Tag: ಬಾವಲಿ

  • ಕುಮದ್ವತಿ ನದಿಯ ತೀರದಲ್ಲಿ ಬಾವಲಿಗಳ ಹತ್ಯೆ- ಐವರು ಆರೋಪಿಗಳ ಬಂಧನ

    ಕುಮದ್ವತಿ ನದಿಯ ತೀರದಲ್ಲಿ ಬಾವಲಿಗಳ ಹತ್ಯೆ- ಐವರು ಆರೋಪಿಗಳ ಬಂಧನ

    ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಮಾಸೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿಯ ತೀರದಲ್ಲಿ 85 ಬಾವಲಿಗಳ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

    ಮಾಸೂರು ಗ್ರಾಮದ ಕುಮದ್ವತಿ ನದಿ ದಂಡೆಯ ಮೇಲೆ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತೀರುಗುವ ವೇಳೆ 5 ಅರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕಾರಿನೊಳಗೆ ಪ್ರೇಮಿಗಳು ಆತ್ಮಹತ್ಯೆ

    ಬಂಧಿತ ಆರೋಪಿಗಳಾದ ಬೆಂಗಳೂರು ಮೂಲದ ಮಂಜುನಾಥ್(45), ತುಮಕೂರು ಜಿಲ್ಲೆಯ ಅಗ್ನಿಬನ್ನಿರಾಯನಗರದ ಕೃಷ್ಣಪ್ಪ ಉರ್ಫ್(60), ರಾಮಕೃಷ್ಣಯ್ಯ(52), ಲಕ್ಷ್ಮಯ್ಯ ಹಾಗೂ ಲೋಕೇಶ್ ನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಗೈದ 85 ಬಾವಲಿ ಹಾಗೂ ಬಾವಲಿಗೆ ಬೇಟೆಗೆ ಬಳಸಿರುವ ಆಯುಧಗಳು ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಐವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9 ಮತ್ತು 51 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಕೊರೊನಾ ವೈರಸ್ 40 ರಿಂದ 70 ವರ್ಷಗಳ ಹಿಂದೆ ಬಾವಲಿಗಳಲ್ಲಿ ಕಂಡುಬಂದಿದೆ – ಪ್ರೊ. ಡೇವಿಡ್ ರಾಬರ್ಟ್ಸ್‌ನ್‌

    ಕೊರೊನಾ ವೈರಸ್ 40 ರಿಂದ 70 ವರ್ಷಗಳ ಹಿಂದೆ ಬಾವಲಿಗಳಲ್ಲಿ ಕಂಡುಬಂದಿದೆ – ಪ್ರೊ. ಡೇವಿಡ್ ರಾಬರ್ಟ್ಸ್‌ನ್‌

    ನವದೆಹಲಿ: ಇಡೀ ವಿಶ್ವವವನ್ನು ಬೆಚ್ಚಿ ಬೀಳಿಸಿದ ಕೊರೊನಾ ಸೋಂಕು ಮಾನವರಿಗೆ ತಗುಲುವ ಮುನ್ನ ದಶಕಗಳಿಂದ ಬಾವಲಿಗಳ ದೇಹದಲ್ಲಿತ್ತು. ಆದರೆ ಅದನ್ನು ಕಂಡುಹಿಡಿಯಲಾಗಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಕೊರೊನಾ ವೈರಸ್‍ಗೆ 40 ರಿಂದ 70 ವರ್ಷಗಳ ಮೊದಲು ಬಾವಲಿಗಳಲ್ಲಿ ಕಂಡುಬಂದಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಬಹುಶಃ ಈ ವೈರಸ್ ಈಗ ಮನುಷ್ಯರನ್ನು ತಲುಪಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

    ನೇಚರ್ ಮೈಕ್ರೋ ಬಯಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯೊಂದರಲ್ಲಿ ಕೆಲಸ ಮಾಡಿದ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇವಿಡ್ ರಾಬರ್ಟ್ಸ್‌ನ್‌ ಪ್ರಕಾರ, ಸಾಂಕ್ರಾಮಿಕ ರೋಗಕ್ಕೆ ಕಾರಣವಾದ ಸಾರ್ಸ್-ಕೋವಿ 2 ವೈರಸ್ ಬಾವಲಿಗಳಲ್ಲಿ ಕಂಡುಬರುವ ವೈರಸ್‍ಗೆ ತಳಿಗೆ ಹತ್ತಿರದಲ್ಲಿದೆ. ಆದರೆ ಎರಡು ತಳಿಗಳಿಗೂ ದಶಕಗಳ ವ್ಯತ್ಯಾವಿದೆ. ವೈರಸ್ ಬಹಳ ಸಮಯದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಾರೆ.

