Tag: ಬಾಬರ್‌ ಆಜಂ

  • Asia Cup 2025 | ಹೊಸ ನಾಯಕತ್ವದಲ್ಲಿ ಪಾಕ್‌ ತಂಡ ಪ್ರಕಟ – ರಿಜ್ವಾನ್‌, ಬಾಬರ್‌ ಹೊರದಬ್ಬಿದ ಪಿಸಿಬಿ

    Asia Cup 2025 | ಹೊಸ ನಾಯಕತ್ವದಲ್ಲಿ ಪಾಕ್‌ ತಂಡ ಪ್ರಕಟ – ರಿಜ್ವಾನ್‌, ಬಾಬರ್‌ ಹೊರದಬ್ಬಿದ ಪಿಸಿಬಿ

    ಇಸ್ಲಾಮಾಬಾದ್‌: ಬಹುನಿರೀಕ್ಷಿತ 2025ರ ಟಿ20 ಏಷ್ಯಾ ಕಪ್ (Asia Cup 2025 T20I) ಟೂರ್ನಿಗಾಗಿ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಅಚ್ಚರಿ ತಂಡವನ್ನು ಪ್ರಕಟಿಸಿದೆ.

    ಪಾಕ್‌ ತಂಡದ ಸ್ಟಾರ್‌ ಐಕಾನ್‌ಗಳಾದ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಹಾಗೂ ಬಾಬರ್‌ ಆಜಂ (Babar Azam) ಮತ್ತು ಸ್ಟಾರ್‌ ವೇಗಿ ನಸೀಮ್‌ ಶಾ ಅವರನ್ನ ಹೊರದಬ್ಬಿ ಹೊಸ ಮುಖದ ನಾಯಕತ್ವದಲ್ಲಿ ಹೊಸ ತಂಡವನ್ನು ಪ್ರಕಟಿಸಿದೆ. ಇದನ್ನ ಓದಿ: Asia Cup T20 | ಏಷ್ಯಾ ಕಪ್‌ ಟೂರ್ನಿಗೆ ದಿನಾಂಕ ಪ್ರಕಟ; ಭಾರತ – ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್!

    Ind vs Pak 2

    ಸಲ್ಮಾನ್ ಅಲಿ ಅಘಾಗೆ (Salman Ali Agha) ತಂಡದ ನಾಯಕತ್ವದ ಹೊಣೆ ನೀಡಲಾಗಿದೆ. ಉಳಿದಂತೆ ಸ್ಫೋಟಕ ಬ್ಯಾಟರ್‌ ಫಖರ್‌ ಜಮಾನ್‌, ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಖುಷ್ದಿಲ್ ಶಾಗೆ ಸ್ಥಾನ ನೀಡಲಾಗಿದೆ. ಜೊತೆ‌ಗೆ ಇದೇ ಟೂರ್ನಿಯಲ್ಲಿ ಮಿಂಚಿದ ಆಫ್‌ ಸ್ಪಿನ್ನರ್‌ ಅಬ್ರಾರ್ ಅಹ್ಮದ್‌‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದನ್ನ ಓದಿ: ಅನಗತ್ಯ ರನ್‌ ಕದಿಯಲು ಯತ್ನಿಸಿ ಯಡವಟ್ಟು – ಮೈದಾನದಲ್ಲೇ ಬ್ಯಾಟ್‌ ಎಸೆದು ಪಾಕ್‌ ಓಪನರ್ ಆಕ್ರೋಶ

    ಏಷ್ಯಾ ಕಪ್‌ಗೆ ಪಾಕ್‌ ತಂಡ
    ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್‌ ರೌಫ್‌, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್-ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ನವಾಜ್, ಮೊಹಮ್ಮದ್ ನವಾಜ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.

    ASIA CUP 1

    ಯಾವಾಗಿನಿಂದ ಏಷ್ಯಾಕಪ್‌ ಟೂರ್ನಿ
    2026ರ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್‌ ಟೂರ್ನಿ ಆಡಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್‌ 9 ರಿಂದ 28ರ ವರೆಗೆ ಯುಎಇನಲ್ಲಿ ಟೂರ್ನಿ ನಡೆಯಲಿದೆ. ಇದನ್ನ ಓದಿ: 1,650 ಕೋಟಿ ವೆಚ್ಚ, 60,000 ಆಸನ ಸಾಮರ್ಥ್ಯ – ಬೆಂಗ್ಳೂರಲ್ಲಿ ತಲೆ ಎತ್ತಲಿದೆ ಚಿನ್ನಸ್ವಾಮಿಗಿಂತಲೂ ಬೃಹತ್‌ ಸ್ಟೇಡಿಯಂ

    ಜುಲೈ 24 ರಂದು ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ (Asian Cricket Council) ಟೂರ್ನಿಯ ಸ್ಥಳವನ್ನ ಅಧಿಕೃತಗೊಳಿಸಲಾಯಿತು. ಈ ಬಾರಿ ಟೂರ್ನಿಯ ಹಕ್ಕು ಬಿಸಿಸಿಐನದ್ದೇ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಆಗಿದೆ. ಆದ್ರೆ ಭಾರತ ಮತ್ತು ಪಾಕ್‌ ನಡುವಿನ ಉದ್ವಿಗ್ನತೆಯಿಂದಾಗಿ 2027ರ ವರೆಗೂ ತಟಸ್ಥ ಸ್ಥಳಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಸೆ.9 ರಿಂದ ಸೆ.28ರ ವರೆಗೆ ಟೂರ್ನಿ ನಿಗದಿಯಾಗಿದ್ದು, ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಸೆ.14ರಂದು ನಡೆಯಲಿದೆ.

    ಈ ಬಾರಿ 8 ತಂಡಗಳು
    ಇಷ್ಟು ವರ್ಷ 6 ತಂಡಗಳ ನಡುವೆ ನಡೆಯುತ್ತಿದ್ದ ಹಣಾಹಣಿ ಈ ಬಾರಿ 8 ತಂಡಗಳ ನಡುವೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತ ಮತ್ತು ಪಾಕಿಸ್ತಾನ (Ind vs Pak) ತಂಡಗಳು ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳೂ ಇವೆ. ಲೀಗ್‌ ಹಂತ, ಸೂಪರ್‌ ಸಿಕ್ಸ್‌ ಹಾಗೂ ಪ್ರಶಸ್ತಿ ಸುತ್ತಿಗೆ ತಲುಪಿದ್ರೆ ಮೂರು ಬಾರಿ ಮುಖಾಮುಖಿ ಆಗುವ ಸಾಧ್ಯತೆಗಳು ಇವೆ.

