Tag: ಬಾಬಾಬುಡನ್ ಗಿರಿ

  • ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?

    ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?

    ರ್ನಾಟಕದ ಅಯೋಧ್ಯೆ (Ayodhya Of Karnataka) ಎಂದೇ ಖ್ಯಾತಿಯಾಗಿರುವ ವಿವಾದಿತ ಧಾರ್ಮಿಕ ಕ್ಷೇತ್ರ ದತ್ತಪೀಠ. ಹಿಂದೂಗಳು ಇದನ್ನ ಇನಾಂ ದತ್ತಾತ್ರೇಯ ಪೀಠ ಎಂದು ಕರೆದರೆ, ಮುಸ್ಲಿಮರು ಬಾಬಾಬುಡನ್ ಗಿರಿ ದರ್ಗಾ ಎಂದು ನಂಬಿದ್ದಾರೆ. ಆದರೆ ಕಳೆದ ನಾಲ್ಕು ದಶಕಗಳಿಂದ ಇದರ ಉಮೇದುವಾರಿಕೆಗಾಗಿ ಹಿಂದೂ-ಮುಸ್ಲಿಮರು ಹೋರಾಡುತ್ತಿದ್ದಾರೆ. ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿರುವುದರಿಂದ ಸರ್ಕಾರ ಇದನ್ನ ʼಇನಾಂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾʼ ಎಂದು ಕರೆಯುತ್ತಿದೆ. ವರ್ಷಪೂರ್ತಿ ಎರಡು ಕೋಮಿನ ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಹಿಂದೂ ಸಂಘಟನೆಗಳು ದತ್ತಪೀಠದಲ್ಲಿ ದತ್ತಜಯಂತಿ ಆಚರಿಸಿದರೆ, ಮುಸ್ಲಿಮರು ಉರುಸ್ ಆಚರಿಸುತ್ತಾರೆ. ಈ ಎರಡೂ ಕಾರ್ಯಕ್ರಮ ಕೂಡ ಸರ್ಕಾರದ ನೆರಳಿನಲ್ಲೇ ನಡೆಯುತ್ತಿದೆ. ಆದರೆ ಈ ಪುಣ್ಯಕ್ಷೇತ್ರ ನಮ್ಮದು ಎಂದು ಎರಡು ಸಮುದಾಯದ ಜನ ಇಂದಿಗೂ ಹೋರಾಡೋದು ಮಾತ್ರ ನಿಂತಿಲ್ಲ, ನಿಲ್ಲೋದು ಇಲ್ಲ.

    ಪಶ್ಚಿಮಘಟ್ಟ (Western Ghat) ಅಂದ್ರೆನೆ ಭೂಲೋಕದ ಸ್ವರ್ಗ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಕಣ್ಣಿನ ದೃಷ್ಠಿಗೂ ಮುಗಿಯದ ನಿಸರ್ಗ ಮಾತೆಯ ಸೌಂದರ್ಯ. ತಣ್ಣನೆಯ ಗಾಳಿ, ಮೈಕೊರೆವ ಚಳಿ. ವರ್ಷದ 365 ದಿನವೂ ತುಂಬು ಮುತ್ತೈದೆಯಂತಿರೋ ಇಲ್ಲಿನ ಪ್ರಕೃತಿ ದೇವಿ ಸೌಂದರ್ಯ ಮುಂದೆ ಜಗತ್ತಿನ ಎಲ್ಲಾ ಸೌಂದರ್ಯವೂ ನಶ್ವರ. ಇದರ ಅಂದ ಬರೆಯೋಕೆ ಪುಟಗಳು ಸಾಲದು, ವರ್ಣಿಸೋಕೆ ಪದಪುಂಜವೇ ಸಾಲದು. ಇಲ್ಲಿನ ಅಂತಹಾ ವನದೇವಿಯ ಮಧ್ಯೆ ನೆಲೆನಿಂತಿರೋದು ದತ್ತಾತ್ರೇಯ ಸ್ವಾಮಿ. ಆ ಸುಂದರ ಪ್ರಕೃತಿಯ ಮಧ್ಯೆ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆಯೋದೇ ಪುಣ್ಯ ಅನ್ನೋದು ಭಕ್ತರ ನಂಬಿಕೆ. ಹಾಗಾಗಿ ವರ್ಷಪೂರ್ತಿ ಇಲ್ಲಿಗೆ ಲಕ್ಷಾಂತರ ಹಿಂದೂಗಳು ಭೇಟಿ ನೀಡಿ ಪ್ರಕೃತಿಯ ಜೊತೆ ದತ್ತಾತ್ರೇಯ ಸ್ವಾಮಿ ದರ್ಶನ ಕೂಡ ಮಾಡುತ್ತಿದ್ದಾರೆ. ಈ ಪ್ರಕೃತಿಯ ತವರಿನಲ್ಲಿ ಗುರು ದತ್ತಾತ್ರೇಯ ಸ್ವಾಮಿ ಜೊತೆ, ಮಾತೆ ಅನುಸೂಯಾ ದೇವಿಯೂ ನೆಲೆಸಿದ್ದಾರೆ ಅನ್ನೋದು ದತ್ತಭಕ್ತರ ನಂಬಿಕೆ. ಈ ಮಣ್ಣು ಅತ್ರಿ ಮುನಿಗಳು ಬದುಕಿ-ಬಾಳಿದ್ದ ಪುಣ್ಯ ಭೂಮಿ. ಅತ್ರಿಮುನಿಗಳು ತಪಸ್ಸು ಮಾಡಿ, ಶಿಷ್ಯರಿಗೆ ಪಾಠ ಮಾಡಿದ, ಭಕ್ತರಿಗೆ ಅನುಗ್ರಹಿಸಿದ್ದ ತಪೋಭೂಮಿ. ಈ ಎಲ್ಲಾ ಅಂಶಗಳು ಕೂಡ ಶ್ರೀ ದತ್ತ ಭಾಗವತದಲ್ಲಿ ಉಲ್ಲೇಖವಿದೆ. ಇಂತಹ ಗುರು ಪರಂಪರೆಯ ತಪೋಭೂಮಿ ಕಳೆದ ನಾಲ್ಕೈದು ದಶಕಗಳಿಂದ ಹಿಂದೂ ಸಮಾಜದಿಂದ ದೂರವಾಗುವ ಹಂತಕ್ಕೆ ತಲುಪಿದೆ ಅನ್ನೋದು ಹಿಂದೂಗಳ ಆತಂಕ. ಇದನ್ನೂ ಓದಿ: ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ ನೀವೂ ಭೇಟಿ ಕೊಡಿ

    ದತ್ತಪೀಠಕ್ಕೆ (Dattapeeta) ತಲೆಮಾರುಗಳಿಂದ ನಡೆದುಕೊಳ್ಳುತ್ತಿರುವ ಭಕ್ತಗಣವಿದೆ. ಇತಿಹಾಸದಲ್ಲಿ ರಾಜ-ಮಹಾರಾಜರುಗಳು, ಮಠ-ಮಂದಿರಗಳು ಇಲ್ಲಿಗೆ ಭಕ್ತಿ ಸಮರ್ಪಣೆ ಮಾಡುತ್ತಿದ್ದರು. ಕೆಳದಿಯ ಚೆನ್ನಮ್ಮ ಇಲ್ಲಿ ಯಾತ್ರಿನಿವಾಸವನ್ನ ಕಟ್ಟಿಸಿದ್ದಳು. ಆನೆಗುಂದಿ ಅರಸರು ಇಪ್ಪತ್ತು ಗ್ರಾಮಗಳನ್ನ ದತ್ತಪೀಠಕ್ಕೆ ಕೊಡುಗೆ ನೀಡಿದ್ದರು. ಮೈಸೂರು ಅರಸರು ಪೀಠಕ್ಕೆ ಸಾವಿರಾರು ಎಕರೆ ಭೂಮಿಯನ್ನ ದಾನ ನೀಡಿದ್ದರು. ಅಷ್ಟೆ ಅಲ್ಲದೆ ದತ್ತಾತ್ರೇಯರಿಗೆ ನಿತ್ಯ ಪೂಜಾ-ಕೈಂಕರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದರು. ಮೈಸೂರು ಅರಸರು ಸಾವಿರಾರು ಎಕರೆಯನ್ನ ಇನಾಂ ನೀಡಿದ ಪರಿಣಾಮ ಅಂದಿನಿಂದಲೂ ಈ ಧಾರ್ಮಿಕ ಕ್ಷೇತ್ರ ಇನಾಂ ದತ್ತಾತ್ರೇಯ ಪೀಠ ಎಂದೇ ಜನಜನಿತವಾಗಿದೆ.

    18ನೇ ಶತಮಾನದ ಆಸು-ಪಾಸಿನಲ್ಲಿ ಸೂಫಿ ಪರಂಪರೆಯ ಹಜರತ್ ದಾದಾ ಹಯಾತ್ ಮೀರ್ ಖಲಂದರ್ ಇಲ್ಲಿಗೆ ಭೇಟಿ ನೀಡಿ, ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ಅಂದಿನಿಂದ ಮುಸ್ಲಿಮರು ಇಲ್ಲಿಗೆ ಬರಲು ಆರಂಭಿಸಿದ್ದರು. ಮೈಸೂರು ಸಂಸ್ಥಾನವನ್ನ ವಶಪಡಿಸಿಕೊಂಡ ಹೈದರಾಲಿ ಶ್ರೀರಂಗಪಟ್ಟಣದ ಇಸ್ಮಾಯಿಲ್ ಶಾಖಾದ್ರಿ ಎಂಬ ಫಕೀರರನ್ನ ಕೆಲಸಕ್ಕೆಂದು ನೇಮಿಸಿತ್ತು. ಆದರೆ ಅವರಿಗೆ ಮಕ್ಕಳಿಲ್ಲದ ಕಾರಣ ಅವರು ಬುಡನ್ ಹಾಗೂ ಸೈಯ್ಯದ್ ಎಂಬ ಇಬ್ಬರು ಮಕ್ಕಳನ್ನ ದತ್ತು ಸ್ವೀಕಾರ ಮಾಡುತ್ತಾರೆ. ಮುಂದೆ ಆಡಳಿತಕ್ಕೆ ಬಂದ ಟಿಪ್ಪು ಇದೇ ಬುಡನ್ ನನ್ನ ದತ್ತಪೀಠದ ಆಡಳಿತಕ್ಕಾಗಿ ನೇಮಕ ಮಾಡುತ್ತಾನೆ. ದತ್ತಪೀಠಕ್ಕೆ ಬಂದ ಬುಡನ್ ಶಾಖಾದ್ರಿ ಓರ್ವ ವ್ಯವಸ್ಥಾಪಕನ ಕೆಲಸಕ್ಕಾಗಿ ಬಂದದ್ದು ವಿನಃ ಆತ ಎಂದೂ ಧಾರ್ಮಿಕ ಗುರು ಆಗಿರಲಿಲ್ಲ. ಅಂದಿನಿಂದ ದತ್ತಪೀಠದ ವ್ಯವಸ್ಥಾಪಕರಾಗಿ ಶಾಖಾದ್ರಿ ಮನೆತನ ಖಾಯಂಗೊಂಡಿದೆ ಅನ್ನೋದು ಹಿಂದೂ ಸಮುದಾಯ ಹಾಗೂ ದತ್ತಪೀಠದ ಹೋರಾಟಗಾರರ ವಾದ, ನಂಬಿಕೆಯಾಗಿದೆ.

    1917ರಲ್ಲಿ ಬ್ರಿಟಿಷರು ಇದನ್ನ ಹಿಂದೂಗಳ ಧಾರ್ಮಿಕ ಕ್ಷೇತ್ರವೆಂದು ಗುರುತಿಸಿ ಮುಜರಾಯಿ ಇಲಾಖೆಗೆ ಸೇರಿಸಿದ್ದರಂತೆ. ಆದರೆ ಮುಜರಾಯಿ ಇಲಾಖೆಯಲ್ಲಿದ್ದ ದತ್ತಪೀಠವನ್ನ 1974ರಲ್ಲಿ ವಕ್ಫ್ ಬೋರ್ಡ್ ಗೆ ಸೇರಿಸಲಾಗಿದೆ ಎಂದು ದತ್ತಪೀಠದ ಹೋರಾಟಗಾರರು ಹೇಳುತ್ತಾರೆ. ಅಂದಿನಿಂದ ಸರ್ಕಾರದ ನಡೆಯನ್ನ ವಿರೋಧಿಸಿ ಹೋರಾಟಗಳು ಅಡಿಇಟ್ಟಿವೆ. 1980ರಿಂದ ಮತ್ತೆ ದತ್ತ ಜಯಂತಿಯ ದಿನ ಪೀಠಕ್ಕೆ ಹೋಗುವ ಸಂಪ್ರದಾಯ ಜನ್ಮತಾಳಿತು. 1980ರ ದಶಕದಲ್ಲೇ ದತ್ತಪೀಠದ ಹೋರಾಟಕ್ಕೆ ಸಮಿತಿ ಕೂಡ ರಚನೆಯಾಗಿತ್ತು. 1992ರಲ್ಲಿ ಆದಿಚುಚಂನಗಿರಿ ಪೀಠಾಧ್ಯಕ್ಷರ ನೇತೃತ್ವದಲ್ಲಿ ದತ್ತಪೀಠಕ್ಕೆ ತೆರಳಿದ್ದ ಹಿಂದೂ ಕಾರ್ಯಕರ್ತರು ದತ್ತಪೀಠದಲ್ಲಿ ಭಗವಧ್ವಜ ಹಾರಿಸಿದ್ದರು. ಅದೇ ಕಾರಣಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡಿ ಹಲವರನ್ನ ಬಂಧಿಸಿದ್ದರು. ದತ್ತಪೀಠದ ಮುಕ್ತಿಗಾಗಿ ಹೋರಾಡುತ್ತಿದ್ದ ಕಾರ್ಯಕರ್ತರು ತಿಂಗಳುಗಟ್ಲೆ ಜೈಲುವಾಸ ಕೂಡ ಅನುಭವಿಸಿದ್ದರು.

    1980ರ ನಂತರ ದತ್ತಪೀಠದ ಹೋರಾಟದ ರೂಪುರೇಷೆ ಬದಲಾಗುತ್ತಾ ಸಾಗಿತು. ದತ್ತಪೀಠದ ಮುಕ್ತಿಗಾಗಿ 96-97ರಲ್ಲಿ ರಥಯಾತ್ರೆಗಳು ಆರಂಭವಾದವು. ನಾಡಿನಾದ್ಯಂತ ಜನಜಾಗೃತಿ ಉಂಟಾಯಿತು. ದತ್ತ ಜಯಂತಿ ಜೊತೆ ಒಂದು ವಾರಗಳ ಕಾಲ ಯಾವುದೇ ಜಾತಿ-ಬೇಧವಿಲ್ಲದೇ ದತ್ತ ಮಾಲಾಧಾರಣೆ ಮಾಡಿ, ವೃತವನ್ನ ಆಚರಿಸಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ, ಇರುಮುಡಿ ಸಮರ್ಪಣೆಗಳು ಆರಂಭವಾದವು. ಅಂದಿನಿಂದ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಈ ಹೋರಾಟಕ್ಕೆ ಶಕ್ತಿಯಾಗಿ ನಿಂತವು. 1980ರಿಂದ 20 ವರ್ಷಗಳ ನಿರಂತರ ಹೋರಾಟ ಹಾಗೂ ಜನಜಾಗೃತಿಯಿಂದ 2000ನೇ ಇಸವಿ ವೇಳೆಗೆ ದತ್ತಪೀಠದ ದತ್ತಜಯಂತಿಗೆ ಬರುವವರ ಸಂಖ್ಯೆ 50 ಸಾವಿರ ದಾಟಿತ್ತು. 2002ರ ಕಾಂಗ್ರೆಸ್ ಸರ್ಕಾರದ ಸಚಿವ ದಿ.ಡಿ.ಬಿ.ಚಂದ್ರೇಗೌಡರೇ ದತ್ತಪೀಠದ ದತ್ತಜಯಂತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದರು. ಆದರೆ 2004ರ ಬಳಿಕ ಪೀಠದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಹೋಮ-ಹವನಕ್ಕೆ ನಿಷೇಧ ಹೇರಲಾಯಿತು. ಆಗ ಹಿಂದೂ ಸಂಘಟನೆಗಳ ಹೋರಾಟ ಉಗ್ರರೂಪ ತಾಳಿತ್ತು. ಆಗಿನ್ನು ನೂತನವಾಗಿ ಶಾಸಕರಾಗಿದ್ದ ಸಿ.ಟಿ.ರವಿ ಸೇರಿ ಸಾಕಷ್ಟು ಕಾರ್ಯಕರ್ತರು ವಾರಗಟ್ಟಲೇ ಜೈಲಲ್ಲಿದ್ದರು. ಆದರೆ ಪ್ರಮುಖರ ಬಂಧನದ ಮಧ್ಯೆಯೂ ಚಿಕ್ಕಮಗಳೂರಿನ ನಾಲ್ಕು ದಿಕ್ಕಿನಿಂದಲೂ ಸಾವಿರಾರು ದತ್ತಭಕ್ತರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿದ್ದು ಈಗ ಇತಿಹಾಸ.

    ಕಳೆದ ಮೂರ್ನಾಲ್ಕು ದಶಕಗಳಿಂದಲೂ ದತ್ತಪೀಠದ ಉಮೇದುವಾರಿಕೆಗಾಗಿ ಎರಡು ಸಮುದಾಯದವರು ಕೋರ್ಟ್ ಹೊರಗೆ ಹಾಗೂ ಒಳಗೆ ಹೋರಾಡುತ್ತಿದ್ದಾರೆ. ಪ್ರಕರಣ ಸುಪ್ರಿಂಕೋರ್ಟ್ ಕಟಕಟೆ ಕೂಡ ಹತ್ತಿದೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ದತ್ತಪೀಠದ ಉಮೇದುಗಾರಿಕೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸೂಚಿಸಿತ್ತು. ಆದರೆ ನಾಗಮೋಹನ್ ದಾಸ ವರದಿ ಇದು ಮುಸ್ಲಿಮರಿಗೆ ಸೇರಿದ್ದು ಎಂದು ವರದಿ ನೀಡಿದ್ದರಿಂದ ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದವು. ನಾಗಮೋಹನ್ ದಾಸ್ ವರದಿಯನ್ನ ಕೋರ್ಟ್ ವಜಾ ಮಾಡಿತ್ತು. ಇದೀಗ ಕಳೆದ ಸಾಲಿನಲ್ಲಿದ್ದ ಬಿಜೆಪಿ ಸರ್ಕಾರ ದತ್ತಪೀಠದ ವ್ಯವಸ್ಥಾಪನಾ ಸಮಿತಿಯನ್ನ ನೇಮಕ ಮಾಡಿದೆ. ಈ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಅರ್ಚಕರ ನೇಮಕವಾಗಿ, ಈಗ ಪ್ರತಿನಿತ್ಯ ತ್ರಿಕಾಲ ಪೂಜೆ ನೆರವೇರುತ್ತಿದೆ. ನಾಲ್ಕು ದಶಕಗಳ ಹೋರಾಟದ ಫಲವಾಗಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಿ ತ್ರಿಕಾಲ ಪೂಜೆ ನಡೆಯುತ್ತಿದೆ. ಆದರೆ ದತ್ತಪೀಠ ಸಂಪೂರ್ಣ ಹಿಂದೂಗಳಿಗೆ ಸೇರಬೇಕು. ಇಲ್ಲಿರುವ ಗೋರಿಗಳು ನಾಗೇನಹಳ್ಳಿಗೆ ಸ್ಥಳಾಂತರ ಆಗಬೇಕು. ಹಿಂದೂಗಳ ದತ್ತಪೀಠವೇ ಬೇರೆ. ಮುಸ್ಲಿಮರ ದರ್ಗಾವೇ ಬೇರೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರೋದು ದತ್ತಪೀಠ. ದತ್ತಪೀಠದಿಂದ 14 ಕಿ.ಮೀ. ದೂರದಲ್ಲಿರುವ ನಾಗೇನಹಳ್ಳಿಯಲ್ಲಿರೋದು ಮುಸ್ಲಿಮರ ದರ್ಗಾ. ದತ್ತಪೀಠ ಬಂದಮುಕ್ತವಾಗಬೇಕು. ಇಲ್ಲಿರುವ ಘೋರಿಗಳು ಸ್ಥಳಾಂತರವಾಗಬೇಕು. ಅಲ್ಲಿವರೆಗೂ ನಮ್ಮ ಹೋರಾಟ ವಿಶ್ರಮಿಸಲ್ಲ ಅನ್ನೋದು ಹೋರಾಟಗಾರರ ವಾದ ಹಾಗೂ ಸಂಕಲ್ಪವಾಗಿದೆ.

     

     

  • ಬಾಬಾಬುಡನ್‌ ಗಿರಿ ಉರುಸ್‍ನಲ್ಲಿ ನಾವು ಪಾಲ್ಗೊಳ್ಳಲ್ಲ – ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಸ್ಲಿಮರ ಕಿಡಿ

    ಬಾಬಾಬುಡನ್‌ ಗಿರಿ ಉರುಸ್‍ನಲ್ಲಿ ನಾವು ಪಾಲ್ಗೊಳ್ಳಲ್ಲ – ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಸ್ಲಿಮರ ಕಿಡಿ

    ಚಿಕ್ಕಮಗಳೂರು: ದತ್ತಪೀಠದ (Dattapeeta) ಆಡಳಿತಕ್ಕಾಗಿ ರಚಿಸಿದ ವ್ಯವಸ್ಥಾಪನಾ ಸಮಿತಿ ಅವೈಜ್ಞಾನಿಕವಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಮುಸ್ಲಿಮರು (Muslims) ಇದೇ ಮಾರ್ಚ್ 8,9 ಮತ್ತು 10 ರಂದು ನಡೆಯಲಿರುವ ಉರೂಸ್‍ನಲ್ಲಿ (Urus) ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

    ಜಿಲ್ಲಾಡಳಿತ ಉರುಸ್‌ ಮಾಡುವಂತಿಲ್ಲ. ನಮ್ಮ ಸಮುದಾಯದ ಪ್ರಕಾರ ಉರುಸ್ ನಡೆಯಬೇಕು. ಇಡೀ ಮುಸ್ಲಿಂ ಸಮುದಾಯ ಒಪ್ಪುವಂತೆ ಉರುಸ್‌ ಮಾಡ್ತೀರಾ ಎಂದು ಜಿಲ್ಲಾಡಳಿತಕ್ಕೆ ಬಾಬಾಬುಡನ್‌ ಗಿರಿ (Bababudangiri) ಅಧ್ಯಕ್ಷ ಸಿರಾಜ್‌ ಪ್ರಶ್ನಿಸಿದ್ದಾರೆ.

    ನಮ್ಮ ಧಾರ್ಮಿಕ ಗುರುಗಳ ನೇತೃತ್ವದಲ್ಲಿ ಉರುಸ್‌ ನಡೆಯಬೇಕು. ದತ್ತಜಯಂತಿಗೆ ನಾವು ಯಾವುದೇ ವಿರೋಧ ಮಾಡಿಲ್ಲ. ಹೀಗಾಗಿ ನಮ್ಮ ಕಾರ್ಯಕ್ರಮಕ್ಕೂ ಅವಕಾಶ ನೀಡಬೇಕು. ದರ್ಗಾ ಪಕ್ಕ ಮಸೀದಿ ಇದ್ದು ನಮ್ಮ ಕಾರ್ಯಕ್ರಮಕ್ಕೆ ಅದನ್ನು ತೆರೆಯಿರಿ. ನಮಾಜ್ ಮಾಡಿ ನಾವು ಪೂಜೆಗೆ ಹೋಗುತ್ತೇವೆ. ಫಾತಿಹಾ ಮಾಡಬೇಕು, ಗೋರಿಗಳ ಮೇಲೆ ಬಟ್ಟೆ ಹಾಕುವುದಕ್ಕೆ ಬಿಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ದತ್ತಪೀಠದ ಆಡಳಿತಕ್ಕೆ ಸರ್ಕಾರ ರಚಿಸಿದ ಸಮನ್ವಯ ಸಮಿತಿಯಲ್ಲಿರುವ ಎಂಟು ಜನರಲ್ಲಿ ಏಳು ಜನ ಹಿಂದೂಗಳು. ಮುಸ್ಲಿಂ ಸದಸ್ಯನಾಗಿರುವ ಬಾಷಾ ಮುಸ್ಲಿಮನೇ ಅಲ್ಲ. 2004ರಲ್ಲಿ ಆತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ. ಅವನನ್ನು ನಮ್ಮ ಸಮುದಾಯ ಮುಸ್ಲಿಂ ಎಂದು ಒಪ್ಪಿಲ್ಲ. ಸರ್ಕಾರ ಭಾವೈಕ್ಯತೆಗೆ ನ್ಯಾಯ ಒದಗಿಸಬೇಕು ಅಂದರೆ ಆ ಸಮಿತಿಯಲ್ಲಿ ನಾಲ್ಕು ಹಿಂದೂ, ನಾಲ್ಕು ಮುಸ್ಲಿಮರು ಇರಬೇಕು ಎಂದು ಆಗ್ರಹಿಸಿದ್ದಾರೆ.

    ಬಾಷಾ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾನೆ. ದತ್ತಪೀಠದಲ್ಲಿ ಮುಸ್ಲಿಮರ ಒಂದೊಂದು ಆಚರಣೆಗಳನ್ನು ಮೊಟಕುಗೊಳಿಸುವ ಕೆಲಸ ನಡೆಯುತ್ತಿದೆ. ಬುಡನ್ ಬುಡನ್ ದರ್ಗಾದಲ್ಲಿ ಮೌಲಾನಾಗೆ ನಮಾಜ್ ಮಾಡಲು, ಅಜಾನ್ ಮಾಡಲು ಅವಕಾಶ ನೀಡುತಿಲ್ಲ. ಸರ್ಕಾರ ದತ್ತಜಯಂತಿಯಂತೆ ನಮಗೂ ನಮ್ಮ ಧಾರ್ಮಿಕ ಪದ್ಧತಿಯಂತೆ ಉರುಸ್ ನಡೆಸಲು ಅವಕಾಶ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈದುಂಬಿ ಹರಿಯುತ್ತಿದೆ ಕಲ್ಲತ್ತಿಗರಿ ಫಾಲ್ಸ್

    ಮೈದುಂಬಿ ಹರಿಯುತ್ತಿದೆ ಕಲ್ಲತ್ತಿಗರಿ ಫಾಲ್ಸ್

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿದೆ.

    ಕೆಮ್ಮಣ್ಣುಗುಂಡಿ, ದತ್ತಪೀಠ, ಬಾಬಾಬುಡನ್ ಗಿರಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ದಶಕಗಳ ಬಳಿಕ ಕಲ್ಲತ್ತಿಗರಿ ಫಾಲ್ಸ್‍ನಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಪ್ರಸಿದ್ಧ ವೀರಭದ್ರಸ್ವಾಮಿ ದೇವಾಲಯದ ಮಟ್ಟದಲ್ಲಿ ಹರಿಯುತ್ತಿರುವ ನೀರು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ದೇವಾಲಯದ ಬಳಿ ಹೋಗಲು ಭಕ್ತರು ಹಾಗೂ ಪ್ರವಾಸಿಗರು ಹಿಂದೇಟು ಹಾಕ್ತಿದ್ದಾರೆ.

    ನೀರಿನ ಪ್ರಮಾಣ ಕಂಡ ಕಲ್ಲತ್ತಿಪುರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಆದ್ರೆ, ದಶಕಗಳ ಬಳಿಕ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತವನ್ನ ಕಾಣಲು ಸುತ್ತಮುತ್ತಲಿನ ನೂರಾರು ಜನ ಕಲ್ಲತ್ತಿಗರಿ ಫಾಲ್ಸ್ ಬಳಿ ಜಮಾಯಿಸುತ್ತಿದ್ದಾರೆ.

    ಎಂತಹ ಬರಗಾಲದಲ್ಲೂ ಈ ದೇವಾಲಯದ ಬಳಿ ನೀರು ನಿಂತಿರೋ ಉದಾಹರಣೆಯೇ ಇಲ್ಲ. ಮೂರ್ನಾಲ್ಕು ವರ್ಷ ಬರಗಾಲದಲ್ಲೂ ಇಲ್ಲಿ ನೀರು ಸದಾ ಹರಿಯುತ್ತಿರುತ್ತೆ. ಆದ್ರೆ, ಮೂರ್ನಾಲ್ಕು ವರ್ಷಗಳಿಂದ ತೀರಾ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರು ಮೂರೇ ದಿನಕ್ಕೆ ಹೀಗೆ ಜಲಪಾತದಂತೆ ಹರಿಯುತ್ತಿರೋದು ಕಂಡು ಸ್ಥಳೀಯರು ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಸಂತಸ ವ್ಯಕ್ತಪಡಿಸ್ತಿದ್ದಾರೆ.

    https://www.youtube.com/watch?v=_Nls9fuOjUs