Tag: ಬಿಜೆಪಿ ಶಾಸಕರು

  • ಅಕ್ಬರುದ್ದೀನ್‌ ಓವೈಸಿಗೆ ಹಂಗಾಮಿ ಸ್ಪೀಕರ್‌ ಪಟ್ಟ – ಪ್ರಮಾಣ ವಚನ ಬಹಿಷ್ಕರಿಸಿದ ಬಿಜೆಪಿ ಶಾಸಕರು

    ಅಕ್ಬರುದ್ದೀನ್‌ ಓವೈಸಿಗೆ ಹಂಗಾಮಿ ಸ್ಪೀಕರ್‌ ಪಟ್ಟ – ಪ್ರಮಾಣ ವಚನ ಬಹಿಷ್ಕರಿಸಿದ ಬಿಜೆಪಿ ಶಾಸಕರು

    ಹೈದರಾಬಾದ್: ಎಐಎಂಐಎಂ‌ (AIMIM) ಪಕ್ಷದ ಅಕ್ಬರುದ್ದೀನ್ ಓವೈಸಿ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ವಿರೋಧಿಸಿ ತೆಲಂಗಾಣ ಬಿಜೆಪಿ ಇಂದು (ಶುಕ್ರವಾರ) ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದೆ. ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಜವಾಬ್ದಾರಿಯನ್ನು ಹಂಗಾಮಿ ಸ್ಪೀಕರ್‌ಗೆ ವಹಿಸಲಾಗಿತ್ತು.

    ವಿಧಾನಸಭಾ ಚುನಾವಣೆಯಲ್ಲಿ ಗೋಶಾಮಹಲ್‌ನಿಂದ ಗೆದ್ದಿದ್ದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರು, ಎಐಎಂಐಎಂ ಮುಂದೆ ಜೀವಂತ ಇರುವವರೆಗೂ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಪೂರ್ಣಾವಧಿ ಸ್ಪೀಕರ್ ನೇಮಕವಾದ ಬಳಿಕವಷ್ಟೇ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಹಂಗಾಮಿ ಸ್ಪೀಕರ್‌ ಆಗಿ AIMIM ಶಾಸಕ ಅಕ್ಬರುದ್ದೀನ್ ಓವೈಸಿ ಪ್ರಮಾಣ ವಚನ

    ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಯ (ಅಕ್ಬರುದ್ದೀನ್ ಓವೈಸಿ) ಮುಂದೆ ನಾನು ಪ್ರಮಾಣ ವಚನ ಸ್ವೀಕರಿಸಬಹುದೇ ಎಂದು ರಾಜಾ ಸಿಂಗ್ ಕೇಳಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿ ಕಿಶನ್ ರೆಡ್ಡಿ ಮಾತನಾಡಿ, ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಸಂಪ್ರದಾಯ. ಅದಕ್ಕೆ ವಿರುದ್ಧವಾದ ಓವೈಸಿ ನೇಮಕವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ನಿಲುವು ವ್ಯಕ್ತಪಡಿಸಿದ್ದಾರೆ.

    ಒವೈಸಿ ಅವರು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಚುನಾಯಿತ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿ ಶಾಸಕರು ಸಮಾರಂಭ ಬಹಿಷ್ಕರಿಸಿದ್ದಾರೆ. ಇದನ್ನೂ ಓದಿ: ಐಸಿಸ್‌ ಉಗ್ರರೊಂದಿಗೆ ನಂಟು; ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

    ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್‌ನ ರೇವಂತ್ ರೆಡ್ಡಿ ಅವರು ತಮ್ಮ ಹಿಂದಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಂತೆ ಎಐಎಂಐಎಂಗೆ ಹೆದರುತ್ತಾರೆ. ಹೀಗಾಗಿ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ.

    ಹಂಗಾಮಿ ಸ್ಪೀಕರ್ ಮಾಡಬಹುದಾದ ಅನೇಕ ಹಿರಿಯ ಶಾಸಕರಿದ್ದಾರೆ. ಆದರೆ ಹೊಸ ಮುಖ್ಯಮಂತ್ರಿ ಅಲ್ಪಸಂಖ್ಯಾತರು ಮತ್ತು ಎಐಎಂಐಎಂ ನಾಯಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

  • ಮಮತಾ ಬ್ಯಾನರ್ಜಿ ಭಾಷಣದ ವೇಳೆ ʼಮೋದಿ, ಮೋದಿʼ ಎಂದು ಕೂಗಿದ ಬಿಜೆಪಿ ಶಾಸಕರು

    ಮಮತಾ ಬ್ಯಾನರ್ಜಿ ಭಾಷಣದ ವೇಳೆ ʼಮೋದಿ, ಮೋದಿʼ ಎಂದು ಕೂಗಿದ ಬಿಜೆಪಿ ಶಾಸಕರು

    ಕೋಲ್ಕತ್ತಾ: ಸದನದಲ್ಲಿ ʼಮೋದಿ, ಮೋದಿʼ ಎಂದು ಬಿಜೆಪಿ ಶಾಸಕರು ಕೂಗುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾಷಣಕ್ಕೆ ಅಡ್ಡಿಪಡಿಸಿರುವ ಪ್ರಸಂಗ ನಡೆದಿದೆ.

    ಸದನದಲ್ಲಿ ರಾಜ್ಯಪಾಲ ಜಗದೀಶ್‌ ಧನಕರ್‌ ಅವರ ಭಾಷಣಕ್ಕೆ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಸಿಎಂ ಭಾಷಣಕ್ಕೆ ಅನುವು ಮಾಡಿಕೊಡದ ಬಿಜೆಪಿ ಶಾಸಕರು, ʼಮೋದಿ.. ಮೋದಿʼ ಎಂದು ಕೂಗಿ ಅಡ್ಡಿಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‌ ಮಾಫಿಯಾಗಳಿಂದ ತುಂಬಿದೆ: ಎಎಪಿ ಸಿಎಂ ಅಭ್ಯರ್ಥಿ

    ಇದಕ್ಕೆ ತಿರುಗೇಟು ನೀಡಲು ಮುಂದಾದ ಮಮತಾ ಬ್ಯಾನರ್ಜಿ ಅವರು, ʼಜೈ ಬಂಗಾಳʼ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ʼಜೈ ಶ್ರೀರಾಮ್‌ʼ ಬದಲಿಗೆ ʼಜೈ ಸಿಯಾ ರಾಮ್‌ʼ ಅಂತ ಕೂಗಿ ಎಂದು ಶಾಸಕರಿಗೆ ಸಿಎಂ ತಿಳಿಸಿದ್ದಾರೆ.

    ಮಮತಾ ಬ್ಯಾನರ್ಜಿ ಅವರು ಸದನದಲ್ಲಿ ತಮ್ಮ ಭಾಷಣ ಆರಂಭಿಸಿದ ಸಂದರ್ಭದಲ್ಲಿ ಬಿಜೆಪಿ ಶಾಸಕರು, ʻಮೋದಿ.. ಮೋದಿ, ಭಾರತ್‌ ಮಾತಾ ಕೀ ಜೈ, ಜೈ ಶ್ರೀರಾಮ್‌ʼ ಎಂಬ ಘೋಷಣೆಗಳನ್ನು ಕೂಗಿದರು. ಸುಮಾರು 40 ನಿಮಿಷಗಳ ಕಾಲ ಘೋಷಣೆಯನ್ನು ಮುಂದುವರಿಸಿದ ಘಟನೆ ನಡೆಯಿತು. ಇದನ್ನೂ ಓದಿ: UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ

    ಇದರಿಂದ ಅಸಮಾಧಾನಗೊಂಡ ಬ್ಯಾನರ್ಜಿ ಅವರು, ತೃಣಮೂಲ ಕಾಂಗ್ರೆಸ್‌ ಶಾಂತಿಗಾಗಿ ಹೋರಾಡುತ್ತಿದೆ. ಆದರೆ ಕೇಸರಿ ಪಕ್ಷವು ರಾಜ್ಯದಲ್ಲಿ ಶಾಂತಿ ಕದಡಲು ಉತ್ಸುಕವಾಗಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಬಿಜೆಪಿಯವರು ವಿಧಾನಸಭಾ ಮತ್ತು ಮುನ್ಸಿಪಲ್‌ ಚುನಾವಣೆಯಲ್ಲಿ ಸೋತ ನಂತರವೂ ಸದನದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ಅವರು ನಾಚಿಕೆಗೇಡಿನವರು. ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 109 ಸ್ಥಾನಗಳ ಪೈಕಿ 105 ಸ್ಥಾನಗಳನ್ನು ಗೆದ್ದಿದೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ.

  • ಜಾರಕಿಹೊಳಿ ಮನೆಯಲ್ಲಿ ಸಚಿವಾಕಾಂಕ್ಷಿಗಳ ರಹಸ್ಯ ಸಭೆ- ಇಲ್ಲಿದೆ ಇನ್‍ಸೈಡ್ ಮಾಹಿತಿ

    ಜಾರಕಿಹೊಳಿ ಮನೆಯಲ್ಲಿ ಸಚಿವಾಕಾಂಕ್ಷಿಗಳ ರಹಸ್ಯ ಸಭೆ- ಇಲ್ಲಿದೆ ಇನ್‍ಸೈಡ್ ಮಾಹಿತಿ

    – ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಬಾರದು
    – ಮೂಲ ಬಿಜೆಪಿ ನಾಯಕರಿಗೂ ಜಾರಕಿಹೊಳಿ ನಾಯಕ?

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಬೆನ್ನಲ್ಲೇ ಬಿಜೆಪಿಯಲ್ಲಿ ರಹಸ್ಯ ಸಭೆ ನಡೆಸಲಾಗಿದ್ದು, ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿದ ಸಚಿವಾಕಾಂಕ್ಷಿಗಳು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

    ಸಚಿವಾಕಾಂಕ್ಷಿಗಳಾದ ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜುಗೌಡ, ರೇಣುಕಾಚಾರ್ಯ, ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳು ಸಭೆ ನಡೆಸಿದ್ದಾರೆ. ಸಚಿವ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಸಿಎಂಗೆ ಸಚಿವ ಸ್ಥಾನದ ಬೇಡಿಕೆ ಸಲ್ಲಿಸುವುದು, ಹಾಲಿ ಸಚಿವರನ್ನು ಕೈ ಬಿಟ್ಟರೆ ಮತ್ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬೆಲ್ಲ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಸಚಿವಾಕಾಂಕ್ಷಿಗಳ ಪರ ಹೈಕಮಾಂಡ್ ಮುಂದೆ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಲಿದ್ದಾರೆ. ಸದ್ಯದಲ್ಲೇ ದೆಹಲಿಗೆ ತೆರಳಲು ಸಚಿವ ರಮೇಶ್ ಜಾರಕಿಹೊಳಿ ನಿರ್ಧಾರಿಸಿದ್ದಾರೆ. ಸಿಎಂಗೂ ಮುನ್ನ ದೆಹಲಿಗೆ ಸಾಹುಕಾರ್ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಸಭೆ ಮೂಲಕ ವಲಸಿಗರಿಗೂ ನಾಯಕರಾಗಿದ್ದ ರಮೇಶ್ ಜಾರಕಿಹೊಳಿ, ಇದೀಗ ಮೂಲ ಬಿಜೆಪಿ ಶಾಸಕರಿಗೂ ಲೀಡರ್ ಆದರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಸಚಿವ ಸ್ಥಾನ ಗಿಟ್ಟಿಸಲು ರಮೇಶ್ ಜಾರಕಿಹೊಳಿ ಮೂಲಕ ಲಾಬಿಗಿಳಿದರಾ ಮೂಲ ಬಿಜೆಪಿಗರು ಎಂಬ ಪ್ರಶ್ನೆ ಇದೀಗ ಮೂಡುತ್ತಿದ್ದು, ಮೂಲ ಬಿಜೆಪಿ ಆಕಾಂಕ್ಷಿ ಶಾಸಕರ ನಡೆ ಕುತೂಹಲ ಹುಟ್ಟಿಸಿದೆ.

    ಸಚಿವ ಸಂಪುಟ ಕಸರತ್ತು ಸನಿಹ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕರು ಒಟ್ಟಾಗಿದ್ದು, ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಗೆದ್ದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿಗೂ ಶಾಸಕರ ಟೀಂ ಒತ್ತಡ ಹೇರಿದ್ದು, ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಪರ ಬ್ಯಾಟಿಂಗ್ ನಡೆಸದಂತೆ ಸಾಹುಕಾರ್‍ಗೆ ಒತ್ತಾಯಿಸಿದ್ದಾರೆ. ಇಂದು ನಡೆದ ಸಭೆಯಲ್ಲಿ ಆಕಾಂಕ್ಷಿ ಶಾಸಕರಿಂದ ಒತ್ತಡ ಹೆಚ್ಚಿದೆ. ಹೈಕಮಾಂಡ್ ನಾಯಕರ ಭೇಟಿ ವೇಳೆ ಯೋಗೇಶ್ವರ್ ವಿಚಾರ ಪ್ರಸ್ತಾಪಿಸದಂತೆ ತಿಳಿಸಿದ್ದಾರೆ. ಸಚಿವಾಕಾಂಕ್ಷಿ ಶಾಸಕರ ಒತ್ತಾಯಕ್ಕೆ ಸಾಹುಕಾರ್ ಸಹ ಒಪ್ಪಿದ್ದಾರೆ ಎನ್ನಲಾಗುತ್ತಿದೆ.

    ರಮೇಶ್ ಜಾರಕಿಹೊಳಿ ಸಭೆಯಲ್ಲಿ ನಡೆದಿದ್ದೇನು?
    ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್‍ಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈ ಕಮಾಂಡ್ ಭೇಟಿ ವೇಳೆ ಮಾತನಾಡಬಾರದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ರಮೇಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ. ನೀವು ಆ ಶಾಸಕರ ಬಗ್ಗೆ ಮಾತನಾಡಬಾರದು ಎಂದಿದ್ದಾರೆ. ಈ ವೇಳೆ ನಾನು ಯೋಗೇಶ್ವರ್ ಪರ ಲಾಬಿ ನಡೆಸುವುದಿಲ್ಲ ಎಂದ ರಮೇಶ್ ಜಾರಕಿಹೊಳಿ ಭರಸವೆ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಮಂತ್ರಿಯಾಗಲು ಸಹಾಯ ಮಾಡಬಾರದು. ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲರೂ ವಿಶ್ವಾಸ ಇರಿಸಬೇಕು. ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ರನ್ನು ಮಂತ್ರಿ ಸ್ಥಾನಕ್ಕೆ ಶಿಫಾರಸು ಮಾಡಬಾರದು. ಸಚಿವ ಸಂಪುಟ ಪುನಾರಚನೆ ಆದಷ್ಟು ಬೇಗ ಮಾಡಿ ಮುಗಿಸಬೇಕು. ಈ ಕುರಿತು ಸಿಎಂಗೆ ಮನವಿ ಮಾಡಲು ಇಂದು ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

  • ಬೆಳಗಾವಿ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ ಸಚಿವ ಸ್ಥಾನ ಕೇಳೋದು ಸಹಜ: ಶಾಸಕ ಬೆಲ್ಲದ

    ಬೆಳಗಾವಿ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ ಸಚಿವ ಸ್ಥಾನ ಕೇಳೋದು ಸಹಜ: ಶಾಸಕ ಬೆಲ್ಲದ

    ಧಾರವಾಡ: ಬಿಜೆಪಿ ಸರ್ಕಾರ ಬಂದ ಮೇಲೆ ಪ್ರವಾಹ ಆಯ್ತು, ಈಗ ಕೊರೊನಾ ಬಂದಿದೆ. ಈ ಹಿನ್ನೆಲೆ ಸಿಎಂ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಶಾಸಕರು ಫಂಡ್ ಹೆಚ್ಚು-ಕಡಿಮೆಯಾಗಿವೆ ಎಂದು ಹೇಳಿದ್ದಾರೆ, ಪಕ್ಷದ ಸಭೆಯಲ್ಲಿ ಅದನ್ನು ಸರಿ ಮಾಡ್ತಾರೆ ಎಂದು ಧಾರವಾಡ ಶಾಸಕ ಅರವಿಂದ್ ಬೆಲ್ಲದ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಶಾಸಕರಾದವರಿಗೆಲ್ಲರಿಗೂ ಸಚಿವರಾಗುವ ಆಸೆ ಇದ್ದೇ ಇರುತ್ತದೆ. ಎಲ್ಲ ಪಕ್ಷದ ಸಿಎಂ ಇದ್ದಾಗಲೂ ಅದು ಇದ್ದದ್ದೆ. ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಇದನ್ನು ಬಗೆಹರಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು.

    ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಪ್ರಾಬಲ್ಯ ಇದೆ ಎಂದು ಒಪ್ಪಿಕೊಂಡ ಶಾಸಕ ಬೆಲ್ಲದ, ಬೆಳಗಾವಿ ದೊಡ್ಡ ಜಿಲ್ಲೆ, ರಾಜ್ಯದಲ್ಲೇ ಅತಿ ಹೆಚ್ಚು ಬಿಜೆಪಿ ಶಾಸಕರಿರುವ ಜಿಲ್ಲೆ. ಹೀಗಾಗಿ ಅಲ್ಲಿ ನ ಶಾಸಕರು ಸಚಿವ ಸ್ಥಾನ ಕೇಳುವುದು ಸಹಜ ಎಂದು ಅಭಿಪ್ರಾಯಪಟ್ಟರು.

  • ಬೆಂಗ್ಳೂರಲ್ಲಿ ನಡೆದಿದ್ದು ಅತೃಪ್ತರ ಸಭೆ ಅಲ್ಲ: ಎಸ್.ಟಿ ಸೋಮಶೇಖರ್

    ಬೆಂಗ್ಳೂರಲ್ಲಿ ನಡೆದಿದ್ದು ಅತೃಪ್ತರ ಸಭೆ ಅಲ್ಲ: ಎಸ್.ಟಿ ಸೋಮಶೇಖರ್

    – ಡಿಕೆಶಿ ವಿರುದ್ಧ ಎಸ್‍ಟಿಎಸ್ ಗುಡುಗು

    ಮೈಸೂರು: ಮೊನ್ನೆ ಬೆಂಗಳೂರಿನಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಅತೃಪ್ತರ ಸಭೆ ಅಲ್ಲ. ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರನಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಶಾಸಕರ ಒಟ್ಟಾಗಿ ಸೇರಿಸಿದ್ದಾರೆ ಅಷ್ಟೆ. ಈ ಸಭೆ ಸಿಎಂ ವಿರುದ್ಧ ಅಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಮ್ಮವರ ವಿಧಾನಪರಿಷತ್ ನೇಮಕ ಹಾಗೂ ರಾಜ್ಯಸಭೆ ಟಿಕೆಟ್‍ಗಾಗಿ ಒತ್ತಡ ಹೇರಲು ನಡೆದಿರುವ ಸಭೆ ಇದು. ಈ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಅಲ್ಲಿ ಚರ್ಚೆ ಆಗಿಲ್ಲ ಎಂದರು. ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಶಂಕರ್ ಮೂವರಿಗೂ ವಿಧಾನ ಪರಿಷತ್ ನೇಮಕ ಮಾಡಬೇಕು. ಈ ಬಗ್ಗೆ ಸಿಎಂಗೆ ಹೇಳಿದ್ದೇವೆ. ನಾವೆಲ್ಲ ಶಾಸಕರು ಈ ಮೂವರ ಪರ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

    ಆಪರೇಷನ್ ಕಾಂಗ್ರೆಸ್ ವಿಚಾರದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವೇ ಸ್ವೀಕರಿಸಿಲ್ಲ. ಮೊದಲು ಅವರ ಪಕ್ಷದ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಲಿ. ಆಮೇಲೆ ಉಳಿದದ್ದು ನೋಡಲಿ. ಬಿಜೆಪಿಯಲ್ಲಿ ಅತೃಪ್ತರು, ಅಸಮಾಧಾನಿತರು ಎಂಬುದಿಲ್ಲ ಎಂದು ಹೇಳಿದ್ದಾರೆ.

  • ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು

    ಪಕ್ಷದ ಶಾಸಕರ ಮೇಲೆ ಸಿಎಂಗೆ ಗುಮಾನಿ? ಶಾಸಕರ ಚಲನವಲನ ಬಗ್ಗೆ ಗುಪ್ತಚರ ಕಣ್ಣು

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಬಂದು ಬರೋಬ್ಬರಿ ಆರು ತಿಂಗಳು ತುಂಬಿವೆ. ಆದರೆ ಆರು ತಿಂಗಳ ನಂತರ ಸರ್ಕಾರ, ಪಕ್ಷ, ಸಚಿವರು, ಶಾಸಕರು, ವಲಸಿಗರು ಹೀಗೆ ಎಲ್ಲರ ಎಲ್ಲದರ ವರಸೆಗಳು ನಿಧಾನಕ್ಕೆ ಬದಲಾಗತೊಡಗಿವೆ. ಆರು ತಿಂಗಳ ಹಿಂದಿನ ಬಿಜೆಪಿಗೂ ಈಗಿನ ಬಿಜೆಪಿಗೂ ನಡುವೆ ಬಹಳಷ್ಟು ಬದಲಾವಣೆಗಳು ಆಗಿವೆ, ಆಗತೊಡಗಿವೆ. ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲ ಮುಂದೆ ಹೋಗ್ತೀವಿ, ಉತ್ತಮ ಆಡಳಿತ ಕೊಡ್ತೀವಿ, ಪ್ರಸಕ್ತ ಸರ್ಕಾರದ ಈ ಅವಧಿ ಪೂರೈಸಿ ಮುಂದಿನ ಬಾರಿಗೂ ಬಿಜೆಪಿಯೇ ಬರೋ ಹಾಗೆ ಮಾಡ್ತೀವಿ ಅಂದವರ ಮನಸ್ಥಿತಿ- ಹೇಳಿಕೆಗಳು, ನಿಲುವು- ನಡೆಗಳು ಬಣ್ಣ ಬದಲಾಯಿಸತೊಡಗಿವೆ. ಈಗ ಸರ್ಕಾರ ಮತ್ತು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಇತ್ತೀಚಿನ ವಿದ್ಯಮಾನಗಳಿಂದ ಸಾಬೀತಾಗಿದೆ. ಖುದ್ದು ಈಗಲೂ ಪಕ್ಷದ ಮೇರು ನಾಯಕ, ಸರ್ಕಾರದಲ್ಲೂ ಹಿಡಿತ ಇಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಅವರಿಗೆ ಖುದ್ದು ಪಕ್ಷದ ಶಾಸಕರ ಮೇಲೆಯೇ ನಂಬಿಕೆ ಹೋಗತೊಡಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ಶಾಸಕರ ನಡವಳಿಕೆಗಳ ಮೇಲೆ ಅದಾಗಲೇ ಗುಮಾನಿ ಶುರುವಾಗಿದೆ.

    ಇತ್ತೀಚೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಬಿಜೆಪಿ ಶಾಸಕರು ಸಭೆ ನಡೆಸಿದ್ದರು. ಆ ಸಭೆಯ ಉದ್ದೇಶ ಬಳಿಕ ಅದು ಮಾಧ್ಯಮಗಳಲ್ಲಿ ವರದಿಯಾದ ರೀತಿ ಏನೇ ಇರಬಹುದು. ಆದರೆ ಹೀಗೆ ತಮ್ಮ ಗಮನಕ್ಕೆ ಬರದೇ ಶಾಸಕರು ಗುಪ್ತ ಸಭೆ ಮಾಡಿದ್ದಕ್ಕೆ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶೆಟ್ಟರ್ ನಿವಾಸದ ಸಭೆಯ ಬೆನ್ನಲ್ಲೇ ಪಂಚಮಸಾಲಿ ಶಾಸಕರು ಸಹ ಸ್ವಾಮೀಜಿಗಳ ಜೊತೆ ಸಭೆ ನಡೆಸಿರುವುದು ಯಡಿಯೂರಪ್ಪ ಅವರಲ್ಲಿ ಅಸಮಾಧಾನ ಹಟ್ಟಿಸಿದೆ ಎಂದು ಅವರ ಆಪ್ತ ವರ್ಗ ಹೇಳಿಕೊಂಡಿದೆ. ಇದರ ಜೊತೆ ಬೇರೆ ಬೇರೆ ಭಿನ್ನಮತಗಳು, ರಹಸ್ಯ ಚಲನವಲನಗಳು ನಡೆಯುತ್ತಿರುವುದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಹಲವು ಶಾಸಕರ ಚಲನವಲನಗಳ ಮಾಹಿತಿ ಪಡೆಯಲು ಗುಪ್ತಚರ ದಳವನ್ನು ಛೂ ಬಿಟ್ಟಿದ್ದಾರೆ ಎನ್ನಲಾಗಿದೆ.

    ಶೆಟ್ಟರ್ ನಿವಾಸದ ಸಭೆ ಬಳಿಕ ಎಚ್ಚೆತ್ತುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಗುಪ್ತಚರ ಇಲಾಖೆಗೆ ಸಿಎಂ ಹೊಸ ಟಾಸ್ಕ್ ನೀಡಿದ್ದಾರೆ. ಸಿಎಂ ಗುಪ್ತಚರ ಇಲಾಖೆಗೆ ನೀಡಿದ ಟಾಸ್ಕ್ ನಿಂದಾಗಿ ಯಾರೇ ಪ್ರತ್ಯೇಕ ಸಭೆ ನಡೆಸಿದ್ರು ತಕ್ಷಣ ಮಾಹಿತಿ ಸಿಎಂಗೆ ರವಾನೆ ಆಗಲಿದೆ ಎನ್ನಲಾಗಿದೆ.

    ಸಂಜೆ ಆಗ್ತಿದ್ದಂತೆ ಕಾರ್ಯಪ್ರವೃತ್ತರಾಗುವ ಆ ಇಂಟಲಿಜೆನ್ಸ್ ತಂಡ ಬೆಂಗಳೂರಿನ ಪಂಚತಾರಾ ಹೋಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಗೆ ಬೆಂಗಳೂರಿನ ಎಲ್ಲ ಪಂಚತಾರಾ ಹೋಟೆಲುಗಳಿಗೆ ರೌಂಡ್ಸ್ ಹೊಡೆಯಲು ಸಿಎಂ ಗುಪ್ತಚರ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿಎಂ ಸೂಚನೆ ಮೇರೆಗೆ ಪಂಚತಾರಾ ಹೋಟೆಲ್ ಗಳಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ರೌಂಡ್ಸ್ ಹೊಡೆಯುತ್ತಿದ್ದಾರೆ ಎನ್ನಲಾಗಿದೆ.

    ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿರುವ ಮಾಹಿತಿ ಸಿಕ್ಕರೆ ತಕ್ಷಣ ಸಿಎಂಗೆ ಮಾಹಿತಿ ನೀಡಲಿದೆಯಂತೆ ಗುಪ್ತಚರ ಇಲಾಖೆಯ ಈ ತಂಡ. ಪ್ರತ್ಯೇಕ ಸಭೆಯಲ್ಲಿ ಯಾರೆಲ್ಲ ಇದ್ದಾರೆ, ಸಭೆಯ ಅಜೆಂಡಾ ಏನು, ಎಷ್ಟು ಸಮಯ ಸಭೆ ನಡೆಸಿದ್ರು, ಎಲ್ಲಿ ಸಭೆ ನಡೆಸಿದರು ಎಂಬಿತ್ಯಾದಿ ಮಾಹಿತಿ ತಕ್ಷಣ ಸಿಎಂಗೆ ರವಾನೆ ಆಗಲಿದೆಯಂತೆ. ಸಂಜೆಯಾಗ್ತಿದ್ದಂತೆ ಬೆಂಗಳೂರಿನಲ್ಲಿ ಯಾರೆಲ್ಲ ಬಿಜೆಪಿ ಶಾಸಕರಿದ್ದಾರೆ, ಲೋಕೇಶನ್ ಎಲ್ಲಿ, ಮೀಟಿಂಗ್ ಏನಾದ್ರು ಮಾಡ್ತಿದ್ದಾರಾ ಅಂತಲೂ ಈ ತಂಡ ಪತ್ತೆ ಹಚ್ಚುತ್ತಿದೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಈ ತಂಡ ತಡರಾತ್ರಿವರೆಗೂ ಪಂಚತಾರ ಹೋಟೆಲ್ ಗಳ ರೌಂಡ್ಸ್ ಹೊಡೆಯುತ್ತಿದೆ ಎನ್ನಲಾಗಿದೆ. ಆ ಮೂಲಕ ಸರ್ಕಾರ ಉಳಿಸಿ ಉಳಿದ ಅವಧಿವರೆಗೂ ಎದುರಾಗುವ ಸಮಸ್ಯೆಗಳನ್ನು ಬರದಂತೆ ತಡೆಯಲು ಸಿಎಂ ಯಡಿಯೂರಪ್ಪ ಈ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ನನ್ ಮನೆಗೆ ಬಂದು ಹೋಗಿ ವಿವಾದ ಎಬ್ಬಿಸಬೇಡಿ: ಆಪ್ತರಿಗೆ ಬಿಎಸ್‍ವೈ ವಾರ್ನಿಂಗ್

    ನನ್ ಮನೆಗೆ ಬಂದು ಹೋಗಿ ವಿವಾದ ಎಬ್ಬಿಸಬೇಡಿ: ಆಪ್ತರಿಗೆ ಬಿಎಸ್‍ವೈ ವಾರ್ನಿಂಗ್

    ಬೆಂಗಳೂರು: ಮನೆಗೆ ಹೋಗಿ ಬಂದು ಮಾತನಾಡುವ ಕೆಲವರಿಂದಲೇ ಸಿಎಂ ಬಿಎಸ್ ಯಡಿಯೂರಪ್ಪರಿಗೆ ತೊಂದರೆನಾ? ಯಡಿಯೂರಪ್ಪ ಮನೆಗೆ ಹೋಗುವ ಆಪ್ತ ಶಾಸಕರು ಬಳಿಕ ಮಾತನಾಡಿದ್ರೆ ವಿವಾದ ಆಗುತ್ತಾ? ಈ ಪ್ರಶ್ನೆಗಳಿಗೆ ಯಡಿಯೂರಪ್ಪ ಆಪ್ತ ವಲಯ ಹೌದು ಎನ್ನುತ್ತಿದೆ. ಅದಕ್ಕಾಗಿಯೇ ಯಡಿಯೂರಪ್ಪ ಗರಂ ಆಗಿ ವಾರ್ನಿಂಗ್ ಕೂಡ ಮಾಡಿದ್ದಾರೆ ಎನ್ನಲಾಗಿದೆ.

    ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಮಾತುಕತೆ ಮಾಡಿಕೊಂಡು ಬಂದ ಬಳಿಕ ಮಾಧ್ಯಮಗಳಿಗೆ ಮಾತನಾಡುವುದರಿಂದ ತೊಂದರೆ ಆಗುತ್ತಿದೆಯಂತೆ. ಡಿಸಿಎಂ ಹುದ್ದೆ ವಿವಾದ ಸೇರಿದಂತೆ ಹಲವು ವಿವಾದಗಳು ಯಡಿಯೂರಪ್ಪನವರ ಮೇಲೆ ಪರಿಣಾಮ ಬೀರುತ್ತಿವೆ ಎನ್ನಲಾಗಿದೆ. ಯಡಿಯೂರಪ್ಪ ನಿವಾಸದ ಬಳಿ ಕೆಲ ಆಪ್ತರು ಮಾತನಾಡಿ ವಿವಾದ ಸೃಷ್ಟಿಸಿದ್ರೆ, ಇದರ ಹಿಂದೆ ಸಿಎಂ ಇದ್ದಾರೆ ಅನ್ನೋ ಭಾವನೆ ಬರುತ್ತೆ. ಹಾಗಾಗಿಯೇ ಕೆಲ ಆಪ್ತ ಶಾಸಕರ ವಿರುದ್ಧ ಯಡಿಯೂರಪ್ಪ ಫುಲ್ ಗರಂ ಆಗಿದ್ದಾರೆ.

    ನನ್ನ ಮನೆಗೆ ಬಂದು ಹೋಗಿ ವಿವಾದ ಮಾಡಬೇಡಿ. ನನ್ನ ಜತೆ ಮಾತಾಡಿಯೇ ಹೋಗಿ ವಿವಾದ ಮಾಡುತ್ತಿದ್ದಾರೆ ಅನ್ನೋ ಭಾವನೆ ಬರುತ್ತಿದೆ. ಇದರಿಂದ ನನ್ನ ರಾಜಕೀಯ ನಿರ್ಧಾರಗಳ ಮೇಲೂ ಪರಿಣಾಮ ಬೀರುತ್ತಿದೆ. ದಯಮಾಡಿ ನನ್ ಮನೆಗೆ ಬಂದು ವಿವಾದ ಎಬ್ಬಿಸಬೇಡಿ ಎಂದು ಕೆಲ ಆಪ್ತರ ಮೇಲೆ ಸಿಟ್ಟಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ವಾರ್ನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೆಲ ದಿನಗಳ ಹಿಂದೆ ಡಿಸಿಎಂ ವಿಚಾರದಲ್ಲಿ ಶಾಸಕ ರೇಣುಕಾಚಾರ್ಯ ಮಾತಾಡಿದ್ದು, ಪಕ್ಷದ ಕೆಲ ವಿಚಾರವಾಗಿ, ನೆರೆ ಪರಿಹಾರ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಿದ್ದು ಬಿಜೆಪಿ ವಲಯದಲ್ಲಿ ವಿವಾದ ಸೃಷ್ಟಿಸಿತ್ತು. ಇದರ ಹಿಂದೆ ಯಡಿಯೂರಪ್ಪ ಅವರೇ ಇದ್ದಾರೆ ಎಂದು ಬಿಂಬಿಸಲಾಗಿತ್ತು. ಇದು ಸಹಜವಾಗಿಯೇ ಯಡಿಯೂರಪ್ಪ ಅವರ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಯಡಿಯೂರಪ್ಪ ಆಪ್ತರ ವಿರುದ್ಧ ಗರಂ ಆಗಿ ವಾರ್ನ್ ಮಾಡಿರೋದು ಅನ್ನೋ ಮಾತುಗಳು ಕೇಳಿ ಬಂದಿವೆ.

  • ಕೋಟ ವಿರುದ್ಧ ಬಿಜೆಪಿಯ ಐವರು ಶಾಸಕರ ಷಡ್ಯಂತ್ರ- ಕೆಂಡಾಮಂಡಲರಾದ ಬಿಲ್ಲವರು

    ಕೋಟ ವಿರುದ್ಧ ಬಿಜೆಪಿಯ ಐವರು ಶಾಸಕರ ಷಡ್ಯಂತ್ರ- ಕೆಂಡಾಮಂಡಲರಾದ ಬಿಲ್ಲವರು

    ಉಡುಪಿ: ಟೇಕನ್ ಫಾರ್ ಗ್ರ್ಯಾಂಟೆಡ್ ಅನ್ನೋ ಗಾದೆ ಉಡುಪಿ ಜಿಲ್ಲೆಯ ಬಿಲ್ಲವ ಸಮುದಾಯಕ್ಕೆ ಹೇಳಿ ಮಾಡಿಸಿದಂತಿದೆ. ವೋಟಿಗಾಗಿ ಬಿಲ್ಲವರನ್ನು ಉಪಯೋಗಿಸೋ ಬಿಜೆಪಿ- ಕಾಂಗ್ರೆಸ್ ನಂತರ ಅವರ ಭಾವನೆಗೆ ಬೆಲೆ ಕೊಡೋದಿಲ್ಲ. ಮುಜರಾಯಿ, ಮೀನುಗಾರಿಕೆ ಸಚಿವರ ವಿಚಾರದಲ್ಲೂ ಮತ್ತೆ ಹೀಗೆ ಆಗಿದೆ.

    ಕೋಟ ಶ್ರೀನಿವಾಸ ಪೂಜಾರಿಯವರು ಗ್ರಾಮ ಪಂಚಾಯತ್ ಸದಸ್ಯನಿಂದ ಆರಂಭವಾಗಿ ಕ್ಯಾಬಿನೆಟ್ ದರ್ಜೆಯವರೆಗೆ ಏರಿದ ನಾಯಕ. ಸರಳ ಸಜ್ಜನಿಕೆಗೆ ರಾಜ್ಯದಲ್ಲೇ ಹೆಸರು ಮಾಡಿದವರು. ಕರಾವಳಿಯ ಮೂರು ಜಿಲ್ಲೆಗಳ ಮಟ್ಟಿಗೆ ಪ್ರಭಾವಿ ನಾಯಕ ಎನಿಸಿಕೊಂಡಿದ್ದಾರೆ. ಇದೀಗ ಏಕಾಏಕಿ ಉಡುಪಿಯಿಂದ ಕೋಟ ಶ್ರೀನಿವಾಸ ಪೂಜಾರಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಕಳುಹಿಸಲಾಗಿದೆ. ಈ ವಿಚಾರ ಪ್ರಬಲ ಬಿಲ್ಲವ ಸಮುದಾಯ ಕಿಡಿಕಾರುವಂತೆ ಮಾಡಿದೆ. ಉಡುಪಿಯ ಬಿಜೆಪಿಯ ಐವರು ಶಾಸಕರೇ ಶ್ರೀನಿವಾಸ ಪೂಜಾರಿಯನ್ನು ಪಕ್ಕದ ಜಿಲ್ಲೆಗೆ ದಾಟಿಸಿದ್ದಾರೆ. ಅವರ ಕೈವಾಡದಿಂದ ಇಷ್ಟೆಲ್ಲ ಬೆಳವಣಿಗೆ ಆಗಿದೆ ಎಂಬ ಸುದ್ದಿ ಸದ್ಯ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.

    ಈ ಕುರಿತು ಬಿಜೆಪಿ ನಾಯಕ, ಬಿಲ್ಲವ ಮುಖಂಡ ಕಿರಣ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಅಸಮಾಧಾನ ಹೊರಹಾಕಿದರು. ನಮ್ಮ ಜಿಲ್ಲೆಯ ನಾಯಕನನ್ನು ನಮ್ಮಲ್ಲಿ ಉಳಿಸಿಕೊಳ್ಳುವ ಅಗತ್ಯವಿದೆ. ಶಾಸಕರು ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಸಹಿ ಸಂಗ್ರಹ ಮಾಡಿ ಮುಖ್ಯಮಂತ್ರಿಗಳಿಗೆ ಕೊಟ್ಟ ಬಗ್ಗೆ ನಮಗೆ ಮಾಹಿತಿಯಿದೆ. ಇದು ಹೌದಾದರೆ ಅವರು ಒಪ್ಪಿಕೊಳ್ಳಲಿ. ಮುಂದಿನ ತೀರ್ಮಾನಗಳನ್ನು ನಾವು ಮಾಡುತ್ತೇವೆ. 19ಕ್ಕೆ ಮತ್ತೆ ಸಭೆ ಸೇರಿ ಬಿಲ್ಲವ ಮುಖಂಡರ ನೇತೃತ್ವದಲ್ಲಿ ಒಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

    ಕೋಟ ಶ್ರೀನಿವಾಸ ಪೂಜಾರಿ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಜನರಿಂದ ಗೆದ್ದ ಐವರು ಶಾಸಕರ ಪೈಕಿ ಒಬ್ಬರಿಗೂ ಸಚಿವ ಸ್ಥಾನ ನೀಡದ್ದಕ್ಕೆ, ಉಡುಪಿಯ ಎಲ್ಲಾ ಶಾಸಕರು ಅಸಮಾಧಾನಗೊಂಡಿದ್ದಾರಂತೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ ಸಹಿ ಹಾಕಿ ಪೂಜಾರಿಯನ್ನು ಗಡಿಪಾರು ಮಾಡಿದ್ದಾರಂತೆ. ಬಿಲ್ಲವ ನಾಯಕನೊಬ್ಬ ಪ್ರಭಾವಿಯಾಗಿ ಬೆಳೆಯುತ್ತಿರೋದೇ ಇದಕ್ಕೆ ಕಾರಣ ಅಂತ ಜಿಲ್ಲೆಯ ಬಿಲ್ಲವ ಸಮಾಜ ಕೋಪಗೊಂಡಿದೆ. ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ತುರ್ತು ಸಭೆ ಸೇರಿ ಬೆಳವಣಿಗೆಯ ವಿರುದ್ಧ ಸಂಘಟಿತರಾಗಿದ್ದಾರೆ.

    ಬಿಲ್ಲವ ಮುಖಂಡ- ಹಿಂದೂಪರ ಸಂಘಟನೆಗಳ ನಾಯಕ, ಅಚ್ಯುತ್ ಅಮೀನ್ ಮಾತನಾಡಿ, ಕಳೆದ ಸರ್ಕಾರದಲ್ಲಿ ವಿನಯಕುಮಾರ್ ಸೊರಕೆಯನ್ನು ಅರ್ಧಕ್ಕೆ ಸಚಿವ ಸ್ಥಾನದಿಂದ ಇಳಿಸಲಾಯ್ತು. ಈ ಮೂಲಕ ಕಾಂಗ್ರೆಸ್ ಬಿಲ್ಲವರಿಗೆ ಮೋಸ ಮಾಡಿದೆ. ಇದೀಗ ಶ್ರೀನಿವಾಸ ಪೂಜಾರಿಯನ್ನು ಜಿಲ್ಲೆಯ ಸಂಬಂಧದಿಂದ ದೂರ ಮಾಡಿರುವುದು ಬಿಲ್ಲವ ವಿರೋಧಿ ನೀತಿಯಾಗಿದೆ. ಎಲ್ಲವನ್ನೂ ನೋಡುತ್ತಾ ಬಿಲ್ಲವರು ಸುಮ್ಮನಿರಲ್ಲ. ನಮ್ಮ ಸಮುದಾಯದ ಶಕ್ತಿ ಏನೆಂಬುದನ್ನು ಸೂಕ್ತ ಕಾಲದಲ್ಲಿ ತೋರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ಕೊಡಬಾರದೆಂದು ಐವರು ಶಾಸಕರು ಸಿಎಂ ಯಡಿಯೂರಪ್ಪಗೆ ಒತ್ತಡ ಹೇರಿದ್ದರು ಎಂಬ ಮಾಹಿತಿ ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಕೇಳಿ ಬಂದಿತ್ತು. ಮೇಲ್ಮನೆ ಹಿರಿಯ, ಆರ್ ಎಸ್ ಎಸ್ ಬೆಂಬಲದಿಂದ ಕೋಟಗೆ ಕ್ಯಾಬಿನೆಟ್ ದರ್ಜೆ ಒಲಿದಿತ್ತು. ಇದೀಗ ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಿಯಾದರೂ ತಮ್ಮ ಪ್ರಭಾವ ತೋರಿಸುವಲ್ಲಿ ಶಾಸಕರು ಗೆದ್ದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

  • ಅಲೋಕ್‍ರನ್ನು ಅಮಾನತುಗೊಳಿಸಿ – ಸಿಎಂಗೆ ಶಾಸಕರಿಂದ ದೂರು

    ಅಲೋಕ್‍ರನ್ನು ಅಮಾನತುಗೊಳಿಸಿ – ಸಿಎಂಗೆ ಶಾಸಕರಿಂದ ದೂರು

    ಬೆಂಗಳೂರು: ರಾಜ್ಯದಲ್ಲಿ ಕೇಳಿಬರುತ್ತಿರುವ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕೆ.ಎಸ್‍.ಆರ್‍.ಪಿ ಎಡಿಜಿಪಿ ಅಲೋಕ್ ಕುಮಾರ್ ಕೈವಾಡವಿದೆ. ಅವರನ್ನು ಅಮಾನತು ಮಾಡುವಂತೆ ಕೆಲ ಬಿಜೆಪಿ ಶಾಸಕರು ಸಿಎಂ ಯಡಿಯೂರಪ್ಪನವರಿಗೆ ದೂರು ನೀಡಿದ್ದಾರೆ.

    ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅಲೋಕ್ ಕುಮಾರ್ ಅಮಾನತಿಗೆ ಒತ್ತಡಗಳು ಹೆಚ್ಚಾಗುತ್ತಿದ್ದು, ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅಲೋಕ್ ಕುಮಾರ್ ಅವರ ನೇರ ಕೈವಾಡವಿದೆ. ಸಿಬಿಐ ತನಿಖೆ ಆರಂಭಕ್ಕೂ ಮುನ್ನವೇ ಅಮಾನತು ಮಾಡಿ ಎಂದು ಕೆಲ ಬಿಜೆಪಿ ಶಾಸಕರು ಸಿಎಂ ಯಡಿಯೂರಪ್ಪನವರ ಬಳಿ ದೂರು ನೀಡಿದ್ದಾರೆ ಎನ್ನಲಾಗಿದೆ.

    ಸರ್ಕಾರ ರಚನೆ ಸಂದರ್ಭ ಅಲೋಕ್ ಪಕ್ಷಪಾತಿಯಂತೆ ನಡೆದುಕೊಂಡಿದ್ದಾರೆ. ಹುದ್ದೆಯಲ್ಲಿ ಮುಂದುವರಿದರೆ ತನಿಖೆಯ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ಅಮಾನತು ಮಾಡಿ ಎಂದು ಬಿಜೆಪಿಯ ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಒಂದಂಕಿ ಲಾಟರಿ ಪ್ರಕರಣದಲ್ಲಿ ಅಲೋಕ್‍ರನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಹುದ್ದೆಯಿಂದ ಅಮಾನತು ಮಾಡಲಾಗಿತ್ತು. ಇದೇ ಕಷ್ಟ ಮತ್ತೊಮ್ಮೆ ಅಲೋಕ್‍ಗೆ ಎದುರಾಗುತ್ತಾ ಅನ್ನೋ ಮಾತುಗಳು ಕೇಳಿಬರುತ್ತಿವೆ.

  • ಬಿಜೆಪಿ ಶಾಸಕರ ಜೊತೆ ತಿಂಡಿ ಸವಿದ ಡಿಸಿಎಂ

    ಬಿಜೆಪಿ ಶಾಸಕರ ಜೊತೆ ತಿಂಡಿ ಸವಿದ ಡಿಸಿಎಂ

    – ಬಿಜೆಪಿಯಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ
    – ಆರೋಗ್ಯ ವಿಚಾರಿಸೋದು ನಮ್ಮ ಕರ್ತವ್ಯ

    ಬೆಂಗಳೂರು: ವಿಶ್ವಾಸಮತ ಯಾಚನೆಯ ವಿಳಂಬವನ್ನು ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಯೇ ಅಹೋರಾತ್ರಿ ಧರಣಿ ಮಾಡಿದ್ದು, ರಾತ್ರಿಯೆಲ್ಲ ಸದನದಲ್ಲಿ ನಿದ್ದೆ ಮಾಡಿ ಬೆಳ್ಳಂಬೆಳಗ್ಗೆ ವಿಧಾನಸೌಧದಲ್ಲಿ ತಿಂಡಿ ಮಾಡಿದ್ದಾರೆ.

    ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್ ಸವಿದಿದ್ದಾರೆ. ಬಿಜೆಪಿ ಶಾಸಕರ ಬ್ರೇಕ್ ಫಾಸ್ಟ್ ವೇಳೆ ಡಿಸಿಎಂ ಪರಮೇಶ್ವರ್ ಎಂಟ್ರಿ ಕೊಟ್ಟಿದ್ದು, ಬಿಜೆಪಿ ಶಾಸಕರ ಜೊತೆ ಪರಮೇಶ್ವರ್ ಕೂಡ ತಿಂಡಿ ತಿಂದಿದ್ದಾರೆ.

    ಪರಮೇಶ್ವರ್ ಬಿಜೆಪಿಯ ಇಂದಿನ ರಣತಂತ್ರ ತಿಳಿದುಕೊಳ್ಳಲು ಬೆಳ್ಳಂಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ನಿದ್ದೆ ಮಾಡಿದ್ರಾ? ಜಾಗರಣೆ ಮಾಡಿದ್ರಾ? ಸೊಳ್ಳೆ ಕಡಿದ್ವಾ? ಆರೋಗ್ಯ ಹೇಗಿದೆ? ಎಂದು ಬಿಜೆಪಿ ಶಾಸಕರ ಆರೋಗ್ಯವನ್ನು ಪರಮೇಶ್ವರ್ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಗುರುವಾರ ರಾತ್ರಿಯಿಂದ ವಿಧಾನಸೌಧದಲ್ಲಿ ತಂಗಿದ್ದಾರೆ. ಸಭಾಧ್ಯಕ್ಷರು ಅವರ ಯೋಗಕ್ಷೇಮ, ಊಟ, ವಸತಿ ಏರ್ಪಡಿಸಬೇಕು ಎಂದು ಸೂಚಿಸಿದ್ದರು. ಹೀಗಾಗಿ ರಾತ್ರಿ ಭೋಜನದ ವ್ಯವಸ್ಥೆ, ಮಲಗಲು, ಪಿಲ್ಲೋ ಕೊಟ್ಟಿದ್ದೆವು. ಇಂದು ಬೆಳಗ್ಗೆ ಕೂಡ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ನಾನು ಅವರ ಜೊತೆಯಲ್ಲಿಯೇ ತಿಂಡಿ ಸವಿದೆ. ಮುಂಜಾಗೃತಾ ಕ್ರಮವಾಗಿ ವೈದ್ಯರ ಒಂದು ತಂಡವನ್ನು ಇಲ್ಲೆ ಇರಿಸಿದ್ದೆವು. ಸದ್ಯಕ್ಕೆ ಎಲ್ಲರೂ ಆರೋಗ್ಯವಾಗಿದ್ದಾರೆ. ಯಾರಿಗೂ ಏನು ತೊಂದರೆಯಾಗಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

    ಸದನದ ಒಳಗಿನ ವರ್ತನೆಗಳು ಬೇರೆ, ಹೊರಗಿನ ವರ್ತನೆಗಳೇ ಬೇರೆ. ನನಗೆ ತುಂಬಾ ಒಳ್ಳೆಯ ಸ್ನೇಹಿತರು ಬಿಜೆಪಿಯಲ್ಲಿ ಇದ್ದಾರೆ. ರಾತ್ರಿ ವಿಧಾನಸಭೆಯಲ್ಲೇ ಬಿಜೆಪಿ ಸ್ನೇಹಿತರು ಮಲಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ಬೆಳಗ್ಗೆಯೇ ವಿಧಾನಸಭೆಗೆ ಬಂದಿದ್ದೇನೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.