Tag: ಬಾಗ್ದಾದಿ

  • ಬಾಗ್ದಾದಿ ಹತ್ಯೆ ಬೆನ್ನಲ್ಲೇ ಸಹೋದರಿ ಟರ್ಕಿ ಸೇನೆಯ ವಶಕ್ಕೆ

    ಬಾಗ್ದಾದಿ ಹತ್ಯೆ ಬೆನ್ನಲ್ಲೇ ಸಹೋದರಿ ಟರ್ಕಿ ಸೇನೆಯ ವಶಕ್ಕೆ

    ವಾಷಿಂಗ್ಟನ್: ಇತ್ತೀಚೆಗಷ್ಟೇ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ(ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕ ಸೇನೆ ಹತ್ಯೆ ಮಾಡಿದ್ದು ಇದೀಗ ಈತನ ಸಹೋದರಿಯನ್ನು ಸೋಮವಾರ ಟರ್ಕಿ ಸೇನೆ ವಶಕ್ಕೆ ಪಡೆದಿದೆ.

    ಸೇನೆಯ ವಶವಾದಾಕೆಯನ್ನು ರಶ್ಮಿಯಾ ಅವಾದ್(65) ಎಂದು ಗುರುತಿಸಲಾಗಿದೆ. ಈಕೆಯನ್ನು ಉತ್ತರ ಸಿರಿಯಾದ ಅಜಾಝ್ ಪಟ್ಟಣದ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಈಕೆಯ ಪತಿ ಹಾಗೂ ಸೊಸೆಯನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಮಾಡುತ್ತಿದೆ ಎಂಬ ಹೆಗ್ಗಳಿಕೆಗೆ ಟಿರ್ಕಿ ದೇಶ ಪಾತ್ರವಾಗಿದೆ ಎಂದು ಟರ್ಕಿಯ ಸಂವಹನಕಾರ ಫಹ್ರೆಟಿನ್ ಅಲ್ತುನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಇಸಿಸ್ ಉಗ್ರ ಸಂಘಟನೆಗೆ ಸೇರಿದ ಮಹತ್ವದ ದಾಖಲೆಗಳ ಮಾಹಿತಿ ಆಕೆಯ ಬಳಿ ಸಿಗಬಹುದು. ಅಲ್ಲದೆ ಆಕೆ ಕೂಡ ಉಗ್ರ ಸಂಘಟನೆಯೊAದಿಗೆ ಸಕ್ರಿಯಳಾಗಿದ್ದಳು ಎಂದು ಸೇನೆಯ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

    48 ವರ್ಷದ ಅಬು ಬಕರ್ ಅಲ್ ಬಾಗ್ದಾದಿ ಇರಾಕ್ ನಿವಾಸಿಯಾಗಿದ್ದು, ತನ್ನದೇಯಾದ ಉಗ್ರ ಸಂಘಟನೆಯನ್ನು ಕಟ್ಟಿಕೊಂಡು ಹಿಂಸಾತ್ಮಕ ಭಯೋತ್ಪಾದನೆಯನ್ನು ಆರಂಭ ಮಾಡಿದ್ದನು. ಈತ 2014 ರಲ್ಲಿ ಸಿರಿಯಾ ಮತ್ತು ಇರಾಕ್‌ನಲ್ಲಿ ಒಂದು ಪ್ರದೇಶವನ್ನು ಆಕ್ರಮಣ ಮಾಡಿಕೊಂಡು ಅಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆರಂಭಿಸಿ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದನು. ಇದರ ಜೊತೆಗೆ ಹಲವರ ಶಿರಚ್ಛೇದನ ಕೂಡ ಮಾಡಿದ್ದನು. ಇದನ್ನೂ ಓದಿ:ಬಾಗ್ದಾದಿ ಹತ್ಯೆಯಲ್ಲಿ ಪಾತ್ರ ವಹಿಸಿದ್ದ ಶ್ವಾನದ ವಿಶೇಷತೆ ಏನು? ಕಾರ್ಯಾಚರಣೆಗೆ ಈ ನಾಯಿಯನ್ನೇ ಬಳಸುತ್ತಾರೆ ಯಾಕೆ?

    ಆದರೆ ಇತ್ತೀಚೆಗೆ ಅಮೆರಿಕ ಸೇನಾ ದಾಳಿಗೆ ಹೆದರಿ ಅಲ್ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಳೆದ ಭಾನುವಾರ ಸುದ್ದಿಯಾಗಿತ್ತು. ಆದರೆ ಅಮೆರಿಕ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿದ ಕಾರಣ ಸುದ್ದಿ ಖಚಿತವಾಗಿರಲಿಲ್ಲ. ಆದರೆ ಈ ವಿಚಾರದ ಬಗ್ಗೆ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್, ಪ್ರಪಂಚವನ್ನು ಬೆಚ್ಚಿ ಬೀಳಿಸಿದ್ದ ಉಗ್ರ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಸಾವನ್ನಪ್ಪಿದ್ದಾನೆ. ಬಾಗ್ದಾದಿ ಮತ್ತೆ ಯಾವುದೇ ಮಹಿಳೆ, ಮಕ್ಕಳನ್ನು ಕೊಲ್ಲಲು ಆಗುವುದಿಲ್ಲ. ಅವನು ನಾಯಿಯಂತೆ ಸತ್ತನು. ಹೇಡಿಯಂತೆ ಸಾವನ್ನಪ್ಪಿದ್ದಾನೆ. ಈಗ ಪ್ರಪಂಚ ಇನ್ನೂ ಸುರಕ್ಷಿತವಾಗಿದೆ ಎಂದು ಹೇಳಿದ್ದರು.

    ಬಾಗ್ದಾದಿಯನ್ನು ಕೊಲ್ಲಲು ವರ್ಷಗಳಿಂದ ಕಾದು ಕುಳಿತಿದ್ದ ಅಮೆರಿಕ ವಿಶೇಷ ಸೇನಾ ಪಡೆ, ಆತ ವಾಯುವ್ಯ ಸಿರಿಯಾ ಪ್ರದೇಶದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿತ್ತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಹೆಲಿಕಾಪ್ಟರ್ ದಾಳಿಯಲ್ಲಿ ಬಾಗ್ದಾದಿಯ ಉಗ್ರರು ಸಾವನ್ನಪ್ಪಿದ್ದಾರೆ. ದಾಳಿಗೆ ಹೆದರಿದ ಬಾಗ್ದಾದಿ ಸುರಂಗದ ಮೂಲಕ ಓಡಿದ್ದ. ಈ ವೇಳೆ ನಮ್ಮ ಶ್ವಾನ ದಳ ಅವನನ್ನು ಬೆನ್ನಟ್ಟಿದವು. ಸುರಂಗ ಕೊನೆಯಾಗುತ್ತಿದ್ದಂತೆಯೇ ಬಂಧನದ ಭೀತಿಯಲ್ಲಿ ಬಾಗ್ದಾದಿ ತನ್ನ ಮೂರು ಜನ ಮಕ್ಕಳೊಂದಿಗೆ ಆತ್ಮಾಹುತಿ ಬಾಂಬ್ ಸಿಡಿಸಿಕೊಂಡು ಹೇಡಿಯಂತೆ ಸಾವನ್ನಪ್ಪಿದ್ದಾನೆ ಎಂದು ಟ್ರಂಪ್ ಶ್ವೇತ ಭವನದಲ್ಲಿ ಹೇಳಿದ್ದರು.