Tag: ಬಾಲಕಿ

  • ಬಾಲಕಿಯ ಕಷ್ಟ ಆಲಿಸಿದ್ದ ಸಿಎಂ ಎಚ್‍ಡಿಕೆ -ಇಂದು ತಹಶೀಲ್ದಾರ್ ಶಬಾಬ್ತಾಜ್ ಮನೆಗೆ ಭೇಟಿ

    ಬಾಲಕಿಯ ಕಷ್ಟ ಆಲಿಸಿದ್ದ ಸಿಎಂ ಎಚ್‍ಡಿಕೆ -ಇಂದು ತಹಶೀಲ್ದಾರ್ ಶಬಾಬ್ತಾಜ್ ಮನೆಗೆ ಭೇಟಿ

    ಮಂಡ್ಯ: ರಸ್ತೆ ಬದಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾವು ಕೊಟ್ಟ ಮಾತಿನಂತೆ ಬಾಲಕಿಯ ಮನೆಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರನ್ನು ಕಳುಹಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಬಾಲಕಿಗೆ ಕೊಟ್ಟ ಮಾತಿನಂತೆ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರಿಗೆ ಕರೆ ಮಾಡಿದ್ದಾರೆ. ಬಳಿಕ ಹೂ ಮಾರುತ್ತಿದ್ದ ಬಾಲಕಿಯ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಾಲಕಿ ಶಬಾಬ್ತಾಜ್ ಮನೆಗೆ ತಹಶೀಲ್ದಾರ್ ನಾಗೇಶ್ ಅವರು ಭೇಟಿ ನೀಡಿದ್ದು, ಬಾಲಕಿ ಮತ್ತು ಅವರ ಮನೆಯವರಿಂದ ಮಾಹಿತಿ ಕಲೆ ಹಾಕಿದ್ದಾರೆ.

    ಈ ವೇಳೆ ಬಾಲಕಿ ಶಬಾಬ್ತಾಜ್ ಮನೆಯವರ ಕಷ್ಟವನ್ನು ತಹಶೀಲ್ದಾರ್ ಬಳಿ ಹೇಳಿಕೊಂಡಿದ್ದಾಳೆ. ತಾನು ಉನ್ನತ ವ್ಯಾಸಂಗ ಮಾಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ಸದ್ಯದಲ್ಲೇ ತಾವು ಪಡೆದಿರುವ ಮಾಹಿತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಳುಹಿಸಿಕೊಡುವುದಾಗಿ ತಹಶೀಲ್ದಾರ್ ನಾಗೇಶ್ ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಾಮಾನ್ಯ ಬಾಲಕಿಯೊಬ್ಬಳ ಕಷ್ಟಕ್ಕೆ ಸ್ಪಂದಿಸಿದ ರೀತಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

    ಬುಧವಾರ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೂಳ ಗ್ರಾಮದ ರಸ್ತೆ ಬದಿಯಲ್ಲಿ 12 ವರ್ಷದ ಶಬಾಬ್ತಾಜ್ ಬಾಲಕಿ ಶಾಲೆಗೆ ಹೋಗದೆ ಹೂವನ್ನು ಮಾರುತ್ತಿದ್ದಳು. ಅದೇ ಮಾರ್ಗವಾಗಿ ಬರುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬಾಲಕಿಯ ಬಳಿ ಕಾರ್ ನಿಲ್ಲಿಸಿ ಆಕೆ ಶಾಲೆಗೆ ಹೋಗದೆ ಯಾಕೆ ಹೂ ಮಾರುತ್ತಿದ್ದಾಳೆ ಎಂಬುದನ್ನು ವಿಚಾರಿಸಿದ್ದರು. ಅಷ್ಟೇ ಅಲ್ಲದೇ ಬಾಲಕಿಯ ಬಳಿ ಹೂ ತೆಗೆದುಕೊಂಡು ಬಾಲಕಿ ಬೇಡವೆಂದರೂ ಆಕೆಗೆ ನೂರು ರೂಪಾಯಿ ಕೊಟ್ಟು ಆಕೆಯ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2ನೇ ಬಾರಿ ಸಿಕ್ಕಿದ್ದು, ಸಿಎಂ ಕಂಡು ಗಾಬರಿಯಾದೆ- ಬಾಲಕಿಯ ಚಟ್‍ಪಟ್ ಮಾತಿನ ವಿಡಿಯೋ ನೋಡಿ

    2ನೇ ಬಾರಿ ಸಿಕ್ಕಿದ್ದು, ಸಿಎಂ ಕಂಡು ಗಾಬರಿಯಾದೆ- ಬಾಲಕಿಯ ಚಟ್‍ಪಟ್ ಮಾತಿನ ವಿಡಿಯೋ ನೋಡಿ

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ನಿಲ್ಲಿಸಿ ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ಮಾತನಾಡಿಸಿದ್ದರು. ಈ ಕುರಿತು ಬಾಲಕಿ ಶಬಬ್ತಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತನ್ನ ಖುಷಿಯನ್ನು ಹಂಚಿಕೊಂಡಿದ್ದಾಳೆ.

    ನಾನು ರಸ್ತೆ ಬದಿಯಲ್ಲಿ ಹೂವು ಮಾರಿಕೊಂಡು ಇದ್ದಾಗ ಸಿಎಂ ಎಚ್‍ಡಿ ಕುಮಾರಸ್ವಾಮಿ ಅದೇ ಮಾರ್ಗವಾಗಿ ಬಂದ್ರು. ಟಿವಿಯಲ್ಲಿ ನೋಡ್ತಾ ಇರ್ತಿನಲ್ವ ಹಾಗಾಗಿ ಅವರು ಮುಖ್ಯಮಂತ್ರಿ ಅಂತ ಗೊತ್ತಿತ್ತು. ಕಾರು ನಿಲ್ಲಿಸಿ ಎಷ್ಟನೇ ಕ್ಲಾಸ್ ಅಂತ ಕೇಳಿದ್ರು. ನಾನು 6ನೇ ತರಗತಿ ಅಂದೆ. ಆವಾಗ ಅವರು ಈ ರೀತಿ ಹೂವು ಮಾರಬಾರದು. ಚೆನ್ನಾಗಿ ಓದಬೇಕು ಅಂದ್ರು. ಆಯ್ತು ಅಂದೆ ಅಂತ ಬಾಲಕಿ ವಿವರಿಸಿದ್ದಾಳೆ.

    ಈ ವೇಳೆ ಯಾಕೆ ಶಾಲೆಗೆ ಹೋಗಿಲ್ಲ ಅಂದ್ರು. ಬಕ್ರೀದ್ ಗೆ ರಜೆ ಕೊಟ್ಟಿದ್ದಾರೆ ಅಂದೆ. ಬಳಿಕ ಅಪ್ಪ-ಅಮ್ಮ ಏನು ಮಾಡ್ತಿದ್ದಾರೆ ಅಂತ ಮರು ಪ್ರಶ್ನೆ ಹಾಕಿದ್ರು. ಅಪ್ಪ ಲಾರಿ ಡ್ರೈವರ್ ಅಮ್ಮ ಬಟ್ಟೆ ಹೊಲಿತಾರೆ ಅಂತ ಅವರಿಗೆ ಉತ್ತರಿಸಿದೆ. ಆವಾಗ ಅವರು ಈ ತರ ಕೆಲಸ ಮಾಡಬಾರದು ಅಂತ ಹಿಂದೆ ಇರುವ ಪೊಲೀಸರ ಕೈಯಲ್ಲಿ 100 ರೂ ಕೊಟ್ರು. ನಾನು ಬೇಡ ಬೇಡ ಅಂದ್ರೂ ನನ್ನ ಕೈಯಲ್ಲಿ 100 ಇಟ್ಟು, ಅಪ್ಪ-ಅಮ್ಮನನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವಂತೆ ಹೇಳು. ನಿಮಗೇನು ವ್ಯವಸ್ಥೆ ಬೇಕು ಅದನ್ನು ಮಾಡಿಕೊಡುತ್ತೇನೆ ಅಂತ ತಿಳಿಸಿದ್ರು. ಇದನ್ನೂ ಓದಿ: ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟ ಆಲಿಸಿದ ಸಿಎಂ ಎಚ್‍ಡಿಕೆ

    ಶಾಲೆಗೆ ಯಾವುದೇ ರೀತಿಯ ತೊಂದರೆಯಿಲ್ಲ ಅಂದ ಬಾಲಕಿ, ಅಪ್ಪನಿಗೆ ಸಿಎಂ ಅವರು ನನ್ನ ಭೇಟಿ ಮಾಡಿರುವ ವಿಚಾರ ಇದುವರೆಗೂ ಗೊತ್ತಾಗಿಲ್ಲ. ಆದ್ರೆ ಅಮ್ಮನ ಬಳಿ ಹೋಗಿ ಹೇಳಿದಾಗ, ಸುಳ್ಳು ಹೇಳುತ್ತಿಯಾ ಅಂದ್ರು. ಆ ಬಳಿಕ ಅವರಿಗೆ ಗೊತ್ತಾಯಿತು. ಸಿಎಂ ಅವರು ಇದು ಎರಡನೇ ಬಾರಿ ಸಿಕ್ಕಿರುವುದು. ಈ ಹಿಂದೆ ಅವರು ಚುನಾವಣೆಯಲ್ಲಿ ಗೆಲ್ಲುವ ಮೊದಲು ಇಲ್ಲಿ ಬಂದಿದ್ದರು. ಆವಾಗ ನಾನೇ ಅವರಿಗೆ ಹೂ ಹಾರ ಹಾಕಿದ್ದೆ ಎಂದು ಬಾಲಕಿ ಮುದ್ದು-ಮುದ್ದಾಗಿ ಚಟಪಟ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡಿದಳು.

    ಮನೆಯಲ್ಲಿ ತುಂಬಾನೇ ಕಷ್ಟ ಇದೆ. ಸಾಲಗಳು ಇವೆ. ಅಮ್ಮನಿಗೆ ಹುಷಾರಿಲ್ಲ. ಹೀಗಾಗಿ ಸಾಲ ತೀರಿಸಲು ಸಹಾಯ ಮಾಡಿ ಅಂತ ಸಿಎಂ ಅವರಲ್ಲಿ ಕೇಳಿಕೊಳ್ಳುತ್ತೇನೆ. ಇಂದು ಸಿಎಂ ಅವರನ್ನು ಕಂಡಾಗ ಮೊದಲು ಗಾಬರಿಯಾದೆ. ಪೊಲೀಸ್ ನವರು ಕೂಡ ನನ್ನ ಹಿಂದೆಯೇ ಓಡಿ ಬಂದ್ರು. ಹೀಗಾಗಿ ನಾನು ಅವರಲ್ಲಿ ಏನೂ ಕೇಳಿಲ್ಲ. ಅವರು ಮಾತಾಡಿಸಿದ್ದಕ್ಕೆ ನಾನೂ ಮಾತಾಡಿಸಿದೆ ಅಂತ ಬಾಲಕಿ ಮುದ್ದಾಗಿಯೇ ತಿಳಿಸಿದಳು.

