Tag: ಬಾಲ್ಯಸ್ನೇಹಿತೆ

  • ಬಾಲ್ಯಸ್ನೇಹಿತೆಯ ಮರಣದಿಂದ ಮನನೊಂದ ತರಬೇತಿನಿರತ ಮಹಿಳಾ ಪೇದೆ ಆತ್ಮಹತ್ಯೆ!

    ಬಾಲ್ಯಸ್ನೇಹಿತೆಯ ಮರಣದಿಂದ ಮನನೊಂದ ತರಬೇತಿನಿರತ ಮಹಿಳಾ ಪೇದೆ ಆತ್ಮಹತ್ಯೆ!

    ಹೈದರಾಬಾದ್: ಇಲ್ಲಿನ ಗಂಡಿಪೇಟೆಯಲ್ಲಿರೋ ರಾಜ್ಯ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಮಹಿಳಾ ಪೇದೆಯೊಬ್ಬರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

    ಮೃತ ಮಹಿಳಾ ಪೇದೆಯನ್ನು ನಲ್ಗೊಂಡ ನಿವಾಸಿ ನವೀನ ಎಂಬುವುದಾಗಿ ಗುರುತಿಸಲಾಗಿದ್ದು, ಇವರು ತಾನು ಉಳಿದುಕೊಂಡಿದ್ದ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಆತ್ಮಹತ್ಯೆಗೆ ಕಾರಣವೇನು?: ಕಳೆದ ರಾತ್ರಿ ಈಕೆಯ ಗೆಳತಿ ಮಾಧವಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾಧವಿಗೆ ಮದುವೆ ಇಷ್ಟವಿರಲಿಲ್ಲ. ಆದ್ರೆ ಪೋಷಕರು ಒತ್ತಾಯದಿಂದ ಆಕೆಗೆ ಮದುವೆ ಮಾಡಿಸಲು ತಯಾರಿ ನಡೆಸುತ್ತಿದ್ದರು. ಅಲ್ಲದೇ ಹುಡುಗನನ್ನು ಹುಡುಕಿದ್ದರು. ಇದರಿಂದ ಮನನೊಂದ ಮಾಧವಿ ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ತಿಳಿದ ಬಳಿಕ ನವೀನ ಖಿನ್ನತೆಗೊಳಗಾಗಿದ್ದರು.

    ಮಾಧವಿ ಹಾಗೂ ನವೀನ ಬಾಲ್ಯದಿಂದಲೇ ಸ್ನೇಹಿತರಾಗಿದ್ದರು. ಹೀಗಾಗಿ ತನ್ನ ಬಾಲ್ಯ ಸ್ನೇಹಿತೆಯನ್ನು ಕಳೆದುಕೊಂಡ ದುಃಖದಲ್ಲಿ ನವೀನ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಬೆಳಗ್ಗೆ ಹಾಸ್ಟೆಲ್ ಕೋಣೆಯಿಂದ ನವೀನ ಹೊರಬಾರದ್ದನ್ನು ಗಮನಿಸಿದ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ನವೀನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ನವೀನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.