Tag: ಬಾಬಾ ಬುಡನ್ ಗಿರಿ

  • ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ – ಹಿಂದೂಗಳ 5 ದಶಕಗಳ ಹೋರಾಟಕ್ಕೆ ಜಯ ಎಂದ ಸಿಟಿ ರವಿ

    ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ – ಹಿಂದೂಗಳ 5 ದಶಕಗಳ ಹೋರಾಟಕ್ಕೆ ಜಯ ಎಂದ ಸಿಟಿ ರವಿ

    ಚಿಕ್ಕಮಗಳೂರು : ಕಳೆದ ನಾಲ್ಕೈದು ದಶಕಗಳಿಂದ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರದ ಜೊತೆ ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಮೂಲಕ ವಿವಾದಿತ ಕೇಂದ್ರವೂ ಆಗಿದ್ದ ಚಿಕ್ಕಮಗಳೂರು(Chikkamagaluru) ತಾಲೂಕಿನ ದತ್ತಪೀಠಕ್ಕೆ(Datta Peeta) ಸರ್ಕಾರ ಆಡಳಿತ ಮಂಡಳಿ(Management Committee) ರಚನೆ ಮಾಡಿ ಆದೇಶ ಹೊರಡಿಸಿದೆ.

    ಈ ಆಡಳಿತ ಮಂಡಳಿ ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತಂತೆ ನಿರ್ಧಾರ ಮಾಡುವ ಅಧಿಕಾರ ಈ ಆಡಳಿತ ಮಂಡಳಿಗೆ ಇದೆ. ಈ ಆಡಳಿತ ಮಂಡಳಿಗೆ ಸದಸ್ಯರಾಗಲು 42 ಜನ ಅರ್ಜಿ ಹಾಕಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅರ್ಜಿದಾರರ ಅರ್ಹತೆ, ಅನರ್ಹತೆ, ವಿದ್ಯಾಭ್ಯಾಸ, ವಿಳಾಸ ಸೇರಿದಂತೆ ಎಲ್ಲರ ಮಾಹಿತಿ ಸಂಗ್ರಹಿಸಿತ್ತು.

    ಇಂದು ರಾಜ್ಯ ಸರ್ಕಾರ ಇಂದು ಎಂಟು ಜನರ ಆಡಳಿತ ಮಂಡಳಿ ಸದಸ್ಯರನ್ನ ನೇಮಕ ಮಾಡಿದೆ. ಇಬ್ಬರು ಮಹಿಳೆಯರು, ಓರ್ವ ಮುಸ್ಲಿಂ ವ್ಯಕ್ತಿ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಈ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ದತ್ತಪೀಠದಲ್ಲಿ ಪೂಜೆ ಹೇಗಿರಬೇಕು? ಅಲ್ಲಿನ ಆಡಳಿತ ವ್ಯವಸ್ಥೆ ಹೇಗಿರಬೇಕು? ಹಿಂದೂ-ಮುಸ್ಲಿಮರು ವಾರದಲ್ಲಿ ಯಾರು ಎಷ್ಟು ದಿನ ಪೂಜೆ ಮಾಡಬೇಕು? ಯಾರು ಮಾಡಬೇಕು ಎಂಬೆಲ್ಲಾ ಅಂಶಗಳ ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸಲಿದೆ. ಇದನ್ನೂ ಓದಿ: ಆ ಕಾಲ ಹೋಯ್ತು.. ಭಾರತದ ತಂಟೆಗೆ ಬಂದ್ರೆ ಮುಖಮೂತಿ ನೋಡಲ್ಲ – ರಾಜನಾಥ್ ಸಿಂಗ್ ಎಚ್ಚರಿಕೆ

    ಸರ್ಕಾರ ಆಡಳಿತ ಮಂಡಳಿ ನೀಡುವ ಪಟ್ಟಿಗೆ  ಅಂಕಿತ ಹಾಕಿದರೆ ದತ್ತಪೀಠದಲ್ಲಿ ಇನ್ನು ಮುಂದೆ ಹಿಂದೂ ಅರ್ಚಕರು ಪೂಜೆ ಮಾಡಲಿದ್ದಾರೆ. ಹಿಂದೂ ಅರ್ಚಕರ ನೇಮಕಕ್ಕೆ ಹಿಂದೂ ಸಂಘಟನೆಗಳ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಲಿದೆ.

    ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪಸಮಿತಿ ಕೂಡ ಚಿಕ್ಕಮಗಳೂರಿಗೆ ಭೇಟಿ ನೀಡಿ, ಪೂಜಾ ಪದ್ಧತಿಯ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ದತ್ತಪೀಠದ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದೆ.

    ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಹಿಂದೂಗಳ 5 ದಶಕಗಳ ಹೋರಾಟಕ್ಕೆ ಸಂದ ಐತಿಹಾಸಿಕ ಜಯ. ಹಿಂದೂಗಳ ಪವಿತ್ರ ಕ್ಷೇತ್ರ ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ ಮಾಡಲಾಗಿದೆ. ಧನ್ಯವಾದಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶ್ರೀ ಗುರು ದತ್ತಾತ್ರೇಯರ ಪುಣ್ಯಸ್ಥಳದ ರಕ್ಷಣೆಗಾಗಿ ದಶಕಗಳಿಂದ ಹೋರಾಟಕ್ಕೆ ಕೈಜೋಡಿಸಿದ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ, ಭಕ್ತಾದಿಗಳಿಗೆ ಶತ ಶತ ನಮನಗಳು ಸಿಟಿ ರವಿ ಟ್ವೀಟ್‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚರ್ಚೆಗೆ ಗ್ರಾಸವಾಯ್ತು ದತ್ತಪೀಠದ ಗುಹೆಯೊಳಗಿನ ಸಿಟಿ ರವಿ ಫೋಟೋ

    ಚರ್ಚೆಗೆ ಗ್ರಾಸವಾಯ್ತು ದತ್ತಪೀಠದ ಗುಹೆಯೊಳಗಿನ ಸಿಟಿ ರವಿ ಫೋಟೋ

    ಚಿಕ್ಕಮಗಳೂರು: ಜಿಲ್ಲೆಯ ವಿವಾದಿತ ಸ್ಥಳ ಇನಾಂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿನ ನಿಷೇಧಿತ ಪ್ರದೇಶದಲ್ಲಿ ದತ್ತಾತ್ರೇಯ ಸ್ವಾಮಿಗೆ ಸಚಿವ ಸಿ.ಟಿ.ರವಿ ಕೈ ಮುಗಿಯುತ್ತಿರುವ ಫೋಟೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾಗಿರುವ ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿ, ದತ್ತಪಾದುಕೆ ದರ್ಶನ ಪಡೆದರು. ಈ ವೇಳೆ ಸಚಿವ ಸಿ.ಟಿ.ರವಿ ಗುಹೆಯೊಳಗೆ ದೇವರಿಗೆ ಕೈಮುಗಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ದತ್ತಪೀಠದಲ್ಲಿ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಫೋಟೋವನ್ನು ತೆಗೆಯುವಂತಿಲ್ಲ. ಆದರೆ ಸಚಿವ ಸಿ.ಟಿ.ರವಿ ದತ್ತಪಾದುಕೆ ದರ್ಶನ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಈ ವೇಳೆ ಅವರ ಜೊತೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಇರುವುದು ಫೋಟೋದಲ್ಲಿ ಸಾಬೀತಾಗಿದೆ. ದತ್ತಪೀಠ ಹೋರಾಟದ ಮುಂಚೂಣಿ ನಾಯಕರಾಗಿರುವ ಸಚಿವರಿಗೆ ಇಲ್ಲಿ ಫೋಟೋ ತೆಗೆಯಬಾರದೆಂಬ ಆದೇಶವಿದ್ದರೂ ಗುಹೆಯೊಳಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಚಿವರು ಕಾನೂನು ಉಲ್ಲಂಘಿಸಿದಂತ್ತಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

    ಈ ರೀತಿಯ ನಿಯಮ ಉಲ್ಲಂಘನೆ ಅವರಿಂದಲೇ ನಡೆದಿದೆಯೋ ಅಥವಾ ಅವರ ಜೊತೆ ಹೋಗಿದ್ದಂತಹ ಕಾರ್ಯಕರ್ತರಿಂದ ನಡೆದಿದೆಯೋ ಎಂಬುದರ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ, ಗುಹೆಯೊಳಗೆ ಪಾದುಕೆಯ ದರ್ಶನ ಪಡೆಯುತ್ತಿರುವ ಫೋಟೋಗಳು ಮಾತ್ರ ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ನಡೆ ಬಗ್ಗೆ ಸ್ಥಳಿಯರು ಪ್ರಶ್ನಿಸಿದ್ದಾರೆ.

    ನಿಷೇಧಿತ ಪ್ರದೇಶದಲ್ಲಿ ಫೋಟೋ ತೆಗೆಯುವುದಕ್ಕೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿದ ಹಿನ್ನೆಲೆಯಲ್ಲಿ ದೇವಾಲಯದ ಒಳಗಡೆ ಸಿಟಿ ರವಿ ಪ್ರಾರ್ಥನೆ ಮಾಡುತ್ತಿರುವ ಫೋಟೋವನ್ನು ಪ್ರಕಟಿಸಿಲ್ಲ.

  • ಚಿಕ್ಕಮಗಳೂರು ಕ್ಷೇತ್ರ ಪರಿಚಯ – ಅಖಾಡ ಹೇಗಿದೆ?

    ಚಿಕ್ಕಮಗಳೂರು ಕ್ಷೇತ್ರ ಪರಿಚಯ – ಅಖಾಡ ಹೇಗಿದೆ?

    ಒಂದು ಕಡೆ ದತ್ತಮಾಲೆ ವಿವಾದ, ಮತ್ತೊಂದ್ಕಡೆ ಕೆಂಪು ಉಗ್ರರ ಹೆಜ್ಜೆಯ ಸಪ್ಪಳ, ಬಗರ್ ಹುಕುಂ ಒತ್ತುವರಿಯ ಗುಟುರು. ಕಾಫಿ ಕಹಿಯಾಗೋಕೆ ಇದಕ್ಕಿಂತ ಏನು ಬೇಕು..? ಅಂದ ಹಾಗೆ, ಇವತ್ತಿನ ಕ್ಷೇತ್ರ ಪರಿಚಯದಲ್ಲಿ ಕಾಫಿ ನಾಡು ಚಿಕ್ಕಮಗಳೂರಿನ ಸ್ವಾರಸ್ಯಕರ ಸಂಗತಿಯ ಜೊತೆಗೆ ರಾಜಕೀಯ ಚಿತ್ರಣವನ್ನೂ ನಿಮ್ಮ ಮುಂದೆ ಇಡ್ತಾ ಇದ್ದೇವೆ.

    ಚಿಕ್ಕಮಗಳೂರು ಹೆಸರ ಹಿಂದಿದೆ ಸುಂದರ ಕಹಾನಿ
    ಚಿಕ್ಕಮಗಳೂರು ಹೆಸರಲ್ಲೇ ಇದೆ ಇದು ಚಿಕ್ಕಮಗಳ ಊರು ಅನ್ನೋದು. ಆದ್ರೆ, ಇದು ಯಾರ ಚಿಕ್ಕ ಮಗಳ ಊರು ಅಂತಾ ಕೇಳಿದ್ರೆ ಅದ್ರ ಹಿಂದೆಯೂ ಸುಂದರ ಕಹಾನಿ ಇದೆ. ಸಖರಾಯ ಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಈ ಊರನ್ನ ತನ್ನ ಚಿಕ್ಕಮಗಳಿಗೆ ಉಡುಗೊರೆ ರೂಪದಲ್ಲಿ ಕೊಟ್ಟ ಅನ್ನೋದಾಗಿ ಇತಿಹಾಸ ಹೇಳುತ್ತೆ. ಇಲ್ಲಿಂದ ಐದು ಕಿಲೋ ಮೀಟರ್ ದೂರಕ್ಕೆ ಹೋದ್ರೆ, ಹಿರಿಯ ಮಗಳ ಊರು ಕೂಡಾ ಇದೆ. ಹಳೆಯ ಶಾಸನಗಳು ಹೇಳುವಂತೆ ಮೊದಲು ಈ ಎರಡು ಊರುಗಳನ್ನ ಕಿರಿಯ ಮುಗುಲಿ ಹಾಗೂ ಹಿರಿಯ ಮುಗುಲಿ ಅಂತಾ ಕರೆಯಲಾಗ್ತಿತ್ತಂತೆ. ಇದು ಕಾಫಿ ನಾಡಿಗೂ ಮಗಳಿಗೂ ಇರುವ ಭಾವನಾತ್ಮಕ ನಂಟು..!

    ಕಾಫಿನಾಡಲ್ಲಿ ಮೊದಲ ಕಾಫಿ ಬೀಜ ಬಿತ್ತಿದ್ದು ಯಾರ್ ಗೊತ್ತಾ..?
    ಚಿಕ್ಕಮಗಳೂರಿನ ಗಿರಿ ಶ್ರೇಣಿಗಳು ಪಶ್ಚಿಮ ಘಟ್ಟದ ಒಂದು ಭಾಗ. ತುಂಗೆ ಮತ್ತು ಭದ್ರೆಯರ ತವರೂರು. ಇಲ್ಲಿರೋ ಬಾಬಾ ಬುಡನ್ ಬೆಟ್ಟದಲ್ಲಿ ಅರೇಬಿಕಾ ಕಾಫಿಯನ್ನ ಉತ್ಪಾದಿಸ್ತಾರೆ. ಅಂಧ ಹಾಗೆ, ಚಿಕ್ಕ ಮಗಳೂರಿಗೆ ಕಾಫಿ ಹೇಗೆ ಬಂತು? ಅದ್ರ ಇತಿಹಾಸ ಏನು ಅನ್ನೋದನ್ನ ಕೆದಕ್ತಾ ಹೋದ್ರೆ, 17ನೇ ಶತಮಾನದ ಇತಿಹಾಸದ ಪುಟಗಳಿಂದ ಕಾಫಿ ವಾಸನೆ ಬರುತ್ತದೆ. 17ನೇ ಶತಮಾನದಲ್ಲಿ ಬಹೌದ್ ದಿನ್ ಅಥವಾ ಬಾಬಾ ಬುಡನ್ ಅನ್ನೋ ಸೂಫಿ ಸಂತ ಇದ್ರು. ಅವ್ರು ಇಲ್ಲಿರೋ ಬೆಟ್ಟಗಳ ಗುಹೆಗಳಲ್ಲಿ ನೆಲೆ ಕಂಡುಕೊಳ್ತಿದ್ರು. ಸುಮಾರು ಕ್ರಿಸ್ತ ಶಕ 1670ರಲ್ಲಿ ಬಾಬಾ ಬುಡನ್ ಮೆಕ್ಕಾ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿಂದ 7 ಕಾಫಿ ಬೀಜಗಳನ್ನ ತಂದು ಚಿಕ್ಕಮಗಳೂರಲ್ಲಿ ಬಿತ್ತಿದ್ರು ಅನ್ನೋ ಸ್ವಾರಸ್ಯಕರ ಮಾಹಿತಿ ಸಿಗುತ್ತೆ.

    ಹಸಿರ ತೇರಿನ ಮೇಲೆ ಅಕ್ಷರ ಸಂತರ ಸಾಹಿತ್ಯದ ಗರಿ.
    ಒಂದು ಕಡೆ ಹಸಿರನ್ನೇ ಹೊದ್ದು ಮಲಗಿದಂತಿರೋ ಊರು. ಕವಿಗಳಿಗೆ, ಸಾಹಿತ್ಯ ದಿಗ್ಗಜರಿಗೆ ಇದಕ್ಕಿಂತ ಸ್ವರ್ಗ ಇನ್ನೆಲ್ಲಿ ಸಿಕ್ಕೀತು? ಲಕ್ಷ್ಮೀಶ ದೇವನೂರು, ಡಾ. ಎ.ಆರ್ ಕೃಷ್ಣಶಾಸ್ತ್ರಿ ಅಂಬಳೆಯಂಥಾ ಕವಿ ಮಹೋದಯರು ಕೊಟ್ಟ ಹೆಮ್ಮೆಯ ತಾಣ ಚಿಕ್ಕಮಗಳೂರು. ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು, ಕೂದವಳ್ಳಿಯ ಅದ್ಭುತ ಕಥೆಗಾರ ಅಶ್ವತ್ಥ, ಸಾಹಿತ್ಯ ಸಿಂಚನದ ಜೊತೆಗೆ ಪ್ರಕೃತಿಯ ಜೊತೆ ಬೆರೆಯುವಂತೆ ಮಾಡಿದ ಪೂರ್ಣಚಂದ್ರ ತೇಜಸ್ವಿಯಂಥಾ ಸಾಹಿತಿಗಳನ್ನು ಕೊಟ್ಟ ತಾಣ ಇದು.

    ಗಿರಿಕನ್ಯೆಯ ಸೆರಗಿನ ನಡುವೆ ಅಡಗಿವೆ ಈ ಸುಂದರ ತಾಣಗಳು
    ಚುಮುಚುಮು ಚಳಿಯೇ ಇರಲಿ, ಬಿರು ಬೇಸಿಗೆಯೇ ಇರಲಿ, ಒಂದೇ ಸಮನೆ ಸುರಿಯೋ ಮಳೆಯೇ ಇರಲಿ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಮಾತ್ರ ನಿಮ್ಮನ್ನ ಯಾವ ಕಾಲಕ್ಕೂ ಕೈ ಬೀಸಿ ಕರೆಯುತ್ತೆ. ಮುಳ್ಳಯ್ಯನಗಿರಿ ಕರ್ನಾಟಕ ರಾಜ್ಯದಲ್ಲೇ ಅತೀ ಎತ್ತರದ ಗಿರಿ ಶಿಖರ. ಅಲ್ಲಿಂದ ಅನತಿ ದೂರದಲ್ಲಿದೆ ಬಾಬಾ ಬುಡನ್ ಗಿರಿ. ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾವು ಹಿಂದು ಹಾಗೂ ಮುಸ್ಲಿಮ್ ಧರ್ಮದವರಿಬ್ಬರಿಗೂ ಪವಿತ್ರ. ಇಲ್ಲಿರುವ ಲ್ಯಾಟರೈಟ್ ಗುಹೆಯಲ್ಲಿ ದತ್ತಾತ್ರೇಯ ಸ್ವಾಮಿ ಹಾಗು ಹಜರತ್ ದಾದಾ ಹಯತ್ ಮೀರ್ ಕಲಂದರ್ ನೆಲೆಸಿದ್ರು ಅನ್ನೋ ಉಲ್ಲೇಖಗಳು ಸಿಗುತ್ವೆ. ಈ ಜಾಗ ಎಷ್ಟು ಪವಿತ್ರವೋ ಅಷ್ಟೇ ವಿವಾದದ ಕೇಂದ್ರ ಬಿಂದು ಕೂಡಾ ಹೌದು. ಇನ್ನು, ವರ್ಷಕ್ಕೊಮ್ಮೆ ಪೂಜೆ ನಡೆದರೂ ಪ್ರವಾಸಿಗರನ್ನ ಸೆಳೆಯೋ ದೇವೀರಮ್ಮ ಬೆಟ್ಟ, ಕೆಮ್ಮಣ್ಣುಗುಂಡಿ, ರತ್ನಗಿರಿ ಬೋರ್, ಕುದುರೆ ಮುಖ, ಶೃಂಗೇರಿ, ಹೊರನಾಡು, ಭದ್ರಾ ವನ್ಯಜೀವಿಧಾಮ, ಕಲ್ಲತ್ತಗಿರಿ ಜಲಪಾತ, ಹೆಬ್ಬೆ ಜಲಪಾತ, ಕಳಸ ಹೀಗೆ ಒಂದಾ ಎರಡಾ ಚಿಕ್ಕಮಗಳೂರು ಅನ್ನೋ ಗಿರಿಕನ್ಯೆ ಸದಾ ಯೌವ್ವನವನ್ನ ತುಂಬಿಕೊಂಡಿರಲು ಇಷ್ಟು ಸಾಕು.

    ಚಿಕ್ಕಮಗಳೂರಲ್ಲಿ ಹಳೇ ಹುಲಿಗಳ ಹೊಸ ರಾಜಕೀಯ ಪಟ್ಟು..!
    ಚಿಕ್ಕಮಗಳೂರ ತುಂಬಾ ಈಗ ಕಾಫಿ ಹೀರೋ ಜನಕ್ಕೆ ರಾಜಕೀಯವೇ ಮಿರ್ಚಿ ಮಂಡಕ್ಕಿ ಎಲ್ಲಾನೂ. ಇಲ್ಲಿ ಕ್ಯಾಂಪೇನ್ ಮಾಡೋಕೆ ಬರೋರ್ಗೆ ಸಮಸ್ಯೆಗಳೇ ಕೇಂದ್ರಬಿಂದುವಾದ್ರೂ ರಾಜಕೀಯ ಲೆಕ್ಕಾಚಾರ ಮಾತ್ರ ಬೇರೆಯದ್ದೇ ಆಗಿರುತ್ತೆ. ಲಿಂಗಾಯತ, ಒಕ್ಕಲಿಗ, ಹಿಂದುಳಿದ ಸಮುದಾಯಗಳ ವೋಟುಗಳು ಇಲ್ಲಿ ಅಭ್ಯರ್ಥಿಯ ಹಣೆಬರಹವನ್ನು ಬರೀತಾವೆ. ಹಾಗಾದ್ರೆ, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚಿತ್ರಣವನ್ನ ನೋಡೋಣ ಬನ್ನಿ.

    ಮತ್ತೆ ಗೆದ್ದು ಸೀಟಿ ಹೊಡೆಯೋ ತವಕದಲ್ಲಿದ್ದಾರೆ ಸಿಟಿ ರವಿ..!

     

    ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಿಟಿ ರವಿ ತಮ್ಮ ಪ್ರಭಾವ, ವೈಯಕ್ತಿಕ ವರ್ಚಸ್ಸಿಂದ ಕ್ಷೇತ್ರದಲ್ಲಿ ಸೋಲಿಲ್ಲದ ನಾಯಕನಾಗಿ ಬೆಳೆದಿದ್ದಾರೆ. ಹ್ಯಾಟ್ರಿಕ್ ಸಾಧನೆ ಮಾಡಿರೋ ಸಿಟಿ ರವಿ ಈ ಬಾರಿಯೂ ಬಿಜೆಪಿಯಿಂದ ಕಂಟೆಸ್ಟ್ ಮಾಡ್ತಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದ ಚಿಕ್ಕಮಗಳೂರನ್ನ ನಂತ್ರ ಬಿಜೆಪಿ ಹಾಗೂ ಪಕ್ಷೇತರರು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದು ಈಗ ಇತಿಹಾಸ. ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ರೂ ಕೊನೆಯದಾಗಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಕ್ತಾರ ಬಿಎಲ್ ಶಂಕರ್ ಕಣದಲ್ಲಿದ್ದಾರೆ. ಆದ್ರೆ ಈ ಬಾರಿ ಸಿಟಿ ರವಿಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕೋಕೆ ಜೆಡಿಎಸ್ ಚಿಂತಿಸಿದೆ. ಹೀಗಾಗಿ, ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಿಎಸ್ ಹರೀಶ್ ಕಣಕ್ಕೆ ಇಳಿದಿದ್ದಾರೆ. ಇನ್ನು, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಟಿ ರವಿ 58,683 ವೋಟ್ ಗಳಿಸಿದ್ರು. ಕಾಂಗ್ರೆಸ್ಸಿನ ಕೆ.ಎಸ್ ಶಾಂತೇಗೌಡ 47,695 ಮತಗಳನ್ನು ಗಳಿಸಿ ಸಖತ್ ಫೈಟ್ ಕೊಟ್ಟಿದ್ರು. ಈ ಬಾರಿ ಚುನಾವಣೆಯ ರೋಚಕ ಕ್ಷಣಗಳನ್ನ ಕಣ್ತುಂಬಿಕೊಳ್ಳೋಕೆ ನೀವ್ ರೆಡಿಯಾಗಿ.

    ಬಂಡಾಯದ ಬಿಸಿಗೆ ತರೀಕೆರೆ ತಬ್ಬಿಬ್ಬು..!

     


    ತರೀಕೆರೆ ಕಾಂಗ್ರೆಸ್ ನ ಹಾಲಿ ಶಾಸಕ ಶ್ರೀನಿವಾಸ್ ಮತ್ತೆ ತಮಗೇ ಟಿಕೆಟ್ ಸಿಗುತ್ತೆ ಅನ್ನೋ ಭರವಸೆಯಲ್ಲೇ ಇದ್ರು. ಆದ್ರೆ, ಕೊನೇ ಕ್ಷಣದ ಬದಲಾವಣೆ ಹೊರತಾಗಿ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಈ ಕ್ಷೇತ್ರ ಸಾಕ್ಷಿ. ಯಾಕಂದ್ರೆ, ಇಲ್ಲಿ ಹಾಲಿ ಶಾಸಕರಿಗೆ ಬಿಟ್ಟು ಮಾಜಿ ಶಾಸಕ ಎಸ್ ಎಂ ನಾಗರಾಜು ಅವ್ರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಹೀಗಾಗಿ ಶಾಸಕ ಶ್ರೀನಿವಾಸ್ ಬಂಡಾಯ ಎದ್ದು ಜೆಡಿಎಸ್ ಕದ ತಟ್ಟಿದ್ರು. ದುರಾದೃಷ್ಟವಶಾತ್ ಅಲ್ಲೂ ಅವ್ರ ಆಸೆಗೆ ಯಾವ ಸೊಪ್ಪೂ ಬೀಳಲಿಲ್ಲ. ಇನ್ನು, ಇತ್ತ ಜೆಡಿಎಸ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ. ಎಚ್ ಶಿವಶಂಕರಪ್ಪ ಪಕ್ಷಕ್ಕೆ ಟಾ ಟಾ ಬೈ ಬೈ ಹೇಳಿ ಒಂದು ಕಾಲು ಹೊರಗಿಟ್ಟಿದ್ರು. ಆದ್ರೆ, ಕೊನೇ ಕ್ಷಣದಲ್ಲಿ ತೆನೆಹೊತ್ತ ಮಹಿಳೆ ಶಿವಶಂಕರಪ್ಪ ಅವ್ರಿಗೇ ಜೈ ಅಂದಿದ್ದಾಳೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಿ.ಎಚ್. ಶ್ರೀನಿವಾಸ ಪ್ರಯಾಸದ ಗೆಲುವು ಅಂದ್ರೆ, ಕೇವಲ 899 ಮತಗಳ ಅಂತರದಲ್ಲಿ ಗೆದ್ದು ಗಾದಿ ಹಿಡಿದಿದ್ರು.

    ಮೂಡಿಗೆರೆ ಮತದಾರನ ಮೂಡು ಹೇಗಿದ್ಯೋ..!


    ಮೂಡಿಗೆರೆಯ ಹಾಲಿ ಶಾಸಕ ಬಿ.ಬಿ ನಿಂಗಯ್ಯ ಬಾರಿಯೂ ಜೆಡಿಎಸ್ ನಿಂದ ರಣರಂಗಕ್ಕೆ ಧುಮುಕಿದ್ದಾರೆ. ವಿರೋಧ ಪಕ್ಷದ ಸಮರ್ಥ ನಾಯಕಿಯಾಗಿ ಕೆಲಸ ಮಾಡಿ ಹಾಲಿ ಎಂಎಲ್ ಸಿ ಯಾಗಿದ್ದ ಮೋಟಮ್ಮಗೆ ಕಾಂಗ್ರೆಸ್ ತನ್ನ ಟಿಕೆಟ್ ಕೊಟ್ಟಿದೆ. ಮೊದಲಿನಿಂದಲೂ ಟಿಕೆಟ್ ತನಗೇ ಸಿಗುತ್ತೆ ಅನ್ನೋ ಅಚಲ ವಿಶ್ವಾಸದಲ್ಲಿದ್ದ ಮೋಟಮ್ಮ ಆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ರು. ಇನ್ನು, ಬಿಜೆಪಿ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಿದೆ. ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡಿರೋ ಕುಮಾರಸ್ವಾಮಿಯವರಿಗೇ ಟಿಕೆಟ್ ಕೊಡಬೇಕು ಅನ್ನೋದು ಕಾರ್ಯಕರ್ತರ ಒಕ್ಕೊರೊಲ ಆಗ್ರಹವೂ ಆಗಿತ್ತು. ಹಾಗಾಗಿ, ಈ ಬಾರಿ ಮೂಡಿಗೆರೆ ಭಾರೀ ಸ್ಪರ್ಧೆಗೆ ಅಖಾಡವಾಗಿರೋದಂತೂ ಹೌದು.

    ಶೃಂಗೇರಿಯ ಮತಾಧೀಶ ಯಾರನ್ನ ಪೀಠಕ್ಕೆ ಏರಿಸ್ತಾನೆ..?

     


    ಶೃಂಗೇರಿಯ ಹಾಲಿ ಶಾಸಕ ಬಿಜೆಪಿಯ ಡಿ ಎನ್ ಜೀವರಾಜ್ ಈ ಬಾರಿಯೂ ಕಣದಲ್ಲಿರೋದು ಬಹುತೇಕ ಅವ್ರಿಗೆ ಪೈಪೋಟಿ ನೀಡೋ ಅಭ್ಯರ್ಥಿಯೇ ಇಲ್ಲ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಆಡಳಿತ ವಿರೋಧಿ ಅಲೆ, ಮೋದಿ ಅಲೆಯ ಜೊತೆಗೆ ಹಿಂದೂ ಮತಗಳು, ವೈಯಕ್ತಿಕ ವರ್ಚಸ್ಸು ಜೀವರಾಜ್ ಅವ್ರ ಸ್ಟ್ರೆಂಥ್. 2013ರ ಚುನಾವಣೆಯಲ್ಲಿ ಜೀವರಾಜ್ 58,402 ಮತ ಪಡೆದು ವಿಜಯ ಪತಾಕೆ ಹಾರಿಸಿದ್ರು. ಇನ್ನು, ಕಾಂಗ್ರೆಸ್ ಗೆ ಕೈ ಕೊಟ್ಟು ಬಂದು ತೆನೆ ಹೊತ್ತ ಮಾಜಿ ಸಚಿವ ಎಚ್ ಜಿ ಗೋವಿಂದೇಗೌಡ್ರ ಮಗ ವೆಂಕಟೇಶ್ ಈ ಬಾರಿ ಜೆಡಿಎಸ್ ಕಲಿ. ಕಾಂಗ್ರೆಸ್ ನಿಂದ ಕಣಕ್ಕೆ ಧುಮುಕಿರೋ ಟಿ.ಡಿ ರಾಜೇಗೌಡ ಶೃಂಗೇರಿಯ ಜನರ ಮನದಾಳವನ್ನ ಅರಿಯೋ ಪ್ರಯತ್ನ ಮಾಡಿದ್ದಾರೆ. ಹೇಳಿಕೊಂಡಷ್ಟು ಅಭಿವೃದ್ಧಿಯಾಗಿಲ್ಲ. ಜನ ಬದಲಾವಣೆ ಬಯಸಿದ್ದಾರೆ ಅನ್ನೋ ವನ್ ಲೈನ್ ಅಜೆಂಡಾ ಇವ್ರದ್ದು.

    ದತ್ತಾ ಮೇಲಿಲ್ಲ ಕಡೂರು ಜನರಿಗೆ ಯಾವುದೇ ತಕರಾರು..!


    ಕಡೂರಿನ ಹಾಲಿ ಎಂಎಲ್ ಎ, ಜೆಡಿಎಸ್ ನ ವೈ ಎಸ್ ವಿ ದತ್ತಾ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2010ರ ತನಕ ಕಾಂಗ್ರೆಸ್ ಕಪಿಮುಷ್ಟಿಯಲ್ಲಿದ್ದ ಕಡೂರು ಕ್ಷೇತ್ರವನ್ನ 2013ರಲ್ಲಿ ದತ್ತಾ ತಮ್ಮದಾಗಿಸಿಕೊಂಡ್ರು. ಇನ್ನು ಟಿಕೆಟ್ ಘೋಷಣೆಗೂ ಮುನ್ನವೇ ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಪ್ರಚಾರಕ್ಕಾಗಿ ಹೈಟೆಕ್ ವಾಹನವೊಂದನ್ನು ಸಿದ್ಧಗೊಳಿಸಿದ್ರು. ಕೊನೆಗೂ ಬಿಜೆಪಿ ಅವ್ರಿಗೇ ಟಿಕೆಟ್ ಕನ್ಫರ್ಮ್ ಮಾಡಿದೆ. ಕಾಂಗ್ರೆಸ್ ಕೆ. ಎಸ್ ಆನಂದ್ ನ್ನ ಕಣಕ್ಕಿಳಿಸಿದೆ. ಆದ್ರೆ, ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೇ ಇವ್ರಿಗೆ ಟಿಕೆಟ್ ಕೊಟ್ಟಿರೋದು ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ, ಕಡೂರು ಕ್ಷೇತ್ರದಲ್ಲಿ ಯಾವ ರೀತಿಯ ಫಲಿತಾಂಶ ಸಿಗ್ಬೋದು ಅನ್ನೋದೇ ಸಾಕಷ್ಟು ಕುತೂಹಲ ಕೆರಳಿಸಿದೆ.

  • ಸಿಎಂ ಬೇಕಾದ್ರೆ ಸಿದ್ದರಾಮಯ್ಯ ಅಲಿಯಾಸ್ ಅಮಾನುಲ್ಲಾ ಖಾನ್ ಎಂದು ಹೆಸರನ್ನು ಬದಲಿಸಿಕೊಳ್ಳಲಿ: ಸಿಟಿ ರವಿ ಕಿಡಿ

    ಸಿಎಂ ಬೇಕಾದ್ರೆ ಸಿದ್ದರಾಮಯ್ಯ ಅಲಿಯಾಸ್ ಅಮಾನುಲ್ಲಾ ಖಾನ್ ಎಂದು ಹೆಸರನ್ನು ಬದಲಿಸಿಕೊಳ್ಳಲಿ: ಸಿಟಿ ರವಿ ಕಿಡಿ

    ಬೆಂಗಳೂರು: ಮುಖ್ಯಮಂತ್ರಿಗಳು ಬೇಕಾದರೆ ಸಿದ್ದರಾಮಯ್ಯ ಅಲಿಯಾಸ್ ಅಮಾನುಲ್ಲಾ ಖಾನ್ ಎಂದು ಹೆಸರನ್ನು ಬದಲಾಯಿಸಿಕೊಳ್ಳಲಿ. ಆದರೆ ದತ್ತಾತ್ರೇಯ ದೇವರ ಹೆಸರನ್ನು ಬದಲಾಯಿಸುವುದು ಬೇಡ ಎಂದು ಬಿಜೆಪಿ ಮುಖಂಡ ಸಿಟಿ ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ದತ್ತಪೀಠಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಕ್ಯಾಬಿನೆಟ್ ನಲ್ಲಿ ಕೈಗೊಂಡ ತೀರ್ಮಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಸರ್ಕಾರ ಮುಜರಾಯಿ ಇಲಾಖೆಯ ಅಡಿ ದತ್ತಪೀಠ ಬರುತ್ತದೆ ಎನ್ನುವ ನಿರ್ಣಯ ಕೈಗೊಂಡಿದೆ. ಮೇಲ್ನೋಟಕ್ಕೆ ಇದು ಹಿಂದೂಗಳ ಪರವಾಗಿದೆ ಎಂದು ಕಾಣಿಸಿಕೊಂಡರೂ ಒಳಗಡೆ ವಂಚನೆ ಇದೆ ಎಂದು ಆರೋಪಿಸಿದರು.

    1927ರಿಂದ ಮುಜರಾಯಿ ವಶದಲ್ಲಿ ದತ್ತಪೀಠ ಇತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ದತ್ತ ಪೀಠವನ್ನು ವಕ್ಫ್ ಬೋರ್ಡ್ ಗೆ ಸೇರಿಸುವ ಪ್ರಯತ್ನ ನಡೆದಿತ್ತು. 1980ರಲ್ಲಿ ಜಿಲ್ಲಾ ಕೋರ್ಟ್ ಮುಜರಾಯಿ ಅಡಿ ಬರುತ್ತದೆ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಹೈಕೊರ್ಟ್ ರಿಟ್ ಅರ್ಜಿ ಹಾಕಿತ್ತು. ಇಲ್ಲೂ ವಜಾಗೊಂಡ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಸುಪ್ರೀಂ ಮೊರೆ ಹೋಗಿತ್ತು. 1991ರಲ್ಲಿ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿತ್ತು. ಈಗಾಗಲೇ ಮುಜರಾಯಿ ಇಲಾಖೆಯ ಅಡಿಯಲ್ಲೇ ದತ್ತಪೀಠ ಇರುವಾಗ ಮತ್ತೆ ಪುನಃ ಮುಜರಾಯಿ ಸುಪರ್ದಿಗೆ ನೀಡುತ್ತೇವೆ ಎಂದು ಹೇಳುವುದೇ ಹಾಸ್ಯಾಸ್ಪದ ಎಂದರು.

    ಹಿಂದೂ ಅರ್ಚಕರ ನೇಮಕವಾಗಬೇಕು ಎನ್ನುವ ಬೇಡಿಕೆ ನಮ್ಮದು. ಅದನ್ನು ಬಿಟ್ಟು ಸರ್ಕಾರ ಇಲ್ಲೂ ಓಲೈಕೆಯ ರಾಜಕಾರಣ ಮಾಡಲು ಹೊರಟಿದೆ. ತನಗೆ ಬೇಕಾದಂತೆ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದ ತಜ್ಞರ ಸಮಿತಿಯನ್ನು ಸರ್ಕಾರ ನೇಮಿಸಿತ್ತು ಎಂದು ಸಿಟಿ ರವಿ ಆರೋಪಿಸಿದರು.

    ಗುರು ದತ್ತಾತ್ರೇಯಾ ಬಾಬಾ ಬುಡಾನ್ ಗಿರಿ ದರ್ಗಾ ಎಂದು ಕರೆಯುವ ಹಕ್ಕು ಕಾಂಗ್ರೆಸ್ ಆಗಲಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಮಸೀದಿಯಲ್ಲಿ ಅರ್ಚಕರ ನೇಮಕಕ್ಕೆ ಮುಸ್ಲಿಮರು ಒಪ್ಪುತ್ತಾರಾ? ಹೀಗಾಗಿ ಇಲ್ಲೂ ಹಿಂದೂ ಅರ್ಚಕರ ನೇಮಕ ಆಗಬೇಕು. ಮಸೀದಿಯಲ್ಲಿ ಅರ್ಚಕರ ನೇಮಕಕ್ಕೆ ಒಪ್ಪಿದರೆ ಇಲ್ಲಿ ಮುಜವರ್ ಪೂಜೆಗೆ ನಾವು ಒಪ್ಪಿಗೆ ನೀಡುತ್ತೇವೆ ಎಂದು ಹೇಳಿದರು.

    ಟಿಪ್ಪು ಜಯಂತಿ, ಮುಗ್ಧ ಅಲ್ಪಸಂಖ್ಯಾತರ ಮೇಲಿನ ಕೇಸ್ ಹಿಂಪಡೆಯಲು ಹೊರಡಿಸಿದ ಸುತ್ತೋಲೆ, ಬಹುಮನಿ ಉತ್ಸವ ಆಚರಣೆ ಮಾಡಲು ಮುಂದಾಗಿದ್ದು, ಮಠಗಳನ್ನು ವಶಪಡಿಸಲು ಹೊರಡಿಸಿದ್ದ ನೋಟಿಸ್ ಬಳಿಕದ ಓಲೈಕೆಯ ರಾಜಕಾರಣದ ಮುಂದುವರಿದ ಭಾಗವಾಗಿ ಸರ್ಕಾರ ತನ್ನ ಕ್ಯಾಬಿನೆಟ್ ನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಅಷ್ಟೇ ಅಲ್ಲದೇ ಮುಂದಿನ ಯಡಿಯೂರಪ್ಪ ಸರ್ಕಾರದಲ್ಲಿ  ಈಗ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದರು.

    ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ. ಇಲ್ಲಿ ಇರುವುದು ದತ್ತಾತ್ರೇಯ ಪಾದುಕೆ. ಮುಸ್ಲಿಮರ ಧಾರ್ಮಿಕ ಆಚರಣೆಗೂ ಹಿಂದೂಗಳ ಧಾರ್ಮಿಕ ಆಚರಣೆ, ನಂಬಿಕೆಗೆಳಿಗೆ ವ್ಯತ್ಯಾಸವಿದೆ. ಹೀಗಿರುವಾಗ ಅವರು ಹೇಗೆ ಪೂಜೆ ಮಾಡುತ್ತಾರೆ ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    https://youtu.be/y046j74RqOI