Tag: ಬಾಲಕಿ

  • ಪುರುಷನ ವೇಷ ಧರಿಸಿ 3 ಹುಡುಗಿಯರನ್ನ ಮದ್ವೆಯಾಗಿ ಅಪ್ರಾಪ್ತ ಬಾಲಕಿಯ ‘ಹುಡುಗಾ’ಟ!

    ಪುರುಷನ ವೇಷ ಧರಿಸಿ 3 ಹುಡುಗಿಯರನ್ನ ಮದ್ವೆಯಾಗಿ ಅಪ್ರಾಪ್ತ ಬಾಲಕಿಯ ‘ಹುಡುಗಾ’ಟ!

    ಅನಂತಪುರ: ಅಪ್ರಾಪ್ತ ಬಾಲಕಿಯೊಬ್ಬಳು ಹುಡುಗನಂತೆ ವೇಷ ಧರಿಸಿ ಮೂರು ಹುಡುಗಿಯರನ್ನ ಮದುವೆಯಾಗಿರೋ ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಬಿ. ರಮಾದೇವಿ ಮೂವರನ್ನ ಮದುವೆಯಾದ ಅಪ್ರಾಪ್ತೆ. ಮೂರನೇ ಹೆಂಡತಿ ಮಂಗಳವಾರದಂದು ಇಲ್ಲಿನ ಕಡಪಾ ಜಿಲ್ಲೆಯ ಜಮ್ಮಲಮಡುಗುವಿನಲ್ಲಿ ಪೊಲೀಸರಿಗೆ ದೂರು ನೀಡಿದ ಬಳಿಕ ಈಕೆಯ ಹುಡುಗಾಟ ಬಯಲಾಗಿದೆ.

    ರಮಾದೇವಿ ಕಾಶಿನಾಯನ ಮಂಡಲ್‍ನ ಇಟಿಕಲಪಾಡು ಗ್ರಾಮದವಳಾಗಿದ್ದು, ತಮಿಳುನಾಡಿನ ನೂಲುವ ಮಿಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ರಮಾದೇವಿ ಯಾವಾಗಲೂ ಹುಡುಗರಂತೆ ಬಟ್ಟೆ ಧರಿಸುತ್ತಿದ್ದಳು. ಪುಲಿವೆಂದುಲಾದಲ್ಲಿ ಮಿಲ್‍ನಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಮೌನಿಕಾ (ಹೆಸರು ಬದಲಾಯಿಸಲಾಗಿದೆ) ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಸ್ನೇಹ ಪ್ರೀತಿಗೆ ತಿರುಗಿದ್ದು ಎರಡು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ತಾನು ಹುಡುಗಿಯನ್ನ ಮದುವೆಯಾಗಿದ್ದೀನಿ ಎಂದು ಗೊತ್ತಾಗೋಕೆ ಮೌನಿಕಾಗೆ ಎರಡು ತಿಂಗಳು ಬೇಕಾಯ್ತು. ನಂತರ ಆಕೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರ ಮೊರೆ ಹೋಗಿದ್ದಾರೆ.

    ರಮಾದೇವಿ ಹುಡುಗನಂತೆ ನಟಿಸಿ ತನಗೆ ವಂಚಿಸಿದ್ದಾಳೆ ಎಂದು ಮೌನಿಕಾ ಪೊಲೀಸರಿಗೆ ಹೇಳಿದ್ದಾಳೆ. ರಮಾದೇವಿ ಈಗಾಗಲೇ ಎರಡು ಬಾರಿ ಹುಡುಗಿಯರ ಜೊತೆ ಮದುವೆಯಾಗಿರುವುದನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಕಡಪಾ ಜಿಲ್ಲೆಯ ಪ್ರೊದತ್ತೂರಿನ 16 ವರ್ಷದ ರೋಜಾ (ಹೆಸರು ಬದಲಾಯಿಸಲಾಗಿದೆ) ಹಾಗೂ ಅನಂತಪುರ ಜಿಲ್ಲೆಯ ಮುದಿಗುಬ್ಬಾದ ಕತ್ತಚೆರುವು ಗ್ರಾಮದ ಮಾನಸಾ (ಹೆಸರು ಬದಲಾಯಿಸಲಾಗಿದೆ) ಜೊತೆ ರಮಾದೇವಿ ಮದುವೆ ಮಾಡಿಕೊಂಡಿದ್ದಳು.

    ಇಬ್ಬರೂ ಹುಡುಗಿಯರ ಮನಸ್ಥಿತಿ ಸ್ತಿಮಿತದಲ್ಲಿರದ ಕಾರಣ ಅವರನ್ನ ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲಿಸರು ಹೇಳಿದ್ದಾರೆ.

  • ವಿಡಿಯೋ: ಈ 2 ವರ್ಷದ ಪೋರಿಗೆ ಹಾವೇ ಆಟಿಕೆ, ಹಾವೇ ಫ್ರೆಂಡ್ಸ್!

    ವಿಡಿಯೋ: ಈ 2 ವರ್ಷದ ಪೋರಿಗೆ ಹಾವೇ ಆಟಿಕೆ, ಹಾವೇ ಫ್ರೆಂಡ್ಸ್!

    ಕಾರವಾರ: ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಪ್ರಶಾಂತ್ ಹುಲೇಕಲ್ ಹಾಗೂ ಸ್ವಾತಿ ಎಂಬವರ ಮಗಳಾದ ಆಕರ್ಷ ಹಾವಿಗಳೊಂದಿಗೆ ಸರಸವಾಡುವ ಬಾಲಕಿ. 2 ವರ್ಷ ಏಳು ತಿಂಗಳು ವಯಸ್ಸಿನ ಈ ಪುಟ್ಟ ಪೋರಿಗೆ ಸರಿಯಾಗಿ ನಡೆದಾಡಲೂ ಬರುವುದಿಲ್ಲ.

    ಹಾಲುಗೆನ್ನೆಯ ತೊದಲು ನುಡಿ ಮಾತನಾಡುವ ಈ ಪೋರಿ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪ ಸೇರಿದಂತೆ 60 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿರುವುದಲ್ಲದೇ ಅದರೊಂದಿಗೆ ಆಟವಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ತಂದೆ ಸ್ವತಃ ಉರುಗ ತಜ್ಞರಾಗಿದ್ದು, 20 ವರ್ಷಗಳಿಂದ 12 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಈಕೆ ಚಿಕ್ಕ ಮಗುವಾಗಿದ್ದಾಗಿನಿಂದ ತಂದೆ ಹಾವುಗಳನ್ನ ಹಿಡಿಯುವುದನ್ನು ನೋಡುತ್ತಿದ್ದ ಈಕೆಗೆ ತಂದೆಯೇ ಮೊದಲ ಗುರು. ಮನೆಯಲ್ಲಿ ಪ್ರತಿ ವರ್ಷ ನಾಗರಪಂಚಮಿಯಂದು ನಿಜ ನಾಗರಹಾವಿಗೆ ತಪ್ಪದೇ ಪೂಜೆ ಮಾಡುತ್ತಾರೆ. ಹೀಗಾಗಿ ಇವೆಲ್ಲವೂ ಈ ಪುಟ್ಟ ಬಾಲಕಿಗೆ ಪ್ರಭಾವ ಬೀರಿದ್ದು ಹಾವುಗಳೊಂದಿಗೆ ಸ್ನೇಹ ಬೆಳಸಿಕೊಳ್ಳುವಂತೆ ಮಾಡಿದೆ. ಚಿಕ್ಕ ಪೋರಿಯ ಈ ಸಲುಗೆ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದೆ.

    https://www.youtube.com/watch?v=rFO2yLSCu2c

  • ಶಂಕಿತ ಡೆಂಗ್ಯೂ ಗೆ 11 ವರ್ಷದ ಬಾಲಕಿ ಬಲಿ

    ಶಂಕಿತ ಡೆಂಗ್ಯೂ ಗೆ 11 ವರ್ಷದ ಬಾಲಕಿ ಬಲಿ

    ಗದಗ: ಶಂಕಿತ ಮಹಾಮಾರಿ ಡೆಂಗ್ಯೂ ಜ್ವರಕ್ಕೆ 11 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ನೆಲ್ಲೂರ ಗ್ರಾಮದಲ್ಲಿ ನಡೆದಿದೆ.

    ಅಕ್ಷತಾ ಭಿಕ್ಷಾವತಿಮಠ ಎಂಬ ಬಾಲಕಿ ಮಹಾಮಾರಿ ಡೆಂಗ್ಯೂಗೆ ಬಲಿಯಾಗಿದ್ದಾಳೆ. 10 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಮುಶಿಗೇರಿ, ಬದಾಮಿ ಹಾಗೂ ಬಾಗಲಕೋಟೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

    ನೆಲ್ಲೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಲುಷಿತ ವಾತಾವರಣ, ಸ್ವಚ್ಛತೆ ಇಲ್ಲದೆ ಈಗಾಗಲೇ ಸಾಕಷ್ಟು ಜನ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಮಂಡಳಿಯ ವಿರುದ್ಧ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಮ್ಮ-ಚಿಕ್ಕಮ್ಮ ಸೇರಿ ಮಾಟ ಮಾಡಿದ್ರು, ಬಾಲಕಿಯ ಬಾಯಿ, ಗುಪ್ತಾಂಗಕ್ಕೆ ಕೈ ಹಾಕಿ ಕೊಂದೇಬಿಟ್ರು!

