Tag: ಬಿಎಂಟಿಸಿ ಎಂಡಿ ಶಿಖಾ

  • ನಾಳೆಯಿಂದ ಬೆಂಗ್ಳೂರಿನಲ್ಲಿ ಬಸ್ ಸೇವೆ ಲಭ್ಯ- ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ: ಬಿಎಂಟಿಸಿ ಎಂಡಿ ಶಿಖಾ

    ನಾಳೆಯಿಂದ ಬೆಂಗ್ಳೂರಿನಲ್ಲಿ ಬಸ್ ಸೇವೆ ಲಭ್ಯ- ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ: ಬಿಎಂಟಿಸಿ ಎಂಡಿ ಶಿಖಾ

    – 1,500 ರಿಂದ 2,000 ಬಿಎಂಟಿಸಿ ಬಸ್‍ಗಳು ರಸ್ತೆಗೆ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಬಿಎಂಟಿಸಿ ಸೇವೆಯನ್ನು ನಾಳೆಯಿಂದ ಮತ್ತೆ ಆರಂಭ ಮಾಡುವುದಾಗಿ ಬಿಎಂಟಿಸಿ ಎಂಡಿ ಶಿಖಾ ಅವರು ಹೇಳಿದ್ದಾರೆ. ಸರ್ಕಾರದ ಸೂಚನೆ ಮೇರೆಗೆ ಬಸ್ ಆಪರೇಷನ್ ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

    ಬಸ್ ಸೇವೆ ಆರಂಭದ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಎಂಎಚ್‍ಎ ಸೂಚನೆ ಮೇರೆಗೆ ಸರ್ಕಾರ ಕೆಲ ನಿರ್ದೇಶನಗಳನ್ನು ನೀಡಿ ಬಸ್ ಸೇವೆ ಆರಂಭಿಸಲು ಸೂಚನೆ ನೀಡಿದ್ದಾರೆ. ಇದರ ಅನ್ವಯ ನಗರದಲ್ಲಿ ಗ್ರೇಡೆಡ್ ಮ್ಯಾನರ್ ನಲ್ಲಿ, ಹೆಚ್ಚು ದಟ್ಟಣೆ ಇರುವ ಪ್ರದೇಶದಲ್ಲಿ ಬಸ್ ಸೇವೆ ಮೊದಲು ಆರಂಭ ಮಾಡುತ್ತೇವೆ. ಆದರೆ ಕಂಟೈನ್ಮೆಂಟ್ ಝೋನ್ ಗಳಲ್ಲಿ ಬ್ಯಾನ್ ಮಾಡಿರುವುದರಿಂದ ಆ ಮಾರ್ಗಗಳಲ್ಲಿ ಬಸ್ ಸೇವೆ ಲಭ್ಯ ಇರುವುದಿಲ್ಲ. ಕಂಟೈನ್ಮೆಂಟ್ ಝೋನ್‍ಗಳ ಮಾಹಿತಿಯನ್ನು ಬಿಬಿಎಂಪಿ ನೀಡಿದೆ ಎಂದು ವಿವರಿಸಿದರು.

    ಮಾಸ್ಕ್ ಕಡ್ಡಾಯ: ನಗರದ ಪ್ರಮುಖ ಏರಿಯಾಗಳಲ್ಲಿ ಎಲ್ಲೆಲ್ಲಿ ಹೆಚ್ಚು ಟ್ರಾಫಿಕ್ ಇರುತ್ತೆ ಆ ಮಾರ್ಗಗಳಲ್ಲಿ ಹೆಚ್ಚಿನ ಬಸ್ ಸೇವೆ ಲಭ್ಯವಿರುತ್ತದೆ. ನಾಳೆ ಮೊದಲ ದಿನ ಸುಮಾರು 1,500 ಬಸ್‍ಗಳು ರಸ್ತೆಗಳಿಯಾಲಿದೆ. ಈಗಾಗಲೇ ತುರ್ತು ಸೇವೆಗೆ 700 ಬಸ್‍ಗಳು ನೀಡಿದ್ದೇವೆ. ಆದರೆ ಸರ್ಕಾರದ ಆದೇಶದಂತೆ ಬಸ್‍ಗೆ ಬರುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್ ಹತ್ತುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಜೊತೆಗೆ ಬಿಎಂಟಿಸಿ ಸಿಬ್ಬಂದಿಗಳಿಗೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲು ಆದೇಶಿಸಿದ್ದೇವೆ ಎಂದರು.

    ನಿಂತು ಪ್ರಯಾಣಿಸಲು ಅವಕಾಶವಿಲ್ಲ: ಬಿಬಿಎಂಪಿ ಆಯುಕ್ತರು ಸೂಚಿಸಿದ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಬಸ್ ಸಂಚಾರವಿಲ್ಲ. ಆದರೆ ಯಾವುದೇ ಕಾರಣಕ್ಕೂ ಜನರು ಆತಂಕ ಪಡುವ ಅಗತ್ಯವಿಲ್ಲ. ಬಸ್‍ಗಳಲ್ಲಿ ನಿಂತು ಪ್ರಯಾನಿಸಲು ಅವಕಾಶವಿಲ್ಲ. ಬಸ್‍ಗಳಲ್ಲಿ ಎಷ್ಟು ಆಸನ ವ್ಯವಸ್ಥೆ ಇದೆ ಅಷ್ಟು ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಒಂದೊಮ್ಮೆ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರಿದ್ದರೆ ನಮ್ಮ ಸಿಬ್ಬಂದಿ ತಕ್ಷಣ ಡಿಪೋಗೆ ಮಾಹಿತಿ ನೀಡುತ್ತಾರೆ. ಕೂಡಲೇ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುತ್ತೇವೆ. ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವುದು ಎಂದರೇ ಯಾವುದೇ ಕಾರಣಕ್ಕೂ ಬಸ್ ನಿಲ್ದಾಣ, ಬಸ್‍ಗಳಲ್ಲಿ ಗುಂಪು ಸೇರಬೇಡಿ. ಮೊದಲ ಬಸ್ ತುಂಬಿದ್ದರೆ ಬಹುಬೇಗ ಮತ್ತೊಂದು ಬಸ್ ವ್ಯವಸ್ಥೆ ಮಾಡುತ್ತೇವೆ.

    ಸಿಬ್ಬಂದಿಗೆ ಜಾಗೃತಿ: ಬಿಎಂಟಿಸಿ ಸಿಬ್ಬಂದಿ ಕೂಡ ಆತಂಕ ಪಡುವ ಅಗತ್ಯವಿಲ್ಲ. ಸಿಬ್ಬಂದಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ ಅವರಿಗೆ ಅಗತ್ಯವಿರೋ ಮಾಸ್ಕ್, ಸ್ಯಾನಿಟೈಸರ್ ಗಳನ್ನು ನೀಡಿದ್ದೇವೆ. ಬಸ್‍ಗಳನ್ನು ಕೂಡ ಪ್ರತಿದಿನ ನಾವು ಸ್ವಚ್ಛ ಮಾಡುತ್ತೇವೆ. ಬಸ್ ಹೊಸ ಭಾಗದಲ್ಲಿ ನೀರಿನಲ್ಲಿ ತೊಳೆದರೆ, ಬಸ್ ಒಳಗಡೆ ಸ್ಯಾನಿಟೈಸ್ ಮಾಡುತ್ತೇವೆ. ಈ ಬಗ್ಗೆ ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.