Tag: ಬಿಎನ್ ಬಚ್ಚೇಗೌಡ

  • ಬಿಎಸ್‍ವೈ ಸಿಎಂ ಆಗೋದು ಅನಿವಾರ್ಯ, ಅಸ್ತಿತ್ವಕ್ಕಾಗಿ ಶರತ್ ಸ್ಪರ್ಧೆ: ಬಿಎನ್ ಬಚ್ಚೇಗೌಡ

    ಬಿಎಸ್‍ವೈ ಸಿಎಂ ಆಗೋದು ಅನಿವಾರ್ಯ, ಅಸ್ತಿತ್ವಕ್ಕಾಗಿ ಶರತ್ ಸ್ಪರ್ಧೆ: ಬಿಎನ್ ಬಚ್ಚೇಗೌಡ

    ಚಿಕ್ಕಬಳ್ಳಾಪುರ: ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗುವುದು ಅನಿವಾರ್ಯವಾಗಿತ್ತು. ಅದೇ ರೀತಿ ನನ್ನ ಮಗನಿಗೆ ಕ್ಷೇತ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿತ್ತು. ಹೀಗಾಗಿಯೇ ಉಪಚುನಾವಣೆ ಕಣದಲ್ಲಿ ಸ್ಪರ್ಧೆ ಮಾಡಿದ್ದಾನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ತಮ್ಮ ಮಗನ ಪರ ಬ್ಯಾಟಿಂಗ್ ಮಾಡಿದ್ದಾರೆ.

    ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವೀಕ್ಷಿಸಿ ಬಳಿಕ ಬಚ್ಚೇಗೌಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬಿಜೆಪಿಯಿಂದ ಶರತ್ ಬಚ್ಚೇಗೌಡಗೆ ಟಿಕೆಟ್ ಕೇಳಿದ್ದರೂ ರಾಜ್ಯಾಧ್ಯಕ್ಷರು ನಿರಾಕರಿಸಿದ್ದರು. ಆದರೆ ಶರತ್ ಕ್ಷೇತ್ರದಲ್ಲಿ ಅಸ್ತಿತ್ವಕ್ಕಾಗಿ ಸ್ಪರ್ಧೆ ಮಾಡಿದ್ದ. ಆದರೆ ನಾನು ಮಗನ ಪರವಾಗಿ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾವಣಾ ಪ್ರಚಾರ ಮಾಡಲಿಲ್ಲ. ಆದರೆ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ಎದುರಿಸಿದ್ದ ಶರತ್ ಬಚ್ಚೇಗೌಡ ಜನರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದಾನೆ ಎಂದರು.

    ಇದೇ ವೇಳೆ ಸಿಎಎ ಹಾಗೂ ಎನ್‍ಆರ್ ಸಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿಎಎ ಹಾಗೂ ಎನ್‍ಆರ್ ಸಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ. ತಿಳುವಳಿಕೆಯಿಲ್ಲದೆ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಸಿಎಎ ಹಾಗೂ ಎನ್‍ಆರ್ ಸಿ ಬಗ್ಗೆ ಅವರಿಗೆ ತಿಳುವಳಿಕೆ ನೀಡಬೇಕಿದೆ. ಸಿಎಎ ಹಾಗೂ ಎನ್‍ಆರ್ ಸಿ ಬಗ್ಗೆ ಒಂದು ಧರ್ಮದವರಿಗೆ ಗೊಂದಲವಿದೆ. ಹೀಗಾಗಿ ನಾನಾ ರಾಜ್ಯದಲ್ಲಿ ಕಾಯಿದೆಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಿಲ್ ಪಾಸ್ ಆದಾಗ ನಾನು ಲೋಕಸಭೆಯಲ್ಲಿದ್ದೆ. ಸಿಎಎ ಹಾಗೂ ಎನ್‍ಆರ್ ಸಿ ಯಿಂದ ಈಗಲೂ ಯಾವುದೇ ಧರ್ಮದವರಿಗೂ ತೊಂದರೆ ಆಗೋದಿಲ್ಲ. ಈಗಾಗಲೇ ಜನರಿಗೆ ಜಾಗೃತಿ ಮೂಡಿಸಿ ಗೊಂದಲಗಳನ್ನು ಸಡಿ ಮಾಡಲು ಮೋದಿ, ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂದರು.

    ಮಂಗಳೂರಿನಲ್ಲಿ ಗೋಲಿಬಾರ್ ನಡೆದ ನಂತರ ಸಿಎಂ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಲಾಗಿದೆ. ಆದರೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದ್ರು. ಕಾಂಗ್ರೆಸ್, ಜೆಡಿಎಸ್ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷಗಳು ಇರೋದು ವಿರೋಧ ಮಾಡಲಿಕ್ಕೆ ಎಂದರು.

  • ನೀರು ಕೊಟ್ಟೇ ನಾನು ಪ್ರಾಣ ಬಿಡ್ತೇನೆ: ವೀರಪ್ಪ ಮೊಯ್ಲಿ

    ನೀರು ಕೊಟ್ಟೇ ನಾನು ಪ್ರಾಣ ಬಿಡ್ತೇನೆ: ವೀರಪ್ಪ ಮೊಯ್ಲಿ

    – 15 ವರ್ಷದ ಹುಡುಗಿ 85 ವರ್ಷದ ಮುದುಕಿಯಾಗಿ ಕಾಣ್ತಾಳೆ..!
    – ಎತ್ತಿನಹೊಳೆ ನೀರು ಹರಿಯಲಿರುವ ದೃಶ್ಯ ನಾನು ಕಣ್ತುಂಬಿಕೊಳ್ಳಬೇಕಿದೆ..!

    ಚಿಕ್ಕಬಳ್ಳಾಪುರ: ನಿಮಗೆ, ನಿಮ್ಮ ಭಾಗಕ್ಕೆ ನೀರು ತರುತ್ತೇವೆ ಎಂದು ಹಿಂದಿನ ಎಲ್ಲಾ ಸಂಸದರು ಹೇಳಿದರು. ಹಾಗೂ ಹಿಂದಿನ ದಿವಂಗತ ಸಂಸದ ಕೃಷ್ಣ ರಾಯರು ಸಹ ನೀರು ಕುಡಿಸುತ್ತೇನೆ ಎಂದು ಕೊನೆಗೆ ಪ್ರಾಣ ಬಿಟ್ಟರು. ಆದರೆ ಮೊದಲು ನಾನು ನಿಮಗೆ ನೀರು ಕೊಟ್ಟು ನಂತರ ಪ್ರಾಣ ಬಿಡುತ್ತೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಗಾಂಧಿ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿ ಅವರು, ನನಗೆ ನೀರಿನ ಮಹತ್ವ ಗೊತ್ತಿದೆ ಎಂದು ಭಾವುಕರಾದರು. ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ನೀರಿಗೆ ತುಂಬಾ ಹಾಹಾಕಾರವಿದೆ. ಆ ಭಾಗದಲ್ಲಿ 15 ವರ್ಷದ ಹುಡುಗಿ 85 ವರ್ಷದ ಮುದುಕಿಯಾಗಿ ಕಾಣುತ್ತಾಳೆ. ಆ ಭಾಗದಿಂದ ಹೆಣ್ಣು ಮದುವೆ ಮಾಡಿಕೊಳ್ಳೋಕೆ ಭಯಪಡುತ್ತಾರೆ. ಕೆಲವರಿಗೆ ಹಲ್ಲಿಲ್ಲ, ಹಲವರು ಅಂಗಹೀನರು, ಇಡೀ ಗ್ರಾಮಗಳ ತುಂಬೆಲ್ಲಾ ಅಂಗವಿಕಲರಿದ್ದಾರೆ. ಅದನ್ನ ಕಂಡು ನಾನು ಸಂಸದನಾಗಿ ಹೇಗೆ ಉಳಿಯಬೇಕು? ಹಿಂದಿನ ಎಲ್ಲಾ ಸಂಸದರು ನೀರು ತರುತ್ತೇವೆ ಎಂದು ಹೇಳಿದ್ದರು. ನಾನು ಮೊದಲು ನೀರು ಕೊಟ್ಟೇ ನನ್ನ ಪ್ರಾಣ ಬಿಡುತ್ತೇನೆ ಎಂದು ಭಾವುಕರಾಗಿ ಮಾತನಾಡಿದರು.

    ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎತ್ತಿನಹೊಳೆ ಯೋಜನೆ ಮುಗಿಯುವ ಹಂತಕ್ಕೆ ತಲುಪಿದ್ದು ಎರಡು ವರ್ಷದಲ್ಲಿ ಈ ಭಾಗಕ್ಕೆ ನೀರು ಹರಿಯಲಿದೆ. ಆ ದೃಶ್ಯ ನಾನು ಕಣ್ತುಂಬಿಕೊಳ್ಳಬೇಕಿದೆ. ಹೀಗಾಗಿ ನನಗೆ ಆಶೀರ್ವಾದ ನೀಡಿ ಎಂದು ಮತಯಾಚನೆ ಮಾಡಿದರು. ಇದೇ ವೇಳೆ ಎಚ್ ಎನ್ ವ್ಯಾಲಿ-ಕೆ ಸಿ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ತಡೆ ತಂದಿರೋ ಹೆಸರು ಹೇಳಲ್ಲ ಅಂತಲೇ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ರೈತ ವಿರೋಧಿ ಎಂದು ಆಕ್ರೋಶ ಹೊರಹಾಕಿದರು.

    ಎಚ್ ಎನ್ ವ್ಯಾಲಿ ಯೋಜನೆಯ ಗುತ್ತಿಗೆದಾರರ ಬಳಿ ಹಣ ವಸೂಲಿ ಮಾಡುವ ಉದ್ದೇಶದಿಂದ ಆಂಜನೇಯರೆಡ್ಡಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಸುಪ್ರೀಂ ಕೋರ್ಟ್ ಗೆ ಹೋಗಲು ಹಣ ಕೊಟ್ಟಿದ್ದೇ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಎಂದು ಗಂಭೀರ ಆರೋಪ ಮಾಡಿದರು. ಇದಲ್ಲದೆ ಎತ್ತಿನಹೊಳೆ ಯೋಜನೆ ವಿರುದ್ಧ ಹಸಿರು ಪೀಠಕ್ಕೆ ಹೋಗಲು ಹಣ ಕೊಟ್ಟವರು ಸಹ ಬಿ ಎನ್ ಬಚ್ಚೇಗೌಡ ಅಂತ ಎಂದರು. ಹೀಗಾಗಿ ನೀರಾವರಿ ಯೋಜನೆಗಳನ್ನ ತಪ್ಪಿಸಲು ಹೋದವರಿಗೆ ಜನರ ಶಾಪ ತಟ್ಟುತ್ತೆ. ಭೂಮಿ ತಾಯಿಯ ಶಾಪ ತಟ್ಟುತ್ತೆ ಎಂದರು.

    ಭೂಮಿ ತಾಯಿಯೂ ಕೂಡ ಬಾಯಾರಿ ನನಗೆ ನೀರು ಕೊಡಿ ಅಂತ ಬಾಯಿಬಿಡ್ತಿದ್ದಾಳೆ. ಇದರಿಂದ ನೀರಾವರಿ ಯೋಜನೆಗಳಿಗೆ ಅಡ್ಡಗಾಲು ಹಾಕುವವರಿಗೆ ಜನ್ಮ ಜನ್ಮಕ್ಕೆ ಶಾಪ ತಟ್ಟುತ್ತೆ ಅಂತ ಶಾಪ ಹಾಕಿದ್ರು. ಚಿಕ್ಕಬಳ್ಳಾಪುರ ಕ್ಷೇತ್ರದ ಜನ ಚಿನ್ನದ ಮನಸ್ಸಿನವರು. ಜಾತಿ ಗೀತಿ ನೋಡದೇ ನನ್ನನ್ನ ಎರಡು ಬಾರಿ ಗೆಲ್ಲಿಸಿದ ಜನ ಚಿನ್ನದ ಜನರು ನಿಮ್ಮ ಋಣ 7 ಜನ್ಮದಲ್ಲೂ ತೀರಿಸಲಾಗುವುದಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಬಿ.ಎನ್ ಬಚ್ಚೇಗೌಡರೇ ನೀವೇನು ಸತ್ಯ ಹರಿಶ್ಚಂದ್ರರಾ? ಹೋದ ಕಡೆಯಲ್ಲೆಲ್ಲಾ ವೀರಪ್ಪಮೊಯ್ಲಿ ಸುಳ್ಳುಗಾರ-ಮೋಸಗಾರ ಅಂತೀದ್ದರಲ್ಲಾ. ನೀವೇನು ಸತ್ಯ ಹರಿಶ್ಚಂದ್ರರಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಅಲ್ಲದೇ ವೀರಪ್ಪಮೊಯ್ಲಿ ಅವರು ತಮ್ಮ ಜೀವನವನ್ನೇ ರಾಜಕಾರಣಿಯಾಗಿ ಜನರ ಸೇವೆಗೆ ಮೀಸಲಿಟ್ಟಿದ್ದಾರೆ. ನೀವು ಇಟ್ಟಿದ್ದಾರಾ? ರಾಜಕಾರಣದಲ್ಲಿ ನೀವು ಮಾಡಿದ ಅನ್ಯಾಯ ಅಕ್ರಮ ದೌರ್ಜನ್ಯ ದಬ್ಬಾಳಿಕೆ ಸರ್ವಾಧಿಕಾರ ಯಾರಾದ್ರೂ ಮಾಡಿದ್ದೀರಾ? ಸರ್ಕಾರಿ ಗೋಮಾಳಗಳನ್ನ ಗುಳುಂ ಮಾಡಿದ್ದೀರಿ ಎಂದು ಬಚ್ಚೇಗೌಡರ ವಿರುದ್ಧ ಕಿಡಿಕಾರಿದರು.