Tag: ಬಾಲ್ಯ

  • ಎಸ್‍ಪಿಬಿಗೆ ತಂದೆಯೇ ಮೊದಲ ಗುರು – ಹರಿಕಥೆಗಳೇ ಪ್ರೇರಣೆ

    ಎಸ್‍ಪಿಬಿಗೆ ತಂದೆಯೇ ಮೊದಲ ಗುರು – ಹರಿಕಥೆಗಳೇ ಪ್ರೇರಣೆ

    – ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
    – ಆರ್ಕೇಸ್ಟ್ರಾದಿಂದ ಆರ್ಟಿಸ್ಟ್

    ಬೆಂಗಳೂರು: `ಎಂದರೋ ಮಹಾನುಭವುಲು’ ನಿರ್ಮಿಸಿದಂತಹ ಸಂಗೀತ ಸೌಧದ ಮೇಲೆ ದಶಕಗಳ ಕಾಲ ರಾರಾಜಿಸಿದವರು ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ. ಅಬಾಲ ವೃದ್ಧರನ್ನು ಕಟ್ಟಿ ಹಾಕುವ ಸ್ವರಶಕ್ತಿ ಅವರ ಕಂಠಕ್ಕೆ ಮಾತ್ರವಲ್ಲ, ಅವರ ವ್ಯಕ್ತಿತ್ವಕ್ಕೂ ಇತ್ತು.

    ಸಿನಿಮಾ ಇಂಡಸ್ಟ್ರಿಯಲ್ಲಿ ನಟನಾಗಿ ಮೊದಲಿಗೆ ಕಾಣಿಸಿಕೊಂಡರೂ, ನಂತರ ಅವರು ಗಾಯಕರಾಗಿ ಅಜರಾಮರವಾದ ಎಷ್ಟೋ ಹಾಡುಗಳನ್ನು ಆಲಾಪಿಸಿದರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಎಸ್‍ಪಿಬಿ ಹಾಡಿದ ಹಾಡುಗಳು ಚಿರಸ್ಥಾಯಿ ಆಗಿರಲಿವೆ. ಗಾಯಕರಾಗಿ, ನಟರಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ, ಕಿರುತೆರೆ ನಿರೂಪಕರಾಗಿ, ಹೀಗೆ ಬಾಲುಗಾರು ನಿಜಕ್ಕೂ ಬಹುಮುಖ ಪ್ರಜ್ಞಾಶಾಲಿ. ಆದರೆ ಅವರೆಲ್ಲ ಸಾಧನೆಗೆ ಅಡಿಪಾಯ ಹಾಕಿದವರೇ ಅವರ ತಂದೆ. ಅದೂ ಸಹ ಹರಿಕಥೆಗಳ ಮೂಲಕ ಎನ್ನುವುದು ವಿಶೇಷ.

    ಎಸ್.ಪಿ.ಬಾಲಸುಬ್ರಹ್ಮಣ್ಯಂ 1946ರ ಜೂನ್ 4ರಂದು ಆಂಧ್ರದ ನೆಲ್ಲೂರು ಜಿಲ್ಲೆಯ ಕೋನೇಟಮ್ಮ ಪೇಟೆಯಲ್ಲಿ ಜನಿಸಿದರು. ತಂದೆ ಸಾಂಬಮೂರ್ತಿ, ತಾಯಿ ಶಕುಂತಲಮ್ಮ, ತಂದೆ ಹರಿಕಥೆ ಹೇಳುತ್ತಿದ್ದರು. ಭಕ್ತಿ ರಸ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಹೀಗಾಗಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತದ ಮೇಲೆ ಆಸಕ್ತಿ ಬೆಳೆಯಿತು. ಐದನೇ ವಯಸ್ಸಿನಲ್ಲಿಯೇ ಭಕ್ತರಾಮದಾಸು ನಾಟಕದಲ್ಲಿ ತಂದೆ ಜೊತೆ ಬಾಲು ನಟಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಸೋದರಮಾವನ ಮನೆಯಲ್ಲಿ ಪೂರ್ಣಗೊಳಿಸಿ, ಸ್ಕೂಲ್ ಫೈನಲ್ ಶಿಕ್ಷಣವನ್ನು ಶ್ರೀಕಾಳಹಸ್ತಿಯಲ್ಲಿ ಪೂರೈಸಿದ್ದರು. ಶಾಲೆಯಲ್ಲಿ ಕೇವಲ ಓದಿನಲ್ಲಿ ಮಾತ್ರವಲ್ಲ, ಆಟಗಳಲ್ಲಿಯೂ ಎಸ್‍ಪಿಬಿ ಮೊದಲಿಗರಾಗಿದ್ದರು.

    ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
    ಶ್ರೀಕಾಳಹಸ್ತಿಯ ಬೋರ್ಡ್ ಶಾಲೆಯ ಜಿ.ವಿ.ಸುಬ್ರಹ್ಮಣ್ಯಂ ಎಂಬ ಶಿಕ್ಷಕರು, ಬಾಲು ಅವರಿಂದ ಹಾಡೊಂದನ್ನು ಹಾಡಿಸಿ ರೆಕಾರ್ಡ್ ಮಾಡಿದ್ದರು. ಇದು ಬಾಲುಗಾರು ಅವರಿಗೆ ಮರೆಯಲಾಗದ ಅನುಭೂತಿ. ಮತ್ತೊಬ್ಬ ಶಿಕ್ಷಕರಾದ ರಾಧಾಪತಿ ಪ್ರೋತ್ಸಾಹದಿಂದ ಹಲವು ನಾಟಕಗಳಲ್ಲಿ ನಟಿಸಿದ್ದರು. ತಿರುಪತಿಯಲ್ಲಿ ಪಿಯುಸಿ ಓದುತ್ತಿದ್ದಾಗ ಮದ್ರಾಸ್ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾದ ನಾಟಕದಲ್ಲಿ ಸ್ತ್ರೀಪಾತ್ರದಲ್ಲಿ ಅಭಿನಯಿಸಿದ್ದರು. ವಿಜಯವಾಡ ಆಕಾಶವಾಣಿಯಲ್ಲಿ ಹಾಡುಗಳನ್ನು ಹಾಡಿದ್ದರು.

    ಆರ್ಕೇಸ್ಟ್ರಾದಿಂದ ಆರ್ಟಿಸ್ಟ್
    ಎಸ್‍ಪಿ ಬಾಲಸುಬ್ರಹ್ಮಣ್ಯಂ ಪಿಯುಸಿ ಬಳಿಕ ಒಂದು ಆರ್ಕೆಸ್ಟ್ರಾ ಶುರು ಮಾಡಿದ್ದರು. ಗೆಳೆಯರೊಂದಿಗೆ ಆರ್ಕೆಸ್ಟ್ರಾ ಮೂಲಕ ಸ್ಟೇಜ್ ಶೋ ನೀಡುತ್ತಿದ್ದರು. ಅನಂತಪುರದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿ ನಂತರ ಅದು ಹಿಡಿಸದೇ ಮದ್ರಾಸ್‍ಗೆ ತೆರಳಿ ಎಂಜಿಯರಿಂಗ್‍ಗೆ ಪರ್ಯಾಯ ಎನಿಸಿದ್ದ ಎಎಂಐಇಗೆ ಸೇರಿದ್ದರು. ಅಲ್ಲಿ ಓದಿನ ಜೊತೆಗೆ ಸಿನಿಮಾದಲ್ಲಿ ಹಾಡಲು ಪ್ರಯತ್ನ ನಡೆಸಿದ್ದರು. ಒಂದು ವರ್ಷದ ಬಳಿಕ ಮಹ್ಮದ್ ಬಿನ್ ತುಘಲಕ್ ಸಿನಿಮಾದಲ್ಲಿ ನಟನಾಗಿ ಕಾಣಿಸಿಕೊಂಡರು. ಹ್ಯಾಪಿ ಬರ್ತ್ ಡೇ ಟು ಯೂ ಎಂದು ಹಾಡುವ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ದರ್ಶನ ನೀಡಿದ್ದರು.

    1964ರಲ್ಲಿ ಮದ್ರಾಸ್ ಸೋಷಿಯಲ್ ಅಂಡ್ ಕಲ್ಚರಲ್ ಕ್ಲಬ್ ನಿರ್ವಹಿಸಿದ ಲಲಿತಾ ಸಂಗೀತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಸ್‍ಪಿಬಿಗೆ ಮೊದಲ ಬಹುಮಾನ ಬಂತು. ಪೆಂಡ್ಯಾಲ, ಘಂಟಸಾಲ ಅವರು ಜಡ್ಜ್‍ಗಳಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಕೋದಂಡಪಾಣಿ, ಎಸ್‍ಪಿಬಿ ಗಾಯನ ಕಂಡು ಮಂತ್ರಮುಗ್ಧರಾಗಿದ್ದರು. ಮುಂದೆ ಎಸ್‍ಪಿಬಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡೋದಾಗಿ ಕೋದಂಡಪಾಣಿ ಮಾತು ನೀಡಿದ್ದರು.

    ಎಸ್‍ಪಿಬಿ ಮೊದಲ ಹಾಡು
    ಯಾರ ಬಳಿಯೂ ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡದೇ ಇದ್ದರೂ ಎಸ್‍ಪಿಬಿಗೆ ಜನ್ಮದತ್ತವಾಗಿ ಸಂಗೀತ ಸರಸ್ವತಿ ಒಲಿದಿದ್ದಳು. ಹೀಗಾಗಿ ಸಂಗೀತ ನಿರ್ದೇಶಕ ಕೋದಂಡಪಾಣಿಯವರು ಕೊಟ್ಟ ಮಾತಿನಂತೆ ಎಸ್‍ಪಿಬಿಗೆ ಶ್ರೀಶ್ರೀಶ್ರೀ ಮರ್ಯಾದಾ ರಾಮನ್ನ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದರು. ಏಮಿ ಈ ವಿಂತ ಮೋಹಂ ಎಂಬ ಹಾಡಿಗೆ ಪಿಬಿ ಶ್ರೀನಿವಾಸ್, ಪಿ.ಸುಶೀಲಾ ಅವರೊಂದಿಗೆ ಎಸ್‍ಪಿಬಿ ಧ್ವನಿಯಾದರು. ಈ ಹಾಡು ಮೊದಲ ಟೇಕ್‍ನಲ್ಲೇ ಓಕೆ ಆಗಿದ್ದು ವಿಶೇಷ. ಮುಂದೆ ಎಸ್‍ಪಿಬಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿ ಗಾನಗಂಧರ್ವರಾಗಿದ್ದು ಇತಿಹಾಸ. ಕೋದಂಡಪಾಣಿ ಅವರು ಇಲ್ಲದಿದ್ದರೆ ಬಾಲು ಎಂಬ ವ್ಯಕ್ತಿ ಇರುತ್ತಿರಲಿಲ್ಲ ಎಂದು ಎಸ್‍ಪಿಬಿ ಅವಕಾಶ ಸಿಕ್ಕಾಗಲೆಲ್ಲಾ ಸ್ಮರಿಸುತ್ತಿದ್ದರು.

  • ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಕ್ಷಿಣ ಭಾರತದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಟರಷ್ಟೆ ಬೇಡಿಕೆ ಹೊಂದಿದ್ದರು. ಬಾಲ್ಯದಲ್ಲಿ ಸಂಗೀತ ಕಲಿಯದಿದ್ದರೂ ತಂದೆಯ ಪ್ರೇರಣೆಯಿಂದ ಇಂದು ಗಾನ ಗಂಧರ್ವರಾಗಿದ್ದರು. ತಮ್ಮ ಸುಮಧುರ ಹಾಡುಗಳಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿಯಲ್ಲಿ ಬಹುಬೇಡಿಕೆಯ ಗಾಯಕರಾಗಿದ್ದಾರೆ. ಇವರು ಸುಮಾರು 50,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇದನ್ನೂ ಓದಿ: ಡಾ.ರಾಜ್‍ಕುಮಾರ್ ಅಂದರೆ ಬಾಲುಗೆ ಜೀವಜ್ಜೀವ ಪ್ರೇಮ

    ಬಾಲ್ಯ-ವಿದ್ಯಾಭ್ಯಾಸ:
    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೂಲ ಹೆಸರು ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೊನೇಟಮ್ಮ ಪೇಟಾದಲ್ಲಿ 1946ರ ಜೂನ್ 4ರಂದು ಜನಿಸಿದ್ದರು. ಇವರ ತಂದೆ ಎಸ್.ಪಿ.ಸಾಂಬ ಮೂರ್ತಿ ಹರಿಕಥೆ ಕಲಾವಿದರಾಗಿದ್ದು, ತಾಯಿ ಶಾಕುಂತಲಮ್ಮ. ಇವರ ತಾಯಿ 2019ರಲ್ಲಿ ತೀರಿಕೊಂಡಿದ್ದರು. ಇವರಿಗೆ ಇಬ್ಬರು ಸಹೋದರರು, ಎಸ್.ಪಿ.ಶೈಲಜಾ ಸೇರಿದಂತೆ ಐದು ಸಹೋದರಿಯರಿದ್ದರು.

    ಎಸ್‍ಪಿಬಿ ಚೆನ್ನೈನ ಜೆ.ಎನ್‍ ಯೂಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಕಾಲೇಜ್‍ನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹಾಡುಗಳು ಸ್ಪರ್ಧೆಗಳಲ್ಲಿ ಭಾಗವಹಿ, ಮೊದಲ ಪ್ರಶಸ್ತಿ ಗೆದಿದ್ದರು. ತೆಲುಗು ಸಾಂಸ್ಕೃತಿಕ ಸಂಗೀತ ಸ್ಪರ್ಧೆ 1964ರಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು. ಹರಿಕಥೆ ಹೇಳುತ್ತಿದ್ದ ತಂದೆ ಅವರೇ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತನ್ನಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆಗಿದ್ದರು.

    ಪ್ರಶಸ್ತಿ ಗೌರವಗಳು-ಪುರಸ್ಕಾರಗಳು
    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಂದಿದೆ. ಅಲ್ಲದೇ 25 ಭಾರಿ ಆಂಧ್ರ ಪ್ರದೇಶ ಸರ್ಕಾರದಿಂದ ನಂದಿ ಪ್ರಶಸ್ತಿ ನೀಡಲಾಗಿದೆ. ನಾಲ್ಕು ಭಾಷೆಗಳಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಗಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ಹಲವು ವಿಶ್ವ ವಿದ್ಯಾನಿಲಯಗಳಿಂದ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಬಾಲ್ಯವನ್ನು ನೆನೆದ ದೀಪಿಕಾ ಪಡುಕೋಣೆ

    ಲಾಕ್‍ಡೌನ್‍ನಲ್ಲಿ ಬಾಲ್ಯವನ್ನು ನೆನೆದ ದೀಪಿಕಾ ಪಡುಕೋಣೆ

    ಮುಂಬೈ: ದೀಪಿಕಾ ಪಡುಕೋಣೆ ಲಾಕ್‍ಡೌನ್‍ನಲ್ಲಿ ಅಡುಗೆ ಮಾಡುತ್ತಾ, ತಮ್ಮ ಮನೆ ಕೆಲಸ ಮಾಡಿ ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಏನೇನು ಕೆಲಸ ಮಾಡುತ್ತಿದ್ದಾರೆ ಎನ್ನೋದನ್ನ ಆಗಾಗ ದೀಪಿಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಈಗ ತಮ್ಮ ಬಾಲ್ಯದ ನೆನಪುಗಳನ್ನು ನೆನೆದು ದೀಪಿಕಾ ಪೋಸ್ಟ್ ಮಾಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಾಲ್ಯದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲೇ ಆರಂಭಿಸಿದ್ದೆ ಎಂದು ಕ್ಯಾಪ್ಷನ್ ಹಾಕಿ ಸ್ಟೇಜ್ ಮೇಲೆ ಕ್ಯೂಟ್ ಪೋಸ್ ಕೊಡುತ್ತಾ ನಿಂತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಇನ್ನೊಂದು ಪೋಸ್ಟ್ ನಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಾ, ಪರಾಟ ತಿನ್ನುತ್ತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    https://www.instagram.com/p/B-_eaG3jr-V/

    ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ನೀವು ಯಾವಾಗಲೂ ಕ್ಯೂಟ್ ದೀಪಿಕಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಫೋಟೋಗಳ ಕಥೆ ಏನು ಎಂದು ಹೇಳಿ ಅಂತ ಬೇಡಿಕೆ ಇಟ್ಟಿದ್ದಾರೆ. ಸದ್ಯ ಸಮಾಜಿಕ ಜಾಲತಾಣಗಳಲ್ಲಿ ದೀಪಿಕಾರ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ತಮ್ಮ ಬಾಲ್ಯದ ಕ್ಯೂಟ್ ಲುಕ್‍ನಿಂದ ದೀಪಿಕಾ ಅಭಿಮಾನಿಗಳ ಮನಗೆದ್ದಿದ್ದಾರೆ.

    https://www.instagram.com/p/B-o2TwRD2-s/

    ದೀಪಿಕಾಗೆ ಬಾಲ್ಯದಿಂದಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಆಸೆ ಇತ್ತು. ಹೀಗಾಗಿ ಶಾಲೆಯಲ್ಲಿ ಓದುತ್ತಿರುವಾಗಲೇ ದೀಪಿಕಾ ಮಾಡೆಲಿಂಗ್ ಮಾಡುವ ಮನಸ್ಸು ಮಾಡಿದ್ದರು. ಆದರೆ ಮನೆಯವರು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಆಮೇಲೆ ಮಾಡೆಲಿಂಗ್ ಮಾಡು ಎಂದು ಹೇಳಿದ್ದರಂತೆ.

    https://www.instagram.com/p/B-j7QLcD0XB/

    ಹೀಗಾಗಿ ಪದವಿ ಮುಗಿಸುವ ಮುನ್ನವೇ ದೀಪಿಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಐಶ್ವರ್ಯಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. ಆ ನಂತರ ಬಾಲಿವುಡ್‍ಗೆ ಲಗ್ಗೆಯಿಟ್ಟ ಗುಳಿ ಕೆನ್ನೆ ಚೆಲುವೆ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಬಿಟೌನ್‍ನಲ್ಲಿ ತಮ್ಮ ಅಭಿನಯ, ಬ್ಯೂಟಿಯಿಂದಲೇ ದೀಪಿಕಾ ಛಾಪು ಮೂಡಿಸಿದ್ದಾರೆ.

  • ಡಾ. ಚಿದಾನಂದಮೂರ್ತಿ ಅವರ ಕಿರು ಪರಿಚಯ

    ಡಾ. ಚಿದಾನಂದಮೂರ್ತಿ ಅವರ ಕಿರು ಪರಿಚಯ

    ಬೆಂಗಳೂರು: ಖ್ಯಾತ ಸಾಹಿತಿ, ಲೇಖಕ, ಸಂಶೋಧಕ ಡಾ. ಚಿದಾನಂದಮೂರ್ತಿ(88) ಅವರು ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

    ಬಾಲ್ಯ ಮತ್ತು ಶಿಕ್ಷಣ:
    ಚಿದಾನಂದಮೂರ್ತಿಗಳು 1931 ಮೇ 10ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದರು. ನಂತರ ಮೂರ್ತಿಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ಮಾಡಿದರು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು 10ನೇ ಸ್ಥಾನಗಳಿಸಿದರು. ಆದರೆ ಮೆಡಿಕಲ್ ಎಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು. ಅಂದಿನ ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಕೂಡ ಪಡೆದರು. ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತ ರಜೆ ಹಾಕಿ ಮೈಸೂರಿನಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ಗಳಿಸಿದರು.

    ಶಾಸನ ಕ್ಷೇತ್ರದೆಡೆಗೆ:
    ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ ‘ಪಂಪಕವಿ ಮತ್ತು ಮೌಲ್ಯಪ್ರಸಾರ’. ಆ ಮೂಲಕ ಶಾಸನ ಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ನಿಬಂಧ ಸಿದ್ಧಪಡಿಸಿ ತೀ.ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪದವಿ ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಮಹತ್ವಪೂರ್ಣ ಕೃತಿಯಾಗಿದೆ.

    ಅಧ್ಯಾಪಕರಾಗಿ ಸೇವೆ:
    ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು. 1968ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು, ನಂತರ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಮಾಡಿ 1990ರ ಅಕ್ಟೋಬರ್ 10ರಂದು ಸ್ವಯಂಸೇವಾ ನಿವೃತ್ತಿ ಪಡೆದರು.

    ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದ್ದಾರೆ. ಸಂಶೋಧನೆಗೆ ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಅವರು ವ್ಯಾಪಕವಾಗಿ ಸುತ್ತಿದ್ದಾರೆ. ಬಕ್ರ್ಲಿ, ಫಿಲಡೆಲ್ಫಿಯ, ಸ್ಟಾನ್ಫೊರ್ಡ್ ಮುಂತಾದ ಹಲವಾರು ವಿಶ್ವವಿದ್ಯಾಲಯಗಳು ಮತ್ತು ವಿಶ್ವಮಟ್ಟದ ಐತಿಹಾಸಿಕ ಭಾಷಾವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಈ ಎಲ್ಲವೂ ಅವರ ನಿರಂತರ ಅಧ್ಯಯನ ಶೀಲತೆ ಮತ್ತು ವಿದ್ವತ್ತಿನ ಸೂಚಕಗಳಾಗಿವೆ.

    ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಯುಗಪ್ರವರ್ತನೆಯ ಸಂಶೋಧಕ, ಸಂಶೋಧನೆಯ ಸಂಶೋಧಕ, ಸಂಸ್ಕೃತಿ ಸಂಶೋಧಕ, ತೀ.ನಂ.ಶ್ರೀ ಉತ್ತರಾಧಿಕಾರಿ ಎಂಬೆಲ್ಲ ಹೊಗಳಿಕೆಗೆ ಮೂರ್ತಿಗಳು ಪಾತ್ರರಾಗಿದ್ದಾರೆ. ಸುಮಾರು ನಾಲ್ಕು ದಶಕಗಳವರೆಗೆ ಅವರು ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಸಂಶೋಧನೆಗಳ ಕುರಿತಾದ ಮಹತ್ವದ ಬರಹಗಳನ್ನು ಪ್ರಕಟಿಸಿದ್ದಾರೆ.

    ಚಿದಾನಂದಮೂರ್ತಿಗಳು 25ಕ್ಕೂ ಹೆಚ್ಚು ಪುಸ್ತಕಗಳನ್ನೂ, 400ಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ನಾಟಕ ಇತಿಹಾಸ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. 1960ರ ದಶಕಗಳಲ್ಲಿ ತಾವು ಪ್ರಕಟಿಸಿದ ಹಲವಾರು ಲೇಖನಗಳಲ್ಲೇ ಉಂಬರಿ, ಇರ್, ಡುಂಡುಚಿ, ಅಮ್ಮ, ಅಬ್ಬೆ, ಅಲ್ಲಮ, ಬಾಮಬ್ಬೆ, ಶಬ್ದಗಳನ್ನು ಕನ್ನಡ ಭಾಷೆ, ವ್ಯಾಕರಣ, ಅವಸ್ಥಾಂತರಗಳ ಹಿನ್ನೆಲೆಯಲ್ಲಿ ಮೂರ್ತಿಗಳು ಪರಿಶೀಲಿಸಿದ್ದಾರೆ. ಅನಂತರ ‘ಭಾಷಾ ವಿಜ್ಞಾನದ ಮೂಲತತ್ವಗಳು’ (1965), ‘ವಾಗಾರ್ಥ'(1981) ಎಂಬ ಎರಡು ಮುಖ್ಯವಾದ ಅವರ ಭಾಷಾಸಂಬಂಧವಾದ ಕೃತಿಗಳು ಪ್ರಕಟವಾದವು.

    ಸಾಧನೆ:
    ಕನ್ನಡದ ಬಗೆಗಿನ ಚಿದಾನಂದಮೂರ್ತಿಗಳ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿಗಳಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.

    ಪ್ರಶಸ್ತಿ:
    ಚಿದಾನಂದಮೂರ್ತಿಗಳಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡೆಮಿ ಪುರಸ್ಕಾರಗಳು, ಗೌರವಗಳು ದೊರೆತಿವೆ. ಅಲ್ಲದೇ ಅವರ ಹೆಸರಿನಲ್ಲಿ ‘ಚಿದಾನಂದ ಪ್ರಶಸ್ತಿ’ ಎಂಬುದನ್ನು ಸ್ಥಾಪಿಸಿ ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ 10ರಂದು ಪ್ರತೀವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಅದನ್ನು ನೀಡುತ್ತ ಬಂದಿದ್ದಾರೆ.

  • ಮನೆ ಮನೆಗೆ ಪತ್ರಿಕೆ ಹಂಚಿ ಪರೀಕ್ಷೆ ಶುಲ್ಕ ಕಟ್ಟಿದ್ದ ಮಾಸ್ಟರ್ ಹಿರಣ್ಣಯ್ಯ

    ಮನೆ ಮನೆಗೆ ಪತ್ರಿಕೆ ಹಂಚಿ ಪರೀಕ್ಷೆ ಶುಲ್ಕ ಕಟ್ಟಿದ್ದ ಮಾಸ್ಟರ್ ಹಿರಣ್ಣಯ್ಯ

    ಬೆಂಗಳೂರು: ರಂಗಭೂಮಿ ಕಲಾವಿದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ.

    ಬಾಲ್ಯ:
    ಮಾಸ್ಟರ್ ಹಿರಣ್ಣಯ್ಯ ಅವರು ಫೆಬ್ರವರಿ 15, 1934 ರಂದು ಮೈಸೂರಿನಲ್ಲಿ ಜನಿಸಿದರು. ಇವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಯ ಒಬ್ಬನೇ ಮಗನಾಗಿದ್ದರು. ಹಿರಣ್ಣಯ್ಯ ಅವರು ಇಂಟರ್ ಮೀಡಿಯೆಟ್‍ವರೆಗೆ(ಪಿಯುಸಿ) ವ್ಯಾಸಂಗ ಮಾಡಿದ್ದಾರೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗ ಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಅವರು ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತ್ತಿದ್ದರು.

    ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರ ಪಾಠ ಕೂಡ ಮಾಡಿದ್ದರು. ನಂತರದಲ್ಲಿ ಮೈಸೂರಿಗೆ ಬಂದು ಬನುಮಯ್ಯ ಮಾಧ್ಯಮಿಕ ಶಾಲೆಗೆ ಸೇರಿದ್ದರು. ನಂತರ `ಸಾಧ್ವಿ’, `ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಆ ಸಂಪಾದನೆಯಿಂದ ಶಾಲಾ ಪರೀಕ್ಷೆಗಳ ಶುಲ್ಕಕ್ಕೆ ದಾರಿ ಮಾಡಿಕೊಂಡಿದ್ದರು. ಮುಂದೆ ಇಂಟರ್ ಮೀಡಿಯೆಟ್ ಓದಿಗಾಗಿ ಶಾರದಾವಿಲಾಸ ಕಾಲೇಜು ಸೇರಿದ್ದರು.

    ರಂಗಭೂಮಿ:
    ಇವರ ತಂದೆ ಕೆ. ಹಿರಣ್ಣಯ್ಯನವರು 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ `ವಾಣಿ’ಯಲ್ಲಿ ಹಿರಣ್ಣಯ್ಯನವರು ನಟಿಸುವ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ್ದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತಿದ್ದರು. ಆದರೂ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ `ಆಗ್ರಹ’ ಎಂಬ ನಾಟಕವನ್ನು ಪ್ರದರ್ಶಿಸಿ ಅದ್ಭುತ ಅಭಿನಯದಿಂದ ನಾಟಕ ಗೆದ್ದಿತ್ತು. 1953ರಲ್ಲಿ ತಂದೆ ಕೆ. ಹಿರಣ್ಣಯ್ಯ ಅವರು ನಿಧನರಾದ್ದು, ತಂದೆಯ ನಿಧನದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದ್ದರು. ಆದರೆ ಅದರಲ್ಲೂ ನಷ್ಟ ಅನುಭವಿಸಿದರು. ಬಳಿಕ ತಂದೆ ನಡೆಸುತ್ತಿದ್ದ `ಹಿರಣ್ಣಯ್ಯ ಮಿತ್ರ ಮಂಡಳಿ’ ಯನ್ನು ಪುನಃ ಆರಂಭಿಸಿ `ಲಂಚಾವತಾರ’ ನಾಟಕವನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು `ನಟರತ್ನಾಕರ’ ಎಂದು ಬಿರುದನ್ನು ಪಡೆದುಕೊಂಡರು.

    `ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, `ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, `ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, `ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, `ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ `ದೇವದಾಸಿ’, `ಅನಾಚಾರ’, `ಅತ್ಯಾಚಾರ’, `ಕಲ್ಕ್ಯಾವತಾರ’, `ಅಮ್ಮಾವ್ರ ಅವಾಂತರ’, `ಪುರುಷಾಮೃಗ’ ಹೀಗೆ 25ಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದು ಅಪಾರ ಕೀರ್ತಿಗಳಿಸಿದರು. ಅವರ `ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿದೆ.

    ಪ್ರಶಸ್ತಿ ಗೌರವಗಳು:
    ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಪ್ರಶಸ್ತಿಗಳು ಲಭ್ಯವಾಗಿವೆ. ಇವೆಲ್ಲಕ್ಕೂ ಮಿಗಿಲಾಗಿ ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರನ್ನು ಗೌರವಿಸಿದ್ದಾರೆ.

    ಪ್ರಮುಖ ನಾಟಕಗಳು: ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರಮ ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ಪ್ರಮುಖ ನಾಟಕಗಳಾಗಿವೆ.

    ಚಲನಚಿತ್ರಗಳಲ್ಲಿ ಹಿರಣ್ಣಯ್ಯ:
    ಹಿರಣ್ಣಯ್ಯ ಮಿತ್ರ ಮಂಡಳಿ ಪ್ರಮುಖ ನಾಟಕಗಳಲ್ಲೊಂದಾದ ‘ದೇವದಾಸಿ’ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಅಭಿನಯಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಣ್ಯಕೋಟಿ’, ‘ಅಮೃತ ವಾಹಿನಿ’ ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯನವರು ಅಭಿನಯಿಸಿದ್ದಾರೆ.

    ಪ್ರಶಸ್ತಿ-ಪುರಸ್ಕಾರಗಳ:
    ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಮತ್ತು ನವರತ್ನ ರಾಂ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಕಲಾಗಜ ಸಿಂಹ ಮತ್ತು ನಟ ರತ್ನಾಕರ ಎಂದ ಬಿರುವುದನ್ನು ಪಡೆದುಕೊಂಡಿದ್ದಾರೆ.

  • ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳಿಗೆ ನಾಲ್ಕು ವರ್ಷವಿರುವಾಗಲೇ ಅವರ ಮನೆಗೆ ಹಸ್ತ ಸಾಮುದ್ರಿಕ ಸನ್ಯಾಸಿಯೊಬ್ಬರು ಆಗಮಿಸಿದ್ದರಂತೆ. ಇವರ ಮನೆಯ ಕಟ್ಟೆಯಲ್ಲಿ ಕೂತಿದ್ದ ಸನ್ಯಾಸಿಗೆ ಶಿವಣ್ಣದ ಬಾಲ್ಯದ ತೇಜೋ ವಿಶೇಷತೆಯನ್ನು ಕಂಡು ಸಂತೋಷಗೊಂಡಿದ್ದರು.

    ಬಳಿಕ ಶಿವಣ್ಣನ ಕೈಯನ್ನು ನೋಡಿ, “ಸ್ವಾಮಿ ಇಷ್ಟೊಂದು ಶುಭಲಕ್ಷಣದ ಕೈಯನ್ನು ನಾನು ನೋಡೇ ಇಲ್ಲ”, ಇವನೊಬ್ಬ ಮಹಾಭಾಗ್ಯವಂತ, ಅನ್ನದಾನಿ, ನಾಡೆಲ್ಲ ಇವರಿಂದಲೇ ಬೆಳಗುವುದು, ಇವರು ಕಾಲಜ್ಞಾನಿ. ನಿಮ್ಮ ಕೈಗೆ ಸಿಗುವವನಲ್ಲ, ಲೋಕದ ಸ್ವತ್ತು” ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸನ್ಯಾಸಿಯ ಭವಿಷ್ಯವನ್ನು ಮನೆ ಅವರು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ಬಾಲಕ ಶಿವಯೋಗಿಯಾಗಿ ಬದಲಾಗುತ್ತಾ ಕೊನೆಗೆ ಶಿವಕುಮಾರ ಸ್ವಾಮೀಜಿಯಾಗಿ ಸಿದ್ದಗಂಗಾ ಮಠದ ಅಧಿಕಾರ ಸ್ವೀಕರಿಸಿ ನಡೆದಾಡುವ ದೇವರಾಗಿದ್ದು ಇತಿಹಾಸ.

    ಕುದುರೆ ಸವಾರಿ: ಕುದುರೆ ಸವಾರಿಯನ್ನು ಅತ್ಯಂತ ಪ್ರೀತಿಸುತ್ತಿದ್ದ ಸಿದ್ದಗಂಗಾ ಶ್ರೀ ಅವರ ಬಾಲ್ಯದ ಬದುಕು ಎಲ್ಲರಂತೆ ತುಂಟಾಟದಿಂದಲೇ ಕೂಡಿತ್ತು. ತಂದೆ ಇಲ್ಲದ ವೇಳೆಯಂತೂ ಕುದುರೆಯನ್ನು ಬಿಚ್ಚಿಕೊಂಡು ಹೋಗಿ ಧೂಳೆಬ್ಬಿಸುವಂತೆ ಕುದುರೆ ಸವಾರಿ ಮಾಡುತ್ತಿದ್ದರಂತೆ. ಸಿದ್ದಗಂಗಾ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಶಿವಕುಮಾರ ಸ್ವಾಮೀಜಿಗಳು ಭಕ್ತರ ಮನೆಗೆ ಕುದುರೆ ಮೂಲಕ ಸಂಚರಿಸಿ ಭೇಟಿ ನೀಡುತ್ತಿದ್ದರು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಹಲಸಿನ ಹಣ್ಣನ್ನು ಇಷ್ಟಪಡುತ್ತಿದ್ದ ಶ್ರೀಗಳು ಯಾವಾಗಲೂ ಹಣ್ಣಿನ ಮರವೇರಿ ಹಣ್ಣನ್ನು ಕೊಯ್ದು ತಿನ್ನುತ್ತಿದ್ದರಂತೆ. ವೀರಾಪುರದ ಊರಿನಲ್ಲಿ ಯಾವ ಮರದಲ್ಲಿ ಹಣ್ಣು ಬಿಟ್ರೂ ಮೊದಲ ಪಾಲು ಶ್ರೀಗಳಿಗೆ ಮೀಸಲಾಗಿತ್ತು. ಬಾಲ್ಯದಲ್ಲಿಯೇ ದಾಸೋಹದ ಬಗ್ಗೆ ಅಪರಿಮಿತ ಆಸ್ಥೆ ಇಟ್ಟುಕೊಂಡಿದ್ದ ಶ್ರೀಗಳು ಹಣ್ಣನ್ನು ಇಡೀ ಊರಿನ ಹುಡುಗರಿಗೆ ಹಂಚಿಯೇ ತಿನ್ನುತ್ತಿದ್ದರು.

    ಬಾಲ್ಯದಲ್ಲಿ ತಾಯಿ ನಿಧನ: ನಾಲ್ಕನೇ ತರಗತಿ ಓದುತ್ತಿದ್ದ ಶ್ರೀಗಳ ಬದುಕಿಗೆ ದೊಡ್ಡ ಅಘಾತವಾಗಿದ್ದು, ಎದೆಗವುಚಿಕೊಂಡು ಬದುಕಿನ ಅಷ್ಟು ಸಂಸ್ಕಾರ ಧಾರೆಯೆರೆದ ತಾಯಿಯನ್ನು ಕಳೆದುಕೊಂಡಾಗ. ಸಣ್ಣ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡು ತೀರಾ ಅಘಾತ ಅನುಭವಿಸಿದ್ದ ಶ್ರೀಗಳು ತಮ್ಮನ್ನೇ ತಾವೇ ಸಮಾಧಾನ ಪಡಿಸಿಕೊಂಡು ಅಕ್ಕನಲ್ಲಿಯೇ ತಾಯಿಯ ಪ್ರೀತಿಯನ್ನು ಕಂಡ್ರು. ಮುಂದೆ ಬದುಕಿನಲ್ಲಿ ಅದೆಷ್ಟೋ ಅನಾಥ ಜೀವಗಳಿಗೆ ಗುರುಗಳು ತಾಯಿ ಪ್ರೀತಿಯನ್ನು ಮೊಗೆ ಮೊಗೆದು ಕೊಟ್ಟರು. ಹಸಿದ ಹೊಟ್ಟೆಗೆ ಅಮ್ಮನಂತೆ ಊಟ ಬಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದ ಅನಂತ ಕುಮಾರ್: ಸಾಧನೆಯ ಅನಂತ ಪಥ ಓದಿ

    ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದ ಅನಂತ ಕುಮಾರ್: ಸಾಧನೆಯ ಅನಂತ ಪಥ ಓದಿ

    ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತ ಕುಮಾರ್ ಭಾರತೀಯ ಜನತಾ ಪಕ್ಷದಿಂದ ನಿರಂತರ ಗೆಲುವಿನೂಂದಿಗೆ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದ ಪ್ರಭಾವಿ ರಾಜಕಾರಣಿಯಾಗಿದ್ದರು.

    ರಾಜಕೀಯ ಜೀವನವೇ ವರ್ಣ ರಂಜಿತ. ಬಿಜೆಪಿಯ ಕಟ್ಟಾ ಅನುಯಾಯಿ, ಆರ್‍ಎಸ್‍ಎಸ್ ತತ್ವ ಸಿದ್ಧಾಂತದ ಪ್ರತಿಪಾದಕಾರಾಗಿದ್ದ ಅನಂತ ಕುಮಾರ್ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಂಡಿದ್ದರು. ಭಾರತೀಯ ಜನತಾ ಪಕ್ಷದ ಅನಂತ ಕುಮಾರ್, ಒಬ್ಬ ಯಶಸ್ವಿ ರಾಜಕಾರಣಿ. ಕರ್ನಾಟಕದ ದಕ್ಷಿಣ ಬೆಂಗಳೂರು ಚುನಾವಣಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ರಾಜಕೀಯ ಪಟು ಕೂಡ ಆಗಿದ್ದರು.


    ಜನನ, ಬಾಲ್ಯ, ಹಾಗೂ ವಿದ್ಯಾಭ್ಯಾಸ
    ಅನಂತ ಕುಮಾರ್ ಅವರು ಜುಲೈ 22 1959ರಲ್ಲಿ ಜನಿಸಿದ್ದರು. ತಂದೆ ಶ್ರೀ ಎಚ್.ಎನ್. ನಾರಾಯಣ ಶಾಸ್ತ್ರಿ ಮತ್ತು ತಾಯಿ ಗಿರಿಜಾ. ಅನಂತ ಕುಮಾರ್ ತೇಜಸ್ವಿನಿ ಅವರನ್ನು ಮದುವೆಯಾಗಿದ್ದು ಇವರಿಗೆ ಐಶ್ವರ್ಯ ಮತ್ತು ವಿಜೇತಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ವ್ಯಾಸಂಗ: ಬಿಎ, ಎಲ್‍ಎಲ್‍ಎಮ್ (ಕಾನೂನು ಪದವಿ), ಹುಬ್ಬಳ್ಳಿಯ ಕೆ.ಎಸ್. ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ ಪದವಿ, ಎಲ್.ಎಲ್.ಎಮ್ [ಲಾ] ಪದವಿ, ಜೆ.ಎಸ್.ಎಸ್. ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಅನಂತ ಕುಮಾರ್ ಅವರು ಆರ್‍ಎಸ್‍ಎಸ್ ತತ್ವಗಳಿಂದ ಪ್ರೇರಿತರಾಗಿದ್ದು, ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು.

    ರಾಜಕೀಯ ಜೀವನ
    1985 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಮುಂದೆ ಜನತಾಪಾರ್ಟಿಯ ದೊಡ್ಡ ಹುದ್ದೆಗಳಿಗೆ ಆಯ್ಕೆಯಾದರು. 1985-87 ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು, ಈ ವೇಳೆ ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು 40 ದಿನ ಸೆರೆಮನೆವಾಸದಲ್ಲಿ ಇರಿಸಲಾಗಿತ್ತು. ತಮ್ಮ ಚಿಕ್ಕವಯಸ್ಸಿನಲ್ಲೇ ಕರ್ನಾಟಕ ವಲಯದ ಬಿಜೆಪಿಯ ಜನರಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರು.

    ಬಿಜೆಪಿಯ ಯುವ-ಮೋರ್ಚದಲ್ಲಿ ಅನಂತಕುಮಾರ್ ನಡೆಸಿದ ಕಾರ್ಯವೈಖರಿಯನ್ನು ಗಮನಿಸಿ 1996 ರಲ್ಲಿ ರಾಷ್ಟ್ರಮಟ್ಟದ ರಾಜಕೀಯವಲಯದಲ್ಲಿ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ರಾಮಜನ್ಮಭೂಮಿಯ ಕಾರಣಕ್ಕೆ ಹೋರಾಟದಲ್ಲಿ ಕರ್ನಾಟಕದಿಂದ ಅನಂತಕುಮಾರ್ ಅವರನ್ನು ಆಯ್ಕೆ ಮಾಡಿ ಪ್ರತಿನಿಧಿಸಿದ್ದರು. 1996 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಮೊದಲ ಪ್ರಯತ್ನದಲ್ಲೇ ಸಂಸದರಾಗಿ ಅನಂತಕುಮಾರ್ ಆಯ್ಕೆಯಾಗಿದ್ದರು.

    1998 ರಲ್ಲಿ ಮತ್ತೆ ಅನಂತ ಕುಮಾರ್ ಪುನರ್ ಆಯ್ಕೆಯಾಗಿದ್ದು, 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ನಾಗರೀಕ ವಿಮಾನಯಾನ ಮಂತ್ರಿ ಸ್ಥಾನ ಪಡೆದುಕೊಂಡಿದ್ದರು. ಅಟಲ್ ಸರ್ಕಾರದ ಮಂತ್ರಿ ಮಂಡಲದಲ್ಲಿ ಕಿರಿಯ ವಯಸ್ಸಿನ ಮಂತ್ರಿಯಾಗಿದ್ದು, ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ರವರ ಮಂತ್ರಿಮಂಡಲದಲ್ಲಿ ವಿಮಾನಯಾನ ಇಲಾಖೆಯ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅತಿ ಚಿಕ್ಕಪ್ರಾಯದ ಮಂತ್ರಿಯಾಗಿ ಆಯ್ಕೆ ಎಂಬ ಪ್ರಶಂಸೆಗೆ ಭಾಜನರಾಗಿದ್ದರು. 1999 ರಲ್ಲಿ ಮತ್ತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು.

    ವಾಜಪೇಯಿ ಸರ್ಕಾರದಲ್ಲಿ ಮತ್ತೆ ಮಂತ್ರಿ ಸ್ಥಾನ ಪಡೆದುಕೊಂಡಿದ್ದು, ಪ್ರವಾಸೋದ್ಯಮ, ಕ್ರೀಡೆ, ಯುವಜನ ಮತ್ತು ಸಂಸ್ಕೃತಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅನಂತ ಕುಮಾರ್ ಅವರು 2004ರಲ್ಲಿ ನಾಲ್ಕನೇ ಬಾರಿಗೆ ಮತ್ತೆ ಆಯ್ಕೆಯಾಗಿದ್ದರು. 1996ರಿಂದ 2014ರವರೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತ 6 ಬಾರಿ ಆಯ್ಕೆಯಾಗಿದ್ದರು.

    * 1982-85 – ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ
    * 1985-87 – ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ
    * 1987-88 – ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ
    * 1988-95 – ಭಾರತೀಯ ಜನತಾ ಪಕ್ಷದ ಜನರಲ್ ಸೆಕ್ರೆಟರಿ
    * 1995-98 – ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ

    * 1996 – ಬಿಜೆಪಿಯಿಂದ ಲೋಕ ಸಭೆಗೆ ಆಯ್ಕೆ
    * 1996-97 – ಇಂಡಿಯನ್ ಇನ್ಸ್ಟಿಟ್ಯೂಟ್ ನ ಸೈನ್ಸ್ ಸದಸ್ಯರು
    * 1996-97 – ಕೆಂದ್ರ ಕೈಗಾರಿಕಾ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸದಸ್ಯ
    * 1996-97 – ಕೇಂದ್ರ ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯ
    * 1998 – ಮತ್ತೆ ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
    * 1998-99 – ಕೇಂದ್ರ ವಿಮಾನ ಯಾನ ಸಚಿವರಾಗಿ ಯಶಸ್ವಿ ಕಾರ್ಯ

    * 1999-ಅಕ್ಟೋಬರ್99 – ಪ್ರವಾಸೋದ್ಯಮ ಇಲಾಖೆ ಸಚಿವ (ಹೆಚ್ಚುವರಿ)
    * 1999 – ಲೋಕ ಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮತ್ತೆ ಆಯ್ಕೆ
    * 1999-2000 – ಸಂಸ್ಕೃತಿ, ಯುವಜನ ಮತ್ತು ಕ್ರೀಡಾ ಸಚಿವ- ಕ್ಯಾಬಿನೆಟ್
    * 2000-2001 – ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ

    * 2001 – ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಸಚಿವ- (ಗ್ರಾಮೀಣಾಭಿವೃದ್ಧಿ ಸಚಿವ)
    * 2003-04 – ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ
    * 2004 – ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
    * 2004 – ಕಲ್ಲಿದ್ದಲು ಮತ್ತು ಉಕ್ಕು ಸಮಿತಿ ಅಧ್ಯಕ್ಷ
    * 2004 – ಸಂಸದೀಯ ಸಾಮಾನ್ಯ ಸಂಗತಿಗಳ ಸಮಿತಿಯ ಸದಸ್ಯ
    * 2005 – ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
    * 2007 – ಕೇಂದ್ರ ಸಂಸದೀಯ ಹಣಕಾಸ ಸಮಿತಿ ಅಧ್ಯಕ್ಷ
    * 2007 – ಕೇಂದ್ರ ಸಲಹಾ ಸಮಿತಿ ಸದಸ್ಯ
    * 2009 – ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
    * 2013 – ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ-(ರಸಗೊಬ್ಬರ ಹಾಗೂ ಸಂಸದೀಯ ಸಚಿವ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

    https://www.youtube.com/watch?v=O6nPdRwhMSg