Tag: ಬಾಲಕ ರಾಮ

  • ಬಾಲಕ ರಾಮನ ಕಣ್ತುಂಬಿಕೊಳ್ಳಲು 2ನೇ ದಿನವೂ ಸೇರಿದ ಲಕ್ಷಾಂತರ ಭಕ್ತರು- ದೇಗುಲದಲ್ಲಿ ಹೈ ಸೆಕ್ಯೂರಿಟಿ

    ಬಾಲಕ ರಾಮನ ಕಣ್ತುಂಬಿಕೊಳ್ಳಲು 2ನೇ ದಿನವೂ ಸೇರಿದ ಲಕ್ಷಾಂತರ ಭಕ್ತರು- ದೇಗುಲದಲ್ಲಿ ಹೈ ಸೆಕ್ಯೂರಿಟಿ

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲಕ ರಾಮನ (Balak Ram) ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಸುಮಾರು 5 ಲಕ್ಷ ಜನ ಭೇಟಿ ನೀಡಿದ್ದರು. ಇಂದು (ಜ.24) ಸಹ ಲಕ್ಷಾಂತರ ಭಕ್ತರು ಬಾಲಕ ರಾಮನ ದರ್ಶನಕ್ಕೆ ಮುಂಜಾನೆಯಿಂದಲೇ ಕಾದು ಕುಳಿತಿದ್ದಾರೆ.

    ಬಾಲಕ ರಾಮನ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನ, ಮುಂಜಾನೆ 3 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತರು ಸೇರಿದ್ದರು. ಈ ವೇಳೆ ರಾಮ ಮಂದಿರದ ಬಾಗಿಲು ತೆರೆಯುತ್ತಿದ್ದಂತೆ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೇವಾಲಯದ ಒಳಗೆ ಪ್ರವೇಶಿಸುವ ಭಕ್ತರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

    ಮಂದಿರಕ್ಕೆ ಜನರನ್ನು ಬಿಡುವಾಗ ಸರದಿಯಲ್ಲಿ ಬಿಡಲಾಗುತ್ತಿದ್ದು, ಶಿಸ್ತು, ಸಂಯಮ ಪಾಲನೆಗೆ ಮನವಿ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಭಕ್ತರಿಗೆ ಬಾಲಕ ರಾಮನ ದರ್ಶನಕ್ಕೆ ಸಮಯ ನಿಗದಿ: ಬಾಲಕ ರಾಮನ ದರ್ಶನಕ್ಕೆ ಬರುವ ಭಕ್ತರಿಗೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್‍ಸೈಟ್‍ನಲ್ಲಿ ನಿರ್ದಿಷ್ಟ ಸಮಯದ ಸ್ಲಾಟ್‍ಗಳನ್ನು ಒದಗಿಸಿರುವ ಮಾಹಿತಿ ಇದೆ. ಇದರಂತೆ ನಿತ್ಯ ಬೆಳಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ.

    ಬೆಳಗ್ಗೆ 6:30ಕ್ಕೆ ಆರತಿ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 7:30 ಕ್ಕೆ ಸಂಧ್ಯಾ ಆರತಿ ನಡೆಯಲಿದೆ. ಆಫ್‍ಲೈನ್ ಮತ್ತು ಆನ್‍ಲೈನ್ ಎರಡರಲ್ಲೂ ಆರತಿಗಾಗಿ ಪಾಸ್‍ಗಳನ್ನು ದೊರೆಯಲಿದೆ. ಆಫ್‍ಲೈನ್ ಪಾಸ್‍ಗಳು ಶ್ರೀ ರಾಮ ಜನ್ಮಭೂಮಿಯ ಕಚೇರಿಯಲ್ಲಿ ಲಭ್ಯವಿದ್ದು, ಗುರುತಿನ ಪುರಾವೆ ಒದಗಿಸಿ ಪಡೆಯಬಹುದಾಗಿದೆ. ಇದನ್ನೂ ಓದಿ: ಕಬ್ಬಿಣ, ಸಿಮೆಂಟ್‌ ಬಳಸಿಲ್ಲ – ಕಲ್ಲಿನಿಂದಲೇ ಭವ್ಯ ರಾಮಮಂದಿರ ನಿರ್ಮಾಣ; ಯಾಕೆ ಗೊತ್ತಾ?

  • ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

    ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

    ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನನ್ನು ‘ಬಾಲಕ ರಾಮ’ (Balak Ram) ಎಂದು ಕರೆಯಲಾಗುವುದೆಂದು ಪ್ರತಿಷ್ಠಾಪನೆಯ ಅರ್ಚಕ ಅರುಣ್‌ ದೀಕ್ಷಿತ್‌ (Arun Dixit) ಮಾಹಿತಿ ನೀಡಿದ್ದಾರೆ.

    ಶ್ರೀರಾಮಜನ್ಮಭೂಮಿ ದೇವಸ್ಥಾನದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯ ಅರ್ಚಕರಾಗಿದ್ದರು ಅರುಣ್‌ ದೀಕ್ಷಿತ್‌. 51 ಇಂಚು ಎತ್ತರದ ಭಗವಾನ್ ರಾಮಲಲ್ಲಾನ ವಿಗ್ರಹವನ್ನು ‘ಬಾಲಕ ರಾಮ’ ಎಂದು ಹೆಸರಿಡಲಾಗಿದೆ. ಇದು ರಾಮನ ಮಗುವಿನ ರೂಪವಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ಜನವರಿ 22 ರಂದು ಪ್ರತಿಷ್ಠಾಪನೆಯಾದ ಶ್ರೀರಾಮನ ವಿಗ್ರಹಕ್ಕೆ ‘ಬಾಲಕ ರಾಮ’ ಎಂದು ಹೆಸರಿಡಲಾಗಿದೆ. ಈ ಹೆಸರಿಡಲು ಪ್ರಮುಖ ಕಾರಣವೆಂದರೆ, ವಿಗ್ರಹವು ಐದು ವರ್ಷ ವಯಸ್ಸಿನ ಮಗುವಿನ ರೂಪದ ಮಾದರಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾನ ವಿಗ್ರಹವನ್ನು ಕೆತ್ತಿದ್ದಾರೆ. ಮೈಸೂರಿನ ಹೆಚ್‌.ಡಿ.ಕೋಟೆ ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರದಿಂದ ಶಿಲ್ಪಕ್ಕೆ ಬಳಸಲಾದ ನೀಲಿ ಬಣ್ಣದ ಕೃಷ್ಣ ಶಿಲೆಯನ್ನು (ಕಪ್ಪು ಶಿಲೆ) ಹೊರತೆಗೆಯಲಾಗಿತ್ತು. ಸೋಪ್‌ಸ್ಟೋನ್ ಎಂದು ಪ್ರಸಿದ್ಧವಾದ ಆಕಾಶ-ನೀಲಿ ಮೆಟಾಮಾರ್ಫಿಕ್ ಬಂಡೆಯು ವಿಗ್ರಹಗಳನ್ನು ಕೆತ್ತಲು ಶಿಲ್ಪಿಗಳಿಗೆ ಉತ್ತಮ ಆಯ್ಕೆಯಾಗಿದೆ. ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ, ಆರತಿ ಸಮಯ, ಭಗವಾನ್ ರಾಮನಿಗೆ ಅರ್ಪಣೆ ಮತ್ತು ಇತರ ಕಾರ್ಯವಿಧಾನಗಳನ್ನು ದೇವಾಲಯದಲ್ಲಿ ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

    ಸೋಮವಾರ (ಜ.22) ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಗಣ್ಯರು ಅಯೋಧ್ಯೆಯಲ್ಲಿ ನೆರೆದಿದ್ದರು. ರಾಮಲಲ್ಲಾನನ್ನು ಕಣ್ತುಂಬಿಕೊಂಡು ಪುನೀತರಾದರು.