    ಆದರೆ ಈ ವೈರಸ್ ಯಾವಾಗ ಮತ್ತು ಹೇಗೆ ಮನುಷ್ಯರಲ್ಲಿ ಬಂತು ಎಂಬುದು ಇನ್ನೂ ತಿಳಿದಿಲ್ಲ. ಈ ಸಾಮಾನ್ಯ ವೈರಸ್ ಬಾವಲಿಗಳಲ್ಲಿ ಕಂಡುಬರುತ್ತದೆ ಎಂದು ನಾವು ನಂಬಿದ್ದೇವೆ. ಆದ್ದರಿಂದ ನಮಗೆ ಹೆಚ್ಚು ತೀಕ್ಷ್ಣವಾದ ಅಧ್ಯಯನ ಅವಶ್ಯಕತೆ ಇದೆ. ನಾವು ಅದನ್ನು ಹೆಚ್ಚು ಮೇಲ್ವಿಚಾರಣೆ ಮಾಡಬೇಕು ಎಂದು ರಾಬರ್ಟ್ಸ್‌ನ್‌ ಹೇಳಿದ್ದಾರೆ. ಇದನ್ನೂ ಓದಿ: ಹಂದಿಗಳಿಗೆ ವೈರಸ್ ಚುಚ್ಚಿ ವೆಟ್ ಮಾರುಕಟ್ಟೆಗೆ ಮಾರಾಟ. ಚೀನಾ ಸಂಶೋಧನೆ ಬಗ್ಗೆ ಸ್ಫೋಟಕ ವರದಿ

    ಭವಿಷ್ಯದಲ್ಲಿ ಮತ್ತಷ್ಟು ಸಾಂಕ್ರಾಮಿಕ ರೋಗಗಳನ್ನು ಹರಡದಿರಲು, ನಾವು ಮಾನವರಿಗೆ ಬಂದಿರುವ ಸೋಂಕಿನ ಜೊತೆ ಕಾಡು ಬಾವಲಿಗಳ ಮಾದರಿಯನ್ನು ಸಹ ಪರೀಕ್ಷೆ ಮಾಡಬೇಕಾಗುತ್ತದೆ. ಈ ವೈರಸ್‍ಗಳು ದಶಕಗಳವರೆಗೆ ಇದ್ದರೇ ಬಾವಲಿಗಳು ಕಾಲುಗಳ ಮೂಲಕ ಇತರ ಪ್ರಾಣಿಗಳಿಗೆ ಹರಡಿರಬೇಕು. ಈ ಮೂಲಕ ಮಾನವನಿಗೆ ಹರಡಿರಬಹುದು ಎಂದು ಪ್ರೊಫೆಸರ್ ಡೇವಿಡ್ ರಾಬರ್ಟ್ಸ್‌ನ್‌ ತಿಳಿಸಿದ್ದಾರೆ.

  • ಬಾವಲಿಗಳಲ್ಲೂ ಕೊರೊನಾ ವೈರಸ್- ಐಸಿಎಂಆರ್ ಸಂಶೋಧನೆಯಲ್ಲಿ ಬಹಿರಂಗ

    ಬಾವಲಿಗಳಲ್ಲೂ ಕೊರೊನಾ ವೈರಸ್- ಐಸಿಎಂಆರ್ ಸಂಶೋಧನೆಯಲ್ಲಿ ಬಹಿರಂಗ

    ಬೆಂಗಳೂರು: ನಿಫಾದಿಂದ ಕಂಗೆಡಿಸಿದ್ದ ಬಾವಲಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ವಿಚಾರ ಕರ್ನಾಟಕವನ್ನೂ ಆತಂಕಕ್ಕೀಡು ಮಾಡಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ವಾಕರ್ಸ್ ಗೂ ಈಗ ಬಾವಲಿಯ ಭಯ ಕಾಡುತ್ತಿದ್ದು ಲಾಕ್‍ಡೌನ್ ನಂತ್ರ ವಾಕ್ ಮಾಡೋದಾ ಬೇಡ್ವಾ ಅನ್ನೋ ಚಿಂತೆಯಲ್ಲಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ಇಡೀ ಜಗತ್ತಿನ ಜನರ ನಿದ್ದೆಗೆಡಿಸಿದೆ. ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ರಾಜ್ಯ, ರಾಷ್ಟ್ರಗಳು ನಲುಗಿ ಹೋಗಿದೆ. ಇಂತಹ ಹೊತ್ತಲ್ಲೇ ಬಾವಲಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರೋದು ಮತ್ತಷ್ಟು ಭೀತಿ ಸೃಷ್ಟಿಸಿದೆ. ಕರ್ನಾಟಕವೂ ಸೇರಿ 9 ರಾಜ್ಯಗಳ ಬಾವಲಿಗಳನ್ನ ಐಸಿಎಂಆರ್ ಸಂಶೊಧನೆಗೊಳಪಡಿಸಿತ್ತು. ಈ ವೇಳೆ ಬಂದಿರುವ ವರದಿ ನೋಡಿ ರಾಜ್ಯದಲ್ಲೂ ಭೀತಿ ಸೃಷ್ಟಿಯಾಗಿದೆ. ಕೊರೊನಾ ಸೋಂಕು ಬಾವಲಿಗಳಲ್ಲಿ ಕಂಡು ಬಂದಿರುವ ಸಂಶೋಧಕರ ಮಾಹಿತಿಯನ್ನು ಐಸಿಎಂಆರ್ ಜನರಲ್ ಆಫ್ ಮೆಡಿಕಲ್ ರಿಸರ್ಚ್ ನ ಮೊದಲ ಅಧ್ಯಾಯದಲ್ಲಿ ಪ್ರಕಟಿಸಿದೆ. ಕೊರೊನಾ ಸಂಬಂಧ ನಡೆದಿರುವ ಸಂಶೋಧನೆ ಮತ್ತು ಪರೀಕ್ಷಾ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ. ಕೊರೊನಾ ಸೋಂಕು ಬಾವಲಿಯಲ್ಲಿ ಕಂಡು ಬಂದಿದೆ ಎನ್ನುವುದರ ಬಗ್ಗೆ ಇಲ್ಲಿ ಉಲ್ಲೇಖಿಸಿಲಾಗಿದೆ.

    ಈ ವರದಿ ಕಬ್ಬನ್ ಪಾರ್ಕಿನಲ್ಲಿ ವಾಕ್ ಮಾಡುತ್ತಿದ್ದ ಜನರ ನಿದ್ದೆಗೆಡಿಸಿದೆ. ಲಾಕ್‍ಡೌನ್ ನಂತ್ರ ಹೇಗೆ ಅಲ್ಲಿ ವಾಕ್ ಮಾಡೋದು ಅನ್ನೋ ಭಯ ಕಾಡುತ್ತಿದೆ. ಕಬ್ಬನ್ ಪಾರ್ಕಿನಲ್ಲಿ ಹೇರಳವಾಗಿ ಬಾವಲಿಗಳು ಇದ್ದು ಇದರಿಂದ ಕೊರೊನಾ ವೈರಸ್ ಸೋಂಕು ತಗುಲಿದ್ರೆ ಹೇಗೆ ಅನ್ನೋ ಚಿಂತೆ ಕಾಡಿದೆ. ಅದಕ್ಕಾಗಿ ಬಾವಲಿಗಳಿಂದ ಸೋಂಕು ಹರಡದಂತೆ ಇಡೀ ಕಬ್ಬನ್ ಪಾರ್ಕಿಗೆ ಔಷಧಿ ಸಿಂಪಡಿಸಿ ಎಂದು ಸರ್ಕಾರಕ್ಕೆ ಮನವಿ ಪತ್ರ ನೀಡಲು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್‍ನ ಸದಸ್ಯರು ನಿರ್ಧರಿಸಿದ್ದಾರೆ.

    ನಿಫಾ ವೈರಸ್ ಮಾದರಿಯಲ್ಲೇ ಪ್ರಾಣಿಗಳಿಂದ ಮನುಷ್ಯನಿಗೆ ಕೊರೊನಾ ಸೋಂಕು ಬರಬಹುದು ಎಂಬ ಆತಂಕ ಶುರುವಾಗಿದೆ. ಈಗೇನಾದ್ರೂ ಬಾವಲಿಗಳಿಂದ ಕೊರೊನಾ ಮನುಷ್ಯನಿಗೆ ಹರಡಲು ಆರಂಭವಾದ್ರೆ ಅದರ ಪ್ರಭಾವ, ತೀವ್ರತೆ ಹೆಚ್ಚಾಗಲಿದೆ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಮುಂಜಾಗ್ರತೆಯ ಕ್ರಮ ಕೈಗೊಳ್ಳಬೇಕಿದೆ.

  • ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಚಿಕ್ಕಮಗಳೂರು: ಜೀವ ಉಳಿಸಿಕೊಳ್ಳಲು ಬಾವಲಿಯೊಂದು ಕೆಂಜಿಗ ಇರುವೆಗಳ ಜೊತೆ ಹೋರಾಟ ನಡೆಸಿದ ಘಟನೆಗೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.

    ಆಹಾರದ ಅರಸಿ ಪ್ರವಾಸಿ ಮಂದಿರದ ಆವರಣಕ್ಕೆ ಬಂದಿದ್ದ ದೊಡ್ಡ ಗಾತ್ರದ ಬಾವಲಿ ಕೆಂಜಿಗಗಳ ಕೈಗೆ ಸಿಕ್ಕಿ ತಪ್ಪಿಸಿಕೊಳ್ಳಲು ಹೋರಾಡಿದೆ. ಮರವೊಂದರ ಕೆಳಗೆ ಕಂಡ ಕೆಂಜಿಗವನ್ನು ತಿನ್ನಲು ಬಂದ ಬಾವಲಿ ಅರಿವಿಲ್ಲದೆ ಕೆಂಜಿಗಗಳ ಗೂಡಿನ ಮೇಲೆ ಇಳಿದಿದೆ. ಒಂದೊಂದೇ ಕೆಂಜಿಗವನ್ನು ತಿನ್ನಲು ಪ್ರಾರಂಭಿಸುತ್ತಿದ್ದಂತೆ ರಾಶಿ-ರಾಶಿ ಪ್ರಮಾಣದ ಕೆಂಜಿಗ ಇರುವೆಗಳು ಬಾವಲಿಯನ್ನು ಸಂಪೂರ್ಣ ಮುತ್ತಿಕೊಂಡು ಕಚ್ಚಲು ಆರಂಭಿಸಿವೆ.

    ಹಾರಲು ಆಗದೆ, ತಪ್ಪಿಸಿಕೊಳ್ಳಲು ಆಗದ ಬಾವಲಿ ನೋವಿನಿಂದ ಸ್ಥಳದಲ್ಲೇ ಬಿದ್ದು ಒದ್ದಾಡಿದೆ. ಬಾವಲಿ ದೊಡ್ಡ ರೆಕ್ಕೆಗಳನ್ನು ಹರಡಿಕೊಂಡಿದ್ದರಿಂದ ಬೇರಿಗೆ ಸಿಕ್ಕಿಕೊಂಡು ತಪ್ಪಿಸಿಕೊಳ್ಳಲಾಗದೆ ವಿಫಲ ಹೋರಾಟ ನಡೆಸಿತ್ತು. ಆ ನೋವಿನ ಮಧ್ಯೆಯೂ ಬಾವಲಿ ಒಂದೊಂದೆ ಕೆಂಜಿಗವನ್ನು ತಿನ್ನಲು ಆರಂಭಿಸಿತು. ಆದರೆ ಕೆಂಜಿಗಗಳು ಕೂಡ ಮತ್ತೊಂದು ಕಡೆಯಿಂದ ಬಾವಲಿ ಮೇಲೆ ದಾಳಿ ಮಾಡಿದೆ.

    ಹಾಗೋ-ಹೀಗೋ ಕಷ್ಟಪಟ್ಟು ಮರ ಏರಲು ಪ್ರಾರಂಭಿಸಿದ ಬಾವುಲಿ ನೋವಿನಿಂದ ನಿಂತ್ರಾಣಗೊಂಡು ಮತ್ತದೇ ಕೆಂಜಿಗಗಳ ಗೂಡಿನ ಮೇಲೆ ಬಿದ್ದಿತ್ತು. ಸಾಮಾನ್ಯವಾಗಿ ರಾತ್ರಿ ಪಾಳಯದಲ್ಲಿ ಆಹಾರ ಸೇವನೆ ಮಾಡೋ ಬಾವಲಿಗಳು ಹಗಲಲ್ಲೇ ಆಹಾರ ಹುಡಿಕಿಕೊಂಡು ಬಂದು ಕೆಂಜಿಗಗಳನ್ನ ತಿನ್ನುತ್ತಿರುವುದು ವಿಶೇಷವಾಗಿದೆ.

  • ಕೆಎಂಸಿ ಆವರಣದಲ್ಲಿ ಬಿದ್ದ ಬೃಹತ್ ಮರ- ಇಬ್ಬರಿಗೆ ಗಾಯ

    ಕೆಎಂಸಿ ಆವರಣದಲ್ಲಿ ಬಿದ್ದ ಬೃಹತ್ ಮರ- ಇಬ್ಬರಿಗೆ ಗಾಯ

    – ನಾಲ್ಕು ಕಾರು ಜಖಂ, ಅನಾಥವಾದ ಸಾವಿರಾರು ಬಾವಲಿಗಳು

    ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಮರ ಉರುಳಿ ಬಿದ್ದಿದೆ. ಮರದಡಿಯಲ್ಲಿದ್ದ ನಾಲ್ಕು ಕಾರುಗಳು ಜಖಂ ಆಗಿದ್ದು ಇಬ್ಬರಿಗೆ ಗಾಯವಾಗಿದೆ.

    ಮಣಿಪಾಲ ಆಸ್ಪತ್ರೆಯ ಎಮರ್ಜೆನ್ಸಿ ಕಟ್ಟಡದ ಮುಂಭಾಗದಲ್ಲೇ ದೊಡ್ಡ ಮರವೊಂದಿತ್ತು. ಏಕಾಯೇಕಿ ಮರ ಧಾರಾಶಾಹಿಯಾಗಿದೆ. ಕೆಎಂಸಿ ಆಸ್ಪತ್ರೆಯ ಕಟ್ಟಡದ ಮೇಲೆ ಕೂಡಾ ಮರದ ಕೊಂಬೆಗಳು ಬಿದ್ದಿದೆ. ಆಸ್ಪತ್ರೆಯೊಳಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕಡೆಯವರು ಇದೇ ಮರದಡಿ ವಿಶ್ರಾಂತಿ ಪಡೆಯುತ್ತಾರೆ. ಕಾರು ಪಾರ್ಕ್ ಮಾಡುತ್ತಾರೆ. ಹೀಗೆ ಮರದ ಅಡಿಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ದೌಡಾಯಿಸಿದ್ದು, ಮರ ಕತ್ತರಿಸಿ ಕಾರುಗಳನ್ನು ತೆರವುಗೊಳಿಸಲಾಗಿದೆ. ಗಾಳಿ ಮಳೆ ಇಲ್ಲದಿದ್ದರೂ, ಆಶ್ಚರ್ಯಕರ ರೀತಿಯಲ್ಲಿ ಮರ ಬಿದ್ದಿದೆ ಅಂತ ಸ್ಥಳೀಯರು ಹೇಳಿದ್ದಾರೆ. ಮಣಿಪಾಲ ಆಸ್ಪತ್ರೆ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ಜನರಿಗೆ, ಪಕ್ಷಿಗಳಿಗೆ, ಬಾವಲಿಗಳಿಗೆ ಆಶ್ರಯ ಕೊಡ್ತಾಯಿತ್ತು. ಮರದಲ್ಲಿ ಸಾವಿರಾರು ಬಾವಲಿಗಳು ಬೀಡು ಬಿಟ್ಟಿದ್ದವು. ಮರ ಬಿದ್ದ ನಂತರ ನೆಲೆ ಕಳೆದುಕೊಂಡ ಬಾವಲಿಗಳು ಆಕಾಶದಲ್ಲೆಲ್ಲಾ ಹಾರಾಟ ಮಾಡುತ್ತಿದೆ.

    ಕೆಲ ಬಾವಲಿಗಳಿಗೆ ಗಾಯವಾಗಿ ಬಿದ್ದಿದೆ. ಕೆಲ ಬಾವಲಿ ಮರಿಗಳ ರೆಕ್ಕೆಗೆ ಗಾಯವಾಗಿದೆ. ಯಾವಾಗಲು ಮರದ ಕೆಳಗೆ ತುಂಬಾ ಜನ ಕುಳಿತಿರುತ್ತಾರೆ. ಆದ್ರೆ ಇವತ್ತು ಕಡಿಮೆ ಜನ ಇದ್ರು. ಆವರಣದಲ್ಲೇ ಮರ ಬಿದ್ದ ಕಾರಣ ದೊಡ್ಡ ಅವಘಡ ತಪ್ಪಿದೆ, ರಸ್ತೆಗೆ ಬಿದ್ದಿದ್ದರೆ ಅನಾಹುತವಾಗುತ್ತಿತ್ತು ಅಂತ ಸ್ಥಳದಲ್ಲಿದ್ದ ಸರಳೇಬೆಟ್ಟು ಗಣೇಶ್ ರಾಜ್ ಆತಂಕ ವ್ಯಕ್ತಪಡಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಉಡುಪಿ: ಕೋಳಿಯಿಂದ ನಿಪಾ ವೈರಸ್ ಹರಡವುದಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಮಣಿಪಾಲ ವೈರಸ್ ರಿಸರ್ಚ್ ಇಲಾಖೆ ಮುಖ್ಯಸ್ಥ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರ ಇಂತಹ ವೈರಸ್ ಕಾಣಲು ಸಾಧ್ಯ. ಮಣಿಪಾಲ ಸೆಂಟರ್ ನಲ್ಲಿ ನಿಪಾ ವೈರಸ್ ಮಾದರಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿಸಿದರು.

    ಕೇರಳ ಸರ್ಕಾರದ ಕೋರಿಕೆಯ ಮೇರೆಗೆ ನಿಫಾ ವೈರಸ್ ರೋಗಿಗಳನ್ನು ಪರೀಕ್ಷಿಸಲು ಮಣಿಪಾಲದ ವೈದ್ಯರ ತಂಡ ಕೇರಳಕ್ಕೆ ತೆರಳಿತ್ತು. ಬಾವಲಿ ಹೊರತಾಗಿ ಬೇರೆ ಯಾವ ಪ್ರಾಣಿ-ಪಕ್ಷಿಗಳಲ್ಲೂ ನಿಪಾ ವೈರಸ್ ಕಾಣಸಿಕ್ಕಿಲ್ಲ ಎಂದು ದೃಢಪಡಿಸಿದರು.

    ನಿಪಾ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಆದರೆ ಮುನ್ನೆಚ್ಚರಿಕೆ ಅತ್ಯಗತ್ಯ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವುದು ಒಳಿತು. ಕೋಳಿಯಿಂದ ಹರಡುತ್ತದೆ ಅನ್ನೋದೆಲ್ಲ ಸುಳ್ಳು ಸುದ್ದಿ. ಈ ಬಗ್ಗೆ ಅನಗತ್ಯ ಭಯಪಡುವ ಅಗತ್ಯವೇ ಇಲ್ಲ. ಕೇರಳದಲ್ಲಿ ಈಗಾಗಲೇ ವಿದೇಶಗಳಿಂದ ಔಷಧಿಗಳನ್ನು ತರಲಾಗಿದೆ ಎಂದು ತಿಳಿಸಿದರು.

  • ಬಾವಲಿಯನ್ನು ಕೊಲ್ಲಿ ಎಂದು ಬೆಂಗ್ಳೂರಿನ ವಿವಿಧ ಕಡೆಯಿಂದ ಬಿಬಿಎಂಪಿಗೆ ಕರೆ!

    ಬಾವಲಿಯನ್ನು ಕೊಲ್ಲಿ ಎಂದು ಬೆಂಗ್ಳೂರಿನ ವಿವಿಧ ಕಡೆಯಿಂದ ಬಿಬಿಎಂಪಿಗೆ ಕರೆ!

    ಬೆಂಗಳೂರು: ನಿಪಾ ವೈರಸ್ ಸುದ್ದಿ ಎಷ್ಟರ ಮಟ್ಟಿಗೆ ಜನರ ಕಂಗೆಡಿಸಿದೆಯೋ ಗೊತ್ತಿಲ್ಲ. ಆದರೆ ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕರ ನಿದ್ದೆಗೆಡಿಸಿರೋದಂತೂ ಸತ್ಯ.

    ನಿಪಾ ವೈರಸ್ ಹರಡೋದು ಬಾವಲಿಗಳಿಂದ ಅಂತೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿದ್ದೇ ತಡ ಬೆಂಗಳೂರಿನ ಜನ ತಮ್ಮ ಸುತ್ತಮುತ್ತಲಿನ ಬಾವಲಿಗಳನ್ನ ಶತ್ರುಗಳಂತೆ ನೋಡೋಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಬಾವಲಿಗಳನ್ನ ಕೊಲ್ಲಿ ಇಲ್ಲದಿದ್ದರೆ ನಾವು ಬಾವಲಿಗಳಿಂದ ಸತ್ತು ಹೋಗ್ತೇವೆ ಎಂದು ಬಿಬಿಎಂಪಿ ವನ್ಯಜೀವಿ ವಿಭಾಗದ ಸ್ವಯಂ ಸೇವಕರಿಗೆ ದೂರವಾಣಿ ಕರೆಗಳು ಬರುತ್ತಿವೆ.

    ಸ್ವಯಂ ಸೇವಕರು ಬಾವಲಿಯಿಂದ ನಿಪಾ ಸೋಂಕು ಹರಡಲ್ಲ ಎಂದರೂ ಜನ ಮಾತ್ರ ಒಪ್ಪೋಕೆ ತಯಾರಿಲ್ಲ. ಬಾವಲಿಯಿಂದ ರಕ್ಷಿಸಿ ಎಂದು ಬಸವನಗುಡಿ, ಜಯನಗರ, ಸ್ಯಾಂಕಿಟ್ಯಾಂಕ್, ಬನ್ನೇರುಘಟ್ಟ ಈ ಭಾಗದಿಂದ ಹೆಚ್ಚೆಚ್ಚು ಕರೆಗಳು ಬರ್ತಿವೆ.

    ಸ್ವಯಂ ಸೇವಕರು ಬಾವಲಿಗಳಿಂದ ಯಾವುದೇ ತೊಂದರೆ ಇಲ್ಲ ಎಂದು ಜಾಗೃತಿ ಮೂಡಿಸುತ್ತಿದ್ದರು. ಜನ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳೀಯ ಕಾರ್ಪೊರೇಟರ್ ಗಳ ಬಳಿ ಸ್ವಯಂ ಸೇವಕರ ವಿರುದ್ಧ ದೂರುತ್ತಿದ್ದಾರೆ. ಕರೆ ಮಾಡಿದರೆ ಯಾರೂ ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಿದ್ದಾರೆ. ಕಾರ್ಪೊರೇಟರ್ ಗಳ ಮೂಲಕ ಒತ್ತಡ ಹಾಕಿಸುವ ಪ್ರಯತ್ನವನ್ನೂ ಮುಂದುವರೆಸಿದ್ದಾರೆ. ಅಷ್ಟರಮಟ್ಟಿಗೆ ಬಾವಲಿಗಳು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿವೆ. ಇದನ್ನೂ ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಜನರ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನಕಲಿ ಸ್ವಯಂ ಸೇವಕರು ದುಡ್ಡು ಪಡೆದು ಬಾವಲಿಗಳನ್ನ ಕೊಂದಿರುವ ಘಟನೆಗಳು ನಡೆದಿವೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಬಾವಲಿಗಳಿಂದ ಸೋಂಕು ಹರಡುವುದಿಲ್ಲ ಎಂದು ವರದಿ ನೀಡಿದೆ. ಹೀಗಿದ್ದೂ ಬೆಂಗಳೂರು ಜನ ಮಾತ್ರ ಬಾವಲಿಗಳಿಂದ ಬದುಕಿಸಿ ಅಂತಿರೋದು ವಿಪರ್ಯಾಸ. ಇದನ್ನೂ ಓದಿ: ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು

  • ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು

    ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು

    ತುಮಕೂರು: ನಿಪಾ ಜ್ವರದ ಭೀತಿಗೆ ತುಮಕೂರಿನ ಜನರು ಹೆದರಿ ಬಾವಲಿಗಳನ್ನು ಬಲೆ ಹಾಕಿ ಹಿಡಿದು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧಾರ ಮಾಡಿದ್ದಾರೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾ.ಪಂ ಸದಸ್ಯರು ಸಾಮೂಹಿಕವಾಗಿ ಬಾವಲಿ ಮಾರಣ ಹೋಮಕ್ಕೆ ನಿರ್ಧರಿಸಿದ್ದಾರೆ. ಬಾವಲಿಗಳು ಹುಳಿಯಾರು ಗ್ರಾಮದ ಮರಗಳಲ್ಲಿ ವಾಸವಾಗಿದ್ದು, ಗ್ರಾ.ಪಂ ಸದಸ್ಯರು ಬಲೆ ಹಾಕಿ ಬಾವಲಿಗಳನ್ನು ಹಿಡಿದು ಸಾಯಿಸಲು ನಿರ್ಣಯ ತೆಗೆದುಕೊಂಡಿದ್ದಾರೆ.

    ಹುಳಿಯಾರು ಗ್ರಾಮ ಪಂಚಾಯ್ತಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದು, ಶನಿವಾರ ನಡೆದ ಸಭೆಯಲ್ಲಿ ಸದಸ್ಯರು ತಮ್ಮ ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

  • ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಭೋಪಾಲ್: ಇಂದು ಕೇರಳದಲ್ಲಿ ಹರಡುತ್ತಿರುವ ನಿಪಾ ವೈರಸ್ ಗೆ ದೇಶದ ಜನರು ಆತಂಕಗೊಂಡಿದ್ದಾರೆ. ನಿಪಾ ವೈರಸ್ ಬಾವಲಿಗಳಿಂದ ಬರುತ್ತೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಮಧ್ಯ ಪ್ರದೇಶ ರಾಜ್ಯದ ಭೋಪಾಲ ನಗರದ ‘ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಲ್ಯಾಬೊರೆಟರಿ’ ನಿಪಾ ವೈರಸ್ ಬಾವಲಿಗಳಿಂದ ಬರಲ್ಲ ಎಂದು ಸ್ಪಷ್ಟಪಡಿಸಿದೆ.

    ಕೇರಳದಿಂದ ಒಟ್ಟು ಸ್ಯಾಂಪಲ್ ರೂಪದಲ್ಲಿ 21 ಬಾವಲಿ ಮತ್ತು ಹಂದಿಗಳನ್ನು ಭೋಪಾಲ್ ನ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿತ್ತು. ಈ ಸ್ಯಾಂಪಲ್‍ಗಳ ವರದಿ ಶುಕ್ರವಾರ ಬಂದಿದ್ದು, ಎಲ್ಲ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಈ ಹಿಂದೆ ಕೇಂದ್ರ ಪ್ರಾಣಿ-ಪಶು ಇಲಾಖೆಯ ಕಮಿಷನರ್ ಎಸ್‍ಪಿ ಸುರೇಶ್, ನಿಪಾ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಗಳ ಸುತ್ತಲಿನ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದ್ರು. ಆದ್ರೆ ಅಲ್ಲಿಯ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ತಿಳಿಸಿದ್ರು.

    ನಿಪಾ ವೈರಸ್ ದಾಳಿಗೆ ತುತ್ತಾಗಿರುವ ಕೇರಳದ ಪೆರಂಬರಾ ಗ್ರಾಮದಿಂದ ಕೆಲ ಪ್ರಾಣಿಗಳನ್ನು ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡು ಭೋಪಾಲ್‍ನ ಲ್ಯಾಬೋರೆಟರಿಗೆ ಕಳುಹಿಸಲಾಗಿತ್ತು.

    ಭೋಪಾಲ್ ಲ್ಯಾಬೊರೇಟರಿ ವರದಿಯ ಪ್ರಕಾರ, ನಿಪಾ ವೈರಸ್ ಬಾವಲಿಗಳಿಂದ ಬಂದಿಲ್ಲ ಅಂತಾ ಹೇಳಲಾಗಿತ್ತು. ಸದ್ಯ ಈ ಗೊಂದಲ ಇನ್ನು ಮುಂದುವರೆದಿದ್ದು, ಮತ್ತಷ್ಟು ನಿಪಾ ವೈರಸ್ ಪೀಡಿತ ಗ್ರಾಮಗಳಿಂದ ಪ್ರಾಣಿಗಳ ರಕ್ತವನ್ನು ಪಡೆದು ಪರೀಕ್ಷೆ ನಡೆಸಲಾಗುವುದು ಎಂದು ಲ್ಯಾಬೊರೆಟರಿ ಮೂಲಗಳು ತಿಳಿಸಿವೆ.

  • ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಕೋಝಿಕೋಡ್: ನರ್ಸಿಂಗ್ ಎಂಬುದು ಒಂದು ಕಷ್ಟದ ಕೆಲಸ. ಹೀಗಾಗಿ ನನ್ನ ಪತ್ನಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ ಅಂತ ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಗೆ ಬಲಿಯಾದ ಲಿನಿ ಪತಿ ಸಜೀಶ್ ಹೇಳಿದ್ದಾರೆ.

    ನನ್ನ ಪತ್ನಿ ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತಿದ್ದಳು ಅಂದ್ರೆ ಆಕೆಗೆ ಹುಷಾರಿಲ್ಲ ಅಂದ್ರೂ ರಜೆ ಹಾಕದೇ ಕಷ್ಟಪಟ್ಟಾದರೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು ಅಂತ 36 ವರ್ಷದ ಸಜೀಶ್ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಕೇರಳದ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು. ಭಾನುವಾರ ಸಂಜೆ ಲಿನಿ ಮೃತಪಟ್ಟಿದ್ದರು.

    `ಭಾನುವಾರ ಬೆಳಗ್ಗೆ ನಾನು ಪತ್ನಿಯನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದೆ. ಆದ್ರೆ ಈ ವೇಳೆ ಅವಳ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಲಾಗಿತ್ತು. ಹೀಗಾಗಿ ನನಗೆ ಅವಳೊಂದಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಕೇವಲ 2 ನಿಮಿಷವಷ್ಟೇ ಅವಳನ್ನು ನೋಡಿ, ಅವಳ ಮೇಲೆ ನನ್ನ ಕೈಯಿಟ್ಟೆ. ಆಗ ಅವಳಿಗೆ ಪ್ರಜ್ಞೆಯಿತ್ತು ‘ಅಂತ ಅವರು ವಿವರಿಸಿದ್ರು.

    ಬಿಡುವಿಲ್ಲದೇ ತಾನು ಅಸೌಖ್ಯದಿಂದ ಇದ್ದರೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಳು. ಹೀಗಾಗಿ ನನಗೆ ಅವಳ ಬಗ್ಗೆ ಗೌರವ ಹಾಗೂ ಹೆಮ್ಮೆಯಿದೆ ಎಂದು ನೆನಪು ಮಾಡಿಕೊಂಡು ದುಃಖಿತರಾದ್ರು. ಇದನ್ನೂ ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ಸಾವಿಗೂ ಮೊದಲು ಅಂದ್ರೆ ಬುಧವಾರ ಫೋನ್ ಕರೆಯಲ್ಲಿ ಮಾತನಾಡಿದಾಗ, ನನಗೆ ಜ್ವರ ಬರೋ ಹಾಗೆ ಇದೆ ಅಂತ ಹೇಳಿದ್ದಳು. ಆಗ ನಾನು ರಜೆ ಮಾಡಿ ರೆಸ್ಟ್ ಮಾಡು ಅಂತ ಹೇಳಿದ್ದೆ. ಆದ್ರೆ ಆಸ್ಪತ್ರೆಯಲ್ಲಿ ತುಂಬಾ ರೋಗಿಗಳಿದ್ದಾರೆ. ಹೀಗಾಗಿ ರಜೆ ತಗೊಳಲ್ಲ ಅಂತ ಹೇಳಿದಳು. ಅಲ್ಲದೇ ಕೆಲಸಕ್ಕೆಂದು ಆಸ್ಪತ್ರೆಗೆ ತೆರಳಿದ್ದಳು ಅಂದ್ರು. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ಡೆತ್ ನೋಟ್:
    ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. ಅಲ್ಲದೇ ಇತ್ತ 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಇದರಲ್ಲಿ ದೊಡ್ಡ ಮಗ ತನ್ನ ತಾಯಿಗೆ ಕರೆ ಮಾಡು ಮಾತಾಡಬೇಕು ಅಂತ ಹಠ ಹಿಡಿಯುತ್ತಿದ್ದರೆ, ಸಣ್ಣವ ಇನ್ನೂ ಚಿಕ್ಕವನಾಗಿದ್ದಿದ್ದರಿಂದ ಮಾತನಾಡುತ್ತಿಲ್ಲ. ಆದ್ರೆ ಈ ಇಬ್ಬರೂ ಅಮ್ಮ ಹೊರಗಡೆ ಹೋಗಿದ್ದಾಳೆ, ಇನ್ನೇನೋ ಬರುತ್ತಾಳೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಂತ ಲಿನಿ ಸೋದರ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಲಿನಿ ಪತಿಗೆ ಸರ್ಕಾರಿ ಕೆಲಸ ಹಾಗೂ 20 ಲಕ್ಷ ಪರಿಹಾರವನ್ನು ಕೊಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಹೀಗಾಗಿ ಸಜೀಶ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.