Tag: ಬಾಕ್ಸಿಂಗ್ ಡೇ ಟೆಸ್ಟ್

  • ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ದಿಗ್ಗಜ ಆಟಗಾರರ ಪಟ್ಟಿಗೆ ರಾಹುಲ್ ಸೇರ್ಪಡೆ

    ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ದಿಗ್ಗಜ ಆಟಗಾರರ ಪಟ್ಟಿಗೆ ರಾಹುಲ್ ಸೇರ್ಪಡೆ

    ಮುಂಬೈ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಲ್ಲಾ ತಂಡಗಳಿಗೂ ವಿಶೇಷ. ಅದರಲ್ಲೂ ಭಾರತ ತಂಡ ವಿದೇಶಕ್ಕೆ ತೆರಳಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನಾಡಿ ಶತಕ ಸಿಡಿಸಿದ ಆಟಗಾರರ ಪಟ್ಟಿಗೆ ಇದೀಗ ಕನ್ನಡಿಗ ಕೆ.ಎಲ್ ರಾಹುಲ್ ಸೇರ್ಪಡೆಗೊಂಡಿದ್ದಾರೆ.

    ಬಾಕ್ಸಿಂಗ್ ಡೇ ಎಂದು ಕರೆಯಲು ಕಾರಣವಿದೆ. ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಕ್ರಿಸ್‍ಮಸ್ ಮರುದಿನ ಅಂದರೆ ಡಿಸೆಂಬರ್ 26ರ ರಜಾದಿನವನ್ನೂ ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಆ ದಿನ ಕ್ರಿಸ್‍ಮಸ್ ದಿನ ಸಿಗುವ ಗಿಫ್ಟ್ ಬಾಕ್ಸ್‌ನ್ನು ತೆರೆಯುವ ದಿನ ಹಾಗಾಗಿ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿದೆ. ಈ ದಿನ ನಡೆಯುವ ಟೆಸ್ಟ್ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಕರೆಯಲಾಗುತ್ತದೆ. ಟೀಂ ಇಂಡಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಪಂದ್ಯವನ್ನು ಆಡುತ್ತದೆ. ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕ ಸಿಡಿಸಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಭಾರತದ 3ನೇ ಆರಂಭಿಕ ಆಟಗಾರ ಎಂಬ ಮೈಲಿಗಲ್ಲು ನೆಟ್ಟಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ – ಒಂದೂ ಎಸೆತ ಕಾಣದೇ ಎರಡನೇ ದಿನದಾಟ ರದ್ದು

    ಈ ಹಿಂದೆ ಭಾರತದ ಪರ 1998ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಅಜರುದ್ದೀನ್ 103 ರನ್ ಸಿಡಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ವೀರೇಂದ್ರ ಸೆಹ್ವಾಗ್ 195 ರನ್ ಸಿಡಿಸಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಎರಡನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು ಇದೀಗ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ  ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ರಾಹುಲ್ ಶತಕದಾಟ – ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಭವ

  • ಆಸೀಸ್‌ ನೆಲದಲ್ಲೇ ತಿರುಗೇಟು – ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    ಆಸೀಸ್‌ ನೆಲದಲ್ಲೇ ತಿರುಗೇಟು – ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    – ರಹಾನೆಗೆ ಪಂದ್ಯಶ್ರೇಷ್ಠ ಗೌರವ
    – ಸರಣಿ ಸಮಬಲಗೊಳಿಸಿದ ಭಾರತ

    ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಗೆದ್ದುಕೊಳ್ಳುವ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 200 ರನ್‌ಗಳಿಗೆ ಆಲೌಟ್‌ ಆಯ್ತು. 70 ರನ್‌ಗಳ ಟಾರ್ಗೆಟ್‌ ಪಡೆದ ಭಾರತ 2 ವಿಕೆಟ್‌ ಕಳೆದುಕೊಂಡು ಗುರಿಯನ್ನು ತಲುಪಿತು.

    ಶುಭಮನ್‌ ಗಿಲ್‌ ಔಟಾಗದೇ 35 ರನ್‌, ಅಜಿಂಕ್ಯ ರಹಾನೆ ಔಟಾಗದೇ 27 ರನ್‌ ಹೊಡೆದರು. ಭಾರತದ ಪರ ಸಿರಾಜ್‌ 3 ವಿಕೆಟ್‌, ಬುಮ್ರಾ, ಅಶ್ವಿನ್‌, ಜಡೇಜಾ ತಲಾ 2 ವಿಕೆಟ್‌ ಕಿತ್ತರು. ಉಮೇಶ್‌ ಯಾದವ್‌ 1 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್‌ ಸಿಡಿಸಿ ತಂಡವನ್ನು ಪಾರು ಮಾಡಿದ ನಾಯಕ ರಹಾನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

    ಆಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು. ಈಗ ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪ್ರದರ್ಶನದಿಂದ ತವರು ನೆಲದಲ್ಲೇ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದೆ. ಮೂರನೇ ಟೆಸ್ಟ್‌ ಪಂದ್ಯ ಜ.7 ರಿಂದ ಸಿಡ್ನಿಯಲ್ಲಿ ನಡೆಯಲಿದೆ.

    ಸಂಕ್ಷಿಪ್ತ ಸ್ಕೋರ್‌
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 195 ರನ್‌
    ಭಾರತ ಮೊದಲನೇ ಇನ್ನಿಂಗ್ಸ್‌ 326
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 200 ರನ್‌
    ಭಾರತ ಎರಡನೇ ಇನ್ನಿಂಗ್ಸ್‌ 2ವಿಕೆಟ್‌ ನಷ್ಟಕ್ಕೆ 70 ರನ್‌

  • ಅರ್ಧದಲ್ಲೇ ಮೈದಾನ ತೊರೆದ ಉಮೇಶ್ ಯಾದವ್

    ಅರ್ಧದಲ್ಲೇ ಮೈದಾನ ತೊರೆದ ಉಮೇಶ್ ಯಾದವ್

    ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಇದೀಗ ಮತ್ತೊಂದು ಅಘಾತ ಎದುರಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತದ ಬಲಗೈ ವೇಗದ ಬೌಲರ್ ಉಮೇಶ್ ಯಾದವ್ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದಾರೆ.

    ಮೂರನೇ ದಿನದಾಟದ ಆರಂಭದಲ್ಲಿ ಬೌಲಿಂಗ್‍ಗಿಳಿದ ಉಮೇಶ್ ಯಾದವ್ ತಮ್ಮ 4ನೇ ಓವರ್ ಪೂರ್ಣಗೊಳಿಸಲಾಗದೆ ಪೆವಿಲಿಯನ್ ಸೇರಿಕೊಂಡರು. ಮೀನಖಂಡದ ನೋವಿಗೆ ಒಳಗಾದ ಉಮೇಶ್ ಫಿಸಿಯೋ ನಿತೀನ್ ಪಟೇಲ್ ಅವರ ಸಲಹೆಯ ಮೆರೆಗೆ ತಕ್ಷಣ ಮೈದಾನ ತೊರೆಯಬೇಕಾಯಿತು.

    ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಉಮೇಶ್ ಯಾದವ್ ತಮ್ಮ ನಾಲ್ಕನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಮೀನಖಂಡದ ನೋವಿಗೊಳಗಾಗಿದ್ದಾರೆ. ತಕ್ಷಣ ಬಿಸಿಸಿಐ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸಿದ್ದು, ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿದೆ ಎಂದು ಹೇಳಿಕೆ ನೀಡಿದೆ.  ಇದನ್ನೂ ಓದಿ: ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

    ದ್ವಿತಿಯ ಇನ್ನಿಂಗ್ಸ್ ಬ್ಯಾಟಿಂಗ್‍ಗಿಳಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಜೋ ಬ‌ರ್ನ್ಸ್‌ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ತಂದು ಕೊಟ್ಟ ಯಾದವ್, 3.3 ಓವರ್‍ಗಳಲ್ಲಿ 5 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ತಮ್ಮ ನಾಲ್ಕನೇ ಓವರ್‍ನ ಮೂರು ಬಾಲ್ ಬಾಕಿ ಇರುವಂತೆ ಮೈದಾನದಿಂದ ಹೊರ ನಡೆದ ಉಮೇಶ್ ಯಾದವ್ ಅವರ ಓವರ್‍ನ ಮುಂದಿನ ಮೂರು ಎಸೆತವನ್ನು ಮೊದಲ ಪಂದ್ಯವಾಡುತ್ತಿರುವ ವೇಗಿ ಸಿರಾಜ್ ಪೂರ್ಣಗೊಳಿಸಿದರು.

    ಆಸ್ಟ್ರೇಲಿಯಾ ಸರಣಿಯ ಆರಂಭದಲ್ಲಿ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಹೊರಗುಳಿದಿದ್ದರೆ, ಟೂರ್ನಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಶಮಿ ತಂಡದಿಂದ ಈಗಾಗಲೇ ಬೇರ್ಪಟ್ಟಿದ್ದಾರೆ. ಇದೀಗ ಉಮೇಶ್ ಯಾದವ್ ಅವರ ಗಾಯದಿಂದಾಗಿ ಟೀ ಇಂಡಿಯಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.

  • ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

    ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

    – ಜಡೇಜಾ ಆಲ್‌ರೌಂಡರ್‌ ಆಟ

    ಮೆಲ್ಬರ್ನ್‌: ಎರಡನೇ ಟೆಸ್ಟ್‌ ಪಂದ್ಯದಲ್ಲೂ ಬೌಲರ್‌ಗಳು ಆಟ ಮುಂದುವರಿದಿದ್ದು ಇಂದು 11 ವಿಕೆಟ್‌ಗಳು ಪತನಗೊಂಡಿದೆ. ಆಸ್ಟ್ರೇಲಿಯಾ 2 ರನ್‌ಗಳ ಅಲ್ಪ ಮುನ್ನಡೆ ಪಡೆದುಕೊಂಡಿದೆ.

    277 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ ಇಂದು 326 ರನ್‌ಗಳಿಗೆ ಆಲೌಟ್‌ ಆಯ್ತು. ನಿನ್ನೆ 104 ರನ್‌ ಗಳಿಸಿದ್ದ ಅಜಿಂಕ್ಯಾ ರಹಾನೆ ಇಂದು 112 ರನ್‌ ಗಳಿಸಿ ಔಟಾದರು. 40 ರನ್‌ ಗಳಿಸಿದ್ದ ಜಡೇಜಾ ಅವರು 57 ರನ್‌ಗಳಿಸಿ ಔಟಾದರು.

    131 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಬೌಲರ್‌ಗಳು ಕಾಡಿದರು. ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 133 ರನ್‌ ಗಳಿಸಿದೆ.

    ಮ್ಯಾಥ್ಯು ವೇಡ್‌ 40 ರನ್‌, ಮಾರ್ನಸ್‌ ಲಬುಶೇನ್ 28 ರನ್‌, ಟ್ರಾವಿಸ್‌ ಹೆಡ್‌ 17 ರನ್‌ ಗಳಿಸಿ ಔಟಾದರು. ಕ್ಯಾಮೆರಾನ್‌ ಗ್ರೀನ್‌ 17 ರನ್‌, ಪ್ಯಾಟ್‌ ಕಮಿನ್ಸ್‌ 15 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

    ಜಡೇಜಾ 25 ರನ್‌ ನೀಡಿ 2 ವಿಕೆಟ್‌ ಕಿತ್ತಿದ್ದಾರೆ. ಜಸ್‌ ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ , ಅಶ್ವಿನ್‌ ತಲಾ ಒಂದು ವಿಕೆಟ್‌ ಕಿತ್ತಿದ್ದಾರೆ.

    ಸಂಕ್ಷಿಪ್ತ ಸ್ಕೋರ್‌
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 195/10
    ಭಾರತ ಮೊದಲ ಇನ್ನಿಂಗ್ಸ್‌ 326/10
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 133/6

  • ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    ಬಾಕ್ಸಿಂಗ್‌ ಡೇ ಟೆಸ್ಟ್‌ – 11 ವಿಕೆಟ್‌ ಪತನ, ಚರ್ಚೆಗೆ ಗ್ರಾಸವಾದ ರನೌಟ್‌ ನಿರ್ಧಾರ

    – ಆಸ್ಟ್ರೇಲಿಯಾ 195 ರನ್‌ಗಳಿಗೆ ಆಲೌಟ್‌
    – ಭಾರತ 1 ವಿಕೆಟ್‌ ನಷ್ಟಕ್ಕೆ 36 ರನ್‌

    ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ 11 ವಿಕೆಟ್‌ಗಳು ಪತನಗೊಂಡಿದೆ. ಈ ಮೂಲಕ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಬೌಲರ್‌ಗಳ ಆರ್ಭಟ ಮುಂದುವರಿದಿದೆ.

    ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಟಿಮ್ ಪೈನೆ ರನೌಟ್‌ ನೀಡದಿರುವ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 72.3 ಓವರ್‌ಗಳಲ್ಲಿ 195 ರನ್‌ಗಳಿಗೆ ಆಲೌಟ್‌ ಆಯ್ತು.

    ಬುಮ್ರಾ 56 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಅಶ್ವಿನ್‌ 35 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮೊದಲ ಟೆಸ್ಟ್‌ ಪಂದ್ಯವಾಡಿದ ಮೊಹಮ್ಮದ್‌ ಸಿರಾಜ್‌ 40 ರನ್‌ ನೀಡಿ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದರೇನು? ಯಾಕೆ ಈ ಹೆಸರು ಬಂತು?

    ಆಸ್ಟ್ರೇಲಿಯಾದ ಪರವಾಗಿ ಮ್ಯಾಥ್ಯೂ ವೇಡ್‌ 30 ರನ್‌, ಮಾರ್ನಸ್‌ ಲಬುಶೇನ್‌ 48 ರನ್‌, ಟ್ರಾವಿಸ್‌ ಹೆಡ್‌ 38 ರನ್‌, ನಥನ್‌ ಲಿಯಾನ್‌ 20 ರನ್‌ ಹೊಡೆದರು.

    ಅಶ್ವಿನ್‌ ಎಸೆದ 55ನೇ ಓವರಿನ ಕೊನೆಯ ಎಸೆತವನ್ನು ಕ್ಯಾಮರಾನ್‌ ಗ್ರೀನ್‌ ಆಫ್‌ ಸೈಡಿಗೆ ಹೊಡೆದು ಓಡಿದರು. ಈ ವೇಳೆ ಬಾಲ್‌ ಉಮೇಶ್‌ ಯಾದವ್‌ ಕೈ ಸೇರಿತ್ತು. ಯಾದವ್‌ ನೇರವಾಗಿ ಕೀಪರ್‌ ರಿಷಬ್‌ಪಂತ್‌ಗೆ ಎಸೆದರು. ಮೂರನೇ ಅಂಪೈರ್‌ ಔಟ್‌ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿ ನಾಟೌಟ್‌ ತೀರ್ಪು ನೀಡಿದರು.

    ರಿಪ್ಲೇಯಲ್ಲಿ ಬೇಲ್ಸ್‌ ಹಾರುವ ಸಮಯದಲ್ಲಿ ಬ್ಯಾಟ್‌ ಗೆರೆಯಿಂದ ಹಿಂದೆ ಇರುವುದು ಸ್ಪಷ್ಟವಾಗಿತ್ತು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆ ನಡೆಯುತ್ತಿದೆ.

    ಆರಂಭದಲ್ಲೇ ಕುಸಿತ:
    ಮೊದಲ ಇನ್ನಿಂಗ್ಸ್‌ ಆರಂಭಿಸಿದ ಭಾರತ ಆರಂಭದಲ್ಲೇ ಕುಸಿತ ಕಂಡಿದ್ದು 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ. ಆರಂಭಿಕ ಆಟಗಾರ ಮಾಯಂಕ್‌ ಅಗರವ್‌ವಾಲ್‌ ಮೊದಲ ಓವರಿನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಮೊದಲ ಪಂದ್ಯ ಆಡುತ್ತಿರುವ ಶುಭಮನ್‌ ಗಿಲ್‌ 28 ರನ್‌ ಚೇತೇಶ್ವರ ಪೂಜಾರ 7 ರನ್‌ಗಳಿಸಿ ನಾಳೆ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

  • ಅರ್ಧ ಶತಕ ಸಿಡಿಸಿದ ಮಯಾಂಕ್‍ಗೆ ಕಿಚ್ಚನ ಶುಭಾಶಯ!

    ಅರ್ಧ ಶತಕ ಸಿಡಿಸಿದ ಮಯಾಂಕ್‍ಗೆ ಕಿಚ್ಚನ ಶುಭಾಶಯ!

    ಬೆಂಗಳೂರು: ಸಿನಿಮಾ, ಬಿಗ್‍ಬಾಸ್ ಶೋ ಅಂತ ಅದೇನೇ ಬ್ಯುಸಿಯಾಗಿದ್ದರೂ ಕ್ರಿಕೆಟ್ ಅನ್ನು ಮಾತ್ರ ತಪ್ಪಿಸದೇ ನೋಡುವವರು ಕಿಚ್ಚ ಸುದೀಪ್. ನಟನೆ ಬಿಟ್ಟರೆ ಕ್ರಿಕೆಟ್ ಅವರ ಆಸಕ್ತಿಯ ಕ್ಷೇತ್ರ. ಇದೀಗ ಅವರು ಟೀಂ ಇಂಡಿಯಾಗೆ ಆಯ್ಕೆಯಾಗಿ ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿರುವ ಕ್ರಿಕೆಟರ್ ಮಯಾಂಕ್ ಅಗರ್ವಾಲ್ ರನ್ನು ಅಭಿನಂದಿಸಿದ್ದಾರೆ. ಇದೇ ಫೋರ್ಸ್ ನೊಂದಿಗೆ ಮುಂದುವರೆಯುವಂತೆ ಸ್ಫೂರ್ತಿಯನ್ನೂ ತುಂಬಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯಾಟದಲ್ಲಿ ಮಾಯಾಂಕ್ 76 ರನ್ ಗಳಿಸಿ ಕ್ರಿಕೆಟ್ ಪ್ರೇಮಿಗಳನ್ನು ಖುಷಿಗೊಳಿಸಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ದಾಖಲೆಯನ್ನೂ ಮುರಿದಿದ್ದಾರೆ. ಈ ಅಮೋಘ ಸಾಧನೆಯನ್ನು ಸುದೀಪ್ ಟ್ವಿಟ್ಟರ್ ಮೂಲಕ ಕೊಂಡಾಡಿದ್ದಾರೆ. ನಿಮ್ಮ ಆಟ ನಿಜಕ್ಕೂ ರೋಚಕವಾಗಿತ್ತು. ಅದ್ಭುತವಾಗಿ ಆಡಿದ್ದೀರಿ. ಇಂಥಾ ಹತ್ತಾರು ಟೂರ್ನಿಗಳನ್ನ ನೀವು ಗೆಲ್ಲುವಂತಾಗಲಿ ಅಂತ ಕಿಚ್ಚ ಹಾರೈಸಿದ್ದಾರೆ.

    ಮಯಾಂಕ್ ಅಗರ್ವಾಲ್ ಕರ್ನಾಟಕದ ಹುಡುಗ. ಆರಂಭದಲ್ಲಿ ಇವರನ್ನು ಟೀಮಿನಿಂದ ಕೈ ಬಿಡಲಾಗಿತ್ತು. ಆದರೆ ಪೃಥ್ವಿ ಗಾಯ ಗೊಂಡಾಗ ಕೊನೆಯ ಎರಡು ಟೆಸ್ಟ್ ಪಂದ್ಯಾಟಗಳಿಗಾಗಿ ಮಯಾಂಕ್ ರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶವನ್ನು ಚೆಂದಗೆ ಬಳಸಿಕೊಂಡ ಮಯಾಂಕ್ ಗೆ ಎಲ್ಲೆಡೆಯಿಂದ ಅಭಿನಂದನೆಗಳು ಬರುತ್ತಿವೆ. ಈ ಕನ್ನಡದ ಹುಡುಗನ ಸಾಧನೆಯನ್ನು ಕಿಚ್ಚ ಕೂಡಾ ಈ ಮೂಲಕ ಮೆಚ್ಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv