Tag: ಬಾಲರಾಮ

  • ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

    ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

    ಅಯೋಧ್ಯೆ: ಬಾಲರಾಮನ ಹಣೆಯ ಮೇಲಿನ ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ನಾನು ತಲೆಬಾಗುತ್ತೇನೆ ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ (Ayodhya) ಇಂದು ರಾಮಲಲ್ಲಾನ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದ ಅವರು, ರಾಮನ ದರ್ಶನಕ್ಕೆ ಲಕ್ಷಾಂತರ ಜನರು ಬರುತ್ತಿದ್ದಾರೆ. ಶ್ರೀರಾಮನ ಆಶೀರ್ವಾದದಿಂದ ನಾನು ಕೂಡ ಇಂದು ನನ್ನ ಕುಟುಂಬದೊಂದಿಗೆ ರಾಮಲಲ್ಲಾನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

    ಇದೇ ವೇಳೆ ಸೂರ್ಯ ತಿಲಕದ (Surya Tilak) ಬಗ್ಗೆ ಮಾತನಾಡಿ, ಇಂದಿನ ಸೂರ್ಯ ತಿಲಕವನ್ನು ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳ ಮುಂದೆ ನಾನು ತಲೆಬಾಗಲು ಬಯಸುತ್ತೇನೆ. ಈ ಕ್ಷಣವನ್ನು ವೀಕ್ಷಿಸಲು ಸಾಧ್ಯವಾಗಿದ್ದು ನನ್ನ ಅದೃಷ್ಟವೇ ಸರಿ ಎಂದು ಅರುಣ್‌ ಯೋಗಿರಾಜ್‌ ತಿಳಿಸಿದರು. ಇದನ್ನೂ ಓದಿ: 500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

    ವಿಜ್ಞಾನಿಗಳು ನಾಲ್ಕು ವರ್ಷಗಳಿಂದ ಸೂರ್ಯ ತಿಲಕವನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ವಿಜ್ಞಾನಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತು. ನಾನು ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾವು ಇದನ್ನೆಲ್ಲಾ ಕಥೆಗಳಲ್ಲಿ ಮಾತ್ರ ಕೇಳಿದ್ದೇವೆ, ಆದರೆ ಇಂದು ನಮ್ಮ ವಿಜ್ಞಾನಿಗಳು ಇದನ್ನು ಸಾಧ್ಯವಾಗಿಸಿದ್ದಾರೆ ಎಂದು ಅರುಣ್‌ ಅವರು ವಿಜ್ಞಾನಿಗಳ ಕಾರ್ಯವನ್ನು ಶ್ಲಾಘಿಸಿದರು.

    500 ವರ್ಷದ ಬಳಿಕ ಶ್ರೀರಾಮನ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿಯ (Rama Navami) ದಿನವಾದ ಇಂದು ಬಾಲರಾಮನಿಗೆ ಸೂರ್ಯ ಅಭಿಷೇಕ ನಡೆಯಿತು. ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು.

    ರಾಮ ಮಂದಿರದಲ್ಲಿ (Ram Mandir) ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು. ಈ ಕ್ಷಣಕ್ಕೆ ಸಾಕ್ಷಿಯಾಗಲು ಅರುಣ್‌ ಯೋಗಿರಾಜ್‌ ಅವರು ತಮ್ಮ ಕುಟುಂಬದೊಂದಿಗೆ ಮಂಗಳವಾರ ರಾತ್ರಿಯೇ ಅಯೋಧ್ಯೆಗೆ ಆಗಮಿಸಿದ್ದರು.

  • ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

    ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

    ಅಯೋಧ್ಯೆ: ಬಾಲರಾಮನ ಮಂದಿರಕ್ಕೆ (Ayodhya Ram Mandir)  25 ಕೆಜಿ ಚಿನ್ನ (Gold) ಮತ್ತು ಬೆಳ್ಳಿಯ ಆಭರಣ ಸೇರಿದಂತೆ ಸುಮಾರು 25 ಕೋಟಿ ರೂ. ದೇಣಿಗೆ ಬಂದಿದೆ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ರಾಮಮಂದಿರ ಟ್ರಸ್ಟ್‌ನ ಅಧಿಕಾರಿ ಪ್ರಕಾಶ್ ಗುಪ್ತಾ ಮಾತನಾಡಿ, 25 ಕೋಟಿ ರೂ. ಮೊತ್ತದಲ್ಲಿ ಚೆಕ್‍ಗಳು, ಡ್ರಾಫ್ಟ್‌ಗಳು ಮತ್ತು ದೇವಸ್ಥಾನದ ಟ್ರಸ್ಟ್‌ನ ಕಚೇರಿಯಲ್ಲಿ ಠೇವಣಿ ಮಾಡಿದ ನಗದು ಮತ್ತು ಪೆಟ್ಟಿಗೆಗಳಲ್ಲಿ ಹಾಕಲಾದ ಕಾಣಿಕೆ ಸೇರಿದೆ. ಇನ್ನೂ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಮಾಡಿದ ಆನ್‍ಲೈನ್ ವಹಿವಾಟಿನ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಜನಸಾಗರ- ರಾಮಲಲ್ಲಾನ ದರ್ಶನಕ್ಕೆ ಓಡೋಡಿ ಬರುತ್ತಿರೋ ಭಕ್ತರು

    ಜನವರಿ 23 ರಿಂದ ಒಟ್ಟು 60 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. ರಾಮಭಕ್ತರ ಶ್ರದ್ಧೆ ಎಷ್ಟರಮಟ್ಟಿಗಿದೆ ಎಂದರೆ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಬಳಸಲಾಗದಷ್ಟು ಬೆಳ್ಳಿ ಮತ್ತು ಚಿನ್ನದಿಂದ ಮಾಡಿದ ವಸ್ತುಗಳನ್ನು ರಾಮಲಲ್ಲಾಗೆ ದಾನ ಮಾಡುತ್ತಿದ್ದಾರೆ. ಇಷ್ಟಾದರೂ ಭಕ್ತರ ಭಕ್ತಿಯನ್ನು ಪರಿಗಣಿಸಿ ರಾಮಮಂದಿರ ಟ್ರಸ್ಟ್ ಚಿನ್ನಾಭರಣ, ಪಾತ್ರೆ, ಸಾಮಗ್ರಿಗಳನ್ನು ಸ್ವೀಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಇನ್ನೂ ರಾಮನವಮಿಯಂದು 50 ಲಕ್ಷ ಜನ ಭಕ್ತರು ಸೇರುವ ಸಾಧ್ಯತೆ ಇದೆ. ಆ ಸಮಯದಲ್ಲಿ ದೇಣಿಗೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ವೇಳೆ ಭಕ್ತರು ನೀಡಿದ ಕಾಣಿಕೆಯನ್ನು ಎಣಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ಸ್ವಯಂಚಾಲಿತ ಹೈಟೆಕ್ ಯಂತ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದ್ದಾರೆ.

    ರಶೀದಿಗಳನ್ನು ನೀಡಲು ಟ್ರಸ್ಟ್‌ನಿಂದ ಹತ್ತಾರು ಗಣಕೀಕೃತ ಕೌಂಟರ್‌ಗಳನ್ನು ಮಾಡಲಾಗಿದೆ. ರಾಮಮಂದಿರ ಟ್ರಸ್ಟ್‌ನಿಂದ ದೇವಾಲಯದ ಆವರಣದಲ್ಲಿ ಹೆಚ್ಚುವರಿ ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗುತ್ತಿದೆ. ಶೀಘ್ರದಲ್ಲೇ ರಾಮಮಂದಿರದ ಆವರಣದಲ್ಲಿ ದೊಡ್ಡ ಮತ್ತು ಸುಸಜ್ಜಿತ ಎಣಿಕೆ ಕೊಠಡಿಯನ್ನು ನಿರ್ಮಿಸಲಾಗುತ್ತದೆ. ಇನ್ನೂ ರಾಮಲಲ್ಲಾಗೆ ಉಡುಗೊರೆಯಾಗಿ ಸ್ವೀಕರಿಸಿದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮತ್ತು ಅವುಗಳ ನಿರ್ವಹಣೆಗೆ ಭಾರತ ಸರ್ಕಾರದ ಟಂಕಸಾಲೆಗೆ ಹಸ್ತಾಂತರಿಸಲಾಗಿದೆ ಎಂದು ರಾಮಮಂದಿರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ.

    ರಾಮಮಂದಿರದ ದೇಣಿಗೆ, ಕೊಡುಗೆಗಳು, ಚೆಕ್‍ಗಳು, ಡ್ರಾಫ್ಟ್‌ಗಳು ಮತ್ತು ನಗದು ಸಂಗ್ರಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಎಸ್‍ಬಿಐ ತೆಗೆದುಕೊಳ್ಳುತ್ತದೆ. ದೇಣಿಗೆ ನೀಡಿದ ಹಣವನ್ನು ಪ್ರತಿದಿನ ಎರಡು ಪಾಳಿಗಳಲ್ಲಿ ಎಣಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಆಸನಗಳು ಬಹುತೇಕ ಭರ್ತಿ – ಬೆಂಗಳೂರು ಟು ಅಯೋಧ್ಯೆ ವಿಮಾನ ಪ್ರಯಾಣಕ್ಕೆ ಭರ್ಜರಿ ಸ್ಪಂದನೆ

  • ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

    ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

    – ಚಳಿಯನ್ನೂ ಲೆಕ್ಕಿಸದೇ ರಾಮನ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು

    ಅಯೋಧ್ಯೆ: 500 ವರ್ಷಗಳ ಬಳಿಕ ಭಗವಾನ್‌ ರಾಮ (Ayodhya Ram Mandir) ಸೋಮವಾರ ತನ್ನ ವಾಸಸ್ಥಾನಕ್ಕೆ ಮರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಶಾಸ್ತ್ರೋಕ್ತವಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾಗಿದೆ (Pran Prathistha ceremony). ಇದಾದ ಬಳಿಕ ಸಾವರ್ಜನಿಕರ ದರ್ಶನಕ್ಕೆ ಅನುಮತಿ ನೀಡಲಾಯಿತು.

    ಸಾರ್ವಜನಿಕರಿಗೆ ರಾಮಮಂದಿರದಲ್ಲಿ ಬಾಲರಾಮನ (Ram Lalla) ದರ್ಶನಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಭಕ್ತರ ದಂಡೇ ಹರಿದು ಬರಲಾರಂಭಿಸಿದೆ. ಸೋಮವಾರ ರಾತ್ರಿಯಿಂದಲೇ ಅಯೋಧ್ಯಾಧಾಮದಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಅಲ್ಲದೇ ತೀವ್ರ ಚಳಿಯನ್ನೂ ಲೆಕ್ಕಿಸದೇ ದೇವಸ್ಥಾನದ ಹೊರಗಡೆಯೂ ಸಾವಿರಾರು ಜನ ಜಮಾಯಿಸತೊಡಗಿದರು.

    ತಡರಾತ್ರಿಯಿಂದಲೇ ರಾಮ ಮಂದಿರದ ಮುಖ್ಯ ದ್ವಾರದ ಹೊರಗೆ ಭಕ್ತಾದಿಗಳ ಉದ್ದನೆಯ ಸಾಲು ಆರಂಭವಾಗಿತ್ತು. ಬೆಳಗ್ಗಿನ ಜಾವ 2 ಗಂಟೆಯಿಂದಲೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಾರಂಭಿಸಿದರು. ನೆರೆದಿದ್ದ ಜನರು ದ್ವಾರದ ಮುಂದೆ ʼಜೈ ಶ್ರೀ ರಾಮ್ʼ ಎಂದು ಘೋಷಣೆ ಕೂಗುತ್ತಾ ದೇಗುಲದೊಳಗೆ ಪ್ರವೇಶಿಸುತ್ತಿದ್ದಾರೆ. ದೇಶಾದ್ಯಂತ ಭಕ್ತರನ್ನು ಒಟ್ಟುಗೂಡಿಸುವ ಪ್ರಕ್ರಿಯೆ ಮುಂದುವರಿದಿದೆ. ಜೊತೆಗೆ ಅಯೋಧ್ಯೆಯ ಸ್ಥಳೀಯ ನಿವಾಸಿಗಳು ಕೂಡ ಬಾಲರಾಮನ ದರ್ಶನ ಮತ್ತು ಪೂಜೆಗಾಗಿ ಆಗಮಿಸುತ್ತಿದ್ದಾರೆ. ರಾಮಪಥದಲ್ಲಿ ಕಾಲಿಡಕ್ಕೂ ಜಾಗವಿಲ್ಲದಷ್ಟು ಭಕ್ತರು ನೆರೆದಿದ್ದಾರೆ. ಕ್ಷಣಕ್ಷಣಕ್ಕೂ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

    ರಾಮಮಂದಿರ ಉದ್ಘಾಟನೆಗೆ ಸುಮಾರು 2 ವಾರ ಇರುವಾಗಲೇ ಅಯೋಧ್ಯೆಯಲ್ಲಿ ಹೋಟೆಲ್ ಬುಕಿಂಗ್ 80%ರಷ್ಟು ಹೆಚ್ಚಾಗಿತ್ತು. ಹೋಟೆಲ್‌ನಲ್ಲಿ ಒಂದು ದಿನದ ಕೋಣೆಯ ಬೆಲೆ ಸಾರ್ವಕಾಲಿಕ ಗರಿಷ್ಠ ದರವನ್ನು ತಲುಪಿದೆ, ಅದು ಈಗ ಐದು ಪಟ್ಟು ಹೆಚ್ಚಾಗಿದೆ. ಕೆಲ ಐಷಾರಾಮಿ ಕೊಠಡಿಗಳ ಬಾಡಿಗೆ 1 ಲಕ್ಷ ರೂ.ಗೆ ಏರಿದೆ. ವಿಶೇಷವೆಂದರೆ ಇಷ್ಟು ದರ ಏರಿಕೆಯ ನಡುವೆಯೂ ಹೋಟೆಲ್ ಬುಕ್ಕಿಂ ಗ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

  • 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    ಗಾಂಧಿನಗರ: ಗುಜರಾತ್‍ನ ಸೂರತ್ (Surat) ನಗರದ ಕಲಾವಿದರೊಬ್ಬರು 9,999 ವಜ್ರಗಳನ್ನು ಬಳಸಿ ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಕಲಾಕೃತಿಯನ್ನು ರಚಿಸಿದ್ದಾರೆ. ಈ ವೀಡಿಯೋ ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

    ಕಲಾವಿದ ಚಿಕ್ಕ ಚಿಕ್ಕ ವಜ್ರಗಳನ್ನು ಬಳಸಿ ಕಪ್ಪು ಬೋರ್ಡ್ ಮೇಲೆ ರಾಮಮಂದಿರದ ಕಲಾಕೃತಿ ರಚಿಸಿದ್ದಾರೆ. ಈ ಬೋರ್ಡ್ ಮೇಲ್ಭಾಗದಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ. ಮೇಲಿನ ಬಲ ಮೂಲೆಯಲ್ಲಿ ಭಗವಾನ್ ರಾಮನ ಚಿತ್ರವಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ

    ಇನ್ನೂ ಸೂರತ್‍ನಲ್ಲಿ ವಿಶೇಷ ಸೀರೆಯನ್ನೂ ಸಹ ಸಿದ್ಧಪಡಿಸಲಾಗಿತ್ತು. ಇದನ್ನು ದೇವಾಲಯದ ಟ್ರಸ್ಟ್‌ನ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಸೀರೆಯ ಮೇಲೆ ಭಗವಾನ್ ರಾಮನ ಚಿತ್ರ ಮತ್ತು ಅದರ ಮೇಲೆ ಅಯೋಧ್ಯೆಯ ದೇವಾಲಯವನ್ನು ಮುದ್ರಿಸಲಾಗಿದೆ. ಈ ಸೀರೆಯೂ ಸೀತಾ ಮಾತೆಗೆ ಮೀಸಲಿಡಲಾಗಿದೆ.

    ಇಲ್ಲಿನ ವಜ್ರದ ವ್ಯಾಪಾರಿಯೊಬ್ಬರು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕಿಲೋಗ್ರಾಂಗಳಷ್ಟು ಬೆಳ್ಳಿಯನ್ನು ಬಳಸಿ ರಾಮಮಂದಿರದ ಆಕೃತಿಯ ವಿಶೇಷ ನೆಕ್ಲೇಸ್ ಸಹ ಮಾಡಿದ್ದಾರೆ. ಈ ಹಾರವನ್ನು ರಾಮಮಂದಿರ ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಲಾಗಿದೆ.

    ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ (Pran Pratishtha) ಸಕಲ ಸಿದ್ಧತೆಗಳು ಆಗಿದೆ. ಸೋಮವಾರ ಶಾಸ್ತ್ರೋಕ್ತವಾಗಿ ಸಮಾರಂಭ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ-ವಿದೇಶಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

  • Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    ಅಯೋಧ್ಯೆ: 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (Sri Ram Mandir) ಉದ್ಘಾಟನೆ ನೆರವೇರಲಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಮಲಲ್ಲಾನ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ.

    ಹೌದು. ಜನವರಿ 22 ರಂದು ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲು ಸಜ್ಜಾಗಿದೆ. ಇದರೊಂದಿಗೆ ರಾಮಲಲ್ಲಾನ ಜಲಾಭಿಷೇಕಕ್ಕೆ ನೇಪಾಳದ ಪವಿತ್ರ ನದಿಗಳಿಂದಲೇ (Nepal Rivers Water) ನೀರನ್ನು ತರಿಸಿರುವುದು ವಿಶೇಷ, ಇದಕ್ಕೆ ಕಾರಣವೂ ಇದೆ.

    ನೇಪಾಳ ನದಿಗಳ ನೀರು ಏಕೆ?
    ಅಯೋಧ್ಯೆಗೂ, ನೆರೆಯ ರಾಷ್ಟ್ರ ನೇಪಾಳಕ್ಕೂ ವಿಶೇಷ ಸಂಬಂಧವಿದೆ. ನೇಪಾಳದಲ್ಲಿ ಜನಿಸಿದ ಸೀತಾಮಾತೆಯನ್ನು ಭಗವಾನ್ ಶ್ರೀರಾಮನು ವರಿಸಿದ್ದ. ಅಂದಿನಿಂದ ಭಾರತ-ನೇಪಾಳದ ಸಂಬಂಧವಿದೆ, ಇದನ್ನು ರೋಟಿ-ಭೇಟಿ ಸಂಬಂಧ ಅಂತಲೂ ಕರೆಯುತ್ತಾರೆ. ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನೆಯಾಗುತ್ತಿದ್ದು ಬಾಲರಾಮನ (Ram Lalla) ಅಭಿಷೇಕಕ್ಕೆ ಸೀತಾಮಾತೆಯ ತವರು ನೇಪಾಳದಿಂದ ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ ಎಂದು ಸದಸ್ಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ- ಯೋಗಿ ಸರ್ಕಾರದ ಮಹತ್ವದ ನಿರ್ಧಾರ

    ಸಪ್ತಕೋಶಿ, ನಾರಾಯಿಣಿ, ಮಹಾಕಾಳಿ, ಕಾಳಿ ಗಂಡಕಿ, ಗಂಗಾ ಸಾಗರ್, ಬಾಗ್ಮತಿ, ಕಮಲಾ ನದಿಗಳು ಸೇರಿದಂತೆ 16 ಪವಿತ್ರ ನದಿಗಳ ನೀರನ್ನು ಶ್ರೀರಾಮನ ಅಭಿಷೇಕಕ್ಕಾಗಿ ತರಿಸಲಾಗಿದೆ. ನೇಪಾಳದಲ್ಲಿರುವ ರಾಮಭಕ್ತರ ಸಮಿತಿ ಮೂಲಕ ನೀರನ್ನು ಸಂಗ್ರಹಿಸಿ ಭಾರತಕ್ಕೆ ತರಿಸಲಾಗಿದೆ. ಈ ಜಲವನ್ನು ಅಯೋಧ್ಯಾ ಶ್ರೀರಾಮಜನ್ಮಭೂಮಿ ಟ್ರಸ್ಟ್ ಮುಖ್ಯ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸುತ್ತೇವೆ. ರಾಮಮಂದಿರ ಗರ್ಭಗುಡಿ ಉದ್ಘಾಟನೆಯ ದಿನ ವಿವಿಧ ಅಭಿಷೇಕಗಳು ನೇರವೇರುವ ಹೊತ್ತಿನಲ್ಲಿ, ಈ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    ಎಲ್ಲಿಂದ ಏನೇನು ಬರುತ್ತೆ?
    * ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕ ನಡೆಯಲಿದೆ. ಇದಾದ ನಂತರ ದೇವರಿಗೆ ವಿಶೇಷ ನೈವೇದ್ಯ ಸಮರ್ಪಿಸಲಾಗುತ್ತದೆ. ಭಗವಾನ್ ಶ್ರೀರಾಮನ ತಾಯಿಯ (ಕೌಸಲ್ಯೆ) ಮನೆ ಛತ್ತೀಸ್‌ಗಢದಿಂದ 3,000 ಕ್ವಿಂಟಾಲ್ ಅಕ್ಕಿ ಬರುತ್ತಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚಿನ ಪ್ರಮಾಣದ ಅಕ್ಕಿ ರವಾನೆಯಾಗಿದ್ದು, ಇದು ಅಯೋಧ್ಯೆಗೆ ತಲುಪಲಿದೆ. ಇದನ್ನು ಛತ್ತೀಸ್‌ಗಢದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾಗಿದೆ. ಇದನ್ನೂ ಓದಿ: Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

    * ಜನವರಿ 5 ರಂದು ಭಗವಾನ್ ರಾಮನ ಅತ್ತೆ ಮನೆಯಾದ ನೇಪಾಳದ ಜನಕ್‌ಪುರದಿಂದ ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಅಯೋಧ್ಯೆಗೆ ತಲುಪುತ್ತವೆ. ಇದಲ್ಲದೆ, ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ಪ್ಲೇಟ್‌ಗಳು ಸಹ ಇರುತ್ತವೆ.

    * ನೇಪಾಳದಿಂದ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಸಹ ಬರಲಿವೆ. ಇದರಲ್ಲಿ 51 ಬಗೆಯ ಸಿಹಿತಿಂಡಿಗಳು ಇರಲಿವೆ. ಜೊತೆಗೆ ಮೊಸರು, ಬೆಣ್ಣೆ ಮತ್ತು ಬೆಳ್ಳಿಯ ಪಾತ್ರೆಗಳು ಸೇರಿವೆ.

  • ಅಯೋಧ್ಯೆಯ ಬಾಲರಾಮನ ನಿರ್ಮಾಣಕ್ಕೆ ಕರ್ನಾಟಕದ ಕಲ್ಲು

    ಅಯೋಧ್ಯೆಯ ಬಾಲರಾಮನ ನಿರ್ಮಾಣಕ್ಕೆ ಕರ್ನಾಟಕದ ಕಲ್ಲು

    ಲಕ್ನೋ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ನಿರ್ಮಾಣದಲ್ಲಿ ಕರ್ನಾಟಕದವರ (Karnataka) ಕೊಡುಗೆಯೂ ಹೆಚ್ಚಿರುವುದು ಹೆಮ್ಮೆಯ ವಿಷಯವಾಗಿದೆ. ಅದರಲ್ಲೂ ಬಾಲರಾಮನ ವಿಗ್ರಹವನ್ನು ನಿರ್ಮಿಸಲು ರಾಜ್ಯದ ಕಾರ್ಕಳ (Karkala) ಹಾಗೂ ಹೆಚ್.ಡಿ. ಕೋಟೆಯಿಂದ (HD Kote) ತರಿಸಲಾದ ಕಪ್ಪು ಕಲ್ಲನ್ನು ಬಳಸಲು ನಿರ್ಧರಿಸುವುದು ವಿಶೇಷವಾಗಿದೆ.

    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ಸೋವಾರದಿಂದ 2 ದಿನಗಳ ಸಭೆ ಸೇರಿದ್ದು, ಅಲ್ಲಿ ವಿಗ್ರಹಕ್ಕೆ ಅಗತ್ಯವಾದ ಶಿಲೆ ಬಳಕೆ, ವಿಗ್ರಹದ ಸ್ವರೂಪ, ಶಿಲ್ಪಿ ಆಯ್ಕೆಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ನೂತನ ರಾಮನ ವಿಗ್ರಹ ನಿರ್ಮಾಣದ ಹೊಣೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ.

    ಕಪ್ಪು ಶಿಲೆ: ಈಗಾಗಲೇ ರಾಮನ ವಿಗ್ರಹ ನಿರ್ಮಾಣಕ್ಕೆ ಕರ್ನಾಟಕದ ಕಾರ್ಕಳ, ಮೈಸೂರಿನ ಹೆಚ್.ಡಿ ಕೋಟೆ ಸೇರಿದಂತೆ ದೇಶ – ವಿದೇಶಗಳ ವಿವಿಧ ಭಾಗಗಳಿಂದ ಶಿಲೆಗಳನ್ನು ಆರಿಸಲಾಗಿತ್ತು. ಈ ಪೈಕಿ ಕಾರ್ಕಳದ ಕರಿಕಲ್ಲು ಅಂತಾರಾಷ್ಟ್ರೀಯ ಮಟ್ಟದಲ್ಲೇ ಭಾರಿ ಪ್ರಸಿದ್ಧಿ ಪಡೆದಿದೆ. ಕರಿಕಲ್ಲಿನ ನಗರಿ ಎಂದು ಕರೆಯಲ್ಪಡುವ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಭಾರಿ ಜನಪ್ರಿಯ.

    ಈ ರೀತಿಯ ಹಿನ್ನೆಲೆಯಿರುವ ಕಾರ್ಕಳದ ಹಾಗೂ ಹೆಚ್‍ಡಿ ಕೋಟೆಯ ಕಲ್ಲನ್ನು ರಾಮನ ವಿಗ್ರಹ ನಿರ್ಮಾಣಕ್ಕೆ ಬಳಸಲು ಅಂತಿಮವಾಗಿ ನಿರ್ಧರಿಸಲಾಗಿದೆ. ಈ ಪೈಕಿ ಯಾವ ಶಿಲೆ ಬೇಕು ಎಂಬುದನ್ನು ಸ್ವತಃ ಶಿಲ್ಪಿಯ ವಿವೇಚನೆಗೆ ಬಿಡಲಾಗಿದೆ.

    ಇದುವರೆಗೂ ಅಯೋಧ್ಯೆಯಲ್ಲಿ ಇದ್ದ ಬಾಲರಾಮನ ವಿಗ್ರಹಕ್ಕಿಂತ ಸಂಪೂರ್ಣ ವಿಭಿನ್ನ ರೀತಿಯ ನೂತನ ವಿಗ್ರಹವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ರಾಮನ ಮೂರ್ತಿ 5ನೇ ವಯಸ್ಸಿನ ಅವತಾರದಲ್ಲಿ ಇರುವ ಬಾಲಕನ ರೀತಿ ನಿರ್ಮಾಣವಾಗಲಿದೆ. ಈ ವಿಗ್ರಹವು 5 ಅಡಿ ಎತ್ತರವಿರಲಿದೆ. ಕೈಯಲ್ಲಿ ಬಿಲ್ಲು ಹಾಗೂ ಬಾಣ ಹಿಡಿದ ಮಾದರಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲು ಸೂಚಿಸಲಾಗಿದೆ ಎಂದು ಟ್ರಸ್ಟ್ ನಿರ್ಧರಿಸಿದೆ. ಇದನ್ನೂ ಓದಿ: ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ – ಈಶ್ವರಪ್ಪಗೆ ಹೈಕಮಾಂಡ್‌ ಶಾಕ್‌

    ಮೈಸೂರಿನ ಅರುಣ್ ಯೋಗಿರಾಜ್‍ಗೆ ಜವಾಬ್ದಾರಿ: ಬಾಲರಾಮನ ಮೂರ್ತಿ ಕೆತ್ತುವ ಹೊಣೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಹಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ಈ ಹಿಂದೆ ಅರುಣ್ ಯೋಗಿರಾಜ್ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾಚಾರ್ಯರು ಹಾಗೂ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೂಡಾ ಕೆತ್ತುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದನ್ನೂ ಓದಿ: ಸಿದ್ದು, ಡಿಕೆಶಿ ಫೈಟ್‌ನಲ್ಲಿ ಗೆದ್ದ ಪರಮೇಶ್ವರ್‌!