Tag: ಬಾಳೆ

  • ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

    ವಿಜಯಪುರ ಜಿಲ್ಲೆಯಾದ್ಯಂತ ಮಳೆಯ ಆರ್ಭಟ – ಬಾಳೆ ನಾಶಗೊಳಿಸಿದ ರೈತ ಮಹಿಳೆ

    ವಿಜಯಪುರ: ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿಂದು ವರುಣ ಆರ್ಭಟ ಭಾರೀ ಸದ್ದು ಮಾಡಿದೆ. ನಗರ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಬಿಟ್ಟು ಬಿಡದೇ ಸತತ ಎರಡು ಗಂಟೆಗಳ ಕಾಲ ಮಳೆ ಸುರಿದಿದೆ. ಮುದ್ದೇಬಿಹಾಳ, ಸಿಂದಗಿ, ಇಂಡಿ, ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆರಾಯ ಆರ್ಭಟಿಸಿದ್ದಾನೆ.

    ಈಗಾಗಲೇ ಮುಂಗಾರು ಬಿತ್ತನೆಯಲ್ಲಿ ಜಿಲ್ಲೆಯ ರೈತರು ತೊಡಗಿದ್ದಾರೆ. ಈ ತಿಂಗಳ ಪ್ರಾರಂಭದಿಂದಲೇ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದ್ದು, ವರುಣನಿಗೆ ರೈತರು ಬಹುಪರಾಕ್ ಎಂದಿದ್ದಾರೆ. ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ

    ಬಾಳೆ ಬೆಳೆ ನಾಶಮಾಡಿದ ರೂತ ಮಹಿಳೆ
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ಬಾಳೆ ಮಾರಾಟವಾಗದ್ದಕ್ಕೆ ತಾನೇ ಬೆಳೆದ ಬೆಳೆಯನ್ನು ರೈತ ಮಹಿಳೆ ನಾಶ ಮಾಡಿದ್ದಾರೆ. ಮೂರು ಲಕ್ಷ ಖರ್ಚು ಮಾಡಿ, 5 ಎಕರೆಯಲ್ಲಿ ಬಾಳೆ ಬೆಳೆಯನ್ನ ಸಂಗಮ್ಮ ಹಿರೇಮಠ ಬೆಳೆದಿದ್ದರು. ಆದರೆ ಬಾಳೆ ಫಸಲು ಬಂದರೂ ಮಾರಾಟವಾಗಲಿಲ್ಲ. ಲಾಕ್‍ಡೌನ್ ನಿಂದ ಉತ್ತಮ ಬೆಲೆ ಸಿಗಲೆ ಇಲ್ಲ. ಕೇವಲ 2 ರೂ ಮಾರುಕಟ್ಟೆಯಲ್ಲಿ ಬೆಲೆ ಕೇಳುತ್ತಿದ್ದರು. ನಂತರ ಮಳೆ ಹೊಡೆತಕ್ಕೆ ಬಾಳೆ ಬೆಳೆ ಕೊಳೆತು ಹೋಗಿದೆ. ಹೀಗಾಗಿ ಜೆಸಿಬಿ ಮೂಲಕ ಸಂಗಮ್ಮ ಸಂಪೂರ್ಣ ಬಾಳೆ ಬೆಳೆ ನಾಶ ಮಾಡಿದ್ದಾರೆ. ರಾಜ್ಯ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ರೈತ ವರ್ಗ ಒತ್ತಾಯಿಸಿದೆ.

    ಶನಿವಾರ ದಕ್ಷಿಣ ಕನ್ನಡ ಮಂಗಳೂರು ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲೂ ಬಿರುಗಾಳಿ ಸಹಿತ ಭಾರೀ ಮಳೆಯ ಕೆಲ ಗಂಟೆಗಳ ಕಾಲ ಮಳೆ ಅಬ್ಬರಿಸಿದೆ. ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ ಎಲ್ಲೋ ಅಲರ್ಟ್ ಘೋಷಿಸಿಲಾಗಿತ್ತು. ಗಾಳಿಯ ರಭಸ ಹೆಚ್ಚಾಗಿದ್ದರಿಂದ ನದಿ ಹಾಗೂ ಸಮುದ್ರ ತೀರದ ಜನ ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ಕೂಡ ನೀಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

  • ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ಬಾಳೆಹಣ್ಣಿನ ಗದ್ದೆಗೆ ಬೆಂಕಿ ಹಚ್ಚಿದ ಅನ್ನದಾತ

    ವಿಜಯಪುರ: ಸೂಕ್ತ ಬೆಲೆ ಸಿಗದ ಕಾರಣ ಅನ್ನದಾತ ತನ್ನ ಬಾಳೆಹಣ್ಣಿನ ಗದ್ದೆಗೆ ತಾನೇ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.

    ರೈತ ಉಸ್ಮಾನಸಾಬ್ ಬಾಳೆ ಹಣ್ಣಿಗೆ ಸೂಕ್ತ ಬೆಲೆ ಸಿಗದ ಕಾರಣ ಹಾಗೂ ಲಾಕ್‍ಡೌನ್ ಪರಿಣಾಮದಿಂದ ಬಾಳೆ ಹಣ್ಣು ಮಾರಾಟವಾಗದ್ದಕ್ಕೆ ಮನನೊಂದು ಈ ರೀತಿ ಮಾಡಿದ್ದಾರೆ. ತಮ್ಮ ತೋಟದಲ್ಲಿನ 1,200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಕಷ್ಟ ಪಟ್ಟು ಮೂರು ವರ್ಷಗಳಿಂದ ಮಕ್ಕಳಂತೆ ಜೋಪಾನ ಮಾಡಿದ್ದ ಬೆಳೆದ ಬಾಳೆಗೆ ಬೆಲೆಯಿಲ್ಲದ್ದಕ್ಕೆ ದಾನ ಮಾಡಿದ್ದಾರೆ. ಉಳಿದ ಬಾಳೆಗಿಡಗಳನ್ನೆಲ್ಲ ಸದ್ಯ ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ

    ಸಂಕಷ್ಟದ ಮೇಲೆ ಸಂಕಷ್ಟ ನೀಡುತ್ತಿರುವ ಕೊರೊನಾ ಮಹಾಮಾರಿಯಿಂದ ರೈತರ ಗೋಳು ಇಮ್ಮಡಿಯಾದಂತಾಗಿದೆ. ರೈತರು ಬಳೆ ಹಾನಿಗೊಳಿಸುತ್ತಿರುವ ನೂರಾರು ಘಟನೆಗಳು ನಡೆಯುತ್ತಿದ್ದು, ರೈತರ ಗೋಳು ಕೇಳೋರು ಯಾರು ಎನ್ನುವಂತಾಗಿದೆ.

  • ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕಿಡಿಗೇಡಿಗಳಿಂದ ಬೆಂಕಿ- 5 ಎಕರೆ ಬಾಳೆ ತೋಟ ಸುಟ್ಟು ಭಸ್ಮ

    ಕೋಲಾರ: ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ, ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ 5 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಳೆದ ರಾತ್ರಿ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಬಾಳೆ ತೋಟಕ್ಕೂ ಬೆಂಕಿ ಆವರಿಸಿದ ಪರಿಣಾಮ 5 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗಾಹುತಿಯಾಗಿದೆ ಎಂದು ಶಂಕಿಸಲಾಗಿದೆ.

    ಸಾಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಬೇಕಿತ್ತು, ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತೆ ಎಂದು ರೈತ ಕನಸು ಕಂಡಿದ್ದ. ಆದರೆ ಬೆಂಕಿ ಹೊತ್ತಿಕೊಂಡಿದ್ದರಿಂದ ಇದೀಗ ಕಂಗಾಲಾಗಿದ್ದಾರೆ. ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪಿಂಕ್ಲರ್ ಗಳು ಸಹ ಬೆಂಕಿಗಾಹುತಿಯಾಗಿವೆ.

    ವಿಷಯ ತಿಳಿದ ಸ್ಥಳೀಯರು ಹಾಗೂ ಕೃಷ್ಣಪ್ಪ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 90 ಟನ್ ಇಳುವರಿ ನಷ್ಟವಾಗಿದೆ. ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

  • ರಾಜ್ಯದಲ್ಲಿ ಅಕಾಲಿಕ ಮಳೆ- ವರುಣನ ಅಬ್ಬರಕ್ಕೆ ನೆಲಕ್ಕುರುಳಿದ ಬಾಳೆ, ವಿದ್ಯುತ್ ಕಂಬಗಳು

    ರಾಜ್ಯದಲ್ಲಿ ಅಕಾಲಿಕ ಮಳೆ- ವರುಣನ ಅಬ್ಬರಕ್ಕೆ ನೆಲಕ್ಕುರುಳಿದ ಬಾಳೆ, ವಿದ್ಯುತ್ ಕಂಬಗಳು

    -ಸಿಡಿಲು ಬಡಿದು ಹೊತ್ತಿ ಉರಿದ ಮರ

    ಬೆಂಗಳೂರು: ರಾಮನಗರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಅಕಾಲಿಕ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ಬಾಳೆ, ವಿದ್ಯುತ್ ಕಂಬಗಳು ಧರಗೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

    ರಾಮನಗರ ಜಿಲ್ಲೆಯಾದ್ಯಂತ ಹಲವೆಡೆ ರಾತ್ರಿ ಭರ್ಜರಿಯಾಗಿ ಮಳೆ ಸುರಿದಿದ್ದು, ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ರಾಮನಗರ ತಾಲೂಕಿ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯುಂಟಾಗಿದೆ. ಸತತ ಎರಡು ಗಂಟೆಗಳ ಕಾಲ ಸುರಿದ ಮಳೆ ಬೇಸಿಗೆ ಬಿಸಿಲ ಬೇಗೆ ಇಳೆಗೆ ಮಳೆಯು ತಂಪನೆರೆದಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆರಡು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

    ವರುಣನ ಅಬ್ಬರದಿಂದಾಗಿ ಬಿಡದಿ ಸಮೀಪದ ತಾಳಕುಪ್ಪೇ ಗ್ರಾಮದ ಶಿವಣ್ಣ ಎಂಬವರ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣವಾಗಿ ನೆಲಸಮವಾಗಿದೆ. ಸುಮಾರು 18 ಲಕ್ಷ ರೂ. ಮೌಲ್ಯದ ಬಾಳೆ ಬೆಳೆ ಹಾನಿಯುಂಟಾಗಿದೆ. ಇದೇ ಗ್ರಾಮದ ಸಂಪತ್ ಎಂಬವರ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿವೆ. ಮನೆಯಿಲ್ಲದೇ ಕೊರಗುತ್ತಿದ್ದ ಸಂಪತ್ ಅವರ ಕುಟುಂಬಕ್ಕೆ ಗ್ರಾಮಸ್ಥರೇ ರಕ್ಷಣೆ ನೀಡಿದ್ದಾರೆ. ಬೈಚುಹಳ್ಳಿ ವ್ಯಾಪ್ತಿಯಲ್ಲಿ ಒಂದು ಟ್ರಾನ್ಸ್‍ಫರ್ಮರ್ ಸೇರಿದಂತೆ 7 ವಿದ್ಯುತ್ ಕಂಬಗಳು ಮಳೆಯಿಂದಾಗಿ ಧರೆಗೆ ಉರುಳಿವೆ.

    ಮಾಗಡಿ ತಾಲೂಕಿನ ಕುದೂರು ತಿಪ್ಪಸಂದ್ರದಲ್ಲಿ ಮಾಡ್ಬಾಳ್ ಗ್ರಾಮಗಳ ಭಾಗದಲ್ಲಿ ಜೋರು ಮಳೆಯಾಗಿದ್ದು ಅಣ್ಣೇಶಾಸ್ತ್ರಿ ಪಾಳ್ಯದಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕನಕಪುರ ಮತ್ತು ಚನ್ನಪಟ್ಟಣದಲ್ಲೂ ಭಾರೀ ಮಳೆಯಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

    ಚಿಕ್ಕಬಳ್ಳಾಪುರ:
    ಜಿಲ್ಲೆಯ ಹಲವೆಡೆ ಸೇರಿದಂತೆ ಕೊರೊನಾ ಹಾಟ್‍ಸ್ಪಾಟ್ ಗೌರಿಬಿದನೂರು ನಗರದ ಸುತ್ತಮುತ್ತಲೂ ಧಾರಕಾರ ಮಳೆಯಾಗಿದೆ. ಚಿಕ್ಕಬಳ್ಳಾಪುರ ನಗರ ಸೇರಿದಂತೆ ಸುತ್ತಮುತ್ತಲೂ ಸಹ ಸಂಜೆ ಉತ್ತಮ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದ ಜನರಿಗೆ ಮಳೆ ತಂಪು ನೀಡಿದೆ. ಆದರೆ ಗೌರಿಬಿದನೂರು ನಗರವು ಕೊರೊನಾ ಹಾಟ್‍ಸ್ಟಾಟ್ ಕೇಂದ್ರವಾಗಿದ್ದು ಮಳೆ ಬಿದ್ದ ಪರಿಣಾಮ ವೈರಸ್ ಹರಡುಬಹದು ಎನ್ನುವ ಅನುಮಾನದ ಆತಂಕವೂ ಜನರಿಗೆ ಕಾಡತೊಡಗಿದೆ.

    ಕೆಲೆವೆಡೆ ತರಕಾರಿ, ಹೂ, ಹಣ್ಣು ಸಹ ಮಳೆಯಿಂದ ಹಾನಿಯಾಗಿರುವ ಮಾಹಿತಿ ಸಿಕ್ಕಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ವೆನ್‍ಸೈಟ್ ಮಾಹಿತಿಯಂತೆ ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿಯಲ್ಲಿ 70 ಮಿಲಿ ಮೀಟರ್ ಮಳೆಯಾಗಿದೆ. ಗೌರಿಬಿದನುರು ನಗರದಲ್ಲಿ 70 ಹಾಗೂ ತಾಲೂಕಿನ ಮುದುಗೆರೆಯಲ್ಲಿ 76 ಮಿಲಿಮೀಟರ್ ಮಳೆ ಪ್ರಮಾಣ ದಾಖಲಾಗಿದೆ.

    ಬಳ್ಳಾರಿ:
    ಗಣಿನಾಡು ಬಳ್ಳಾರಿಯಲ್ಲಿ ಇಂದು ಸಾಧಾರಣ ಮಳೆ ಸುರಿದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿರುಬಿಸಿಲಿನ ವಾತಾವರಣ ಇದ್ದರೂ, ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಆವರಿಸಿತು. ಆ ಬಳಿಕ ಗುಡುಗು ಸಹಿತ ಸಾಧಾರಣ ಮಳೆ ಒಂದು ಗಂಟೆ ಸುರಿಯಿತು. ಕೊರೊನಾ ವೈರಸ್ ಎಫೆಕ್ಟ್ ನಿಂದ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಬಂದೋಬಸ್ತ್ ನಲ್ಲಿದ್ದ ಪೊಲೀಸರು ಆಶ್ರಯ ಪಡೆಯಲು ಪರದಾಡಿದರು.

    ಕೊಪ್ಪಳ:
    ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ, ತಾವರಗೆರ, ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಕನಕಗಿರಿ ತಾಲೂಕಿನ ಗುಳದಾಳ ಗ್ರಾಮದ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ಪರಿಣಾಮ ಭತ್ತ ಬೆಳೆದ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ಕೊರೊನಾ ಭೀತಿಯಿಂದ ರೈತರು, ಕೂಲಿ ಕಾರ್ಮಿಕರು, ಬಡವರು ಕಂಗೆಟ್ಟು ಹೋಗಿದ್ದಾರೆ. ಈ ಬೆನ್ನಲ್ಲೇ ಇನ್ನೇನು ಬೆಳೆ ಬೆಳೆದು ಕೈಗೆ ಸೇರುತ್ತೆ ಎನ್ನುವಷ್ಟರಲ್ಲೇ ಇಂದು ಸುರಿದ ಅಕಾಲಿಕ ಮಳೆಯಿಂದ ಭತ್ತ ನೆಲ ಕಚ್ಚಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ಭಾಗದಲ್ಲಿ ಭತ್ತದ ಬೆಳಗಾರರಿಗೆ ಗಾಯದ ಮೇಲೆ ಬರೆ ಎಳೆದಂತೆಯಾಗಿದೆ. ಗಂಗಾವತಿ ತಾಲೂಕಿನ ಗುಳದಾಳ, ಹೇರೂರು, ಗೋನಾಳ, ಕಲ್ಲಗುಡಿ, ಸಿಂಗನಾಳ, ಹೊಸ್ಕೇರಾ, ಸಂಗಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಹೆಕ್ಟೇರ್ ನಲ್ಲಿ ಭತ್ತ ನೆಲ ಕಚ್ಚಿದೆ.

    ರಾಯಚೂರು:
    ಅಕಾಲಿಕ ಮಳೆಗೆ ರಾಯಚೂರಿನ ರೈತರು ತತ್ತರಿ ಹೋಗಿದ್ದಾರೆ. ಮಸ್ಕಿ ಹಾಗೂ ಲಿಂಗಸುಗೂರು ತಾಲೂಕಿನಲ್ಲಿ ಎಡೆಬಿಡದ ಮಳೆ ಸುರಿದಿದ್ದು, ಮಸ್ಕಿ ತಾಲೂಕಿನ ತೀರ್ಥಬಾವಿ ಗ್ರಾಮದಲ್ಲಿ ಆಲಿಕಲ್ಲು ಹೊಡೆತಕ್ಕೆ ಪಪ್ಪಾಯ ಬೆಳೆ ನೆಲಕ್ಕುರುಳಿದೆ. ಬಸನಗೌಡ ಹಾಗೂ ಚಂದ್ರಶೇಖರ ಅವರಿಗೆ ಸೇರಿದ್ದ 6 ಎಕರೆ ಹೊಲದಲ್ಲಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಬೆಳೆ ಸಂಪೂರ್ಣ ಹಾಳಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ವಿವಿಧೆಡೆ ನೂರಾರು ಎಕರೆ ಭತ್ತದ ಬೆಳೆಯೂ ಹಾನಿಯಾಗಿದೆ.

    ರಾಯಚೂರಿನ ಶ್ರೀರಾಮನಗರ ಕಾಲೋನಿಯ ಕೊದಂಡರಾಮ ದೇವಾಲಯದ ಆವರಣದಲ್ಲಿನ ಬನ್ನಿಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು. ಸಂಜೆ ವಾಕಿಂಗ್ ಮಾಡುತ್ತಿದ್ದ ಜನ ಗಾಳಿಯಿಂದ ಮನೆ ತೆರಳಿದ್ದರು. ಹೀಗಾಗಿ ಭಾರೀ ಅನಾಹುತ ತಪ್ಪಿದೆ.

    ಮಂಗಳೂರು:
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ವರುಣ ಅಬ್ಬರಿಸಿದ್ದಾನೆ. ಮಂಗಳೂರು ಹೊರವಲಯದ ಸುರತ್ಕಲ್, ಬಂಟ್ವಾಳ, ಕಡಬ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ ವಿವಿಧೆಡೆ ಅಕಾಲಿಕ ಮಳೆಯಾಗಿದೆ.

    ಯಾದಗಿರಿ/ ಗದಗ:
    ಯಾದಗಿರಿ ಜಿಲ್ಲೆಯ ಶಹಪುರ, ಸುರಪುರ, ಗುರುಮಿಠಕಲ್ ಸೆರಿದಂತೆ ವಿವಿಧೆಡೆ ಮಳೆರಾಯ ಭಾರೀ ಸದ್ದು ಮಾಡಿದ್ದಾನೆ. ಗುಡುಗು, ಸಿಡಿಲು ಸಹಿತ ವರುಣ ಆರ್ಭಟಿಸಿದ್ದು, ಆಲೆಕಲ್ಲು ಮಳೆಯಾಗಿದೆ. ಗದಗ ನಗರ ಸೇರಿದಂತೆ ಜಿಲ್ಲೆಯ ನರಗುಂದ, ಗಜೇಂದ್ರಗಡ, ಮುಂಡರಗಿ ಭಾಗದಲ್ಲಿ ಭಾರೀ ಮಳೆಯಾಗಿದೆ.

  • ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.

    ರಮೇಶ್ ಗಂಗನಗೌಡ, ಅಮರಪ್ಪ ಗಂಗನಗೌಡ, ತಿಪ್ಪಣ ಕೆಂಬಾವಿ, ರೇವಣಪ್ಪ ಕೆಂಬಾವಿ ಎಂಬವರ ಹೊಲಗಳಲ್ಲಿ ಮಳೆಯ ಹೊಡೆತಕ್ಕೆ ಒಟ್ಟು ನಾಲ್ಕು ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಭಾರೀ ಮಳೆ ಬಂದಿದ್ದರಿಂದ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ.

    ರೈತರು ಸಾಲ ಮಾಡಿ ಬಾಳೆ ಬೆಳೆದಿದ್ದರು. ಭಾನುವಾರ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಬಾಳೆ ಗಿಡಗಳು ಮುರಿದು ಬಿದ್ದಿವೆ. ಗಿಡಗಳು ಬೀಳದಂತೆ ಮರದ ಕೋಲುಗಳನ್ನು ಕೊಟ್ಟಿದ್ದರು ಗಾಳಿ ಬೀಸಿದ್ದರಿಂದ ಬಿದ್ದಿವೆ. ಬಿದ್ದಿರುವ ಗಿಡಗಳಲ್ಲಿ ಇರುವ ಗೊನೆಗಳ ಕಾಯಿಗಳು ಇನ್ನೂ ಬಲಿತಿಲ್ಲ. ಸುಮಾರು 100 ಗಿಡಗಳು ಮುರಿದು ಬಿದ್ದಿವೆ ಎಂದು ರೈತ ಬಸಪ್ಪ ಹೇಳ್ತಾರೆ.

    ರೈತರು ಲಕ್ಷಾಂತರ ರೂಪಾಯಿ ಬೆಲೆಯ ಬಾಳೆ ನೆಲಕ್ಕಚ್ಚಿದ್ದರಿಂದ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.

  • ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಸೊಂಟಕ್ಕೆ ಏಟು ತಗುಲಿ ನರಳುತ್ತಿದ್ದ ಮುಸುವದ ರಕ್ಷಣೆ

    ಮಂಗಳೂರು: ಸೊಂಟಕ್ಕೆ ಏಟು ತಗುಲಿ ಮುಸುವ(ಲಂಗೂರ್ ಕೋತಿ)ವೊಂದು ಪರದಾಡಿದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ಬೆಳ್ತಂಗಡಿಯ ಪದ್ಮುಂಜ ಗ್ರಾಮದ ಮಲೆಂಗಲ್ಲು ರಕ್ಷಿತಾರಣ್ಯದಲ್ಲಿದ್ದ ಮುಸುವಗಳು ಆಹಾರ ಅರಸಿಕೊಂಡು ನಾಡಿಗೆ ಬಂದಿವೆ. ಬಾಳೆ, ಪಪ್ಪಾಯಿ ತಿನ್ನಲೆಂದು ಬಂದಿದ್ದಾಗ ಗುಂಡೇಟಿನ ಭಯದಿಂದ ಓಟ ಕಿತ್ತಾಗ ಈ ಮುಸಿಯ ಬಂಡೆ ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡು ನರಳಿದೆ.

    ಕೆಲ ಪ್ರಾಣಿಪ್ರಿಯರು ಮುಸುವಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳ ಮೂಲಕ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ.