರು. ರಾಜ್‌ವೀರ್ ದಿಲೆರ್ 684,299 ಮತಗಳನ್ನು ಪಡೆದಿದ್ದು, ಸಮಾಜವಾದಿ ಪಕ್ಷದ ರಾಮ್‌ಜಿ ಲಾಲ್ ಸುಮನ್ ಅವರನ್ನು ಸೋಲಿಸಿದ್ದರು.

  • ಬಿಜೆಪಿಗೆ ಮತ ನೀಡಿ, ಇಲ್ಲದಿದ್ದರೆ ನರಕಕ್ಕೆ ಹೋಗ್ತೀರಿ: ಸಂಸದ ಡಿ.ಅರವಿಂದ್

    ಬಿಜೆಪಿಗೆ ಮತ ನೀಡಿ, ಇಲ್ಲದಿದ್ದರೆ ನರಕಕ್ಕೆ ಹೋಗ್ತೀರಿ: ಸಂಸದ ಡಿ.ಅರವಿಂದ್

    ಹೈದರಾಬಾದ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ. ಒಂದು ವೇಳೆ ನೀವು ಬಿಜೆಪಿಗೆ ಮತ ನೀಡದಿದ್ದರೆ ನೀವು ನರಕಕ್ಕೆ ಹೋಗ್ತೀರಿ ಎಂದು ನಿಜಾಮಾಬಾದ್ ಸಂಸದ ಡಿ.ಅರವಿಂದ್ (Nizamabad Lok Sabha MP D Arvind) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇತ್ತೀಚೆಗೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದರ ಹೇಳಿಕೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

    ವೀಡಿಯೋದಲ್ಲೇನಿದೆ..?: ಸಾರ್ವಜನಿಕರಿಗೆ ಆಹಾರ ನೀಡುವ ಕೈಯನ್ನು ಕಚ್ಚಬೇಡಿ. ನೀವು ಸ್ವರ್ಗಕ್ಕೆ ಹೋಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭ ಪಡೆದು ಬಿಜೆಪಿಯನ್ನು ಬೆಂಬಲಿಸದಿದ್ದರೆ ಜನರು ನರಕಕ್ಕೆ ಹೋಗುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ನಮ್ಮ ವಿರುದ್ಧ ಮಾತಾಡಿದ್ರೆ ಮೂಳೆ ಮುರಿತೀವಿ: ಟಿಎಂಸಿ ಮುಖಂಡನಿಂದ ಜನರಿಗೆ ಧಮ್ಕಿ

    ಇದೇ ವೇಳೆ ತಮ್ಮ ಪಕ್ಷವಾದ ಬಿಜೆಪಿಯನ್ನು (BJP) ತೋರಿಸಿ, ಸ್ವರ್ಗಕ್ಕೆ ಹೋಗಬೇಕಾದರೆ ದೇಶ ಸೇವೆ ಮಾಡುವವರನ್ನು ಬೆಂಬಲಿಸಿ ಮತ ನೀಡಬೇಕು ಎಂದು ಸಭೆಗೆ ಮನವಿ ಮಾಡಿದರು. ಇಲ್ಲದಿದ್ದರೆ ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮಗೆ ಉಚಿತ ಆಹಾರ, ಉಚಿತ ಗ್ಯಾಸ್, ಉತ್ತಮ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಮದುವೆಗೆ ಹಣವನ್ನು ಕಳುಹಿಸುತ್ತಿದ್ದಾರೆ. ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಿದ್ದಾರೆ. ತ್ರಿವಳಿ ತಲಾಖ್ ರದ್ದುಪಡಿಸಿ ನಿಮ್ಮ ಆತ್ಮಗೌರವವನ್ನು ಖಾತ್ರಿಪಡಿಸಿದೆ ಎಂದರು.

    ಹಿಂದೂಗಳೆಲ್ಲ ಒಗ್ಗೂಡಿ ಬಿಜೆಪಿಗೆ ಮತ ಹಾಕಬೇಕು. ಹಿಂದೂ ಸಮಾಜದಲ್ಲಿದ್ದು ಬಿಜೆಪಿಯನ್ನು ಬೆಂಬಲಿಸದವರೇ ನಿಜವಾದ ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಬಿಜೆಪಿ ಸಂಸದರ ವೀಡಿಯೊ ವೈರಲ್ ಆದ ಬಳಿಕ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  • 4 ವರ್ಷದ ಮಗುವಿನ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ನಿಂದಲೇ ಅತ್ಯಾಚಾರ – ಗ್ರಾಮಸ್ಥರಿಂದ ಥಳಿತ, ಕಠಿಣ ಶಿಕ್ಷೆಗೆ ಆಗ್ರಹ

    4 ವರ್ಷದ ಮಗುವಿನ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ನಿಂದಲೇ ಅತ್ಯಾಚಾರ – ಗ್ರಾಮಸ್ಥರಿಂದ ಥಳಿತ, ಕಠಿಣ ಶಿಕ್ಷೆಗೆ ಆಗ್ರಹ

    ಜೈಪುರ: 4 ವರ್ಷದ ಮಗುವಿನ ಮೇಲೆ ಸಬ್ ಇನ್ಸ್‌ಪೆಕ್ಟರ್‌ (Sub Inspector) ಒಬ್ಬ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ (Rajasthan) ದೌಸಾ ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಠಾಣೆಗೆ ನುಗ್ಗಿ ಪೊಲೀಸ್‌ ಅಧಿಕಾರಿಯನ್ನ ಹಿಗ್ಗಾಮುಗ್ಗ ಥಳಿಸಿ, ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಠಾಣೆಯ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಗ್ರಾಮಸ್ಥರು ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ತಿಹಾರ್‌ ಜೈಲಿನಿಂದ ಬಂದು ಅನಾರೋಗ್ಯ ಪೀಡಿತ ಪತ್ನಿ ಭೇಟಿಯಾದ ಮನೀಶ್ ಸಿಸೋಡಿಯಾ

    ಚುನಾವಣಾ ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್ ಶುಕ್ರವಾರ ಮಧ್ಯಾಹ್ನ ಮಗುವನ್ನ ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಆರೋಪಿ ಅತ್ಯಾಚಾರ ಎಸಗಿದ ನಂತರ ಸಮೀಪದಲ್ಲಿ ವಾಸಿಸುವ ಕುಟುಂಬಸ್ಥರು ದೂರು ನೀಡಿದ್ದು, ಎಸ್‌ಐ ಭೂಪೇಂದ್ರ ರಾಹುವಾಸ್ ಪೊಲೀಸ್ ಠಾಣೆಯಲ್ಲಿ (Rahuwas Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಐವರು ಸಾವು, 60 ಮಂದಿಗೆ ಗಾಯ

    ಸದ್ಯ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಆರೋಪಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಬಜರಂಗ್‌ ಸಿಂಗ್‌ ತಿಳಿಸಿದ್ದಾರೆ. ಇದನ್ನೂ ಓದಿ: ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ- 6 ಗ್ಯಾರಂಟಿ ಘೋಷಿಸಿದ ತೆಲಂಗಾಣ ಕಾಂಗ್ರೆಸ್

    ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬಿಜೆಪಿ ಸಂಸದ (BJP MP) ಕಿರೋಡಿ ಲಾಲ್‌ ಮೀನಾ ಮಾತನಾಡಿ, ಪುಟ್ಟ ದಲಿತ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದ ನಂತರ ಜನ ರೊಚ್ಚಿಗೆದ್ದಿದ್ದಾರೆ. ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ. ಸಂತ್ರಸ್ತ ಮಗುವಿನ ಕುಟುಂಬಕ್ಕೆ ನ್ಯಾಯ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಸಂತ್ರಸ್ತ ಮಗುವಿನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

  • 2 ದಿನಗಳಲ್ಲಿ 31 ಮಂದಿ ಸಾವು- ಆಸ್ಪತ್ರೆಯ ಕೊಳಕು ಟಾಯ್ಲೆಟ್ ಕ್ಲೀನ್ ಮಾಡಿಸಿದ ಬಿಜೆಪಿ ಎಂಪಿ

    2 ದಿನಗಳಲ್ಲಿ 31 ಮಂದಿ ಸಾವು- ಆಸ್ಪತ್ರೆಯ ಕೊಳಕು ಟಾಯ್ಲೆಟ್ ಕ್ಲೀನ್ ಮಾಡಿಸಿದ ಬಿಜೆಪಿ ಎಂಪಿ

    ಮುಂಬೈ: 2 ದಿನಗಳಲ್ಲಿ ಸುಮಾರು 31 ಮಂದಿ ಸಾವನ್ನಪ್ಪಿದ ಜಿಲ್ಲಾಸ್ಪತ್ರೆಯ (Maharastra District Hospital) ಟಾಯ್ಲೆಟ್ ಕ್ಲೀನ್ ಮಾಡುವ ಮೂಲಕ ಮಹಾರಾಷ್ಟ್ರದ ಬಿಜೆಪಿ ಸಂಸದರೊಬ್ಬರು (BJP MP) ಸುದ್ದಿಯಾಗಿದ್ದಾರೆ.

    ಹೇಮಂತ್ ಪಾಟೀಲ್ (Hemanth Patil) ಅವರು ಇಂದು ಮಹಾರಾಷ್ಟ್ರದ ನಾಂದೆಡ್ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪ್ರೆಯ ಆವರಣದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಶೌಚಾಲಯಗಳ ಪರಿಶೀಲನೆ ನಡೆಸಿದ್ದಾರೆ. ಆಗ ಅಲ್ಲಿನಕೊಳಕು ನೋಡಿ ಸಂಸದರು ಮತ್ತೆ ಗರಂ ಆಗಿದ್ದಾರೆ. ಅಲ್ಲದೆ ವೈದ್ಯಾಧಿಕಾರಿಗಳು ಕರೆದು ಪೊರಕೆಯಿಂದ ಅದನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ.

    ಇದನ್ನು ಅಲ್ಲಿನ ಸಿಬ್ಬಂದಿ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಸಂಸದರು ಪೈಪ್ ಹಿಡಿದು ಬೀರು ಬಡುತ್ತಿದ್ದರೆ, ಆಸ್ಪತ್ರೆಯ ಡೀನ್ ಗಲೀಜಾಗಿದ್ದ ಟಾಯ್ಲೆಟ್ ತೊಳೆಯುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬಾಲಕರಿಗೆ ಚಾಕ್ಲೇಟ್‌ ಆಸೆ ತೋರಿಸಿ ಅತ್ಯಾಚಾರ; ಹುಬ್ಬಳ್ಳಿಯಲ್ಲಿ ವಿಕೃತ ಸಲಿಂಗಕಾಮಿ ಬಂಧನ

    ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2 ರ ನಡುವೆ ಸಂಭವಿಸಿದ ಸಾವುಗಳಿಗೆ ಆಸ್ಪತ್ರೆಯ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಇದೇ ವೇಳೆ ಪಾಟೀಲ್ ಒತ್ತಾಯಿಸಿದರು. ಪಾಟೀಲ್ ಭೇಟಿ ವೇಳೆ ಆಡಳಿತ ಮತ್ತು ಪೊಲೀಸರೊಂದಿಗೆ ಆಸ್ಪತ್ರೆ ಆವರಣ ವೀಕ್ಷಣೆ ಮಾಡಿದರು. ಅಲ್ಲದೆ ಕೆಲವು ರೋಗಿಗಳೊಂದಿಗೆ ಸಂವಾದ ನಡೆಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದರು, ಡೀನ್‍ನ ಶೌಚಾಲಯದ ಬ್ಲಾಕ್‍ಗೆ ಭೇಟಿ ನೀಡಿದ್ದು, ತಿಂಗಳಿಂದ ಬಳಕೆಯಾಗದೆ ಉಳಿದಿರುವ ಸ್ನಾನಗೃಹಗಳು ಕೊಳಕಿನಿಂದ ತುಂಬಿರುವುದು ಕಂಡುಬಂದಿದೆ. ಇನ್ನು ಮಕ್ಕಳ ಬ್ಲಾಕ್‍ನಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಮಹಿಳೆಯರ ಬ್ಲಾಕ್‍ನಲ್ಲಿ ಮದ್ಯದ ಬಾಟಲಿಗಳು ತುಂಬಿದ್ದವು ಎಂದರು.

    ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಓಡಾಡುತ್ತಿವೆ. ಸುತ್ತಲೂ ಸಾಕಷ್ಟು ಕೊಳಕು ಬಿದ್ದಿದ್ದು, ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ಆಸ್ಪತ್ರೆಯ ಡೀನ್ ಮತ್ತು ವಿಭಾಗದ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shindhe) ಅವರಿಗೆ ಸಂಸದರು ಮನವಿ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ

    ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ

    ಕೋಲ್ಕತ್ತಾ: ಭಾರತ (India) ಎಂಬ ನಾಮಕರಣವನ್ನು ವಿರೋಧಿಸುವವರು ದಯವಿಟ್ಟು ದೇಶ ತೊರೆಯಬಹುದು ಎಂದು ಪಶ್ಚಿಮ ಬಂಗಾಳ (West Bengal) ಬಿಜೆಪಿ ಸಂಸದ ದಿಲೀಪ್ ಘೋಷ್ (Dilip Ghosh) ಹೇಳಿದ್ದಾರೆ.

    ಪಶ್ಚಿಮ ಬಂಗಾಳದ ತಮ್ಮ ಲೋಕಸಭಾ ಕ್ಷೇತ್ರದಲ್ಲಿರುವ ಖಾರಗ್‌ಪುರ ನಗರದಲ್ಲಿ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ಯಾರೆಲ್ಲ ವಿರೋಧಿಸುತ್ತಾರೋ ಅಥವಾ ಯರಿಗೆಲ್ಲ ಈ ಹೆಸರು ಇಷ್ಟ ಇಲ್ಲವೋ ಅವರೆಲ್ಲಾ ಆರಾಮಾಗಿ ದೇಶ ತೊರೆಯಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇದೇ ವೇಳೆ ಟಿಎಂಸಿ (TMC) ಹಾಗೂ ಸಿಪಿಐ (CPI) ವಿರುದ್ಧವೂ ವಾಗ್ದಾಳಿ ನಡೆಸಿದ ದಿಲೀಪ್, ಟಿಎಂಸಿಯ ನನ್ನ ಸ್ನೇಹಿತರಿಗೆ ‘ಭಾರತ್’ ಅಥವಾ ಇಂಡಿಯಾ ಎಂದು ಏಕೆ ಹೇಳುತ್ತಿದ್ದಾರೆ?, ಅದರ ಹಿಂದಿನ ಇತಿಹಾಸ ಏನು ಎಂದು ತಿಳಿದಿಲ್ಲ. ಸಿಪಿಎಂನವರಿಗೂ ಇದು ತುಂಬಾ ಕಷ್ಟ, ಯಾವಾಗಲೂ ವಿದೇಶಗಳತ್ತ ಗಮನ ಹರಿಸುತ್ತಾರೆ ಎಂದರು. ಇದನ್ನೂ ಓದಿ: ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ನೌಕರರ ಹಕ್ಕು: ರಾಮಲಿಂಗಾ ರೆಡ್ಡಿ

    ಕೋಲ್ಕತ್ತಾದಿಂದ (Kolkata) ವಿದೇಶಿಯರ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುವುದಾಗಿ ಸಂಸದರು ಭರವಸೆ ನೀಡಿದರು. ಕೋಲ್ಕತ್ತಾದ ಹಲವು ಬೀದಿಗಳಲ್ಲಿ ಬ್ರಿಟಿಷರ ಅನೇಕ ಪ್ರತಿಮೆಗಳು ಇದ್ದವು. ಅವು ಈಗ ಎಲ್ಲಿವೆ? ಬಿಜೆಪಿ ಅಧಿಕಾರಕ್ಕೆ ಬಂದಾಗ ನಾವು ಎಲ್ಲವನ್ನೂ ಕಿತ್ತು ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಇಡುತ್ತೇವೆ. ಸಂಗ್ರಹಾಲಯದ ವಸ್ತುಗಳು ಮ್ಯೂಸಿಯಂನಲ್ಲಿ ಉಳಿಯುತ್ತವೆ. ಬೀದಿಗಳಲ್ಲಿ ಅಲ್ಲ. ನಮ್ಮ ಮಕ್ಕಳು ಬೆಳಗ್ಗೆ ಎದ್ದು ವಿದೇಶಿಯರ ಮುಖಗಳನ್ನು ಅನುಸರಿಸದಂತೆ ನೋಡುತ್ತಾರೆ ಎಂದು ದಿಲೀಪ್ ಘೋಷ್ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]