    ಮನೆಯಲ್ಲಿ ಕಷ್ಟ ಇರುವುದರಿಂದ ನಾನು ಸೋಮವಾರ ಶಾಲೆಗೆ ಹೋಗುತ್ತೇನೆ ಅಂತ ಹೇಳಿದ್ದೆ. ನನಗೆ ಹುಷಾರಿಲ್ಲ ಕೂಡ. ಹೀಗಾಗಿ ಅಮ್ಮ ಟೀಚರ್ ಗೆ ಫೋನ್ ಮಾಡಿ ಸೋಮವಾರದಿಂದ ಶಾಲೆಗೆ ಕಳುಹಿಸುತ್ತೇನೆ ಅಂತ ಹೇಳಿದ್ದರು ಅಂತ ಬಾಲಕಿ ಶಾಲೆಗೆ ಹೋಗದ ವಿಚಾರಕ್ಕೆ ಸ್ಪಷ್ಟನೆ ನೀಡಿದಳು.

    ಸಿಎಂ ಹಾಗೂ ಬಾಲಕಿ ಮಾತನಾಡುತ್ತಿರುವುದನ್ನು ಕಂಡು ಸ್ಥಳದಲ್ಲಿ ನೆರೆದವರು ಮೂಕವಿಸ್ಮಿತರಾಗಿದ್ದಾರೆ. ಅಲ್ಲದೇ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸಿಎಂ ಹಾಗೂ ಬಾಲಕಿ ಮಾತನಾಡುತ್ತಿರುವ ಫೋಟೋ ಕ್ಲಿಕ್ಕಿಸಿ ಕಷ್ಟ ಆಲಿಸಿದ ಸಿಎಂ ಮಾನವೀಯತೆ ಕೆಲಸವನ್ನು ಶ್ಲಾಘಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟ ಆಲಿಸಿದ ಸಿಎಂ ಎಚ್‍ಡಿಕೆ

    ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟ ಆಲಿಸಿದ ಸಿಎಂ ಎಚ್‍ಡಿಕೆ

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ತಮ್ಮ ಕಾರನ್ನು ನಿಲ್ಲಿಸಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಕಷ್ಟವನ್ನು ಆಲಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

    ಇಂದು ಸಿಎಂ ಕುಮಾರಸ್ವಾಮಿ ಕೆ.ಆರ್.ಎಸ್ ನಿಂದ ರಾಮನಗರಕ್ಕೆ ಹೋಗುತ್ತಿದ್ದರು. ಅದೇ ಮಾರ್ಗ ಮಧ್ಯೆ ಬೆಳಗೊಳ ಗ್ರಾಮದ ಶ್ರೀರಂಗಪಟ್ಟಣದ ರಸ್ತೆ ಬದಿಯಲ್ಲಿ ಹೂವನ್ನು ಮಾರುತ್ತ ಶಾಬಾಬ್ತಾಜ್ ಬಾಲಕಿ ಕುಳಿತ್ತಿದ್ದಳು. ಈ ವೇಳೆ ಕುಮಾರಸ್ವಾಮಿ ಹೂ ಮಾರುತ್ತಾ ಕುಳಿತ್ತಿದ್ದ ಬಾಲಕಿಯನ್ನು ನೋಡಿ ರಸ್ತೆ ಮಧ್ಯೆಯೇ ಆಕೆಯ ಬಳಿ ಕಾರನ್ನ ನಿಲ್ಲಿಸಿ ಮಾತನಾಡಿದ್ದಾರೆ.

    ಬಾಲಕಿ ತಮ್ಮ ಮನೆಯ ಸಂಕಷ್ಟವನ್ನು ಕುಮಾರಸ್ವಾಮಿಗೆ ಹೇಳಿಕೊಂಡಿದ್ದಾಳೆ. ಬಳಿಕ ಬಾಲಕಿಯ ಕಷ್ಟವನ್ನು ಆಲಿಸಿದ ಸಿಎಂ ಗ್ರಾಮಸ್ಥರಿಗೆ ಆಕೆಯ ತಂದೆಗೆ ತನ್ನನ್ನು ಕಾಣುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಅವರು ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿ ರಾಮನಗರಕ್ಕೆ ತೆರಳಿದ್ದಾರೆ. ಇತ್ತ ಗ್ರಾಮಸ್ಥರು ಕೂಡು ಸಿಎಂ ಅವರ ಸರಳತೆಯನ್ನ ಕಂಡು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

    ಕುಮಾರಸ್ವಾಮಿಯವರು ಇಂದು ತಮ್ಮ ತವರು ಕ್ಷೇತ್ರವಾದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಆಲಿಕೆ ಹಾಗೂ ಅಹವಾಲು ಸ್ವೀಕರಿಸಲು ಹೋಗಿದ್ದರು. ಹೋಬಳಿವಾರು ನಡೆಸಿರುವ ಜನತಾದರ್ಶನ ಕಾರ್ಯಕ್ರಮದಲ್ಲಿ ಮೊದಲಿಗೆ ಕೈಲಾಂಚ ಗ್ರಾಮದಲ್ಲಿ ನಡೆಸಿದರು. ಕೈಲಾಂಚದಲ್ಲಿ ಈಗಾಗಲೇ 10 ಕೌಂಟರ್ ಗಳ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ ಮಾಡಲಾಗುತ್ತಿದೆ.

    ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ನಾಳೆಗೆ ಸಮ್ಮಿಶ್ರ ಸರ್ಕಾರ ನೂರು ದಿನವನ್ನು ಪೂರೈಸಲಿದೆ. ನೂತನವಾಗಿ ಹೊಸ ಯೋಜನೆಗಳನ್ನ ಅನುಷ್ಠಾನಕ್ಕೆ ತರಬೇಕು. ನಮ್ಮದೇ ಆದ ಯೋಜನೆಗಳು ಇವೆ. ಅವುಗಳನ್ನು ಸೆಪ್ಟೆಂಬರ್ ತಿಂಗಳಿಂದ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಲಾಗುವುದು. ಸಮಯ ವ್ಯರ್ಥ ಮಾಡದೇ ರಾಜ್ಯದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ತೀರಿಕೊಂಡ ಬಳಿಕ 10ರ ಮಗಳ ಮೇಲೆ ಅತ್ಯಾಚಾರವೆಸಗಿದ!

    ಪತ್ನಿ ತೀರಿಕೊಂಡ ಬಳಿಕ 10ರ ಮಗಳ ಮೇಲೆ ಅತ್ಯಾಚಾರವೆಸಗಿದ!

    ನವದೆಹಲಿ: 40 ವರ್ಷದ ವ್ಯಕ್ತಿಯೊಬ್ಬ ತನ್ನ 10 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಘಟನೆಯೊಂದು ದೆಹಲಿಯ ಗೋವಿಂದಪುರಿಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ತನ್ನ ತಂದೆ ಅತ್ಯಾಚಾರವೆಸಗಿದ ವಿಚಾರವನ್ನು ಬಾಲಕಿ ತನ್ನ ಸಹಪಾಠಿಗಳಿಗೆ ತಿಳಿಸಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಕಿಯನ್ನು ಮಂಗಳವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಅಂತ ಡಿಸಿಪಿ ಘನಶ್ಯಾಮ್ ಬನ್ಸಾಲ್ ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕಿಯ ತಾಯಿ ತೀರಿಕೊಂಡಿದ್ದರು. ತಾಯಿಯ ನಿಧನದ ಬಳಿಕ ಬಾಲಕಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಈ ವೇಳೆ ತಂದೆ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ತನ್ನ ಮೇಲೆ ತಂದೆ ಎಸಗುತ್ತಿರುವ ಅತ್ಯಾಚಾರದ ವಿಷಯವನ್ನು ಮೊದಲು ಬಾಲಕಿ ಸಹಪಾಠಿಗಳಿಗೆ ತಿಳಿಸಿದ್ದಾಳೆ. ಈ ವಿಚಾರವನ್ನು ಆಕೆಯ ಸಹಪಾಠಿಗಳು ಟೀಚರ್ ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನೆಯನ್ನರಿತ ಶಿಕ್ಷಕರು ಬಾಲಕಿಯನ್ನು ವಿಚಾರಿಸಿ, ನಿನಗೆ ಯಾರು ಕಿರುಕುಳ ನೀಡುತ್ತಾರೆ ಅಂತ ಪ್ರಶ್ನಿಸಿದ್ದಾರೆ. ಬಳಿಕ ಈ ವಿಚಾರವಾಗಿ ಶಾಲಾ ಆಡಳಿತ ಮಂಡಳಿ ಜೊತೆ ಚರ್ಚಿಸಿ ಬಳಿಕ ಆಡಳಿತ ಮಂಡಳಿ ಸದಸ್ಯರು ಪೊಲೀಸರನ್ನು ಸಂಪರ್ಕಿಸಿ ಘಟನೆಯನ್ನು ವಿವರಿಸಿದ್ದಾರೆ. ಕೂಡಲೇ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ, ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ತನಿಖೆ ನಡೆಸಿದ ವೇಳೆ ಆರೋಪಿ ತಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಸದ್ಯ ಬಾಲಕಿಗೆ ಕೌನ್ಸಿಲಿಂಗ್ ನಡೆಸುತ್ತಿದ್ದು, ವೈದ್ಯಕೀಯ ವರದಿಗಾಗಿ ಕಾಯುತ್ತಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಬಿದ್ದು 5ರ ಬಾಲೆ ಸಾವು!

    ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಬಿದ್ದು 5ರ ಬಾಲೆ ಸಾವು!

    ಭೋಪಾಲ್: ಕುದಿಯುತ್ತಿದ್ದ ಬೇಳೆ ಸಾರಿನ ಪಾತ್ರೆಗೆ ಜಾರಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಾಹೆದೊಲ್ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ನಡೆದಿದೆ.

    ಸುಹಾಸಿನಿ ಬೈಗಾ ಮೃತಪಟ್ಟ ಬಾಲಕಿ. ಘಟನೆ ನಡೆದು 5 ದಿನಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬಾಲಕಿಯು ಜಬಲ್ಪುರ್ ಖಾಸಗಿ ಆಸ್ಪತೆಯಲ್ಲಿ ಮೃತಪಟ್ಟಿದ್ದಾಳೆ.

    ನಡೆದದ್ದು ಏನು?
    ನಾನು ಪಕ್ಕದ ಕೊಠಡಿಯಲ್ಲಿ ಇದ್ದ ಅಕ್ಕಿಯನ್ನು ತರಲು ಹೋಗಿದ್ದೆ. ಆಗ ಯಾರೋ ಕಿರುಚಿದ ಶಬ್ಧ ಕೇಳಿಸಿತು. ತಕ್ಷಣವೇ ಬಂದು ನೋಡಿದಾಗ ಬಾಲಕಿ ಸಾರ್ ಪಾತ್ರೆಯ ಒಳಗಡೆ ಬಿದ್ದಿದ್ದಳು. ತಕ್ಷಣವೇ ಆಕೆಯನ್ನು ಹೊರ ತೆಗೆದು, ಬಾಲಕಿಯ ತಂದೆಗೆ ಮಾಹಿತಿ ನೀಡಿದೆ. ಅವರು ಶಾಹೆದೊಲ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರು ಎಂದು ಅಂಗನವಾಡಿ ಸಹಾಯಕಿ ಬೈಗಾ ತಿಳಿಸಿದ್ದಾರೆ.

    ಬಾಲಕಿಯ ಚಿಕಿತ್ಸೆಗೆ ಅಡುಗೆ ಸಹಾಯಕಿ 250 ರೂ. ನೀಡಿದ್ದರು. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ್ದರೂ, ಪ್ರಕರಣದ ಕುರಿತು ಶಾಹೆದೊಲ್ ಜಿಲ್ಲಾಸ್ಪತ್ರೆ ವೈದ್ಯರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಮಂಗಳವಾರ ಬಾಲಕಿ ಸ್ಥಿತಿ ಗಂಭೀರವಾಗಿದ್ದರಿಂದ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಇತ್ತ ಬಾಲಕಿ ಪೋಷಕರು ಆಕೆಯನ್ನು ಜಿಲ್ಲಾಸ್ಪತ್ರೆಯಿಂದ ಜಬಲ್ಪುರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಕರಣದ ಕುರಿತ ತನಿಖೆ ನಡೆಸುವಂತೆ ಮತ್ತು ನಿಷ್ಕಾಳಜಿ ತೋರಿದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲಾ ಹುಡ್ಗಿಯ ಬಟ್ಟೆ ಎಳೆದು ಕಿರುಕುಳ – ರಸ್ತೆಯಲ್ಲಿಯೇ 7 ಮಂದಿ ಕಾಮುಕರಿಂದ ಹೀನಾಕೃತ್ಯ

    ಶಾಲಾ ಹುಡ್ಗಿಯ ಬಟ್ಟೆ ಎಳೆದು ಕಿರುಕುಳ – ರಸ್ತೆಯಲ್ಲಿಯೇ 7 ಮಂದಿ ಕಾಮುಕರಿಂದ ಹೀನಾಕೃತ್ಯ

    ಪಾಟ್ನಾ: ರಸ್ತೆಯಲ್ಲಿಯೇ ಶಾಲಾ ಹುಡುಗಿಯೊಬ್ಬಳ ಬಟ್ಟೆ ಎಳೆದು ಏಳು ಮಂದಿ ಕಾಮುಕರು ಆಕೆಗೆ ಕಿರುಕುಳ ನೀಡಿರುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಅನೇಕ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಳು ಆರೋಪಿಗಳು ಸಂತ್ರಸ್ತೆ ಅಳುತ್ತಾ ಸಹಾಯಕ್ಕೆ ಅಂಗಲಾಚಿದರೂ ಬಿಡದೇ ಕಿರುಕುಳ ನೀಡಿದ್ದಾರೆ. ಈ ವಿಡಿಯೋ 40 ಸೆಕೆಂಡ್ ಗಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಮವಾರ ಪೊಲೀಸರು ತನಿಖೆ ಮಾಡಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿಗಳನ್ನು ಪತ್ತೆ ಮಾಡಬೇಕಾಗಿದೆ.

    ಪಂಕಜ್ ಯಾದವ್ ಬಂಧಿತ ಆರೋಪಿ. ಈತ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದಾಗ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ಪೊಲೀಸ್ ಸಿಬ್ಬಂದಿಯೊಬ್ಬರಿಗೆ ವಾಟ್ಸಪ್ ಮೂಲಕ ಬಾಲಕಿಗೆ ಕಿರುಕುಳ ನೀಡುತ್ತಿರುವ ವಿಡಿಯೋ ಬಂದಿದೆ. ಅದನ್ನು ನೋಡಿದ ತಕ್ಷಣ ಎಲ್ಲ ಜಿಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಿದೆವು. ತಕ್ಷಣ ಘಟನೆ ನಡೆದ ಸ್ಥಳವನ್ನು ಪತ್ತೆ ಮಾಡಿ ನಂತರ ಸದಾರ್ ಪೊಲೀಸ್ ಠಾಣಾ ಪೊಲೀಸರು ಪಂಕಜ್ ಯಾದವ್ ನನ್ನು ಬಂಧಿಸಿದ್ದಾರೆ ಎಂದು ಸೂಪರಿಂಟೆಂಡೆಂಟ್ ಪೊಲೀಸ್ ರಾಕೇಶ್ ಕುಮಾರ್ ತಿಳಿಸಿದ್ದಾರೆ.

    ನಾವು ಸಂತ್ರಸ್ತೆಯನ್ನು ಪತ್ತೆ ಮಾಡಿ ಆಕೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಸಂತ್ರಸ್ತೆ ಯಾವುದೇ ರೀತಿಯ ದೂರು ಸಲ್ಲಿಸಿಲ್ಲ. ಆದರು ನಾವು ವಿಡಿಯೋವನ್ನು ಆಧರಿಸಿದ ಪ್ರಕರಣವನ್ನು ದಾಖಲಿಸಿದ್ದೇವೆ. ಈ ವಿಡಿಯೋ ಬಂದ ಅಧಿಕಾರಿಯೊಬ್ಬರು ಎಫ್‍ಐಆರ್ ದಾಖಲಿಸಿದ್ದಾರೆ. ನಾವು ಎಲ್ಲ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಎಸ್‍ಪಿ ಹೇಳಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಸಂತ್ರಸ್ತೆ ಸೈಕಲ್ ಮೂಲಕ ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದಳು. ಆಗ ಯುವಕರ ಗುಂಪೊಂದು ಆಕೆಯನ್ನು ಅಡ್ಡ ಗಟ್ಟಿ ಕಿರುಕುಳ ನೀಡಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಒಬ್ಬ ಆರೋಪಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಉಳಿದರು ಆತನನ್ನು ತಡೆದಿದ್ದಾರೆ. ನಂತರ ಆಕೆ ತಪ್ಪಿಕೊಳ್ಳಲು ಪ್ರಯತ್ನಿಸಿದಾಗ ಸಂತ್ರಸ್ತೆಯ ದುಪ್ಪಟ್ಟವನ್ನು ಎಳೆದಾಡಿ ಕಿರುಕುಳ ನೀಡಿದ್ದಾರೆ. ಆಗ ಸಂತ್ರಸ್ತೆ ತನ್ನನ್ನು ಬಿಡುವಂತೆ ಗೋಗರೆದಿದ್ದಾಳೆ. ಆದರೆ ಕಾಮುಕರು ಸಂತ್ರಸ್ತೆಯನ್ನು ಬಿಡದೆ ಕಿರುಕುಳ ನೀಡಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಆರೋಪಿಯೊಬ್ಬನನ್ನು ಬಂಧಿಸಿದ ನಂತರ ಉಳಿದವರ ಪತ್ತೆ ಮಾಡುವುದು ಸುಲಭವಾಗಿದೆ. ಈಗಾಗಲೇ ಅವರಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದ್ಯಕೀಯ ಪರೀಕ್ಷೆಯ ವರದಿ ನೋಡಿ 14ರ ಗ್ಯಾಂಗ್‍ರೇಪ್ ಸಂತ್ರಸ್ತೆ ಆತ್ಮಹತ್ಯೆ

    ವೈದ್ಯಕೀಯ ಪರೀಕ್ಷೆಯ ವರದಿ ನೋಡಿ 14ರ ಗ್ಯಾಂಗ್‍ರೇಪ್ ಸಂತ್ರಸ್ತೆ ಆತ್ಮಹತ್ಯೆ

    ಲಕ್ನೋ: ತನ್ನ ಮೇಲೆ ಗ್ಯಾಂಗ್ ರೇಪ್ ಆಗಿಲ್ಲ ಎನ್ನುವ ವೈದ್ಯಕೀಯ ವರದಿಯನ್ನು ನೋಡಿ 14 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಾದಾನ್ ನಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಗನ್ ತೋರಿಸಿ ಹತ್ತಿರದ ಸರ್ಕಾರಿ ಶಾಲೆಗೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿ ದೂರು ನೀಡಿದ್ದಳು. ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಮುಖ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವ ವರದಿ ಬಂದಿತ್ತು. ಈ ವರದಿಯನ್ನು ನೋಡಿ ಶಾಕ್ ಆಗಿ ಬುಧವಾರ ರಾತ್ರಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ತನಿಖೆಯ ವೇಳೆ ನೇಣಿಗೆ ಶರಣಾದ ಬಾಲಕಿ ಆರೋಪಿಯ ಜೊತೆ 122 ಬಾರಿ ಫೋನಿನಲ್ಲಿ ಮಾತನಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ 2 ತಿಂಗಳ ಕಾಲ ಆಕೆ ನಿರಂತರ ಸಂಪರ್ಕಲ್ಲಿದ್ದ ವಿಚಾರ ತಿಳಿದುಬಂದಿದೆ.

    ಈಗ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ತನಿಖೆಗೆ ಪೊಲೀಸರು ಈ ವರದಿಯನ್ನು ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 10ರ ಬಾಲಕಿಯಿಂದಾಗಿ ಪ್ರಾಣ ಉಳಿಸಿಕೊಂಡ ನಿವಾಸಿಗಳು!

    ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 10ರ ಬಾಲಕಿಯಿಂದಾಗಿ ಪ್ರಾಣ ಉಳಿಸಿಕೊಂಡ ನಿವಾಸಿಗಳು!

    ಮುಂಬೈ: ನಗರದಲ್ಲಿ ಬುಧವಾರ ನಡೆದ ಬಹುಮಹಡಿ ಕಟ್ಟಡ ದುರಂತದಲ್ಲಿ 10 ವರ್ಷದ ಬಾಲಕಿಯ ನೆರವಿನಿಂದ 16ನೇ ಮಹಡಿಯಲ್ಲಿದ್ದ ನಿವಾಸಿಗಳು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

    10 ವರ್ಷದ ಜೆನ್ ಸದವರ್ತೆ ಅಪಾಯಕ್ಕೆ ಸಿಲುಕಿದ್ದವರ ಪ್ರಾಣ ಉಳಿಸಿದ ಬಾಲಕಿಯಾಗಿದ್ದಾಳೆ. ಕ್ರಿಸ್ಟಲ್ ಟವರ್ ನ 16ನೇ ಮಹಡಿಯಲ್ಲಿ ತನ್ನ ಪೋಷಕರೊಂದಿಗೆ ವಾಸವಾಗಿದ್ದ ಬಾಲಕಿಯು ಬುಧವಾರ ಬೆಳಗ್ಗೆ ನಿದ್ರಿಸುತ್ತಿರುವಾಗ, ಏಕಾಏಕಿ ಮನೆಯ ಅಡುಗೆ ಕೋಣೆಯಿಂದ ಹೊಗೆ ಬರಲು ಆರಂಭಿಸಿದೆ, ಈ ವೇಳೆ ಬಾಲಕಿಯ ಪೋಷಕರು ಆಕೆಯನ್ನು ಎಚ್ಚರಿಸಿದ್ದಾರೆ.

