ಮುಂಬೈ: ಜೀವನದಲ್ಲಿ ನಡೆಯೋ ಕೆಲವೊಂದು ಕೆಟ್ಟ ಸನ್ನಿವೇಶಗಳನ್ನ ಮೆಟ್ಟಿ ನಿಂತು ನಾನು ಸಮರ್ಥವಾಗಿ ಬದುಕಬಲ್ಲೇ ಅನ್ನೋದನ್ನ ಈ ಯುವತಿಗಿಂತ ಬೇರ್ಯಾರು ಉತ್ತಮವಾಗಿ ಕಲಿಸಲು ಸಾಧ್ಯವಿಲ್ಲ ಅಂದ್ರೆ ತಪ್ಪಾಗಲ್ಲ. ತನ್ನ 13ನೇ ವಯಸ್ಸಿನಲ್ಲಿ ಬಾಂಬ್ ಬ್ಲಾಸ್ಟ್‍ನಲ್ಲಿ ಎರಡೂ ಕೈ ಕಳೆದುಕೊಂಡು, ಸದ್ಯ ಮೋಟಿವೇಷನಲ್ ಸ್ಪೀಕರ್ ಆಗಿರೋ ಮುಂಬೈನ ಮಾಳವಿಕಾ ಐಯ್ಯರ್ ಅವರ ಸಾಧನೆಯ ಕಥೆ ಇದು.

ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ ಮಾಳವಿಕಾ, ಅದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯವೇ ಬೇಕಾಯಿತು. ಆದ್ರೆ ಅವರು ಬದುಕುಳಿದಿದ್ದು ಮಾತ್ರವಲ್ಲ, ಇತರರಿಗೆ ಸ್ಫೂತಿಯಾಗುವಂತೆ ಈಗ ತಮ್ಮ ಬದುಕನ್ನೇ ಬದಲಾಯಿಸಿದ್ದಾರೆ. ಮಾಳವಿಕಾ ಬದುಕಿನ ಕಥೆಯನ್ನ ಹ್ಯೂಮನ್ಸ್ ಆಫ್ ಬಾಂಬೇ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಎಂಥವರಿಗೂ ಸ್ಫೂರ್ತಿಯಾಗುವಂತಿದೆ ಇವರ ಸ್ಟೋರಿ.

ಪೋಸ್ಟ್ ನಲ್ಲಿ ಮಾಳವಿಕಾ, ತನ್ನ ಬದುಕನ್ನೇ ಬದಲಿಸಿದ ಒಂದು ಅಪಘಾತದ ಬಗ್ಗೆ ಹೇಳಿದ್ದಾರೆ. ಹತ್ತಿರದ ಯುದ್ಧಸಾಮಗ್ರಿಗಳ ಡಿಪೋದಲ್ಲಿ ಬೆಂಕಿ ಅವಘಡ ಉಂಟಾಗಿ ಅದರ ತುಣುಕುಗಳು ಎಲ್ಲಾ ಕಡೆ ಬಿದ್ದಿದ್ದವು. ನಮ್ಮ ಮನೆಯ ಗ್ಯಾರೇಜ್‍ನಲ್ಲಿ ಗ್ರೆನೇಡ್‍ವೊಂದು ಬಂದು ಬಿತ್ತು. ಅದನ್ನ ಹಿಡಿದುಕೊಂಡಾಗ ಸ್ಫೋಟಗೊಂಡಿತು. ಅದರಿಂದ ನನ್ನ ಎರಡೂ ಕೈಗಳನ್ನ ಕಳೆದುಕೊಂಡೆ. ಕಾಲುಗಳಿಗೂ ತೀವ್ರ ಗಾಯಗಳಾಗಿ ನರಗಳು ಪಾಶ್ರ್ವವಾಯುಗೆ ತುತ್ತಾದವು ಎಂದು ಹೇಳಿದ್ದಾರೆ.

ಮೊದಲಿಗೆ ವ್ಹೀಲ್ ಚೇರ್‍ಗೆ ಸೀಮಿತರಾಗಿದ್ದ ಮಾಳವಿಕಾ ನಂತರ ಮತ್ತೆ ನಡೆದಾಡುವುದನ್ನ ಕಲಿತರು ಹಾಗೂ ಪ್ರಾಸ್ಥೆಟಿಕ್ ಕೈಗಳನ್ನ ಬಳಸುವುದು ಕಲಿತರು. ಅಂದಿನಿಂದ ಮಾಳವಿಕಾ ಹಿಂದೆ ತಿರುಗಿ ನೋಡಲಿಲ್ಲ. ಸಹಾಯಕರೊಬ್ಬರ ನೆರವಿನಿಂದ 10ನೇ ಕ್ಲಾಸ್ ಪರೀಕ್ಷೆ ಪೂರ್ಣಗೊಳಿಸಿದ್ರು, ನಂತರ ಸ್ಟೇಟ್ ರ‍್ಯಾಂಕ್ ಕೂಡ ಪಡೆದರು. ಅನಂತರ ತನ್ನ ವಿದ್ಯಾಭ್ಯಾಸ ಮುಂದುವರೆಸಿ ಪಿಹೆಚ್‍ಡಿ ಕೂಡ ಮಾಡಿದ್ರು. ಮನಸ್ಸು ಮಾಡಿದ್ರೆ ಯಾವುದೇ ಕೆಲಸ ಅಸಾಧ್ಯವಲ್ಲ ಎಂಬುದನ್ನ ಮಾಳವಿಕಾ ಸಾಬೀತು ಮಾಡಿದ್ದಾರೆ.

ನಾನು ಅಪರಿಪೂರ್ಣಳು ಎಂದೆನಿಸುತ್ತಿತ್ತು. ಘಟನೆ ಬಗ್ಗೆ ಮಾತನಾಡುವುದನ್ನ ಅವಾಯ್ಡ್ ಮಾಡ್ತಿದ್ದೆ. ಈ ವೇಳೆ ನನ್ನ ಕುಟುಂಬದವರು ನನ್ನ ಜೊತೆ ನಿಂತರು. ಇದೇ ವೇಳೆ ನನ್ನ ಜೀವನ ಸಂಗಾತಿಯನ್ನ ಭೇಟಿ ಮಾಡಿದೆ. ನಾನು ಅತ್ಯಂತ ಪರಿಪೂರ್ಣ ವ್ಯಕ್ತಿ ಎಂಬಂತೆ ಅವರು ನನ್ನನ್ನು ಕಾಣುತ್ತಿದ್ದರು. ನನ್ನ ಅಂಗೈಕಲ್ಯ ಅವರಿಗೆ ದೊಡ್ಡ ವಿಚಾರವಾಗಿರಲಿಲ್ಲ. ಆದ್ರೆ ನನಗ್ಯಾಕೆ ಅದು ದೊಡ್ಡದೆನಿಸಿತ್ತು? ಹೀಗಾಗಿ ನಾನು ಬದುಕಿರುವುದೇ ಒಂದು ದೊಡ್ಡ ಪವಾಡ ಎಂಬುದನ್ನ ನನಗೆ ನಾನು ನೆನಪಿಸಲು ಶುರು ಮಾಡಿದೆ. ಅಪಘಾತದಿಂದ ಪಾರಾಗಿದ್ದೀನಿ ಅಂದ್ರೆ ನಾನು ಏನು ಬೇಕಾದರೂ ಮಾಡಬಹುದು ಎಂದು ನಂಬಲು ಶುರು ಮಾಡಿದೆ ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ.

ಅನೇಕ ವರ್ಷಗಳ ಅಭದ್ರತೆ, ನನ್ನ ದೇಹವನ್ನ ಮರೆಮಾಚುವುದು, ಅಪರಿಚಿತರಿಂದ ಸಾವಿರಾರು ಪ್ರಶ್ನೆಗಳನ್ನ ಎದುರಿಸಿದ ನಂತರ 2012ರಲ್ಲಿ ನನ್ನ ಅಪಘಾತದ ವಾರ್ಷಿಕೋತ್ಸವದಂದು ನಾನು ನಡೆದ ಘಟನೆಯನ್ನ ವಿವರಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದೆ. ಆ ಪೋಸ್ಟ್ ವೈರಲ್ ಆಯಿತು ಎಂದು ಅವರು ಹೇಳಿದ್ದಾರೆ.
ಟೆಡೆಕ್ಸ್ ನಲ್ಲಿ ತನ್ನ ಮೊದಲ ಭಾಷಣ ಅನಂತರ ಸಾಕಷ್ಟು ಭಾಷಣ ಹಾಗೂ ಸಾಧನೆಗಳ ಬಗ್ಗೆ ಮಾಳವಿಕಾ ಹೇಳಿಕೊಂಡಿದ್ದಾರೆ. ಕಳೆದ ವರ್ಷ ನನಗೆ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ಮಾತನಾಡಲು ಆಹ್ವಾನ ಬಂದಿತ್ತು. ನವದೆಹಲಿಯ ದಿ ವೆರ್ಲ್ಡ್ ಎಕಾನಾಮಿಕ್ಸ್ ಫೋರಂಸ್ ಇಂಡಿಯಾ ಎಕನಾಮಿಕ್ ಸಮಿತ್‍ನಲ್ಲಿ ಪಾಲ್ಗೊಳ್ಳುವ ಅವಕಾಶವೂ ಬಂತು ಎಂದು ಅವರು ತಿಳಿಸಿದ್ದಾರೆ.
ಜೀವನದಲ್ಲಿ ಸಾಕಷ್ಟು ಏರಿಳಿತಗಳಾಗಿವೆ ಎಂಬುದನ್ನ ಮಾಳವಿಕಾ ಒಪ್ಪಿಕೊಳ್ತಾರೆ. ತಡೆದುಕೊಳ್ಳಲಾಗದ ನೋವಿನಿಂದ ಎಷ್ಟೋ ದಿನ ನಾನು ಬದುಕುವುದೇ ಬೇಡ ಎಂದು ಅನ್ನಿಸಿತ್ತು. ಇಂದಿಗೂ ನಾನು ಭಾರತಕ್ಕೆ ಭೇಟಿ ನೀಡಿದಾಗ ಕೃತಕ ಕೈ ಬಳಸದಿದ್ದರೆ ತರತಮ್ಯ ಎದುರಿಸುತ್ತೇನೆ. ಆದ್ರೆ ನಾನು ಅದನ್ನ ಬದಲಾಯಿಸುವ ಮಾರ್ಗದಲ್ಲಿದ್ದೇನೆ. ಸದ್ಯಕ್ಕೆ ನಾನು ನನ್ನ ಮೊಣಕೈ ಯಿಂದಲೇ ಅಡುಗೆ ಮಾಡುವುದನ್ನ ಕಲಿಯುತ್ತಿದ್ದೇನೆ ಎಂದು ಅವರು ಹೇಳ್ತಾರೆ.
ನೀವು ನೀವಾಗಿರುವುದೇ ನಿಮ್ಮ ದೊಡ್ಡ ಶಕ್ತಿ ಎಂಬುದನ್ನ ನಾನು ಜಗತ್ತಿಗೆ ತೋರಿಸಬೇಕಿದೆ. ನನ್ನನ್ನು ನೋಡಿ, ನಾನು ಕೈಗಳಿಲ್ಲದೆ ಪಿಹೆಚ್‍ಡಿ ಮಾಡಿದ್ದೀನಿ. ಕೆಟ್ಟ ಸನ್ನಿವೇಶ ಅಥವಾ ವಿಕಲತೆ ಜೀವನದ ಒಂದು ಭಾಗವಷ್ಟೇ… ಅದೇ ನಿಮ್ಮ ಇಡೀ ಜೀವನದ ಕಥೆಯಲ್ಲ. ನಿಮ್ಮ ಜೀವನದ ಕಥೆಯ ಸುಖಾಂತ್ಯ ಬರೆಯುವವರು- ‘ನೀವು’ ಎಂದು ಮಾಳವಿಕಾ ಪೋಸ್ಟ್ ಕೊನೆಗೊಳಿಸಿದ್ದಾರೆ.
https://www.facebook.com/humansofbombay/photos/a.188058468069805.1073741828.188056068070045/783298078545838/?type=3