Tag: ಬಾಗಿಮ

  • ಮೊದಲ ಬಾರಿಗೆ ಗೌರಿ ಹಬ್ಬದಂದು ಕೆಆರ್‌ಎಸ್‌ಗೆ ಸಿಎಂ ಬಿಎಸ್‍ವೈ ಬಾಗಿನ

    ಮೊದಲ ಬಾರಿಗೆ ಗೌರಿ ಹಬ್ಬದಂದು ಕೆಆರ್‌ಎಸ್‌ಗೆ ಸಿಎಂ ಬಿಎಸ್‍ವೈ ಬಾಗಿನ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೆಆರ್‌ಎಸ್‌ ಡ್ಯಾಂ ತುಂಬಿದ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಗೌರಿ ಹಬ್ಬದಂದು ಬಾಗಿನ ಅರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ಗೆ ಐದನೇ ಬಾರಿಗೆ ಬಾಗಿನ ಅರ್ಪಣೆ ಮಾಡಲಿರುವ ಸಿಎಂ ಬಿಎಸ್‍ವೈ

    ಸಂಪ್ರದಾಯದಂತೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಸಿಎಂ ಯಡಿಯೂರಪ್ಪ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ ಅಭಿಜಿತ್ ಮುಹೂರ್ತದಲ್ಲಿ ಸಿಎಂ ಯಡಿಯೂರಪ್ಪ ಬಾಗಿನ ಸರ್ಮಪಿಸಲಿದ್ದಾರೆ. ಇದೇ ಮೊದಲ ಬಾರಿಗೆ ಗೌರಿ ಹಬ್ಬದಂದು ಕೆಆರ್‌ಎಸ್‌ಗೆ ಬಾಗಿನ ಸಮರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ. ಹೀಗಾಗಿ ಬಾಗಿನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

    ತಳಿರು ತೋರಣ ಕಟ್ಟಿ ಮದುವಣಗಿತ್ತಿಯಂತೆ ಸಿಂಗಾರ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮತ್ತೊಂದು ವಿಶೇಷತೆ ಎಂದರೆ 5ನೇ ಬಾರಿಗೆ ಕೆಆರ್‌ಎಸ್‌ ಡ್ಯಾಂಗೆ ಸಿಎಂ ಯಡಿಯೂರಪ್ಪ ಬಾಗಿನ ಬಿಡುತ್ತಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಸಿಎಂ ಎಂಬ ಹೆಗ್ಗಳಿಕೆ‌ಗೆ ಯಡಿಯೂರಪ್ಪ ಪಾತ್ರರಾಗಿದ್ದಾರೆ.

    ಖ್ಯಾತ ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ. ಸಚಿವರಾದ ರಮೇಶ್ ಜಾರಕಿಹೊಳಿ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಸೇರಿದಂತೆ ಮೈಸೂರು, ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಸಂಸದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಕೊರೊನಾದಿಂದ ಗುಣಮುಖರಾದ ನಂತರ ಸಿಎಂ ಯಡಿಯೂರಪ್ಪ ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತಿದ್ದಾರೆ. ಸಿಎಂ ಕೊರೊನಾ ಪ್ರಾರಂಭವಾದಗಿನಿಂದಲೂ ಜಿಲ್ಲಾ ಪ್ರವಾಸ ಮಾಡಿರಲಿಲ್ಲ. ಇಂದು ಬಾಗಿನ ಸಮರ್ಪಣೆ ಮಾಡುವ ಮೂಲಕ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಇದೇ ವೇಳೆ ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೂ ಸಿದ್ಧತೆ ಮಾಡಲಾಗಿದೆ. ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನಕ್ಕೆ ತೀರ್ಮಾನ ಮಾಡಲಾಗಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಘಟನೆಗಳು ಪ್ರತಿಭಟನೆ‌ಗೆ ಸಿದ್ಧತೆ ನಡೆಸಿವೆ.