Tag: ಬಾಗೀನ

  • 2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    2ನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿ – ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ

    ವಿಜಯನಗರ: 2ನೇ ಬಾರಿಗೆ ತುಂಗಭದ್ರಾ ಜಲಾಶಯ (Tungabhadra Dam) ಭರ್ತಿಯಾದ ಹಿನ್ನೆಲೆ ಇಂದು (ಭಾನುವಾರ) ಸಿಎಂ ಸಿದ್ದರಾಮಯ್ಯ (Siddaramaiah) ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

    ವಿಜಯನಗರ ಜಿಲ್ಲೆ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ಗೆ ತಾತ್ಕಾಲಿಕ ಗೇಟ್ ಅಳವಳಡಿಕೆಯ 25 ದಿನಗಳ ಬಳಿಕ ಡ್ಯಾಂ ಭರ್ತಿಯಾಗಿದೆ. ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತೆ ಭರ್ತಿ ಹಿನ್ನೆಲೆ ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಣೆ ಕಾರ್ಯಕ್ರಮದ ಸಲುವಾಗಿ ತುಂಗಭದ್ರಾ ಜಲಾಶಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜಲಾಶಯದ ಸೇತುವೆಯ ಮೇಲೆ ಕನ್ನಡ ಧ್ವಜಗಳು ರಾರಾಜಿಸುತ್ತಿವೆ. ಅಲ್ಲದೇ ತಳಿರು ತೋರಣ, ಬಾಳೆಯಿಂದ ಜಲಾಶಯಯವನ್ನು ಅಲಂಕರಿಸಲಾಗಿದೆ. ಇದನ್ನೂ ಓದಿ: Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    ಕ್ರಸ್ಟ್ ಗೇಟ್ ಕಿತ್ತುಹೋದ ಸಂದರ್ಭದಲ್ಲಿ ಸಿಎಂ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಮತ್ತೆ ಜಲಾಶಯ ತುಂಬುತ್ತೆ. ನಾನು ಬಾಗಿನ ಅರ್ಪಣೆ ಮಾಡಲು ಬರುವೆ ಎಂದು ಹೇಳಿದ್ದರು. ಅದೇ ರೀತಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸಲಿದ್ದಾರೆ. ಬೆಳಗ್ಗೆ 11:0ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಜೊತೆ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್‌ನಲ್ಲಿ ಬೆಂಗಳೂರಿಗರೇ ಫಸ್ಟ್ – ಸೆಪ್ಟೆಂಬರ್‌ನಲ್ಲಿ ಬಿಎಂಟಿಸಿಗೆ ಬರೋಬ್ಬರಿ 8 ಕೋಟಿ ಆದಾಯ

    ಬಾಗಿನ ಅರ್ಪಣೆ ಬಳಿಕ 19ನೇ ಕ್ರಸ್ಟ್ಗೇಟ್ ಅಳವಡಿಕೆ ಕಾಮಗಾರಿಯಲ್ಲಿ ಭಾಗಿಯಾದ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಕೊಪ್ಪಳದ ಮುನಿರಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಗ್ಗೆ 11:55 ಕ್ಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮ ಮುಕ್ತಾಯದ ಬಳಿಕ ಸಂಜೆ 4 ಗಂಟೆಗೆ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಲಿದ್ದಾರೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

  • ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಬಾಗಿನ ಅರ್ಪಣೆ

    ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಬಾಗಿನ ಅರ್ಪಣೆ

    ಚಿಕ್ಕಮಗಳೂರು: ಮಲೆನಾಡನಲ್ಲಿ ಜನ್ಮ ತಾಳಿ ನಾಡಿನ ಜೀವನದಿಯಾಗಿರುವ ಹೇಮಾವತಿಗೆ ಸಂಪ್ರಾದಾಯದಂತೆ ಬಾಗಿನ ಅರ್ಪಿಸಲಾಗಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ಹನಿ-ಹನಿಯಾಗಿ ಜನ್ಮ ತಾಳಿರುವ ಹೇಮಾವತಿ, ಹಾಸನ, ಮೈಸೂರು, ಬೆಂಗಳೂರಿನ ಲಕ್ಷಾಂತರ ಜನ, ಜಾನುವಾರುಗಳ ಜೀವನಾಡಿಯಾಗಿದ್ದಾಳೆ. ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪೂಜಾ ವಿಧಿ-ವಿಧಾನದೊಂದಿಗೆ ಬಾಗೀನ ಅರ್ಪಣೆ ಮಾಡಲಾಗಿದೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರು ಬಾಗಿನ ಸಮರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಜಾವಳಿ ಗ್ರಾಮದ ಗಣಪತಿ ದೇವಸ್ಥಾನದ ಬಳಿ ಇರುವ ಕಲ್ಯಾಣಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

