Tag: ಬಿಜೆಪಿ ಕಾರ್ಯಕರ್ತರು

  • ಮತ ಎಣಿಕೆ ದಿನ ಬಿಜೆಪಿ ಕಾರ್ಯಕರ್ತರಿಗೆ ಸಮವಸ್ತ್ರ ಕಡ್ಡಾಯ

    ಮತ ಎಣಿಕೆ ದಿನ ಬಿಜೆಪಿ ಕಾರ್ಯಕರ್ತರಿಗೆ ಸಮವಸ್ತ್ರ ಕಡ್ಡಾಯ

    ಚಿಕ್ಕಬಳ್ಳಾಪುರ: ಉಪಚುನಾವಣಾ ಕಣದ ಫಲಿತಾಂಶ ಸೋಮವಾರ ಹೊರಬೀಳಲಿದ್ದು, ಎಲ್ಲರ ಕೂತೂಹಲ ಫಲಿತಾಂಶದತ್ತ ನೆಟ್ಟಿದೆ. ಆದರೆ ಇತ್ತ ಚುನಾವಣಾ ಫಲಿತಾಂಶದ ಮತ ಎಣಿಕೆ ವೇಳೆ ಆಗಮಿಸುವ ಬಿಜೆಪಿ ಕಾರ್ಯಕರ್ತರೆಲ್ಲಾ ಬಿಳಿ ವಸ್ತ್ರ ಹಾಗೂ ಕೇಸರಿ ಶಲ್ಯ ಧರಿಸಿ ಆಗಮಿಸುವಂತೆ ಮನವಿ ಮಾಡಲಾಗಿದೆ.

    ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಆಗಮಿಸುವಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಬೆಂಬಲಿಗರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅದರಲ್ಲೂ ಎಲ್ಲರೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿ ಬರಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಡಲಾಗಿದೆ.

    ಬಿಜೆಪಿ ಕಾರ್ಯಕರ್ತರು ಹಾಗೂ ಸುಧಾಕರ್ ಬೆಂಬಲಿಗರು ಮತದಾನದ ದಿನವೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿದ್ದರು. ಇದು ವಿಶೇಷವಾಗಿ ಎಲ್ಲರ ಗಮನ ಸೆಳೆದಿತ್ತು. ಈಗ ಮತ ಎಣಿಕೆ ದಿನವೂ ಕೇಸರಿ ಹಾಗೂ ಬಿಳಿ ಬಟ್ಟೆ ಧರಿಸಲು ತಿಳಿಸಲಾಗಿದೆ.

    ಮತ ಎಣಿಕೆ ದಿನ ನಿಷೇಧಾಜ್ಞೆ ಜಾರಿ:
    ಮತ ಎಣಿಕೆ ಕಾರ್ಯಯು ನಗರದ ಬಿಬಿ ರಸ್ತೆಯ ಜೂನಿಯರ್ ಕಾಲೇಜು ಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂ ಬಳಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. 10 ಟೇಬಲ್‍ಗಳ ಮೂಲಕ 26 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 09 ರ ಬೆಳಗ್ಗೆ 06ರಿಂದ ಡಿಸೆಂಬರ್ 10ರ ಬೆಳಗ್ಗೆ 06 ರವರೆಗೆ ವಿಧಾನಸಭಾ ಕ್ಷೇತ್ರಾದ್ಯಾಂತ 144 ಸೆಕ್ಷೆನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅರ್ ಲತಾ ಆದೇಶಿಸಿದ್ದಾರೆ.

