Tag: ಬಾಬುರಾವ್ ಚಿಂಚನಸೂರ್

  • ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?

    ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರ್ತಾರಾ ಬಾಬುರಾವ್ ಚಿಂಚನಸೂರ್..?

    – ಮಾಜಿ ಸಚಿವರ ಹೈಡ್ರಾಮಾದ ಇನ್ ಸೈಡ್ ಸ್ಟೋರಿ ಇಲ್ಲಿದೆ

    ಯಾದಗಿರಿ: ಏಕಲವ್ಯ ಶಾಲೆ ಉದ್ಘಾಟನಾ ಹೈಡ್ರಾಮ ಪ್ರೀ-ಪ್ಲಾನ್ ಎನ್ನುವ ಅನುಮಾನ ಮೂಡಿದೆ. ಬಿಜೆಪಿ ತೊರೆಯಲು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶಾಲೆ ಉದ್ಘಾಟನೆಯನ್ನು ಗಾಳವಾಗಿ ಬಳಸಿಕೊಂಡು ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದರು. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆಗೆ 3-4 ಬಾರಿ ಮಾತುಕತೆ ನಡೆಸಿರುವ ಬಾಬುರಾವ್, ಏಕಲವ್ಯ ಶಾಲೆ ಉದ್ಘಾಟನೆಯಲ್ಲಿ ಕಡಗಣನೆ ಮತ್ತು ಅಗೌರವ ನೆಪ ಮಾಡಿಕೊಂಡು ಜಂಪ್ ಆಗಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಸ್ವಪ್ರತಿಷ್ಠೆಗೋಸ್ಕರ ಬಡ ಮಕ್ಕಳ ಶಿಕ್ಷಣಕ್ಕೆ ಕೊಳ್ಳಿಯಿಟ್ಟ ಬಾಬುರಾವ್ ಚಿಂಚನಸೂರ್

    ಕಾಂಗ್ರೆಸ್ ಬಿಡುವಾಗ ಕೂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಡಗಣನೆ ಮತ್ತು ಅಗೌರವದ ಕಾರ್ಡನ್ನು ಬಾಬುರಾವ್ ಬಳಸಿದ್ದರು. ಆದರೆ ಈ ವಿಚಾರದಲ್ಲಿ ಬಾಬುರಾವ್ ಗೆ ಆಗಿದ್ದೇ ಬೇರೆ. ಬಿಜೆಪಿ ಬಿಡಲು ಏಕಲವ್ಯ ಶಾಲೆಯನ್ನು ನೆಪ ಮಾಡಿಕೊಳ್ಳಲು ಮುಂದಾಗಿದ್ದ ಬಾಬುರಾವ್ ಚಿಂಚನಸೂರ್‍ಗೆ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಚಿಂಚನಸೂರ್ ಪ್ಲಾನ್ ಉಲ್ಟಾಪಲ್ಟಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಇದನ್ನೂ ಓದಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!

    ಒಂದೇ ಒಂದು ಫೋನ್ ಕಾಲ್ ಇಡೀ ಚಿತ್ರಣವೇ ಬದಲು ಮಾಡಿದೆ. ಆದರೆ ಈ ಪ್ರಕರಣದಲ್ಲಿ ಬಲಿಕಾ ಬಕ್ರಾ ಆಗಿದ್ದು ಸಚಿವ ಶ್ರೀರಾಮುಲು. ಪಬ್ಲಿಕ್ ಟಿವಿಯಲ್ಲಿ ಫೋನ್ ಕಾಲ್ ಎಕ್ಸ್ ಕ್ಲೂಸೀವ್ ದೃಶ್ಯ ಲಭ್ಯವಾಗಿವೆ. ಬಾಬುರಾವ್ ಶಾಲೆ ಉದ್ಘಾಟನೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದಿಂದ ರಾಮುಲು ಕಾರು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಯಿತು. ಶಾಲೆ ಉದ್ಘಾಟನೆಯನ್ನು ಮಾಡಲೇಬೇಕು ಅಂತ ಪ್ರತಿಭಟನಾಕಾರರು ಹಠಹಿಡಿದರು. ಇದರಿಂದ ಏಕಲವ್ಯ ಶಾಲೆಯನ್ನು ಉದ್ಘಾಟನೆ ಮಾಡುವ ಇಂಗಿತ ವ್ಯಕ್ತಪಡಿಸಿದ ರಾಮುಲು, ಜಿಲ್ಲಾಡಳಿತ ಜೊತೆಗೆ ಚರ್ಚೆ ನಡೆಸಲು ಮುಂದಾದ್ರು.

    ರಾಮುಲುಗೆ ಜಿಲ್ಲಾಡಳಿತ ಮತ್ತು ಪೊಲೀಸರು ಸಹ ಸಾಥ್ ನೀಡಿದರು. ಆದರೆ ಈ ವೇಳೆ ಅರುಣ್ ಕುಮಾರ್ ಗೆ ಕಾಲ್ ಮಾಡಿ ಅನುಮತಿ ಕೇಳಿದ ರಾಮುಲು, ಫೋನ್ ಸಂಭಾಷಣೆ ಮುಗಿದ ಮೇಲೆ ಒಂದು ಕ್ಷಣವೂ ಸ್ಥಳದಲ್ಲಿ ನಿಲ್ಲದೆ, ಸ್ಥಳದಿಂದ ರಾಮುಲು ಜಾಗ ಖಾಲಿ ಮಾಡಿದ್ದಾರೆ. ತಮ್ಮ ವಾಹನ ಸಿಗದ ಹಿನ್ನಲೆ ತರಾತುರಿಯಲ್ಲಿ ಡಿಸಿ ಕಾರ್ ನಲ್ಲಿ ರಾಮುಲು ಎಸ್ಕೇಪ್ ಆದರು. ಬಾಬುರಾವ್ ಬಿಜೆಪಿ ಬಿಡಲು ಕಾರಣವೇ ಇಲ್ಲದಂತೆ ಮಾಡುವುದು ಸಂಘನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರದಾಗಿತ್ತು ಎನ್ನಲಾಗಿದೆ. ಇದಕ್ಕಾಗಿ ಯಾವುದೇ ಕಾರಣಕ್ಕೂ ಶಾಲೆ ಉದ್ಘಾಟನೆ ಮಾಡದೆ ಅಲ್ಲಿಂದ ಹೊರಡುವಂತೆ ರಾಮುಲುಗೆ ಅರುಣ್ ಕುಮಾರ್ ಫೋನ್ ನಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!

    ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!

    – ಶಾಲೆ ಉದ್ಘಾಟನೆ ನಿಲ್ಲಿಸಿ ರಂಪಾಟ

    ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ ನಡೆಸಿದ ಘಟನೆ ಯಾದಗಿರಿ ತಾಲೂಕಿನ ಬಂದಳ್ಳಿ ಬಳಿ ನಡೆದಿದೆ.

    ಇಂದು ಏಕಲವ್ಯ ವಸತಿ ಶಾಲೆ ಉದ್ಘಾಟಣಾ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಬಾಬುರಾವ್ ಅವರಿಗೆ ಆಹ್ವಾನ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಾಜಿ ಸಚಿವರು, ಕಾರ್ಯಕ್ರಮವನ್ನೇ ನಿಲ್ಲಿಸಿ, ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

    ಇದು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಈ ಶಾಲೆಯನ್ನು ನಾನು ಹೋರಾಟ ಮಾಡಿ ತಂದಿದ್ದೇನೆ. ಆದರೆ ಉದ್ಘಾಟನೆಗೆ ನನ್ನ ಕರೆದಿಲ್ಲ. ಜಿಲ್ಲಾಡಳಿತ ನನ್ನ ಕಡೆಗಣಸಿದೆ ಅದಕ್ಕಾಗಿ ನಾನು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ

    ಏಕಲವ್ಯ ವಸತಿ ಶಾಲೆ ಉದ್ಘಾಟನಾ ಕಾರ್ಯಕ್ರಮಕ್ಕೆ ನನ್ನ ಯಾಕೆ ಕರೆದಿಲ್ಲ. ನನ್ನ ಕಡೆಗಣಿಸಿದ ಕಾರ್ಯಕ್ರಮವನ್ನು ಬಹಿಷ್ಕರಿಸ್ತೇನೆ. ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿಗೆ ಚಿಂಚನಸೂರ್ ತರಾಟೆ ತೆಗೆದುಕೊಂಡರು. ಈ ವೇಳೆ ಕೈಮುಗಿದು ಮನವಿ ಮಾಡಿದ್ರೂ ಬಾಬುರಾವ್ ಒಪ್ಪಲಿಲ್ಲ. ಶಾಲೆ ಇನ್ನೂ ಒಂದು ಕಿಲೋಮೀಟರ್ ಅಂತರದಲ್ಲಿ ಬಾಬುರಾವ್ ಈ ಹೈಡ್ರಾಮಾ ಮಾಡಿದ್ದಾರೆ. ಹೀಗಾಗಿ ಸಚಿವ ಶ್ರೀರಾಮುಲು ಅವರು ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದರು. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ಇತ್ತ ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮವನ್ನು ನಿಲ್ಲಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಬಾಬುರಾವ್ ಅವರು ಮಾಧ್ಯಮಗಳ ಕಣ್ತಪ್ಪಿಸಿ ಯಾದಗಿರಿಯಿಂದ ಎಸ್ಕೇಪ್ ಆದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ಹಾಗೂ ಪಕ್ಷದ ಮುಖಂಡರು ಚಿಂಚನಸೂರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಾರದೇ ಜಾಗ ಖಾಲಿ ಮಾಡಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

  • ಚಿಂಚನಸೂರ್ ಗೆ ಸಚಿವ ಸ್ಥಾನ ಕೊಡಿ – ಬಿಎಸ್‍ವೈ ಕಾಲಿಗೆ ಬಿದ್ದ ಬೆಂಬಲಿಗರು

    ಚಿಂಚನಸೂರ್ ಗೆ ಸಚಿವ ಸ್ಥಾನ ಕೊಡಿ – ಬಿಎಸ್‍ವೈ ಕಾಲಿಗೆ ಬಿದ್ದ ಬೆಂಬಲಿಗರು

    ಬೆಂಗಳೂರು: ನಮ್ಮ ನಾಯಕರಿಗೆ ಸಚಿವ ಸ್ಥಾನ ಕೊಡಿ ಎಂದು ಶಾಸಕ ಬಾಬುರಾವ್ ಚಿಂಚನಸೂರ್ ಬೆಂಬಲಿಗರು ಸಿಎಂ ಯಡಿಯೂರಪ್ಪನವರ ಕಾಲಿಗೆ ಬಿದ್ದಿದ್ದಾರೆ.

    ನಮ್ಮ ನಾಯಕರು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸೋಕೆ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗಾಗಲೇ ಅವರಿಗೆ ನೀವು ಕೂಡ ಮಂತ್ರಿ ಸ್ಥಾನದ ಭರವಸೆ ಕೊಟ್ಟಿದ್ದೀರಿ. ಹಾಗಾಗಿ ನಮ್ಮ ನಾಯಕನಿಗೆ ಸಚಿವ ಸ್ಥಾನ ಕೊಡಿ ಎಂದು ಸಿಎಂ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಯಡಿಯೂರಪ್ಪನವರು, ನಿಮ್ಮ ಅಭಿಪ್ರಾಯ ಸೇರಿದಂತೆ ಚಿಂಚನಸೂರ್ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ. ನನಗೆ ಚಿಂಚನಸೂರ್ ಮೇಲೆ ಅಪಾರ ಗೌರವ ಇದೆ. ನೀವೇನು ನನಗೆ ಬಂದು ಮಂತ್ರಿ ಮಾಡಿ ಎಂದು ಕೇಳೋ ಅಗತ್ಯ ಇಲ್ಲ. ನಿಮ್ಮ ಭಾವನೆಗಳನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸುತ್ತೇನೆ. ಅವರಿಗೆ ಮಂತ್ರಿ ಸ್ಥಾನ ಕೊಡಿಸೋ ಬಗ್ಗೆ ನಾನು ಏನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಬೆಂಬಲಿಗರಿಗೆ ಭರವಸೆ ನೀಡಿದ್ದಾರೆ.