    ಅಮ್ಮ-ಚಿಕ್ಕಮ್ಮ ಸೇರಿ ಮಾಟ ಮಾಡಿದ್ರು, ಬಾಲಕಿಯ ಬಾಯಿ, ಗುಪ್ತಾಂಗಕ್ಕೆ ಕೈ ಹಾಕಿ ಕೊಂದೇಬಿಟ್ರು!

    ಮುಂಬೈ: ಮಲಬದ್ಧತೆ ನಿವಾರಿಸುತ್ತೇವೆಂದು ಮಾಟ ಮಂತ್ರ ಮಾಡಿ 11 ವರ್ಷದ ಬಾಲಕಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಬಾಲಕಿಯ ತಾಯಿ, ತಂದೆ ಹಾಗೂ ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಬಾಲಕಿ ತನ್ನ ಪೋಷಕರೊಂದಿಗೆ ಮಹಾರಾಷ್ಟ್ರದ ವಿರಾರ್‍ನ ಮನ್ವೇಲ್‍ಪಾದಾದಲ್ಲಿ ವಾಸವಿದ್ದಳು. ಡಿಸೆಂಬರ್ 15ರಿಂದ ಬಾಲಕಿ ಮಲಬದ್ಧತೆಯಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿಯ ತಾಯಿ ತಾನು ದೇವಮಾನವಿ ಎಂದು ಹೇಳಿಕೊಂಡು ಬಾಲಕಿಯನ್ನ ರೋಗವನ್ನು ವಾಸಿ ಮಾಡ್ತೀನೆಂದು ಗಂಡನಿಗೆ ಹೇಳಿದ್ದಳು. ನಂತರ ಡಿಸೆಂಬರ್ 17ರಂದು ಚಿಕಿತ್ಸೆ ಮಾಡಲು ತನ್ನ ತಂಗಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು.

    ಹೊಟ್ಟೆ ಮೇಲೆ ಕುಳಿತ್ರು, ಗುಪ್ತಾಂಗಕ್ಕೆ ಕೈ ಹಾಕಿದ್ರು: ಇಬ್ಬರು ಮಹಿಳೆಯರು ಮೈ ಮೇಲೆ ದೆವ್ವ ಬಂದಿದೆ ಎಂದು ಹೇಳಿಕೊಂಡು, ಬಾಲಕಿಯ ದೇಹದ ಮೇಲೆ ಅರಿಶಿಣ ಕುಂಕುಮ ಸುರಿದಿದ್ದಾರೆ. ನಂತರ ತಾಯಿ ಬಾಲಕಿಯ ಹೊಟ್ಟೆ ಮೇಲೆ ಕುಳಿತಿದ್ದಾಳೆ. ಅಲ್ಲದೆ ಹೊಟ್ಟೆಯಿಂದ ಕಲ್ಮಶವನ್ನ ಹೊರತೆಗೆಯುವುದಾಗಿ ಹೇಳಿ ಬಾಲಕಿಯ ಬಾಯಿ ಹಾಗೂ ಗುಪ್ತಾಂಗಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಬಾಲಕಿ ಜೋರಾಗಿ ಕಿರುಚಿಕೊಳ್ಳುತ್ತಿದ್ದರೂ ಆಕೆ ಕೈಯಿಂದ ತಪ್ಪಿಸಿಕೊಂಡು ಓಡಿಹೋಗದಂತೆ ನೋಡಿಕೊಂಡಿದ್ದಾರೆ.

    ತಡೆಯಲು ಬಂದ ಗಂಡನ ಕೆನ್ನೆಗೆ ಹೊಡೆದ್ಳು: ಈ ನಡುವೆ ಸಂತ್ರಸ್ತ ಬಾಲಕಿಯ ತಂದೆ ಹಾಗೂ 14 ವರ್ಷದ ಅಣ್ಣ ಮಹಿಳೆಯನ್ನು ತಡೆಯಲು ಬಂದಿದ್ದು, ಎರಡು ಬಾರಿ ಕೆನ್ನೆಗೆ ಹೊಡೆಸಿಕೊಂಡು ದೂರ ಸರಿದಿದ್ದಾರೆ. ನಂತರ ಬಾಲಕಿ ಪ್ರಜ್ಞೆ ತಪ್ಪಿದ್ದನ್ನು ಕಂಡು ಭಯಗೊಂಡ ತಾಯಿ ಮನೆಯವರಿಗೆಲ್ಲಾ ವಿಷಯ ತಿಳಿಸಿದ್ದಾಳೆ. ಆಕೆಯ ಅಣ್ಣ ಮನೆಗೆ ಬಂದು ಬಲಕಿಯನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಬಾಲಕಿ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ದಾರೆ.

    ಬಾಲಕಿಗೆ ಏನೆಲ್ಲಾ ಆಯಿತೆಂದು ಗೊತ್ತಾದ ಬಳಿಕ ಸೋದರ ಮಾವ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳೀಯರನ್ನ ವಿಚಾರಣೆ ಮಾಡಿದಾಗ, ಶನಿವಾರ ತಡರಾತ್ರಿ ಬಾಲಕಿ ಕಿರುಚಾಡುತ್ತಿದ್ದುದು ಕೇಳಿಸಿತ್ತು ಎಂದು ಹೇಳಿದ್ದಾರೆ.

    ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕಳಿಸಲಾಗಿತ್ತು. ಈ ವೇಳೆ ಬಾಲಕಿಯ ಕತ್ತು, ಎದೆ, ಕೈ ಹಾಗೂ ಗುಪ್ತಾಂಗದಲ್ಲಿ ಗಾಯಗಳಾಗಿರುವುದು ಪತ್ತೆಯಾಗಿತ್ತು. ಬಳಿಕ ಮೂವರ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದ್ದು, ಮಂಗಳವಾರ ರಾತ್ರಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಬುಧವಾರದಂದು ಆರೋಪಿಗಳನ್ನ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 23ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಿರಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಹಿಂದೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ 18 ವರ್ಷದ ಯುವತಿಯ ರೋಗ ಗುಣಪಡಿಸಲು ಮಾಂತ್ರಿಕನೊಬ್ಬ ಆಕೆಗೆ ಥಳಿಸಿ, ಸಗಣಿ ತಿನ್ನಿಸಿದ್ದ.

  • ಶಾಲೆಗೆ ಹೋಗುವಾಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್, ಕೊಲೆ!

    ಶಾಲೆಗೆ ಹೋಗುವಾಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್, ಕೊಲೆ!

    ವಿಜಯಪುರ: ಗಾಂಜಾ ನಶೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರದ ಮಂಜುನಾಥ ನಗರದ ಮಲ್ಲಿಕಾರ್ಜುನ್ ಸ್ಕೂಲ್ ಬಳಿ ಅಪ್ರಾಪ್ತ ಬಾಲಕಿ ಹೊರಟಾಗ ಮೂವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಕೈಲಾಶ್, ಸಾಗರ್ ಮೋರೆ, ದೀಪಕ್ ಹಾಗೂ ಇನ್ನು ಇಬ್ಬರಿಂದ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಕೈಲಾಶ್ ಓರ್ವನನ್ನು ಬಿಟ್ಟು ಉಳಿದ ಇಬ್ಬರು ಅತ್ಯಾಚಾರಿಗಳು ಅಪ್ರಾಪ್ತರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಕೈಲಾಸ್ ಮತ್ತು ಸಾಗರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಾಗಿಲ್ಲ.

    ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನಲೆಯಲ್ಲಿ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಮೃತ ಬಾಲಕಿಯ ಶವವಿಟ್ಟು ಕುಟುಂಬಸ್ಥರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರ ಪ್ರತಿಭಟನೆಗೆ ವಿವಿಧ ದಲಿತ ಪರ ಸಂಘಟನೆಗಳು ಸಾಥ್ ನೀಡಿದ್ದಾರೆ.

    ಪ್ರತಿಭಟನಾಕಾರರು ಕಲಬುರ್ಗಿ ಅಥಣಿ ರಸ್ತೆ ಬಂದ್ ಮಾಡಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.

  • 4 ವರ್ಷದ ಬಾಲಕಿ ಮೇಲೆ ರೇಪ್ ಎಸಗಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    4 ವರ್ಷದ ಬಾಲಕಿ ಮೇಲೆ ರೇಪ್ ಎಸಗಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    ಭೋಪಾಲ್: ನಾಲ್ಕು ವರ್ಷದ ಬುಡಕಟ್ಟು ಜನಾಂಗದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ದಾರುಣ ಘಟನೆ ಮಧ್ಯಪ್ರದೇಶದ ಮನವಾರ್ ಪ್ರದೇಶದಲ್ಲಿ ನಡೆದಿದೆ.

    ಕರಣ್ (25) ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಬಾಲಕಿಯ ನೆರೆ ಮನೆಯಲ್ಲಿ ವಾಸಿಸುತ್ತಿದ್ದ ಆರೋಪಿ ಕರಣ್ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ. ಆಕೆಯ ಮೃತ ದೇಹ ಯಾರಿಗೂ ಗುರುತು ಸಿಗದೇ ಇರುವಂತೆ ಮಾಡಲು ತಲೆ ಮೇಲೆ ಕಲ್ಲು ಎತ್ತಿಹಾಕಿ ಗ್ರಾಮದ ಪಕ್ಕದ ಕಾಡಿನಲ್ಲಿ ಬಾಲಕಿಯ ದೇಹವನ್ನು ಎಸೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಂದೋರ್‍ಗೆ ಕಳುಹಿಸಿಕೊಡಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿರುವುದಾಗಿ ಎಸ್ಪಿ ವಿರೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

  • ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಹೆತ್ತವರ ಮೇಲಿನ ದ್ವೇಷ ತೀರಿಸಿಕೊಳ್ಳಲು 4ರ ಬಾಲಕಿಗೆ ಕಬ್ಬಿಣ ರಾಡ್ ನಿಂದ ಹಲ್ಲೆಗೈದ!

    ಮುಂಬೈ: ತನ್ನದಲ್ಲದ ತಪ್ಪಿಗೆ 4 ವರ್ಷದ ಬಾಲಕಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ 19 ವರ್ಷದ ರಹೀಮ್ ಶೌಕರ್ ಅಲಿ ಶೇಕ್ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಈತ ಭಯಾಂಡರ್ ಪೂರ್ವದ ಆಜಾದ್ ನಗರದ ನಿವಾಸಿ ಅಂತ ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?: ಹೆತ್ತವರ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಅವರ 4 ವರ್ಷದ ಬಾಲಕಿಯ ತಲೆಗೆ ಆರೋಪಿ ಕಬ್ಬಿಣದ ರಾಡ್ ನಿಂದ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಮನೆಯ ಪಕ್ಕದಲ್ಲಿರೋ ಕಸದ ರಾಶಿಯ ಬಳಿ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಹೆತ್ತವರು ಗಮನಿಸಿದ್ದಾರೆ. ಬಳಿಕ ಅವರು ಆಕೆಯನ್ನು ಕೂಡಲೇ ಸ್ಥಳಿಯ ಕಸ್ತೂರಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾಳೆ.

    ಹಲ್ಲೆಗೆ ಕಾರಣವೇನು?: ಆರೋಪಿ ಬಾಲಕಿಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು. ಹೀಗಾಗಿ ಹೆತ್ತವರು ಆತನ ಜೊತೆ ಸಲುಗೆಯಿಂದ ವರ್ತಿಸದಂತೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ಆರೋಪಿಗೆ ತಿಳಿದು ಹೆತ್ತವರ ಮೇಲಿನ ಸಿಟ್ಟಿಗೆ ಬಾಲಕಿಯ ಮೇಲೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

    ಆರೋಪಿ ಕಬ್ಬಿಣದ ರಾಡ್ ನಿಂದ ಬಾಲಕಿಯ ತಲೆಗೆ ಹೊಡೆದಿದ್ದರಿಂದ ಆಕೆ ಗಂಭೀರ ಗಾಯಗೊಂಡಿದ್ದಾಳೆ. ಅಲ್ಲದೇ ಆಕೆಯ ಮುಖ ಹಾಗೂ ಕಣ್ಣುಗಳಿಗೂ ಗಂಭೀರ ಗಾಯಗಳಾಗಿವೆ. ಹೀಗಾಗಿ ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ವೈದ್ಯ ರಾಜೀವ್ ಅಗರ್ ವಾಲ್ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307(ಹತ್ಯೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಿಸೆಂಬರ್ 18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

     

  • ಅಪ್ಪನಿಗೆ ಹೇಳ್ತೀನಿ ಎಂದಿದ್ದಕ್ಕೆ ತಾಯಿ, ಲವ್ವರ್ ಸೇರಿ 6ರ ಬಾಲಕಿಯನ್ನು ಕತ್ತು ಸೀಳಿ ಕೊಂದೇಬಿಟ್ರು!

    ಅಪ್ಪನಿಗೆ ಹೇಳ್ತೀನಿ ಎಂದಿದ್ದಕ್ಕೆ ತಾಯಿ, ಲವ್ವರ್ ಸೇರಿ 6ರ ಬಾಲಕಿಯನ್ನು ಕತ್ತು ಸೀಳಿ ಕೊಂದೇಬಿಟ್ರು!

    ನವದೆಹಲಿ: ತಾಯಿ ಹಾಗೂ ಆಕೆಯ ಪ್ರಿಯತಮ ಸೇರಿ 6 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ಘಾಜಿಪುರ್ ಎಂಬಲ್ಲಿ ಬುಧವಾರದಂದು ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸುಧೀರ್(23) ಎಂಬಿಬ್ಬರನ್ನು ಗುರುವಾರ ಬಂಧಿಸಿರುವುದಾಗಿ ಪೊಲೀಸ್ ಆಯಕ್ತ ಓಮ್ವೀರ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಏನಿದು ಪ್ರಕರಣ?: ದೆಹಲಿಯ ಘಾಜಿಪುರ್ ನಲ್ಲಿ ಮಹಿಳೆ ತನ್ನ ಗಂಡ ಹಾಗೂ ಇಬ್ಬರು ಗಂಡು ಹಾಗೂ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದಳು. ಮಹಿಳೆಯ ಪತಿ ಬಂಡಿ ಎಳೆಯುವ ಕೆಲಸ ಮಾಡುತ್ತಿದ್ದರು. ಆರೋಪಿ ಸುಧೀರ್ ಕಾರ್ಮಿಕನಾಗಿದ್ದು, ಇವರ ಮನೆಯ ಹತ್ತಿರದಲ್ಲೇ ವಾಸವಾಗಿದ್ದ. ಮಹಿಳೆ ಸುಧೀರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮಹಿಳೆಯ ಪತಿ ಬುಧವಾರ ಸಂಜೆ ಮದ್ಯಪಾನ ಮಾಡಲು ಬಾರ್‍ಗೆ ಹೋಗಿದ್ದಾಗ ಸುಧೀರ್ ಮಹಿಳೆಯ ಮನೆಗೆ ಬಂದಿದ್ದ. ಈ ವೇಳೆ 4 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳು ಕೋಣೆಯಲ್ಲಿ ಟಿವಿ ನೋಡುತ್ತಿದ್ದರು. ಆದ್ರೆ ಹೆಣ್ಣು ಮಗಳು ತನ್ನ ಅಮ್ಮ ಸುಧೀರ್ ಜೊತೆ ಸರಸ ಸಲ್ಲಾಪದಲ್ಲಿರುವುದನ್ನ ನೋಡಿದ್ದಳು. ಅಲ್ಲದೇ ನಾನು ಇದನ್ನು ಅಪ್ಪನಿಗೆ ಹೇಳುತ್ತೇನೆ ಎಂದಿದ್ದಳು.

    ಇದರಿಂದ ಅತಂಕಗೊಂಡ ತಾಯಿ ಮತ್ತು ಆಕೆಯ ಪ್ರಿಯಕರ ಮಗಳನ್ನು ಕೊಲೆ ಮಾಡಲು ಯೋಜನೆ ಹಾಕಿದ್ರು. ಅಂತೆಯೇ ಪಕ್ಕದ ಮನೆಯ ಟೆರೇಸ್ ಗೆ ಕರೆದುಕೊಂಡು ಹೋಗಿ ಅಮ್ಮ ಹಾಗೂ ಪ್ರಿಯಕರ ಸೇರಿ ಚಾಕುವಿನಿಂದ ಕತ್ತನ್ನು ಸೀಳಿ ಬಾಲಕಿಯನ್ನು ಕೊಲೆಗೈದಿದ್ದಾರೆ. ಸುಧೀರ್ ಮಗುವಿನ ಕತ್ತು ಸೀಳಿದ್ರೆ ಮಹಿಳೆ ಮಗಳ ಕೈಗಳನ್ನ ಹಿಡಿದುಕೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ಕೃತ್ಯ ಎಸಗಿದ ಬಳಿಕ ಸುಧೀರ್ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಬಾಲಕಿ ನಾಪತ್ತೆಯಾಗಿದ್ದಾಳೆ ಅಂತ ಮಹಿಳೆ ಅಕ್ಕಪಕ್ಕದ ಮನೆಯವರಿಗೆ ಹೇಳಿದ್ದಾಳೆ. ನಂತರ ಗಂಡ ಹಾಗೂ ಇತರರ ಜೊತೆ ಸೇರಿ ಮಗಳನ್ನು ಹುಡುಕೋ ನಾಟಕವಾಡಿದ್ದಾಳೆ.

    ರಾತ್ರಿ 10 ಗಂಟೆ ಸುಮಾರಿಗೆ ಬಾಲಕಿ ನಾಪತ್ತೆಯಾಗಿರೋ ಬಗ್ಗೆ ಪೊಲೀಸರಿಗೂ ಕರೆ ಮಾಡಿ ತಿಳಿಸಿದ್ದಾರೆ. ಹೀಗಾಗಿ ಕೂಡಲೆ ಪೊಲೀಸರು ತಂಡಗಳನ್ನು ರಚಿಸಿ ಬಾಲಕಿಯ ಹುಡುಕಾಟ ಆರಂಭಿಸಿದ್ದಾರೆ. ತಡರಾತ್ರಿ ಸುಮಾರು 1.30ರ ವೇಳೆಗೆ ನೆರಮನೆಯ ಟೆರೇಸ್ ನಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಕೂಡಲೇ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ. ಬಳಿಕ ಪೊಲೀಸರು ಘಾಜಿಪುರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪ್ರಕರಣದ ಸಂಬಂಧ ವಿಚಾರಣೆ ಮಾಡುವ ವೇಳೆ ಆರೋಪಿ ಮಹಿಳೆ ತಾನೇನೂ ಮಾಡೇ ಇಲ್ಲ ಎಂಬಂತೆ ಆರಾಮಾಗಿ ಇದ್ದಳು. ಆದ್ರೆ ಈಕೆಗೆ ಸುಧೀರ್ ಜೊತೆ ಅಕ್ರಮ ಸಂಬಂಧವಿತ್ತು ಎಂದು ನೆರೆಮನೆಯವರು ಮಾಹಿತಿ ನೀಡಿದ್ದು, ಮಹಿಳೆ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ನಂತರ ಇಬ್ಬರನ್ನೂ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ಮಹಿಳೆ ತನ್ನ 4 ವರ್ಷದ ಗಂಡು ಮಗನಿಗೆ, ನಿನ್ನ ತಂಗಿಯನ್ನು ದೆವ್ವ ಹೊತ್ತುಕೊಂಡು ಹೋಗಿದೆ ಎಂದು ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

  • ಚರಂಡಿ ಸ್ವಚ್ಛಗೊಳಿಸಲು ಖುದ್ದು ತಾನೇ ಚರಂಡಿಗೆ ಇಳಿದ 13ರ ಬಾಲಕಿ

    ಚರಂಡಿ ಸ್ವಚ್ಛಗೊಳಿಸಲು ಖುದ್ದು ತಾನೇ ಚರಂಡಿಗೆ ಇಳಿದ 13ರ ಬಾಲಕಿ

    ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯ್ತಿ ವತಿಯಿಂದ ದಲಿತ ಕಾಲೋನಿಯಲ್ಲಿ ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ, 13 ವರ್ಷದ ದಲಿತ ಬಾಲಕಿಯೊಬ್ಬಳು ಖುದ್ದು ತಾನೇ ಚರಂಡಿಗಿಳಿದು ಸ್ವಚ್ಛಗೊಳಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ದಲಿತ ಕಾಲೋನಿಯ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ 13 ವರ್ಷದ ರಂಜಿತಾ ಚರಂಡಿ ಸ್ವಚ್ಛಗೊಳಿಸಿದ ಬಾಲಕಿ. ಗ್ರಾಮ ಪಂಚಾಯ್ತಿ ವತಿಯಿಂದ ದಲಿತ ಕಾಲೋನಿಯಲ್ಲಿ ಚರಂಡಿಗಳನ್ನ ಸ್ವಚ್ಛಗೊಳಿಸದೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದಲಿತ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ.

    ಇನ್ನೂ ದಲಿತ ಕಾಲೋನಿಯಲ್ಲಿ ಚರಂಡಿಗಳ ಸ್ವಚ್ಛತೆ ಮಾಡದ ಹಿನ್ನೆಲೆಯಲ್ಲಿ ಸರಿಸುಮಾರು 140ಕ್ಕೂ ಹೆಚ್ಚು ಮನೆಗಳುಳ್ಳ ಕಾಲೋನಿಯಲ್ಲಿ ಹಲವು ಮಂದಿ ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಇದನ್ನು ಗಮನಿಸಿದ ರಂಜಿತಾ ತನ್ನ ಮನೆ ಮುಂದೆ ತಾನೇ ಚರಂಡಿ ಸ್ವಚ್ಛಗೊಳಿಸಿಕೊಳ್ಳಲು ಮುಂದಾಗಿದ್ದಾಳೆ.

    ರಂಜಿತಾ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದು ಇತರರಿಗೂ ಮಾದರಿಯಾಗಿ, ಇದನ್ನ ಕಂಡ ಇತರೆ ದಲಿತ ಕಾಲೋನಿ ನಿವಾಸಿಗಳು ತಮ್ಮ ತಮ್ಮ ಮನೆಗಳ ಮುಂದಿನ ಚರಂಡಿ ತಾವೇ ಸ್ವಚ್ಛ ಮಾಡಿಕೊಳ್ಳೋಕೆ ಮುಂದಾಗಿದ್ದಾರೆ.

    ಆದರೆ ಗ್ರಾಮ ಪಂಚಾಯ್ತಿ ಆಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಲಿತ ಕಾಲೋನಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ವರದಿ ಮಾಡಲು ಹೋದ ಮಾಧ್ಯಮದವರ ಮೇಲೂ ಕೆಲ ಗ್ರಾಮಸ್ಥರನ್ನ ಎತ್ತಿ ಕಟ್ಟಿ ಗಲಾಟೆ ಮಾಡಿಸೋಕೆ ಮುಂದಾಗಿದ್ದಾರೆ.

  • ಶಾಲಾ ಆವರಣದಲ್ಲಿ ಮುಖ್ಯಶಿಕ್ಷಕನಿಂದಲೇ 6ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

    ಶಾಲಾ ಆವರಣದಲ್ಲಿ ಮುಖ್ಯಶಿಕ್ಷಕನಿಂದಲೇ 6ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

    ಭುವನೇಶ್ವರ: ಶಾಲಾ ಆವರಣದಲ್ಲೇ ಮುಖ್ಯಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ.

    ಈ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿ 6ನೇ ತರಗತಿ ಓದುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಒಡಿಶಾ ಪೊಲೀಸರು ಮುಖ್ಯಶಿಕ್ಷಕನನ್ನು ಬಂಧಿಸಿದ್ದಾರೆ.

    ಮುಖ್ಯಶಿಕ್ಷಕ ವಿದ್ಯಾರ್ಥಿಯ ಮೇಲೆ ಕಳೆದ 1 ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ವಿದ್ಯಾರ್ಥಿನಿ ಈ ಕುರಿತು ತನ್ನ ಪೋಷಕರಿಗೆ ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೋಷಕರು ಬಾಲಕಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮುಖ್ಯಶಿಕ್ಷಕನನ್ನು ಬಂಧಿಸಲಾಗಿದೆ ಅಂತ ಡಿಐಬಿ, ಡಿಎಸ್‍ಪಿ ವಿಕೆ ಪಟೇಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಆರೋಪಿ ಬಂಧನಕ್ಕೂ ಮೊದಲು ಬಾಲಕಿಯ ಹೆತ್ತವರು ಹಾಗೂ ಸ್ಥಳೀಯರು ಶಿಕ್ಷಕನಿಗೆ ಹಿಗ್ಗಾಮುಗ್ಗವಾಗಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಮೊದಲು ಅಂದ್ರೆ ಡಿಸೆಂಬರ್ 5ರಂದು 3 ವರ್ಷದ ಕಂದಮ್ಮನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕೇತ್ತರ ಸಿಬ್ಬಂದಿಯೊಬ್ಬನನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿತ್ತು. ಆರೋಪಿಯನ್ನು ಮನೋಜ್ ಎಂದು ಗುರುತಿಸಲಾಗಿತ್ತು. ಈತ ಜೂನ್ ಮತ್ತು ಸಪ್ಟೆಂಬರ್ ತಿಂಗಳಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತು ಬಾಲಕಿಯ ಹೆತ್ತವರು ಸೆಪ್ಟೆಂಬರ್ ನಲ್ಲಿ ದೂರು ದಾಖಲಿಸಿದ್ದರು.

    ಮತ್ತೊಂದು ಪ್ರಕರಣದಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ದೈಹಿಕ ತರಬೇತಿ ಶಿಕ್ಷಕರನ್ನು ಬಂಧಿಸಲಾಗಿತ್ತು. ಈ ಘಟನೆಯು ಕೂಡ ಕೋಲ್ಕತ್ತಾದ ಉನ್ನತ ಮಟ್ಟದ ಶಾಲೆಯೊಂದರಲ್ಲಿ ನಡೆದಿತ್ತು.