Tag: ಬಾಲಾಕೋಟ್ ಏರ್ ಸ್ಟ್ರೈಕ್

  • ಏರ್‌ಸ್ಟ್ರೈಕ್‌ನಲ್ಲಿ ರಫೇಲ್ ಇದ್ದಿದ್ರೆ ಇಲ್ಲಿಂದಲೇ ದಾಳಿ ನಡೆಸಬಹುದಿತ್ತು: ರಾಜನಾಥ್ ಸಿಂಗ್

    ಏರ್‌ಸ್ಟ್ರೈಕ್‌ನಲ್ಲಿ ರಫೇಲ್ ಇದ್ದಿದ್ರೆ ಇಲ್ಲಿಂದಲೇ ದಾಳಿ ನಡೆಸಬಹುದಿತ್ತು: ರಾಜನಾಥ್ ಸಿಂಗ್

    ಚಂಡೀಗಢ: ಬಾಲಾಕೋಟ್ ದಾಳಿ ವೇಳೆ ನಮ್ಮ ಬಳಿ ರಫೇಲ್ ಇದ್ದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕಿರಲಿಲ್ಲ. ಇಲ್ಲಿಂದಿಲೇ ದಾಳಿ ಮಾಡಿ ಉಗ್ರರ ಅಡಗುದಾಣಗಳನ್ನು ನಾಶ ಮಾಡಬಹುದಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಇಂದು ಹಯಾಣದ ಕರ್ನಲ್‍ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಫೆಬ್ರವರಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸುವ ಸಂದರ್ಭದಲ್ಲಿ ರಫೇಲ್ ಇದ್ದಿದ್ದರೆ, ನಾವು ಪಾಕಿಸ್ತಾನಕ್ಕೆ ಹೋಗಿ ದಾಳಿ ನಡೆಸಬೇಕಿರಲಿಲ್ಲ. ಬದಲಿಗೆ ಭಾರತದಲ್ಲಿಯೇ ಕುಳಿತು ಉಗ್ರರ ಅಡಗುದಾಣಗಳನ್ನು ನಿರ್ಮೂಲನೆ ಮಾಡಬಹುದಿತ್ತು ಎಂದು ತಿಳಿಸಿದರು.

    ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಪೈಕಿ ಆಯುಧ ಪೂಜೆಯಂದು ಮೊದಲ ಹಂತದಲ್ಲಿ ಒಂದು ವಿಮಾನವನ್ನು ಫ್ರಾನ್ಸ್‍ನಿಂದ ಅಧಿಕೃತವಾಗಿ ಸ್ವೀಕರಿಸಿದ್ದರು. ಅದೇ ವೇಳೆ ರಫೇಲ್ ಯುದ್ಧ ವಿಮಾನಕ್ಕೆ ಪೂಜೆಯನ್ನು ಸಹ ರಾಜನಾಥ್ ಸಿಂಗ್ ಮಾಡಿದ್ದರು. ಆರ್‍ಬಿ-001 ಸಂಖ್ಯೆಯ 36 ಫ್ರೆಂಚ್ ನಿರ್ಮಿತ ರಫೇಲ್ ಫೈಟರ್ ಜೆಟ್‍ಗಳ ಪೈಕಿ ಮೊದಲ ಹಂತದಲ್ಲಿ ಒಂದು ವಿಮಾನವನ್ನು ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.

    2016ರಲ್ಲಿ ಭಾರತವು 36 ರಫೇಲ್ ವಿಮಾನಗಳನ್ನು ಖರೀದಿಸಲು ಫ್ರಾನ್ಸ್‍ನೊಂದಿಗೆ 59 ಸಾವಿರ ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಲ್ಲಿ ಮೊದಲ ಬ್ಯಾಚ್ 2020ರ ವೇಳೆಗೆ ಭಾರತಕ್ಕೆ ಹಸ್ತಾಂತರಿಸುವುದಾಗಿ ಕಂಪನಿ ತಿಳಿಸಿತ್ತು. 2022ರ ವೇಳೆಗೆ ಎಲ್ಲ 36 ಜೆಟ್‍ಗಳು ಭಾರತವನ್ನು ತಲುಪುವ ನಿರೀಕ್ಷೆ ಇದ್ದು, ಐಎಎಫ್ ಡೆಪ್ಯೂಟೇಷನ್ ಸಿದ್ಧವಾಗಲಿದೆ. ಏಪ್ರಿಲ್ ಅಥವಾ ಮೇ ವೇಳೆಗೆ ಏಳು ರಫೇಲ್ ಜೆಟ್‍ಗಳು ಭಾರತಕ್ಕೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ.

