Tag: ಬಾಲಕಾರ್ಮಿಕರು

  • ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ: ನ್ಯಾಯಾಧೀಶ

    ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ: ನ್ಯಾಯಾಧೀಶ

    ಕೋಲಾರ: ಇತ್ತೀಚಿನ ದಿನಗಳಲ್ಲಿ ಬಾಲಕಾರ್ಮಿಕ ಪದ್ಧತಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ ಎಂದು ಪೋಕ್ಸೋ ಪ್ರಕರಣಗಳ ವಿಶೇಷ ಶೀಘ್ರಗತಿ ನ್ಯಾಯಾಲಯದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಪಿ.ದೇವಮಾನೆ ತಿಳಿಸಿದರು.

    ಇಂದು ನಗರದ ಮಹಾತ್ಮಗಾಂಧಿ ಚೌಕದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಕೀಲರದ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ದೇಶದ ನಿಜವಾದ ಆಸ್ತಿ ಎಂದರೆ ಆ ದೇಶದ ಆರೋಗ್ಯವಂತ, ಪ್ರಜ್ಞಾವಂತ ನಾಗರಿಕರು ಆಗಿರುತ್ತಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಮಾತನ್ನು ಪ್ರಾರಂಭ ಮಾಡಿದರು. ಇದನ್ನೂ ಓದಿ:  ಅನುಮತಿ ಪಡೆಯದೇ ಜಾಹೀರಾತು: ಇಬ್ಬರು ಅಭ್ಯರ್ಥಿಗಳ ವಿರುದ್ಧ FIR ದಾಖಲು 

    ಬಾಲ್ಯ ವ್ಯವಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಮಾರ್ಗದರ್ಶನ ನೀಡಿ ಪ್ರಜ್ಞಾವಂತ ಪ್ರಜೆಯನ್ನಾಗಿ ಮಾಡುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಬಾಲ್ಯದಲ್ಲಿಯೇ ಮಕ್ಕಳು ಕಾರ್ಮಿಕರಾಗಿ ದುಡಿಯುವುದು, ದುಶ್ಚಟಗಳಿಗೆ ಗಮನ ಹರಿಸದಂತೆ ನೋಡಿಕೊಂಡು ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದು ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯವಾಗಿರುತ್ತದೆ ಎಂದು ವಿವರಿಸಿದರು.

    ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಜಾಥಾಗೆ ಚಾಲನೆ ನೀಡಿ ಮಾತನಾಡಿದ್ದು, ಪ್ರತಿಯೊಬ್ಬ ನಾಗರಿಕನು ಸಹ ಬಾಲಕಾರ್ಮಿಕ ವಿರೋಧಿಯಾಗಿ ಕಾರ್ಯನಿರ್ವಹಿಸಬೇಕು. ಬಾಲಕಾರ್ಮಿಕ ವಿರೋಧಿ ಚಟುವಟಿಕೆಗಳನ್ನು ಒಂದು ದಿನಕ್ಕೆ ಸೀಮಿತ ಮಾಡಬಾರದು. ಮುಂದಿನ ತಿಂಗಳಿನಲ್ಲಿ ಕಾರ್ಮಿಕ ಕಾರ್ಖಾನೆಗಳಿಗೆ, ಗ್ಯಾರೇಜ್, ಹೋಟೆಲ್, ಡಾಬಾ, ಬೇಕರಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ಮಾಡಿ ಬಾಲಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟವರಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು.

     

    ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನಿಲ್.ಎಸ್.ಹೊಸಮನಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶ್ರೀಕಾಂತ್ ಬಿ ಪಾಟೀಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀಧರ್.ಜಿ, ವಕೀಲರ ಸಂಘದ ಕಾರ್ಯದರ್ಶಿಗಳಾದ ರಘುಪತಿ ಗೌಡ, ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ವಕೀಲರಾದ ಕೆ.ಆರ್.ಧನರಾಜ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಇದನ್ನೂ ಓದಿ: ಜನರನ್ನ ಆಸ್ಪತ್ರೆಗೆ ಸೇರಿಸುವಲ್ಲಿ ದಾಖಲೆ ಬರೆದ ರಾಯಚೂರು – ವಾಂತಿ, ಭೇದಿ ರೋಗಿಗಳಿಂದ ಬೆಡ್ ಪುಲ್

  • ರಾಯಚೂರಿನಲ್ಲಿ ಅಧಿಕಾರಿಗಳಿಂದ ದಾಳಿ – 22 ಬಾಲಕಾರ್ಮಿಕರ ರಕ್ಷಣೆ

    ರಾಯಚೂರಿನಲ್ಲಿ ಅಧಿಕಾರಿಗಳಿಂದ ದಾಳಿ – 22 ಬಾಲಕಾರ್ಮಿಕರ ರಕ್ಷಣೆ

    ರಾಯಚೂರು: ತಾಲೂಕಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ 22 ಬಾಲಕಾರ್ಮಿಕರನ್ನು ಮಕ್ಕಳ ರಕ್ಷಣಾ ಘಟಕ, ಆರ್‌ಟಿಓ ಸೇರಿ ಅಧಿಕಾರಿಗಳ ತಂಡ ರಕ್ಷಿಸಿದ್ದಾರೆ.

    ಇಂದು ಅಧಿಕಾರಿಗಳು ರಾಯಚೂರು ತಾಲೂಕಿನ ವಿವಿಧೆಡೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ 22 ಮಕ್ಕಳನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧಿಸಿ ಕೂಲಿ ಕೆಲಸಕ್ಕೆ ಮಕ್ಕಳನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುತ್ತಿದ್ದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

     

    ಹತ್ತಿ ಬಿಡಿಸುವುದು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಮಕ್ಕಳನ್ನು ಜಮೀನುಗಳಿಗೆ ಕರೆದೊಯ್ಯಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ಕು ಗೂಡ್ಸ್ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಜುನಾಥ ರೆಡ್ಡಿ, ಆರ್ ಟಿ ಓ ಕೃಷ್ಣ ಮೂರ್ತಿ, ಮಕ್ಕಳ ಸಹಾಯವಾಣಿ ಅಧಿಕಾರಿ ತಾಯಿ ರಾಜ್, ರವಿಕುಮಾರ್ ಸೇರಿ 5 ಅಧಿಕಾರಿಗಳು ದಾಳಿ ನಡೆಸಿದ ತಂಡದಲ್ಲಿದ್ದರು. ನಂತರ ರಕ್ಷಿಸಿದ ಬಾಲ ಕಾರ್ಮಿಕರನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ಹರಾಜು – ಟಾಟಾ ಡೀಲ್‌ ಪ್ರಶ್ನಿಸಿ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾ

  • ಅನಿರೀಕ್ಷಿತ ಕಾರ್ಯಾಚರಣೆ- ನಾಲ್ಕು ಬಾಲಕಾರ್ಮಿಕರು ಪತ್ತೆ

    ಅನಿರೀಕ್ಷಿತ ಕಾರ್ಯಾಚರಣೆ- ನಾಲ್ಕು ಬಾಲಕಾರ್ಮಿಕರು ಪತ್ತೆ

    ಹಾವೇರಿ: ಬಾಲಕಾರ್ಮಿಕರ ಪತ್ತೆಗಾಗಿ ಗುರುವಾರ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ನಾಲ್ಕು ಜನ ಬಾಲ ಕಾರ್ಮಿಕರನ್ನು ಪತ್ತೆಮಾಡಿ, ರಕ್ಷಿಸಲಾಗಿದೆ.

    ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಅವರ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೃಷಿ ಉತ್ಪನ್ನ ಮಾರುಕಟ್ಟೆ ಮಾರ್ಗದಲ್ಲಿ ವಿವಿಧ ಅಂಗಡಿಗಳು, ಬಾರ್, ಹೋಟೆಲ್‍ಗಳ ತಪಾಸಣೆ ನಡೆಸಲಾಗಿದೆ. ಈ ಮಾರ್ಗದಲ್ಲಿ ನ್ಯೂ ಚಿಕನ್ ಕಾರ್ನರ್ ಹೋಟೆಲ್, ಸ್ಪೇಷಲ್ ಧಾರವಾಡ ಪೇಡಾ ಬಿಗ್ ಬೇಕರಿ, ಕಿರಾಣಿ ಅಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಕರನ್ನು ಪತ್ತೆಮಾಡಿ ವಶಕ್ಕೆ ಪಡೆಯಲಾಯಿತು.

    ಇದೇ ಮಾರ್ಗದಲ್ಲಿ ಕೇಂದ್ರ ಬಸ್ ನಿಲ್ದಾಣದ ಸಮೀಪ ಕಡಲೆಗಿಡ ಮಾರುತ್ತಿದ್ದ ಬಾಲಕನನ್ನು ವಶಕ್ಕೆ ಪಡೆಯಲಾಯಿತು. ಈ ನಾಲ್ಕು ಬಾಲಕರು 15 ವರ್ಷದ ವಯೋಮಿತಿಯವರಾಗಿದ್ದು, ಜಿಲ್ಲೆಯ ಬೇರೆ ಹಳ್ಳಿಗಳಿಂದ ಬಂದು ನಗರದಲ್ಲಿ ಕೆಲಸಮಾಡುತ್ತಿದ್ದರು.

    ಪತ್ತೆಯಾದ ಬಾಲಕರ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ್ ಅವರು ಬಾಲಕರ ಊರು, ವಿಳಾಸ, ಪಾಲಕರ ಬಗ್ಗೆ ಮಾಹಿತಿ ಪಡೆದರು. ಎಲ್ಲ ಮಕ್ಕಳು ವ್ಯಾಸಂಗಮಾಡುತ್ತಿರುವ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಾಲಕರ ಮಾಹಿತಿ ಆಧರಿಸಿ ಸ್ಥಳದಲ್ಲೇ ಶಾಲಾ ಮುಖ್ಯೋಪಾಧ್ಯಾಯರಿಗೆ ದೂರವಾಣಿ ಕರೆಮಾಡಿ, ಬಾಲಕರ ಮನೆಗೆ ತೆರಳಿ, ಪಾಲಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವಂತೆ ಸೂಚನೆ ನೀಡಿದರು.

    ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಅಗತ್ಯವಿದ್ದರೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಾವಕಾಶ ಕಲ್ಪಿಸುವುದು ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ದೊರಕಿಸಿಕೊಡುವಂತೆ ಸೂಚನೆ ನೀಡಿದರು.

  • ರಾಯಚೂರಿನಲ್ಲಿ ಅಧಿಕಾರಿಗಳ ದಾಳಿ – 59 ಬಾಲಕಾರ್ಮಿಕರ ರಕ್ಷಣೆ

    ರಾಯಚೂರಿನಲ್ಲಿ ಅಧಿಕಾರಿಗಳ ದಾಳಿ – 59 ಬಾಲಕಾರ್ಮಿಕರ ರಕ್ಷಣೆ

    ರಾಯಚೂರು: ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಇಂದು 59 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

    ದೇವದುರ್ಗ ತಾಲೂಕಿನಲ್ಲಿ ದಾಳಿ ನಡೆಸಿ ಕೃಷಿ ಕೆಲಸಕ್ಕೆ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ, 59 ಬಾಲ ಕಾರ್ಮಿಕರ ರಕ್ಷಣೆ ಮಾಡಲಾಗಿದೆ.

    ಬಾಲಕಾರ್ಮಿಕ ಘಟಕದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸೇರಿ ದಾಳಿ ಮಾಡಿದ್ದು, ದಾಳಿ ವೇಳೆ 10 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಿನ್ನೆ ಸಿರವಾರ ತಾಲೂಕಿನ ಕವಿತಾಳದಲ್ಲಿ ದಾಳಿ ನಡೆಸಿ 32 ಮಕ್ಕಳನ್ನು ರಕ್ಷಿಸಿದ್ದರು. ಇಂದು ಸಹ ಕಾರ್ಯಾಚರಣೆ ಮುಂದುವರಿಸಿದ ಅಧಿಕಾರಿಗಳ ತಂಡ, ಬಾಲಕ ಕಾರ್ಮಿಕರನ್ನು ರಕ್ಷಿಸಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

  • ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲಾಖೆಗಳ ನಡುವೆ ಸಮನ್ವಯ ಅಗತ್ಯ: ಡಿಸಿ ಶಿವಕುಮಾರ್

    ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇಲಾಖೆಗಳ ನಡುವೆ ಸಮನ್ವಯ ಅಗತ್ಯ: ಡಿಸಿ ಶಿವಕುಮಾರ್

    ಶಿವಮೊಗ್ಗ: ಜಿಲ್ಲೆಯಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಮೇಲ್ವಿಚಾರಣೆ ಮತ್ತು ಜಾಗರೂಕತೆ ಸಮಿತಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಬಾಲಕಾರ್ಮಿಕರ ಪತ್ತೆಗೆ ನಿರಂತರ ಕಾರ್ಯಾಚರಣೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಜತೆಗೆ ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತದ ಮುಖ್ಯಾಧಿಕಾರಿಗಳ ಸಹಕಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಅರೆಕಾಲಿಕವಾಗಿ ಹೊರಗೆ ಕೆಲಸ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ವಸತಿ ನಿಲಯಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಬೇಕು. ಬಾಲಕಾರ್ಮಿಕರನ್ನು ನಿಯೋಜಿಸದಂತೆ ವಾಣಿಜ್ಯ ಸಂಸ್ಥೆಗಳು ಹಾಗೂ ಉದ್ದಿಮೆಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಈ ಕುರಿತು ಮುಚ್ಚಳಿಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

    ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಿಂದ ಇದುವರೆಗೆ ಒಟ್ಟು 427 ತಪಾಸಣೆಗಳನ್ನು ಕೈಗೊಳ್ಳಲಾಗಿದ್ದು, ಮೂರು ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಎಲ್ಲಾ ಮೂರು ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. 2016-17ನೇ ಸಾಲಿನಲ್ಲಿ 11, 17-18ನೇ ಸಾಲಿನಲ್ಲಿ 5 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಅಪಾಯಕಾರಿಯಲ್ಲದ ಕೆಲಸದಲ್ಲಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ ಅಪಾಯಕಾರಿ ವಲಯದಲ್ಲಿ 18 ವರ್ಷದ ಒಳಗಿನ ಮಕ್ಕಳನ್ನು ನೇಮಕ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ರಘುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಪಾಂಚಾಳ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.