Tag: ಬಿಇಎಲ್

  • BEL ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ರಾಜನಾಥ್ ಸಿಂಗ್

    BEL ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ರಾಜನಾಥ್ ಸಿಂಗ್

    ಬೆಂಗಳೂರು: ಭಾರತ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮವಾದ, ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು (ಬಿಇಎಲ್‍) ಘಟಕದಲ್ಲಿ ಇಂದಿನಿಂದ ಡಿಸೆಂಬರ್ 19 ರವರೆಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದ್ದು, ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಆನ್‍ಲೈನ್ ಮೂಲಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ ಉತ್ಪಾದನೆಯಲ್ಲಿ ಬಿಇಎಲ್‍ನ ಪಾತ್ರವನ್ನು ಪ್ರಶಂಸಿದರು. ರಕ್ಷಣಾ ಉತ್ಪಾದನೆಯ ಪ್ರಮುಖ 20 ಕಂಪನಿಗಳಲ್ಲಿ ಬಿಇಎಲ್ ಸ್ಥಾನವನ್ನು ಶ್ಲಾಘಿಸಿದರು. ಸಂಸ್ಥೆಯ ಉತ್ಪಾದನೆ ಹಾಗೂ ನಿರ್ಮಾಣಗಳಲ್ಲಿ ರಕ್ಷಣಾ ಸಚಿವಾಲಯದ ಸಹಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ವಸ್ತು ಪ್ರದರ್ಶನದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ನಿರ್ಮಿಸುವ ರಕ್ಷಣೆ ಹಾಗೂ ರಕ್ಷಣೇತರ ಉತ್ಪನ್ನಗಳ ವೈವಿಧ್ಯಮಯ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. ಈ ವಸ್ತು ಪ್ರದರ್ಶನದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾದ ರಾಡರ್ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಹಾಗೂ ಇತರ ವಿಶಿಷ್ಟ ಉಪಕರಣಗಳ ಪ್ರದರ್ಶನ ಇದೆ. ಯುದ್ಧದಲ್ಲಿ ಬಳಸುವ ತೇಜಸ್ ಯುದ್ದ ವಿಮಾನಕ್ಕೆ ಬೇಕಾದ ಫ್ಲೈಟ್ ಕಂಟ್ರೋಲ್ ಸಿಸ್ಟಮ್, ರುಸ್ತಮ್, ಮಾಡೆಲ್, ಆಕಾಶ್ ಮಿಸೈಲ್ ಸಿಸ್ಟಮ್, ಶತ್ರುಗಳನ್ನು 25 ಕಿಲೋಮೀಟರ್ ದೂರದಲ್ಲಿದ್ದರೂ ಸಂಹಾರ ಮಾಡುವ ಮಿಸೈಲ್ ಲಾಂಚರ್, ರೇಡಾರ್, ಚುನಾವಣೆಯಲ್ಲಿ ಬಳಸುವ ವಿವಿಪ್ಯಾಡ್ ಮಿಶನ್, ಮಾನವ ರಹಿತ ಟ್ರ್ಯಾಕರ್, ವಿವಿಧ ಬಗೆಯ ಡ್ರೋನ್‍ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

    ಈ ಸಮಾರಂಭದಲ್ಲಿ ಬಿಇಎಲ್‍ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆನಂದಿ ರಾಮಲಿಂಗಂ ಸೇರಿದಂತೆ ಎಲ್ಲಾ ನಿರ್ದೇಶಕ ವರ್ಗದವರು, ಪ್ರಧಾನ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು 300 ಜನ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಸರ್ಕಾರದ ಮಾರ್ಗಸೂಚಿಗಳ ಅನುಸಾರ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

