Tag: ಬಿಂಡಿಗ ದೇವೀರಮ್ಮ

  • ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡಿದ್ರೆ ಹುಷಾರ್! – ದೇವೀರಮ್ಮನ ಭಕ್ತರಿಗೆ ಖಾಕಿ ಖಡಕ್ ಎಚ್ಚರಿಕೆ

    ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡಿದ್ರೆ ಹುಷಾರ್! – ದೇವೀರಮ್ಮನ ಭಕ್ತರಿಗೆ ಖಾಕಿ ಖಡಕ್ ಎಚ್ಚರಿಕೆ

    – 2 ದಿನ ಪ್ರವಾಸಿಗರಿಗೆ ನಿರ್ಬಂಧ

    ಚಿಕ್ಕಮಗಳೂರು: ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದ ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆ ನಿಂತು ವರ್ಷಕ್ಕೊಮ್ಮೆ ದರ್ಶನ ನೀಡುವ ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲೇನಹಳ್ಳಿ (Mallenahalli) ಬಿಂಡಿಗ ದೇವೀರಮ್ಮನ (Bindiga Deviramma Temple) ಭಕ್ತರಿಗೆ ಖಾಕಿ ಪಡೆ ಕಠಿಣ ಸಂದೇಶ ರವಾನಿಸಿದೆ. ಮಳೆ ಬಂದು ಬೆಟ್ಟ ಜಾರುತ್ತಿದೆ. ಬೆಟ್ಟ ಹತ್ತುವಾಗ ಮಾರ್ಗ ಮಧ್ಯೆ ಸೆಲ್ಫಿ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು, ಫೋಟೋ ಸೆಷನ್ ಮಾಡುವುದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಎಚ್ಚರಿಕೆ ನೀಡಿದ್ದಾರೆ.

    ಬುಧವಾರ ಸಂಜೆ 4 ಗಂಟೆಯಿಂದ ಗುರುವಾರ ಸಂಜೆಯವರೆಗೂ ಬೆಟ್ಟ ಹತ್ತಿ ದೇವೀರಮ್ಮನ ದರ್ಶನಕ್ಕೆ ದೇವಾಲಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಹಾಗಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಬೆಟ್ಟ ಹತ್ತುವ ಮಾರ್ಗದಲ್ಲಿ ಡ್ಯಾನ್ಸ್ ಮಾಡುವುದು, ಫೋಟೋ ಸೆಷನ್ ಮಾಡುವುದು, ಸೆಲ್ಫಿಗಾಗಿ ಭಕ್ತರಿಗೆ ತೊಂದರೆ ಕೊಡುವುದು, ರೀಲ್ಸ್ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್

    ಬೆಟ್ಟ ಹತ್ತುವ ಮಾರ್ಗ:
    ದೇವೀರಮ್ಮನ ನೋಡಲು ಲಕ್ಷಕ್ಕೂ ಅಧಿಕ ಭಕ್ತರು ಬರುವ ಹಿನ್ನೆಲೆ ಬೆಟ್ಟ ಹತ್ತುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಮಲ್ಲೇನಹಳ್ಳಿ ಮಾರ್ಗ, ಮಾಣಿಕ್ಯಾಧಾರ ಮಾರ್ಗ, ಅರಿಶಿನಗುಪ್ಪೆ ಹಾಗೂ ಕಾಫಿ ತೋಟದ ಒಳಗಿನಿಂದ ಒಟ್ಟು ನಾಲ್ಕು ಮಾರ್ಗದಲ್ಲಿ ಹತ್ತುವ ಬೆಟ್ಟಕ್ಕೆ ನಾಲ್ಕು ಮಾರ್ಗದಲ್ಲೂ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ. ಸುಮಾರು 3 ಕಿ.ಮೀ. ಎತ್ತರದ ಬೆಟ್ಟದಲ್ಲಿ ಪ್ರತಿ 1 ಕಿ.ಮೀಗೆ ಒಂದು ಪೊಲೀಸರ ತಂಡವನ್ನ ನಿಯೋಜನೆ ಮಾಡಲಾಗಿದೆ. ಬೆಟ್ಟದ ಮಾರ್ಗದ 5 ಕಡೆ ಮೆಗಾಫೋನ್ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಮಾರ್ಗದುದ್ದಕ್ಕೂ ಪೊಲೀಸ್, ಆರೋಗ್ಯ ಸಿಬ್ಬಂದಿ, ಅಗ್ನಿಶಾಮಕ, ಸ್ವಯಂಸೇವಕರು ಭಕ್ತರ ಅನುಕೂಲಕ್ಕೆ ಸಿದ್ಧರಿರುತ್ತಾರೆ. ಬೆಟ್ಟ ಹತ್ತಲು ಸುಸ್ತಾದರೆ ರೋಪ್ (ಹಗ್ಗ) ಹಿಡಿದು ಹತ್ತೋದಕ್ಕೂ ಸ್ವಯಂ ಸೇವಕರು, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ನೆರವಿಗೆ ಬರಲಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ| ಚಳ್ಳಕೆರೆಯಲ್ಲಿ ವಕ್ಫ್ ಬೋರ್ಡ್ ವಿರುದ್ಧ ಆಸ್ತಿ ಕಬಳಿಕೆ ಯತ್ನ ಆರೋಪ

    ಹೆಚ್ಚಿನ ಬಸ್ ಸೌಲಭ್ಯ:
    ಮೂರು ದಿನಗಳ ಕಾಲ ದೇವೀರಮ್ಮನ ದೀಪೋತ್ಸವ ಕಾರ್ಯಕ್ರಮ ನಡೆಯುವುದರಿಂದ ಚಿಕ್ಕಮಗಳೂರು ನಗರದಿಂದ ನಿತ್ಯ ಸಂಚರಿಸುವ ಬಸ್‌ಗಳ ಜೊತೆ ಮೂರು ದಿನಗಳ ಕಾಲ ನಿತ್ಯ 50 ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟಿದ್ದಾರೆ. ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ, ಭಕ್ತರು ಸಾಧ್ಯವಾದಷ್ಟು ಬಸ್ಸಿನಲ್ಲಿ ಬಂದು ಹೋಗಿ, ತಮ್ಮ-ತಮ್ಮ ವಾಹನಗಳಲ್ಲಿ ಬಂದರೆ ಟ್ರಾಫಿಕ್ ಜಾಮ್ ಆಗಿ ತೊಂದರೆಯಾಗುವ ಸಂಭವವಿದೆ. ಹಾಗಾಗಿ, ಭಕ್ತರು ಬಸ್ಸಿನಲ್ಲೇ ಬಂದು ಹೋಗಿ ಎಂದು ಮನವಿ ಮಾಡಿದ್ದಾರೆ. ಮಾಣಿಕ್ಯಾಧಾರದ ಮಾರ್ಗವಾಗಿ ಹತ್ತುವ ಭಕ್ತರಿಗೆ ದತ್ತಪೀಠದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವುದರಿಂದ ಕೇವಲ 150 ಗಾಡಿಗಳಿಗೆ ಮಾತ್ರ ಅವಕಾಶ ನೀಡಲಿದ್ದಾರೆ. ಇದನ್ನೂ ಓದಿ: ರಾಜ್ಯವನ್ನು ಮಸೀದಿಗಳೇ ನಡೆಸುತ್ತಿರುವ ಹಾಗನ್ನಿಸುತ್ತಿದೆ, ಕೂಡಲೇ ವಕ್ಫ್ ಬೋರ್ಡ್ ರದ್ದುಪಡಿಸಿ: ಛಲವಾದಿ ತಾಕೀತು

     

    2 ದಿನ ಮದ್ಯ ಮಾರಾಟ ಬಂದ್:
    ಬೆಟ್ಟದ ತಾಯಿ ದೇವೀರಮ್ಮನ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯುವುದರಿಂದ ಇದೇ ಅಕ್ಟೋಬರ್ 30ರ ಬುಧವಾರ ಹಾಗೂ 31ರ ಗುರುವಾರದಂದು ದೇವೀರಮ್ಮನ ದೇವಾಲಯವಿರುವ ಮಲ್ಲೇನಹಳ್ಳಿ ಗ್ರಾಮದ 10 ಕಿ.ಮೀ. ಸುತ್ತಳತೆಯಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ಫುಲ್ ಬ್ರೇಕ್ ಹಾಕಿದೆ. ಮದ್ಯ ಮಾರುವುದು, ಶೇಖರಿಸಿಟ್ಟು ಮಾರುವುದು, ಅಂಗಡಿ-ಮನೆಗಳಲ್ಲಿ ಮಾರಾಟ ಮಾಡಿದರೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇನ್ನು ಅಗ್ನಿಶಾಮಕ ಸಿಬ್ಬಂದಿ ಕೂಡ ಬೆಟ್ಟದಲ್ಲಿ ರೋಪ್‌ನೊಂದಿಗೆ ಭಕ್ತರ ಬೆನ್ನಿಗೆ ಬಂದೋಬಸ್ತ್ ಕಲ್ಪಿಸಿದ್ದಾರೆ. ಎರಡು ಅಗ್ನಿಶಾಮಕ ಗಾಡಿಗಳು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿರುತ್ತವೆ. ಇದನ್ನೂ ಓದಿ: ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ

    ಮಲ್ಲೇನಹಳ್ಳಿಯಲ್ಲಿ ತಾತ್ಕಾಲಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್:
    ಒಂದು ರಾತ್ರಿ ಒಂದು ಹಗಲಿಗೆ ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿ ದೇವಿ ದರ್ಶನ ಮಾಡುವುದರಿಂದ ಆರೋಗ್ಯ ಇಲಾಖೆ ಕೂಡ ಹೈಅಲರ್ಟ್ ಘೋಷಿಸಿದೆ. ನಾಲ್ಕು ಮಾರ್ಗದಲ್ಲಿ ಪೊಲೀಸರ ಜೊತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸಲಿದ್ದಾರೆ. ಭಕ್ತರಿಗೆ ಬೆಟ್ಟ ಹತ್ತುವಾಗ ಯಾವುದೇ ರೀತಿಯ ಸಮಸ್ಯೆಯಾದರೂ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಸಿಬ್ಬಂದಿ ಶ್ರಮಿಸಲಿದ್ದಾರೆ. ಜೊತೆಗೆ ಬೆಟ್ಟ ಹತ್ತುವ ನಾಲ್ಕು ಮಾರ್ಗದಲ್ಲಿ ನಾಲ್ಕು ಅಂಬುಲೆನ್ಸ್‌ಗಳ ಜೊತೆ ಒಂದು ಸಂಚಾರಿ ಅಂಬುಲೆನ್ಸ್ ಕೂಡ ಕಾರ್ಯನಿರ್ವಹಿಸಲಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಒಂದು ಸ್ಪೆಷಲ್ ವಾರ್ಡ್ ಕೂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಜಾರಿಕೆ ಜೊತೆ ಕಾಡಿನ ಕಾಲು ದಾರಿಯಲ್ಲಿ ಸುಮಾರು 3 ಸಾವಿರ ಅಡಿಗೂ ಎತ್ತರದ 3-4 ಕಿ.ಮೀ. ಎತ್ತರದ ಬೆಟ್ಟವನ್ನು ಪುಟ್ಟ-ಪುಟ್ಟ ಮಕ್ಕಳು, ವಯಸ್ಸಾದ ವೃದ್ಧರು ಹತ್ತಿ ಇಳಿದರೂ ಈವರೆಗೂ ಯಾವೊಬ್ಬ ಭಕ್ತರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಲು ಜಾರಿರುವಂತಹ ಸಣ್ಣ-ಪುಟ್ಟ ಪ್ರಕರಣಗಳನ್ನು ಹೊರತುಪಡಿಸಿ ಯಾರಿಗೂ ಯಾವುದೇ ದೊಡ್ಡ ಮಟ್ಟದ ನೋವು ಸಂಭವಿಸದಿರೋದು ದೇವಿಯ ಶಕ್ತಿಗೆ ಹಿಡಿದ ಕೈಗನ್ನಡಿ. ಇದನ್ನೂ ಓದಿ: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿಎಂ

    2 ದಿನ ಪ್ರವಾಸಿಗರಿಗೆ ನಿರ್ಬಂಧ:
    ದೇವೀರಮ್ಮನ ಜಾತ್ರಾ ಮಹೋತ್ಸವಕ್ಕೆ ಮುಳ್ಳಯ್ಯನಗಿರಿ ಮಾರ್ಗದ ದತ್ತಪೀಠದ ಕಡೆಯಿಂದಲೂ ಭಕ್ತರು ಬಂದು ಮಾಣಿಕ್ಯಾಧಾರದ ಮೂಲಕ ಬೆಟ್ಟ ಹತ್ತಿ ದೇವಿ ದರ್ಶನ ಮಾಡುವುದರಿಂದ ಮುಳ್ಳಯ್ಯನಗಿರಿ ಭಾಗದ ಪ್ರವಾಸಿಗರಿಗೆ 30-31ರಂದು ನಿರ್ಬಂಧ ಹೇರಲಾಗಿದೆ. ದೇವೀರಮ್ಮನ ಜಾತ್ರೆಗೆ ಬರುವ ಭಕ್ತರಿಗೆ ನೋ ಪ್ರಾಬ್ಲಂ. ಆದರೆ ಬೆಳಗ್ಗೆ ಬಂದು ಸಂಜೆ ಹೋಗುವ ಫ್ಲೋಟಿಂಗ್ ಟೂರಿಸ್ಟ್‌ಗಳಿಗೆ ಅವಕಾಶ ಇಲ್ಲ. ಹೋಂ ಸ್ಟೇ, ರೆಸಾರ್ಟ್ ಬುಕ್ ಮಾಡಿಕೊಂಡು ಬರುವ ಟೂರಿಸ್ಟ್‌ಗಳು ಬುಕ್ಕಿಂಗ್ ತೋರಿಸಿ ಹೋಗಬಹುದು. ಬುಕ್ ಮಾಡದೇ ಸುಮ್ಮನೆ ಪ್ರವಾಸಕ್ಕೆಂದು ಬಂದರೆ ಅಂತಹಾ ಪ್ರವಾಸಿಗರಿಗೆ ಕೈಮರಾ ಚೆಕ್ ಪೋಸ್ಟ್‌ನಿಂದ ಮುಂದೆ ಬಿಡುವುದಿಲ್ಲ. ಇದನ್ನೂ ಓದಿ: ಜಾತಿಗಣತಿಯನ್ನ ಈ ಸರ್ಕಾರ ಯಾಕೆ ಬಿಡುಗಡೆ ಮಾಡ್ತಿಲ್ಲ: ಕುಮಾರಸ್ವಾಮಿ ಪ್ರಶ್ನೆ

  • ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

    ವರ್ಷಕ್ಕೊಮ್ಮೆ ದರ್ಶನ ನೀಡುವ ಕಾಫಿನಾಡ ʻಬಿಂಡಿಗ ದೇವೀರಮ್ಮʼ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ!

    ಚಿಕ್ಕಮಗಳೂರು: ಸಮುದ್ರಮಟ್ಟದಿಂದ 3,000 ಅಡಿಗಳಷ್ಟು ಎತ್ತರದ ಪಿರಮಿಡ್ ಆಕಾರದ ಗುಡ್ಡದ ತುದಿಯಲ್ಲಿ ನೆಲೆ ನಿಂತಿರೋ ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.‌

    ವರ್ಷಕ್ಕೊಮ್ಮೆ ದರ್ಶನ ನೀಡೋ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಈ ಬಾರಿ ಜಿಲ್ಲೆಯಲ್ಲಿ ವಿಪರೀತ ಮಳೆ ಹೆಚ್ಚಾಗಿರುವುದರಿಂದ ಭಕ್ತರು ಬೆಟ್ಟ ಹತ್ತುವಾಗ ತುಂಬಾ ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಕೂಡ ಮನವಿ ಮಾಡಿದೆ.

    ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಈಗಾಗಲೇ ಬೆಟ್ಟವನ್ನು ಹತ್ತಿ ಪರಿಶೀಲನೆ ನಡೆಸಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿ ದೇವರ ಮೊರೆ ಹೋಗುತ್ತಾರೆ. ಆದರೆ, ಬಿಂಡಿಗ ದೇವಿರಮ್ಮನ ಭಕ್ತರು ತಮ್ಮ ಬಯಕೆ ಈಡೇರಿಸಿಕೊಳ್ಳಲು ತಾಯಿ ಎದುರು ದೇಹವನ್ನು ದಂಡಿಸುತ್ತಾರೆ. ಬರಿಗಾಲಲ್ಲೇ 3,000 ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರಾ ಮಹೋತ್ಸವದಲ್ಲಿ ಈ ಬಾರಿಯೂ ಸಾವಿರಾರು ಭಕ್ತರು ಪಾಲ್ಗೊಳ್ಳೋ ನಿರೀಕ್ಷೆ ಇದೆ. ಇದೇ ತಿಂಗಳ 31 ರಿಂದ ನವೆಂಬರ್ 3ರ ವರೆಗೆ ದೀಪೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಬೆಟ್ಟಕ್ಕೆ 80,000 ಅಧಿಕ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಸಾವಿರಾರು ಭಕ್ತರು ರಾತ್ರೋರಾತ್ರಿ ಬೆಟ್ಟವನ್ನೇರಿ ದೇವಿ ದರ್ಶನ ಪಡೆಯುತ್ತಾರೆ. ದೀಪಾವಳಿ ಅಂಗವಾಗಿ ಮೂರು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತೆ.

    3,000 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿರೋ ದೇವಿರಮ್ಮ ವರ್ಷಕ್ಕೊಮ್ಮೆ ಮಾತ್ರ ಜನರಿಗೆ ದರ್ಶನ ನೀಡೋದು. ಮತ್ತೊಂದು ವಿಶೇಷ ಅಂದ್ರೆ 3000 ಅಡಿ ಎತ್ತರವಿರೋ ಈ ಬೆಟ್ಟವನ್ನ ಭಕ್ತಾಧಿಗಳು ಬರಿಗಾಲಲ್ಲೇ ಹತ್ತುತ್ತಾರೆ. ಮೂರು ದಿನಗಳ ಕಾಲ ನಡೆಯೋ ದೇವರಮ್ಮನ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಅಕ್ಟೋಬರ್ 31ರ ನರಕ ಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆಸಿ ಬೆಳಗಿನ ಜಾವ 4 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತೆ. ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡು, ಬೆಟ್ಟ-ಗುಡ್ಡದ ಕಲ್ಲಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು, ಬೆಟ್ಟವನ್ನೇರಿ ಪೂಜೆ ಮಾಡಿಸಿದ್ರೆ ಭಕ್ತರ ಇಷ್ಟಾರ್ಥ ಸಿದ್ಧಿಸೋದ್ರಿಂದ ಭಕ್ತರು ಜಾತ್ರೆಯಂದು ದೇಹವನ್ನ ದಂಡಿಸೋದ್ರ ಮೂಲಕ ತಮ್ಮ ಕಾರ್ಯ, ಬಯಕೆಯನ್ನ ಸಿದ್ಧಿಸಿಕೊಳ್ಳುತ್ತಾರೆ.