Tag: ಬಾಡೂಟ

  • ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಡೂಟ – ಬಿರಿಯಾನಿ ಸೀಜ್ ಮಾಡಿದ ಚುನಾವಣಾಧಿಕಾರಿಗಳು

    ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಡೂಟ – ಬಿರಿಯಾನಿ ಸೀಜ್ ಮಾಡಿದ ಚುನಾವಣಾಧಿಕಾರಿಗಳು

    ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಅಖಾಡದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದ್ದು, ಜನರಿಗೆ ಹಂಚಲು ತಯಾರು ಮಾಡಿಟ್ಟಿದ್ದ ಬಿರಿಯಾನಿಯನ್ನು (Biryani) ಚುನಾವಣಾ ಅಧಿಕಾರಿಗಳು (Election Officers) ಸೀಜ್ ಮಾಡಿದ್ದಾರೆ.

    ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಚನ್ನಪಟ್ಟಣದ ರೆಸಾರ್ಟ್ನಲ್ಲಿ ಕರೆಯಲಾಗಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಗೆ ಸಿದ್ಧವಾಗಿದ್ದ ಬಿರಿಯಾನಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾ ಅಧಿಕಾರಿಯಾದ ಉಪವಿಭಾಗಾಧಿಕಾರಿ ಬಿನೋಯ್ ನೇತೃತ್ವದಲ್ಲಿ ದಾಳಿಮಾಡಿದ ಅಧಿಕಾರಿಗಳು ಬಿರಿಯಾನಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಎಸ್.ನಿರ್ಮಲಾ ಬಡ್ತಿ

    ನೀತಿಸಂಹಿತೆಯನ್ವಯ ಬಾಡೂಟ ಮಾಡಿಸಲು ಅವಕಾಶವಿಲ್ಲ. ಸಭೆಗೆ ಅನುಮತಿ ಪಡೆಯಲಾಗಿತ್ತಾದರೂ ಕಾರ್ಯಕರ್ತರಿಗೆ ಮಜ್ಜಿಗೆ ನೀರು, ಕಾಫಿ, ಟೀ ವಿತರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿ ಕಾರ್ಯಕರ್ತರನ್ನ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಆದೇಶ ಆಗಿ 10 ದಿನ ಕಳೆದರೂ ಕಾರವಾರ ಅಪರ ಜಿಲ್ಲಾಧಿಕಾರಿ ಖುರ್ಚಿ ಖಾಲಿ

  • ಬಾಡೂಟ ವಶಕ್ಕೆ ಪಡೆದ FST ಟೀಂ- ರಸ್ತೆಬದಿ ಚೆಲ್ಲಿದ ಊಟವನ್ನೇ ತಿಂದ ಕೆಲವರು!

    ಬಾಡೂಟ ವಶಕ್ಕೆ ಪಡೆದ FST ಟೀಂ- ರಸ್ತೆಬದಿ ಚೆಲ್ಲಿದ ಊಟವನ್ನೇ ತಿಂದ ಕೆಲವರು!

    ಹಾಸನ: ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಬಾಡೂಟ ಆಯೋಜನೆ ಮಾಡಿದ್ದು, ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ನಡೆಸಿದೆ. ದಾಳಿ ಬಳಿಕ ತಂಡವು ಬಾಡೂಟವನ್ನು ವಶಕ್ಕೆ ಪಡೆದು ನಾಶ ಮಾಡಿದೆ.

    ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಚ್.ಡಿ.ರೇವಣ್ಣ ಅವರ ಕುಮ್ಮಕ್ಕಿನಿಂದ ದಾಳಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಏ.16ರಿಂದ ಮಂಡ್ಯದಲ್ಲಿ ಹೆಚ್‌ಡಿಕೆ ಪ್ರಚಾರ – ʻಕೈʼ ಕಟ್ಟಿಹಾಕಲು ದಳಪತಿ ಪ್ಲ್ಯಾನ್‌ ಏನು?

    ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಕೋಡಿಹಳ್ಳಿ ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರಚಾರ ಸಭೆಗೆ ಬರುವವರಿಗೆ ಬಾಡೂಟ ವ್ಯವಸ್ಥೆ ಮಾಡಿದ್ದರು. ಆದರೆ ಈ ವಿಚಾರ ತಿಳಿದು ಎಫ್‍ಎಸ್‍ಟಿ ತಂಡ ಗ್ರಾಮಕ್ಕೆ ಭೇಟಿ ನೀಡಿದೆ. ಅಲ್ಲದೇ ಪರಿಶೀಲಿಸಿದಾಗ ಬಾಡೂಟ ವ್ಯವಸ್ಥೆ ಮಾಡಿರುವುದು ಬೆಳಕಿಗೆ ಬಂದಿದೆ.

    ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಎಫ್‍ಎಸ್‍ಟಿ ತಂಡವು ನಾನ್‍ವೆಜ್ ಊಟವನ್ನು ವಶಕ್ಕೆ ಪಡೆದಿದೆ. ನಂತರ ರಸ್ತೆಗೆ ಬದಿಗೆ ಸುರಿದು ನಾಶ ಮಾಡಿ ಬಳಿಕ ಪೊಲೀಸ್ ಠಾಣೆಗೆ ತಂಡ ದೂರು ನೀಡಿದೆ. ಬಾಡೂಟ ಆಯೋಜನೆ ಸಂಬಂಧ ಗ್ರಾಮದ ಓರ್ವನ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹುಟ್ಟುಹಬ್ಬದ ಅಂಗವಾಗಿ ನಾನ್‍ವೆಜ್ ಊಟ ಮಾಡಿಸಲಾಗಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಇದೀಗ ವೀಡಿಯೋ ಮಾಡಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಕೆಲವರು ರಸ್ತೆಗೆ ಚೆಲ್ಲಿರುವ ಊಟವನ್ನೇ ತಿಂದಿದ್ದಾರೆ.

  • ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ, ಕಾಂಗ್ರೆಸ್‌ ಹೊಸತೊಡಕು ವಿರೋಧಿ: ಜೆಡಿಎಸ್‌ ಕಿಡಿ

    ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ, ಕಾಂಗ್ರೆಸ್‌ ಹೊಸತೊಡಕು ವಿರೋಧಿ: ಜೆಡಿಎಸ್‌ ಕಿಡಿ

    ಬೆಂಗಳೂರು: ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ. ಕಾಂಗ್ರೆಸ್‌ (Congress) ಹೊಸತೊಡಕು ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್‌ ಎಂದು ಜೆಡಿಎಸ್‌ (JDS) ಕಿಡಿಕಾರಿದೆ.

    ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಬಿಡದಿ ತೋಟದ ಮನೆಯಲ್ಲಿ ಔತಣಕೂಟವನ್ನು ಚುನಾವಣಾಧಿಕಾರಿಗಳು ರದ್ದು ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ ಎಂದು ಬರೆದಿದೆ.

    ಪೋಸ್ಟ್‌ನಲ್ಲಿ ಏನಿದೆ?
    ಯುಗಾದಿ (Ugadi) ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು(Hosatodaku) ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕಾಂಗ್ರೆಸ್‌ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ‘ಕಾಕದೃಷ್ಟಿ’ ಬೀರಿದೆ. ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ.

    ಪ್ರತೀ ಹಿಂದೂ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ.  ಇದನ್ನೂ ಓದಿ: ಕೇಜ್ರಿವಾಲ್‌ ಬಂಧನ ಬಳಿಕ ಎಎಪಿಗೆ ಮತ್ತೊಂದು ಶಾಕ್‌ – ಸಚಿವ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ

    ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಫ್ರಿಜ್ಡ್, ಕೂಪನ್ ಹಂಚುವ ಸತ್ಸಂಪ್ರದಾಯ ರೂಢಿಸಿಕೊಂಡಿರುವ ಕಾಂಗ್ರೆಸ್, ಕಾವೇರಿ ಅಮ್ಮನ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿಸಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಠೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ.

    ಕಾಂಗ್ರೆಸ್ ಸೋಲಿನ ಹತಾಶೆಯಿಂದ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳನ್ನು ಟೀಕಿಸುವ ಭರದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್ ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ, ದ್ರೋಹಿ ಆಗಿರುವ ಕಾಂಗ್ರೆಸ್ ಗೆ ಹೊಸತೊಡಕುಗಿಂತ ಇಫ್ತಾರ್ ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ.

  • ಬಾಡೂಟಕ್ಕೆ ಸ್ನೇಹಿತರ ಜೊತೆ ಹೋದವ ಶವವಾಗಿ ಪತ್ತೆ

    ಬಾಡೂಟಕ್ಕೆ ಸ್ನೇಹಿತರ ಜೊತೆ ಹೋದವ ಶವವಾಗಿ ಪತ್ತೆ

    ದಾವಣಗೆರೆ: ಉಚ್ಚಂಗಿದುರ್ಗದಲ್ಲಿ ಬಾಡೂಟ ಇದೆ ಎಂದು ಸ್ನೇಹಿತರ ಜೊತೆಗೆ ಹೋಗಿದ್ದ ಯುವಕ ಬರ್ಬರವಾಗಿ ಕೊಲೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ ಹೊರ ವಲಯದಲ್ಲಿ ನಡೆದಿದೆ.

    ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾದ ಧನ್ಯಕುಮಾರ್ (31) ಮೃತ ದುರ್ದೈವಿಯಾಗಿದ್ದು, ಕನ್ನಡ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಯುವಕ ಕೆಲ ವರ್ಷಗಳಿಂದ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದನು. ಬುಧವಾರ ತಡರಾತ್ರಿ ಸ್ನೇಹಿತರ ಜೊತೆಗೆ ಹರಪ್ಪನಹಳ್ಳಿಯ ಉಚ್ಚಂಗಿದುರ್ಗಕ್ಕೆ ಊಟಕ್ಕೆ ಹೋಗಿದ್ದ ಧನ್ಯಕುಮಾರ್ ಇಂದು ಬೆಳಗ್ಗೆ ಗ್ರಾಮದ ಜಮೀನು ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಹೆಚ್ಚಾದ ಭಿಕ್ಷುಕರ ಹಾವಳಿ – ಹಸುಗೂಸು ಎತ್ತಿಕೊಂಡು ಸುಡುಬಿಸಿಲಲ್ಲೇ ಭಿಕ್ಷಾಟನೆ

    POLICE JEEP

    ಸದ್ಯ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಜೊತೆಗಿದ್ದ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಇದೀಗ ಅರಸಿಕೆರೆ ಪೊಲೀಸರು ಹಾಗೂ ವಿಜಯನಗರ ಎಸ್‍ಪಿ ಸ್ಥಳಕ್ಕೆ ಧಾವಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವರ, ಅತ್ತೆ ಮನೆಯವರನ್ನು ಕೂಡಿ ಹಾಕಿ ರಾತ್ರೋರಾತ್ರಿ ಚಿನ್ನಾಭರಣ ಜೊತೆ ವಧು ಎಸ್ಕೇಪ್

  • ವಿಧಾನಸೌಧ ಉಪ ಸಭಾಧ್ಯಕ್ಷರ ಕೊಠಡಿಯಲ್ಲಿ ಭರ್ಜರಿ ಬಾಡೂಟ

    ವಿಧಾನಸೌಧ ಉಪ ಸಭಾಧ್ಯಕ್ಷರ ಕೊಠಡಿಯಲ್ಲಿ ಭರ್ಜರಿ ಬಾಡೂಟ

    ಬೆಂಗಳೂರು: ಸದಾ ವಿವಾದಗಳಿಗೆ ಹೆಸರು ಮಾಡಿರೋ ವಿಧಾನಸೌಧ ಈಗ ಮತ್ತೊಂದು ವಿವಾದ ಸೃಷ್ಟಿ ಮಾಡಿದೆ. ಉಪ ಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಕೊಠಡಿಯನ್ನ ದುರ್ಬಳಕೆ ಮಾಡಿಕೊಂಡಿರೋ ವಿಧಾನಸಭೆ ಸಿಬ್ಬಂದಿ ಮಧ್ಯಾಹ್ನ ಭರ್ಜರಿ ಬಾಡೂಟ ಮಾಡಿ ಬೇಜಾಬ್ದಾರಿ ಮೆರೆದಿದ್ದಾರೆ.

    ಇತ್ತೀಚೆಗೆ ಕರ್ನಾಟಕ ವಿಧಾನ ಮಂಡಲ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅನಂತ್ ಟೀಂ ಗೆಲುವು ಸಾಧಿಸಿತ್ತು. ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಸಿಬ್ಬಂದಿಗೆ ಖುದ್ದು ಅನಂತ್ ಬಾಡೂಟ ಆಯೋಜನೆ ಮಾಡಿದ್ದಾರೆ ಎನ್ನಲಾಗ್ತಿದೆ. ಚಿಕನ್, ಮಟನ್, ಕಬಾಬ್, ಮೊಟ್ಟೆ ಸೇರಿ ಭರ್ಜರಿ ಬಾಡೂಟ ಮಾಡಿರೋ ಸಿಬ್ಬಂದಿ ಉಪ ಸಭಾಧ್ಯಕ್ಷರ ಕೊಠಡಿಯನ್ನೆ ದುರುಪಯೋಗ ಮಾಡಿಕೊಂಡಿದ್ದಾರೆ.

    ಉಪ ಸಭಾಧ್ಯಕ್ಷರು ಇಲ್ಲದ ಸಮಯದಲ್ಲಿ ಸಿಬ್ಬಂದಿ ಹೋಟೆಲಿನಿಂದ ಬಾಡೂಟ ತರಿಸಿಕೊಂಡು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಉಪ ಸಭಾಧ್ಯಕ್ಷರ ಕೊಠಡಿಯಲ್ಲಿ ಬಾಡೂಟ ಮಾಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಉಪ ಸಭಾಧ್ಯಕ್ಷರು ಸಿಬ್ಬಂದಿ ಮೇಲೆ ಏನು ಕ್ರಮ ತೆಗೆದುಕೊಳ್ತಾರೆ ಕಾದು ನೋಡಬೇಕಿದೆ.

  • ನಾನು, ವಿಶ್ವನಾಥ್ ವಿದ್ಯಾರ್ಥಿಗಳಾಗಿದ್ದಾಗ ಬಾಡೂಟ ಹಾಕಿಸ್ತಿದ್ವಿ: ಸಿದ್ದರಾಮಯ್ಯ

    ನಾನು, ವಿಶ್ವನಾಥ್ ವಿದ್ಯಾರ್ಥಿಗಳಾಗಿದ್ದಾಗ ಬಾಡೂಟ ಹಾಕಿಸ್ತಿದ್ವಿ: ಸಿದ್ದರಾಮಯ್ಯ

    ಮೈಸೂರು: ವಿಶ್ವನಾಥ್ ಮತ್ತು ನಾನು ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲೇ ಮರಿ ಕಡಿದು ಬಾಡೂಟ ಹಾಕಿಸಿದ್ದೆವು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಮೈಸೂರು ಜಿಲ್ಲೆಯ ಕೆ.ಆರ್ ನಗರದ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈಶ್ವರಪ್ಪ, ವಿಶ್ವನಾಥ್ ಜೊತೆ ವೇದಿಕೆ ಹಂಚಿಕೊಂಡಿದ್ದ ಸಿದ್ದರಾಮಯ್ಯ ಅವರು ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು. ನಾನು ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದೆ. ನಾನು ಅಂತಿಮ ವರ್ಷದಲ್ಲಿದಾಗ ವಿಶ್ವನಾಥ್ ಪ್ರಥಮ ವರ್ಷದಲ್ಲಿದ್ದನು. ಇಬ್ಬರೂ ಸೇರಿ ಕಾಳಿದಾಸ ವಿದ್ಯಾರ್ಥಿ ಸಂಘ ಕಟ್ಟಿದ್ದೆವು. ಅದಕ್ಕೆ ನಾನು ಅಧ್ಯಕ್ಷ, ವಿಶ್ವನಾಥ್ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದ. ಆಗ ಮೈಸೂರಿನಲ್ಲಿ ಓದುತ್ತಿದ್ದ ಕುರುಬ ಸಮುದಾಯದ ವಿದ್ಯಾರ್ಥಿಗಳ ಸರ್ವೆ ಮಾಡಿಸಲು ಉದ್ದೇಶಿಸಿದ್ದೆವು. ಒಂದು ದಿನ ಮರಿ ಕಡಿದು ಬಾಡೂಟ ಮಾಡಿಸಿದ್ದೆವು. ವಿದ್ಯಾರ್ಥಿ ದೆಸೆಯಿಂದಲೇ ನಾವಿಬ್ಬರೂ ಒಟ್ಟಿಗೆ ಬೆಳೆದಿದ್ದೇವೆ ಎಂದು ಹಳೆ ನೆನಪುಗಳನ್ನು ಹಂಚಿಕೊಂಡರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಸಿದ್ದು, ವಿಶ್ವನಾಥ್, ಈಶ್ವರಪ್ಪ

    ನಮ್ಮ ನಡುವೆ ವೈರತ್ವ ಇಲ್ಲ, ವಿರೋಧ ಮಾತ್ರವಿದೆ. ಎಲ್ಲಕ್ಕಿಂತಾ ಮಾನವೀಯ ಸಂಬಂಧ ಮುಖ್ಯ. ನಮ್ಮ ನಡುವೆ ವೈಯುಕ್ತಿಕ ವೈರುತ್ವ ಏನೂ ಇಲ್ಲ. ನಾನು, ವಿಶ್ವನಾಥ್ ಆಸ್ತಿ ಹಂಚಿಕೊಳ್ಳಬೇಕಿಲ್ಲ. ಈಶ್ವರಪ್ಪ ಆಗಾಗ ನನ್ನ ವಿರುದ್ಧ ಟೀಕೆ ಮಾಡ್ತನೆ. ನಾನೂ ಅವನ ವಿರುದ್ಧ ಮಾತನಾಡಿದ್ದೇನೆ. ನಾನೊಂದು ಪಕ್ಷದಲ್ಲಿ ಇದ್ದೇನೆ, ಅವನೊಂದು ಪಕ್ಷದಲ್ಲಿ ಇದ್ದಾನೆ. ನಾನು ಕಾಂಗ್ರೆಸ್, ಅವನು ಬಿಜೆಪಿ. ನಾನು ಚುನಾವಣೆಗೆ ನಿಂತಾಗ ಅವನು ನನ್ನ ಸೋಲಿಸೋಕೆ ಬರ್ತಾನೆ. ಅವನು ನಿಂತಾಗ ನಾನು ಸೋಲಿಸೋಕೆ ಹೋಗ್ತೀನಿ. ಆದರೆ ವೈಯುಕ್ತಿಕವಾಗಿ ಚೆನ್ನಾಗಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

  • ಸೂರ್ಯಗ್ರಹಣದ ವೇಳೆ ಸ್ಮಶಾನದಲ್ಲಿ ಬಿರಿಯಾನಿ ಸವಿದು ಜಾಗೃತಿ

    ಸೂರ್ಯಗ್ರಹಣದ ವೇಳೆ ಸ್ಮಶಾನದಲ್ಲಿ ಬಿರಿಯಾನಿ ಸವಿದು ಜಾಗೃತಿ

    ರಾಮನಗರ: ಕೇತುಗ್ರಸ್ಥ ಸೂರ್ಯಗ್ರಹಣದ ವೇಳೆ ಹಲವರು ಜನರಲ್ಲಿನ ಮೂಢನಂಬಿಕೆ ಹೋಗಲಾಡಿಸಲು ನಾನಾ ರೀತಿಯಲ್ಲಿ ಅರಿವು ಕಾರ್ಯಕ್ರಮ ನಡೆಸಿದ್ದಾರೆ. ಆದರೆ ರಾಮನಗರದ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಸಂಘಟನೆಯೊಂದರ ಕಾರ್ಯಕರ್ತರು ಬಾಡೂಟ ಸವಿಯುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದರು.

    ಸಮತಾ ಸೈನಿಕ ದಳ ಸಂಘಟನೆಯ ಕಾರ್ಯಕರ್ತರು ಹಾರೋಹಳ್ಳಿಯ ಸ್ಮಶಾನದಲ್ಲಿ ಬಿರಿಯಾನಿ ಹಾಗೂ ಬಾಡೂಟವನ್ನು ಆಯೋಜನೆ ಮಾಡಿದ್ದರು. ಅಲ್ಲದೇ ಸ್ಮಶಾನದಲ್ಲಿನ ಗೋರಿಗಳ ಬಳಿ ಕುಳಿತು ಗ್ರಹಣದ ಸಮಯದಲ್ಲಿಯೇ ಊಟ ಮಾಡುವ ಮೂಲಕ ಅರಿವು ಕಾರ್ಯಕ್ರಮ ನಡೆಸಿದ್ದರು.

    ವಿಜ್ಞಾನದ ಮೇಲೆ ಜ್ಯೋತಿಷ್ಯದ ದಬ್ಬಾಳಿಕೆ ನಿಲ್ಲಲಿ, ಅಜ್ಞಾನ ಅಳಿಯಲಿ-ವಿಜ್ಞಾನ ಉಳಿಯಲಿ, ಗ್ರಹಣದ ಚಿಂತೆ ಬಿಡಿ-ಸಾಮಾನ್ಯ ಜೀವನ ಮಾಡಿ, ಮೂಡನಂಬಿಕೆಗಳ ವಿರುದ್ಧ ನಮ್ಮ ಹೋರಾಟ ಎಂಬ ಪೋಷಣೆಗಳನ್ನು ಕೂಗಿ ಸ್ಮಶಾನದ ದಾರಿಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರ ಗಮನ ಸೆಳೆದರು. ಅಲ್ಲದೇ ಗ್ರಹಣದ ಸಮಯದಲ್ಲಿ ಊಟ, ತಿಂಡಿ ಸೇವನೆ, ನೀರು ಕುಡಿಯುವುದರಿಂದ ಏನೂ ಆಗುವುದಿಲ್ಲ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಸಾರ್ವಜನಿಕರಿಗೂ ಸಹ ಬಾಡೂಟ ಉಣಬಡಿಸಿದ್ದರು.

    ಇದೇ ವೇಳೆ ಮಾತನಾಡಿದ ಸಂಘಟನೆಯ ಕೋಟೆ ಕುಮಾರ್, ಗ್ರಹಣದ ಹೆಸರಿನಲ್ಲಿ ಮುಗ್ಧ ಜನರನ್ನ ಮೌಢ್ಯತೆಗೆ ತಳ್ಳುವಂತಹ ಪ್ರಯತ್ನ ಮಾಡಲಾಗುತ್ತಿದೆ. ಗ್ರಹಣ ಕೇವಲ ನೆರಳು-ಬೆಳಕಿನಾಟ ಅಷ್ಟೇ ವಿನಃ ರಾಹು, ಕೇತು ಗಂಡಾಂತರ ಯಾವುದೂ ಇಲ್ಲ. ಜನರನ್ನ ಆಧುನಿಕತೆಯ ವೈಜ್ಞಾನಿಕ ಜೀವನದೆಡೆಗೆ ಕರೆದೊಯ್ಯುವುದು ಎಲ್ಲರ ಕರ್ತವ್ಯವಾಗಬೇಕು. ಗ್ರಹಣದ ಹೆಸರಿನಲ್ಲಿ ಮುಗ್ಧ ಜನರನ್ನ ಮೋಸ ಮಾಡುವಂತಾಗಬಾರದು. ಈ ಹಿಂದೆ ಚಂದ್ರ ಗ್ರಹಣದ ವೇಳೆಯೂ ಸ್ಮಶಾನದಲ್ಲಿ ಸಾಮೂಹಿಕ ಬಾಡೂಟ ಭೋಜನೆ ಮಾಡಿದ್ದೇವೆ. ಅದೇ ರೀತಿ ಸೂರ್ಯ ಗ್ರಹಣದಂದು ಸಹ ಬಾಡೂಟವನ್ನ ಸವಿಯುವುದರ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.

  • ಬಾಡೂಟದ ಭರಾಟೆಗೆ ಬಿತ್ತು ಕೊಕ್ಕೆ – ಎಲೆಕ್ಷನ್ ಸಮಯದಲ್ಲಿ ಮಾಂಸದ ದರ ಭಾರೀ ಏರಿಕೆ

    ಬಾಡೂಟದ ಭರಾಟೆಗೆ ಬಿತ್ತು ಕೊಕ್ಕೆ – ಎಲೆಕ್ಷನ್ ಸಮಯದಲ್ಲಿ ಮಾಂಸದ ದರ ಭಾರೀ ಏರಿಕೆ

    ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ರಾಜಕೀಯ ಬಾಡೂಟ ಹಾಕಿಸುತ್ತಾರೆ. ಆದರೆ ಈ ಬಾರಿ ಬಾಡೂಟನೇ ರಾಜಕೀಯ ನಾಯಕರುಗಳ ಕೈ ಸುಡುತ್ತಿದೆ.

    ಚುನಾವಣೆ ಬರುತ್ತಿದ್ದಂತೆ ರಾಜಕೀಯ ನಾಯಕರು ಮತದಾರರನ್ನು ಸೆಳೆಯುವುದಕ್ಕೆ ಮೊದಲ ಪ್ರಯತ್ನನೇ ಬಾಡೂಟ ಹಾಕಿಸುವುದು. ಹೀಗಾಗಿ ಎಲ್ಲೆಡೆ ಬಾಡೂಟದ ಭರಾಟೆ ಕೂಡ ಜೋರಾಗಿದೆ. ಬಾಡೂಟದಲ್ಲಿ ಚೀಪ್ ರೇಟ್‍ನ ಚಿಕನ್ ಮತ್ತು ಮಟನ್ ನೀಡಿ ಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಇದೇ ಬಾಡೂಟ ರಾಜಕೀಯ ನಾಯಕರ ಕೈ ಸುಡುತ್ತಿದ್ದು, ಚಿಕನ್ ಹಾಗೂ ಮಟನ್ ರೇಟ್ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಮಾಂಸದ ದರ ಏರಿಕೆ ಆಗಿದೆ.

    ಕಳೆದ ತಿಂಗಳು ಕೆ.ಜಿಗೆ 113 ರೂ. ಇದ್ದ ಚಿಕನ್ ದರ 180 ರೂ. ಆಗಿದೆ. ಹಾಗೆಯೇ ಮಟನ್ 520 ರೂ. ಯಿಂದ 560 ರೂ. ಜಿಗಿದಿದೆ. ಅಂತೆಯೇ ಒಂದು ಮೊಟ್ಟೆ 4 ರೂ.ಯಿಂದ 6 ರೂ.ಗೆ ಏರಿಕೆಯಾಗಿದೆ. ಮಟನ್ ನಲ್ಲಿ ಅಷ್ಟೇನೂ ಹೆಚ್ಚಳವಾಗದಿದ್ರೂ, ಚಿಕನ್ ನಲ್ಲಿ 80 ರೂ. ಹೆಚ್ಚಾಗಿದ್ದು, ನಾನ್ ವೆಜ್ ಪ್ರಿಯರ ನಿದ್ದೆಗೆಡಿಸಿದೆ. ಈ ವಾರದಲ್ಲೇ ಚಿಕನ್ 200 ರೂ. ಹಾಗೂ ಮಟನ್ 600 ರೂ. ಗಡಿ ದಾಟುವ ಸಾಧ್ಯತೆ ಇದೆ.

    ಬೆಂಗಳೂರಿನಲ್ಲಿ ದಿನವೊಂದಕ್ಕೆ 90 ಟನ್‍ಗಿಂತ ಹೆಚ್ಚು ಕೋಳಿ ಮಾರಾಟವಾಗುತ್ತಿದೆ. ಆದರೆ ಚುನಾವಣೆ ಎಲೆಕ್ಷನ್ ಹೊತ್ತಿನಲ್ಲಿ, ದಿನವೊಂದಕ್ಕೆ 150 ಟನ್‍ಗಿಂತಲೂ ಹೆಚ್ಚು ಮಾರಾಟವಾಗುತ್ತದೆ. ಬೆಲೆ ಎಷ್ಟಾದರೂ ಚಿಕನ್ ಬೇಕೇ ಬೇಕು ಎಂದು ನಾನ್ ವೆಜ್ ಪ್ರಿಯರು ಹೇಳುತ್ತಿದ್ದಾರೆ.

    ಬೆಲೆ ಏರಿಕೆ ಯಾಕೆ?
    ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅನೇಕ ಕೋಳಿಫಾರಂಗಳು ಜಲಾವೃತವಾಗಿದ್ದು, ಬೇಡಿಕೆಯಷ್ಟು ಪೂರೈಕೆ ಇಲ್ಲ.
    ಕ್ರಿಸ್‍ಮಸ್ ಹಾಗೂ ಹೊಸ ವರ್ಷದಲ್ಲಿ ಕೇಕ್ ಬಳಕೆ ಹೆಚ್ಚಾಗಿದ್ದು, ಮೊಟ್ಟೆಯ ಬೇಡಿಕೆ ಹೆಚ್ಚಾಗಿದೆ.
    ಈಗ ಚಿಕ್ಕ ಚಿಕ್ಕ ಕೋಳಿಗಳಿದ್ದು, ಬಲಿಷ್ಟವಾಗಲೂ ಒಂದು ತಿಂಗಳಾದರೂ ಬೇಕು.

  • ಕೆಆರ್‌ ಪೇಟೆ ಉಪಚುನಾವಣೆ – ಒಂದೇ ದಿನದಲ್ಲಿ ಎರಡು ಬಾಡೂಟ

    ಕೆಆರ್‌ ಪೇಟೆ ಉಪಚುನಾವಣೆ – ಒಂದೇ ದಿನದಲ್ಲಿ ಎರಡು ಬಾಡೂಟ

    ಮಂಡ್ಯ: ಉಪಚುನಾವಣೆ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಲ್ಲಿ ಬಾಡೂಟದ ಪೈಪೋಟಿ ಶುರುವಾಗಿದೆ. ಒಂದೇ ದಿನ ಎರಡು ಕಡೆ ಬಾಡೂಟ ಮಾಡಿಸಲಾಗಿದ್ದು, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಇಂದು ಬಾಡೂಟದ ಹಬ್ಬವನ್ನೇ ಏರ್ಪಡಿಸಲಾಗಿತ್ತು.

    ಸಾಧುಗೋನ ಹಳ್ಳಿ ಗ್ರಾಮದಲ್ಲಿ ಅನರ್ಹ ಶಾಸಕ ನಾರಾಯಣಗೌಡರಿಂದ ಬಾಡೂಟ ಆಯೋಜನೆ ಮಾಡಿದರೆ, ಇತ್ತ ನೀತಿಮಂಗಲ ಗ್ರಾಮದಲ್ಲಿ ಜೆಡಿಎಸ್ ನಾಯಕರಿಂದ ಬಾಡೂಟ ಆಯೋಜನೆ ಮಾಡಲಾಗಿತ್ತು. ಎರಡು ಕಡೆಗಳಲ್ಲಿ ಕಾರ್ಯಕರ್ತರು ಮದ್ಯ ಸೇವನೆ, ಬಾಡೂಟ ಸವಿದು ಸಂತೃಪ್ತರಾಗಿದ್ದಾರೆ.

    ಎರಡು ಬಾಡೂಟ ಕಾರ್ಯಕ್ರಮಗಳಲ್ಲೂ ಕಾರ್ಯಕರ್ತರು ತುಂಬಿ ತುಳುಕುತ್ತಿದ್ದರು. ಬಾಡೂಟದಲ್ಲಿ ಕ್ವಿಂಟಾಲ್‌ಗಟ್ಟಲೆ ಮಟನ್, ಚಿಕನ್, 5 ಸಾವಿರ ಮೊಟ್ಟೆ, ಬೋಟಿ ಗೊಜ್ಜು, ಮುದ್ದೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕರ್ತರು, ಬೆಂಬಲಿಗರಿಗೆ ಊಟಕ್ಕೂ ಮುನ್ನ ಮದ್ಯದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಮದ್ಯ ಸೇವನೆ ಬಳಿಕ ಭರ್ಜರಿ ಬಾಡೂಟ ಸವಿದಿದ್ದಾರೆ.

    ಕೆ.ಆರ್.ಪೇಟೆ ತಾಲೂಕಿನ ನೀತಿ ಮಂಗಲದ ಸಭೆಯಲ್ಲಿ ಭಾಗವಹಿಸಿದ ಜೆಡಿಎಸ್ ಕಾರ್ಯಕರ್ತರಿಗೆ ಬಾಡೂಟ ಮಾಡಿಸಲಾಗಿತ್ತು. 8 ಕ್ವಿಂಟಲ್ ಮಟನ್, 3 ಕ್ವಿಂಟಲ್ ಚಿಕನ್ ಹಾಗೂ 5 ಸಾವಿರ ಮೊಟ್ಟೆ ಜೊತೆಗೆ ರಾಗಿ ಮುದ್ದೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಬಾಡೂಟದ ಜೊತೆಗೆ ಮದ್ಯದ ವ್ಯವಸ್ಥೆಯನ್ನೂ ಮುಖಂಡರು ಮಾಡಿದ್ದರು.

    ಮುಖಂಡರಿಗೆ ಒಳ್ಳೆಯ ಗುಣಮಟ್ಟದ ಮದ್ಯ, ಸಾಮಾನ್ಯ ಕಾರ್ಯಕರ್ತರಿಗೆ ಸಾಮಾನ್ಯ ಮದ್ಯ ನೀಡುವ ಮೂಲಕ ಮತಗಳನ್ನು ಬಿಗಿ ಮಾಡಿಕೊಳ್ಳಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಊಟದ ವ್ಯವಸ್ಥೆ ಸ್ಥಳದಲ್ಲೇ ಗೂಡ್ಸ್ ವಾಹನ ನಿಲ್ಲಿಸಿಕೊಂಡು ಮದ್ಯ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲೇ ನೀರಿನ ಬಾಟಲಿ ನೀಡಲಾಗಿದ್ದು, ಎಣ್ಣೆ ಜೊತೆ ನೀರು ಬೆರೆಸಿ ಕುಡಿದು ಕಾರ್ಯಕರ್ತರು ಭರ್ಜರಿ ಬಾಡೂಟ ಸವಿದಿದ್ದಾರೆ.

    ಈ ಕುರಿತು ಕೆ.ಆರ್.ಪೇಟೆ ಸಾದುಗೋನಹಳ್ಳಿಯಲ್ಲಿ ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ಚುನಾವಣೆಗಾಗಿ ಊಟದ ವ್ಯವಸ್ಥೆ ಮಾಡಿಲ್ಲ. ನನ್ನ ಮಗಳ ಮದುವೆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಊಟ ಹಾಕಿಸಿರಲಿಲ್ಲ. ನಾನು ಎಲ್ಲರ ಮನೆಯಲ್ಲೂ ಊಟ ಮಾಡಿದ್ದೀನಿ. ಹಾಗಾಗಿ ಈಗ ಅವರಿಗೆ ಅನ್ನ ಹಾಕಿಸುತ್ತಿದ್ದೇನೆ ಎಂದು ತಿಳಿಸಿದರು.

  • ಬರದ ನಡುವೆ ಭರ್ಜರಿ ಬಾಡೂಟ ಆಯೋಜಿಸಿದ ನಗರಸಭೆ

    ಬರದ ನಡುವೆ ಭರ್ಜರಿ ಬಾಡೂಟ ಆಯೋಜಿಸಿದ ನಗರಸಭೆ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಡೆ ಬರಗಾಲ ತಾಂಡವವಾಡುತ್ತಿದೆ. ಚಿಕ್ಕಬಳ್ಳಾಪುರದಲ್ಲೂ ಬರ ಎದರಾಗಿದೆ. ಆದರೆ ಚಿಕ್ಕಬಳ್ಳಾಪುರ ನಗರಸಭೆಗೆ ಮಾತ್ರ ಬರ ಬಂದಿಲ್ಲ.

    ನಗರಸಭೆಯ ಬಜೆಟ್ ಮೀಟಿಂಗ್ ಬಳಿಕ ಎಲ್ಲಾ ಸದಸ್ಯರಿಗೂ ಹಾಗೂ ಸಿಬ್ಬಂದಿಗೆ ಬಾಡೂಟ ಆಯೋಜನೆ ಮಾಡಲಾಗಿದೆ. ನಗರಸಭೆ ಆವರಣದಲ್ಲಿ ಖಾದ್ಯಗಳನ್ನು ತಯಾರಿ ಮಾಡಿ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಚಿಕನ್ ಫ್ರೈ, ಮಟನ್ ಬಿರಿಯಾನಿ, ಫಿಶ್, ಕಬಾಬ್ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಲಾಗಿದೆ. ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿದರೂ ನಗರಸಭೆಯಲ್ಲಿ ಬಾಡೂಟ ಆಯೋಜನೆ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಈ ಬಗ್ಗೆ ನಗರಸಭೆಯವರನ್ನು ಕೇಳಿದರೆ ಎಂದಿನಂತೆ ಇಂದು ಕೂಡ ಊಟ ಆಯೋಜನೆ ಮಾಡಿದ್ದೇವೆ ಎನ್ನುವ ಉತ್ತರ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv