Tag: ಬಾಡೂಟ

  • ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಬರ ಅಧ್ಯಯನಕ್ಕೆಂದು ಕೇಂದ್ರದಿಂದ ಬಂದಿದ್ದ ತಂಡವನ್ನು ಮೆಚ್ಚಿಸಲು ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಹೌದು, ಬರಗಾಲ ಪೀಡಿತ ತಾಲೂಕು ಎಂದೇ ಹೆಸರು ಪಡೆದಿರುವ ಹರಪ್ಪನಹಳ್ಳಿ ಪಟ್ಟಣಕ್ಕೆ ಭಾನುವಾರ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿತ್ತು. ಈ ವೇಳೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳನ್ನು ಮೆಚ್ಚಿಸಲು ಸರ್ಕಾರಿ ಶಾಲೆಯಲ್ಲೇ ಭರ್ಜರಿ ಬಾಡೂಟವನ್ನು ಹಾಕಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಸೂಚನೆಯಂತೆ ಹರಪ್ಪನಹಳ್ಳಿ ಪಟ್ಟಣದ ನಜೀರ್ ನಗರದ ಮೋರಾರ್ಜಿ ವಸತಿಯುತ ಶಾಲೆಯಲ್ಲಿ ಕೇಂದ್ರ ಅಧಿಕಾರಿಗಳಿಗೆಂದೇ ಬಾಡೂಟ ಸಿದ್ದಪಡಿಸಿದ್ದರು. ಇದರಲ್ಲಿ ಚಿಕನ್ ಮಸಾಲ, ಮಟನ್ ಚಾಪ್ಸ್, ಎಗ್ ಮಸಾಲ, ರೋಟಿ ಹಾಗೂ ರಾಗಿಮುದ್ದೆಯನ್ನು ಮಾಡಿಸಿದ್ದರು.

    ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಾಲೂಕಿನ ಬರ ಅಧ್ಯಯನಕ್ಕಿಂತ ಕೇಂದ್ರದ ತಂಡಕ್ಕೆ ಬಾಡೂಟವೇ ಪ್ರಮುಖವಾಗಿತ್ತು. ಕೇವಲ ಎರಡು ಮೂರು ಕಡೆ ಪರಿಶೀಲನೆ ನಡೆಸಿ, ಹೋದ್ಯಾ ಪುಟ್ಟ, ಬಂದ್ಯಾ ಪುಟ್ಟ ಎಂಬಂತೆ ಅಧ್ಯಯನ ಮಾಡಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಅಧ್ಯಯನ ಮಾಡಿಕೊಂಡು ಹೋಗಿದ್ದರು. ಆದರೆ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದರು. ಈಗ ಪುನಃ ಅದೇ ರೀತಿ ಈ ಬಾರಿಯೂ ಮಾಡಿಕೊಂಡು ಹೋಗುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂಗೆ ಸನ್ಮಾನ ಕಾರ್ಯಕ್ರಮ – ಭರ್ಜರಿ ಬಾಡೂಟದಲ್ಲಿ ನೂಕುನುಗ್ಗಲು

    ಸಿಎಂಗೆ ಸನ್ಮಾನ ಕಾರ್ಯಕ್ರಮ – ಭರ್ಜರಿ ಬಾಡೂಟದಲ್ಲಿ ನೂಕುನುಗ್ಗಲು

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ, ಕುಮಾರಸ್ವಾಮಿ ಸನ್ಮಾನ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು.

    ಶನಿವಾರವಷ್ಟೇ ಕೇರಳದಲ್ಲಿ ಸನ್ಮಾನ ಮುಗಿಸಿಕೊಂಡು ಬಂದಿದ್ದ ಸಿಎಂ ಕುಮಾರಸ್ವಾಮಿಗೆ ಇಂದು ಟಿ.ದಾಸರಹಳ್ಳಿ ಜೆಡಿಎಸ್ ಶಾಸಕ ಮಂಜುನಾಥ್ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನೆಲಮಂಗಲ ಸಮೀಪದ ಮಾದವಾರದಲ್ಲಿನ ನೀಲಕಂಠ ಕನ್ವೆನ್ಷನ್ ಹಾಲ್ ನಲ್ಲಿ ಶಾಸಕ ಮಂಜುನಾಥ್ ಸೇರಿದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಿಂದ ಸಿಎಂ ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.

    ಸಮಾವೇಶಕ್ಕೆ ಬಂದಿದ್ದ ಸಾವಿರಾರು ಕಾರ್ಯಕರ್ತರಿಗೆ ನಾನಾ ರೀತಿಯ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಈ ವೇಳೆ ಊಟಕ್ಕಾಗಿ ನೂಕು ನುಗ್ಗಲು ಉಂಟಾಗಿ, ಕಾರ್ಯಕರ್ತರು ಪರಿದಾಡಿದ ಪ್ರಸಂಗ ಎದುರಾಗಿತ್ತು. ಇದನ್ನ ಗಮನಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಊಟದ ಹಾಲ್ ಗೆ ಬಂದು ನೂಕಾಟ ತಳ್ಳಾಟ ಮಾಡದಂತೆ ಹೇಳಿ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿ ಅಲ್ಲಿಂದ ತಮ್ಮ ಮುಂದಿನ ಪ್ರಯಾಣವನ್ನ ಮುಂದುವರಿಸಿದರು.

  • ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ: ವರ್ತೂರು ಪ್ರಕಾಶ್ ಭವಿಷ್ಯ

    ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ: ವರ್ತೂರು ಪ್ರಕಾಶ್ ಭವಿಷ್ಯ

    -ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

    ಕೋಲಾರ: ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ, ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತೆ. ಮುಂದಿನ ವರ್ಷ ನಾವೇ ಅಧಿಕಾರಕ್ಕೆ ಬರೋರು ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.

    ಇಲ್ಲಿನ ಬೈರೇಗೌಡನಗರದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ರಾಜ್ಯದಲ್ಲಿ ಅತಂತ್ರ ಸರ್ಕಾರವಿದೆ. ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಕಾರ್ಯಕರ್ತರು ಮತ್ತೆ ಪ್ರಚಾರಕ್ಕೆ ಸಿದ್ಧರಾಗಬೇಕು. ಹಿಂದಿನ ಚುನಾವಣೆಯ ಅಹಿತಕರ ಘಟನೆ ಮರೆತು ಪಕ್ಷಕ್ಕಾಗಿ ಕೆಲಸ ಮಾಡಬೇಕು. ನಾನು ಇನ್ನು ಮುಂದೆ ಕ್ಷೇತ್ರದಲ್ಲಿದ್ದು ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಅಂತಾ ಅಂದ್ರು.

     

    ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ವರ್ತೂರ್ ಪ್ರಕಾಶ್ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಹೀಗಾಗಿ ಆತ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ಆಗಮಿಸಿದ್ದ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಬಾಡೂಟ ಸಿದ್ಧ ಪಡಿಸಲಾಗಿತ್ತು. 1,200ಕ್ಕೂ ಹೆಚ್ಚು ಕಾರ್ಯಕರ್ತರು ಬಾಡೂಟ ಸವಿದಿದ್ದಾರೆ.

    ಕಾಂಗ್ರೆಸ್‍ನಲ್ಲಿ 80 ಜನ ಹಿರಿಯ ಶಾಸಕರಿದ್ದಾರೆ. ಅವರಲ್ಲಿ 20 ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತದೆ. 60 ಜನ ಶಾಸಕರು ಹಾಗೇ ಉಳಿಯುತ್ತಾರೆ. ಹುದ್ದೆಗಳ ಹಂಚಿಕೆ ಸಮಸ್ಯೆಯಿಂದಾಗಿ 2019ರಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ. ಬಿಜೆಪಿ ಮತ್ತೇ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

  • ಕೊಪ್ಪಳದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ – ವಿಡಿಯೋ ವೈರಲ್

    ಕೊಪ್ಪಳದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ – ವಿಡಿಯೋ ವೈರಲ್

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಈಳಿಗನೂರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಬುಧವಾರ ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರು ಸಭೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಈಳಿಗನೂರ್ ಕ್ಯಾಂಪ್ ಹೊರವಲಯದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಶಾಸಕ ಶಿವರಾಜ್ ತಂಗಡಗಿ ಬೆಂಬಲಿಗರಿಂದ ಸಭೆ ಆಯೋಜಿಲಾಗಿದ್ದು, ಈಳಿಗನೂರ್ ಕ್ಯಾಂಪ್ ಹೊರವಲಯದ ಜಮೀನೊಂದರಲ್ಲಿ ಎಣ್ಣೆ ಮತ್ತು ಬಾಡೂಟ ಹಂಚಿದ್ದಾರೆ.

    https://www.youtube.com/watch?v=QEHTOV2-_qU

  • ಶ್ರೀರಂಗಪಟ್ಟಣದಲ್ಲಿ ರಂಗೇರುತ್ತಿದೆ ಚುನಾವಣೆ ಕಾವು- ಮತದಾರರ ಸೆಳೆಯಲು ಕೈ ನಾಯಕರಿಂದ ಭರ್ಜರಿ ಬಾಡೂಟ

    ಶ್ರೀರಂಗಪಟ್ಟಣದಲ್ಲಿ ರಂಗೇರುತ್ತಿದೆ ಚುನಾವಣೆ ಕಾವು- ಮತದಾರರ ಸೆಳೆಯಲು ಕೈ ನಾಯಕರಿಂದ ಭರ್ಜರಿ ಬಾಡೂಟ

    ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ಮಂಡ್ಯದಲ್ಲಿ ಭರ್ಜರಿ ಬಾಡೂಟದ ವ್ಯವಸ್ಥೆಯನ್ನು ನಾಯಕರು ಜೋರಾಗಿ ಮಾಡುತ್ತಿದ್ದಾರೆ.

    ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಇಂದು ಇಂಡವಾಳು ಗ್ರಾಮದಲ್ಲಿ ಸಾವಿರಾರು ಕಾರ್ಯಕರ್ತರಿಗೆ ಬಾಡೂಟ ಹಾಕಿಸುವ ಮೂಲಕ ಭರ್ಜರಿ ಚುನಾವಣೆ ಪ್ರಚಾರ ಮಾಡಿದ್ರು. ಮೊಟ್ಟೆ, ಚಿಕನ್, ಮಟನ್, ಗೀರೈಸ್ ಸೇರಿದಂತೆ ಬಗೆ ಬಗೆಯ ಭಕ್ಷ್ಯ ಭೋಜನದ ವ್ಯವಸ್ಥೆಯನ್ನು ಕಾರ್ಯಕರ್ತರಿಗೆ ಮಾಡಲಾಗಿತ್ತು.

    ಶ್ರೀರಂಪಟ್ಟಣ ಕ್ಷೇತ್ರದ ಶಾಸಕರಾಗಿರುವ ರಮೇಶ್‍ಬಾಬು ಬಂಡಿಸಿದ್ದೇಗೌಡ ಜೆಡಿಎಸ್‍ನಿಂದ ಈಗಾಗಲೇ ಅಮಾನತ್ತಾಗಿದ್ದಾರೆ. ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಖಚಿತ ಎಂಬ ಮಾತು ಕೇಳಿಬರುತ್ತಿದೆ.

    ಆದ್ರೆ ಎಲ್ಲಾ ಊಹಾಪೋಹವನ್ನು ನಿರಾಕರಿಸುತ್ತಿರುವ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ, ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರಿಗೆ ಕಾಂಗ್ರೆಸ್‍ನಿಂದ ಎಲ್ಲಾ ರೀತಿಯ ಲೆಕ್ಕ ಚುಕ್ತಾ ಮಾಡಲಾಗಿದೆ. ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವುದಿಲ್ಲ. ನಾನೂ ಕೂಡ ಕಾಂಗ್ರೆಸ್ ಪಕ್ಷದ ವರಿಷ್ಠರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರೂ ಕೂಡ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರಚಾರ ಶುರು ಮಾಡಿದ್ದೇನೆ ಅಂತಿದ್ದಾರೆ.

    ಪ್ರಚಾರದಲ್ಲಿ ಪಾಲ್ಗೊಂಡು ಭರ್ಜರಿ ಬಾಡೂಟ ಸವಿದ ಕಾರ್ಯಕರ್ತರು ನಮ್ಮ ಸಚ್ಚಿಯಣ್ಣ ಚುನಾವಣೆಯಲ್ಲಿ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ. ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.

  • ಕ್ರಿಸ್ಮಸ್, ಹೊಸವರ್ಷದ ನೆಪದಲ್ಲಿ ಬಾಡೂಟ- ಮತದಾರರ ಓಲೈಕೆಗೆ ಶಾಸಕ ಜೆ.ಆರ್ ಲೋಬೊ ಯತ್ನ?

    ಕ್ರಿಸ್ಮಸ್, ಹೊಸವರ್ಷದ ನೆಪದಲ್ಲಿ ಬಾಡೂಟ- ಮತದಾರರ ಓಲೈಕೆಗೆ ಶಾಸಕ ಜೆ.ಆರ್ ಲೋಬೊ ಯತ್ನ?

    ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಎಚ್ಚೆತ್ತುಕೊಂಡಿದ್ದು, ಮತದಾರರ ಓಲೈಕೆಗೆ ಕಸರತ್ತು ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಶಾಸಕ ಜೆ.ಆರ್ ಲೋಬೊ ಕ್ರಿಸ್ಮಸ್ ಹಾಗೂ ಹೊಸವರ್ಷದ ಆಚರಣೆ ನೆಪದಲ್ಲಿ ಮತದಾರರಿಗೆ ಬಾಡೂಟ ಆಯೋಜಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಡಿ.30 ರಂದು ಮಂಗಳೂರಿನ ಆಗ್ನೆಸ್ ಸ್ಪೆಷಲ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಬಿರಿಯಾನಿ, ಕಬಾಬ್ ಜೊತೆಗೆ ಬಾಡೂಟ ಸವಿದ ಮತದಾರರಿಗೆ ಸ್ವತಃ ಶಾಸಕ ಲೋಬೊ ಅಭಿನಂದನೆ ಸಲ್ಲಿಸುತ್ತಿದ್ದರು. ಶಾಸಕ ಲೋಬೊ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಬಾಡೂಟ ಆಯೋಜನೆ ಮಾಡಿದ್ದರು.

    ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಳೆದ ಮೂರು ವರ್ಷದಿಂದ ಕ್ರಿಸ್ಮಸ್ ಮತ್ತು ದೀಪಾವಳಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಐವನ್ ಡಿಸೋಜ ಕ್ರಿಸ್ಮಸ್ ಆಚರಣೆ ಮಾಡಿದ್ದರು. ಆದರೆ ಈ ಸಲ ಚುನಾವಣಾ ವರ್ಷವಾಗಿದ್ದು ಮತ್ತೊಂದು ಕಡೆ ಐವನ್ ಡಿಸೋಜ ವಿಧಾನಸಭೆಗೆ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ.

    ಈ ಕಾರಣದಿಂದಲೋ ಏನೋ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಭರ್ಜರಿ ಊಟ, ಆರ್ಕೆಸ್ಟ್ರಾ ಮೂಲಕ ಮನರಂಜನೆ ನೀಡಿ ಮಂಗಳೂರಿನಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಕ್ರಿಶ್ಚಿಯನ್ ಮತದಾರರ ಓಲೈಕೆ ಮಾಡಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

  • ಸರ್ಕಾರಿ ಶಾಲೆಯಲ್ಲಿ ಮಾಂಸಾಹಾರ- ಬಿಸಿಯೂಟದ ಸಾಮಗ್ರಿಗಳನ್ನೇ ಬಳಸಿ ಶಿಕ್ಷಕರ ಭರ್ಜರಿ ಬಾಡೂಟ

    ಸರ್ಕಾರಿ ಶಾಲೆಯಲ್ಲಿ ಮಾಂಸಾಹಾರ- ಬಿಸಿಯೂಟದ ಸಾಮಗ್ರಿಗಳನ್ನೇ ಬಳಸಿ ಶಿಕ್ಷಕರ ಭರ್ಜರಿ ಬಾಡೂಟ

    ಮೈಸೂರು: ಸರ್ಕಾರಿ ಜಾಗದಲ್ಲಿ ಗೋಮಾಂಸ ತಿಂದ ಪ್ರಕರಣ ಮಾಸುವ ಮುನ್ನವೆ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮಾಂಸದೂಟ ಪ್ರಕರಣ ನಡೆದಿದೆ. ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರು ಮಾಂಸದೂಟ ಮಾಡಿದ್ದಾರೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಸೆಂಟ್ ಮೇರಿಸ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಶಿಕ್ಷಕರು ಶಾಲೆಯ ಕಚೇರಿಯ ಒಳಗಡೆ ಕುಳಿತು ಮಾಂಸದೂಟ ಸವಿದಿದ್ದಾರೆ. ಬಿಸಿ ಊಟ ತಯಾರಿಸುವ ಸಿಬ್ಬಂದಿಯಿಂದಲೇ, ಬಿಸಿಯೂಟಕ್ಕೆ ಸರ್ಕಾರ ನೀಡುವ ಸಾಮಗ್ರಿಗಳನ್ನು ಬಳಸಿ ಈ ಮಾಂಸದೂಟ ಮಾಡಿಸಲಾಗಿದೆ.

    ಶಾಲೆಯ ಸಿಬ್ಬಂದಿಯೊಬ್ಬರ ವರ್ಗಾವಣೆ ಹಾಗೂ ಇಬ್ಬರು ನೂತನ ಶಿಕ್ಷಕರ ಆಗಮನದ ಅಂಗವಾಗಿ ಈ ಮಾಂಸದೂಟ ಮಾಡಿಸಲಾಗಿದೆ. ಸರ್ಕಾರಿ ಕಚೇರಿ, ಸರ್ಕಾರಿ ಅನುದಾನಿತ ಕಚೇರಿಗಳಲ್ಲಿ ಮಾಂಸದೂಟ ಸೇವಿಸುವಂತಿಲ್ಲ. ಇಂತಹದರಲ್ಲಿ ಹೀಗೆ ಬಿಸಿ ಊಟದ ಸಾಮಗ್ರಿಗಳನ್ನು ಬಳಸಿ ಮಾಂಸದೂಟ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಹೆಚ್.ಡಿ.ಕೋಟೆಯ ಪ್ರೌಢಶಾಲಾ ವ್ಯಾಪ್ತಿಯ ಬಿ.ಆರ್.ಸಿ ಅಧಿಕಾರಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತಾಲೂಕು ಬಿಇಓಗೆ ಮಾಹಿತಿ ನೀಡಿದ್ಧಾರೆ. ಇಂದು ಬಿಇಓ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.