    ಕಳೆದ ಬಾರಿ ಪಾಕ್‌ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾಕಪ್‌ ಟೂರ್ನಿ ನಡೆದಿತ್ತು. ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದನ್ನ ಓದಿ: ಖ್ಯಾತ ಉದ್ಯಮಿಯ ಮೊಮ್ಮಗಳ ಜೊತೆ ಅರ್ಜುನ್‌ ತೆಂಡ್ಕೂಲರ್‌ ಎಂಗೇಜ್‌

  • ಪಂದ್ಯಕ್ಕೂ ಮುನ್ನವೇ ಪಾಕ್‌ ಹೈಡ್ರಾಮಾ – ಏನೇ ಆದ್ರೂ ಭಾರತವನ್ನು ಸೋಲಿಸಬೇಕು ಎಂದ ಪಿಸಿಬಿ ಮುಖ್ಯಸ್ಥ

    ಪಂದ್ಯಕ್ಕೂ ಮುನ್ನವೇ ಪಾಕ್‌ ಹೈಡ್ರಾಮಾ – ಏನೇ ಆದ್ರೂ ಭಾರತವನ್ನು ಸೋಲಿಸಬೇಕು ಎಂದ ಪಿಸಿಬಿ ಮುಖ್ಯಸ್ಥ

    ದುಬೈ: ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಚಾಂಪಿಯನ್ಸ್ ಟ್ರೊಫಿಯ (Champions Trophy) ʻಎʼ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಭಾನುವಾರ (ಇಂದು) ಬದ್ಧ ವೈರಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಇತ್ತ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿ ಭಾರತ ಇದ್ದರೆ, ಮೊಹಮದ್ ರಿಜ್ವಾನ್ (Mohammad Rizwan) ನೇತೃತ್ವದ ಪಾಕಿಸ್ತಾನ, ಟೂರ್ನಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕಾದ ಒತ್ತಡದಲ್ಲಿದೆ. ಈ ನಡುವೆ ಪಾಕ್‌ ತಂಡದಲ್ಲಿ ಹೈಡ್ರಾಮಾ ನಡೆದಿದೆ.

    ಪಾಕಿಸ್ತಾನದ (Pakistan) ಸ್ಟಾರ್‌ ಕ್ರಿಕೆಟರ್‌ ಬಾಬರ್‌ ಆಜಂ (Babar Azam) ಅಭ್ಯಾಸಕ್ಕೆ ಗೈರಾಗುತ್ತಿರುವುದು ಕಂಡುಬಂದಿದೆ. ಶನಿವಾರ ಪಾಕ್‌ ತಂಡದ ಅಭ್ಯಾಸ ವೇಳೆ ಬಾಬರ್‌ ಕಾಣದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರದ ಪಂದ್ಯಕ್ಕೆ ಪರಿಗಣಿಸಲಾಗುವುದಿಲ್ಲ ಎಂಬ ವದಂತಿ ಹಬ್ಬಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬಾಬರ್‌ ಕಣಕ್ಕಿಳಿಯುತ್ತಾರೆ ಎನ್ನುವ ಬಗ್ಗೆ ಪಿಸಿಬಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರ ಹೊರತಾಗಿ ʻಏನೇ ಆಗಲಿ ಭಾರತದ ವಿರುದ್ಧ ಗೆಲ್ಲಲೇಬೇಕುʼ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಹೇಳಿದ್ದಾರೆ. ಇದನ್ನೂ ಓದಿ: `ಮಹಾ’ ಸಾರಿಗೆ ನಿಗಮಕ್ಕೆ `ಗ್ಯಾರಂಟಿ’ ಭಾರ; ಉಚಿತ ಯೋಜನೆಯಿಂದ ದಿನಕ್ಕೆ 3 ಕೋಟಿ ನಷ್ಟ: ಸಚಿವ ಪ್ರತಾಪ್

    ಬಾಬರ್ ಅಜಂ ಮೇಲೆ ಭಾರೀ ಒತ್ತಡ
    ಅತ್ತ ಪಾಕಿಸ್ತಾನ ಪ್ರಮುಖ ಬ್ಯಾಟರ್‌ಗಳ ಪೇಲವ ಪ್ರದರ್ಶನದಿಂದ ಚಿಂತಕ್ರಾಂತವಾಗಿದೆ. ತಂಡದ ಸ್ಟಾರ್ ಎನಿಸಿರುವ ಬಾಬರ್ ಅಜಂ, ಕಿವೀಸ್‌ ವಿರುದ್ಧ 90 ಎಸೆತಗಳಲ್ಲಿ 64 ರನ್ ಗಳಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಗಾಯದಿಂದಾಗಿ ಫಖರ್ ಜಮಾನ್ ಹೊರಗುಳಿದಿರುವುದು ಕೂಡ ಪಾಕ್‌ನ ಒತ್ತಡವನ್ನು ತೀವ್ರಗೊಳಿಸಿದೆ. ಇವರ ಬದಲಿಗೆ ಇಮಾಮ್ ಉಲ್ ಹಕ್ ತಂಡವನ್ನು ಸೇರ್ಪಡೆಗೊಂಡಿದ್ದು, ಅವರ ಸ್ಥಾನವನ್ನು ಎಷ್ಟರ ಮಟ್ಟಿಗೆ ತುಂಬಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

    ನಿವೃತ್ತಿ ಅಂಚಿನಲ್ಲಿರುವ ರನ್ ಮಷಿನ್ ವಿರಾಟ್ ಕೊಹ್ಲಿ, ಇತ್ತೀಚಿಗೆ ಉತ್ತಮ ಆಟವಾಡುವಲ್ಲಿ ಎಡವಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ತಮ್ಮ ಅಮೋಘ ಫಾರ್ಮ್ ಮರುಕಳಿಸುವ ಜಾಣ್ಮೆಯನ್ನು ಹೊಂದಿದ್ದಾರೆ. ಇದನ್ನೂ ಓದಿ: Publictv Explainer: ದತ್ತು ಸ್ವೀಕಾರದ ಬಗ್ಗೆ ನಿಮಗೆಷ್ಟು ಗೊತ್ತು? – ನಿಯಮ ಏನು, ಪ್ರಕ್ರಿಯೆ ಹೇಗೆ?

    ಬೌಲಿಂಗ್ ವಿಭಾಗದಲ್ಲಿ ಲಯ ಕಂಡುಕೊಂಡಿರುವ ವೇಗಿ ಮೊಹಮ್ಮದ್ ಶಮಿಗೆ ಹರ್ಷಿತ್ ರಾಣಾ ಉತ್ತಮ ಸಾಥ್ ನೀಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಶಮಿ, ಗಾಯಾಳು ಜಸ್‌ಪ್ರೀತ್ ಬುಮ್ರಾ ಅವರ ಅಲಭ್ಯತೆಯನ್ನು ಕಾಡದಂತೆ ನೋಡಿಕೊಂಡಿದ್ದರು. 2017ರ ಫೈನಲ್‌ನಲ್ಲಿ ಅರ್ಧ ಶತಕ ಗಳಿಸಿಯೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲಗೊಂಡ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈ ಬಾರಿ ನಿರಾಸೆಯನ್ನು ಸರಿದೂಗಿಸುವ ವಿಶ್ವಾಸದಲ್ಲಿದ್ದಾರೆ. ಸದ್ಯ ಬದ್ಧವೈರಿಗಳ ನಡುವಿನ ಕಾದಾಟಕ್ಕೆ ದುಬೈ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಕುತೂಹಲ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.  ಇದನ್ನೂ ಓದಿ: ಪಾಕ್ ವಿರುದ್ಧ ಭಾರತದ ಗೆಲುವುಗಾಗಿ ವಿಶೇಷ ಪೂಜೆ- ಬೆಂಗಳೂರು ಕ್ರೀಡಾಭಿಮಾನಿಗಳಿಂದ ಶುಭ ಹಾರೈಕೆ

