Tag: ಬಾರ್ಟೊ

  • ಸಹಪಾಠಿಗಳನ್ನೇ ಕೊಂದು ರಕ್ತ ಕುಡಿಯಲು ಸಂಚು ರೂಪಿಸಿದ್ದ ವಿದ್ಯಾರ್ಥಿನಿಯರು ಅರೆಸ್ಟ್

    ಸಹಪಾಠಿಗಳನ್ನೇ ಕೊಂದು ರಕ್ತ ಕುಡಿಯಲು ಸಂಚು ರೂಪಿಸಿದ್ದ ವಿದ್ಯಾರ್ಥಿನಿಯರು ಅರೆಸ್ಟ್

    ಫ್ಲೋರಿಡಾ: ನರಕ ಲೋಕದ ಸೈತಾನನ ಜೊತೆ ಇರಲು ತನ್ನ ಸಹಪಾಠಿಗಳನ್ನೇ ಕೊಲ್ಲಲು ಸಂಚು ರೂಪಿಸಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕದ ಬಾರ್ಟೊನಲ್ಲಿ ನಡೆದಿದೆ.

    ಬಾರ್ಟೊ ಮಿಡಿಲ್ ಸ್ಕೂಲ್‍ನ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ 11 ಮತ್ತು 12 ವರ್ಷದ ವಿದ್ಯಾರ್ಥಿನಿಯರು ತಮ್ಮ ಸ್ನೇಹಿತರನ್ನೇ ಕೊಂದು ಅವರ ರಕ್ತವನ್ನ ಕುಡಿಯಲು ಸಂಚು ರೂಪಿಸಿದ್ದರು.

    ಮಂಗಳವಾರ ಶಾಲೆಗೆ ಹರಿತವಾದ ಚಾಕುಗಳನ್ನ ತಂದಿದ್ದ ವಿದ್ಯಾರ್ಥಿನಿಯರು, ತರಗತಿಗೆ ಹಾಜರಾಗದ ಕಾರಣ ಶಾಲೆಯ ನಿರ್ವಾಹಕರು ಅವರನ್ನ ಹುಡುಕಲು ಹೊರಟಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಶಾಲೆಯ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬಾರ್ಟೊ ಪೊಲೀಸರು ತಿಳಿಸಿದ್ದಾರೆ.

    ವಿಷಯ ತಿಳಿದ ನಿರ್ವಾಹಕರು ಕೂಡಲೇ ಪೊಲೀಸರಿಗೆ ಕರೆ ಮಾಡಿ, ಬಾಲಕಿಯರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಕೊಲೆಗೆ ಸಂಚು ಮತ್ತು ಅಪಾಯಕಾರಿ ಆಯುಧವನ್ನ ತಂದಿರುವ ಅಡಿಯಲ್ಲಿ ಅವರನ್ನ ಪೊಲೀಸರು ಬಂಧಿಸಿದ್ದಾರೆ.

    ಹಾರರ್ ಸಿನಿಮಾದಿಂದ ಪ್ರೇರಿತರಾದ ಬಾಲಕಿಯರು, ಶಾಲೆಯ ವಾಶ್‍ರೂಂನಲ್ಲಿ ಚಿಕ್ಕ ಮಕ್ಕಳನ್ನ ಕೊಂದು, ಅವರ ರಕ್ತವನ್ನ ಕುಡಿದು, ಮಾಂಸವನ್ನ ತಿನ್ನೋದಕ್ಕೆ ಪ್ಲಾನ್ ಮಾಡಿದ್ದರು ಎಂದು ವಿಚಾರಣೆ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.

    ಸುಮಾರು 15-25 ವಿದ್ಯಾರ್ಥಿಗಳನ್ನ ಹತ್ಯೆ ಮಾಡುವ ಉದ್ದೇಶ ನಮ್ಮದಾಗಿತ್ತು. ಎಲ್ಲರನ್ನ ಕೊಂದ ನಂತರ ಕೊನೆಯಲ್ಲಿ ನಾವು ಆತ್ಮಹತ್ಯೆ ಮಾಡಿಕೊಂಡು ನರಕ ಲೋಕಕ್ಕೆ ಹೋಗಿ, ಅಲ್ಲಿ ಸೈತಾನನ ಜೊತೆ ಇರಲು ಮುಂದಾಗಿದ್ದೇವು ಎಂದು ಬಾಲಕಿಯರು ತಮ್ಮ ಕೃತ್ಯದ ಬಗ್ಗೆ ತಿಳಿಸಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯಿಲ್ಲಿ ಶಾಲೆಯ ಯಾವ ಮಕ್ಕಳಿಗೂ ಹಾನಿಯಾಗಿಲ್ಲ ಮತ್ತು ಮಕ್ಕಳಿಗೆ ಇಂತಹ ವಿಷಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನ ಮತ್ತು ಕೌನ್ಸಿಲರ್ ಗಳನ್ನು ನೇಮಕಗೊಳಿಸುತ್ತೇವೆ ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv