Tag: ಬಾಂಬ್ ಸ್ಟೋಟ

  • ಶ್ರೀಲಂಕಾದಲ್ಲಿ 7 ಮಂದಿ ಜೆಡಿಎಸ್ ಕಾರ್ಯಕರ್ತರು ನಾಪತ್ತೆ – ಸಿಎಂ

    ಶ್ರೀಲಂಕಾದಲ್ಲಿ 7 ಮಂದಿ ಜೆಡಿಎಸ್ ಕಾರ್ಯಕರ್ತರು ನಾಪತ್ತೆ – ಸಿಎಂ

    – ಇದೂವರೆಗೆ 6 ಮಂದಿ ಕನ್ನಡಿಗರು ಬಲಿ
    – ಟ್ವೀಟ್ ಮೂಲಕ ಸಿಎಂ ಸಂತಾಪ

    ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಈವರೆಗೆ ಆರು ಮಂದಿ ಕನ್ನಡಿಗರು ಬಲಿಯಾಗಿದ್ದು, 3 ಮಂದಿ ನಾಪತ್ತೆಯಾಗಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಭಾನುವಾರ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಈವರೆಗೆ ಕರ್ನಾಟಕದ ಆರು ಮಂದಿ ಬಲಿಯಾಗಿದ್ದು, 3 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ಈ ದುರ್ಘಟನೆ ಬಗ್ಗೆ ಕೇಳಿ ಆಘಾತ ಹಾಗೂ ನೋವಾಗಿದೆ. ಕಳೆದು ಹೋದವರ ಬಗ್ಗೆ ಪತ್ತೆ ಹಚ್ಚಲು ನಾನು ಶ್ರೀಲಂಕಾದಲ್ಲಿರುವ ಭಾರತ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಹಾಗೆಯೇ ಕಳೆದ ಏ. 18ರಂದು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ 8 ಮಂದಿ ಕನ್ನಡಿಗರು ಪಬ್ಲಿಕ್ ಟಿವಿ ಸಂಪರ್ಕಕ್ಕೆ ಸಿಕ್ಕಿದ್ದು, ಸದ್ಯ ನಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ನಿನ್ನೆ ಶಾಂಗ್ರಿಲಾ ಹೋಟೆಲ್‍ನಲ್ಲಿ ಬ್ಲಾಸ್ಟ್ ಸಂಭವಿಸಿದ್ದ ಸಮಯದಲ್ಲಿ ನಾವೆಲ್ಲಾ ಪಕ್ಕದ ಹಿಲ್ಟನ್ ಹೋಟೆಲ್‍ನಲ್ಲಿ ಇದ್ದೇವು. ಸರಣಿ ಬಾಂಬ್ ಸ್ಫೋಟ ನಡೆದ ಹಿನ್ನೆಲೆ ನಮ್ಮನ್ನು ಕೊಲಂಬೋದಿಂದ 80-100 ಕಿ.ಮೀ ದೂರದಲ್ಲಿರುವ ಬೆಂಟಾಕ್‍ನ ರಾಯಲ್ ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದಾರೆ. ನಾವು ಸುರಕ್ಷಿತವಾಗಿದ್ದೇವೆ. ಮಂಗಳವಾರ ನಮಗೆ ಭಾರತಕ್ಕೆ ಮರಳಲು ವಿಮಾನ ಬುಕ್ ಆಗಿದೆ. ಇಲ್ಲಿ ಯಾವ ಸಾಮಾಜಿಕ ಜಾಲತಾಣಗಳ ಮೂಲಕವೂ ಸಂಪರ್ಕಿಸಲು ಆಗುತ್ತಿಲ್ಲ. ಇಲ್ಲಿ ಭಯದ ವಾತಾವರಣ ಇದೆ. ಸದ್ಯ ಎಲ್ಲೆಡೆ ಬಿಗಿ ಭದ್ರತೆಯಿದ್ದು, ನಾವು ಕ್ಷೇಮವಾಗಿ ಹಿಂದಿರುಗಲು ನಮಗಾಗಿ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕೊಲಂಬೋದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ ಜೆಡಿಎಸ್‍ನ ಏಳು ಮಂದಿಯ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ನಾನು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ನೆಲಮಂಗಲದ ಜೆಡಿಎಸ್ ಮುಖಂಡ ಕೆ.ಜಿ ಹನುಮಂತರಾಯಪ್ಪ, ಶಿವಕುಮಾರ್, ಲಕ್ಷ್ಮೀನಾರಾಯಣ, ಗುತ್ತಿಗೆದಾರ ಎಂ. ರಂಗಪ್ಪ, ಮಂಗಳೂರಿನ ಬೈಕಂಪಾಡಿ ಮೂಲದ ರಝೀನಾ ಖಾದರ್ ಕುಕ್ಕಾಡಿ(58), ತುಮಕೂರಿನ ರಮೇಶ್ ಸಾವನ್ನಪ್ಪಿದ್ದಾರೆ. ಹನುಮಂತರಾಯಪ್ಪ ಹಾಗೂ ಗುತ್ತಿಗೆದಾರ ರಂಗಪ್ಪ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಎರಡು ದಿನದ ಹಿಂದೆ ಬೆಂಗಳೂರಿನಿಂದ ಶ್ರೀಲಂಕಾಗೆ ನೆಲಮಂಗಲ ಮೂಲದ ಎಂಟು ಮಂದಿ ಪ್ರವಾಸ ಕೈಗೊಂಡಿದ್ದರು. ಭಾನುವಾರ ಕೊಲಂಬೋದ 8 ಕಡೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ಬಾಂಬ್ ದಾಳಿ ಬಳಿಕ ಶಿವಕುಮಾರ್, ಲಕ್ಷ್ಮಿ ನಾರಾಯಣ, ಮಾರೇಗೌಡ, ಪುಟ್ಟರಾಜು ಸೇರಿ ಒಟ್ಟು 8 ಮಂದಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಆದ್ರೆ ಈ 5 ಮಂದಿ ಪೈಕಿ ಇಬ್ಬರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆ ಖಚಿತ ಪಡಿಸಿದೆ. ನಾಪತ್ತೆಯಾಗಿರುವ ಉಳಿದ 3 ಮಂದಿಯ ಕುಟುಂಬಸ್ಥರು ಆತಂಕಗೊಂಡಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈವರೆಗೆ ವರದಿಯಾಗಿರುವ ಪ್ರಕಾರ ಬಾಂಬ್ ಸ್ಪೋಟದಲ್ಲಿ 290 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಶ್ರೀಲಂಕಾ ಪೊಲೀಸರು 24 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    https://www.youtube.com/watch?v=jvBLPGO1dVk