ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಗ ಸಾಧುಗಳ ಆಶೀರ್ವಾದ ಸಿಕ್ಕಿದೆ. ನವರಾತ್ರಿಯ ದಿನವಾದ ಸೆಪ್ಟಂಬರ್ 29ರಂದು ಬಿಎಸ್‍ವೈ ನಿವಾಸಕ್ಕೆ 9 ಮಂದಿ ನಾಗ ಸಾಧುಗಳು ಭೇಟಿಯಾಗಿದ್ದರು.
ಬಿಎಸ್ ವೈ ನಿವಾಸದಲ್ಲಿ 20 ನಿಮಿಷಗಳ ಕಾಲ ಸಮಯ ಕಳೆದ ಸಾಧುಗಳು ಬಿಎಸ್‍ವೈಗೆ ಆಶೀರ್ವಾದ ಮಾಡಿದ್ರು ಎನ್ನಲಾಗಿದೆ. ಬಿಎಸ್‍ವೈ ಕಾಣಲು ಬಂದಿದ್ದೇವೆ, ವಾರಣಾಸಿ ಕಾಡಿನಿಂದ ಬಂದಿದ್ದೇವೆ ಅಂತೇಳಿ ಮನೆಯಲ್ಲಿ ಬಂದು ಕುಳಿತಿದ್ರಂತೆ. ಹೊರಗೆ ಹೋಗಿದ್ದ ಬಿಎಸ್‍ವೈ ತಕ್ಷಣ ಮನೆಗೆ ಆಗಮಿಸಿ ನಾಗ ಸಾಧುಗಳನ್ನ ಮಾತನಾಡಿಸಿ ಆಶೀರ್ವಾದ ಪಡೆದ್ರಂತೆ. ಅಲ್ಲದೆ ಇವತ್ತು ಮತ್ತೇ ಬಿಎಸ್‍ವೈ ನಿವಾಸಕ್ಕೆ ಆಗಮಿಸಿದ ನಾಗ ಸಾಧುಗಳು ಮತ್ತೊಮ್ಮೆ ಆಶೀರ್ವಾದ ಪಡೆದ್ರು ಎನ್ನಲಾಗಿದೆ.
ಒಂದೇ ವಾರದಲ್ಲಿ ಎರಡು ದಿನ ನಾಗ ಸಾಧುಗಳು ಬಿಎಸ್‍ವೈ ಅವರನ್ನು ಭೇಟಿ ಮಾಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾಗ ಸಾಧುಗಳನ್ನ ಸತ್ಕರಿಸಿದ ಬಿಎಸ್‍ವೈ ಮುಂದಿನ ಭವಿಷ್ಯಕ್ಕೆ ಆಶೀರ್ವಾದ ಕೇಳಿದ್ರು ಎನ್ನಲಾಗಿದೆ. ನೀವು ಮುಂದಿನ ಸಿಎಂ ಆಗಿ, ನಿಮಗೆ ಯಾವುದೇ ಅಡೆತಡೆ ಬಾರದಿರಲಿ ಅಂತಾ ನಾಗ ಸಾಧುಗಳು ಆಶೀರ್ವಾದ ನೀಡಿದ್ರಂತೆ.
ಬೆಂಗಳೂರು: ನಾನು ಬೆಂಗಳೂರಿಗೆ ಬಂದು ಹೋದ ಬಳಿಕ ಪಕ್ಷ ಸಂಘಟನೆ ಸಂಪೂರ್ಣ ವರದಿಯನ್ನು ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.
ಮಂಗಳೂರಿನಲ್ಲಿ ಅಕ್ಟೋಬರ್ 4 ರಂದು ವಿಶೇಷ ಕೋರ್ ಕಮಿಟಿ ಸಭೆ ನಡೆಯಲಿದ್ದು, ಈ ವೇಳೆ ಎರಡು ತಿಂಗಳ ಪಕ್ಷ ಸಂಘಟನೆ ವರದಿ ಕೊಡಿ, ವಿಸ್ತಾರಕರು ಏನು ಕೆಲಸ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿ ಎಂದು ಸೂಚಿಸಿದ್ದಾರೆ.
ಮೂರು ದಿನಗಳ ಭೇಟಿ ವೇಳೆ ಕೊಟ್ಟಿದ್ದ ಸಲಹೆ ಮತ್ತು ನಿರ್ದೇಶನಗಳು ಎಷ್ಟು ಅನುಷ್ಠಾನ ಆಗಿದೆ ಇದರ ಬಗ್ಗೆ ವಿವರ ನೀಡುವಂತೆ ಅಮಿತ್ ಶಾ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪಾದಯಾತ್ರೆ ಇಲ್ಲ: ಮಂಗಳೂರಿನಲ್ಲಿ ಅಮಿತ್ ಶಾ ಪಾದಯಾತ್ರೆ ಮಾಡುವುದಿಲ್ಲ. ಮಂಗಳೂರಿನಲ್ಲಿ ರಾಜ್ಯ ನಾಯಕರ ಜೊತೆ ಮಾತುಕತೆಯಷ್ಟೇ ನಡೆಸಲಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಲು ಎಸಿಬಿ ತಯಾರಿ ನಡೆಸುತ್ತಿದೆ.
ಶಿವರಾಮ್‍ಕಾರಂತ್ ಬಡವಾಣೆಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಎಸಿಬಿ ನಿರ್ಧರಿಸಿದೆ. ಈ ಬಗ್ಗೆ ಕಾನೂನು ಅಭಿಪ್ರಾಯ ಪಡೆದಿರೋ ಎಸಿಬಿ, ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ಬಳಿ ಒಂದು ಸುತ್ತಿನ ಮಾತುಕತೆ ನಡೆಸಿದೆ.
ಇದೇ ವಾರದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಹೈಕೋರ್ಟ್ ನೀಡಿರೋ ತಡೆಯಾಜ್ಞೆ ತೆರವುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲಿದೆ. ಈಗಾಗಲೇ ಒಂದು ಹಂತದಲ್ಲಿ ತನಿಖೆ ಮಾಡಲಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಿರೋದು ಸರಿಯಲ್ಲ. ಅಷ್ಟೇ ಅಲ್ಲದೆ ಆರೋಪಿತರು ತುಂಬಾ ಪ್ರಭಾವಿ ವ್ಯಕ್ತಿ. ಸಾಕ್ಷಿಗಳಿಗೆ ಬೆದರಿಕೆ ಹಾಗು ದಾಖಲಾತಿಗಳನ್ನು ನಾಶ ಮಾಡೋ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಿನ ತನಿಖೆ ಮಾಡೋ ಅಗತ್ಯವಿದೆ. ಕೂಡಲೇ ತಡೆಯಾಜ್ಞೆ ತೆರುವುಗೊಳಿಸಬೇಕು ಅಂತ ಅರ್ಜಿ ಸಲ್ಲಿಸಲಿದೆ.
ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯರೂಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಎಸಿಬಿ ದಾಖಲಿಸಿದ್ದ ಎಫ್‍ಐಆರ್‍ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತು ಮಾಡುವ ದಾಖಲೆಗಳಿಲ್ಲ ಎಂದು ಹೇಳಿ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.
ಡಿನೋಟಿಫೈ ಮಾಡಿ ಲಾಭ ಮಾಡಿಕೊಂಡಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ. ಅಷ್ಟೇ ಅಲ್ಲದೇ ಒಂದೇ ದೂರಿನಲ್ಲಿ ಎರಡು ಎಫ್‍ಐಆರ್ ದಾಖಲಿಸುವುದು ಕಾನೂನು ಬಾಹಿರ ಎಂದು ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟು ತಡೆಯಾಜ್ಞೆ ನೀಡಿದ್ದಾರೆ.
ಸಿಎಂ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಬಿಎಸ್‍ವೈ 257 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಮತ್ತು ಭೂ ಮಾಲೀಕರಿಂದ ಅಪಾರ ಹಣ ಪಡೆದಿದ್ದಾರೆ ಎಂದು ಎಸಿಬಿ ವಾದಿಸಿತ್ತು. ಅಲ್ಲದೇ ತನಿಖೆ ವೇಳೆ ಯಡಿಯೂರಪ್ಪ ವಿರುದ್ಧ ಮತ್ತಷ್ಟು ಸಾಕ್ಷ್ಯ ಲಭ್ಯವಾಗಿದೆ ಎಂದು ಹೇಳಿತ್ತು. ಒಂದು ವೇಳೆ ತನಿಖೆ ಮುಂದುವರಿಸಬಹುದು ಎಂದು ಆದೇಶ ಬಂದಿದ್ದರೆ ಬಿಎಸ್‍ವೈಗೆ ಬಂಧನದ ಭೀತಿ ಎದುರಾಗುವ ಸಾಧ್ಯತೆಯಿತ್ತು.
ಬೆಂಗಳೂರು: ಉತ್ತರ ಪ್ರದೇಶ ಎಲ್ಲಿ..? ಉತ್ತರ ಕರ್ನಾಟಕ ಎಲ್ಲಿ..? ಆದ್ರೆ ಶಾ, ಮೋದಿ ಜೋಡಿಗೆ ಇವೆರಡು ಒಂದೇ ಅನ್ನಿಸಿರಬೇಕು. ಅದಕ್ಕಾಗಿ ಉತ್ತರ ಕರ್ನಾಟಕದಿಂದ ಬಿಎಸ್‍ವೈ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
ದೇಶದ ರಾಜಕಾರಣದಲ್ಲಿ ಚಾಣಕ್ಯ ಜೋಡಿ ನಡೆದದ್ದೇ ದಾರಿ. ಷಾ, ಮೋದಿ ಅವರ ಮಂತ್ರ ತಂತ್ರಗಳೆಲ್ಲವೂ ಬಹುಪಾಲು ಸಕ್ಸಸ್ ಆಗ್ತಿವೆ. ಅದೇ ತಂತ್ರಗಾರಿಕೆಯನ್ನ ರಾಜ್ಯದಲ್ಲೂ ಬಳಸಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಮೋದಿಯನ್ನ ಕಣಕ್ಕಿಳಿಸಿ ಉತ್ತರಪ್ರದೇಶವನ್ನೇ ಬಾಚಿಕೊಂಡ ಮಾದರಿಯಲ್ಲೇ ಬಿಎಸ್‍ವೈ ಅವರನ್ನ ಉತ್ತರ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಅದರಲ್ಲೂ ಮುಂಬೈ ಕರ್ನಾಟಕದ ಯಾವಾದಾದರೊಂದು ಕ್ಷೇತ್ರ ಬೆಟರ್ ಅಂತಾ ಅಮಿತ್ ಶಾಗೆ ವರದಿ ಹೋಗಿದೆ. ವರದಿ ಆಧರಿಸಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಅಮಿತ್ ಶಾ ಬಿಎಸ್‍ವೈಗೆ ಸೂಚಿಸಿರೋದು ಎನ್ನಲಾಗ್ತಿದೆ. ರಾಜ್ಯ ನಾಯಕರ ಗಮನಕ್ಕೂ ತಾರದೇ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯಲ್ ಅವರ ಜತೆ ಚರ್ಚಿಸಿ ನಿರ್ಧಾರಕ್ಕೆ ಶಾ ಬಂದಿದ್ರು ಎನ್ನಲಾಗಿದೆ.
ಇನ್ನೊಂದೆಡೆ ಶಾ ತಂತ್ರಗಾರಿಕೆಗೆ ಹಿಂದೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಪ್ಲಾನ್ ಇದೆಯಂತೆ. ಒಂದು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರನ್ನ ಒಂದುಗೂಡಿಸೋದು, ಇನ್ನೊಂದು ಬಿಎಸ್ ವೈ ಏಕಾಚಕ್ರಾಧಿಪತ್ಯವನ್ನ ವೀಕ್ ಮಾಡೋದು ಶಾ ಮಾಸ್ಟರ್ ಗೇಮ್ ಎನ್ನಲಾಗಿದೆ.
ಬಿಎಸ್‍ವೈಗೆ ಇಂತಹ ಕಡೆ ಸ್ಪರ್ಧೆ ಮಾಡಬೇಕು ಅನ್ನೋದನ್ನ ಸೂಚಿಸುವ ಮೂಲಕ ಟಿಕೆಟ್ ಫೈನಲ್ ಮಾಡೋರೇ ನಾವು ಅನ್ನೋ ಸಂದೇಶ ರವಾನಿಸುವ ತಂತ್ರವೂ ಅಡಗಿದೆ ಅಂತಾ ಬಿಜೆಪಿ ಮೂಲಗಳು ಹೇಳುತ್ತಿವೆ. ಇದರಿಂದಾಗಿಯೇ ಬಿಜೆಪಿ ಆಪ್ತರೆಲ್ಲರೂ ಈಗ ಆತಂಕಕ್ಕೀಡಾಗಿದ್ದು, ಟಿಕೆಟ್ ಯಾರಿಗೆ ಕೊಡ್ತಾರಪ್ಪ ಅಂತಾ ತಲೆಕೆಡಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಾಸ್ ಲೀಡರ್ ಸ್ಪರ್ಧೆಯ ಮೂಲಕ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಿಸಿಕೊಳ್ಳಲು ಗೇಮ್ ಪ್ಲಾನ್ ನಡೆದಿದ್ದು, ಉತ್ತರ ಪ್ರದೇಶ ಮಾದರಿ ಉತ್ತರ ಕರ್ನಾಟಕದಲ್ಲಿ ವರ್ಕ್ ಔಟ್ ಆಗುತ್ತಾ…? ಬಿಎಸ್‍ವೈ ಎಡಬಲದಲ್ಲಿ ಇರುವವರಿಗೆಲ್ಲಾ ಟಿಕೆಟ್ ಸಿಗೋದು ಡೌಟಾ ಅನ್ನೋದನ್ನ ಕಾದುನೋಡಬೇಕಿದೆ.
ಬೆಂಗಳೂರು: ಬಿಜೆಪಿ ತಂತ್ರಕ್ಕೆ ಟಿಟ್ ಫಾರ್ ಟ್ಯಾಟ್ ಕೊಡಲು ಕಾಂಗ್ರೆಸ್ ಸಿದ್ದತೆ ನಡೆಸಿದೆ. ಅತ್ತ ಅಮಿತ್ ಶಾ ಕಾಂಗ್ರೆಸ್ ಕ್ಷೇತ್ರಗಳ ಮೇಲೆ ಕಣ್ಣು ಹಾಕುತ್ತಿರುವ ಬೆನ್ನಲ್ಲೇ ಬಿಜೆಪಿ ಕ್ಷೇತ್ರಗಳಲ್ಲಿ ಮೇಲೆ ಕಾಂಗ್ರೆಸ್ ತನ್ನ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಬಿಎಸ್‍ವೈಗೆ ಶಾಕ್ ಕೊಡಲು ಸಿದ್ದತೆ ನಡೆಸಿರುವ ಉಸ್ತುವಾರಿ ವೇಣುಗೋಪಾಲ್, ಬಿಎಸ್‍ವೈ ಆಪ್ತ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮನೆ ಮನೆ ಪ್ರಚಾರ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮವನ್ನು ಕೊನೇ ಕ್ಷಣದಲ್ಲಿ ಮಹದೇವಪುರ ಕ್ಷೇತ್ರದಲ್ಲಿ ನಡೆಸಲು ವೇಣುಗೋಪಾಲ ಸೂಚನೆ ನೀಡಿದ್ದಾರೆ. ಹೀಗಾಗಿ ಸೆ.23 ರಂದು ಅರವಿಂದ್ ಲಿಂಬಾವಳಿ ಕ್ಷೇತ್ರದಲ್ಲಿ ನಡೆಸಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ 6,149 ಮತಗಳ ಅಂತರದಿಂದ ಅಂತರದಿಂದ ಸೋಲು ಕಂಡಿದ್ದರು.ಈ ಕಾರಣದಿಂದ ಈ ಕ್ಷೇತ್ರದಿಂದ ಮನೆ ಮನೆ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಕಾಂಗ್ರೆಸ್ ಮುಂದಾಗಿದೆ.
ಮಂಗಳೂರು: ನಗರದಲ್ಲಿ ಸಮಾವೇಶ ಬೇಕಾದ್ರೆ ನಡೆಸಲಿ. ಆದ್ರೆ ಬೈಕ್ ರ‍್ಯಾಲಿ ನಡೆಸಬಾರದು ಅಂತ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ನಡೆಯ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಬಂದೂಕುಗಳನ್ನಿಟ್ಟುಕೊಂಡು ಮಂಗಳೂರಿಗೆ ಬರ್ತಾ ಇದ್ದೇವಾ ಎಂದು ಪ್ರಶ್ನಿಸಿದ್ರು. ಮೋಟಾರ್ ಬೈಕ್ ನಲ್ಲಿ ಬಂದ್ದೇವೆ. ಯಾಕಂದ್ರೆ ರಾಜ್ಯದಲ್ಲಿ ಹಲವಾರು ಹಿಂದೂಗಳ ಕೊಲೆಯಾಗಿದೆ. ಆದ್ರೆ ಸರ್ಕಾರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದು, ಮನಬಂದಂತೆ ಆಡಳಿತ ನಡೆಸುತ್ತಿದೆ. ಈ ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಮೋಟಾರ್ ಬೈಕಿನಲ್ಲಿ ಬರುತ್ತೇವೆ ಅಂದಾಗ ಅದನ್ನು ತಡೆಯುತ್ತಾರೆ. ಇಲ್ಲಿ ಮೆರವಣಿಗೆ ಮಾಡ್ತೀವಿ ಅಂದ್ರೆ ಸೆಕ್ಷನ್ ಹಾಕಿದ್ದೀವಿ ಅಂತಾರೆ. ಹಾಗಾದ್ರೆ ಪ್ರತಿಪಕ್ಷಗಳ ಕರ್ತವ್ಯವೇನು? ನಾವು ನಮ್ಮ ಹೋರಾಟ ಮಾಡುವುದು ಬೇಡ್ವಾ? ಕಾನೂನು ಸುವ್ಯವಸ್ಥೆಯನನ್ನು ಹೋರಾಟ ಮಾಡಿದಾಗ ಅಥವಾ ಅದನ್ನು ಅಡ್ಡಿ ಮಾಡಿದಾಗ ಈ ರೀತಿ ಸರ್ಕಾರ ವರ್ತಿಸುವುದು ಸರಿಯಲ್ಲ. ಇಲ್ಲಿ ನಾವು ಅದನ್ನು ಮಾಡಲು ಹೊರಟಿಲ್ಲವಲ್ಲ. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಅಂದ್ರೆ ಸರ್ಕಾರ ಬದುಕಿದೆಯೋ ಸತ್ತಿದೆಯೋ? ಪೊಲೀಸ್ ಇಲಾಖೆ ಇದೆಯೋ ಇಲ್ಲವೋ? ಅಂತ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಮಾತನ್ನು ಮಾನ್ಯ ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಹೇಳಲು ಇಚ್ಚಿಸುತ್ತೇನೆ. ಅದೇನಂದ್ರೆ ನೀವು ವಿರೋಧ ಪಕ್ಷಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಬಹಳ ದಿನ ನಡೆಯಲ್ಲ. ಕಾನೂನು ಚೌಕಟ್ಟಿನಲ್ಲಿ ಯಾರನ್ನು ಬೇಕಾದ್ರೂ ಬಂಧಿಸಬಹುದು. ಯಾರ ಮೇಲೆ ಬೇಕಾದ್ರೂ ಕ್ರಮ ತೆಗೆದುಕೊಳ್ಳಬಹುದು. ಅದಕ್ಕೆ ಅಡ್ಡಿ ಮಾಡಿ ಅಂತ ನಾನು ಹೇಳುವುದಿಲ್ಲ. ಅದು ನಿಮಗೆ ಬಿಟ್ಟ ವಿಚಾರ. ನಾಡಿನ ಆರೂವರೆ ಕೋಟಿ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಅಂದ್ರು.
ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಿತೂರಿಯಿಂದ ಈ ಘಟನಾವಳಿಗಳು ನಡೆಯುತ್ತಿವೆ. ಈ ರೀತಿಯ ಕೊಲೆಗಳು ಮುಂದುವರೆಯಬಾರದು. ಹೀಗಾಗಿ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈ ಬಿಡಬೇಕು ಅನ್ನೋದು ನಮ್ಮ ಉದ್ದೇಶ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾಯ್ತು ಯಾರು ಹೊಣೆ ಇದಕ್ಕೆ? ಈ ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟಿದೆ ಎನ್ನುವುದಕ್ಕೆ ಕಲಬುರ್ಗಿ ಹತ್ಯೆಯ ಬಳಿಕ ಇದೀಗ ಗೌರಿ ಹತ್ಯೆ ಪ್ರತ್ಯಕ್ಷ ಸಾಕ್ಷಿ. ಗಣಪತಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಮತ್ತೊಮ್ಮೆ ನೀಡಿದ್ದಾರೆ. ಅಲ್ಲಿ ಸುಪ್ರೀಂ ಕೋರ್ಟ್ ಕೂಡಾ ಛೀಮಾರಿ ಹಾಕಿದೆ. ನೀವು ಈ ಸಂದರ್ಭಗಳಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ಸಿಐಡಿ ತನಿಖೆ ಸರಿಯಾದ ರೀತಿಯಲ್ಲಿ ಆಗಿಲ್ಲ. ಅದಕ್ಕೊಸ್ಕರ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸವುದಾಗಿ ಹೇಳಿದೆ ಅಂತ ಸರ್ಕಾರದ ವಿರುದ್ಧ ಗುಡುಗಿದ್ರು.
