Tag: ಬಿಜೆಪಿ ಅಭಿಯಾನ

  • ಆತ್ಮ ನಿರ್ಭರ ಭಾರತ ಯಶಸ್ವಿಗೆ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ ಸೂತ್ರ: ಬಿಎಲ್ ಸಂತೋಷ್

    ಆತ್ಮ ನಿರ್ಭರ ಭಾರತ ಯಶಸ್ವಿಗೆ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ ಸೂತ್ರ: ಬಿಎಲ್ ಸಂತೋಷ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಆತ್ಮ ನಿರ್ಭರ ಭಾರತ ಯಶಸ್ವಿಗೆ ಎಲ್ಲರೂ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ (ನಮ್ಮ ಸಂಸ್ಕೃತಿ) ಎಂಬ ಮೂರು ಸೂತ್ರಗಳನ್ನು ಪಾಲನೆ ಮಾಡಬೇಕು ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

    ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19 ಕುರಿತು ಬಿಜೆಪಿ ಕೈಗೊಂಡಿದ್ದ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭ ಇಂದು ನಡೆಯಿತು. ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿದ್ದ ಬಿ.ಎಲ್.ಸಂತೋಷ್ ಅವರು ದೆಹಲಿಯಿಂದಲೇ ಮಾತನಾಡಿದರು.

    ಕೊರೊನಾ ಸಂಕಷ್ಟದ ಕಾಲದಲ್ಲಿ ನಾವೆಲ್ಲ ಇದ್ದು, ಒಂದು ಪಕ್ಷದ ಕಾರ್ಯಕರ್ತರಾಗಿ ನಾವು ಕೇವಲ ಪಕ್ಷದ ಕೆಲಸ, ರಾಜಕೀಯ ಕೆಲಸಕ್ಕೆ ಸೀಮಿತವಾಗಬಾರದು. ಸಾಮಾನ್ಯ ಜನರ ತಲ್ಲಣ, ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಜಗತ್ತಿನ ಅನೇಕ ವೈದ್ಯರು ಫೇಸ್ ಕವರ್, ಮಾಸ್ಕ್ ಅಗತ್ಯ ಇಲ್ಲ ಎಂದಿದ್ದರು. ಆದರೆ ನಮ್ಮ ಪ್ರಧಾನಿ ನಮಗೆಲ್ಲ ಫೇಸ್ ಕವರ್, ಮಾಸ್ಕ್ ಅಗತ್ಯ ಇದೆ ಅಂದ್ರು. ಈಗ ಆ ವಿಜ್ಞಾನಿಗಳೂ, ವೈದ್ಯರೂ ಫೇಸ್ ಕವರ್, ಮಾಸ್ಕ್ ಅಗತ್ಯ ಅಂತಿದ್ದಾರೆ.

    ಕೊರೊನಾ ಬಗ್ಗೆ ಸಮೂಹ ಸನ್ನಿ, ಸಾಮೂಹಿಕ ಉದ್ವೇಗ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ದೇಶದಲ್ಲಿ ಈಗಾಗಲೇ ಶೇ.40ರಷ್ಟು ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ನಾವು ವೈಯಕ್ತಿಕ ಎಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಕೊರೊನಾ ಎದುರಿಸಬೇಕಿದೆ. ಕೊರೊನಾ ಬಗ್ಗೆ ಆತಂಕ ಪಡುವ ಸನ್ನಿವೇಶ ಈಗ ದೇಶದಲ್ಲಿ ಇಲ್ಲ. ಇದುವರೆಗೂ ದೇಶದಲ್ಲಿ 1 ಕೋಟಿ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. 1,100 ಕ್ಕೂ ಹೆಚ್ಚು ಟೆಸ್ಟಿಂಗ್ ಲ್ಯಾಬ್‍ಗಳು ದೇಶದಲ್ಲಿವೆ. ಇಂತಹ ಸಂಕಷ್ಟದ ಸಮಯದಲ್ಲಿ 39 ಕೋಟಿ ಬ್ಯಾಂಕ್ ಖಾತೆಗಳಿಗೆ 65 ಸಾವಿರ ಕೋಟಿ ರೂ. ಪರಿಹಾರದ ಹಣ ಜಮೆ ಮಾಡಲಾಗಿದೆ. ಯಾವುದೇ ಮಧ್ಯವರ್ತಿಗಳಿಲ್ಲದೇ, ಯಾವುದೇ ಭ್ರಷ್ಟಾಚಾರ ಇಲ್ಲದೇ ಪರಿಹಾರ ಕೊಡಲಾಗಿದೆ ಎಂದು ಕೇಂದ್ರ ಸರ್ಕಾರದ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

    ಕಾಂಗ್ರೆಸ್ ವಿರುದ್ಧ ಟೀಕೆ: ವೀರ್ ಸಾವರ್ಕರ್ ಯಾರು ಎಂದು ಪ್ರಶ್ನೆ ಮಾಡಿದವರಿಗೆ ಭವಿಷ್ಯದಲ್ಲಿ ಕಸದ ಬುಟ್ಟಿಗೆ ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದ ಸಂತೋಷ್ ಅವರು, ರಾಹುಲ್ ಗಾಂಧಿ ಅವರು ವಿರುದ್ಧವೂ ಕಿಡಿಕಾರಿದರು. ಪ್ರಧಾನಿ ಮೋದಿ ಅವರು ಸೈನಿಕರನ್ನು ಭೇಟಿ ಮಾಡಿದಕ್ಕೂ ಟೀಕೆ ಮಾಡಿದ್ದಾರೆ. ಸೇನೆಯಯಲ್ಲಿ ಚೇತರಿಕೆ (ರಿಕವರಿ) ವಾರ್ಡ್ ಎಂದು ಸೈನಿಕರಿಗೆ ನೀಡಲಾಗಿರುತ್ತದೆ. ಸೈನಿಕರ ಗಾಯ ವಾಸಿಯಾದ ಮೇಲೆ ಈ ವಾರ್ಡಿನಲ್ಲಿರುತ್ತಾರೆ. ಸೈನಿಕರನ್ನು ಅಂತಹ ವಾರ್ಡಿನಲಿಟ್ಟ ವೇಳೆ ಪ್ರಧಾನಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆದರೆ ಇದುವರೆಗೂ ಒಂದೇ ಒಂದು ರಕ್ಷಣಾ ಸಭೆಗೆ ಬಾರದಿರುವವರು ಇಂತಹ ಆರೋಪ ಮಾಡಿರುವುದು ಸರಿಯಲ್ಲ ಎಂದರು.

    ಇದೇ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ರಾಜ್ಯ ಸರ್ಕಾರವನ್ನು ಬಿಎಲ್ ಸಂತೋಷ್ ಅವರು ಶ್ಲಾಘಿಸಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಇತರೇ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

    ಮೋದಿ ಸರ್ಕಾರದ ಒಂದು ವರ್ಷದ ಸಾಧನೆಗಾಗಿ ಮತ್ತು ಕೊರೊನಾ ಕುರಿತ ಮಾಹಿತಿಯನ್ನು ಮೂವತೈದು ಲಕ್ಷ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿತ್ತು. ಸ್ವದೇಶಿ ವಸ್ತು ಬಳಕೆಗೆ ಪ್ರತಿಜ್ಞೆ ಕುರಿತಂತೆ ಮನೆ ಮನೆ ಭೇಟಿ ನೀಡಿ ಮಾಹಿತಿ ನೀಡಲಾಗಿತ್ತು. ಸಾಮಾಜಿಕ ಜಾಲತಾಣ ಮೂಲಕ ಕೊರೊನಾ ಕುರಿತು ಜಾಗೃತಿ ಮೂಡಿಸಲು ಮಾಹಿತಿ ನೀಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ ಮತ್ತು ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಭೈರತಿ ಬಸವರಾಜು ಭಾಗಿಯಾಗಿದ್ದರು. ಕಾವೇರಿ ನಿವಾಸದಲ್ಲಿ, ಕುಟುಂಬ ಸದಸ್ಯರೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾರ್ಯಕ್ರಮ ವೀಕ್ಷಿಸಿದರು.