Tag: ಬಾಲ ಕಾರ್ಮಿಕರು

  • ಶಾಲೆಗಳಿಗೆ ರಜೆ- ರಾಯಚೂರಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳ

    ಶಾಲೆಗಳಿಗೆ ರಜೆ- ರಾಯಚೂರಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳ

    – ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಪೋಷಕರು

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಶಾಲೆಗಳಿಗೆ ರಜೆ ಇರುವುದರಿಂದ ಪೋಷಕರು ಮಕ್ಕಳನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಕೂಲಿ ಕೆಲಸಕ್ಕೂ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

    ನಗರದ ಎಪಿಎಂಸಿ ಆವರಣದಲ್ಲಿ ಪುಟ್ಟ ಮಕ್ಕಳು ಕೃಷಿ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸ್ವತಃ ತಂದೆ ತಾಯಿಗಳೇ ಮಕ್ಕಳನ್ನು ಇತರೆ ಕೆಲಸಗಳಿಗೆ ಕರೆದೊಯ್ಯುತ್ತಿದ್ದಾರೆ. ಶಾಲೆ ಇಲ್ಲ ಹೀಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಚಿಕ್ಕ ಮಕ್ಕಳು ಹೇಳುತ್ತಿದ್ದಾರೆ.

    ಮುಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿರುವುದರಿಂದ ನಗರದ ಎಪಿಎಂಸಿ ಆವರಣದಲ್ಲಿ ಕೃಷಿ ಪರಿಕರಗಳ ಮಾರಾಟ ಜೋರಾಗಿದೆ. ಹೀಗಾಗಿ ಪೋಷಕರು ವ್ಯಾಪಾರಕ್ಕೆ ಮಕ್ಕಳನ್ನೂ ಬಳಸಿಕೊಳ್ಳುತ್ತಿದ್ದಾರೆ. ಬಾಲ ಕಾರ್ಮಿಕರ ತಡೆಗೆ ಸರ್ಕಾರ ಒಂದೆಡೆ ನಿರಂತರ ಪ್ರಯತ್ನ ನಡೆಸಿದ್ದರೂ, ಇದೀಗ ಪೋಷಕರು ತಮ್ಮ ಕೆಲಸಗಳಿಗೆ 14 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳನ್ನು ವ್ಯಾಪಾರಕ್ಕೆ ಕರೆದುಕೊಂಡು ಬಂದಿದ್ದು, ಆರಂಭವಾದ ಬಳಿಕ ಮಕ್ಕಳನ್ನ ಶಾಲೆಗೆ ಕಳುಹಿಸುತ್ತೇವೆ ಎಂದು ಪೋಷಕರು ಹೇಳಿದ್ದಾರೆ.

    ಕೆಲಸದಲ್ಲಿ ತೊಡಗಿರುವ ಇಬ್ಬರು ಮಕ್ಕಳು ಸಹ 8 ಹಾಗೂ 9ನೇ ತರಗತಿಯಲ್ಲಿ ಓದುತ್ತಿದ್ದು, ತಂದೆಗೆ ಸಹಾಯ ಮಾಡುತ್ತಿದ್ದೇವೆ. ಶಾಲೆ ಆರಂಭವಾದ ಮೇಲೆ ಹೋಗುವುದಾಗಿ ಹೇಳುತ್ತಿದ್ದಾರೆ. ಹತ್ತಿ ಬಿಡಿಸುವ ಸಂದರ್ಭದಲ್ಲೂ ಬಾಲಕಾರ್ಮಿಕರನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮೆಕ್ಯಾನಿಕ್, ವೆಲ್ಡಿಂಗ್ ಶಾಪ್, ಹೋಟೆಲ್‍ಗಳಲ್ಲೂ ಬಾಲ ಕಾರ್ಮಿಕರ ಬಳಕೆ ನಡೆದಿದೆ. ಶಾಲೆಗಳಿಗೆ ರಜೆ ಅನ್ನೋ ಕಾರಣಕ್ಕೆ ಮಕ್ಕಳನ್ನ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.

  • ಯಾದಗಿರಿಯನ್ನು ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಸಲು ಖಾಕಿ ಸಜ್ಜು

    ಯಾದಗಿರಿಯನ್ನು ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಸಲು ಖಾಕಿ ಸಜ್ಜು

    ಯಾದಗಿರಿ: ನಗರದ ಪೊಲೀಸ್ ಆಡಳಿತ ಭವನದಲ್ಲಿ ಜಿಲ್ಲೆಯ ಎಲ್ಲಾ ಠಾಣೆಗಳ ಸಿಪಿಐ ಮತ್ತು ಪಿಎಸ್‍ಐ ಅಧಿಕಾರಿಗಳಿಗೆ, 1986ರ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ನಿಷೇಧಿತ ತಂಬಾಕು ಕುರಿತು ವಿಶೇಷ ಕಾರ್ಯಾಗಾರವನ್ನು ನಡೆಸಲಾಯಿತು.