ಭ್ರಷ್ಟ ಸಿಎಂ ಸರ್ಕಾರವನ್ನು ಹಾಗೂ ತೂಘಲಕ್ ದರ್ಬಾರನ್ನು ಕೊನೆಗೊಳಿಸುವವರೆಗೆ ನಮ್ಮ ಹೋರಾಟ ನಡೆಯುತ್ತದೆ ಅಂತ ಬಿಎಸ್ ವೈ ಎಚ್ಚರಿಸಿದರು.
Arresting while protesting deteriorating law,order in Karnataka today at Mangaluru to demand resignation of Sh.Ramanath Rai,Minister GoK pic.twitter.com/nkKd9JJDCQ
ಬಳ್ಳಾರಿ: ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪ ವೈಮನಸ್ಸು ಸದ್ಯಕ್ಕೆ ಶಾಂತವಾಗಿದೆ. ಆದ್ರೆ ಗಣಿನಾಡು ಬಳ್ಳಾರಿಯಲ್ಲಿ ಇವರಿಬ್ಬರ ಬೆಂಬಲಿಗರ ಮಧ್ಯೆಯೇ ಹೋರಾಟ ಶುರುವಾಗಿದೆ.
ಬಿಎಸ್‍ವೈ ಪರಮಾಪ್ತ ಹಾಗೂ ಶ್ರೀರಾಮುಲು ಬಣದಲ್ಲಿ ಗುರುತಿಸಿಕೊಂಡಿದ್ದ ಹೂವಿನಹಡಗಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದಿಂದ ವಿಜಯಕುಮಾರ್ ರನ್ನ ಈಶ್ವರಪ್ಪ ಬಣದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಕೆಳಗಿಳಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದಿರುವ ಬಿಎಸ್‍ವೈ ಮತ್ತು ವಿಜಯಕುಮಾರ್ ಅಭಿಮಾನಿಗಳು ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ. ವಿಜಯಕುಮಾರ್‍ರನ್ನ ಮುಂದುವರಿಸದಿದ್ದಲ್ಲಿ ಸಾಮೂಹಿಕ ರಾಜೀನಾಮೆ ನೀಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಕೈ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಬಳಸಿಕೊಳ್ಳದ ರಾಜ್ಯದ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೇಸರವಾಗಿದ್ದಾರೆ.
ರಾಜ್ಯ ಸಂಘಟನೆಯಲ್ಲಿ ಹಿಂದೆ ಉಳಿದಿದ್ದು, ಅದನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನವ ಕರ್ನಾಟಕ ಪರಿವರ್ತನಾ ಯಾತ್ರೆ ನಡೆಸಲು ತಿರ್ಮಾನಿಸಿದೆ. ಶನಿವಾರ ರಾತ್ರಿ ನವದೆಹಲಿಯ ಅಮಿತ್ ಷಾ ನಿವಾಸದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ತಿರ್ಮಾನಕ್ಕೆ ಬಂದಿದ್ದು, ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ.
ಕೋರ್ ಕಮೀಟಿ ಸಭೆಯಲ್ಲಿ ಅಮಿತ್ ಷಾ, ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಷಾ ಸೂಚನೆ ಮೇರೆಗೆ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ನಡೆಸಿದ ಪ್ರತಿಭಟನೆ ಪ್ಲಾಪ್ ಆಗಿದೆ ಅಂತಾ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಪ್ರತಿಭಟನೆ ಯಾವುದೆ ಪರಿಣಾಮ ಬೀರಿಲ್ಲ ಸಿ ಫೋರ್ ಸಮಿಕ್ಷೆಯಿಂದ ಮತ್ತಷ್ಟು ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಸಂಘಟನೆ ಬಲ ಪಡಿಸಬೇಕು. ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದು, ಒಂದೇ ಸಾರಿ ಜನರ ಮೂಡ್ ಪರಿವರ್ತಿಸುವುದು ಕಷ್ಟ. ಹೀಗಾಗಿ ರಾಜ್ಯದ ಎಲ್ಲ ನಾಯಕರು ಕೂಡಲೇ ಕಾರ್ಯಪವೃತ್ತರಾಗಿ ಅಂತ ಷಾ ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ, ಶೀಘ್ರದಲ್ಲಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ಆರಂಭಿಸಲಾಗಿವುದು. ಈ ಬಗ್ಗೆ ಶೀಘ್ರದಲ್ಲಿ ಎಲ್ಲ ಮಾಹಿತಿ ನೀಡಲಾಗುವುದು. ಜೊತೆಗೆ ಯಾತ್ರೆಯ ಮೂಲಕ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಅಂತ ಹೇಳಿದ್ರು.
ಇನ್ನು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಿಗೆ ಜಿಲ್ಲೆಗಳ ಚುನಾವಣೆ ಉಸ್ತುವಾರಿ ಹಂಚಿಕೆ ಫೈನಲ್ ಆಗಿದ್ದು, ಇಂದು ಬಿಎಸ್ ವೈ ಯಾವ ಜಿಲ್ಲೆ ಯಾರಿಗೆ ಅಂತಾ ಘೋಷಣೆ ಮಾಡಲಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಒಟ್ಟು 12 ಮಂದಿ ಕೋರ್ ಕಮಿಟಿ ಸದ್ಯರಿಗೆ ತಲಾ 3 ಜಿಲ್ಲೆಗಳ ಉಸ್ತುವಾರಿ ನೇಮಕ ಮಾಡಲಾಗುವುದು. ಕೆಲವು ಜಿಲ್ಲೆಯಲ್ಲಿ ನಗರ, ಗ್ರಾಮಾಂತರ ವಿಭಾಗಗಳಿವೆ. ಎಲ್ಲ ವಿಭಾಗಗಳಿಗೂ ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೆ ಉಸ್ತುವಾರಿ ನೇಮಕ ಮಾಡಲಾಗುವುದು. ಇಂದಿನಿಂದ ದಿನಕ್ಕೆ 6 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಸರಣಿ ಸಭೆಯನ್ನು ಬಿಎಸ್ ವೈ ನಡೆಸಲಿದ್ದಾರೆ. ಒಟ್ಟು 6 ದಿನಗಳ ಕಾಲ ನಿರಂತರ ಸಭೆಯನ್ನು ನಡೆಸಲಿದ್ದಾರೆ. ಅಲ್ಲದೇ ಬೂತ್ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲನೆ ಕೂಡ ಮಾಡಲಿದ್ದಾರೆ. ಈ ಬಗ್ಗೆ ಬಿಎಸ್ ವೈ ಈಗಾಗಲೇ ಅಮಿತ್ ಷಾಗೆ ವರದಿ ಸಲ್ಲಿಸಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.
ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷಸ ಬಿಎಸ್ ಯಡಿಯೂರಪ್ಪಗೆ ಮತ್ತೊಂದು ಶಾಕ್ ಸಿಕ್ಕಿದೆ.
ಬಿಎಸ್‍ವೈ ವಿರುದ್ಧದ 15 ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿರಾಜಿನ್ ಬಾಷ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ಕೈ ಜೋಡಿಸಿದೆ. ಬಾಷಾ ಸಲ್ಲಿಸಿದ್ದ ಅರ್ಜಿ ಜೊತೆ ರಾಜ್ಯ ಸರ್ಕಾರ ಕೂಡ ಮೇಲ್ಮನವಿ ಸಲ್ಲಿಸಿದ್ದು, ಎರಡೂ ಅರ್ಜಿಗಳನ್ನ ಸುಪ್ರೀಂಕೋರ್ಟ್ ಒಟ್ಟಾಗಿ ವಿಚಾರಣೆ ನೆಡಸಲಿದೆ.
ರಾಜ್ಯ ಸರ್ಕಾರದ ಮನವಿ ಮೇಲೆ ಸುಪ್ರೀಂಕೋರ್ಟ್ ವಿಚಾರಣೆಗೆ ಒಪ್ಪಿದೆ. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಲಿದ್ದಾರೆ.
ಬಿಎಸ್‍ವೈ ವಿರುದ್ಧದ ಹದಿನೈದು ಪ್ರಕರಣಗಳನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.