    ಈ ಬಾರಿ ಉತ್ತಮ ಹಾಗೂ ಸಮೃದ್ಧ ಮಳೆಯಾಗಿದೆ. ಮಳೆಯಿಂದ ಕಷ್ಟ-ನಷ್ಟದ ಪ್ರಮಾಣವೂ ಸಂರ್ಪೂಣ ತಗ್ಗಿದೆ. ಹೀಗಾಗಿ ಮಲೆನಾಡಿನ ಜನ ಕೂಡ ಸಂತಸದಿಂದ್ದಾರೆ. ಕಳೆದ ಎರಡ್ಮೂರು ವರ್ಷವೂ ಹೇಮಾವತಿಯ ಅಬ್ಬರದಿಂದಾದ ಅನಾಹುತಗಳಿಂದ ಜನ ಇಂದಿಗೂ ಹೊರಬಂದಿಲ್ಲ. ಜೀವನಕ್ಕಾಗಿ ಪರದಾಡುತ್ತಲೇ ಇದ್ದಾರೆ. ಆದರೆ ಈ ವರ್ಷ ತಕ್ಕಮಟ್ಟಿಗೆ ಶಾಂತನಾಗಿರೋ ವರುಣದೇವನಿಂದ ಹೇಮಾವತಿಯೂ ಶಾಂತಳಾಗಿದ್ದು, ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿ ಹಾಸನ ಜಿಲ್ಲೆಯ ಹೃದಯವಾಗಿರೋ ಹೇಮಾವತಿ ಮೈಸೂರಿನಿಂದ ಬೆಂಗಳೂರಿಗೆ ಹರಿಯುತ್ತಾಳೆ. ಲಕ್ಷಾಂತರ ಜನರ ಬಾಯಾರಿಕೆ ನೀಗಿಸಿ ತಮಿಳುನಾಡಿನತ್ತವೂ ಹರಿಯುತ್ತಾಳೆ. ಅಂತಹ ಜೀವದಾತೆಗೆ ಇಂದು ಸಂಭ್ರಮದಿಂದ ಬಾಗಿನ ಅರ್ಪಣೆ ಮಾಡಲಾಗಿದೆ.

  • 15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    15 ವರ್ಷಗಳ ಬಳಿಕ ತುಂಬಿದ ಕೋಲಾರದ ಕೆರೆ- ನೀರಲ್ಲಿ ಕುಣಿದು ಕುಪ್ಪಳಿಸಿದ ಬಯಲುಸೀಮೆ ಜನ

    – ರಮೇಶ್ ಕುಮಾರ್ ಸೇರಿ ಮೂರು ಪಕ್ಷದ ಗಣ್ಯರಿಂದ ಬಾಗಿನ ಅರ್ಪಣೆ

    ಕೋಲಾರ: ನದಿ, ನಾಲೆಗಳಿಲ್ಲದ ಬರಗಾಲದ ಜಿಲ್ಲೆ, ಮಳೆ ಬರುವುದೇ ಅಪರೂಪ. ಪ್ರತಿ ವರ್ಷ ಯಾವಾಗ ಮಳೆ ಬರುತ್ತೋ ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆ ರಾತ್ರೋರಾತ್ರಿ ಸುಂದರ, ನಯನ ಮನೋಹರ, ರಮಣೀಯ ಸ್ಥಳವನ್ನು ಸೃಷ್ಟಿಸಿದೆ. ಈ ಸ್ಥಳವನ್ನು ನೋಡಲು ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಬಂದಿದ್ದು, ರಾಜಕಾರಣಿಗಳು, ಅಧಿಕಾರಿಗಳ ದಂಡು ಸಹ ಬೀಡು ಬಿಟ್ಟಿದೆ.

    ಮಳೆಯಿಂದಾಗಿ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 15 ವರ್ಷಗಳ ಬಳಿಕ ಈ ಬಾರಿ ತುಂಬಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿ, ನಾಲೆಗಳಿಲ್ಲದ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ, ಹೀಗಿರುವಾಗ ಕಳೆದ ಹದಿನೈದು ವರ್ಷಗಳಿಂದ ಸರಿಯಾದ ಮಳೆ ಇಲ್ಲದೆ ಒಣಗಿ ಹೋಗಿದ್ದ ಎಸ್.ಅಗ್ರಹಾರ ಕೆರೆಗೆ ಸದ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದೆ.

    ಇದರ ಜೊತೆಗೆ ಇತ್ತೀಚೆಗೆ ಜಿಲ್ಲೆಯಲ್ಲಿ ಒಳ್ಳೆಯ ಮಳೆಯಾದ ಪರಿಣಾಮ ಸುಮಾರು 1,200 ಎರಕೆಯಷ್ಟು ವಿಸ್ತೀರ್ಣ ಹೊಂದಿರುವ ಅಗ್ರಹಾರ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈ ವಿಷಯ ತಿಳಿದ ಜಿಲ್ಲೆಯ ಜನರು, ಬರದ ಭೂಮಿಯಲ್ಲಿ ಇಂಥಹದ್ದೊಂದು ನಯನ ಮನೋಹರ ದೃಷ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಅಗ್ರಹಾರ ಕೆರೆಯತ್ತ ಹರಿದು ಬರುತ್ತಿದ್ದಾರೆ. ಬರದ ನಾಡಲ್ಲಿ ಸುಂದರ ಜಲಧಾರೆಯನ್ನು ಹರಿಯುವುದನ್ನು ಅನುಭವಿಸುತ್ತಿದ್ದಾರೆ. ಇದೇ ವೇಳೆ ಹರಿಯುತ್ತಿರುವ ನೀರಿಗೆ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ.

    ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಕೆ.ಸಿ.ವ್ಯಾಲಿ ಯೋಜನೆಯಿಂದ ಈಗಾಗಲೇ ಜಿಲ್ಲೆಯಲ್ಲಿ 75 ಕೆರೆಗಳು ತುಂಬಿವೆ. ಆದರೆ ಜಿಲ್ಲೆಯ ಅತಿ ದೊಡ್ಡ ಎಸ್.ಆಗ್ರಹಾರ ಕೆರೆ ತುಂಬಿದ್ದು ಜಿಲ್ಲೆಯ ಜನರಲ್ಲಿ ಪರಮಾನಂದವನ್ನುಂಟು ಮಾಡಿದೆ. ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಹೀಗಾಗಿ ತುಂಬಿ ಹರಿಯುತ್ತಿದ್ದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲು ಪಕ್ಷಾತೀತವಾಗಿ ರಾಜಕಾರಣಿಗಳ ದಂಡು ಡೋಲು ವಾದ್ಯ ಸಮೇತ ಆಗಮಿಸಿತ್ತು.

    ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಶಾಸಕ ಶ್ರೀನಿವಾಸಗೌಡ, ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಮುನಿಸ್ವಾಮಿ ಹೀಗೆ ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಆಗಮಿಸಿ ಅಗ್ರಹಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಮುಖಂಡರು ಇದೊಂದು ಸುಂದರ ಪ್ರವಾಸಿ ತಾಣವಾಗಿಸಿ ಅಭಿವೃದ್ಧಿ ಪಡಿಸಬೇಕೆಂದು ಅಭಿಪ್ರಾಯ ಪಟ್ಟರು. ಜೊತೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುತ್ತಿರುವ ಯೋಜನೆ ದೇಶಕ್ಕೆ ಹಾಗೂ ವಿಶ್ವಕ್ಕೆ ಮಾದರಿ ಎಂದರು.

    ಬರದ ನಾಡು ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ವರವಾಗಿ ಪರಿಣಮಿಸಿದ್ದು, ಯೋಜನೆಯಿಂದ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದೆ. ಜನರು ಕೂಡಾ ಯೋಜನೆಯಿಂದಾಗುತ್ತಿರುವ ಬದಲಾವಣೆಯನ್ನು ಸಂತೋಷವಾಗಿ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಬರಗಾಲದ ಹಣೆ ಪಟ್ಟಿ ಕಳಚಲಿ ಅನ್ನೋದು ಜನರ ಮಾತಾಗಿದೆ.