Tag: ಬಿಜೆಪಿ ಕಾರ್ಯಕರ್ತರು

  • ಸೌಟು ನಮ್ಮ ಕೈಯಲ್ಲಿ ಇದ್ರೆ ಎರಡು ತುಂಡು ಜಾಸ್ತಿ ಹಾಕಬಹುದು: ಡಿಕೆಶಿ

    ಸೌಟು ನಮ್ಮ ಕೈಯಲ್ಲಿ ಇದ್ರೆ ಎರಡು ತುಂಡು ಜಾಸ್ತಿ ಹಾಕಬಹುದು: ಡಿಕೆಶಿ

    ರಾಮನಗರ: ಅಧಿಕಾರ ಎಷ್ಟು ದಿನ ಇರುತ್ತೆ ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದಾಗ ನಾವೇನು ಮಾಡಿದ್ದೇವೆ ಅನ್ನೋದು ಮುಖ್ಯ. ನಮ್ಮ ಕೈಯಲ್ಲಿ ಅಧಿಕಾರವಿದೆ, ಆದರಿಂದ ನಾವು ಜನಪರವಾಗಿ ಕೆಲಸ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಭರವಸೆ ನುಡಿಗಳನ್ನಾಡಿದ್ದಾರೆ.

    ರಾಮನಗರದಲ್ಲಿ ನಡೆದ ಸಿಎಂ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಿಂದ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿದ್ದೀರಿ, ಮತ ಹಾಕಿ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರತ್ತೆ ಅನ್ನೋದು ಮುಖ್ಯವಲ್ಲ. ಅಧಿಕಾರದಲ್ಲಿದಾಗ ಏನು ಕೆಲಸ ಮಾಡಿದ್ದಾರೆ ಎನ್ನೋದು ಮುಖ್ಯ. ಸೌಟು ನಮ್ಮ ಕೈಯಲ್ಲಿ ಇದ್ರೆ ಎರಡು ತುಂಡು ಜಾಸ್ತಿ ಹಾಕಬಹುದು ಅಂತ ಹಳ್ಳಿ ಕಡೆ ಗಾದೆಯಿದೆ. ಅದೇ ರೀತಿ ನಮ್ಮ ಕೈಯಲ್ಲಿ ಅಧಿಕಾರವಿದೆ ನಾವು ನಿಮಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮೈತ್ರಿ ಸರ್ಕಾರ ಉಳಿಸೋ ಶಕ್ತಿ ಡಿ.ಕೆ.ಶಿವಕುಮಾರ್: ಎಚ್‍ಡಿಕೆ

    ಅಧಿಕಾರ ಇರುವುದರಿಂದ ಏನೇನು ಮಾಡಬೇಕು ಅಂತ ಯಾರು ಪ್ರಶ್ನೆ ಮಾಡೋರು ಇಲ್ಲ. ಬಜೆಟ್‍ನಲ್ಲಿ ನಮ್ಮ ಹೆಸರು ಘೋಷಿಸಿಕೊಂಡು ಡಂಗೂರ ಹಾಕಬೇಕಾಗಿಲ್ಲ. ನಿಮ್ಮ ಸೇವೆ ಮಾಡಬೇಕು ಅಷ್ಟೇ ನಮ್ಮ ಕೆಲಸ ಎಂದಿದ್ದಾರೆ. ಯಡಿಯೂರಪ್ಪನವರಿಗೆ ಸರ್ಕಾರ ಒಂದು ವರ್ಷ ಏನು ಮಾಡುತ್ತದೆ ಎಂದು ನೋಡಲು ತಾಳ್ಮೆ ಇಲ್ಲ. ಅವರ ಜೊತೆ ಚನ್ನಪಟ್ಟಣದ ಮಾಜಿ ಶಾಸಕ ಸಹ ಸೇರಿಕೊಂಡಿದ್ದಾರೆ. ಹಸಿರು ಟವಲ್ ಹಾಕಿಕೊಂಡ ತಕ್ಷಣ ರೈತರ ಮಗ ಅಗಲು ಸಾಧ್ಯವಿಲ್ಲ. ಬೇರೆ ಅವರನ್ನ ಬದುಕಿಸುವ ಮೊದಲು ನೀವು ಬದಕಲು ಕಲಿಯಿರಿ. ಬಿಎಸ್‍ವೈ ಅವರು ಬೆಂಗಳೂರಿನಲ್ಲಿ ಕುಳಿತು ಮೈತ್ರಿ ಸರ್ಕಾರವನ್ನು ಕೆಳಗಿಸಲು ತಂತ್ರ ಮಾಡುತ್ತಿದ್ದಾರೆ ಹೊರೆತೂ ತಮ್ಮನ್ನು ಗೆಲ್ಲಿಸಿದ ಜನರಿಗಾಗಿ ಕೆಲಸ ಮಾಡಿಲ್ಲ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ಕಾರ್ಯಕರ್ತರೇ ಮೋಸ ಹೋಗಿದ್ದೀರಿ. ಬಿಜೆಪಿ ಕಾರ್ಯಕರ್ತರು ಜೆಡಿಎಸ್‍ಗೆ ಸೇರೋರು ಜೆಡಿಎಸ್ ಸೇರಿ, ಕಾಂಗ್ರೆಸ್ ಸೇರೋರು ಕಾಂಗ್ರೆಸ್ಸಿಗೆ ಸೇರಿ. ನಾವು ಸದಾ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಗ್ರಹಗತಿಗಳ ಶಾಂತಿಗಾಗಿ ವಿಶೇಷ ಪೂಜೆ!

    ಬಿಎಸ್‍ವೈ ಗ್ರಹಗತಿಗಳ ಶಾಂತಿಗಾಗಿ ವಿಶೇಷ ಪೂಜೆ!

    ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಡಿಯೋ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಹಗತಿಗಳ ಶಾಂತಿಗಾಗಿ ಮಂಡ್ಯದ ಬಿಜೆಪಿ ಕಾರ್ಯಕರ್ತರು ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನಗರದ ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಲ್ಲಿ ಅರ್ಚನೆ ಮಾಡಿಸಿದ ಕಾರ್ಯಕರ್ತರು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಷ್ಟ ದಿಕ್ಕಿನಲ್ಲೂ ತಡೆ ಒಡೆದು ಗ್ರಹಗತಿಗಳಿಗೆ ಶಾಂತಿ ಮಾಡಿಸಿದರು. ಇದನ್ನು ಓದು: ಸಿದ್ದರಾಮಯ್ಯ ಒತ್ತಡಕ್ಕೆ ಮಣಿದ ಸಿಎಂ ಎಚ್‍ಡಿಕೆ!

    ಹಾಸನದ ಮೂರು ಗ್ರಹಗಳಾದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಇಬ್ಬರು ಮಕ್ಕಳಾದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಿಎಂ ಕುಮಾರಸ್ವಾಮಿ, ಕನಕಪುರದ ಎರಡು ಗ್ರಹಗಳಾದ ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಮೈಸೂರಿನ ಒಂದು ಗ್ರಹ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಂತಿ ಪೂಜೆ ಮಾಡಿಸಲಾಗಿದೆ ಎಂದು ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ. ಇದನ್ನು ಓದು: ಹುಡುಗಾಟಿಕೆ ಆಡ್ಬಿಟ್ರಿ ನೀವು- ಬಿಎಸ್‍ವೈ ಆಡಿಯೋಗೆ ಹೈಕಮಾಂಡ್ ಕೆಂಡಾಮಂಡಲ

    ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ಆಪರೇಷನ್ ಕಮಲ ಆಡಿಯೋ ಪ್ರಕರಣದಿಂದ ಮುಕ್ತವಾಗಲಿ ಹಾಗೂ ಅವರು ಶೀಘ್ರದಲ್ಲಿ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತವರಿಗೆ ಬಾ ತಂಗಿ ಎಂದು ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು

    ತವರಿಗೆ ಬಾ ತಂಗಿ ಎಂದು ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು

    ಮಂಡ್ಯ: ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಬಿಜೆಪಿ ಕಾರ್ಯಕರ್ತರು ತವರಿಗೆ ಬಾ ತಂಗಿ ಎನ್ನುವ ಮೂಲಕ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಾಗಿನವನ್ನು ಪೋಸ್ಟ್ ಮುಖಾಂತರ ಕಳುಹಿಸಿ ಕೊಟ್ಟಿದ್ದಾರೆ.

    ಕಳೆದ ಒಂದು ವರ್ಷದಿಂದ ಜಿಲ್ಲೆಯಿಂದ ನಾಪತ್ತೆಯಾಗಿರುವ ರಮ್ಯಾರವರು ಪುನಃ ಮಂಡ್ಯಕ್ಕೆ ಆಗಮಿಸುವಂತೆ ಬಿಜೆಪಿ ಕಾರ್ಯಕರ್ತರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮನವಿ ಮಾಡಿಕೊಂಡಿದ್ದಾರೆ. ರಮ್ಯಾರವರಿಗೆ ಪೋಸ್ಟ್ ಮೂಲಕ ಬಾಗಿನವನ್ನು ತಲುಪಿಸಿ, ತವರಿಗೆ ಬಾ ತಂಗಿ ಎನ್ನುವ ಮೂಲಕ ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ.

    ಕಳೆದ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಗಳಿಗೂ ಮತಚಲಾಯಿಸಲು ಬಂದಿಲ್ಲ. ಗೌರಿ-ಗಣೇಶ ಹಬ್ಬಕ್ಕಾದರೂ ತವರು ಕ್ಷೇತ್ರ ಮಂಡ್ಯಕ್ಕೆ ಆಗಮಿಸಿ, ಜನರ ಕಷ್ಟಕ್ಕೆ ಸ್ಪಂದಿಸಲಿ ಎಂದು ಬಿಜೆಪಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಕಳೆದ ಎರಡು ವರ್ಷದಿಂದ ನಾಪತ್ತೆಯಾಗಿರುವ ನೀವು, ಈಗಲಾದರೂ ಆಗಮಿಸದಿದ್ದರೆ ಮುಂದಿನ ಲೋಕಾ ಚುನಾವಣೆಗೆ ಬಂದಾಗ ಘೇರಾವ್ ಹಾಕುವುದಾಗಿ ಎಚ್ಚರಿಸಿದ್ದಾರೆ.

    ಬಾಗಿನದಲ್ಲಿ ಹೂವು, ಬಳೆ ಹಾಗೂ ತೆಂಗಿನಕಾಯಿ ಸೇರಿದಂತೆ ಎಲ್ಲವನ್ನೂ ಅಂಚೆ ಮೂಲಕ ರಮ್ಯಾಗೆ ರವಾನಿಸಿದ್ದಾರೆ. ಗೌರಿ-ಗಣೇಶ ಹಬ್ಬದ ನೆಪಕ್ಕಾದರೂ ರಮ್ಯಾರವರು ತವರು ಜಿಲ್ಲೆಗೆ ಬರುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಕಳೆದ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಗಳಲ್ಲಿ ಮತ ಚಲಾಯಿಸಿದ ಬಾರಿ ಟೀಕೆಗೆ ರಮ್ಯಾ ಗುರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಯುವ ಕಾರ್ಯಕರ್ತರಿಂದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

    ಬಿಜೆಪಿ ಯುವ ಕಾರ್ಯಕರ್ತರಿಂದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

    ರಾಂಚಿ: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹೊಡೆದು ಹಲ್ಲೆ ಮಾಡಿರುವ ಘಟನೆ ಜಾರ್ಖಂಡ್‍ನ ಪಾಕುರ್ ನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಪೊಲೀಸರಿಗೆ ಆದೇಶಿಸಿದ್ದಾರೆ.

    ಸ್ವಾಮಿ ಅಗ್ನಿವೇಶ್ ಅವರು ಪಾಕುರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ಬಂದು ಅಲ್ಲಿನ ಹೋಟೆಲ್‍ವೊಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸಮಾರಂಭಕ್ಕೆ ತೆರಳಲು ಹೋಟೆಲ್‍ನಿಂದ ಹೊರಬರುತ್ತಿದ್ದಂತೆ ಸುತ್ತುವರಿದು ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

    ಸ್ಥಳೀಯ ಬುಡಕಟ್ಟು ಜನರನ್ನು ಮತಾಂತರಗೊಳಿಸಲು ಕ್ರೈಸ್ತ ಮಿಷನರಿಗಳ ಪರವಾಗಿ ಪ್ರವಚನ ನೀಡಲು ಆಗಮಿಸಿದ್ದಾರೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಸ್ವಾಮಿ ಅಗ್ನಿವೇಶ್‍ಅವರು, ತನ್ನ ಆಗಮನದ ಬಗ್ಗೆ ಪೊಲೀಸ್ ಆಡಳಿತ ವರ್ಗಕ್ಕೆ ತಿಳಿಸಿದ್ದರು. ಆದರೆ ಹೋಟೆಲ್‍ನಿಂದ ಹೊರ ಬರುವ ಸಂದರ್ಭದಲ್ಲಿ ಯಾರು ಇರಲಿಲ್ಲ ಆ ವೇಳೆ ದಾಳಿ ನಡೆಸಲಾಗಿದೆ.

    ದಾಳಿಕೋರರು ಮೊದಲಿಗೆ ಘೋಷಣೆಯನ್ನು ಕೂಗಿದ್ದಾರೆ. ಕಪ್ಪು ಧ್ವಜವನ್ನು ತೋರಿಸಿದ್ದಾರೆ. ಅನಂತರ ಅಗ್ನಿವೇಶ್ ಅವರನ್ನು ಹೊಡೆದು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಯೂ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಪೊಲೀಸರು ಅದರ ಆಧಾರದ ಮೇರೆಗೆ 20 ದಾಳಿಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಳವಿಲ್ಲ. ಆದರೆ ಸ್ವಾಮಿ ಅಗ್ನಿವೇಶ್ ತನ್ನ ಭದ್ರತೆಗಾಗಿ ಮೊದಲೇ ಸಂಘಟಿಸಬೇಕಾಗಿತ್ತು ಎಂದು ಜಾರ್ಖಂಡ್ ಬಿಜೆಪಿ ವಕ್ತಾರ ಪಿ ಶಾಹ್ದೇವ್ ಹೇಳಿದ್ದಾರೆ.

  • ಮೋದಿ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗದಿದ್ದಕ್ಕೆ ಪೊಲೀಸರ ಮೇಲೆಯೇ ದಾಳಿ- ವಿಡಿಯೋ

    ಮೋದಿ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗದಿದ್ದಕ್ಕೆ ಪೊಲೀಸರ ಮೇಲೆಯೇ ದಾಳಿ- ವಿಡಿಯೋ

    ಕೋಲ್ಕತ್ತಾ: ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್ ನಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಖರ್ಗಾಪುರ ಚೌರಿಂಗಿಯಲ್ಲಿ ನಡೆದಿದ್ದು, ಮೋದಿ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಿಲ್ಲ ಅಂತ ಸಿಟ್ಟುಗೊಂಡ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾರೆ.

    ಸೋಮವಾರ ಮಿಡ್ನಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಿತ್ತು. ಹೀಗಾಗಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ತೆರಳುತ್ತಿದ್ದರು. ಈ ವೇಳೆ ಕಾರ್ಯಕರ್ತರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಯಿತು. ಹೀಗಾಗಿ ಸಿಟ್ಟಗೊಂಡ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಅಲ್ಲಿಂದ ಪಲಾಯನ ಮಾಡಲು ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಕಾರ್ಯಕರ್ತರು ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೋಮವಾರ ನಡೆದ ಮೋದಿ ಕಾರ್ಯಕ್ರಮದ ವೇಳೆ ಟೆಂಟ್ ಕುಸಿದು 90 ಮಂದಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಪ್ರಧಾನಿಯವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.

  • ಸಮಾರೋಪ ಮುಕ್ತಾಯ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಶುರುವಾಯ್ತು ತೊಂದರೆ

    ಸಮಾರೋಪ ಮುಕ್ತಾಯ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಶುರುವಾಯ್ತು ತೊಂದರೆ

    ಬೆಂಗಳೂರು: ಮಹಾ ನಗರದಲ್ಲಿ ಇಂದು ನಡೆದ ಪರಿವರ್ತನಾ ಸಮಾರೋಪಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ಸಮಾರೋಪ ಸಮಾರಂಭಕ್ಕೆ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರಿಂದ ಕಾರ್ಯಕ್ರಮವೂ ಯಶಸ್ವು ಆಯಿತು. ಸಮಾರೋಪ ಮುಕ್ತಾಯ ಆಗುತ್ತಿದಂತೆ ದೂರದ ಊರುಗಳಿಂದ ಬಂದಿದ್ದ ಕಾರ್ಯಕರ್ತರಿಗೆ ಮರಳಿ ಹೋಗಲು ಬಸ್ ಗಳೇ ಸಿಗದೇ ಪರದಾಡುವಂತಾಯ್ತು.

    ಸಮಾರೋಪ ಮುಗಿದು ಮೂರು ಗಂಟೆಗಳಾದ್ರೂ ಇನ್ನು ಹಲವು ಕಾರ್ಯಕರ್ತರಿಗೆ ತಾವು ಬಂದಿರುವ ಬಸ್ ಗಳೆ ಸಿಗುತ್ತಿಲ್ಲ. ಕೆಲವೊಂದು ಕಡೆ ಬಸ್ ಸಿಕ್ಕರೆ ಡ್ರೈವರ್ ಗಳು ಸಿಗುತ್ತಿಲ್ಲ. ನಾನಾ ಕಡೆಗಳಿಂದ ಬಸ್ ಮಾಡಿಕೊಂಡು ಬಂದಿದ್ದರಿಂದ ಕೆಲವರಿಗೆ ಪಾರ್ಕಿಂಗ್ ಸ್ಥಳ ಸಿಗುತ್ತಿಲ್ಲ.

    ಕೆಲವು ಜಿಲ್ಲೆಗಳಿಂದ ಬಂದಿರುವ ಜನ ನಮ್ಮ ಬಸ್ ಎಲ್ಲಿ ಪಾರ್ಕ್ ಮಾಡಿದ್ದಾರೆ ಎಂದು ಗೊತ್ತಿಲ್ಲ ಅಂತಾ ಗೋಳಾಡುತ್ತಿರುವ ದೃಶ್ಯಗಳು ಕಂಡು ಬಂದವು. ಇತ್ತ ಊಟವು ಸಿಗದೆ, ಬಸ್ ಇಲ್ಲದೇ ಮಹಿಳೆಯರು ಮತ್ತು ವೃದ್ಧರು ರಸ್ತೆಯಲ್ಲಿಯೇ ನಿಂತು ತಮ್ಮ ಊರಿನ ಬಸ್ ಗಾಗಿ ಕಾಯುತ್ತಿದ್ದಾರೆ.

  • ಗುಂಡ್ಲುಪೇಟೆ ಬೈ ಎಲೆಕ್ಷನ್: ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಸಿಕ್ತು ಕಂತೆ ಕಂತೆ ನೋಟುಗಳು!

    ಗುಂಡ್ಲುಪೇಟೆ ಬೈ ಎಲೆಕ್ಷನ್: ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಸಿಕ್ತು ಕಂತೆ ಕಂತೆ ನೋಟುಗಳು!

    – ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಆರೋಪ

    ಚಾಮರಾಜನಗರ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಹಣವಿರುವುದುನ್ನು ಪತ್ತೆ ಮಾಡಿದ ಬಿಜೆಪಿ ಕಾರ್ಯಕರ್ತರು ಓರ್ವನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

    ಮನೋಜ್ ಬಂಧಿತ ಆರೋಪಿ. ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಮುಂದೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಹಣವಿರುವ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿತ್ತು.

    ಕೂಡಲೇ ಕಾರ್ಯಕರ್ತರು ಕಾರಿನ ಬಳಿ ತೆರಳಿದಾಗ 2 ಸಾವಿರದ 20 ಕಂತೆ ಕಾರಿನಲ್ಲಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಕಾರಿನಲ್ಲಿ ಒಟ್ಟು 4 ಜನ ಇದ್ರು. ಅದರಲ್ಲಿ ಮೂವರು ಓಡಿ ಹೋಗಿದ್ದಾರೆ. ಮನೋಜ್‍ನನ್ನು ಕಾರ್ಯಕರ್ತರು ಹಿಡಿದಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸರು ಕಾರನ್ನು ಬಚಾವ್ ಮಾಡಲು ಯತ್ನಿಸಿದ್ದಾರೆ. ಆದ್ರೆ ಬಿಜೆಪಿ ಕಾರ್ಯಕರ್ತರು ಮನೋಜ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದ್ರೆ ಈ ಹಣ ಕಾಂಗ್ರೆಸ್ ನವರದ್ದು ಅಂತಾ ಆರೋಪ ವ್ಯಕ್ತವಾಗುತ್ತಿದೆ.

    ಪೋಲಿಸರಿಂದ ಹಲ್ಲೆ: ಮನೋಜ್‍ನನ್ನು ಪೊಲೀಸರಿಗೆ ಹಿಡಿದು ಕೊಟ್ಟ ಬಿಜೆಪಿ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

    ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸ್ ಪೇದೆ ಮಲ್ಲು ಮತ್ತು ವೆಂಕಟೇಶ್ ಬಿಜೆಪಿ ಕಾರ್ಯಕರ್ತ ಚಂದ್ರು ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟ ಬಳಿಕ ಪೊಲೀಸರು ಆರೋಪಿ ವಿರುದ್ಧ ನಾಲ್ಕೂವರೆ ಲಕ್ಷ ರೂ. ಬದಲು ಕೇವಲ 12, 500 ರೂ. ಅಂತಾ ಬರೆದುಕೊಂಡಿದ್ದರು. ಇದನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಪೊಲೀಸ್ ಪೇದೆಯೊಬ್ಬರು ಮೊಬೈಲ್ ಕಸಿದು ವೀಡಿಯೋ ಡಿಲಿಟ್ ಮಾಡಿ ಬಳಿಕ ಹಲ್ಲೆ ಮಾಡಿದ್ದಾರೆ. ಇದರಿಂದ ಕೆರಳಿದ ಕಾರ್ಯಕರ್ತರು ಪೊಲೀಸ್ ಠಾಣೆಯ ಎದುರು ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗುರುವಾರ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕರ್ತರಿಗೆ ವಿಡಿಯೋ ಹಂಚಿಕೆ ಮಾಡುತ್ತಿರುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು.

    https://www.youtube.com/watch?v=WprObSX324k