    ರಫೇಲ್ ವಿಶೇಷತೆ ಏನು?
    ಎರಡು ಎಂಜಿನ್, ಎರಡು ಸೀಟ್ ಗಳನ್ನು ಹೊಂದಿರುವ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮಥ್ರ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮಿ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮಥ್ರ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ವೈರಿಗಳ ನೆಲೆಯ ಮೇಲೆ 100 ಕಿ.ಮೀ. ಎತ್ತರದಿಂದಲೇ ದಾಳಿ ಮಾಡುವ ಸಾಮಥ್ರ್ಯ ರಫೇಲ್ ಯುದ್ಧ ವಿಮಾನಕ್ಕಿದೆ. ಜೊತೆಗೆ 50,000 ಅಡಿ ಎತ್ತರದಲ್ಲಿ ಹಾಡುವ ಸಾಮಥ್ರ್ಯ ಹೊಂದಿದೆ.

    ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದ್ದು, ಭಾರತ ಅಲ್ಲದೇ ಈಜಿಪ್ಟ್, ಕತಾರ್ ದೇಶಗಳು ರಫೇಲ್ ಖರೀದಿ ಸಂಬಂಧ ಡಸಾಲ್ಟ್ ಕಂಪನಿಯ ಜೊತೆ ಮಾತುಕತೆ ನಡೆಸಿವೆ.

    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗೆ ಅನುಗುಣವಾಗಿ ರಫೇಲ್ ವಿಮಾನ ತಯಾರಾಗುತ್ತಿದೆ.

    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂಕೋರ್ಟ್ ಹೇಳಿದೆ ಅಂತ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಈ ವಿಚಾರವಾಗಿ ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಮುಂದೆ ವಿಷಾಧ ವ್ಯಕ್ತಪಡಿಸಿದ್ದರು.

  • ಬಾಲಕೋಟ್ ಮೀರಿ ಯಾಕೆ ಹೋಗಬಾರದು – ಬಿಪಿನ್ ರಾವತ್ ಪ್ರಶ್ನೆ

    ಬಾಲಕೋಟ್ ಮೀರಿ ಯಾಕೆ ಹೋಗಬಾರದು – ಬಿಪಿನ್ ರಾವತ್ ಪ್ರಶ್ನೆ

    – 500 ಉಗ್ರರು ಭಾರತದೊಳಗೆ ನುಸುಳಲು ಸಂಚು

    ಚೆನ್ನೈ: ನಾವು ಈ ಹಿಂದೆ ಕೈಗೊಂಡ ರೀತಿಯ ಕ್ರಮವನ್ನೇ ಯಾಕೆ ಪುನರಾವರ್ತಿಸಬೇಕು? ಅದನ್ನು ಮೀರಿ ಯಾಕೆ ಹೋಗಬಾರದು ಎಂದು ಪ್ರಶ್ನಿಸುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಇನ್ನೂ ದೊಡ್ಡ ಆಘಾತ ನೀಡುವ ಸುಳಿವು ನೀಡಿದ್ದಾರೆ.

    ಬಾಲಕೋಟ್‍ನ ಉಗ್ರರ ಅಡಗುತಾಣವನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ ಎಂಬ ವರದಿಯ ಬೆನ್ನಲ್ಲೇ ಸೇನಾ ಮುಖ್ಯಸ್ಥರು ಈ ಕುರಿತು ಇಂದು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

    ಈ ವೇಳೆ ಪಾಕಿಸ್ತಾನದ ಪುಂಡಾಟವನ್ನು ತಣ್ಣಗಾಗಿಸಲು ಮತ್ತೊಂದು ಸ್ಟ್ರೈಕ್ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇ ರೀತಿಯ ಸ್ಟ್ರೈಕ್‍ಗಳನ್ನು ಯಾಕೆ ಮಾಡಬೇಕು ಅದನ್ನು ಮೀರಿ ಏಕೆ ಹೋಗಬಾರದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದವರು ಊಹಿಸುವುದನ್ನು ಮುಂದುವರಿಸಲಿ ಬಿಡಿ ಎಂದು ಹರಿಹಾಯ್ದರು.

    ಫೆಬ್ರವರಿಯಲ್ಲಿ ಭಾರತ ನಡೆಸಿದ ಏರ್ ಸ್ಟ್ರೈಕ್ ನಂತರ ನಾಶವಾಗಿದ್ದ ಪಾಕಿಸ್ತಾನದ ಬಾಲಕೋಟ್‍ನ ಭಯೋತ್ಪಾದನಾ ಶಿಬಿರವನ್ನು ಇದೀಗ ಮತ್ತೆ ಸಕ್ರಿಯಗೊಳಿಸಲಾಗಿದೆ ಎಂದು ಸೇನಾ ಮುಖ್ಯಸ್ಥರು ಇದೇ ವೇಳೆ ಸ್ಪಷ್ಟಪಡಿಸಿದರು.

    ಬಾಲಕೋಟ್‍ನ್ನು ಪಾಕಿಸ್ತಾನ ಇತ್ತೀಚೆಗೆ ಮತ್ತೆ ಸಕ್ರಿಯಗೊಳಿಸಿದೆ. ಇದರರ್ಥ ಭಾರತ ನಡೆಸಿದ್ದ ಏರ್ ಸ್ಟ್ರೈಕ್‍ನಿಂದಾಗಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ಅಡಗುತಾಣಗಳು ಹಾಗೂ ತರಬೇತಿ ಕೇಂದ್ರಗಳಿಗೆ ಹಾನಿಯಾಗಿತ್ತು. ಬಾಲಕೋಟ್ ಮೇಲೆ ಪರಿಣಾಮ ಬೀರಿ ನಾಶವಾಗಿತ್ತು ಎಂಬುದನ್ನು ತೋರಿಸುತ್ತದೆ. ಹೀಗಾಗಿಯೇ ಅಲ್ಲಿಂದ ಜನರು ದೂರ ಹೋಗಿದ್ದರು. ಇದೀಗ ಮತ್ತೆ ಸಕ್ರಿಯವಾಗಿದ್ದಾರೆ. ಈ ಮೂಲಕ ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಿಂದ ಬಾಲಾಕೋಟ್‍ನ ಉಗ್ರರ ತಾಣಗಳು ನಾಶವಾಗಿದ್ದವು ಎಂದರ್ಥ ಎಂದು ಜನರಲ್ ಬಿಪಿರ್ ರಾವತ್ ತಿಳಿಸಿದರು.

    ಸುಮಾರು 500ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ. ಭಯೋತ್ಪಾದಕರನ್ನು ನಮ್ಮ ಭೂಪ್ರದೇಶಕ್ಕೆ ನುಗ್ಗಿಸಲು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದೆ. ಆದರೆ ಕದನ ವಿರಾಮವನ್ನು ಹೇಗೆ ಎದುರಿಸಬೇಕೆಂಬುದು ನಮಗೆ ತಿಳಿದಿದೆ. ನಮ್ಮ ಸೈನಿಕರನ್ನು ಪಾಕಿಸ್ತಾನವನ್ನು ಹೇಗೆ ನಡೆಸಿಕೊಳ್ಳಬೇಕು, ಹೇಗೆ ಕ್ರಮ ಕೈಗೊಳ್ಳಬೇಕೆಂಬುದನ್ನು ಅರಿತಿದ್ದಾರೆ. ನಾವು ಎಚ್ಚರವಾಗಿರುತ್ತೇವೆ. ಒಳನುಸುಳುವಿಕೆಯ ಪ್ರಯತ್ನಗಳನ್ನು ವಿಫಲಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

    ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಬೆಂಗಾವಲು ಪಡೆಯ ವಾಹನದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ವಾಯು ಪಡೆಯು ಬಾಲಕೋಟ್‍ನ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿತ್ತು. ಹಾನಿಯಿಂದಾಗಿ ಅಲ್ಲಿನ ಉಗ್ರರು ಸ್ಥಳಾಂತರಗೊಂಡಿದ್ದರು.