  • ಪಾಕ್ ವಿರುದ್ಧ ಭಾರತದ ಗೆಲುವಿಗಾಗಿ ವಿಶೇಷ ಪೂಜೆ- ಬೆಂಗಳೂರು ಕ್ರೀಡಾಭಿಮಾನಿಗಳಿಂದ ಶುಭ ಹಾರೈಕೆ

    ಪಾಕ್ ವಿರುದ್ಧ ಭಾರತದ ಗೆಲುವಿಗಾಗಿ ವಿಶೇಷ ಪೂಜೆ- ಬೆಂಗಳೂರು ಕ್ರೀಡಾಭಿಮಾನಿಗಳಿಂದ ಶುಭ ಹಾರೈಕೆ

    ಬೆಂಗಳೂರು: ಭಾರತ, ಪಾಕಿಸ್ತಾನ (Ind vs Pak) ಮಾತ್ರವಲ್ಲ ಇಡೀ ವಿಶ್ವವೇ ಇಂದಿನ ಹೈ ವೋಲ್ಟೇಜ್ ಮ್ಯಾಚ್‌ಗಾಗಿ ಕಾಯ್ತಿದೆ. ಇಂದು ದುಬೈ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ಮ್ಯಾಚ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ (Cricket Fans) ಫೈನಲ್ ಮ್ಯಾಚ್ ರೀತಿ ಫೀಲ್ ಕೊಡ್ತಿದೆ. ಟ್ರೋಫಿಗಿಂತ ಇವತ್ತು ಬದ್ಧವೈರಿಗಳ ವಿರುದ್ಧ ಜಯಭೇರಿ ಬಾರಿಸೋದು ಮುಖ್ಯ ಅನ್ನೋದು ಕೋಟ್ಯಂತರ ಅಭಿಮಾನಿಗಳ ಆಶಯವಾಗಿದೆ. ಟೀಂ ಇಂಡಿಯಾ (Team India) ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

    ಇವತ್ತು ಮಧ್ಯಾಹ್ನ ಯಾವಾಗ ಆಗುತ್ತೋ, ಮ್ಯಾಚ್ ಯಾವಾಗ ಶುರುವಾಗುತ್ತೋ ಅಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದೇ ಒಂದು ಬಾಲ್ ಕೂಡ ಮಿಸ್ ಮಾಡ್ದೇ ನೋಡಬೇಕು, ಭಾರತ-ಪಾಕಿಸ್ತಾನದ ವಿರುದ್ಧ ಅಬ್ಬರಿಸಿ ಬೊಬ್ಬಿರೋ ಆಟವನ್ನ ನೋಡಬೇಕು ಅಂತಾ ಎಲ್ಲರೂ ಕಾಯ್ತಿದ್ದಾರೆ. ಇದನ್ನೂ ಓದಿ: ಪ್ರೀತಿಸುತ್ತಿದ್ದ ಹುಡುಗಿ ಕೈಕೊಟ್ಟಿದ್ದಕ್ಕೆ ಸಿಟ್ಟು; ಆಕೆಯ ಗಂಡನಿಗೆ ಇರಿದು ಹತ್ಯೆ ಮಾಡಿದ ಪಾಗಲ್‌ ಪ್ರೇಮಿ

    ಇಂಡಿಯಾ ಪಾಕ್ ಮ್ಯಾಚ್ ಅಂದ್ರೇನೇ ವರ್ಲ್ಡ್ ಕಫ್ ಫೈನಲ್ ಮ್ಯಾಚ್ ಅನ್ನೋ ಫೀಲ್ ಇರುತ್ತೆ. ಇವತ್ತು ಭಾರತ ಪಾಕಿಸ್ತಾನದ ವಿರುದ್ಧ ಗೆದ್ದು ಬೀಗಬೇಕು ಅನ್ನೋ ಬಯಕೆಯಿಂದ ಬ್ಯಾಟರಾಯನಪುರದ ಯುವಕರು ತಮ್ಮ ಗ್ರಾಮದೇವತೆಯ ಪೂಜೆ ಮಾಡಿದ್ದಾರೆ. ಮ್ಯಾಚ್‌ನಲ್ಲಿ ಭಾರತದ ಆಟಗಾರರು ಇನ್ನಷ್ಟು ಸ್ಟ್ರಾಂಗ್ ಆಗಿ ಆಡಲಿ, 2017ರ ಸೇಡನ್ನ ತೀರಿಸಿಕೊಳ್ಳಲಿ ಅನ್ನೋ ಆಸೆಯಿಂದ ಗ್ರಾಮದೇವತೆ ದೊಡ್ಡಮ್ಮ ಮಹೇಶ್ವರಮ್ಮ ದೇವಿಗೆ ಭಾರತ ಕ್ರಿಕೆಟ್ ತಂಡದ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಭಾರತ ಗೆದ್ದೇ ಗೆಲ್ಲುತ್ತೆ ಅಂತಾ ಶುಭ ಹಾರೈಸಿದ್ದಾರೆ.

    ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗಾಗಿ ಇಂದು ಸಹ ನಗರದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಗಾಳಿ ಆಂಜನೇಯ ದೇವಸ್ಥಾನ, ಅಣ್ಣಮ್ಮ ದೇವಸ್ಥಾನ ಸೇರಿ ವಿವಿಧ ಮೈದಾನಗಳಲ್ಲಿ ಭಾರತ ತಂಡ, ಆಟಗಾರರಿಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಆಘಾತ – ಪ್ರಾಕ್ಟೀಸ್ ವೇಳೆ ಕೊಹ್ಲಿಗೆ ಮೊಣಕಾಲು ಗಾಯ

    ಒಟ್ಟಾರೆ ಇದು ಬರೀ ಈ ಯುವಕರ ಆಸೆಯಲ್ಲ, ಇಡೀ ಭಾರತೀಯರ ಆಸೆ ಕೂಡ ಆಗಿದೆ. ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲಿ, ಇಂದು ಪಾಕಿಸ್ತಾನವನ್ನ ಬಗ್ಗು ಬಡಿಯಲಿ.. ನಮ್ಮ ಕಡೆಯಿಂದಲೂ ಟೀಮ್ ಇಂಡಿಯಾಗೆ ಆಲ್ ದಿ ಬೆಸ್ಟ್. ಇದನ್ನೂ ಓದಿ: ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ – ಸೋತರೆ ಬಹುತೇಕ ಮನೆಗೆ 

  • ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ದುಬೈ: ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ (ICC T20i Cricketer Of The Year) ನಾಲ್ವರು ಆಟಗಾರರ ಹೆಸರು ನಾಮನಿರ್ದೇಶನಗೊಂಡಿದೆ. ಈ ನಾಲ್ವರು ಆಟಗಾರರ ಪೈಕಿ ಭಾರತದ ಚಾಂಪಿಯನ್‌ ಬೌಲರ್‌ ಅರ್ಷ್‌ದೀಪ್‌ ಸಿಂಗ್‌ (Arshdeep Singh), ಆಸೀಸ್‌ ದೈತ್ಯ ಬ್ಯಾಟರ್‌ ಟ್ರಾವಿಸ್‌ಹೆಡ್‌, ಜಿಂಬಾಬ್ವೆ ಆಟಗಾರ ಸಿಖಂದರ್‌ ರಾಜಾ (Sikandar Raza) ಹಾಗೂ ಪಾಕ್‌ ತಂಡದ ಮಾಜಿ ನಾಯಕ ಬಾಬರ್‌ ಆಜಂ ಸ್ಥಾನ ಪಡೆದುಕೊಂಡಿದ್ದಾರೆ.

    ಪ್ರಸಕ್ತ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ನಾಲ್ವರು ಆಟಗಾರರ ನಾಮನಿರ್ದೇಶನ ಮಾಡಲಾಗಿದೆ. ಈ ನಾಲ್ವರು ಆಟಗಾರರ ಪೈಕಿ ಯಾರಿಗೆ 2024ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಸಿಗಬಹುದು ಅನ್ನೋದನ್ನ ಕಾದುನೋಡಬೇಕಿದೆ.

    ಯಾರು ಆ ನಾಲ್ವರು ಆಟಗಾರರು?

    1. ಟ್ರಾವಿಸ್‌ ಹೆಡ್‌
    ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಬ್ಯಾಟರ್ ಟ್ರಾವಿಸ್‌ ಹೆಡ್ 2024ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದಾರೆ. 2024ರಲ್ಲಿ ಆಸ್ಟ್ರೇಲಿಯಾ ಪರ ಒಟ್ಟು 15 ಟಿ20 ಪಂದ್ಯಗಳನ್ನಾಡಿ 178.47ರ ಸ್ಟ್ರೈಕ್‌ರೇಟ್‌ನಲ್ಲಿ 539 ರನ್ ಸಿಡಿಸಿ ಮಿಂಚಿದ್ದಾರೆ.

    2. ಸಿಖಂದರ್ ರಾಜಾ
    ಜಿಂಬಾಬ್ವೆ ಮೂಲದ ಸ್ಟಾರ್ ಆಲ್ರೌಂಡರ್ ಸಿಖಂದರ್ ರಾಜಾ ಅವರ ಪಾಲಿಗೆ 2024ರ ವರ್ಷ ಅವಿಸ್ಮರಣೀಯವಾಗಿದೆ. ಈ ವರ್ಷ ರಾಜಾ ಜಿಂಬಾಬ್ವೆ ಪರ 24 ಟಿ20 ಪಂದ್ಯಗಳನ್ನು ಆಡಿ 573 ರನ್ ಸಿಡಿಸಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ ರಾಜಾ 24 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

    3. ಬಾಬರ್ ಆಜಂ
    ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಾಬರ್ ಅಜಂ ಕೂಡಾ 2024ರಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. 2024ರಲ್ಲಿ ಬಾಬರ್ ಅಜಂ ಪಾಕಿಸ್ತಾನ ಪರ 24 ಟಿ20 ಪಂದ್ಯಗಳನ್ನಾಡಿ 738 ರನ್ ಸಿಡಿಸಿದ್ದಾರೆ.

    4. ಅರ್ಷ್‌ದೀಪ್‌ ಸಿಂಗ್
    ಟೀಂ ಇಂಡಿಯಾ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್, ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಯ ರೇಸ್‌ನಲ್ಲಿರುವ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅರ್ಶದೀಪ್ ಸಿಂಗ್ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಅರ್ಷ್‌ದೀಪ್‌ ಭಾರತ ಪರ 18 ಟಿ20 ಪಂದ್ಯಗಳನ್ನಾಡಿ 36 ವಿಕೆಟ್ ಕಬಳಿಸಿದ್ದಾರೆ. 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಅರ್ಷ್‌ದೀಪ್‌ ಗರಿಷ್ಠ 17 ವಿಕೆಟ್‌ ಪಡೆದ ದಾಖಲೆ ಬರೆದಿದ್ದರು.

  • ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ಕ್ಯಾನ್ಬೆರಾ: ಇಲ್ಲಿನ ಪರ್ತ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ (Pakistan) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಜೊತೆಗೆ ಕಳೆದ 22 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಪಾಕ್‌, ಆಸ್ಟ್ರೇಲಿಯಾದಲ್ಲಿ ಸರಣಿಗೆದ್ದ ಸಾಧನೆ ಮಾಡಿದೆ. ಇದು ನೂತನ ಕ್ಯಾಪ್ಟನ್‌ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅವರ ನಾಯಕತ್ವದಲ್ಲಿ ಗೆದ್ದ ಮೊದಲ ಸರಣಿಯೂ ಆಗಿದೆ. ಕೊನೆಯದ್ದಾಗಿ 2002ರಲ್ಲಿ ಪಾಕ್‌ ಆಸೀಸ್‌ ನೆಲದಲ್ಲಿ ಸರಣಿ ಗೆದ್ದಿತ್ತು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    141 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಪಾಕ್‌ ಬ್ಯಾಟರ್‌ಗಳು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಪಾಕ್ ‌84 ರನ್‌ಗಳ ಜೊತೆಯಾಟ ನೀಡಿತ್ತು. ಆರಂಭಿಕರ ವಿಕೆಟ್‌ ಪತನವಾದ ಬಳಿಕ ಕ್ರೀಸ್‌ಗಿಳಿದ ನಾಯಕ ಮೊಹಮ್ಮದ್‌ ರಿಜ್ವಾನ್‌ ಮತ್ತು ಬಾಬರ್‌ ಆಜಂ ಜೋಡಿ ವಿಕೆಟ್‌ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಪಾಕ್‌ ಪರ ಸೈಮ್‌ ಅಯೂಬ್‌ 42 ರನ್‌, ಅಬ್ದುಲ್ಲಾ ಶಫಿಕ್‌ 37 ರನ್‌ ಗಳಿಸಿ ಔಟಾದರೆ, ಮೊಹಮ್ಮದ್‌ ರಿಜ್ವಾನ್‌ 30 ರನ್‌ ಹಾಗೂ ಬಾಬರ್‌ ಆಜಂ (Babar Azam) 28 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಇನ್ನೂ ಆಸ್ಟ್ರೇಲಿಯಾ ಪಾರ ಲ್ಯಾನ್ಸ್‌ ಮೊರಿಸ್‌ 6 ಓವರ್‌ಗಳಲ್ಲಿ 24 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಆಸೀಸ್‌ ತಂಡವು 31.5 ಓವರ್‌ಗಳಲ್ಲಿ ಕೇವಲ 140 ರನ್​ಗಳಿಗೆ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ನೆಲಕಚ್ಚಿದರು. ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ 41 ಎಸೆತಗಳಲ್ಲಿ 30 ರನ್ ಬಾರಿಸಿದರು. ಅತ್ತ ಸಂಘಟಿತ ದಾಳಿಯೊಂದಿಗೆ ಆಸ್ಟ್ರೇಲಿಯನ್ನರ ಮೇಲೆ ಹಿಡಿತ ಸಾಧಿಸಿದ ಪಾಕ್ ಬೌಲರ್​ಗಳು ಅಂತಿಮವಾಗಿ ಆತಿಥೇಯರನ್ನು 31.5 ಓವರ್​ಗಳಲ್ಲಿ 140 ರನ್​ಗಳಿಗೆ ಆಲೌಟ್ ಮಾಡಿದರು.

    ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ 32 ರನ್ ನೀಡಿ 3 ವಿಕೆಟ್ ಪಡೆದರೆ, ನಸೀಮ್ ಶಾ 54 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಹ್ಯಾರಿಸ್ ರೌಫ್ 24 ರನ್​ಗಳಿಗೆ 2 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಸರಣಿಯಲ್ಲಿ ಒಟ್ಟು 10 ವಿಕೆಟ್‌ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಹಾಗೂ ಸರಣಿಶೇಷ್ಠ ಪ್ರಶಸ್ತಿಗೂ ಪಾತ್ರರಾದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ  

  • ಓವರ್‌ ಕಾನ್ಫಿಡೆನ್ಸ್‌ನಿಂದ‌ ಪಾಕ್‌ಗೆ ತವರಿನಲ್ಲೇ ಹೀನಾಯ ಸೋಲು – ಬಾಂಗ್ಲಾಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು!

    ಓವರ್‌ ಕಾನ್ಫಿಡೆನ್ಸ್‌ನಿಂದ‌ ಪಾಕ್‌ಗೆ ತವರಿನಲ್ಲೇ ಹೀನಾಯ ಸೋಲು – ಬಾಂಗ್ಲಾಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು!

    ರಾವಲ್ಪಿಂಡಿ: ಪಾಕ್‌ (Pakistan) ತಂಡದ ಓವರ್‌ ಕಾನ್ಫಿಡೆನ್ಸ್‌ನಿಂದಾಗಿ ತವರಿನಲ್ಲೇ ನಡೆದ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಅಲ್ಲದೇ ಪಾಕ್‌ ನೆಲದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು (Test Series) 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ರಾವಲ್ಪಿಂಡಿಯಲ್ಲಿ (Rawalpindi) ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 448 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದರಿಂದ ಪಾಕ್‌ ತಂಡದ ಆಟಗಾರರು ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 171 ರನ್‌ ಗಳಿಸಿ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಬ್ಯಾಟ್‌ ಬಿಸಾಡಿ ಆಕ್ರೋಶ ಹೊರಹಾಕಿದ್ದರು. ಪಾಕ್‌ ತಂಡ ಮಾಡಿದ ಯಡವಟ್ಟಿನಿಂದಲೇ ಇದೀಗ ಹೀನಾಯ ಸೋಲು ಕಂಡಿದೆ.

    ಪಾಕ್‌ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಪಾಕ್‌ ಪರ ಸೌದ್‌ ಶಕೀಲ್‌ 261 ಎಸೆತಗಳಲ್ಲಿ 141 ರನ್‌ ಗಳಿದಿದ್ರೆ, ಮೊಹಮ್ಮದ್‌ ರಿಜ್ವಾನ್‌ 239 ಎಸೆತಗಳಲ್ಲಿ 171 ರನ್‌ (11 ಬೌಂಡರಿ, 3 ಸಿಕ್ಸರ್)‌, ಸೈಮ್ ಅಯೂಬ್ 56 ರನ್‌ ಗಳಿಸಿದ್ದರು. ಇದರಿಂದ ತಂಡದ ಮೊತ್ತ ಪಾಕ್‌ 113 ಓವರ್‌ಗಳಲ್ಲಿ 448 ರನ್‌ ಗಳಿಸಿತ್ತು. ಆದ್ರೆ ತನ್ನ ಸರದಿ ಆರಂಭಿಸಿದ್ದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 167.3 ಓವರ್‌ಗಳಲ್ಲಿ 565 ರನ್‌ ಪೇರಿಸಿತ್ತು. ಬ್ಯಾಟಿಂಗ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಅನುಭವಿ ಆಟಗಾರ ಮುಶ್ಫಿಕರ್‌ ರಹೀಂ 191 ರನ್‌ ಬಾರಿಸಿದ್ದರು. ಅವರ ಈ ಭರ್ಜರಿ ಆಟ ಬಾಂಗ್ಲಾ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ಉಳಿದಂತೆ ಮೆಹಿದಿ ಹಸನ್ 77, ಶಾದ್ಮನ್ ಇಸ್ಲಾಂ 93 ರನ್‌ಗಳ ಕೊಡುಗೆ ನೀಡಿದ್ದರು.

    ಇನ್ನೂ 4ನೇ ದಿನ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ 146 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್‌ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ರಿಜ್ವಾನ್‌ 51 ರನ್‌, ಅದ್ಭುಲ್‌ ಶಫಿಕ್‌ 37 ರನ್‌, ಬಾಬರ್‌ ಆಜಂ (Babar Azam) 22 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದ್ದರು. ಇದರಿಂದ ಗೆಲುವಿಗೆ ಕೇವಲ 30 ರನ್‌ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್​ ನಷ್ಟವಿಲ್ಲದೇ ಗೆಲುವು ಸಾಧಿಸಿತು. ಅತಿಯಾದ ಆತ್ಮವಿಶ್ವಾಸವೇ ಪಾಕ್​ ತಂಡದ ಸೋಲಿಗೆ ಕಾರಣವಾಯಿತು.

    ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿದ ಮೆಹಿದಿ ಹಸನ್ ಮಿರಾಜ್ 21 ರನ್​ಗೆ 4 ವಿಕೆಟ್​ ಕಿತ್ತರೆ, ಆಲ್‌ರೌಂಡರ್‌ ಶಕಿಬ್​ ಅಲ್​ ಹಸನ್ 3 ವಿಕೆಟ್,ಶೊರಿಫುಲ್‌, ಹಸನ್‌ ಮೊಹಮ್ಮದ್‌ ಹಾಗೂ ನಹಿದ್‌ ರಾಣಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಜಾಕಿರ್‌ ಹಸನ್‌ 15 ರನ್‌, ಶಾದ್‌ಮನ್‌ ಇಸ್ಲಾಮ್‌ 9 ರನ್‌ ಗಳಿಸಿದ್ರೆ, ವೈಡ್‌ ಮತ್ತು ಲೆಗ್‌ಬೈಸ್‌ನಿಂದ ಹೆಚ್ಚುವರಿ 6 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಐತಿಹಾಸಿಕ ಗೆಲುವು:
    ಬಾಂಗ್ಲಾದೇಶ, ಪಾಕಿಸ್ತಾನ ನೆಲದಲ್ಲಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಇದುವರೆಗೆ 13 ಟೆಸ್ಟ್​ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ 14ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸಾಧನೆ ಮಾಡಿದೆ.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌
    ಪಾಕಿಸ್ತಾನ – 448/6d, ಬಾಂಗ್ಲಾದೇಶ – 565/10

    2ನೇ ಇನ್ನಿಂಗ್ಸ್‌
    ಪಾಕಿಸ್ತಾನ – 146/10, ಬಾಂಗ್ಲಾದೇಶ – 30/0

  • 17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    – ನೀವೇನ್‌ ಕ್ರಿಕೆಟ್‌ ಆಡೋಕೆ ಹೋದ್ರಾ, ಮಜಾ ಮಾಡೋಕೆ ಹೋದ್ರಾ ಅಂತ ಟೀಕೆ

    ವಾಷಿಂಗ್ಟನ್‌: 2024ರ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವ ಪಾಕಿಸ್ತಾನ ಕ್ರಿಕೆಟ್‌ ಆಟಗಾರರ ವಿರುದ್ಧ ತಮ್ಮದೇ ದೇಶದ ಅಭಿಮಾನಿಗಳು (Pak Cricket Fans) ಹಾಗೂ ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    ಹೌದು. ಸದ್ಯ ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕ್‌ ತಂಡ ಹೊರಬಿದ್ದರೂ ಆಟಗಾರರು ಮರಳಿ ತವರಿಗೆ ಹಿಂದಿರುಗದೇ ಅಮೆರಿಕದಲ್ಲಿಯೇ ಉಳಿದಿದ್ದಾರೆ. ಐಷಾರಾಮಿ ರೂಮ್‌ಗಳನ್ನು (Luxury Rooms) ಬುಕ್ಕಿಂಗ್‌ ಮಾಡಿಕೊಂಡಿದ್ದು, ಯುಎಸ್‌ನಲ್ಲಿ ಹಾಲಿಡೆ ಎಂಜಾಯ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಪಾಕ್‌ ಆಟಗಾರರ ವಿರುದ್ಧ ಹಿರಿಯ ಕ್ರಿಕೆಟಿಗರ ಆಕ್ರೋಶ ಮುಂದುವರಿದಿದೆ.

    ಈ ಕುರಿತು ಮಾತನಾಡಿರುವ ಪಾಕ್‌ ಕ್ರಿಕೆಟ್‌ ಮಂಡಳಿ ಸದಸ್ಯ (PCB Member) ಅತೀಕ್‌, ಯುಎಸ್‌ನಲ್ಲಿ ನೀವೇನು ನಾಟಕ ಆಡ್ತಿದ್ದೀರಾ, ಹಿಂದೆಲ್ಲ ನಮ್ಮ ತಂಡಕ್ಕೆ ಒಬ್ಬ ಕೋಚ್‌ ಮತ್ತು ಓರ್ವ ಮ್ಯಾನೇಜರ್‌ ಮಾತ್ರ ಇರುತ್ತಿದ್ದರು. ಈಗ ನಿಮಗೆ 17 ಆಟಗಾರರಿಗೆ 17 ಮ್ಯಾನೇಜರ್‌ಗಳಿದ್ದಾರೆ. ನೀವು 60 ಕೊಠಡಿಗಳನ್ನ ಬುಕ್‌ ಮಾಡಿದ್ದೀರಿ. ರಜೆಯ ಮೇಲೆ ಹೋಗಿರುವಂತೆ ಹೆಂಡತಿ ಮಕ್ಕಳೊಂದಿಗೆ ಸುತ್ತಾಡುತ್ತಿದ್ದೀರಿ. ಅಮೆರಿಕಕ್ಕೆ ಹೋಗಿದ್ದು ಏತಕ್ಕೆ? ಕ್ರಿಕೆಟ್‌ ಆಡಲು ಹೋಗಿದ್ದೀರೋ ಅಥವಾ ರಜೆಯ ಮಜಾ ಮಾಡಲು ಹೋಗಿದ್ದೀರೋ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಶಿಸ್ತು ಎಂದರೆ ಯಾರಿಗೂ ತಿಳಿಯದೇ ಇರುವಂತಹ ಸಂಸ್ಕೃತಿಯನ್ನ ಹುಟ್ಟುಹಾಕುತ್ತಿದ್ದಾರೆ. ವಿಶ್ವಕಪ್‌ ಆಡಲು ಹೋದವರ ಗಮನ ಎಲ್ಲಿರಬೇಕು? ಕ್ರಿಕೆಟ್‌ ಮಂಡಳಿ ನಿಮಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ, ಹೀಗಿರುವಾಗ ನೀವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ

    ಪ್ರಸಕ್ತ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗ್ರೂಪ್‌-ಎ ನಲ್ಲಿದ್ದ ಪಾಕ್‌ ತಂಡ 4 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು. ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

  • ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    – ತಮ್ಮದೇ ದೇಶದ ಅಭಿಮಾನಿಗಳಿಂದ ಪಾಕ್‌ ತಂಡದ ವಿರುದ್ಧ ವ್ಯಾಪಕ ಟೀಕೆ

    ಫ್ಲೋರಿಡಾ: 2024ರ ಟಿ20 ವಿಶ್ವಕಪ್‌ನಿಂದ (T20 World Cup) ಪಾಕಿಸ್ತಾನ ತಂಡ ಹೊರಬಿದ್ದ ಬಳಿಕ ತಮ್ಮದೇ ದೇಶದ ಕ್ರಿಕೆಟ್‌ ಅಭಿಮಾನಿಗಳು ಹಾಗೂ ಹಿರಿಯ ಕ್ರಿಕೆಟಿಗರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾಬರ್‌ ಆಜಂ (Babar Azam), ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡದಿಂದಲೇ ಕಿತ್ತೊಗೆಯುವಂತೆ ಆಗ್ರಹಗಳು ಕೇಳಿಬರುತ್ತಿವೆ.

    ಪಾಕ್‌ನ ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕ್‌ ಕ್ರಿಕೆಟಿಗ, ಅಹ್ಮದ್ ಶೆಹಜಾದ್ (Ahmed Shehzad) ಹಿರಿಯ ಆಟಗಾರರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಾಕ್‌ ತಂಡದಲ್ಲಿರುವ ನಾಯಕ ಬಾಬರ್‌ ಆಜಂ, ಮೊಹಮ್ಮದ್‌ ರಿಜ್ವಾನ್‌, ಶಾಹೀನ್‌ ಶಾ ಅಫ್ರಿದಿ ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ತಂಡದಿಂದ ಕಿತ್ತೊಗೆಯಬೇಕು ಎಂದು ಪಾಕ್‌ ಕ್ರಿಕೆಟ್‌ ಮಂಡಳಿಗೆ ಒತ್ತಾಯಿಸಿದ್ದಾರೆ.

    ಬಾಬರ್‌ ಕ್ರಿಕೆಟ್‌ ತಂಡದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ, ತನ್ನ ಸ್ನೇಹಿತರನ್ನ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.‌ ಬಾಬರ್‌, ರಿಜ್ವಾನ್‌, ಅಫ್ರಿದಿ, ಫಖರ್‌ ಜಮಾನ್‌, ಹ್ಯಾರಿಸ್‌ ರೌಫ್‌ ಪಾಕಿಸ್ತಾನಕ್ಕಾಗಿ ಕಳೆದ 4-5 ವರ್ಷಗಳಿಂದ ನಿಯಮಿತವಾಗಿ ಆಡುತ್ತಿದ್ದಾರೆ. ಅವರ ಪ್ರದರ್ಶನ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿದೆ. ಆದರೂ ತಂಡದಲ್ಲಿ ಗುಂಪುಗಾರಿಕೆಯಿಂದ ಒಬ್ಬರನ್ನೊಬ್ಬರು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ತಪ್ಪುಗಳಿಂದ ನಾವು ಕಲಿಯುತ್ತಿದ್ದೇವೆ ಅಂತ ಪ್ರತಿಬಾರಿಯೂ ಹೇಳ್ತಿದ್ದಾರೆ. ಕೆನಡಾ ವಿರುದ್ಧ ಸಹ ಕಡಿಮೆ ಎನ್‌ರೇಟ್‌ನಿಂದ ಗೆದ್ದು ನೀವು ಏನನ್ನು ಕಲಿಯುತ್ತಿದ್ದೀರಿ? ನಿಮ್ಮ ನಾಯಕತ್ವದಿಂದ ಪಾಕಿಸ್ತಾನದ ಕ್ರಿಕೆಟ್‌ ಹಾಳಾಗಿದೆ. ಬಾಬರ್‌ ಕೇವಲ ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳಾಗಿದ್ದಾರೆ. ಬಾಬರ್‌ ವಿರುದ್ಧ ಪಿಸಿಬಿ (PCB) ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶೆಹಜಾದ್‌ ಒತ್ತಾಯಿಸಿದ್ದಾರೆ.

    ವಿಶ್ವಕಪ್‌ ನಿಂದ ಪಾಕ್‌ ಔಟ್‌:
    ಅಮೆರಿಕ (USA) ಮತ್ತು ಐರ್ಲೆಂಡ್‌ ನಡುವಿನ ಪಂದ್ಯ ಶುಕ್ರವಾರ ಮಳೆಯಿಂದ ರದ್ದಾದರಿಂದ ಪಾಕ್‌ ತಂಡ‌ 2024ರ ಆವೃತ್ತಿಗೆ ಗುಡ್‌ಬೈ ಹೇಳಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಿ, ಬಳಿಕ ತವರಿಗೆ ಮರಳಲಿದೆ. ಇನ್ನೂ ಚೊಚ್ಚಲ ಆವೃತ್ತಿಯಲ್ಲೇ ಸೂಪರ್‌ -8ರ ಘಟಕ್ಕೆ ಪ್ರವೇಶಿಸಿರುವ ಅಮೆರಿಕ ತಂಡ 2026ರ ವಿಶ್ವಕಪ್‌ ಟೂರ್ನಿಗೂ ಅರ್ಹತೆ ಗಿಟ್ಟಿಸಿಕೊಂಡಿದೆ.

  • T20 World Cup: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ – 1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.!

    T20 World Cup: ಇಂದು ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ – 1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.!

    – ಆರ್ಮಿಯಿಂದ ತರಬೇತಿ ಪಡೆದ ಪಾಕ್‌ಗೆ ಪುಟಿದೇಳುವ ತವಕ

    ನ್ಯೂಯಾರ್ಕ್​: ಇಡೀ ಕ್ರಿಕೆಟ್‌ ಜಗತ್ತೇ ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಣ ರೋಚಕ ಟಿ20 ವಿಶ್ವಕಪ್ (T20 World Cup) ಪಂದ್ಯಕ್ಕೆ ಕ್ಷಣಗಣನೆ ಬಾಕಿಯಿದೆ.

    ಭಾರತೀಯ ಕಾಲಮಾನದ ಪ್ರಕಾರ ಇಂದು (ಭಾನುವಾರ) ರಾತ್ರಿ 8ಕ್ಕೆ ಉಭಯ ತಂಡಗಳ ಮಧ್ಯೆ ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ (New york Stadium) ಹಣಾಹಣಿ ನಡೆಯಲಿದ್ದು, ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್‌ ಸಮರದಲ್ಲಿ ಈ ತೀವ್ರತೆ ಕಾಣಲು ಸಾಧ್ಯವೇ ಇಲ್ಲ. ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ.

    2024ರ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ತಂಡದ ವಿರುದ್ಧ ವಿರೋಚಿತ ಸೋಲಿಗೆ ತುತ್ತಾಗಿರುವ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧ ಪುಟಿದೇಳುವ ತವಕದಲ್ಲಿದೆ. ಇನ್ನೂ ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಪಾಕ್ ವಿರುದ್ಧ ಗೆದ್ದು ಸೂಪರ್-8 ಹಂತಕ್ಕೆ ಲಗ್ಗೆಯಿಡುವ ಉತ್ಸಾಹದಲ್ಲಿದೆ. ಆದ್ರೆ ಪಾಕ್‌ ಸೂಪರ್-8 ಪ್ರವೇಶಿಸಲು ಈ ಗೆಲುವು ನಿರ್ಣಾಯಕವೂ ಆಗಿದ್ದು, ಪಾಕ್ ತಂಡಕ್ಕೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

    ಮಳೆ ಭೀತಿ:
    ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ನ್ಯೂಯಾರ್ಕ್​ನಲ್ಲಿ (New york Rains) ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ.67 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. 6 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದ ಪಂದ್ಯ ರದ್ದಾರೆ ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ.

    ಸೋಲಿನ ಮುಖವನ್ನೇ ನೋಡದ ಭಾರತ:
    2007ರಿಂದ ಈವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕ್ ಎದುರು ಸೋಲನ್ನೇ ಕಂಡಿಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ಮಾತ್ರ ಸೋಲು ಕಂಡಿದೆ. 2007ರಿಂದ ಈವರೆಗೆ ನಡೆದ 12 ಟಿ20ಐ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಪಾಕಿಸ್ತಾನ ಗೆದ್ದಿದ್ದರೆ, ಟೀಂ ಇಂಡಿಯಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

    1 ಸೆಕೆಂಡ್‌ ಜಾಹೀರಾತಿಗೆ 4 ಲಕ್ಷ ರೂ.:
    ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಇಂಡೋ ಪಾಕ್‌ ಕದನದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಬೆಲೆಯೂ ಭರ್ಜರಿಯಾಗಿ ಏರಿಕೆಯಾಗಿದೆ. ಪ್ರತಿ ಸೆಕೆಂಡ್‌ಗೆ 4 ಲಕ್ಷ ರೂ. ನಿಗದಿಪಡಿಸಲಾಗಿದೆ. ವಿಶ್ವಕಪ್‌ನ ಇತರೇ ಪಂದ್ಯಗಳಲ್ಲಿ ಪ್ರತಿ 10 ಸೆಕೆಂಡಿನ ಜಾಹೀರಾತಿಗೆ 6 ಲಕ್ಷ ರೂ. ಇದ್ದರೆ, ಭಾರತ ಮತ್ತು ಪಾಕ್‌ ಪಂದ್ಯದ ವೇಳೆ 10 ಸೆಕೆಂಡ್‌ ಜಾಹೀರಾತಿನ ಮೌಲ್ಯ 40 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಬಿಗಿ ಭದ್ರತೆ:
    ಐಸಿಸ್‌ ಉಗ್ರರಿಂದ ಪಂದ್ಯದ ಮೇಲೆ ದಾಳಿ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಹಾಗೂ ಉಭಯ ತಂಡಗಳ ಆಟಗಾರರಿಗೆ ನ್ಯೂಯಾರ್ಕ್‌ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಅಮೆರಿಕೆ ಅಧ್ಯಕ್ಷರ ಕಾರ್ಯಕ್ರಮಗಳಿಗೆ ನೀಡುವ ಮಾದರಿಯಲ್ಲೇ ಎಫ್‌ಬಿಐ ಸೇರಿ ವಿವಿಧ ಭದ್ರತಾ ಏಜೆನ್ಸಿಗಳು ತಮ್ಮ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಿವೆ ಎಂದು ತಿಳಿದುಬಂದಿದೆ.

  • ಪಾಕ್‌ ವಿರುದ್ಧ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಆಘಾತ – ಕಣಕ್ಕಿಳಿಯುತ್ತಾರಾ ನಾಯಕ ರೋಹಿತ್‌?

    ಪಾಕ್‌ ವಿರುದ್ಧ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಆಘಾತ – ಕಣಕ್ಕಿಳಿಯುತ್ತಾರಾ ನಾಯಕ ರೋಹಿತ್‌?

    ನ್ಯೂಯಾರ್ಕ್‌: ಪಾಕಿಸ್ತಾನ (Pakistan) ವಿರುದ್ಧ ಸೂಪರ್‌ ಸಂಡೇ (ಜೂ.8) ನಡೆಯಲಿರುವ ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತವಾಗಿದೆ. ಐರ್ಲೆಂಡ್‌ ವಿರುದ್ಧ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ (Rohit Sharma) ಅವರು ಕೈಗೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದ ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುತ್ತಾರಾ ಇಲ್ಲವೋ ಅನ್ನೋ ಪ್ರಶ್ನೆ ಮೂಡಿದೆ.

    ಹೌದು.. ಪ್ರಸಕ್ತ ವರ್ಷ ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಭಾರತ-ಪಾಕಿಸ್ತಾನ (Ind vs Pak) ಪಂದ್ಯ ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:00 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಇದನ್ನೂ ಓದಿ: T20 World Cup: ವಿಶ್ವಚಾಂಪಿಯನ್​ ತಂಡದ ಮೇಲೆ ಹಣದ ಮಳೆ ಸುರಿಸಲಿದೆ ICC

    2024ರ ಟಿ20 ವಿಶ್ಚಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ತಂಡದ ವಿರುದ್ಧ ವಿರೋಚಿತ ಸೋಲಿಗೆ ತುತ್ತಾಗಿರುವ ಪಾಕಿಸ್ತಾನ ಟೀಂ ಇಂಡಿಯಾ (Team India) ವಿರುದ್ಧ ಪುಟಿದೇಳುವ ತವಕದಲ್ಲಿದೆ. ಇನ್ನೂ ಐರ್ಲೆಂಡ್‌ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಪಾಕ್‌ ವಿರುದ್ಧ ಗೆದ್ದು ಸೂಪರ್‌-8 ಹಂತಕ್ಕೆ ಲಗ್ಗೆಯಿಡುವ ಉತ್ಸಾಹದಲ್ಲಿದೆ. ಈ ಹೊತ್ತಿನಲ್ಲೇ ರೋಹಿತ್‌ ಶರ್ಮಾ ಅವರ ಕೈಬೆರಳು ಗಾಯಕ್ಕೆ ತುತ್ತಾಗಿದ್ದು, ಅವರ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೇ ಸೂಪರ್‌-8 ಪ್ರವೇಶಿಸಲು ಈ ಗೆಲುವು ನಿರ್ಣಾಯಕವೂ ಆಗಿದ್ದು, ಪಾಕ್‌ ತಂಡಕ್ಕೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

    ಐರ್ಲೆಂಡ್‌ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ 37 ಎಸೆತಗಳಲ್ಲಿ 52 ರನ್‌ ಬಾರಿಸಿದ್ದರು. ಈ ವೇಳೆ ವೇಗಿ ಜೋಶ್‌ ಲಿಟಲ್‌ ಅವರ ಎಸೆತವು ರೋಹಿತ್‌ ಕೈ ಬೆರಳಿಗೆ ಬಲವಾಗಿ ತಾಗಿ ಗಾಯಗೊಂಡಿದ್ದರು. ಇದರಿಂದ ಪಂದ್ಯದ ಮಧ್ಯದಲ್ಲಿಯೇ ಮೈದಾನ ತೊರೆದಿದ್ದರು. ಹಾಗಾಗಿ ಪಾಕಿಸ್ತಾನದ ವಿರುದ್ಧ ಅವರು ಕಣಕ್ಕಿಳಿಯುತ್ತಾರಾ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.

    ರೋಹಿತ್‌ ಶರ್ಮಾ ಅವರು ಗಾಯಗೊಂಡಿರುವ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಒಂದು ವೇಳೆ ರೋಹಿತ್‌ ಪಾಕ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾದರೆ, ಉಪನಾಯಕ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್‌ ರೋಹಿತ್‌ ಶರ್ಮಾ ಅವರ ಸ್ಥಾನ ತುಂಬಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ವಿಶ್ವಕಪ್‌ನಲ್ಲಿ ಸೋಲನ್ನೇ ನೋಡದ ಭಾರತ:
    2007ರಿಂದ ಈವರೆಗೆ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪಾಕ್‌ ಎದುರು ಸೋಲನ್ನೇ ಕಂಡಿಲ್ಲ. ಏಷ್ಯಾಕಪ್‌ ಟೂರ್ನಿಯಲ್ಲಿ ಮಾತ್ರ ಸೋಲು ಕಂಡಿದೆ. 2007ರಿಂದ ಈವರೆಗೆ ನಡೆದ 12 ಟಿ20ಐ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಪಾಕಿಸ್ತಾನ ಗೆದ್ದಿದ್ದರೆ, ಟೀಂ ಇಂಡಿಯಾ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!