ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿಯವರಿಗೆ ಆತ್ಮರತಿ ಹೆಚ್ಚಾಗಿದ್ದು, ಜಂತಕಲ್ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ.
ತನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾರಣ ಎಂದು ಎಚ್‍ಡಿ ಕುಮಾರಸ್ವಾಮಿ ಆರೋಪಿಸಿದ ಬಳಿಕ ತೇಜಸ್ವಿನಿ ಗೌಡ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಮೂಲಕ ವಾಗ್ದಾಳಿ ನಡೆಸಿ ಪ್ರತ್ಯುತ್ತರ ನೀಡಿದ್ದಾರೆ.
ಮಾಜಿ ಸಿಎಂ ಆಗಿ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಅವರು ಮರೆತಿದ್ದಾರೆ. ಹಿಟ್ ಅಂಡ್ ರನ್ ಮಾಡುವುದರಲ್ಲಿ ಕುಮಾರಸ್ವಾಮಿ ಎಕ್ಸ್ ಪರ್ಟ್. ಉಪಚುನಾವಣೆಗೆ ಅವರು ಅಭ್ಯರ್ಥಿಗಳನ್ನು ಹಾಕುವುದಿಲ್ಲ. ಬೇಕಾದಾಗ ಕಾಂಗ್ರೆಸ್ ಜೊತೆ ಸೇರುತ್ತಾರೆ. ಯಡಿಯೂರಪ್ಪ ಸುದೀರ್ಘ ರಾಜಕಾರಣದ ಮೂಲಕ ಮುಖ್ಯಮಂತ್ರಿಯಾದವರು. ಅದ್ರೆ ಎಚ್‍ಡಿಕೆ ರಾತ್ರೋ ರಾತ್ರಿ ಮುಖ್ಯಮಂತ್ರಿಯಾದವರು. ಬಾಹುಬಲಿ, ಬಾಹುಬಲಿ 2 ನೋಡಿದ್ದೇವೆ. ಅದರೆ ಇವರ ಮೇಲೆ ಆರೋಪ ಮಾಡಲು ತುಂಬಾ ಸ್ಟೋರಿಗಳಿವೆ ಎಂದು ಆರೋಪಿಸಿದರು.
ಎಚ್‍ಡಿಕೆಯನ್ನು ಕಟ್ಟಪ್ಪನಿಗೆ ಹೋಲಿಕೆ ಮಾಡಿದ ಅವರು, 8 ಮಂದಿ ಸ್ನೇಹಿತರಿಗೇ ಅವರು ವಿಶ್ವಾಸದ್ರೋಹ ಮಾಡಿದ್ದಾರೆ. ತಮ್ಮ ಪುತ್ರರ ರಾಜಕೀಯ ಯಶಸ್ಸಿಗಾಗಿ ಯಾರನ್ನ ಬೇಕಾದ್ರೂ ಪಕ್ಷದಿಂದ ಹೊರಹಾಕ್ತಾರೆ ಎಂದು ಹೇಳಿದರು.
ಮೈಸೂರು: ಬಣ ರಾಜಕೀಯ, ಭಿನ್ನಮತ, ಕೆಸರೆರಚಾಟದ ಕಾರ್ಮೋಡದ ಬೆನ್ನಲ್ಲೇ ಮೈಸೂರಿನಲ್ಲಿ ಆರಂಭವಾದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಯ ಮೊದಲ ದಿನ ಒಂದು ರೀತಿ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಳ್ಳದಂತಹ ಚಿತ್ರಣ ಇತ್ತು.
ವೇದಿಕೆಯಲ್ಲಿ ಈಶ್ವರಪ್ಪ-ಯಡಿಯೂರಪ್ಪ ಮುಖ ತಿರುಗಿಸಿಕೊಂಡೇ ಇದ್ರು. ಈಶ್ವರಪ್ಪ ಕೈ ಮುಗಿದ್ರೂ ಬಿಎಸ್‍ವೈ ರಿಯಾಕ್ಟ್ ಮಾಡ್ಲಿಲ್ಲ. ಕಾರ್ಯಕಾರಿಣಿಗೆ ಚಾಲನೆ ನೀಡಿದ ಬಳಿಕ ಮುರಳೀಧರ್ ರಾವ್‍ಗೆ ಸನ್ಮಾನ ಮಾಡಿದಾಗ ಈಶ್ವರಪ್ಪ ಕುಳಿತೇ ಇದ್ರು.
ನಿರ್ಣಯಗೋಷ್ಠಿಯಲ್ಲಿ ಕೊನೇ ಕ್ಷಣದಲ್ಲಿ ಈಶ್ವರಪ್ಪ ಹೆಸ್ರನ್ನ ಸೇರಿಸಲಾಯ್ತು. ಇದ್ರಿಂದ, ಮೊದಲು ಯಾರ ನಿರ್ಣಯ ಗೋಷ್ಠಿ ಅಂತ ಜಗದೀಶ್ ಶೆಟ್ಟರ್ ಕನ್‍ಫ್ಯೂಸ್ ಆದ್ರು. ನಂತ್ರ, ಈಶ್ವರಪ್ಪ ಮೊದಲು ಬರಲ್ಲ ಅಂದಿದ್ರು. ಆಮೇಲೆ ಬಂದ್ರು ಅದಕ್ಕಾಗಿ ಸೇರಿಸಲಾಯ್ತು ಅಂತ ವೇದಿಕೆ ಮೇಲೆಯೇ ಶೆಟ್ಟರ್‍ಗೆ ಬಿಎಸ್‍ವೈ ಸ್ಪಷ್ಟನೆ ನೀಡಿದ್ರು.
ಯಡಿಯೂರಪ್ಪ ಭಾಷಣ ಆರಂಭಿಸಿದಾಗ ಎಲ್ಲರ ಹೆಸರು ಹೇಳಿ ಈಶ್ವರಪ್ಪ ಹೆಸ್ರು ಬಿಟ್ರು. ಬಳಿಕ ಎರಡು ಮನೆಗಳ ನಾಯಕ್ರೇ ಅಂದಾಗ ಎಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆ ನೋಡಿದ್ರು. ಈಶ್ವರಪ್ಪ ಹೆಸರು ಹೇಳದೆ ನಾನೂ ಅನಂತ್ ಕುಮಾರ್ ಒಟ್ಟಿಗೆ ಓಡಾಡಿ ಪಕ್ಷ ಕಟ್ಟಿದ್ವಿ. ಅಧಿಕಾರದ ಕುರ್ಚಿಗೆ ನಾನು ಅಂಟಿಕೊಂಡವನಲ್ಲ. ಹಾಗೇನಾದ್ರೂ ಆಗಿದ್ರೆ ಕುಮಾರಸ್ವಾಮಿ ಜೊತೆ ಹೋಗ್ತಿದೆ. ಬೈ ಎಲೆಕ್ಷನ್‍ನಲ್ಲಿ ಶೇಕಡಾವಾರು ಮತಗಳಿಗೆ ಹೆಚ್ಚಾಗಿದೆ. ಯಾರೂ ಧೃತಿಗೆಡಬೇಕಿಲ್ಲ ಅಂದಾಗಲೂ ಚಪ್ಪಾಳೆ ಸಿಗಲಿಲ್ಲ. ಕಾರ್ಯಕರ್ತರ ವರಸೆ ನೋಡಿ ಪೆಚ್ಚಾದ ಯಡಿಯೂರಪ್ಪ, ಬೆಳಗ್ಗೆ ಇಡ್ಲಿ ವಡೆ ಉಪ್ಪಿಟ್ಟು ತಿಂದು ಸುಸ್ತಾಗಿದ್ದೀರಾ ಅಂತ ತಿವಿದಾಗ ಚಪ್ಪಾಳೆ ಸದ್ದು ಕೇಳಿಸ್ತು. ಅಲ್ಲದೆ, ಕಾರ್ಯಕಾರಿಣಿಯಲ್ಲಿ ಭಿನ್ನಮತ ಬಗ್ಗೆ ಬಹಿರಂಗ ಚರ್ಚೆಗೆ ಅವಕಾಶ ಇಲ್ಲ. ಏನೇ ಇದ್ರೂ ವೈಯಕ್ತಿಕವಾಗಿ ಬಂದು ನನ್ನ ಜೊತೆ ಚರ್ಚಿಸಿ ಈಶ್ವರಪ್ಪ ಸೇರಿದಂತೆ ನಾವೆಲ್ಲಾ ಒಂದಾಗಿದ್ದೇವೆ ಅಂತ ಮೊದಲೇ ಹೇಳಿದ್ರು.
ಮುರಳಿಧರ್ ರಾವ್, ಅನಂತಕುಮಾರ್ ಅವರ ಭಾಷಣ ವೇಳೆ ಕೆಲವ್ರು ಆಕಳಿಸಿ, ನಿದ್ದೆ ಮಾಡ್ತಿದ್ರೆ ಮತ್ತೆ ಕೆಲವ್ರು ಮೊಬೈಲ್‍ನಲ್ಲಿ ಬ್ಯುಸಿಯಾಗಿದ್ರು.
ಕಾರ್ಯಕಾರಿಣಿಯಲ್ಲಿ ಮಾತನಾಡಿದ ಉಸ್ತುವಾರಿ ಮುರಳೀಧರ್ ರಾವ್, ಭಿನ್ನಮತದ ಬಗ್ಗೆ ಮಾತನಾಡದಂತೆ ಎಚ್ಚರಿಸಿದ್ರು. ನಂತ್ರ ಸಿದ್ದರಾಮಯ್ಯ ಸರ್ಕಾರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕಾಂಗ್ರೆಸ್ 150 ಸೀಟ್ ಗೆಲ್ಲಬೇಕಿದೆ ಅಂದ್ರು. ಸಭೆಯಲ್ಲಿ ಗಲಿಬಿಲಿ ಇತ್ತು. ತಕ್ಷಣ ಶೋಭಾ ಕರಂದ್ಲಾಜೆ ಎಚ್ಚರಿಸಿದಾಗ ಸರಿಮಾಡಿಕೊಂಡ್ರು. ಇನ್ನು, ಅನಂತ್‍ಕುಮಾರ್ ಮಾತನಾಡಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ 150 ಸೀಟು ಗೆಲ್ಲಬೇಕು. ಯಡಿಯೂರಪ್ಪ ಮತ್ತೆ ಸಿಎಂ ಆಗಬೇಕು ಅಂದ್ರು.
ಶಾಣಪ್ಪ ಮಾತು: ರಾಜ್ಯ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಕುರಿತು ಜಗದೀಶ್ ಶೆಟ್ಟರ್ ಮಂಡಿಸಿದ ನಿರ್ಣಯವನ್ನ ಪರಿಷತ್ ಉಪನಾಯಕ ಕೆ.ಬಿ.ಶಾಣಪ್ಪ ಅನುಮೋದಿಸಿದ್ರು. ಈ ವೇಳೆ, ಬಿಎಸ್‍ವೈ ಮತ್ತು ಈಶ್ವರಪ್ಪ ನಡಾವಳಿಯನ್ನ ತೀವ್ರವಾಗಿ ಖಂಡಿಸಿದ್ರು. ಪಕ್ಷದ ಪರಿಸ್ಥಿತಿ, ಉದ್ದೇಶವನ್ನ ಈಶ್ವರಪ್ಪ ಅರ್ಥಮಾಡಿಕೊಳ್ಳಬೇಕು. ಒಗ್ಗಟ್ಟಾಗಿದ್ದು, ಎಲ್ಲರ ವಿಶ್ವಾಸವಿದ್ದರೆ ಮಾತ್ರ ಮಿಷನ್ 150 ಗುರಿ ಮುಟ್ಟುವುದು ಸಾಧ್ಯ ಅಂದ್ರು. ಮರಳಿಧರ್‍ರಾವ್ ಮತ್ತು ಪುರಂದೇಶ್ವರಿಗೆಗೆ ಅರ್ಥವಾಗಲಿ ಅಂತ ಇಂಗ್ಲಿಷ್‍ನಲ್ಲಿ ಜಾಡಿಸಿದ್ರು. ಸಭೆ ಮೌನವಾಗಿತ್ತು. ಈ ಸಂದರ್ಭದಲ್ಲಿ ಮುರಳೀಧರ್ ರಾವ್, ಬಿಎಸ್‍ವೈ, ಈಶ್ವರಪ್ಪ ಸೇರಿದಂತೆ ಎಲ್ಲರೂ ಮೌನವಾಗಿದ್ರು. ಇನ್ನು, ಶಾಣಪ್ಪ ಅವರ ಬಗ್ಗೆ ಮಾತನಾಡುತ್ತ ದಲಿತ ನಾಯಕ, ಅಸ್ಪೃಶ್ಯತೆ ವಿರುದ್ಧ ಹೋರಾಡಿದವರು ಅಂತ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪರಿಚಯಿಸ್ತಿದ್ದಾಗ ಶಾಣಪ್ಪ ಕೆಂಡಾಮಂಡಲರಾದ್ರು. ಇನ್ನೂ ಯಾಕೆ ದಲಿತ, ದಲಿತ ಅಂತಿರಾ..? ನಮ್ಮನ್ಯಾಕೆ ಬಿಜೆಪಿ ಅಂತ ಹೇಳಲ್ಲ..? ಅಂಥ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದ್ರು.
ಭಿನ್ನಾಭಿಪ್ರಾಯದ ಹೊಗೆ: ಮೈಸೂರು ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿರುವ ಬಿಜೆಪಿ ಬಾವುಟ ಹಾಗೂ ಫ್ಲೆಕ್ಸ್‍ಗಳಲ್ಲಿ ಭಿನ್ನಾಭಿಪ್ರಾಯದ ಹೊಗೆ ಕಾಣ್ತಿತ್ತು. `ಮತದಾರರ ಮನಸ್ಸು ಅರಿಯಿರಿ.. ವೈಮನಸ್ಸು ಮರೆತು ಜೊತೆಯಲ್ಲಿ ಸಾಗಿರಿ. ಗೆಲುವಿಗೆ “ಸಂತೋಷವೇ” ಸೂತ್ರ ಅನ್ನೋ ಬರಹಗಳು ಗಮನ ಸೆಳೆದ್ವು. ಇನ್ನು, ಬ್ರಿಗೇಡ್ ವೀರ ಈಶ್ವರಪ್ಪ ಏಕಾಂಗಿಯಾಗಿದ್ರು.
ವೇದಿಕೆ ಮೇಲೆ ಹಾಗೂ ಊಟದ ಹಾಲ್‍ನಲ್ಲಿ ಒಂಟಿಯಾಗಿ ಕೂತಿದ್ರು. ಈಶ್ವರಪ್ಪ ಜೊತೆ ಮಾತನಾಡಲು ಹಿರಿಯ ನಾಯಕರೂ ಹಿಂಜರಿದ್ರು. ಇನ್ನು, ಊಟದ ಬ್ರೇಕ್‍ನಲ್ಲಿ ಬಿಜೆಪಿಯ ನಾಯಕರೆಲ್ಲಾ ಒಟ್ಟಾಗಿ ಕಾಣಿಸಿಕೊಂಡಾಗ ಕಾರ್ಯಕರ್ತರು ಸೆಲ್ಫಿಗಾಗಿ ನುಗ್ಗಿದ್ರು. ಇನ್ನು, ಮುರಳೀಧರ್‍ರಾವ್ ಕಟ್ಟಪ್ಪಣೆ ಮೇರೆಗೆ ಸುದ್ದಿಗೋಷ್ಠಿ ಸ್ಥಳವನ್ನು ಸ್ಥಳಾಂತರಿಸಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲಾಗಿತ್ತು.
ಈ ಮಧ್ಯೆ, ಮೊದಲ ದಿನದ ಕಾರ್ಯಕಲಾಪದ ಬಗ್ಗೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯ ಸರ್ಕಾರದ ಭ್ರಷ್ಟಚಾರದ ವಿರುದ್ಧ ಹೋರಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಅಂದ್ರು. ಆದ್ರೆ, ಪಕ್ಷದ ಬಿಕ್ಕಟ್ಟಿನ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೆ ತರಾತುರಿಯಲ್ಲಿ ಸುದ್ದಿಗೋಷ್ಠಿ ಮುಗಿಸಿದ್ರು.
ಬೆಂಗಳೂರು: ಶನಿವಾರ ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕುತೂಹಲ ಹುಟ್ಟುಹಾಕಿದೆ. ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯೂ ಹೆಚ್ಚಿದೆ.
ಈ ನಡುವೆ ಅತೃಪ್ತ ನಾಯಕರಿಗೆ ಅಧ್ಯಕ್ಷೀಯ ಭಾಷಣದಲ್ಲಿ ತಿರುಗೇಟು ನೀಡಲು ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಪಕ್ಷದ ವೇದಿಕೆಯಲ್ಲಿ ಅತೃಪ್ತರ ಕಾಮೆಂಟ್ಸ್ ಗೆ ತಿರುಗೇಟು ನೀಡಲಿರುವ ಯಡಿಯೂರಪ್ಪ, ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರತಿಕ್ರಿಯೆ ನೀಡಲು ಬಯಸಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಅಲ್ಲದೆ ಪಕ್ಷದ ಯಾವುದೇ ನಾಯಕರು ಪ್ರಸ್ತಾಪಿಸುವ ವಿಚಾರಗಳಿಗೆ ಉತ್ತರ ನೀಡಲು ಸಮಯವಕಾಶ ಮೀಸಲಿಡಲು ಬಿಎಸ್‍ವೈ ತೀರ್ಮಾನಿಸಿದ್ದು, ಅಮಿತ್ ಷಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ಸಂಪೂರ್ಣ ವಿವರಗಳನ್ನು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪ ಮಾಡಿ ಕಾರ್ಯಕರ್ತರಲ್ಲಿ ಇರುವ ಗೊಂದಲಗಳಿಗೆ ಉತ್ತರ ನೀಡಲು ಯಡಿಯೂರಪ್ಪ ಸಿದ್ಧವಾಗಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ಸೈಡ್‍ಲೈನ್: ಬಿಜೆಪಿಯಲ್ಲಿ ಬಂಡೆದ್ದ ಭಿನ್ನಮತ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಈಶ್ವರಪ್ಪರನ್ನ ಫುಲ್ ಸೈಡ್ ಲೈನ್ ಮಾಡುವ ಪ್ಲಾನ್ ನಡೆದಿದ್ಯಾ ಅನ್ನೋ ಪ್ರಶ್ನೆಗಳು ಎದ್ದಿವೆ. ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ವಿವಿಧ ಗೋಷ್ಠಿ ನಡೆಯಲಿವೆ. ಆದ್ರೆ ಗೋಷ್ಠಿಯಲ್ಲಿ ಕೆಎಸ್ ಈಶ್ವರಪ್ಪ ಹೆಸರೇ ಇಲ್ಲವಾಗಿದೆ.
ವಿಧಾನ ಸಭೆ ಪ್ರತಿಪಕ್ಷ ನಾಯಕ ಶೆಟ್ಟರ್ ಗೆ ಅವಕಾಶ ನೀಡಿದ್ರೆ, ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪಗೆ ಅವಕಾಶ ಇಲ್ಲ. ಹಾಗಾಗಿ ಇದು ತಿರುಗಿಬಿದ್ದಿರುವ ಈಶ್ವರಪ್ಪಗೆ ಬಿಎಸ್‍ವೈ ಟಾಂಗ್ ನೀತಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ ಈಶ್ವರಪ್ಪಗೆ ಮುಖಭಂಗ ಮಾಡಲು ಪ್ಲಾನ್ ನಡೆದಿದೆ ಎನ್ನಲಾಗಿದೆ.
ಆದರೆ ಬಿಎಸ್‍ವೈಗೆ ಟಾಂಗ್ ಕೊಡಲು ಈಶ್ವರಪ್ಪ ಆಂಡ್ ಬಿ.ಎಲ್.ಸಂತೋಷ್ ಬಣ ನಿರ್ಧರಿಸಿದೆ. ಸಂತೋಷ್ ವಿರುದ್ಧ ಬಿಎಸ್ ವೈ ಮಾತನಾಡಿರುವ ವಿಚಾರವನ್ನ ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಲು ಈಶ್ವರಪ್ಪ ಬಣದ ಮುಖಂಡರು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಬಿಎಸ್‍ವೈ ರನ್ನ ಇಕ್ಕಟ್ಟಿಗೆ ಸಿಲುಕಿಸಲು ಮಾಸ್ಟರ್ ಪ್ಲ್ಯಾನ್ ನಡೆದಿದೆ. ಅಲ್ಲದೆ ಈಶ್ವರಪ್ಪ ಕೂಡ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಭಾಗವಹಿಸ್ತಾರಾ ಅನ್ನೋದ್ರ ಬಗ್ಗೆ ಕುತೂಹಲ ಹೆಚ್ಚಿದೆ.
ಪ್ರತಿಕ್ರಿಯೆಗೆ ನಕಾರ: ಈ ನಡುವೆ ರಾಜ್ಯ ಬಿಜೆಪಿ ಭಿನ್ನಮತ ವಿಚಾರ, ಮೈಸೂರಿನ ಕಾರ್ಯಕಾರಿಣಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಲು ಬಿಎಸ್‍ವೈ ನಕಾರ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಗೌಪ್ಯ ವೀಕ್ಷಕರನ್ನ ಕಳುಹಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಬಿಎಸ್ ವೈ ನಕಾರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ತುಟಿ ಬಿಚ್ಚದೇ ತಲೆಯಾಡಿಸಿ ಬಿಎಸ್‍ವೈ ಹೊರು ಹೋದರು.
ಬೆಂಗಳೂರು: `ಬಿಜೆಪಿ ಉಳಿಸಿ’ ಅಂತ ಅತೃಪ್ತರ ಜೊತೆ ಸಭೆ ನಡೆಸಿ, ತಮ್ಮ ವಿರುದ್ಧ ಕಿಡಿಕಾರಿದ್ದ ಈಶ್ವರಪ್ಪ ವಿರುದ್ಧ ಕಂಪ್ಲೆಂಟ್ ಕೊಡೋಕೆ ಅಂತ ಯಡಿಯೂರಪ್ಪ ದೆಹಲಿಗೆ ತರಳಿದ್ದಾರೆ. ಅದಕ್ಕೂ ಮುಂಚೆಯೇ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನೊಂದ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಅಮಿತ್ ಷಾ ಅವರಿಗೆ ಪತ್ರ ಬರೆಯಲಾಗಿದೆ.
ಕಾರ್ಯಕರ್ತರ ನೋವಿಗೆ ಬಿಎಸ್‍ವೈ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪನವರಿಗೆ ಭ್ರಷ್ಟಾಚಾರವೇ ಬಂಡವಾಳ. ಸಿಎಂ ಆದರೆ ಮತ್ತೆ ಚಾಳಿ ಮುಂದುವರಿಸಬಹುದು. ಬಿಎಸ್‍ವೈ ಗೆ ಲಿಂಗಾಯಿತರನ್ನ ಆಕರ್ಷಿಸುವ ಶಕ್ತಿ ಕುಂದಿದೆ. ಒಂದು ಕೋಮಿಗೆ ಮಾತ್ರ ಅತೀ ಪ್ರಾಶಸ್ತ್ಯ ನೀಡಲಾಗ್ತಿದೆ. ಉಪಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ. ಉಪಚುನಾವಣೆಗೆ 60 ಕೋಟಿ ಸಂಗ್ರಹಿಸಿದ್ರು. ಅದರಲ್ಲಿ ಖರ್ಚು ಮಾಡಿದ್ದು 20 ಕೋಟಿ ಮಾತ್ರ. ಉಳಿದ ಹಣ ವೈಯಕ್ತಿಕ ಬಳಕೆಗೆ ವೆಚ್ಚ ಮಾಡಿದ್ದಾರೆ. ಈ ಬಗ್ಗೆ ಸಾಕ್ಷ್ಯಾಧಾರಗಳಿವೆ. ಆಡಿಯೋ -ವಿಡಿಯೋ ಕ್ಲಿಪಿಂಗ್ಸ್ ಇವೆ. ಕೊಡಲು ಸಿದ್ಧ. ಬಿಎಸ್‍ವೈ ವಿರುದ್ಧವೇ ಶಿಸ್ತು ಕ್ರಮ ಜರುಗಿಸಿ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಮಿತ್ ಷಾ ಸೇರಿದಂತೆ 19 ನಾಯಕರಿಗೆ ಪತ್ರದ ಪ್ರತಿಯನ್ನ ರವಾನಿಸಲಾಗಿದೆ. ಆದ್ರೆ ಪತ್ರದಲ್ಲಿ ಯಾರ ಸಹಿಯೂ ಇಲ್ಲ. ಈ ಮಧ್ಯೆ ದೆಹಲಿಯಲ್ಲಿರೋ ಬಿಎಸ್‍ವೈಗೆ ಅಮಿತ್ ಷಾ ಸಿಗುತ್ತಿಲ್ಲ. ಹೀಗಾಗಿ, ಕೇವಲ ರಾಮ್‍ಲಾಲ್ ಅವ್ರನ್ನ ಮಾತ್ರ ಭೇಟಿಯಾಗ್ತಿದ್ದಾರೆ.
ಬೆಂಗಳೂರು: ನಗರದಲ್ಲಿ ಗರುವಾರದಂದು ನಡೆದ ಅತೃಪ್ತರ ಸಮಾವೇಶದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಬಿಜೆಪಿ ಕೇಂದ್ರ ಕಚೇರಿಯಲ್ಲಿದ್ದ ಸಿಬ್ಬಂದಿ ವಜಾಕ್ಕೆ ಬಿಎಸ್‍ವೈ ಸೂಚನೆ ನೀಡಿದ್ದಾರೆ.
ಸಮಾವೇಶದ ಕರಪತ್ರ ಡ್ರಾಫ್ಟ್ ಸಿದ್ದಪಡಿಸಿದ್ದು, ಕೆಲ ನಾಯಕರಿಗೆ ಮೇಲ್ ಹಾಕಿದ ಆರೋಪದ ಮೇಲೆ ಕಂಪ್ಯೂಟರ್ ಅಪರೇಟರ್ ಮಲ್ಲಿಕಾರ್ಜುನ್ ವಜಾಕ್ಕೆ ಬಿಎಸ್‍ವೈ ಗರುವಾರ ಸಂಜೆಯೇ ಸೂಚನೆ ನೀಡಿದ್ದಾರೆ. ಮಲ್ಲಿಕಾರ್ಜುನ, ಬಿಎಲ್ ಸಂತೋಷ್ ಅವರ ಬೆಂಬಲಿಗರಾಇದ್ದು, 10 ವರ್ಷಗಳಿಂದ ಕೆಲಸ ಮಾಡ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಎಸ್‍ವೈ, ಬಿಜೆಪಿ ಕಚೇರಿ ಉದ್ಯೋಗಿ ಮಲ್ಲಿಕಾರ್ಜುನ್ ಸಿಐಡಿಯಂತೆ ಕೆಲಸ ಮಾಡ್ತಿದ್ದ. ಅದಕ್ಕೆ ವಜಾ ಮಾಡಿದ್ದೀನಿ. ಈಶ್ವರಪ್ಪ ನಡವಳಿಕೆ ತಿದ್ದುಕೊಳ್ಳಬೇಕು. ಸಂತೋಷ್ ಅವರು ರಾಷ್ಟ್ರೀಯ ಜವಾಬ್ದಾರಿ ನೋಡಿಕೊಳ್ಳಲಿ, ರಾಜ್ಯದ ಬಗ್ಗೆ ಬೇಡ. ಸಂತೋಷ್ ಜೊತೆ ಈಶ್ವರಪ್ಪ ಗಂಟೆಗಟ್ಟಲೆ ಮಾತನಾಡ್ತಿದ್ರೆ ಏನ್ ಅನಿಸುತ್ತೆ ಎಂದು ಪರೋಕ್ಷವಾಗಿ ಬಿ.ಎಲ್ ಸಂತೋಷ್ ಅವರ ಬಗ್ಗೆ ಬಿಎಸ್‍ವೈ ಅಸಮಾಧಾನ ವ್ಯಕ್ತಪಡಿಸಿದ್ರು.
ವಿಪಕ್ಷ ನಾಯಕ ಸ್ಥಾನದಿಂದ ಈಶ್ವರಪ್ಪರನ್ನ ಕೆಳಗಿಳಿಸೋ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಎಂಎಲ್‍ಸಿಗಳ ಬೇಡಿಕೆಯನ್ನ ಗಮನಿಸಿ ನಿರ್ಧಾರ ಪ್ರಕಟಿಸುತ್ತೇವೆ. ನಾನು ಬದಲಾಗಿಲ್ಲ, ಮಾತು ಬದಲಾಗಿಲ್ಲ. ಈಶ್ವರಪ್ಪ ಬಹಿರಂಗ ಸಭೆ ನಡೆಸಿ ಪಕ್ಷ ವಿರೋಧಿ ಧೋರಣೆ ತಾಳಿದ್ದಾರೆ. ದೆಹಲಿಗೆ ಹೋಗ್ತಿದ್ದೀನಿ ರಾಮಲಾಲ್, ಅಮಿತ್ ಷಾ ಅವರನ್ನ ಭೇಟಿ ಮಾಡ್ತೀನಿ ಅಂದ್ರು.
ಬೆಂಗಳೂರು: ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಿಕ್ಕಟ್ಟು ಜೋರಾಗಿದೆ. ಈ ಮಧ್ಯೆ, ಸಮಾವೇಶದ ಸಿಡಿ ಸಮೇತ ಇವತ್ತು ಬಿಎಸ್‍ವೈ ದೆಹಲಿಗೆ ತೆರಳಲಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್‍ಗೆ ಮಾಹಿತಿ ಕೊಟ್ಟಿದ್ದು, ಇವತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ದೂರು ನೀಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಗ್ಗೆ ಮಾತನಾಡಿರುವ ಯಡಿಯೂರಪ್ಪನವರು ಕ್ಷಮೆ ಯಾಚಿಸಬೇಕು ಅಂತಾ ಈಶ್ವರಪ್ಪ ಆಗ್ರಹಿಸಿದ್ದಾರೆ. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂತೋಷ್ ಬಗ್ಗೆ ಮಾತನಾಡಲು ಯಡಿಯೂರಪ್ಪನವರಿಗೆ ಅಧಿಕಾರ ಕೊಟ್ಟವರು ಯಾರು ಅಂತಾ ಕಿಡಿಕಾರಿದ್ರು. ಹೈಕಮಾಂಡ್‍ನ ಮಾತು ಕೇಳದ, ಸಂತೋಷ್ ವಿರುದ್ಧ ಮಾತನಾಡಿರುವ ಯಡಿಯೂರಪ್ಪ ವಿರುದ್ಧ ಶಿಸ್ತು ಕ್ರಮವಾಗಬೇಕು. ನನ್ನ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಅಂತಾ ಯಡಿಯೂರಪ್ಪಗೆ ಮತ್ತೆ ಟಾಂಗ್ ಕೊಟ್ರು.
ನನ್ನ ತಂದೆ ತಾಯಿ ಮೇಲಾಣೆ ನಾನು ಕಾಂಗ್ರೆಸ್ ಸಹವಾಸ ಮಾಡಿಲ್ಲ. ನನ್ನ ಕಡಿದರೂ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ ಅಂತಾ ಯಡಿಯೂರಪ್ಪಗೆ ತಿರುಗೇಟು ನೀಡಿದ್ರು. ನಾವ್ಯಾರೂ ಇನ್ನು ಹೈಕಮಾಂಡ್ ಬಳಿ ಹೋಗಲ್ಲ, ಮೇ 10 ರೊಳಗೆ ಎಲ್ಲವನ್ನು ಸರಿಪಡಿಸಬೇಕು. ಹೈಕಮಾಂಡ್ ಮತ್ತೆ ಯಡಿಯೂರಪ್ಪ ಇಬ್ಬರಿಗೂ ಇದು ಡೆಡ್ ಲೈನ್ ಅಂದ್ರು.
ಬೆಂಗಳೂರು: ಪಕ್ಷದ ಒಳಗಿನ ಎಲ್ಲ ಆಂತರಿಕ ಸಮಸ್ಯೆಯ ಪರಿಹಾರಕ್ಕೆ ಭಿನ್ನರು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಡೆಡ್‍ಲೈನ್ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಬಿಜೆಪಿ ಪಕ್ಷದ ವತಿಯಿಂದ ಅರಮನೆ ಮೈದಾನದಲ್ಲಿ ಗುರುವಾರ ಆಯೋಜನೆಗೊಂಡಿದ್ದ ‘ಸಂಘಟನೆ ಉಳಿಸಿ ಸಮಾವೇಶ’ದಲ್ಲಿ ಮೇ 10 ರೊಳಗೆ ಎಲ್ಲ ಸಮಸ್ಯೆ ಪರಿಹರಿಸಬೇಕು. ಪಕ್ಷದ ವರಿಷ್ಠರು ಸಮಸ್ಯೆ ಇತ್ಯರ್ಥ ಪಡಿಸಬೇಕು. ಇಲ್ಲವಾದರೆ ಮೇ 20 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಉಳಿದ ಉದಾಹರಣೆಗಳಿಲ್ಲ. ನಾವೆಲ್ಲರೂ ದೆಹಲಿಗೆ ರೈಲಿನಲ್ಲಿ ಹೋಗಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಬೇಕು. ಭೇಟಿಗೆ ಅವಕಾಶ ಸಿಗದಿದ್ದರೂ ಇರಬಹುದು. ಈಗಿನಿಂದಲೇ ಹಣಜೋಡಿಸಿಕೊಳ್ಳಲು ಪ್ರಯತ್ನಿಸಿ. ನಾವು ಮೆಸೇಜ್ ಕೊಟ್ಟ ತಕ್ಷಣ ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಭಾನುಪ್ರಕಾಶ್ ಕರೆ ನೀಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಸೊಗಡು ಶಿವಣ್ಣ, ರವೀಂದ್ರನಾಥ್, ಪರಿಷತ್ ಸದಸ್ಯ ಭಾನು ಪ್ರಕಾಶ್, ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಸಾರ್ವಭೌಮ ಬಗಲಿ, ಮಾಜಿ ಪರಿಷತ್ ಸದಸ್ಯರಾದ ಶಿವಯೋಗಿ ಸ್ವಾಮಿ, ಸಿದ್ದರಾಜು, ಸಿದ್ರಾಮಣ್ಣ ಉಪಸ್ಥಿತರಿದ್ದರು. 25ಕ್ಕೂ ಹೆಚ್ಚು ಮುಖಂಡರು, 500 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.
ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರ ಬಣದ ಬಂಡಾಯವನ್ನು ಶಮನ ಮಾಡಲು ಬಿಎಸ್‍ವೈ ಮುಂದಾಗಿದ್ದು ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರ ಅಮಾನತು ಆದೇಶ ನಾಲ್ಕೇ ತಿಂಗಳಿನಲ್ಲಿ ರದ್ದಾಗಿದೆ.
ಬಿಎಸ್ ಯಡಿಯೂರಪ್ಪ ಅವರ ಸೂಚನೆ ಹಿನ್ನಲೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಪಿಎನ್ ಸದಾಶಿವ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ. ವೆಂಕಟೇಶ್ ಮೂರ್ತಿ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುತ್ತಾರೆ ಎಂಬ ಭರವಸೆಯಿಂದ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಪರಿಷತ್ ಸದಸ್ಯ ಈಶ್ವರಪ್ಪ ನೇತೃತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಜನವರಿ 9ರಂದು ವೆಂಕಟೇಶ್ ಮೂರ್ತಿ ಅವರನ್ನ ಅಮಾನತು ಮಾಡಲಾಗಿತ್ತು. ಆದ್ರೆ ಅಸಮಾಧಾನಿತರ ಬಂಡಾಯಕ್ಕೆ ಮಣಿದ ಬಿಎಸ್‍ವೈ ನಾಲ್ಕೇ ತಿಂಗಳಿಗೆ ವೆಂಕಟೇಶ್ ಅವರ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ ಅಂತ ಹೇಳಲಾಗಿದೆ.
ವೆಂಕಟೇಶ್ ಮೂರ್ತಿ ಅಮಾನತುಗೊಂಡಾಗ ಇದು ಬಿಜೆಪಿಯ ಟೆಸ್ಟ್ ಡೋಸ್. ಮುಂದಿನ ದಿನಗಳಲ್ಲಿ ರಾಯಣ್ಣ ಬ್ರಿಗೇಡ್ ಜೊತೆ ಗುರುತಿಸಿಕೊಂಡಿರುವ ಮತ್ತಷ್ಟು ನಾಯಕರ ಮೇಲೆ ಬಿಜೆಪಿ ಕ್ರಮ ಕೈಗೊಳ್ಳಲಿದೆ ಎನ್ನುವ ಮಾತುಗಳು ಅಂದು ಕೇಳಿ ಬಂದಿತ್ತು.
ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಸೋಲಿನ ಬಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯರೂಪ್ಪ ನೇತೃತ್ವದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ಹೊರ ಹೊಮ್ಮಿದೆ.
ಗುಂಡ್ಲಪೇಟೆ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇತ್ತು. ಆದರೆ ಗೀತಾ ಮಹದೇವ್ ಪ್ರಸಾದ್ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಗೀತಾ ಅವರ ಪರ ಅನುಕಂಪ ಇರುವಾಗ ಇಂಥಹ ಹೇಳಿಕೆ ಬಿಜೆಪಿಗೆ ಸಾಕಷ್ಟು ಹಿನ್ನೆಡೆ ಉಂಟುಮಾಡಿತು. ಅಷ್ಟೇ ಅಲ್ಲದೇ ಪ್ರತಾಪ್ ಸಿಂಹ ಹೇಳಿಕೆಗೆ ಬಿಜೆಪಿ ಮುಖಂಡರಿಂದಲೇ ಖಂಡನೆ ವ್ಯಕ್ತವಾಯಿತು ಎಂದು ಪಬ್ಲಿಕ್ ಟಿವಿಗೆ ಮೂಲಗಳು ಮಾಹಿತಿ ನೀಡಿವೆ.
ಅಧಿಕಾರ ದುರುಪಯೋಗ: ಆತ್ಮಾವಲೋಕನ ಸಭೆ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಹಣದ ಹೊಳೆ ಹರಿಸಿದ ನಾಯಕರು ಮತದಾರರ ಖರೀದಿ ಮಾಡುವ ಮೂಲಕ ಅಕ್ರಮ ನಡೆಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ಮಿಷನ್ 150 ಗುರಿ ಇಟ್ಟುಕೊಂಡು ಮುನ್ನಡೆಯುತ್ತೇವೆ. ಕೇಂದ್ರ ಬಿಜೆಪಿ ಸಾಧನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಲಿಂಬಾವಳಿ ಹೇಳಿದರು.
ಸಭೆಯಲ್ಲಿ ಯಾರಿದ್ದರು: ಆತ್ಮಾವಲೋಕನ ಸಭೆಯಲ್ಲಿ ಅಭ್ಯರ್ಥಿಗಳಾಗಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ನಿರಂಜನ್, ಚುನಾವಣಾ ಉಸ್ತುವಾರಿ ಹೊತ್ತಿದ್ದ ವಿ.ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ, ಚುನಾವಣಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ ಬಿಜೆಪಿ ಮುಖಂಡರಾದ ಮಾಜಿ ಸಚಿವ ರಾಮದಾಸ್, ಉದಾಸಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಮೇಲ್ಮನೆ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್, ತಾರಾ ಅನುರಾಧ, ಶೃತಿ, ನಂಜನಗೂಡು, ಗುಂಡ್ಲುಪೇಟೆ ಪಕ್ಷದ ಮುಖಂಡರು ಭಾಗಿಯಾಗಿದ್ದರು.
ನಾಯಕರು ಗೈರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ, ಸಂಸದ ಪ್ರತಾಪ ಸಿಂಹ ಗೈರಾಗಿದ್ದರು.
ಪ್ರತಾಪ್ ಸಿಂಹ ಹೇಳಿದ್ದು ಏನು?
ಮಾಜಿ ಸಚಿವ ದಿವಂಗತ ಮಹದೇವ್ ಪ್ರಸಾದ್ ಅವರ ಪತ್ನಿ ಗೀತಾ ಅವರ ವಿರುದ್ಧ ಪ್ರತಾಪ್ ಸಿಂಹ,”ಗೀತಾ ಮಹಾದೇವ್ ಪ್ರಸಾದ್ ಅವರೇ ನಿಮ್ಮ ಪತಿ ಮೃತಪಟ್ಟು ಹಾಲು ತುಪ್ಪ ಬಿಡೋ ದಿನವೇ ನಿವೇ ಅಭ್ಯರ್ಥಿ ಎಂಬುದಾಗಿ ಘೋಷಿಸಿಕೊಂಡಿದ್ದೀರಿ. ನಿಮ್ಮ ಮನೆಯ ಅಭಿವೃದ್ಧಿಗೆ ಮತ ಕೇಳಬೇಡಿ” ಎಂದು ಹೇಳಿಕೆ ನೀಡಿದ್ದರು. ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ನಿಮಗೆ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇನೆ, ಹೇಳಿಕೆಯನ್ನೂ ಹಿಂಪಡೆಯುತ್ತೇನೆ. ರಾಜಕಾರಣಿಗಳು ಮೃತಪಟ್ಟಾಗ ಅವರ ಮನೆಯವರನ್ನು ಚುನಾವಣೆಗೆ ನಿಲ್ಲಿಸಿ ಅನುಕಂಪದ ಆಧಾರದಲ್ಲಿ ಮತ ಪಡೆಯಲಾಗುತ್ತದೆ. ನೋವಿಗಿಂತ ಅಧಿಕಾರವೇ ಮುಖ್ಯವಾಯಿತೇ ಎಂದು ಪ್ರಶ್ನಿಸಿದ್ದೆ. ಅದರಾಚೆಗೆ ನನ್ನ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದರು.
ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿಕ್ರಿಯಿಸಿದ್ದ ಗೀತಾ ಮಹಾದೇವ್ ಪ್ರಸಾದ್, ನಾನು ಗೆಲುವನ್ನು ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಯಂತೆ ಜಯಗಳಿಸಿದ್ದೇನೆ. ಸಂಸದ ಪ್ರತಾಪ್ ಸಿಂಹ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ನನ್ನ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯು ಸಹ ನನ್ನ ಜಯಕ್ಕೆ ಕಾರಣ. ಸಂಸದರಾಗಿ ಅವರು ಒಬ್ಬ ಮಹಿಳೆಯ ಬಗ್ಗೆ ಈ ರೀತಿಯಾಗಿ ಮಾತಾಡಿದರೆ ಯಾರೂ ಕ್ಷಮಿಸುವುದಿಲ್ಲ. ಕೇವಲ ಮಹಿಳೆಯರಷ್ಟೇ ಅಲ್ಲದೇ ಪುರಷರು ಸಹ ಇದನ್ನು ಖಂಡಿಸುತ್ತಾರೆ. ಪ್ರತಾಪ್ ಸಿಂಹ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳುವ ಮೂಲಕ ಸಂಸದರಿಗೆ ಟಾಂಗ್ ನೀಡಿದ್ದರು.
ಜನರು ನನ್ನ ಮೇಲೆ ನಂಬಿಕೆಯಿಟ್ಟು, ಗಲ್ಲಿಸಿದ್ದಾರೆ. ಮುಂದೆ ನಾನು ಮಹಾದೇವ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ. ಪ್ರತಾಪ್ ಸಿಂಹ ತಮ್ಮ ಹೇಳಿಕೆಯಿಂದ ಸುಮಾರು 40 ಸಾವಿರ ಮತಗಳನ್ನು ಕಳೆದುಕೊಂಡಿದ್ದಾರೆ. ಜಯದ ಸಮಯದಲ್ಲಿ ಪ್ರತಾಪ್ ಸಿಂಹ ಅವರನ್ನು ಕ್ಷಮಿಸುತ್ತೇನೆ. ತಮ್ಮ ವಿವಾದಾತ್ಮಕ ಹೇಳಿಕೆ ನಂತರ ನನ್ನ ಮಗನಿಗೆ ಫೋನ್ ಮಾಡಿ ಕ್ಷಮೆ ಕೇಳಿದ್ದರು. ಇಂದು ನಿಮ್ಮ ಮಾಧ್ಯಮಗಳ ಮುಖಾಂತರ ಅವರನ್ನು ಕ್ಷಮಿಸಿದ್ದೇನೆ ಎಂದು ತಿಳಿಸುತ್ತೇನೆ ಎಂದು ಅವರು ಹೇಳಿದ್ದರು.
ಬೆಂಗಳೂರು: ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ಅಸಮಾಧಾನಿತರ ವಿರುದ್ಧ ಕೆಂಡಾಮಂಡಲವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಯಾರು ಎಲ್ಲಿ ಬೇಕಾದ್ರೂ ಹೋಗಲಿ ಅಂತಾ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಏಪ್ರಿಲ್ 27ರ ಅಸಮಾಧಾನಿತರ ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಪದಾಧಿಕಾರಿಗಳ ಪರಿಷ್ಕರಣೆ ಮಾಡದಿರೋದು ಅಶಿಸ್ತು ಎಂಬ ಈಶ್ವರಪ್ಪ ಹೇಳಿಕೆಗೂ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ತಿಳಿಸಿದ್ರು.
ಆಗಸ್ಟ್ ನಲ್ಲಿ ರಾಜ್ಯಕ್ಕೆ ಶಾ: ಆಗಸ್ಟ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಮೈಸೂರಿನ ಕಾರ್ಯಕಾರಿಣಿಗೆ ಅಮಿತ್ ಶಾ ಬರುವುದಿಲ್ಲ ಅಂತಾ ಸ್ಪಷ್ಟಪಡಿಸಿದ್ರು.
ಏಪ್ರಿಲ್ 23ರಂದು ಆತ್ಮಾವಲೋಕನ ಸಭೆ ಕರೆದಿದ್ದೇನೆ. ನಂಜನಗೂಡು, ಗುಂಡ್ಲುಪೇಟೆ ಬೈ ಎಲೆಕ್ಷನ್ ಸೋಲಿನ ಆತ್ಮಾವಲೋಕನ ನಡೆಯಲಿದೆ. ಶೆಟ್ಟರ್, ಈಶ್ವರಪ್ಪ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮುಖಂಡರಿಗೆ ಆಹ್ವಾನ ನೀಡಿದ್ದೇವೆ ಅಲ್ಲಿ ಕುಳಿತು ಚರ್ಚಿಸುತ್ತೇವೆ ಅಂತೇಳಿದ್ರು.