Tag: ಬಾಲ್ಯಜೀವನ

  • ಸಿಹಿ ತಿನಿಸು, ನಾಟಿ ಶೈಲಿ ಊಟ ಅಂದ್ರೆ ಪ್ರಾಣ – ಟೆನ್ನಿಸ್‌ ಕ್ರೀಡೆ ಫೇವರೆಟ್‌; ಎಸ್‌ಎಂಕೆ ಬಾಲ್ಯದ ಸ್ವಾರಸ್ಯ!

    ಸಿಹಿ ತಿನಿಸು, ನಾಟಿ ಶೈಲಿ ಊಟ ಅಂದ್ರೆ ಪ್ರಾಣ – ಟೆನ್ನಿಸ್‌ ಕ್ರೀಡೆ ಫೇವರೆಟ್‌; ಎಸ್‌ಎಂಕೆ ಬಾಲ್ಯದ ಸ್ವಾರಸ್ಯ!

    ಎಸ್.ಎಂ.ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ)
    * ಜನನ – 1932 ಮೇ 1
    * ತಂದೆ ತಾಯಿ – ಮಲ್ಲಯ್ಯ, ತಾಯಮ್ಮ
    * ಸ್ಥಳ – ಸೋಮನಹಳ್ಳಿ, ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು.

    ಬಾಲ್ಯ ಜೀವನ

    ಎಸ್.ಎಂ.ಕೃಷ್ಣ (SM Krishna) ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ 1932 ಮೇ 1ರಂದು ಜನಿಸಿದರು. ಹುಟ್ಟುತ್ತಲೇ ಕೃಷ್ಣ ಅವರು ಆಗರ್ಭ ಶ್ರೀಮಂತರು. ಅವರ ತಂದೆ ಮಲ್ಲಯ್ಯ ಅವರು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. 40 ವರ್ಷಕ್ಕೂ ಅಧಿಕ ಕಾಲ ಪ್ರಜಾಪ್ರತಿನಿಧಿ ಸಭೆ ಹಾಗೂ ನ್ಯಾಯವಿಧಾಯಕ ಸಭೆಯ ಸದಸ್ಯರಾಗಿ, ಮಂಡ್ಯ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ, ಮೈಸೂರು ವಿವಿ ಸೆನೆಟ್ ಸದಸ್ಯರಾಗಿ, ರಾಜ್ಯ ಆರ್ಥಿಕ ಸುಧಾರಣಾ ಸಮಿತಿ ಸದಸ್ಯರಾಗಿ, ರಾಷ್ಟ್ರ ಹಾಗೂ ರಾಜ್ಯ ಒಕ್ಕಲಿಗ ಸಂಘದ ಮಹಾಕಾರ್ಯದರ್ಶಿಯಾಗಿ ಮಲ್ಲಯ್ಯ ಅವರು ಸೇವೆ ಸಲ್ಲಿಸಿದ್ದಾರೆ.

    ಮಲೆಮಹದೇಶ್ವರನ ಹರಕೆ ಹೊತ್ತ ಫಲವಾಗಿ ಜನಿಸಿದ್ದ ಎಸ್‌ಎಂಕೆ

    ಕೃಷ್ಣ ಅವರ ತಂದೆ ತಾಯಿಗೆ ಒಟ್ಟು 10 ಮಂದಿ ಮಕ್ಕಳು. ಕೃಷ್ಣ ಅವರು 6ನೇ ಮಗ. ಇವರ ಹಿಂದೆ ಐದು ಮಂದಿ ಹೆಣ್ಣು ಮಕ್ಕಳು ಹಾಗೂ ಇವರ ಬಳಿಕ ಒಂದು ಗಂಡು ಹಾಗೂ ಮೂರು ಮಂದಿ ಹೆಣ್ಣು ಮಕ್ಕಳು ಜನಿಸಿದ್ದಾರೆ. ಕೃಷ್ಣ ಅವರು ಜನನಕ್ಕೂ ಮುನ್ನ ಎರಡು ಗಂಡು ಮಕ್ಕಳು ಸಾವನ್ನಪ್ಪಿದ್ದರು. ಬಳಿಕ ಕೃಷ್ಣ ಅವರ ತಂದೆ ತಾಯಿ ಮಲೆಮಹದೇಶ್ವರನಿಗೆ ಹರಕೆ ಹೊತ್ತ ಫಲವಾಗಿ ಎಸ್.ಎಂ ಕೃಷ್ಣ ಅವರ ಜನನವಾಯಿತು. 1934 ರಂದು ಮಹಾತ್ಮ ಗಾಂಧೀಜಿ ಅವರು ಸೋಮನಹಳ್ಳಿಗೆ ಬಂದ ವೇಳೆ ಮೂರು ವರ್ಷದ ಪುಟ್ಟ ಕೃಷ್ಣ ಅವರು ಗಾಂಧೀಜಿ ಅವರಿಗೆ ಹೂವಿನ ಮಾಲೆ ಹಾಕಿದ್ದರು.

    1996ರಲ್ಲಿ ದಾಂಪತ್ಯ ಜೀವನ ಶುರು

    1966 ಏಪ್ರಿಲ್ 29ರಂದು ಎಸ್.ಕೃಷ್ಣ ಅವರು ಪ್ರೇಮ ಅವರನ್ನು ವಿವಾಹವಾಗುತ್ತಾರೆ. ಇವರಿಗೆ ಮಾಳವಿಕಾ ಹಾಗೂ ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.‌ ಮಾಳವಿಕಾ ಅವರನ್ನು ಕಾಫಿ ಡೇ ಸಂಸ್ಥಾಪಕ ದಿ.ಸಿದ್ದಾರ್ಥ ಅವರೊಡನೆ ವಿವಾಹ ಮಾಡಿಕೊಡಲಾಗಿದೆ. ಇನ್ನೂ ಶಾಂಭವಿ ಅವರನ್ನು ವಿದೇಶದಲ್ಲಿರುವ ಉಮೇಶ್ ಅವರೊಡನೆ ವಿವಾಹ ಮಾಡಲಾಗಿದೆ.

    ಎಸ್‌ಎಂಕೆ ಆಸಕ್ತಿ ಕ್ಷೇತ್ರ ಯಾವುದು?

    ಎಸ್.ಎಂ.ಕೃಷ್ಣ ಅವರಿಗೆ ರಾಜಕೀಯ ಹೊರತುಪಡಿಸಿ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಸಭ್ಯ ಉಡುಗೆ ಎಂದರೆ ಕೃಷ್ಣ ಅವರಿಗೆ ತುಂಬಾ ಪ್ರೀತಿ. ಖಾದಿ, ಉಣ್ಣೆ, ರೇಷ್ಮೆ ರೀತಿಯ ವಸ್ತ್ರಗಳನ್ನು ಧರಿಸುತ್ತಿದ್ದರು. ಕೋಟು ಹಾಗೂ ಜುಬ್ಬಾ ಕೃಷ್ಣ ಅವರ ನೆಚ್ಚಿನ ಉಡುಗೆಗಳು. ಬಾಲ್ಯದಲ್ಲಿ ಕೃಷ್ಣ ಅವರು ಪುಟ್ಬಾಲ್, ವಾಲಿಬಾಲ್‌ನ್ನು ಹೆಚ್ಚಾಗಿ ಆಡುತ್ತಿದ್ದರು. ಮೈಸೂರಿನ ಮಹಾರಾಜ ಕಾಲೇಜು ಸೇರಿದ ಬಳಿಕ ಟೆನ್ನಿಸ್ ಕಡೆಗೆ ಹೆಚ್ಚು ಒತ್ತನ್ನು ಕೃಷ್ಣ ಅವರು ನೀಡಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ಟೆನ್ನಿಸ್ ಆಡುತ್ತಿದ್ದರು. ರಾಜಕೀಯ ರಂಗಕ್ಕೆ ಧುಮುಕಿದ ವೇಳೆಯೂ ಬಿಡುವಿನಲ್ಲಿ ಟೆನ್ನಿಸ್ ಆಡುವುದು ಹಾಗೂ ನೋಡುವುದನ್ನು ಮಾಡ್ತಾ ಇದ್ದರು. ಇನ್ನೂ ಊಟದ ವಿಚಾರಕ್ಕೆ ಬಂದ್ರೆ ಸಿಹಿ ಪದಾರ್ಥ ಇಷ್ಟ ಪಡುತ್ತಿದ್ದರು, ಅಲ್ಲದೇ ಮಾಂಸಹಾರದಲ್ಲಿ ನಾಟಿ ಶೈಲಿಯನ್ನು ಇಷ್ಟಪಟ್ಟು ಸೇವನೆ ಮಾಡ್ತಾ ಇದ್ದರು. ವಿದೇಶದಲ್ಲಿ ಕೃಷ್ಣ ಅವರು ವ್ಯಾಸಾಂಗ ಮಾಡಿದ ಕಾರಣ ವಿದೇಶಿ ತಿನಿಸುಗಳನ್ನು ಸಹ ತಿನ್ನುತ್ತಿದ್ದರು.

    ಎಸ್‌ಎಂಕೆ ಶೈಕ್ಷಣಿಕ ಜೀವನ ಹೇಗಿದೆ?

    ಎಸ್.ಎಂ.ಕೃಷ್ಣ ಅವರು 1937ರಂದು ಸೋಮನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರಂಭ ಮಾಡಿದರು. ಬಳಿಕ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು ಮಹಾಜನ ಮಾಧ್ಯಮಿಕ ಶಾಲೆಯಲ್ಲಿ ಮೂರನೇ ತರಗತಿಯಿಂದ ಓದು ಮುಂದುವರಿಸಿದರು. 1948ರಲ್ಲಿ ಮಹಾಜನ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದರು. ಬಳಿಕ ಮೈಸೂರಿನ ಫಸ್ಟ್ ಗ್ರೇಡ್ (ಇಂದಿನ ಯುವರಾಜ ಕಾಲೇಜು) ತರಗತಿಗೆ ಸೇರಿದರು. 1950ರಂದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ವ್ಯಾಸಂಗಕ್ಕೆ ಸೇರ್ಪಡೆಯಾದರು. 1955ರಲ್ಲಿ ಬೆಂಗಳೂರಿನ ಲಾ ಕಾಲೇಜಿನಲ್ಲಿ ಬಿ.ಎಲ್ ಪದವಿ ಪಡೆದರು.

    ಬಳಿಕ ಆಗಿನ ಕಾಲದ ಹೆಸರಾಂತ ವಕೀಲರಾದ ಗಣೇಶರಾಯರ ಬಳಿ ಜೂನಿಯರ್ ಆಗಿ ಸೇರಿದ್ದರು. 1958ರಂದು ಉನ್ನತ ವ್ಯಾಸಂಗಕ್ಕೆ ಕೃಷ್ಣ ಅವರು ಅಮೆರಿಕಾಗೆ ತೆರಳುತ್ತಾರೆ. ಅಲ್ಲಿನ ಟೆಕ್ಸಾಸ್‌ನ ಡಲ್ಲಾಸ್ ನಗರದ ಸದರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆಯುತ್ತಾರೆ. ಬಳಿಕ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿಗೆ ಸೇರುತ್ತಾರೆ, ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಇದೇ ವೇಳೆ ಜಾನ್.ಎಫ್ ಕೆನಡಿ ಅವರ ಪ್ರಭಾವಕ್ಕೆ ಸಹ ಕೃಷ್ಣ ಅವರು ಮಣಿದರು. ಆ ವೇಳೆ ಕೆನಡಿ ಅವರು ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷತೆಗೆ ಸ್ಪರ್ಧಿಸಿದ್ದರು. ಆಗ ಕೃಷ್ಣ ಅವರು ಕೆನಡಿ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಇದು ಕೃಷ್ಣ ಅವರು ರಾಜಕೀಯಕ್ಕೆ ಕಾಲಿಡುವಂತೆ ಪ್ರೇರೇಪಣೆ ಮಾಡಿದೆ. 1961 ರಂದು ಕೃಷ್ಣ ಅವರು ಅಮೆರಿಕದಿಂದ ಉನ್ನತ ವ್ಯಾಸಂಗ ಮುಗಿಸಿ ವಾಪಸ್ಸು ಬಂದರು.