  • ಸ್ಪಚ್ಛತಾ ಅಭಿಯಾನ ನಡೆಸಿ ‘ನಮೋ’ಗೆ ಶುಭಕೋರಿದ ಈಶ್ವರಪ್ಪ

    ಸ್ಪಚ್ಛತಾ ಅಭಿಯಾನ ನಡೆಸಿ ‘ನಮೋ’ಗೆ ಶುಭಕೋರಿದ ಈಶ್ವರಪ್ಪ

    ಶಿವಮೊಗ್ಗ: ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 69ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಶುಭದಿನದ ಅಂಗವಾಗಿ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

    ಇಂದು ಮುಂಜಾನೆ ನಗರದ ವಿನೋಬನಗರ ಮಾರುಕಟ್ಟೆ ಆವರಣಕ್ಕೆ ಆಗಮಿಸಿದ ಸಚಿವರು, ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅವರ ಅಭಿಮಾನಿಗಳು ಒಟ್ಟಿಗೆ ಸೇರಿ ರಸ್ತೆ ಹಾಗು ಚರಂಡಿ ಸ್ವಚ್ಛತೆ ನಡೆಸಿದರು. ಈ ಮೂಲಕ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಅಡಿ ಕೆಲಸ ಮಾಡಿದರು. ಈಶ್ವರಪ್ಪ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪೊರಕೆ ಹಿಡಿದು ವಿನೋಬನಗರದ ರಸ್ತೆ, ಚರಂಡಿ ಸ್ವಚ್ಛಗೊಳಿಸಿ ತಮ್ಮ ನೆಚ್ಚಿನ ನಾಯಕನಿಗೆ ಶುಭಕೋರಿ, ನಮೋ ಜನ್ಮದಿನವನ್ನು ಆಚರಿಸಿದರು.

    ಹಾಗೆಯೇ ಮೋದಿ ಅವರಿಗಾಗಿ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದರು. ಈ ವೇಳೆ ಜಿ.ಟಿ ದೇವೇಗೌಡ ಸೇರಿದಂತೆ ಸಂಸದ ಪ್ರತಾಪ್ ಸಿಂಹ, ಎಲ್. ನಾಗೇಂದ್ರ ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು.

    ಜಿ.ಟಿ ದೇವೇಗೌಡ ಅವರು ಬಿಜೆಪಿ ನಾಯಕರ ಜೊತೆ ಪೂಜೆಯಲ್ಲಿ ಭಾಗಿಯಾದಲ್ಲದೆ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಹೆಸರಿನಲ್ಲಿ ಅರ್ಚನೆ ಕೂಡ ಮಾಡಿಸಿದರು. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಯಕರು ಮೋದಿಗೆ ಶುಭ ಹಾರೈಸಿದರು.

  • ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಬಿಜೆಪಿಯಿಂದ ಅದ್ಧೂರಿ ಸ್ವಾಗತ

    ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಬಿಜೆಪಿಯಿಂದ ಅದ್ಧೂರಿ ಸ್ವಾಗತ

    ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಅದ್ಧೂರಿ ಸ್ವಾಗತ ಕೋರಿದ್ದಾರೆ.

    ಸಂಸದರಾದ ಬಿ.ಎನ್ ಬಚ್ಚೇಗೌಡ, ಮುನಿಸ್ವಾಮಿ, ಪ್ರತಾಪ ಸಿಂಹ, ಶಾಸಕರಾದ ಅಂಗಾರ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಳ್ಳಲು ಆಗಮಿಸಿದ್ದರು. ವೀರಗಾಸೆ, ಡೊಳ್ಳು ಕುಣಿತದೊಂದಿಗೆ ನಳಿನ್ ಕುಮಾರ್ ಅವರನ್ನು ಸ್ವಾಗತಿಸಲಾಯಿತು.

    ಈ ವೇಳೆ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ತಮ್ಮ ನೂತನ ರಾಜ್ಯಾಧ್ಯಕ್ಷರಿಗೆ ಸ್ವಾಗತ ಕೋರಿದರು. ಈ ವೇಳೆ ಇಡೀ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೇ ಬಿಜೆಪಿ ಮಯವಾಗಿತ್ತು. ಅಲ್ಲದೆ ಬಿಜೆಪಿ ಮಹಿಳಾ ಕಾರ್ಯಕರ್ತರು ಅವರಿಗೆ ಆರತಿ ಬೆಳಗಿ ಪ್ರೀತಿಯಿಂದ ಸ್ವಾಗತಿಸಿದರು. ತೆರೆದ ವಾಹನದಲ್ಲಿ ನಳಿನ್ ಕುಮಾರ್ ಅವರು ಮೆರವಣಿಗೆ ನಡೆಸಲಿದ್ದು, ಅವರಿಗೆ ಬಿಜೆಪಿ ಶಾಸಕರು ಹಾಗೂ ಸಂಸದರು ಸಾಥ್ ನೀಡಲಿದ್ದಾರೆ.

    ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪದಗ್ರಹಣ ಸಮಾರಂಭ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ನೂತನ ರಾಜ್ಯಾಧಕ್ಷರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಆಯ್ಕೆಯಾಗಿರುವ ಕಟೀಲ್ 12 ವರ್ಷಗಳ ಕಾಲ ಆರ್‍ಎಸ್‍ಎಸ್‍ನ ಪೂರ್ಣಾವಧಿ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಭಾನುವಾರವೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನದಿಂದ ಕಾರ್ಯಕ್ರಮ ಮುಂದೂಡಲಾಗಿತ್ತು.

  • ಸ್ಪೀಕರ್ ಗೆ  ಧೈರ್ಯ ನೀಡೆಂದು ಶಕ್ತಿದೇವತೆಗೆ ಬಿಜೆಪಿಯಿಂದ ಪೂಜೆ

    ಸ್ಪೀಕರ್ ಗೆ  ಧೈರ್ಯ ನೀಡೆಂದು ಶಕ್ತಿದೇವತೆಗೆ ಬಿಜೆಪಿಯಿಂದ ಪೂಜೆ

    ಮಂಡ್ಯ: ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಧೈರ್ಯ ನೀಡುವಂತೆ ಬಿಜೆಪಿ ಕಾರ್ಯಕರ್ತರು ಶಕ್ತಿದೇವತೆಯ ಮೊರೆ ಹೋಗಿ, ಸ್ಪೀಕರ್ ಹೆಸರಲ್ಲಿ ಅರ್ಚನೆ ಮಾಡಿ ಈ ರಾಜಕೀಯ ಹೈಡ್ರಾಮಾಕ್ಕೆ ಮುಕ್ತಿ ದೊರಕಲಿ ಎಂದು ಬೇಡಿಕೊಂಡಿದ್ದಾರೆ.

    ಸ್ಪೀಕರ್ ಗಾಗಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗಲಿ ಎಂದು ಮಂಡ್ಯದ ಶಕ್ತಿದೇವತೆ ಕಾಳಿಕಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬಂತೆ ಸ್ಪೀಕರ್ ಸದನ ನಡೆಸುತ್ತಿದ್ದಾರೆ. ಆಡಳಿತ ಪಕ್ಷದ ಭಯ ಸ್ಪೀಕರ್ ಅವರನ್ನು ಕಾಡುತ್ತಿದ್ಯ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿ ಅವರಿಗೆ ಕಾಳಿಕಾಂಭ ದೇವಿ ಧೈರ್ಯ ತುಂಬಲಿ ಎಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಕಮಲ ಕಾರ್ಯಕರ್ತರು ಟಾಂಗ್ ಕೊಟ್ಟಿದ್ದಾರೆ.

    ಯಡಿಯೂರಪ್ಪನವರಿಗೆ ಎದುರಾಗಿರುವ ತೊಡಕುಗಳು ನಿವಾರಣೆಯಾಗಲಿ. ಬಿಎಸ್‍ವೈ ಮತ್ತೆ ಸಿಎಂ ಆಗಲಿ ಎಂದು ಅಷ್ಟ ದಿಕ್ಕುಗಳಲ್ಲೂ ತಡೆ ಹೊಡೆಸಿದ್ದೇವೆ. ದೇವಾಲಯದ ಸುತ್ತಲೂ ಉರುಳುಸೇವೆ ಮಾಡಿ ದೇವಿಗೆ ಪ್ರಾರ್ಥಿಸಿದ್ದೇವೆ ಎಂದು ಕಾರ್ಯಕರ್ತರು ಹೇಳಿದರು.

  • ಪ್ರತಾಪ್ ಸಿಂಹ ವಿಜಯೋತ್ಸವ – ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಕಾರ್ಯಕರ್ತರ ಸ್ಟೆಪ್

    ಪ್ರತಾಪ್ ಸಿಂಹ ವಿಜಯೋತ್ಸವ – ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಕಾರ್ಯಕರ್ತರ ಸ್ಟೆಪ್

    ಮಡಿಕೇರಿ: ನೂತನ ಸಂಸದ ಪ್ರತಾಪ್ ಸಿಂಹ ಗೆಲುವನ್ನು ಸಂಭ್ರಮಿಸಲು ಬಿಜೆಪಿ ಕಾರ್ಯಕರ್ತರು ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ಪ್ರತಾಪ್ ಸಿಂಹ ಮೊದಲ ಭೇಟಿ ಹಿನ್ನೆಲೆಯಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದಾರೆ. ಈ ವೇಳೆ ಕಾಯರ್ಕಕರ್ತರು ನಿಖಿಲ್ ಎಲ್ಲಿದ್ದೀಯಪ್ಪ ಡಿಜೆ ಹಾಡಿಗೆ ಕುಣಿದು ಸಂಭ್ರಮಿಸಿದ್ದಾರೆ.

    ಸೋಮವಾರಪೇಟೆಯ ಕಕ್ಕೆಹೊಳೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ನೂರಾರು ಕಾರ್ಯಕರ್ತರು ಪ್ರತಾಪ್ ಸಿಂಹ ಅವರ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಪ್ರತಾಪ್ ಸಿಂಹ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ದು ಸಂಸದರಿಗೆ, ಹಾಸನದ ಪರಾಚಿತ ಬಿಜೆಪಿ ಅಭ್ಯರ್ಥಿ ಎ. ಮಂಜು ಸಾಥ್ ನೀಡಿದ್ದರು. ಮೆರವಣಿಗೆಯಲ್ಲಿ ಶಾಸಕ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಭಾಗಿಯಾಗಿದ್ದರು.

  • ಮೋದಿ ಪ್ರಮಾಣ ವಚನ – ಶೂ ಪಾಲಿಶ್ ಮಾಡಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

    ಮೋದಿ ಪ್ರಮಾಣ ವಚನ – ಶೂ ಪಾಲಿಶ್ ಮಾಡಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

    ಇಂದೋರ್: ಒಂದೆಡೆ ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದರೆ, ಇತ್ತ ಬಿಜೆಪಿ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ತಮ್ಮ ಪಕ್ಷ ಹಾಗೂ ನಾಯಕನ ಜಯವನ್ನು ಸಂಭ್ರಮಿಸಿದ್ದಾರೆ.

    ಗುರುವಾರ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಮೊದಲು ಬಿಜೆಪಿಯ ಕಾರ್ಪೋರೇಟರ್ಸ್ ಸೇರಿದಂತೆ ಹಲವು ಕಾರ್ಯಕರ್ತರು ರ್ಯಾಡಿಸನ್ ಚೌಕ್ ನಲ್ಲಿ ಸಾರ್ವಜನಿಕರ ಶೂ ಪಾಲಿಶ್ ಮಾಡಿದ್ದಾರೆ. ಕಾರ್ಪೋರೇಟರ್ ಸಂಜಯ್ ಕಠಾರಿಯಾ ನೇತೃತ್ವದ ತಂಡ ಈ ರೀತಿ ಜನ ಸೇವೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

    ಬಿಜೆಪಿ ಲೋಕಸಭಾ ಚುನಾವನೆಯಲ್ಲಿ ಭರ್ಜರಿ ಜಯಗಳಿಸಿ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಉಚಿತ ಬಸ್, ಆಟೋ ಸೇವೆ, ಉಚಿತ ಊಟದ ವ್ಯವಸ್ಥೆ ಹೀಗೆ ವಿಧವಿಧವಾಗಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಕಠಾರಿಯಾ ಅವರು, ಪ್ರತಿಯೊಂದು ಕೆಲಸವನ್ನು ಸಮಾನವಾಗಿ ನೋಡಬೇಕು ಎಂದು ಮೋದಿ ಅವರು ಹೇಳಿದ್ದಾರೆ. ಸ್ವತಃ ಅವರೇ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯವನ್ನು ಮಾಡಿದ್ದಾರೆ. ಹೀಗಾಗಿ ನಾವು ಮೋದಿ ಅವರ ಹಾದಿಯಲ್ಲೇ ಸಾಗುತ್ತಿದ್ದೇವೆ. ನಾವು ಈ ರೀತಿ ಕೆಲಸ ಮಾಡುವ ಮೂಲಕ ಎಲ್ಲರೂ ಒಂದೇ ಎನ್ನುವ ಸಂದೇಶ ಸಾರುತ್ತಿದ್ದೇವೆ ಎಂದು ತಿಳಿಸಿದರು.

    ಪಶ್ಚಿಮ ಬಂಗಾಳದ ಚಾಯ್‍ವಾಲಾ ಒಬ್ಬರು ಗುರುವಾರ ಉಚಿತವಾಗಿ ಟೀ ಹಂಚಿದ್ದಾರೆ. ನನ್ನ ನಾಯಕ ಪ್ರಧಾನಿಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ಉಚಿತ ಟೀ ಹಂಚಿದ್ದೇನೆ ಎಂದಿದ್ದಾರೆ. ಇನ್ನೂ ಸೂರತ್ ಮೂಲದ ಐಸ್ ಕ್ರೀಂ ವ್ಯಾಪಾರಿಯೊಬ್ಬರು `ಮೋದಿ ಸೀತಾಫಲ್ ಕುಲ್ಫಿ’ ಹೆಸರಿನ ಐಸ್ ಕ್ರೀಂ ಪರಿಚಯಿಸಿದ್ದಾರೆ. ಈ ಕುಲ್ಫಿಯ ವಿಶೇಷತೆ ಏನೆಂದರೆ ಮೋದಿ ಅವರ ಮೂಖದ ಆಕಾರದಲ್ಲಿ ಈ ಕುಲ್ಫಿ ತಯಾರಿಸಲಾಗಿದ್ದು, ಸುಮಾರು 200 ಮೋದಿ ಸೀತಾಫಲ್ ಕುಲ್ಫಿ ತಯಾರಿಸಲು 24 ಗಂಟೆ ಸಮಯ ಬೇಕಾಯ್ತು ಎಂದು ವ್ಯಾಪಾರಿ ತಿಳಿಸಿದ್ದಾರೆ.

  • ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರವಾಗಿ ಪೂಜೆ ಸಲ್ಲಿಸಿದ್ದಾರೆ. ಅದರಗುಂಚಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 65ಕ್ಕೆ ಪೂಜೆ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ, ತೋರಣದ ರೀತಿಯಲ್ಲಿ ಹೂವಿನ ಮಾಲೆ ಹಾಕಿ, ಬಳಿಕ ಹೊಸಲಿನ ಬಳಿ ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ. ಅಲ್ಲದೆ ಮತಗಟ್ಟೆಯಲ್ಲಿದ್ದ ಮತ ಯಂತ್ರಕ್ಕೂ ಕೂಡ ಆರತಿ ಬೆಳಗಿ ಕಾರ್ಯಕರ್ತರು ಪೂಜೆ ಮಾಡಿದ್ದಾರೆ.

    ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ.

  • ಮೋದಿ ಬಗ್ಗೆ ಮಾತನಾಡುವ ಮೊದಲು, ನೀನು ಗಂಡಸು ಅನ್ನೋದನ್ನು ಪರೀಕ್ಷಿಸಿಕೋ: ನಾರಾಯಣರಾವ್‍ಗೆ ಜಿಲ್ಲಾಧ್ಯಕ್ಷೆ ಸವಾಲ್

    ಮೋದಿ ಬಗ್ಗೆ ಮಾತನಾಡುವ ಮೊದಲು, ನೀನು ಗಂಡಸು ಅನ್ನೋದನ್ನು ಪರೀಕ್ಷಿಸಿಕೋ: ನಾರಾಯಣರಾವ್‍ಗೆ ಜಿಲ್ಲಾಧ್ಯಕ್ಷೆ ಸವಾಲ್

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಮೊದಲು ನೀನು ಗಂಡಸೇ ಎನ್ನುವುದನ್ನ ಪರೀಕ್ಷಿಸಿಕೋ ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ದಿವ್ಯಾ ಹಾಗಾರಗಿ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‍ಗೆ ಸವಾಲ್ ಹಾಕಿದ್ದಾರೆ.

    ಮೋದಿ ವಿರುದ್ಧ ಬಿ ನಾರಾಯಣರಾವ್ ವಿವಾದತ್ಮಕ ಹೇಳಿಕೆ ಖಂಡಿಸಿ, ಕಲಬುರಗಿ ನಗರದ ಸರ್ಧಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ದಿವ್ಯಾ ಹಾಗಾರಗಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ನಾರಾಯಣರಾವ್ ಅವರ ಭಾವಚಿತ್ರಕ್ಕೆ ಸಗಣಿ ಎರಚಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ದಿವ್ಯಾ ಅವರು, ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಎಂಥಹ ಸಂಸ್ಕೃತಿಯಿಂದ ಮಾತಾನಾಡಬೇಕು ಅಂತ ಕನಿಷ್ಟ ಜ್ಞಾನವಿಲ್ಲದ, ನಿನ್ನಂಥವನಿಗೆ ಆಯ್ಕೆ ಮಾಡಿದ್ದು ಶರಣರ ನಾಡಿನ ಜನರ ದುರ್ದೈವ. ಮೋದಿಯವರ ಬಗ್ಗೆ ಕೀಳಾಗಿ ಮಾತಾನಾಡುವ ಬದಲು, ನೀನು ಗಂಡಸೇ ಎನ್ನುವುದನ್ನ ಮೊದಲು ಪರೀಕ್ಷಿಸಿಕೋ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಬಸವಕಲ್ಯಾಣದ ಜನರಿಗೆ ಸ್ವಾಭಿಮಾನವಿದ್ದಲ್ಲಿ ಮೊದಲು ನಾರಾಯಣರಾವ್‍ನನ್ನ ಕ್ಷೇತ್ರದಿಂದ ಹೊರಹಾಕಿ ಅಂತ ಕರೆ ನೀಡಿದ್ದಾರೆ.

    ನಾರಾಯಣರಾವ್ ಹೇಳಿದ್ದು ಏನು?
    ಜಿಲ್ಲೆಯಲ್ಲಿ ನಡೆದ ಕೈ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ನಾರಾಯಣ ರಾವ್, ಮಲ್ಲಿಕಾರ್ಜುನ ಖರ್ಗೆ ಅವರ ಹಿಂದೆ ಇಡೀ ದೇಶವಿದೆ. ಆದರೆ ಅದು ಮೋದಿಗೆ ಅರ್ಥವಾಗುತ್ತಿಲ್ಲ. ನಾಮರ್ಧ್ ಕೇ ಸಾಥ್ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತಿ ಹೈ (ಷಂಡರ ಜೊತೆ ಮದ್ವೆಯಾಗುತ್ತದೆ. ಆದರೆ ಮಕ್ಕಳಾಗಲ್ಲ). ಮೋದಿ ಸೇ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತೆ ಹೈ(ಮೋದಿ ಜೊತೆ ಮದ್ವೆಯಾಗಬಹುದು, ಆದರೆ ಮೋದಿಗೆ ಮಕ್ಕಳಾಗಲ್ಲ) ಎಂದು ಹೇಳಿ ಪ್ರಧಾನಿ ಅವರನ್ನು ಷಂಡರಿಗೆ ಹೋಲಿಸಿ ವ್ಯಂಗ್ಯವಾಡಿದ್ದರು.

    ಮಲ್ಲಿಕಾರ್ಜುನ ಖರ್ಗೆಯನ್ನು ಎದುರಿಸೋ ಶಕ್ತಿ ಮೋದಿಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಮುಂದೊಂದು ದಿನ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುತ್ತ ಹಿಂದಿಯ ಶಾಯರಿಯೊಂದನ್ನು ಬಳಸಿ ಮೋದಿ ಅವರಿಗೆ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನಾರಾಯಣ್‍ರಾವ್ ನೀಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.

  • ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಟೀಕಿಸಿದ ಬಿಜೆಪಿ ಕಾರ್ಯಕರ್ತರು

    ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಟೀಕಿಸಿದ ಬಿಜೆಪಿ ಕಾರ್ಯಕರ್ತರು

    ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‍ನಿಂದ ಕುಟುಂಬ ರಾಜಕಾರಣ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ ದೇವೇಗೌಡರ ಕುಟುಂಬವನ್ನು ಮನಬಂದಂತೆ ಟೀಕಿಸುತ್ತಿದ್ದಾರೆ. ದೇವೇಗೌಡರ ಕುಟುಂಬದ ವಿರುದ್ಧ ಹಲವು ಪ್ರಶ್ನೆಗಳನ್ನು ಕೇಳಿ, ಲೇವಡಿ ಮಾಡಿ ಪೋಸ್ಟ್ ಗಳನ್ನು ಕೂಡ ಹಾಕುತ್ತಿದ್ದಾರೆ.

    ಕಳೆದ 25 ವರ್ಷಗಳಿಂದ ಪಕ್ಷಕ್ಕೋಸ್ಕರ ದುಡಿದು, ಬೆವರು, ರಕ್ತ ಸುರಿಸಿ ಹೋರಾಡಿದ ನನ್ನ ಜೆಡಿಎಸ್ ಅಣ್ತಮ್ಮಂದಿರ ಆತ್ಮಕ್ಕೆ ಶಾಂತಿ ಸಿಗಲಿ. ಮಂಡ್ಯ ಜಿಲ್ಲೆ ಸ್ವಾಭಿಮಾನ ಅಡವಿಟ್ಟ ನಿಮ್ಮ ಜನ್ಮಕ್ಕೆ ಧಿಕ್ಕಾರವಿರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಪೋಸ್ಟ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಹಾಗೂ ಮಂಡ್ಯದ ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಲೋಕಸಭಾ ಚುನಾವನೆಯಲ್ಲಿ ಆಕಸ್ಮಾತ್ ವಲಸಿಗ ಗೆದ್ದರೆ ನಿಮ್ಮನ್ನ ಮಂಡ್ಯ ಇತಿಹಾಸ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಕೆಲವರು ಬರೆದಿದ್ದರೆ, ಇನ್ನೂ ಕೆಲವರು ಸದ್ಯ ನಮ್ ಪುಣ್ಯ, ನಮ್ ಗೌಡ್ರು ಕ್ರಿಕೆಟ್ ಆಡಕ್ಕೆ ಕಲಿತು ಇಂಡಿಯಾ ಕ್ರಿಕೆಟ್ ಟೀಂ ಸೇರಿಲ್ಲ. ಇಲ್ಲಾಂದಿದ್ದರೆ ಇಷ್ಟೊತ್ತಿಗೆ ಫುಲ್ ಟೀಮ್ ಅಲ್ಲಿ ಅವರ ಕುಟುಂಬದವರೇ ಇರುತ್ತಿದ್ದರು ಎಂದು ಟೀಕಿಸಿದ್ದಾರೆ.

    ಕೆಲವರು ಮೊದಲೆಲ್ಲ ಮಂಡ್ಯ ಬಸ್ ನಿಲ್ದಾಣದಲ್ಲಿ ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಎಂದು ಕೂಗುತ್ತಿದ್ದರು. ಈಗ ಜೆಡಿಎಸ್ ಅಂದಾಭಿಮಾನಿಗಳು ಮಂಡ್ಯಕ್ಕೆ ನಿಖಿಲ್, ಮದ್ದೂರು ಡಿಸಿ ತಮ್ಮಣ್ಣ, ಚೆನ್ನಪಟ್ಟಣ ಕುಮಾರಸ್ವಾಮಿ, ರಾಮನಗರ ಅನಿತಾ ಕುಮಾರಸ್ವಾಮಿ, ಬೆಂಗಳೂರು ದೇವೇಗೌಡ್ರು ಎಂದು ಕೂಗುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಹೀಗೆ ಟೀಕೆ ಮಾಡಿದವರಲ್ಲಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜೆಡಿಎಸ್‍ಗೆ ಬಿಜೆಪಿ ಟೀಕಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ: ಪ್ರಧಾನಿ ಮೋದಿ

    ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ: ಪ್ರಧಾನಿ ಮೋದಿ

    ನವದೆಹಲಿ: ವಿರೋಧ ಪಕ್ಷಗಳ ಟೀಕೆಯ ನಡುವೆಯೂ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿದೊಡ್ಡ ವೀಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಲಕ್ಷಾಂತರ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ. ಈ ವೇಳೆ, ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶತ್ರು ದೇಶವು ಭಯೋತ್ಪಾದಕರಿಗೆ ಬೆಂಬಲಿಸಿ ಭಾರತ ವಿರುದ್ಧ ನಿಂತರೆ, ಅವರಿಂದ ಭಾರತದ ಅಭಿವೃದ್ಧಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ನಾವೆಲ್ಲರೂ ಜೊತೆಗೂಡಿ, ಒಂದಾಗಿ ಭಾರತೀಯ ಸೈನಿಕರ ಬೆಂಬಲಕ್ಕೆ ನಿಂತು ನಮ್ಮ ದೇಶವನ್ನು ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸಬೇಕು ಎಂದು “ಮೆರಾ ಬೂತ್ ಸಬ್ಸೇ ಮಜಬೂತ್” ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಭಾರತ ಒಂದಾಗಿ ನಿಲ್ಲುತ್ತದೆ, ಒಂದಾಗಿ ಕೆಲಸ ಮಾಡುತ್ತದೆ, ಒಂದಾಗಿ ಬೆಳೆಯುತ್ತದೆ. ಒಂದಾಗಿ ಹೋರಾಡುತ್ತದೆ ಹಾಗೂ ಒಂದಾಗಿ ಗೆಲ್ಲುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನಾವೆಲ್ಲ ಒಂದಾಗಿ ನಿಂತು ಶತ್ರುಗಳನ್ನು ಮಟ್ಟಹಾಕಬೇಕು ಎಂದು ಮೋದಿ ಅವರು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

    ಭಾರತ- ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವಾಗ ಪ್ರಧಾನಿ ಅವರು ತಮ್ಮ ಪಕ್ಷದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಭಾರತ ಪೈಲಟ್ ಪಾಕ್ ವಶದಲ್ಲಿದ್ದಾರೆ. ಗಡಿಯಲ್ಲಿ ಸೈನಿಕರು ಜಮಾವಣೆಗೊಂಡಿದ್ದಾರೆ. ಈ ಪರಿಸ್ಥಿತಿಯಲ್ಲೂ ಪ್ರಧಾನಿ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv