Tag: ಬಿಜೆಪಿ ಚುನಾವಣಾ ಆಯೋಗ

  • ಲೈವ್ ಡೆಮೋ ಮಾಡಿ ಆಪ್‍ನಿಂದ ಇವಿಎಂ ಹ್ಯಾಕ್: ಯಾರಿಗೆ ಎಷ್ಟು ವೋಟ್ ಬಿತ್ತು?

    ಲೈವ್ ಡೆಮೋ ಮಾಡಿ ಆಪ್‍ನಿಂದ ಇವಿಎಂ ಹ್ಯಾಕ್: ಯಾರಿಗೆ ಎಷ್ಟು ವೋಟ್ ಬಿತ್ತು?

    – ಆಪ್ ಆರೋಪವನ್ನು ತಿರಸ್ಕರಿಸಿದ ಚುನಾವಣಾ ಆಯೋಗ

    ನವದೆಹಲಿ: ಚುನಾವಣೆಯಲ್ಲಿ ಕೇಂದ್ರ ಸರ್ಕಾರದಿಂದ ಇವಿಎಂ ದುರ್ಬಳಕೆ ಆಗುತ್ತಿದೆ ಎಂದು ಆರೋಪ ಮಾಡಿದ್ದ ಆಪ್ ಇಂದು ವಿಧಾನಸಭೆಯಲ್ಲಿ ಲೈವ್ ಡೆಮೋ ನಡೆಸಿ ಹೇಗೆ ಹ್ಯಾಕ್ ಮಾಡಬಹುದು ಎನ್ನುವುದನ್ನು ವಿವರಿಸಿದೆ.

    ಆಪ್ ಶಾಸಕ ಸೌರಭ್ ಭಾರದ್ವಾಜ್ ಸದನದಲ್ಲಿ ಇವಿಎಂ ಹಿಡಿದು ಲೈವ್ ಡೆಮೋ ನೀಡಿದ್ದಾರೆ. ಕೋಡ್ ಬಳಸಿಕೊಂಡು, ಇವಿಎಂ ತಿರುಚಿ ಯಾವುದೇ ಪಕ್ಷ ಗೆಲುವು ಸಾಧಿಸಬಹುದು. ಆಡಳಿತರೂಢ ಕೇಂದ್ರ ಸರ್ಕಾರಕ್ಕೆ ಇದು ಅಸಾಧ್ಯವಲ್ಲ. ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲುತ್ತಿದೆ ಎಂದು ದೂರಿದರು.

    ಡೆಮೋ ತೋರಿಸುವ ಮುನ್ನ ಮಾತನಾಡಿದ ಅವರು, ಇಲ್ಲಿ ತೋರಿಸುತ್ತಿರುವುದು ಚುನಾವಣೆಯಲ್ಲಿ ಬಳಕೆಯಾಗುತ್ತಿರುವ ಇವಿಎಂ ಅಲ್ಲ. ಇವಿಎಂ ರೀತಿಯಲ್ಲೇ ತಯಾರಾಗಿರುವ ಯಂತ್ರವಿದು. ನಾನು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು, ರಾಜಕೀಯಕ್ಕೆ ಸೇರುವ ಮೊದಲು ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಎವಿಎಂ ಹ್ಯಾಕ್ ಮಾಡುವುದು ಕಷ್ಟದ ಕೆಲಸವಲ್ಲ. ಕೇವಲ 90 ಸೆಕೆಂಡ್ ನಲ್ಲಿ ಮದರ್‍ಬೋರ್ಡ್ ಬದಲಾಯಿಸಿ ಹ್ಯಾಕ್ ಮಾಡಬಹುದು ಎಂದು ಅವರು ವಿವರಿಸಿದರು.

    ಡೆಮೋದಲ್ಲಿ ಏನಾಯ್ತು?
    ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಆಪ್‍ಗೆ 10, ಬಿಎಸ್‍ಪಿ 2, ಬಿಜೆಪಿ 3, ಕಾಂಗ್ರೆಸ್ 2, ಎಸ್‍ಪಿ 2 ಮತಗಳನ್ನು ಹಾಕಿದ್ದಾರೆ. ಆದರೆ ಫಲಿತಾಂಶ ಬಂದಾಗ ಆಪ್‍ಗೆ 2 ವೋಟ್ ಬಿದ್ದಿದ್ದರೆ, ಬಿಜೆಪಿಗೆ ಆಪ್‍ನ ವೋಟ್ ಸೇರಿ 11 ವೋಟ್ ಬಿದ್ದಿದೆ. ಬಿಎಸ್‍ಪಿಗೆ 2, ಕಾಂಗ್ರೆಸ್ 2, ಎಸ್‍ಪಿ 2 ವೋಟ್ ಬಿದ್ದಿದೆ.

    ಇವಿಎಂ ತಯಾರಿಸಿದ್ದು ಯಾರು?
    ಐಐಟಿಯ ಹಳೆ ವಿದ್ಯಾರ್ಥಿಗಳು ವಿಶೇಷ ಇವತ್ತಿನ ಡೆಮೋಗಾಗಿ ಇವಿಎಂ ಹೋಲುವ ಯಂತ್ರವನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲದೇ ಇವಿಎಂ ತಜ್ಞರು ಸಹ ಇದನ್ನು ಪರಿಶೀಲಿಸಿದ್ದಾರೆ ಎಂದು ಎಎಪಿಯ ಮೂಲಗಳು ಮಾಹಿತಿ ನೀಡಿವೆ.

    ಇದೆ ವೇಳೆ, ನಾನು ಸವಾಲು ಎಸೆಯುತ್ತೇನೆ, ಮುಂದೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪೇಪರ್ ಬ್ಯಾಲೆಟ್ ಬಳಸಿದರೆ ಬಿಜೆಪಿ ಜಯಗಳಿಸಲು ಸಾಧ್ಯವೇ ಇಲ್ಲ ಎಂದು ಸೌರಭ್ ಭಾರದ್ವಾಜ್ ಹೇಳಿದರು. ಈ ವೇಳೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಕೋಲಾಹಲ ಸೃಷ್ಟಿಯಾಯ್ತು.

    ಈ ಮಧ್ಯೆ ಚುನಾವಣಾ ಆಯೋಗ ಆಮ್ ಆದ್ಮಿ ಆರೋಪ ನಿರಾಕರಿಸಿದೆ. ಆಯೋಗ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಆಪ್ ಚುನಾವಣೆಯಲ್ಲಿ ಬಳಕೆಯಾಗದ ಇವಿಎಂ ಬಳಸಿ ಡೆಮೋ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಅನುಮತಿ ಪಡೆಯದೇ ಪ್ರಾತ್ಯಕ್ಷಿಕೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮೇ 12ರಂದು ಎಲ್ಲ ಪಕ್ಷಗಳ ಸಭೆಯನ್ನು ಚುನಾವಣಾ ಆಯೋಗ ಕರೆದಿದ್ದು, ಈ ಸಭೆಯ ಬಳಿಕ ಇವಿಎಂ ಹ್ಯಾಕಥಾನ್ ನಡೆಯುವ ದಿನಾಂಕ ಪ್ರಕಟವಾಗಲಿದೆ.