Tag: ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌

  • 2007ರ ನಂತ್ರ ಇದೇ ಮೊದಲ ಬಾರಿಗೆ BSNLಗೆ ಭಾರೀ ಲಾಭ

    2007ರ ನಂತ್ರ ಇದೇ ಮೊದಲ ಬಾರಿಗೆ BSNLಗೆ ಭಾರೀ ಲಾಭ

    – ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ 262 ಕೋಟಿ ರೂ. ಗಳಿಕೆ

    ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (BSNL) 2007ರ ಬಳಿಕ ಇದೇ ಮೊದಲ ಬಾರಿಗೆ ಲಾಭದತ್ತ ಮರಳಿದೆ. ಜಿಯೋ, ಏರ್‌ಟೆಲ್‌ ಸೇವೆಗಳಲ್ಲಿ ಏರಿಕೆ ಕಂಡ ಬಳಿಕ ಗ್ರಾಹಕರು ಬಿಎಸ್‌ಎನ್‌ಎಲ್‌ನತ್ತ ಮರಳುತ್ತಿದ್ದು, ಲಾಭ ಗಳಿಕೆಗೆ ಕಾರಣವಾಗಿದೆ.

    ಹೌದು. 2025ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಬರೋಬ್ಬರಿ 262 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆಕ್ರಮಣಕಾರಿ ನೆಟ್‌ವರ್ಕ್ ವಿಸ್ತರಣೆ ಮತ್ತು ಗ್ರಾಹಕ ಸೇರ್ಪಡೆಯಂತಹ ಕ್ರಮಗಳು ಲಾಭ ಗಳಿಕೆಗೆ ಕಾರಣವಾಗಿದೆ. ಇದರಿಂದ ಅರ್ಥಿಕ ವರ್ಷದ ಅಂತ್ಯದ ವೇಳೆಗೆ ಆದಾಯ ಬೆಳವಣಿಗೆಯು ಶೇ.20ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸುಧಾರಣೆಯಾಗಲಿದೆ ಎಂದು ಸಂಸ್ಥೆ ಹೇಳಿದೆ.

    ಈ ಕುರಿತು ಬಿಎಸ್‌ಎನ್‌ಎಲ್‌ CMD ಎ. ರಾಬರ್ಟ್ J. ರವಿ, ಇಂತಹ ಪ್ರಯತ್ನಗಳೊಂದಿಗೆ ಅರ್ಥಿಕ ವರ್ಷಾಂತ್ಯದ ವೇಳೆಗೆ ಆದಾಯ ಬೆಳವಣಿಗೆ ಶೇ.20ಕ್ಕಿಂತ ಹೆಚ್ಚು ಸುಧಾರಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲದೇ ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ತನ್ನ ಹಣಕಾಸಿನ ವೆಚ್ಚ ಮತ್ತು ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಪ್ರಸಕ್ತ ವರ್ಷದಲ್ಲಿ 1,800 ಕೋಟಿ ರೂ. ನಷ್ಟ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.

    BSNLನ ಮೊಬಿಲಿಟಿ ಸೇವೆಗಳ ಆದಾಯವು ವರ್ಷದಿಂದ ವರ್ಷಕ್ಕೆ 15% ರಷ್ಟು ಹೆಚ್ಚಾಗಿದೆ. ಆದ್ರೆ ಫೈಬರ್-ಟು-ದಿ-ಹೋಮ್ (FTTH) ಮತ್ತು ಲೀಸ್ಡ್ ಲೈನ್ ಸೇವೆಗಳ ಆದಾಯವು ಅನುಕ್ರಮವಾಗಿ 18% ಮತ್ತು 14% ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

    ಮುಂದುವರಿದು ಮಾತನಾಡಿರುವ ಜೆ. ರವಿ, ನಮ್ಮ ಗ್ರಾಹಕರ ಅನುಭವವನ್ನು ಹೆಚ್ಚಿಸಲು, ಬಿಎಸ್ಎನ್ಎಲ್ ಇತ್ತೀಚೆಗೆ ರಾಷ್ಟ್ರೀಯ ವೈಫೈ ರೋಮಿಂಗ್, ಎಲ್ಲಾ ಮೊಬೈಲ್ ಗ್ರಾಹಕರಿಗೆ ಉಚಿತ ಮನರಂಜನೆ ನೀಡುವ ಬಿಐಟಿವಿ ಮತ್ತು ಎಲ್ಲಾ ಎಫ್‌ಟಿಟಿಎಚ್ ಗ್ರಾಹಕರಿಗೆ ಐಎಫ್‌ಟಿವಿ ಮುಂತಾದ ನಾವೀನ್ಯತೆಗಳನ್ನು ಪರಿಚಯಿಸಿದೆ. ಸೇವೆಯ ಗುಣಮಟ್ಟ ಮತ್ತು ಸೇವಾ ಭರವಸೆಯ ಮೇಲಿನ ನಮ್ಮ ನಿರಂತರ ಗಮನವು ಗ್ರಾಹಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಭಾರತದಲ್ಲಿ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಾಗಿ ಬಿಎಸ್‌ಎನ್‌ಎಲ್‌ನ ಸ್ಥಾನವನ್ನು ಬಲಪಡಿಸಿದೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರವು ಟೆಲಿಕಾಂ ಕಂಪನಿಗೆ ಸಾಕಷ್ಟು ಬೆಂಬಲ ನೀಡಿದೆ. 2023ರಲ್ಲಿ ಕೇಂದ್ರ ಸರ್ಕಾರ 89,000 ಕೋಟಿ ರೂ.ಗಳ ಪ್ಯಾಕೇಜ್‌ಗೆ ಅನುಮೋದನೆ ನೀಡಿತ್ತು. ಅದಕ್ಕೂ ಮುನ್ನ 2021ರಲ್ಲಿ 1.64 ಲಕ್ಷ ಕೋಟಿ ರೂ. ಹಾಗೂ 2019ರಲ್ಲಿ 69,000 ಕೋಟಿ ರೂ. ಗಳ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿತ್ತು ಎಂಬುದು ಗಮನಾರ್ಹ.