  • BELನಿಂದ ರಾಯಚೂರು ಜಿಲ್ಲೆಗೆ 10 ಅಂಬ್ಯುಲೆನ್ಸ್

    BELನಿಂದ ರಾಯಚೂರು ಜಿಲ್ಲೆಗೆ 10 ಅಂಬ್ಯುಲೆನ್ಸ್

    ರಾಯಚೂರು : ಅಭಿವೃದ್ಧಿ ವಿಚಾರದಲ್ಲಿ ರಾಯಚೂರು ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವುದರಿಂದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿ (BEL) ಜಿಲ್ಲೆಗೆ 10 ಅಂಬ್ಯುಲೆನ್ಸ್ ಗಳನ್ನ ನೀಡಿದೆ. ಕಂಪನಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ ಸಿಎಸ್‍ಆರ್ ಫಂಡ್‍ನಿಂದ ಅಂಬ್ಯುಲೆನ್ಸ್ ಗಳನ್ನ ಜಿಲ್ಲೆಗೆ ನೀಡಲಾಗಿದೆ.

    ಬಿಇಎಲ್ ಕಂಪನಿ ಅಧಿಕಾರಿಗಳು ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂಬ್ಯುಲೆನ್ಸ್ ಗಳನ್ನ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದರು. ಸುಮಾರು 4 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ಹವಾ ನಿಯಂತ್ರಿತ ಅಂಬ್ಯುಲೆನ್ಸ್ ಗಳನ್ನ ನೀಡಲಾಗಿದೆ. ಸದ್ಯ ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಸರಬರಾಜು, ರೋಗಿಗಳ ಸಾಗಣೆಗೆ ಅಗತ್ಯ ಸೌಲಭ್ಯಗಳಿವೆ.

    ವೆಂಟಿಲೇಟರ್ ಸೇರಿದಂತೆ ಅಡ್ವಾನ್ಸ್ ಲೈಫ್ ಸಪೋರ್ಟ್ ವ್ಯವಸ್ಥೆಗಳನ್ನ ಅಳವಡಿಸುವುದು ಬಾಕಿಯಿದೆ. ಬಿಇಎಲ್ ಕಂಪನಿ ನೀಡಿರುವ ಅಂಬ್ಯುಲೆನ್ಸ್ ಗಳು ಜಿಲ್ಲೆಗೆ ಅವಶ್ಯಕವಾಗಿದ್ದು, ಸದ್ಬಳಕೆಯಾಗಲಿವೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್

  • ವನಮಹೋತ್ಸವ: ಗೃಹ ರಕ್ಷಕ ದಳದಿಂದ ಒಂದು ಲಕ್ಷ ಗಿಡ ನೆಡುವ ಗುರಿ

    ವನಮಹೋತ್ಸವ: ಗೃಹ ರಕ್ಷಕ ದಳದಿಂದ ಒಂದು ಲಕ್ಷ ಗಿಡ ನೆಡುವ ಗುರಿ

    ಬೆಂಗಳೂರು : ಕರ್ನಾಟಕ ರಾಜ್ಯ ಗೃಹ ರಕ್ಷಕದಳ ವತಿಯಿಂದ ಬಿಇಎಲ್ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.

    ಬಿಇಎಲ್ ಆವಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಇಎಲ್ ನ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾ ಆರ್.ರಾವ್ ಮತ್ತು ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

    ಬಳಿಕ ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಮಾತನಾಡಿ, ವನಮಹೋತ್ಸವ ಹಿನ್ನೆಲೆ ಬಿಇಎಲ್ ಆವರಣದಲ್ಲಿ 400 ಗಿಡಗಳನ್ನ ನೆಡಲಾಗಿದೆ. ಜೊತೆಗೆ ಗೃಹ ರಕ್ಷಕ ದಳದಿಂದ ಪ್ರತಿ ಗೃಹಕ್ಷಕರು 4 ರಿಂದ 5 ಗಿಡಗಳನ್ನ ರಸ್ತೆ ಬದಿ, ಸರ್ಕಾರಿ ಕಚೇರಿಗಳು ಆಸ್ಪತ್ರೆಗಳ ಶಾಲೆಗಳಲ್ಲಿ ನೆಡುವಂತೆ ಕರೆ ನೀಡಲಾಗಿದೆ. ಒಂದು ಲಕ್ಷ ಗಿಡ ನೆಡುವ ಗುರಿ ಹೊಂದಿದ್ದೇವೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶ್ರೀಘ್ರದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದರು.

    ಕಾರ್ಯಕ್ರಮದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಎಂ ಗುರುರಾಜ್, ಜೀತೇಂದ್ರ ಸಿಂಗ್,ಶಂಕರಪ್ಪ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

  • ಬಿಇಎಲ್ ಕಾರ್ಯವನ್ನು ಶ್ಲಾಘಿಸಿದ ಕೇಂದ್ರ ಸಚಿವ ಸದಾನಂದಗೌಡ

    ಬಿಇಎಲ್ ಕಾರ್ಯವನ್ನು ಶ್ಲಾಘಿಸಿದ ಕೇಂದ್ರ ಸಚಿವ ಸದಾನಂದಗೌಡ

    ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಬಿಇಎಲ್ ತೆಗೆದುಕೊಂಡ ಕಾರ್ಯಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಮೆಚ್ಚುಗೆ ವ್ಯಕ್ತಪಡಿಸಿದರು.

    ಬಿಇಎಲ್ ನ ಲಸಿಕಾ ಕೇಂದ್ರಕ್ಕೆ ಇವತ್ತು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭೇಟಿ ನೀಡಿದ್ರು. ಸುವ್ಯವಸ್ಥಿತವಾಗಿ ನಡೆಯುತ್ತಿರೋ, ಕೋವಿಡ್ ಲಸಿಕಾ ಕೇಂದ್ರವನ್ನು ಕಂಡು ಅತ್ಯಂತ ಸಂತಸ ವ್ಯಕ್ತಪಡಿಸಿದ್ರು. ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಬಿಇಎಲ್ ಕೈಗೊಂಡ ಕೋವಿಡ್ ಕೇರ್ ಸೆಂಟರ್, ಕೋವಿಡ್ ಟಾಸ್ಕ್ ಫೋರ್ಸ್ ಟೀಮ್ ರಚನೆ ಸೇರಿದಂತೆ ಹಲವು ಕಾರ್ಯವೈಖರಿಯ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿದರು.

    ಸಂಸ್ಥೆಯು ನೌಕರರ ಕೊರೊನಾ ಚಿಕಿತ್ಸೆಗೆ ನೀಡುತ್ತಿರೋ ಆರ್ಥಿಕ ಸಹಾಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಭೇಟಿಯ ಸವಿನೆನಪಿಗಾಗಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಾಗೆಯೇ ಅಗತ್ಯವಾದ ಲಸಿಕೆಗಳನ್ನು ಬಿಇಎಲ್ ಗೆ ಸರಬರಾಜು ಮಾಡಲು ಸಂಬಂಧಪಟ್ಟವರಿಗೆ ಆದೇಶಿಸಲಾಗುವುದೆಂಬ ಆಶ್ವಾಸನೆ ನೀಡಿದರು.

    ಕೊರೊನಾ ಸಂಕಷ್ಟದ ಸಮಯದಲ್ಲಿ ತನ್ನ ನೌಕರರಿಗೆ ಬಿಇಎಲ್ ಬೆನ್ನುಲುಬಾಗಿ ನಿಂತಿದೆ. ನಗರದ ಜಾಲಹಳ್ಳಿಯಲ್ಲಿರೋ ಬಿಇಎಲ್ ಸಂಸ್ಥೆಯು ಕೊರೊನಾ ಲಾಕ್‍ಡೌನ್ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸುಮಾರು 10,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನೌಕರರನ್ನು ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಅಥವಾ ಆದ್ಯತಾ ಗುಂಪಿನಲ್ಲಿ ಸೇರಿಸಲಾಗಿದ್ದು, ಬಿಇಎಲ್ ನೌಕರರಿಗೆ ಲಸಿಕೆ ನೀಡಲಾಗುತ್ತಿದೆ.

    ಈ ವೇಳೆ ಬಿಇಎಲ್ ಡೈರೆಕ್ಟರ್ ವಿನಯ್ ಕುಮಾರ್ ಕಟಿಯಾಲ್, ಬಿಇಎಲ್ ನ ಜನರಲ್ ಮ್ಯಾನೇಜರ್ ಆರ್ ಪಿ ಮೋಹನ್, ಎಜಿಎಂ ಸುರೇಶ್ ಮೈಚಿಲ್ ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ವಿಭಾಗದ ಡಿಜಿಎಂ ಗುರುರಾಜ್ ಎಂ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.

  • ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಶೀಘ್ರವೇ ಕಾನೂನು: ಶಿವರಾಮ್ ಹೆಬ್ಬಾರ್

    ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಶೀಘ್ರವೇ ಕಾನೂನು: ಶಿವರಾಮ್ ಹೆಬ್ಬಾರ್

    – ಬಾಯ್ಲರ್ ಅನಾಹುತ ತಡೆಯಲು ಮೊದಲ ಆದ್ಯತೆ

    ಬೆಂಗಳೂರು: ಬಾಯ್ಲರ್ ಡಿಪಾರ್ಟ್ಮೆಂಟ್ ನಲ್ಲಿ ಅಪಘಾತಗಳನ್ನು ತಡೆಯುವುದು ನಮ್ಮ ಕರ್ತವ್ಯ. ಇದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದರು.

    ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ ಹಾಗೂ ಜಾಲಹಳ್ಳಿಯ ಬಿಇಎಲ್ ನೇತೃತ್ವದಲ್ಲಿ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕ್ಯಾಂಪಸ್‍ನ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ 50ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಐದು ತಿಂಗಳ ಕಾಲ ಕಾರ್ಮಿಕರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಬಡತನ, ಕಾರ್ಮಿಕರ ಶ್ರಮವನ್ನು ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.

    ಟೊಯೋಟಾ ಕಾರ್ಮಿಕರ ಸಮಸ್ಯೆಗೆ ನಿನ್ನೆ ತಾರ್ಕಿಕ ಅಂತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸೌಖ್ಯತೆಯನ್ನು ಮಾಡಬೇಕಿದೆ. ಮಕ್ಕಳ ಪಾಲನೆ, ಪೋಷಣೆ ಬೇರೆಯವರ ಜವಬ್ದಾರಿ ಎಂದುಕೊಳ್ಳಲಾಗಿದೆ. ಬಾಯ್ಲರ್ ಡಿಪಾಟ್ರ್ಮೆಂಟ್ ನಲ್ಲಿ ಅಪಘಾತಗಳನ್ನು ತಡೆಯುವುದು ನಮ್ಮ ಕರ್ತವ್ಯ. ಕಾರ್ಮಿಕರಿಗೆ ಅನುಕೂಲವಾಗುವ ಹೊಸ ಹೊಸ ಕಾನೂನುಗಳನ್ನು ತಂದಿದ್ದೇವೆ. ಕಾರ್ಮಿಕ ಬದ್ಧತೆ ಹಾಗೂ ರಕ್ಷಣೆ ಮಾಲೀಕರ ಜವಾಬ್ದಾರಿ ಎಂದು ತಿಳಿಸಿದರು.

    ಕಾಂಟ್ರಾಕ್ಟ್ ಬೇಸ್ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಹೊಸ ಕಾನೂನನ್ನು ಶೀಘ್ರದಲ್ಲೇ ತರಲಾಗುವುದು. ಇಡೀ ದೇಶದಲ್ಲೇ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಅಪಘಾತಗಳ ಸಂಖ್ಯೆ ಕಡಿಮೆಯಾದಾಗ ಈ ಸಮಾರಂಭ ಔಚಿತ್ಯಪೂರ್ಣವಾಗುತ್ತದೆ. ಕಾರ್ಮಿಕರಿಗೆ ಉದ್ಯೋಗ ಸಿಗಬೇಕು ಎಂದರು. ಈ ವೇಳೆ ರಸ್ತೆ ಸುರಕ್ಷತಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

    ಬಿಇಎಲ್ ಡೆಪ್ಯುಟಿ ಮ್ಯಾನೇಜರ್ ಗುರುರಾಜ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಈ ವೇಳೆ ಬಿಇಎಲ್ ಕಾರ್ಖಾನೆಯ ಘಟಕ ಮುಖ್ಯಸ್ಥರಾದ ಆರ್.ಪಿ.ಮೋಹನ್, ಸನ್ ಸೇರ ಇಂಜಿನಿಯರಿಂಗ್ ಲಿಮಿಟೆಡ್ ನ ಎಂಡಿ ಎಫ್.ಆರ್.ಸಿಂಘ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ರಾಜ್ಯ ಮಟ್ಟದ ಸುರಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

  • ಬಿಇಎಲ್ ಕಾರ್ಮಿಕರಿಂದ ಕನ್ನಡ ರಾಜ್ಯೋತ್ಸವ

    ಬಿಇಎಲ್ ಕಾರ್ಮಿಕರಿಂದ ಕನ್ನಡ ರಾಜ್ಯೋತ್ಸವ

    ಬೆಂಗಳೂರು: ನಾಡಿನೆಲ್ಲೆಡೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಅದೇ ರೀತಿ ನಗರದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

    ಬಿಇಎಲ್ ಕಾರ್ಮಿಕ ಹಿತರಕ್ಷಕ ಸಮಿತಿಯಿಂದ ಬಿಇಎಲ್ ನ ಕಲಾಕ್ಷೇತ್ರದಲ್ಲಿ ಕುವೆಂಪು ಮೂರ್ತಿಗೆ ಅಧಿಕಾರಿಗಳ ವರ್ಗದಿಂದ ಮಾಲಾರ್ಪಣೆ ಮಾಡಲಾಯಿತು. ನಂತರ ಹಳದಿ ಹಾಗೂ ಕೆಂಪು ಶಾಲು ಧರಿಸಿ, ಕನ್ನಡ ಧ್ವಜ ಹಿಡಿದು ಕಾಲ್ನಡಿಗೆ ಜಾಥಾ ನಡೆಸಲಾಯಿತು. ಬಿಇಎಲ್ ಮಿಲ್ ಕಾಂನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾ ರಾವ್, ಉಪ ವ್ಯವಸ್ಥಾಪಕ ಗುರುರಾಜ್ ಎಂ. ಧ್ವಜಾರೋಹಣ ನೆರೆವೇರಿಸಿದರು.

    ಬಿಇಎಲ್ ಕರ್ನಾಟಕ ಕಾರ್ಮಿಕ ಹಿತರಕ್ಷಕ ಸಮಿತಿಯ ಅಧ್ಯಕ್ಷ ಬಾಬುಲಾಲ್, ಸಂಘದ ಕಾರ್ಯದರ್ಶಿ ಎಲ್.ಕೆ.ಶಿವರಾಜ್, ಸಿಐಟಿಯುನ ನವೀನ್ ಕುಮಾರ್, ಯೂನಿಟಿ ಪೋರಂನ ಪಳಿನಿ, ಬಿಇಎಲ್ ಅಧಿಕಾರಿಗಳ ಒಕ್ಕೂಟದ ಸಂಜೀತ್ ಕುಮಾರ್, ಲಲಿತಕಲಾ ಸಂಘದ ಡಿ.ಸಂತೋಷಕುಮಾರ್, ಕನ್ನಡ ಸಾಹಿತ್ಯ ಒಕ್ಕೂಟದ ವರದರಾಜು ಸೇರಿದಂತೆ ಬಿಇಎಲ್ ನ ಹಲವು ಸಂಘಟನೆಗಳ ಅಧಿಕಾರಿಗಳು, ಮುಖಂಡರುಗಳು ಭಾಗವಹಿಸಿದ್ದರು. ಸಮಿತಿಯು ಕರ್ನಾಟಕ ರಾಜ್ಯೋತ್ಸವವನ್ನು 41 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.

  • ಬಿಇಎಲ್ ಕಂಪನಿಯಲ್ಲಿ ಕೆಲ್ಸ ಕೊಡಿಸೋದಾಗಿ 21 ಲಕ್ಷ ವಂಚನೆ

    ಬಿಇಎಲ್ ಕಂಪನಿಯಲ್ಲಿ ಕೆಲ್ಸ ಕೊಡಿಸೋದಾಗಿ 21 ಲಕ್ಷ ವಂಚನೆ

    ಬೆಂಗಳೂರು: ಸರ್ಕಾರಿ ಕೆಲಸ ಸಿಗತ್ತೆ ಅಂತ ಕಾಯುತ್ತಿದ್ದವರನ್ನೇ ಬಂಡವಾಳ ಮಾಡಿಕೊಂಡು ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದು, ಇದೀಗ ಲಕ್ಷ ಲಕ್ಷ ಲಪಟಾಯಿಸಿ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ.

    ನಯಾಜ್ ಪಾಷಾ ಸರ್ಕಾರಿ ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾನೆ. ತಾನು ಬಿಇಎಲ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ಕಂಪನಿಯ ಆಡಳಿತ ನಿರ್ದೇಶಕರ ಕಾರ್ ಡ್ರೈವರ್ ಎಂದು ಹೇಳಿಕೊಂಡು ಸುಮಾರು 14 ಮಂದಿಗೆ ಪಂಗನಾಮ ಹಾಕಿದ್ದಾನೆ. 5 ಲಕ್ಷ ಹಣ ಕೊಟ್ಟರೆ ಕೆಲಸ ಕೊಡಿಸುತ್ತೇನೆ. ಮೊದಲು ಲಿಸ್ಟ್ ನಲ್ಲಿ ನಿಮ್ಮ ಹೆಸರು ಅನೌನ್ಸ್ ಆದಾಗ 1.50 ಲಕ್ಷ ಕೊಡಿ. ನೇಮಕಾತಿ ಬಳಿಕ ಬಾಕಿ ಹಣ ನೀಡುವಂತೆ ಹೇಳಿದ್ದಾನೆ. ಇತ್ತ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಜನ ಹಣ ಕೊಟ್ಟಿದ್ದಾರೆ. ಹಣ ಸಿಕ್ಕಿದ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.

    ವಾಟ್ಸಪ್ ಮೂಲಕ ಬಿಇಎಲ್ ಫ್ಯಾಕ್ಟರಿಯ ಲೇಟರ್ ಹೇಡ್‍ನಲ್ಲಿ ನಕಲಿ ಲಿಸ್ಟ್ ತೋರಿಸಿ 2018 ನವಂಬರ್ 8ಕ್ಕೆ ಸಂದರ್ಶನಕ್ಕೆ ಅಪಾಯಿಂಟ್ ಮೆಂಟ್ ಸಿಕ್ಕಿದೆ ಎಂದು ಹಣ ಪಡೆದಿದ್ದಾನೆ. ಬಳಿಕ ನಯಾಜ್ ಮಹಿಳೆಯೊಬ್ಬಳಿಂದ ಕರೆ ಮಾಡಿಸಿ ಸಂದರ್ಶನದ ದಿನಾಂಕವನ್ನು 2019 ಜನವರಿ 29ಕ್ಕೆ ಮುಂದೂಡಲಾಗಿದೆ ಎಂದು ಸುಳ್ಳು ಹೇಳಿಸಿದ್ದನು. ನಂತರ ಜನವರಿ 28ಕ್ಕೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಹಣ ಕಳೆದುಕೊಂಡ ಗಂಗಾಧರ್ ಹೇಳಿದ್ದಾರೆ.

    ಈ ಬಗ್ಗೆ ಅನುಮಾನ ಬಂದು ಬಿಇಎಲ್ ಫ್ಯಾಕ್ಟರಿ ಎಂ.ಡಿ ಅವರನ್ನ ಸಂಪರ್ಕಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಇನ್ನೂ ನಯಾಜ್ ಇದುವರೆಗೂ 14 ಜನರಿಂದ ಸುಮಾರು 21 ಲಕ್ಷ ಹಣ ಪೀಕಿದ್ದಾನೆ. ಈ ಸಂಬಂಧ ವಂಚನೆಗೊಳಗಾದವರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತಯಂತ್ರಗಳನ್ನು ಖಾಸಗಿ ಕಂಪೆನಿಯಿಂದ ಖರೀದಿಸಲ್ಲ: ಕೇಂದ್ರ ಚುನಾವಣಾ ಆಯೋಗ

    ಮತಯಂತ್ರಗಳನ್ನು ಖಾಸಗಿ ಕಂಪೆನಿಯಿಂದ ಖರೀದಿಸಲ್ಲ: ಕೇಂದ್ರ ಚುನಾವಣಾ ಆಯೋಗ

    ನವದೆಹಲಿ: ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಯಂತ್ರವನ್ನು ಖಾಸಗಿ ಕಂಪೆನಿಗಳಿಂದ ಖರೀದಿಸುವ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ.

    ಖಾಸಗಿ ಕಂಪೆನಿಗಳಿಂದ ಖರೀದಿಸಿದರೆ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆಯೋಗ ಆರ್ ಟಿ ಐ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ.

    ಖಾಸಗಿ ಕಂಪೆನಿಗಳು ವಿವಿಪ್ಯಾಟ್ ನ ಸುರಕ್ಷತಾ ಕ್ರಮಗಳನ್ನು ಹೇಗೆ ಅಳವಡಿಸುತ್ತವೆ ಅನ್ನುವುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಇದರಿಂದ ಮತದಾರರ ನಂಬಿಕೆ ತಗ್ಗಲಿದೆ ಎಂದು ಆಯೋಗದ ತಾಂತ್ರಿಕ ತಜ್ಞ ಸಮಿತಿ (ಟಿಇಸಿ) ವಾದಿಸಿದೆ.

    ಸುಪ್ರಿಂ ಕೋರ್ಟ್ ಚುನಾವಣಾ ಆಯೋಗದ ನಿರ್ಧಾರವನ್ನು ಸಮ್ಮತಿಸಿದೆ. ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕಂಪೆನಿಗಳು ಸದ್ಯಕ್ಕೆ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ತಯಾರಿಸುತ್ತಿವೆ.

    ಇತ್ತೀಚೆಗಷ್ಟೆ ಮತಯಂತ್ರಗಳ ಮೇಲೆ ಎಎಪಿ ಮತ್ತು ಬಿಎಸ್‍ಪಿ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇದಾದ ನಂತರ ಕೇಂದ್ರ ಚುನಾವಣಾ ಆಯೋಗವು ಮತಯಂತ್ರಗಳನ್ನು ಪರೀಕ್ಷೆಗೆ ಒಳಪಡಿಸಿ ಎಲ್ಲಾ ಪಕ್ಷಗಳಿಗೆ ಅಕ್ರಮ ಸಾಬೀತು ಮಾಡಲು ಅವಕಾಶ ಕಲ್ಪಿಸಿತ್ತು. ಯಾವ ಪಕ್ಷದವರು ಕೂಡ ಸಾಬೀತು ಮಾಡಿಲ್ಲ.

    ವಿವಿಪಿಎಟಿ ಅಂದ್ರೇನು?: ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ವ್ಯವಸ್ಥೆಯಲ್ಲಿ ಯಾರಿಗೆ ವೋಟ್ ಬಿದ್ದಿದೆ ಎನ್ನುವುದನ್ನು ತಿಳಿದುಕೊಳ್ಳಲು ವೋಟ್ ಹಾಕಿದ ಬಳಿಕ ಅಭ್ಯರ್ಥಿಯ ಚಿಹ್ನೆ 7 ಸೆಕೆಂಡ್ ಕಾಲ ಪರದೆಯಲ್ಲಿ ಕಾಣುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ 2016ರಲ್ಲಿ ಸಲಹೆ ನೀಡಿತ್ತು. ಪ್ರಸ್ತುತ ಈ ಬಾರಿ ಎಲ್ಲ ಮತದಾನ ಕೇಂದ್ರಗಳಲ್ಲಿ ವಿವಿಪ್ಯಾಟ್ ಇರಲಿದೆ.