Tag: ಬಾಂಗ್ಲಾ ದೇಶ

  • ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 240 ರನ್ ಗೆಲುವು

    ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 240 ರನ್ ಗೆಲುವು

    ಲಂಡನ್: ಚಾಂಪಿಯನ್ಸ್ ಟ್ರೋಫಿಯ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಟೀಂ ಇಂಡಿಯಾ ಈ ಪಂದ್ಯವನ್ನು 240 ರನ್ ಗಳ ಅಂತರದಿಂದ ಗೆದ್ದಿದೆ.

    ಜೂನ್ 4ರಂದು ಚಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.

    325 ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ 3ನೇ ಓವರ್ ನಲ್ಲೇ ಉಮೇಶ್ ಯಾದವ್ ಮೊದಲ ಆಘಾತ ನೀಡಿದರು. ಮೊದಲ ವಿಕೆಟ್ ಪತನವಾದಾಗ ಬಾಂಗ್ಲಾ ಮೊತ್ತ 11 ರನ್ ಆಗಿತ್ತು. ಇದೇ ಮೊತ್ತಕ್ಕೆ ಮತ್ತೆ 2 ವಿಕೆಟ್ ಪತನವಾದವು. ಬಾಂಗ್ಲಾದ 4 ಆಟಗಾರರು ಸೊನ್ನೆ ಸುತ್ತಿದರು. ಕೇವಲ ಮೂವರು ಆಟಗಾರರು ಮಾತ್ರ ಎರಡಂಕಿಗಳ ರನ್ ಗಳಿಸಿದರು.

    ಕೊನೆಗೆ ಬಾಂಗ್ಲಾದೇಶ 23.5 ಓವರ್ ಗಳಲ್ಲಿ 84 ರನ್ ಗಳಿಸಿ ಆಲೌಟಾಯಿತು. ಟೀಂ ಇಂಡಿಯಾ ಪರವಾಗಿ ಭುವನೇಶ್ವರ್ ಕುಮಾರ್ 3, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ, ಅಶ್ವಿನ್, ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಗಳಿಸಿದರು.

    ಇಂದಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡಿದರೆ, ಮಹೇಂದ್ರ ಸಿಂಗ್ ಧೋನಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು.

    ಲಂಡನ್ ನ ಓವಲ್ ಕ್ರೀಡಾಂಗಣದಲ್ಲಿ ನಡೆದ ಟೀಂ ಇಂಡಿಯಾದ 2ನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಬ್ಯಾಟಿಂಗ್ ಮಾಡಲು ಇಳಿದ ಭಾರತದ ಮೊದಲ ವಿಕೆಟ್ 2ನೇ ಓವರ್ ನಲ್ಲೇ ಪತನವಾಯಿತು. 3 ಎಸೆತಗಳಲ್ಲಿ 1 ರನ್ ಗಳಿಸಿದ್ದ ರೋಹಿತ್ ಶರ್ಮಾ ರುಬೆಲ್ ಹೊಸೈನ್ ಎಸೆತಕ್ಕೆ ಬೌಲ್ಡ್. ನಂತರ ಬ್ಯಾಟ್ ಮಾಡಲು ಆಗಮಿಸಿದ ಅಜಿಂಕ್ಯಾ ರಹಾನೆ 21 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಔಟಾದರು. ಆದರೆ 3ನೇ ವಿಕೆಟ್ ಗೆ ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಉತ್ತಮ ಜೊತೆಯಾಟ ನೀಡಿದರು. ಈ ನಡುವೆ ಶಿಖರ್ ಧವನ್ 67 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ ಧವನ್ 60 ರನ್ ಗಳಿಸಿದರು.

    ಎಚ್ಚರಿಕೆಯ ಆಟವಾಡಿದ ದಿನೇಶ್ ಕಾರ್ತಿಕ್ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 77 ಎಸೆತಗಳಲ್ಲಿ 94 ರನ್ ಗಳಿಸಿ ರಿಟೈರ್ಡ್ ಔಟಾದರು. ಬಳಿಕ ಆಗಮಿಸಿದ ಕೇದಾರ್ ಜಾಧವ್ 31 ರನ್ ಗಳಿಸಿದರೆ, ನಂತರ ಬ್ಯಾಟಿಂಗ್ ಮಾಡಲು ಇಳಿದ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಇಳಿದರು. ಕೇವಲ 54 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 80 ರನ್ ಮಾಡಿ ಅಜೇಯರಾಗಿ ಉಳಿದರು. ಪಾಂಡ್ಯಾಗೆ ಉತ್ತಮ ಜೊತೆಯಾಟ ನೀಡಿದ ರವೀಂದ್ರ ಜಡೇಜಾ 36 ಎಸೆತಗಳಲ್ಲಿ 31 ರನ್ ಗಳಿಸಿದರು. ನಿಗದಿತ 50 ಓವರ್ ಮುಗಿದಾಗ ಭಾರತ 7 ವಿಕೆಟ್ ಕಳೆದುಕೊಂಡು 324 ರನ್ ಗಳಿಸಿತ್ತು.

    ಬಾಂಗ್ಲಾದೇಶ ತಂಡದ ಪರವಾಗಿ ರುಬೆಲ್ ಹೊಸೈನ್ 3, ಸುನ್ಸಮುಲ್ ಇಸ್ಲಾಂ 2, ಮುಸ್ತಫಿಜುರ್ ರಹಮಾನ್ 1 ವಿಕೆಟ್ ಗಳಿಸಿದರು.