    ಜಿಲ್ಲಾ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್ ಮತ್ತು ಡಿವೈಎಸ್‍ಪಿ ಶರಣಪ್ಪ ಅವರು ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ವಿಷಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜಿಲ್ಲಾದ್ಯಂತ ಅನಿರೀಕ್ಷಿತ ತಪಾಸಣೆ ಕೈಗೊಂಡು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಮಾಲೀಕರುಗಳಿಗೆ ಸೂಚನೆ ನೀಡಬೇಕು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಮಾಲೀಕರುಗಳಿಗೆ ಪ್ರತಿ ಬಾಲ ಕಾರ್ಮಿಕರಿಂದ 50,000 ರೂಪಾಯಿ ದಂಡ ವಿಧಿಸಿ, ಜೈಲು ಶಿಕ್ಷೆ ಕೂಡ ವಿಧಿಸಬಹುದಾದ ಕಾನೂನಿನ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

    ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಕಾರ್ಮಿಕ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಠಾಣೆಗಳ ಕಾರ್ಯವ್ಯಾಪ್ತಿಯಲ್ಲಿ ಅನಿರೀಕ್ಷಿತ ದಾಳಿ ಅಥವಾ ತಪಾಸಣೆಯನ್ನು ಕೈಗೊಳ್ಳಬೇಕು. ಮಕ್ಕಳನ್ನು ರಕ್ಷಿಸಿ, ಪುನರ್ವಸತಿ ನೀಡುವ ಮೂಲಕ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಮೂಲಕ ಯಾದಗಿರಿ ಜಿಲ್ಲೆಯನ್ನು ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಳಿಸಬೇಕು ಎಂಬ ನಿರ್ಣಯವನ್ನು ಈ ಕಾರ್ಯಾಗಾರದಲ್ಲಿ ಪೊಲೀಸ್ ಅಧಿಕಾರಿಗಳು ಕೈಗೊಂಡರು.

  • ಬಿಸ್ಕೆಟ್ ಕಾರ್ಖಾನೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ- 26 ಬಾಲ ಕಾರ್ಮಿಕರ ರಕ್ಷಣೆ

    ಬಿಸ್ಕೆಟ್ ಕಾರ್ಖಾನೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ- 26 ಬಾಲ ಕಾರ್ಮಿಕರ ರಕ್ಷಣೆ

    ರಾಯ್ಪುರ: ಪ್ರತಿಷ್ಠಿತ ಪಾರ್ಲೆ-ಜಿ ಬಿಸ್ಕೆಟ್ ಅಂದರೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಅಲ್ಲದೆ ಮಕ್ಕಳಿಗೆಂದೇ ಇದು ತಯಾರಾಗುತ್ತದೆ. ಆದರೆ ಇದೇ ಬಿಸ್ಕೆಟ್ ಕಾರ್ಖಾನೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ. ಛತ್ತೀಸ್‍ಗಡದ ಪಾರ್ಲೆ-ಜಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 26 ಬಾಲ ಕಾರ್ಮಿಕರನ್ನು ಜಿಲ್ಲಾ ಕಾರ್ಯಪಡೆ ಅಧಿಕಾರಿಗಳು ರಕ್ಷಿಸಿದ್ದಾರೆ.

    ರಾಯ್ಪುರದ ಅಮಾಸಿವ್ನಿ ಪ್ರದೇಶದಲ್ಲಿ ಇರುವ ಪಾರ್ಲೆ-ಜಿ ಫ್ಯಾಕ್ಟರಿಯಿಂದ 26 ಮಕ್ಕಳನ್ನು ರಕ್ಷಿಸಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಫ್ಯಾಕ್ಟರಿಯಲ್ಲಿ ನಾವು ಕಾರ್ಯಾಚರಣೆ ನಡೆಸಿ 26 ಮಕ್ಕಳನ್ನು ರಕ್ಷಿಸಿದೆವು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನವನೀತ್ ಸ್ವರ್ಣಾಂಕರ್ ತಿಳಿಸಿದ್ದಾರೆ.


    ಈ ಫ್ಯಾಕ್ಟರಿಯಲ್ಲಿ 12ರಿಂದ 16 ವರ್ಷದೊಳಗಿನ ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಆಧಾರದ ಮೇಲೆ ಫ್ಯಾಕ್ಟರಿಗೆ ಹೋಗಿ ಕಾರ್ಯಾಚರಣೆ ನಡೆಸಿದಾಗ ಈ ದೌರ್ಜನ್ಯ ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶ, ಜಾರ್ಖಂಡ್, ಒಡಿಶಾ ಮತ್ತು ಬಿಹಾರ ಮೂಲದ ಮಕ್ಕಳು ಇಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತಿಂಗಳಿಗೆ 5ರಿಂದ 7 ಸಾವಿರ ರೂಪಾಯಿ ವೇತನಕ್ಕೆ ಇಲ್ಲಿ ದುಡಿಯುತ್ತಿದ್ದೆವು ಎಂದು ರಕ್ಷಣೆಯಾದ ಮಕ್ಕಳು ಹೇಳಿದ್ದಾರೆ.

    ದೇಶದಲ್ಲಿ ಬ್ರಾಂಡ್ ಕಂಪೆನಿಯಾಗಿ ಗುರುತಿಸಿಕೊಂಡಿರುವ ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ಸಮೀರ್ ಮಾಥುರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಮಕ್ಕಳನ್ನು ರಕ್ಷಿಸಿದ ನಂತರ ಅವರನ್ನು ಸರ್ಕಾರದ ಆಶ್ರಯ ಮನೆಗೆ ಕಳುಹಿಸಲಾಗಿದ್ದು, ಫ್ಯಾಕ್ಟರಿ ಮಾಲಿಕರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಜೂನ್ 12ರಂದು ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನದ ಪ್ರಯುಕ್ತ ನಾವು ಜಿಲ್ಲೆಯಲ್ಲಿ ಇರುವ ಬಾಲ ಕಾರ್ಮಿಕರ ರಕ್ಷಣೆ ಮಾಡುವ ಕಾರ್ಯಕ್ಕೆ ಕೈಹಾಕಿದ್ದೇವೆ. ಈವರೆಗೆ ಕಳೆದ 6 ದಿನಗಳಿಂದ ಜಿಲ್ಲೆಯಲ್ಲಿ 51 ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳನ್ನು ನಾವು ರಕ್ಷಿಸಿದ್ದೇವೆ ಎಂದು ನವನೀತ್ ಸ್ವರ್ಣಾಂಕರ್ ಹೇಳಿದ್ದಾರೆ.

  • ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಬೆಳಗಾವಿ: ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿರುವ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣಗಳಲ್ಲಿ ಕಂಡು ಬಂದಿದೆ.

    ಬಾಲ ಕಾರ್ಮಿಕರ ಬಳಕೆ ಅಕ್ಷಮ್ಯ ಅಪರಾಧ. ಬಾಲ ಕಾರ್ಮಿಕರ ಬಳಕೆ ಮಾಡಿದರೆ ಜೈಲು ಶಿಕ್ಷೆ ಕೂಡ ಇದೆ. ಆದರೆ ಇಲ್ಲಿ ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿದ್ದರೂ ಅಬಕಾರಿ, ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.

    ಚಿಕ್ಕ ಮಕ್ಕಳ ಕೈಯಲಿ ದುಡಿಸಿಕೊಳ್ಳೋದು ಕಾನೂನಿನ ಪ್ರಕಾರ ಅಪರಾಧ. ಇದು ಗೊತ್ತಿದರೂ ಬಾಲಕರನ್ನು ತಮ್ಮ ಕೆಲಸ ಕಾರ್ಯದಲ್ಲಿ ಬಳಸಿಕೊಳುತ್ತಿದ್ದಾರೆ. ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣದ ಮದ್ಯದಂಗಡಿಗಳಿಗೆ ಬರೋ ಕುಡುಕರಿಗೆ ಈ ಬಾಲಕರು ಸರ್ವ್ ಮಾಡ್ತಾರೆ. ಅಷ್ಟೇ ಅಲ್ಲ ಕುಡುಕರು ಬಳಸಿದ ಗ್ಲಾಸ್‍ಗಳನ್ನು ಬಾಲಕರೇ ತೊಳೆಯುತ್ತಾರೆ.

    ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಾಲ ಕಾರ್ಮಿಕ ಪದ್ದತಿ ಬೆಳಕಿಗೆ ಬಂದಿದ್ದು, ಇನ್ನೂ ರಾಯಭಾಗ, ಚಿಕ್ಕೋಡಿಯ ಡಾಬಾಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಮಕ್ಕಳಿಗೆ ಕಡಿಮೆ ಹಣ ನೀಡಿ ದುಡಿಸಿಕೊಳ್ಳಲಾಗುತ್ತಿದೆ.