  • ಲಿಂಗಾಯತರ ಕ್ಷಮೆ ಕೋರಿದ ಬಾಬುರಾವ್ ಚಿಂಚನಸೂರ್

    ಲಿಂಗಾಯತರ ಕ್ಷಮೆ ಕೋರಿದ ಬಾಬುರಾವ್ ಚಿಂಚನಸೂರ್

    ಕಲಬುರಗಿ: ಪೋಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗಾಯತರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮಾಜಿ ಸಚಿವ ಚಿಂಚನಸೂರ್ ಇದೀಗ ಕ್ಷಮೆ ಕೋರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಉಪಚುನಾವಣೆಯಲ್ಲಿ ಅವಿನಾಶ್‍ಗೆ ಕಡಿಮೆ ಮತ ಹಾಗೂ ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾಗೆ ಜಾಸ್ತಿ ಮತ ಬಂದಿದ್ದವು. ಈ ಹಿನ್ನೆಲೆಯಲ್ಲಿ ಲಿಂಗಾಯತ ಯಾರು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಲ್ಲ ಎಂದಿದ್ದು, ಈ ಬಗ್ಗೆ ಬೆಂಬಲಿಗರೊಂದಿಗೆ ಚರ್ಚೆ ಮಾಡಿದ್ದೆ ಅಷ್ಟೆ. ಈ ವಿಚಾರದಲ್ಲಿ ಲಿಂಗಾಯತರಿಗೆ ನೋವಾದರೆ ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

    ಚಿಂಚನಸೂರ್ ಹೇಳಿದ್ದೇನು?
    ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಉಮೇಶ್ ಜಾಧವ್ ಅವರಿಗೆ 14 ಸಾವಿರ ಲೀಡ್ ಕೊಟ್ಟಿದ್ದರು. ಆದರೆ ಚಿಂಚೋಳಿ ಉಪ ಚುನಾವಣೆಯಲ್ಲಿ ಏಳು ಸಾವಿರ ಮತಗಳ ಲೀಡ್ ಮಾತ್ರ ಅವಿನಾಶ್ ಅವರಿಗೆ ಬಂದಿದೆ. ಕಬ್ಬಲಿಗರು ಮತ್ತು ಬಂಜಾರ ಸಮುದಾಯದ ಮತಗಳಿಂದ ಮಾತ್ರ ಅವಿನಾಶ್ ಗೆದ್ದಿದ್ದಾರೆ. ಲಿಂಗಾಯತರು ಯಾರು ಕೂಡ ಬಿಜೆಪಿಗೆ ಮತ ಹಾಕಿಲ್ಲ ಬೆಂಬಲಿಗರ ಸಭೆಯಲ್ಲಿ ಚಿಂಚನಸೂರ್ ಹೇಳಿದ್ದರು.

  • ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಕಲಬುರಗಿ: ಯಮ ಬಂದು ಹಗ್ಗ ಹಾಕಿ ಜಗ್ಗಿದರೂ ನಾನು ಹೋಗಲ್ಲ, ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿ ಮತ್ತೆ ಬರುತ್ತೇನೆ ಎನ್ನುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ಚಿಂಚೋಳಿ ಪಟ್ಟಣದಲ್ಲಿ ಬಿಜೆಪಿ ಆಯೋಜನೆಯ ಕೋಲಿ ಸಮಾಜದ ಸಮಾವೇಶದಲ್ಲಿ ಬಾಬುರಾವ್ ಚಿಂಚನಸೂರ್ ಭಾಗಿಯಾಗಿದ್ದರು. ಈ ವೇಳೆ ನಾನು ಸುಮ್ಮನೆ ಸಾಯುವುದಿಲ್ಲ. ಯಮ ಕರೆದರೂ ನಾನು ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿಯೇ ಹೋಗುತ್ತೇನೆ ಎಂದರು. ಕೋಲಿ ಸಮಾಜವನ್ನು ಎಸ್‍ಟಿ ಮಾಡಿದರೆ ತಮ್ಮ ಸಮಾನಾಂತರ ಆಗುತ್ತಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಿ ಸಮಾಜದ ತಲೆ ಮೇಲೆ ಕಾಲಿಟ್ಟರು. ಹಾಗೆಯೇ ಇವನು ದಿನ ದಿನಾ ಸ್ಟ್ರಾಂಗ್ ಆಗುತ್ತಾನೆ. ನಾನು ಪ್ರತಿದಿನ ಶೈನ್ ಆಗುತ್ತೇನೆ ಎಂದು ನನ್ನ ಮಂತ್ರಿ ಪದವಿಯಿಂದ ತೆಗೆದರು ಎಂದು ಆರೋಪಿಸಿದರು.

    ಕಲಬುರಗಿಯಲ್ಲಿ ಸಮಾವೇಶಕ್ಕೆ ಪ್ರಧಾನಿಯವರು ಬಂದಿದ್ದಾಗ ನಾನು ಅವರ ಕಾಲಿಗೆ ಬಿದ್ದಾಗ ‘ಕೋಲಿ ಸಮಾಜ್ ಕೋ ಮಹಾನ್ ನಾಯಕ್ ಮಿಲಾ’ ನನ್ನ ಕಿವಿಯಲ್ಲಿ ಹೇಳಿದ್ದರು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಕೋಲಿ ಸಮಾಜದವರು ಸ್ವಾಭಿಮಾನಿಗಳು, ಮಾರಾಟವಾಗುವವರಲ್ಲ. ನನಗಂತೂ ಮಕ್ಕಳಿಲ್ಲ, ಅವಿನಾಶ್ ಜಾಧವ್‍ನನ್ನು ನನ್ನ ದತ್ತು ಪುತ್ರ ಎಂದು ತಿಳಿದು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸೋದೆ ನನ್ನ ಕೊನೆ ಆಸೆ: ಚಿಂಚನಸೂರ್

    ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸೋದೆ ನನ್ನ ಕೊನೆ ಆಸೆ: ಚಿಂಚನಸೂರ್

    – ಪುತ್ರನಿಗಾಗಿ ಖರ್ಗೆ ಕಾಂಗ್ರೆಸ್‍ನಿಂದ ಎಲ್ಲರನ್ನೂ ಹೊರಹಾಕಿದ್ರು

    ಕಲಬುರಗಿ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಸೇರಿಸುವುದು ನನ್ನ ಕೊನೆ ಆಸೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹೋರಾಡುತ್ತೇನೆ ಎಂದ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಸೇಡಂನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಪುತ್ರನಿಗಾಗಿ ಕಾಂಗ್ರೆಸ್‍ನಿಂದ ಎಲ್ಲರನ್ನೂ ಹೊರಹಾಕಿದರು. ಈಗ ಅವರಿಬ್ಬರೇ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಾಲೀಕಯ್ಯ ಗುತ್ತೆದಾರ ಅವರು ಸಚಿವ ಪ್ರಿಯಾಂಕ್ ಖರ್ಗೆ ಬೆಳವಣಿಗೆಗೆ ಅಡ್ಡಿ ಆಗುತ್ತಾರೆ ಎನ್ನುವುದು ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರವಾಗಿತ್ತು. ಹೀಗಾಗಿ ಅವರನ್ನು ಪಕ್ಷದಿಂದ ಹೊರ ಹಾಕಿದರು. ಮಾಜಿ ಸಚಿವ ಖಮರ್ ವುಲ್ಲಾ ಇಸ್ಲಾಂ ಅವರಿಂದ ಮಂತ್ರಿಸ್ಥಾನ ಕಿತ್ತುಕೊಂಡರು. ಇದರಿಂದ ಆಘಾತಕ್ಕೆ ಒಳಗಾದ ಖಮರ್ ವುಲ್ಲಾ ಇಸ್ಲಾಂ ಹೃದಯಾಘತಕ್ಕೆ ಒಳಗಾಗಿ ಪ್ರಾಣ ಬಿಟ್ಟರು. ನಂತರ ತಂತ್ರ ರಚಿಸಿ ನನ್ನನ್ನು ಪಕ್ಷದಿಂದ ಹೊರಹಾಕಿದರು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗುಡುಗಿದರು.

    ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಆಯ್ಕೆ ಮಾಡಲು ಎಲ್ಲರೂ ಶ್ರಮಿಸಬೇಕು. ಉಮೇಶ್ ಜಾಧವ್ ಆಯ್ಕೆಯಾದರೆ ಅವರಿಗೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಈ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಉತ್ತಮ ಕಾರ್ಯಗಳನ್ನು ಉಮೇಶ್ ಜಾಧವ್ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಹಳೇ ಪರ್ವತ, ಅದು ತಾನಾಗಿಯೇ ಕುಸಿಯಲು ಆರಂಭಿಸಿದೆ ಎಂದು ವ್ಯಂಗ್ಯವಾಡಿದರು.

  • ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಪಣ ತೊಟ್ಟರಾ ಮೋದಿ?

    ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಪಣ ತೊಟ್ಟರಾ ಮೋದಿ?

    -ಖರ್ಗೆ ಕೋಟೆಯಲ್ಲಿ ಮೋದಿ ರಣ ಕಹಳೆ
    -ಖರ್ಗೆ ಸೋಲಿಗೆ ಕಾದು ಕುಳಿತು ತ್ರಿಮೂರ್ತಿಗಳು!

    ಕಲಬುರಗಿ: ಪಾಕಿಸ್ತಾನಕ್ಕೆ ಮಧ್ಯರಾತ್ರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಅದರ ಬೆನ್ನು ಮುಳೆ ಮುರಿದ ಮೋದಿ, ಇದೀಗ ಸಂಸತ್ತಿನಲ್ಲಿ ಅವರಿಗೆ ಪ್ರಬಲವಾಗಿ ದಿಟ್ಟ ಉತ್ತರ ನೀಡುವ ಮಲ್ಲಿಕಾರ್ಜುನ ಖರ್ಗೆ ಮಣಿಸಲು ಬುಧವಾರ ಮಧ್ಯಾಹ್ನವೇ ಖುದ್ದು ಮೋದಿ ಕಲಬುರಗಿಗೇ ಆಗಮಿಸುತ್ತಿದ್ದಾರೆ.

    ಸದ್ಯ ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಪ್ರತಿ ಮಾತಿಗೂ ಹರಿತವಾಗಿ ದಿಟ್ಟ ಉತ್ತರ ನೀಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಗೇ, ಈ ಬಾರಿ ಶತಾಯಗತಾಯ ಸೋಲಿಸಲು ಪ್ರಧಾನಿ ಮೋದಿ ಟೀಂ ಇದೀಗ ಸಿದ್ಧವಾಗಿದೆ. ಈ ಬಾರಿ ಕಲಬುರಗಿ ಕ್ಷೇತ್ರದಲ್ಲಿ ಖರ್ಗೆರನ್ನು ಸೋಲಿಸಿ ಕಮಲ ಅರಳಿಸಲು ಖುದ್ದು ಮೋದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಖರ್ಗೆ ಸೋಲಿಸಲು ಕೈ ಶಾಸಕ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಖರ್ಗೆ ಅವರ ಕಲಬುರಗಿ ಕೋಟೆ ಭೇಧಿಸಲು ಮೋದಿ ಆ್ಯಂಡ್ ಟೀಂ ಸಜ್ಜಾಗಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಿಜೆಪಿಯ ಬೃಹತ ಸಮಾವೇಶ ನಡೆಯಲ್ಲಿದ್ದು, ಕಾರ್ಯಕರ್ತರನ್ನು ಪ್ರಧಾನಿ ಮೋದಿ ತಮ್ಮ ಮಾತುಗಳಿಂದ ಹುರಿದುಂಬಿಸಲಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕೋಟೆಯ ಮೇಲೆ ಕಮಲ ಅರಳಿಸಲು ತ್ರಿಮೂತ್ರಿಗಳಾದ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ್ ಮತ್ತು ಉಮೇಶ್ ಜಾಧವ್ ರಣತಂತ್ರ ರಚಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಾಳಯ ಸೇರುತ್ತಿರುವ ಡಾ.ಉಮೇಶ್ ಜಾಧವ್ ಅವರನ್ನು ಖರ್ಗೆ ಎದುರಿಗೆ ನಿಲ್ಲಿಸಲು ಎಲ್ಲ ರೀತಿಯ ತಯಾರಿಗಳು ನಡೆದಿವೆ. ಈ ಚುನಾವಣೆಯನ್ನು ಬಿಜೆಪಿಯ ಮೂರು ಜನ ಶಾಸಕರು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಮೋದಿ ಕರೆ ಕೊಟ್ಟಿದ್ದು, ಈ ಬಾರಿ ಶತಾಯ ಗತಾಯ ಖರ್ಗೆ ಸೋಲಿಸಲು ಕೇಸರಿ ಪಕ್ಷ ಪಣ ತೊಟ್ಟಿದೆ ಎನ್ನಲಾಗುತ್ತಿದೆ.

    ಒಂದೆಡೆ ಜಿಲ್ಲೆಯ ಕೋಲಿ ಸಮಾಜದ ಮುಖಂಡ ಬಾಬುರಾವ್ ಚಿಂಚನಸೂರ್, ಇನ್ನೊಂದಡೆ ಮಾಲೀಕಯ್ಯ ಗುತ್ತೇದಾರ ಖರ್ಗೆ ಸಹ ಸೋಲಿಸಲು ಮುಂದಾಗಿದ್ದಾರೆ. ಇತ್ತ ಖಮರುಲ್ ಅವರನ್ನ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ವಂಚಿತರಾಗಿ ಮಾಡಿರುವ ಹಿನ್ನೆಲೆ ಮುಸ್ಲಿಂ ಮತದಾರರು ಸಹ ಖರ್ಗೆ ಪರ ಮತ ಚಲಾಯಿಸದೇ ತಟಸ್ಥರಾಗಿರಲು ಯೋಚಿಸುತ್ತಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಖರ್ಗೆ ಇದು ನನ್ನ ಕೊನೆಯ ಚುನಾವಣೆ ಅಂತಾ ಜನರಿಗೆ ಎಮೋಷನಲ್ ಮಾಡಿ ಮತಗಳಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿದೆ.

    ಸದ್ಯ ಮೇಲನೋಟಕ್ಕೆ ಖರ್ಗೆ ಪ್ರಬಲವಾಗಿದ್ರು ಬದಲಾದ ರಾಜಕೀಯದಲ್ಲಿ ಅವರು ಇದೀಗ ಒಂಟಿಯಾದಂತಾಗಿದೆ. ಇನ್ನು ಧರಂಸಿಂಗ್ ಮತ್ತು ಖಮರುಲ್ ಇಸ್ಲಾಂ ಇಲ್ಲದ ಈ ಚುನಾವಣೆಯಲ್ಲಿ ಖರ್ಗೆ ಏಕಾಂಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

    ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

    ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್ ಅವರನ್ನು ಗುರುಮಠಕಲ್ ಕ್ಷೇತ್ರದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಕಾರ್ಯಕರ್ತನೋರ್ವ ವಿಷ ಸೇವನೆಗೆ ಯತ್ನಿಸಿದ ಘಟನೆಯು ಯಾದಗಿರಿ ನಗರದ ಮುದ್ನಾಳ ಲೇಔಟ್ ನಲ್ಲಿ ನಡೆದಿದೆ.

    ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೆಂಕಟರೆಡ್ಡಿ ಮುದ್ನಾಳ್ ಅವರು ಬಿಜೆಪಿ ಪಕ್ಷದ ಇನ್ನೊರ್ವ ಆಕಾಂಕ್ಷಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಕಾರ್ಯಕರ್ತರು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದು ವೆಂಕಟರೆಡ್ಡಿ ಅವರು ಸಭೆ ಕರೆದಿದ್ದರು.

    ಬಿಜೆಪಿ ಹೈಕಮಾಂಡ್ ಮಾತನ್ನು ಕೇಳಬೇಕೇ ಅಥವಾ ಗುರಮಠಕಲ್ ಕ್ಷೇತ್ರದ ಕಾರ್ಯಕರ್ತರ ಮಾತನ್ನು ಕೇಳಬೇಕೇ ಎನ್ನುವ ಗೊಂದಲದಲ್ಲಿ ವೆಂಕಟರೆಡ್ಡಿ ಮುದ್ನಾಳ್ ಇದ್ದು, ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.

    2013ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು ಕೆಜೆಪಿ ಪಕ್ಷದಿಂದ ಗುರುಮಠಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕೆಜೆಪಿ ಪಕ್ಷ ಬಿಜೆಪಿ ಜೊತೆಗೆ ವಿಲೀನವಾದ ಬಳಿಕ ಈ ಬಾರಿ ಬಿಜೆಪಿ ಪಕ್ಷದಿಂದ ವೆಂಕಟರೆಡ್ಡಿ ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    2013 ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು 32,362 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. 3,689 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎದರು ಸೋಲನ್ನುಕಂಡಿದ್ದರು.

  • ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಹೈಡ್ರಾಮಾ- ಎಲೆಕ್ಷನ್ ನಿಲ್ಲಿಸಿ ಎಂದು ರೇವಣ್ಣ ಗಲಾಟೆ

    ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಹೈಡ್ರಾಮಾ- ಎಲೆಕ್ಷನ್ ನಿಲ್ಲಿಸಿ ಎಂದು ರೇವಣ್ಣ ಗಲಾಟೆ

    ಬೆಂಗಳೂರು: ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಮತದಾನ ಕೇಂದ್ರದಲ್ಲಿ ಗದ್ದಲ, ಗಲಾಟೆ ಉಂಟಾಗಿದೆ.

    ಎಲೆಕ್ಷನ್ ನಿಲ್ಲಿಸಿ ಎಂದು ಜೆಡಿಎಸ್ ಮುಖಂಡ ಹೆಚ್‍ಡಿ ರೇವಣ್ಣ ಗಲಾಟೆ ಮಾಡಿದ್ದಾರೆ. ರಾಜ್ಯಸಭಾ ಚುನಾವಣಾಧಿಕಾರಿ ಮೂರ್ತಿ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ. ಬಾಬುರಾವ್ ಚಿಂಚನಸೂರ್ ಅವರಿಗೆ ಎರಡು ಬಾರಿ ಮತದಾನ ಅವಕಾಶ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಂಚನಸೂರ್ ಅವರು ಮೊದಲ ಬಾರಿ ಮತಪತ್ರ ತೆಗೆದುಕೊಂಡಾದ ತಪ್ಪು ತಪ್ಪಾಗಿ ನಮೂದಿಸಿದ್ದರು. ಹೀಗಾಗಿ ಎರಡನೇ ಬ್ಯಾಲೆಟ್ ಪೇಪರ್ ಕೊಟ್ಟಿದ್ದರಿಂದ ಗಲಾಟೆ ನಡೆದಿದೆ.

    ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಖ್ ಹಾಗೂ ರಮೇಶ್ ಬಾಬು ಗಲಾಟೆ ಮಾಡಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ನೀವು ಪಾರ್ಟಿ ಸೇರಿಕೊಳ್ಳಿ ಎಂದು ರೇವಣ್ಣ ಗರಂ ಆಗಿದ್ದು, ನನಗೆ ಬೆದರಿಕೆ ಹಾಕಬೇಡಿ ಎಂದು ಮೂರ್ತಿ ಅವರು ಕೂಡ ವಾಗ್ವಾದ ನಡೆಸಿದ್ದಾರೆ.

    ಚಿಂಚನಸೂರು ಬೆನ್ನಲ್ಲೇ ಕಾಗೋಡು ತಿಮ್ಮಪ್ಪ ಕೂಡ ಇದೇ ರೀತಿ ಎಡವಟ್ಟು ಮಾಡಿದ್ದು, ಬೇರೆ ಅಭ್ಯರ್ಥಿಯ ಗುರುತಿಗೆ ಸೀಲ್ ಹಾಕಿದ್ದಾರೆ. ಕಾಂಗ್ರೆಸ್ ಏಜೆಂಟ್ ಇದನ್ನ ಗಮನಿಸಿ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೆ ತಂದಿದ್ದು, ಮತ್ತೆ ಅವರಿಗೆ ಬೇರೆ ಬ್ಯಾಲೆಟ್ ಪೇಪರ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಿಲ್ಲಿಸಿ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.