    ಕೂಡಲೇ ಮನೆಯಿಂದ ಹೊರಕ್ಕೆ ಬಂದಾಗ ಅಕ್ಕ-ಪಕ್ಕದ ನಿವಾಸಿಗಳೆಲ್ಲರೂ ಗಾಬರಿಯಿಂದ ಹೊರಗೆ ನಿಂತಿದ್ದರು. ಅಲ್ಲದೇ ಸುತ್ತಲು ಹೊಗೆ ಆವರಿಸುತ್ತಿರುವುದನ್ನು ಗಮನಿಸಿದ ಬಾಲಕಿಯು ಕೂಡಲೇ ತನ್ನ ಪೋಷಕರಿಗೆ ತಾನು 3ನೇ ತರಗತಿಯಲ್ಲಿರುವಾಗ ಅಗ್ನಿ ಅವಘಡವಾದ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಕಲಿತ್ತಿದ್ದ ವಿಷಯವನ್ನು ಜ್ಞಾಪಿಸಿ ಕೊಂಡಿದ್ದಾಳೆ.

    ಬಚಾವ್ ಮಾಡಿದ್ದು ಹೇಗೆ?
    ಬಾಲಕಿಯು ಪೋಷಕರು ಹಾಗೂ ಸುತ್ತಮುತ್ತ ನಿವಾಸಿಗಳಿಗೆ ಎಲ್ಲರೂ ಹತ್ತಿಯನ್ನು ನೀರಿನಲ್ಲಿ ನೆನೆಸಿ ಬಾಯಿಯಲ್ಲಿ ಇಟ್ಟುಕೊಳ್ಳಿ, ಇದರಿಂದ ಹೊಗೆಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ನಮ್ಮ ದೇಹವನ್ನು ಸೇರುವುದಿಲ್ಲ. ಹೀಗೆ ಮಾಡಿದರೆ ನಮಗೆ ಯಾವುದೇ ತೊಂದರೆಯಾಗುವುದಿಲ್ಲವೆಂದು ತಿಳಿಸಿದ್ದಾಳೆ. ಬಾಲಕಿಯ ಮಾತಿನಿಂದ ಎಚ್ಚರಗೊಂಡ ಎಲ್ಲರೂ ಮನೆಯಲ್ಲಿರುವ ಹತ್ತಿಗಳನ್ನು ನೆನೆಸಿ, ತಮ್ಮ ತಮ್ಮ ಬಾಯಿಯಲ್ಲಿ ಇಟ್ಟುಕೊಂಡು ಪ್ರಾಣವನ್ನು ಉಳಿಸಿಕೊಳ್ಳಲು ಸಫಲರಾಗಿದ್ದಾರೆ.

    ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ 16 ನೇ ಮಹಡಿಯಲ್ಲಿದ್ದ ನಿವಾಸಿಗಳನ್ನು ರಕ್ಷಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ನಿವಾಸಿಗಳು ಬಳಸಿದ್ದ ಯೋಜನೆಯನ್ನು ತಿಳಿದ ಅಧಿಕಾರಿಗಳು ಬಾಲಕಿಯ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಬಾಲಕಿಯಿಂದಾಗಿ ನಿವಾಸಿಗಳು ಬದುಕಲು ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

    ಬಾಲಕಿಯು ನಗರದ ಸುಬುರಬಾನ್ ಮತುಂಗ ಪ್ರದೇಶದ ಡಾನ್ ಬಾಸ್ಕೋ ಶಾಲೆಯಲ್ಲಿ 6ನೇ ತರಗತಿಯನ್ನು ಓದುತ್ತಿದ್ದು, ತುರ್ತು ಹಾಗೂ ಬೆಂಕಿ ಅವಘಡಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು 3ನೇ ತರಗತಿಯಲ್ಲಿರುವಾಗ ಕಲಿತಿದ್ದನ್ನು ನೆನಪಿಸಿಕೊಂಡು ಎಲ್ಲರನ್ನೂ ಪ್ರಾಣಾಪಾಯದಿಂದ ಪಾರು ಮಾಡಿದ್ದಾಳೆ. ಹತ್ತಿಯನ್ನು ನೀರಿನಲ್ಲಿ ನೆನೆಸಿ ಬಾಯಿಯಲ್ಲಿ ಹಾಕಿಕೊಳ್ಳುವುದರಿಂದ, ಹೊಗೆಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಹತ್ತಿಯೊಂದಿಗೆ ಸೇರಿ ಕೇವಲ ಶುಭ್ರವಾದ ಗಾಳಿಯು ದೇಹವನ್ನು ಪ್ರವೇಶಿಸುವಂತೆ ಮಾಡುತ್ತದೆ. ಇದರಿಂದ ಜೀವವನ್ನು ಉಳಿಸಿಕೊಳ್ಳಬಹುದು, ಜೊತೆಗೆ ದೀರ್ಘವಾಗಿ ಉಸಿರಾಟ ನಡೆಸುತ್ತಿರಬೇಕೆಂದು ಬಾಲಕಿಯು ಎಲ್ಲರಿಗೂ ತಿಳಿಸಿದ್ದಳು. ಹೀಗಾಗಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

    ಬುಧವಾರ ನಡೆದ ಬೆಂಕಿ ದುರಂತದಲ್ಲಿ 4 ಮಂದಿ ಸಾವನ್ನಪ್ಪಿ, 21 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಮುಕನಿಗೆ ಕಚ್ಚಿ ಬಾಲಕಿಯನ್ನು ರಕ್ಷಿಸಿದ ಸಾಕು ನಾಯಿ!

    ಕಾಮುಕನಿಗೆ ಕಚ್ಚಿ ಬಾಲಕಿಯನ್ನು ರಕ್ಷಿಸಿದ ಸಾಕು ನಾಯಿ!

    ಸಾಂದರ್ಭಿಕ ಚಿತ್ರ

    ಭೋಪಾಲ್: ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯನ್ನು ಸಾಕು ನಾಯಿ ರಕ್ಷಿಸಿದ ಘಟನೆ ಮಧ್ಯಪ್ರದೇಶದ ಸಗರ್ ಜಿಲ್ಲೆಯ ಕರೀಲಾ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    14 ವರ್ಷದ ಬಾಲಕಿಯ ಮೇಲೆ ಇಬ್ಬರು ಕಾಮುಕರು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ, ಬಾಲಕಿಯು ಕೂಗುತ್ತಿರುವುದನ್ನು ಗಮನಿಸಿ ಸ್ಥಳಕ್ಕೆ ಬಂದ ಆಕೆಯ ಸಾಕು ನಾಯಿಯು, ಕಾಮುಕನೊಬ್ಬನ ಕಾಲಿಗೆ ಬಲವಾಗಿ ಕಚ್ಚಿ, ಜೋರಾಗಿ ಬೊಗಳುವುದರ ಮೂಲಕ ಇಬ್ಬರನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ.

    ಏನಿದು ಪ್ರಕರಣ?
    ಕಳೆದ ಶುಕ್ರವಾರ ರಾತ್ರಿ ಮನೆಯ ಬಳಿ ಕುಳಿತಿದ್ದ ಬಾಲಕಿಯನ್ನು ಅದೇ ಗ್ರಾಮದವರಾದ ಐಶು ಹೈರವಾರ್(39) ಹಾಗೂ ಪುನಿತ್ ಹೈರವಾರ್(24) ಎಂಬವರು ಕತ್ತಿ ತೋರಿಸಿ ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಬಾಲಕಿ ಕೂಗುತ್ತಿರುವುದನ್ನು ಗಮನಿಸಿ, ಸ್ಥಳಕ್ಕೆ ಬಂದ ಆಕೆಯ ಸಾಕು ನಾಯಿಯು ಇಬ್ಬರ ಮೇಲೆ ದಾಳಿಗೆ ಮುಂದಾಗಿ, ಐಶು ಹೈರ್‍ವಾರ್ ಎಂಬವನ ಕಾಲನ್ನು ಕಚ್ಚಿದೆ. ಇದರಿಂದ ರೊಚ್ಚಿಗೆದ್ದ ಇಬ್ಬರು ನಾಯಿ ಮೇಲೆಯೆ ಕತ್ತಿಯಿಂದ ಹಲ್ಲೆಗೆ ಮುಂದಾಗಿದ್ದಾರೆ.

    ನಾಯಿಯು ಕಾಮುಕರ ದಾಳಿಯನ್ನು ಹಿಮ್ಮೆಟ್ಟಿಸಿ, ಜೋರಾಗಿ ಅರಚತೊಡಗಿದೆ. ಈ ವೇಳೆ ಬಾಲಕಿಯು ಅವರಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾಳೆ. ನಾಯಿ ಜೋರಾಗಿ ಬೊಗಳುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರನ್ನು ಕಂಡ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

    ಘಟನೆ ಕುರಿತು ಆರೋಪಿಗಳ ವಿರುದ್ಧ ಬಾಲಕಿಯ ಪೋಷಕರು ಶನಿವಾರ ದೂರನ್ನು ನೀಡಿದ್ದು, ಭಾನುವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆಗೆ ಮುಂದಾಗಿದ್ದ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದಾಗ ಸ್ಟ್ರೀಟ್‍ಲೈಟ್ ಕಂಬ ಬಿದ್ದು ಬಾಲಕಿ ಸಾವು!

    ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದಾಗ ಸ್ಟ್ರೀಟ್‍ಲೈಟ್ ಕಂಬ ಬಿದ್ದು ಬಾಲಕಿ ಸಾವು!

    ಆನೇಕಲ್: ಪುಟ್‍ಪಾತ್ ಮೇಲಿದ್ದ ಸ್ಟ್ರೀಟ್ ಲೈಟ್ ಕಂಬ ಬಿದ್ದು ಬಾಲಕಿ ಸಾವನ್ನಪಿರುವ ಘಟನೆ ಬೆಂಗಳೂರಿನ ಕಾಡುಗುಡಿ-ಓ ಫಾರಂ ಮಧ್ಯಭಾಗದ ದಿನ್ನೂರು ಕ್ರಾಸ್ ಬಳಿ ಸಂಭವಿಸಿದೆ.

    ವರ್ತೂರು ಗ್ರಾಮದ ನಿವಾಸಿಯಾದ ಯುವರಾಣಿ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, 7ನೇ ತರಗತಿ ಓದುತ್ತಿದ್ದಳು. ತನ್ನ ತಂದೆ ಹರೀಶ್ ಜೊತೆ ದ್ವಿಚಕ್ರವಾಹನದಲ್ಲಿ ಹೊಸಕೋಟೆಯಲ್ಲಿನ ಸಂಬಂಧಿಕರ ಗೃಹಪ್ರವೇಶಕ್ಕೆ ಹೋಗಿ ಬರುವ ವೇಳೆ ಈ ಘಟನೆ ಸಂಭವಿಸಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಹತ್ತಿರದ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ತಮ್ಮ ಬಾಲಕಿ ಸಾವಿಗೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.

    ಈ ಘಟನೆ ಕುರಿತು ಕಾಡುಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv