Tag: ಬಹುಭಾಷಾ ನಟಿ

  • ಸೂರ್ಯವಂಶ ನಟಿ ಇಶಾ ಕೊಪ್ಪಿಕರ್ ಬಿಜೆಪಿಗೆ ಸೇರ್ಪಡೆ

    ಸೂರ್ಯವಂಶ ನಟಿ ಇಶಾ ಕೊಪ್ಪಿಕರ್ ಬಿಜೆಪಿಗೆ ಸೇರ್ಪಡೆ

    ಮುಂಬೈ: ಹುಬ್ಬಳ್ಳಿ ಮೂಲದ ಬಹು ಭಾಷಾ ನಟಿ ಇಶಾ ಕೊಪ್ಪಿಕರ್ ಅಧಿಕೃತವಾಗಿ ಭಾನುವಾರ ಮುಂಬೈನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಮುಂಬೈನಲ್ಲಿ ಇಂದು ನಡೆದ ಕಾರ್ಯಕ್ರದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಪಕ್ಷ ಸೇರಿದ್ದಾರೆ. ಈಗಾಗಲೇ ಅವರನ್ನು ಮಹಿಳಾ ಟ್ರಾನ್ಸ್‍ಪೋರ್ಟ್ ವಿಂಗ್ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ.

    ಇಶಾ ಅವರು 1998ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ 2000ರಲ್ಲಿ ಫಿಜಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದರು. ಕನ್ನಡ, ಹಿಂದಿ, ತೆಲುಗು, ಮರಾಠಿ ಹಾಗೂ ತಮಿಳು ಚಿತ್ರದಲ್ಲಿ ಇಶಾ ಕೊಪ್ಪಿಕರ್ ನಟಿಸಿದ್ದಾರೆ. ಕನ್ನಡದ ‘ಸೂರ್ಯವಂಶ’, ‘ಓ ನನ್ನ ನಲ್ಲೆ’ ಸೇರಿದಂತೆ ಅನೇಕ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

    ಈ ಮೂಲಕ ಲೋಕಸಭಾ ಚುನಾವಣೆಗೆ ಸ್ಟಾರ್ ಪ್ರಚಾರಕರನ್ನು ಬಿಜೆಪಿ ಸೆಳೆದುಕೊಂಡಿದ್ದು, ಅವರನ್ನು ಕೂಡಾ ಚುನಾವಣಾ ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನುವ ಮಾತು ಈಗ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ಮಲೆಯಾಳಂ ನಟ ದಿಲೀಪ್ ಬಂಧನವಾಗಿದ್ದು ಯಾಕೆ?

    ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ಮಲೆಯಾಳಂ ನಟ ದಿಲೀಪ್ ಬಂಧನವಾಗಿದ್ದು ಯಾಕೆ?

    ತಿರುವನಂತಪುರಂ: ಬಹುಭಾಷಾ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10 ರಂದು ಕೇರಳ ಪೊಲೀಸರು ಮಲೆಯಾಳಂ ನಟ ದಿಲೀಪ್‍ರನ್ನು ಬಂಧಿಸಿದ್ದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

    ಫೆಬ್ರವರಿಯಲ್ಲಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆಗಳು ನಡೆದಿದ್ದವು. ಆದ್ರೆ ನಟ ದಿಲೀಪ್ ಅವರ ಬಂಧನದಿಂದ ಪ್ರಮುಖ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಗೆ ‘ಲಕ್ಷ್ಯ’ದಿಂದ 2 ಲಕ್ಷ ರೂ. ನೀಡಿರೋ ಬಗ್ಗೆ ಸಾಕ್ಷಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಲಕ್ಷ್ಯ ಆನ್‍ಲೈನ್ ಬಟ್ಟೆ ಅಂಗಡಿಯಾಗಿದ್ದು ದಿಲೀಪ್ ಅವರ ಪತ್ನಿ ಹಾಗೂ ನಟಿ ಕಾವ್ಯಾ ಮಾಧವನ್ ಅವರ ಮಾಲೀಕತ್ವದಲ್ಲಿದೆ. ಆದ್ರೆ ಇದನ್ನ ಅವರ ತಾಯಿ ನಿರ್ವಹಿಸುತ್ತಿದ್ದಾರೆ.

    ಇದಲ್ಲದೆ ಪೊಲೀಸರ ಸಂಶಯ ಬಲವಾಗೋದಕ್ಕೆ ಕಾರಣವಾಗಿದ್ದೆಂದರೆ ಫೆಬ್ರವರಿಯಲ್ಲಿ ಈ ಘಟನೆ ನಡೆದ ಮುಂದಿನ ಮೂರು ದಿನಗಳ ಸಿಸಿಟಿವಿ ದೃಶ್ಯಾವಳಿಯನ್ನ ತೆಗೆದುಹಾಕಲಾಗಿದೆ. ದೃಶ್ಯಾವಳಿಗಳನ್ನ ತೆಗೆದುಹಾಕಿದವರಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಮುಚ್ಚಿಡಲು ಏನೂ ಇಲ್ಲವಾದ್ರೆ ಸಿಸಿಟಿವಿ ದೃಶ್ಯಾವಳಿಯನ್ನ ಯಾಕೆ ತೆಗೆದುಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ ಪಲ್ಸರ್ ಸುನಿ ದಿಲೀಪ್ ಅವರಿಗೆ ಬರೆದಿದ್ದ ಪತ್ರದಲ್ಲಿ ತಾನು ಶೋರೂಮ್‍ಗೆ ಭೇಟಿ ನೀಡಿ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಮೆಮೋರಿ ಕಾರ್ಡ್ ನೀಡಿದ್ದಾಗಿ ಹೇಳಿದ್ದಾನೆ.

    ದಿಲೀಪ್ ಹಾಗು ಅವರ ಸ್ನೇಹಿತರಾದ ನಿರ್ದೇಶಕ ಹಾಗೂ ನಿರ್ಮಾಪಕ ನಾದಿರ್ ಶಾ ಅವರ ಹೇಳಿಕೆಗಳು ಒಂದಕ್ಕೊಂದು ವಿರುದ್ಧವಾಗಿವೆ ಎಂದು ಮೂಲಗಳು ಹೇಳಿವೆ. ಪೊಲೀಸ್ ಮೂಲಗಳ ಪ್ರಕಾರ, ದಿಲೀಪ್ ಹಾಗೂ ನಟಿ ಹಲವು ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದು, ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದಂತೆ ಹಾಗೂ ಕೆಲವು ಹಣಕಾಸು ವ್ಯವಹಾರ ಹೊಂದಿದ್ದರು ಎನ್ನಲಾಗಿದೆ.

    ದಿಲೀಪ್ ಹಾಗೂ ಅವರ ಮೊದಲ ಪತ್ನಿ ಮಂಜು ವಾರಿಯರ್ ಅವರ ವೈವಹಿಕ ಜೀವನದಲ್ಲಿ ಬಿರುಕು ಉಂಟಾದಾಗ ನಟಿ ಮಂಜು ಅವರನ್ನು ಬೆಂಬಲಿಸಿದ್ರು. ಆಗಿನಿಂದಲೇ ಇಬ್ಬರನಡುವೆ ಅಪಸ್ವರ ಉಂಟಾಗಿತ್ತು. ನಟಿಯ ಮೇಲೆ ದಾಳಿಗೆ ಚರ್ಚೆ ನಡೆದಿತ್ತು ಎಂದು ಪಲ್ಸರ್ ಸುನಿ ಹೇಳಿಕೊಂಡಿದ್ದಾನೆಂದು ಮೂಲಗಳು ಹೇಳಿವೆ. ಎರಡನೇ ಕಾರಣವೆಂದರೆ ಹಣಕಾಸಿನ ವಿಷಯ. ಆಗಲೇ ದಿಲೀಪ್ ಅವರ ಮ್ಯಾನೇಜರ್ ಹಾಗೂ ಇತರರು ಇದರಲ್ಲಿ ಭಾಗಿಯಾದ್ರು ಎನ್ನಲಾಗಿದೆ.

    ಅಲ್ಲದೆ ಪಲ್ಸರ್ ಸುನಿ ಹಾಗೂ ಆತನ ಸ್ನೇಹಿತರು ಸೇರಿದಂತೆ ಈ ಎಲ್ಲರ ಮಧ್ಯೆ ಫೋನ್ ಕರೆಗಳು ಮಾಡಲಾಗಿರುವ ಬಗ್ಗೆ ಪೊಲೀಸರಿಗೆ ಸಾಕ್ಷಿ ಸಿಕ್ಕಿದೆ. ಕೆಲವು ತಿಂಗಳ ಹಿಂದಿನಿಂದಲೂ ಇವರ ಮಧ್ಯೆ ಸಂಭಾಷಣೆ ನಡೆದಿದೆ. ಫೆಬ್ರವರಿಗಿಂತಲೂ ಹಿಂದೆಯೇ ಸಂಚು ರೂಪಿಸಿದ್ದಾರೆ. ಘಟನೆಗೆ ಮುಂಚೆ ಹಾಗೂ ಘಟನೆಯ ಬಳಿಕ ವಿವಿಧ ಫೋನ್‍ಗಳಿಂದ ಮಡಲಾಗಿರುವ ಕರೆಗಳು ಈ ಪ್ರಕರಣದ ಪ್ರಮುಖ ಸಾಕ್ಷಿಗಳು ಎಂದು ಪೊಲೀಸರು ಹೇಳಿದ್ದಾರೆ.

    ಸುನಿ ಕೂಡ ಈ ಹಿಂದೆ ಮುಖೇಶ್ ಸೇರಿದಂತೆ ಹಲವು ನಟರೊಂದಿಗೆ ನಟಿಸಿದ್ದಾನೆ. ಪೊಲೀಸರ ಪ್ರಕಾರ ಮುಖೇಶ್‍ರಿಂದಲೇ ದಿಲೀಪ್ ಅವರಿಗೆ ಸುನಿಯ ಪರಿಚಯವಾಗಿತ್ತು. ಆದ್ರೆ ಮೊದಲು ಸುನಿಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಮುಖೇಶ್ ಆತನನ್ನು ತೆಗೆದುಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ನಮಗೆ ತಿಳಿದಿರುವ ಮಾಹಿತಿಯ ಪ್ರಕಾರ ದಿಲೀಪ್ ಮತ್ತು ಪಲ್ಸರ್ ಸುನಿ ತುಂಬಾ ಆತ್ಮೀಯತೆ ಹೊಂದಿದ್ದರು. ಚಿತ್ರೀಕರಣದ ಸೆಟ್‍ನಲ್ಲಿ ತೆಗೆಯಲಾದ ಕೆಲವು ಫೋಟೋಗಳು ಇದಕ್ಕೆ ಪುಷ್ಠಿ ನೀಡುತ್ತವೆ. ಕೆಲವು ಸಮಯದಿಂದ ದಿಲೀಪ್ ಅವರೊಂದಿಗೆ ಈತ ಒಡನಾಟ ಹೊಂದಿದ್ದಾನೆ. ಆದ್ರೆ ಇವರ ಮೂಲ ಉದ್ದೇಶ ಬ್ಲಾಕ್‍ಮೇಲ್ ಮಾಡುವುದಾಗಿತ್ತು. ನಟಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

  • ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ

    ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ

    ಕೊಚ್ಚಿ: ಬಹುಭಾಷಾ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಈ ಹಿಂದೆ ಸಂಪರ್ಕಿಸಿದ್ದ ವಕೀಲರೇ ಈಗ ಸಾಕ್ಷಿ ಹೇಳಲು ಕೋರ್ಟಿಗೆ ಹಾಜರಾಗಲಿದ್ದಾರೆ.

    ಘಟನೆ ನಡೆದ ಮರುದಿನ ಆರೋಪಿಗಳಾದ ಪಲ್ಸರ್ ಸುನಿ, ಮಣಿಕಂಟನ್ ಹಾಗೂ ವಿಜೇಶ್ ಅಲುವಾದಲ್ಲಿ ವಕೀಲರೊಬ್ಬರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದರು. ಸುನಿ ತನ್ನ ಫೋನ್, ಮೆಮೊರಿ ಕಾರ್ಡ್ ಹಾಗೂ ವಿಜೇಶ್‍ನ ಪಾಸ್‍ಪೋರ್ಟನ್ನು ವಕೀಲರಿಗೆ ನೀಡಿದ್ದ. ನಟಿಯ ಮೇಲಿನ ದಾಳಿಯ ದೃಶ್ಯಾವಳಿಗಳಿರುವ ವೀಡಿಯೋ ಮೆಮೊರಿ ಕಾರ್ಡ್‍ನಲ್ಲಿ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿದ ನಂತರ ವಕೀಲರು ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿ ಬದಲಾದ್ರು. ವಕೀಲರ ಪತ್ನಿಯೂ ಕೂಡ ವಕೀಲೆಯಾಗಿದ್ದು, ಆರೋಪಿಗಳು ಬಂದಾಗ ಅವರೂ ಕೂಡ ಮನೆಯಲ್ಲೇ ಇದ್ರು. ಹೀಗಾಗಿ ಆಕೆಯೂ ಕೂಡ ಈಗ ಪ್ರಕರಣದ ಸಾಕ್ಷಿ ಎಂದು ಪರಿಗಣಿಸಲಾಗುತ್ತದೆ.

    ಆರಂಭದಲ್ಲಿ ಆರೋಪಿಗಳಲ್ಲಿ ಒಬ್ಬನಾದ ಡ್ರೈವರ್ ಮಾರ್ಟಿನ್‍ನ ಅರ್ಜಿ ಸಲ್ಲಿಸಿದ್ದ ವಕೀಲರು ನಂತರ ಅವನ ಪರವಾಗಿ ನಾನು ಹಾಜರಾಗುವುದಿಲ್ಲ ಎಂದಿದ್ದರು.

    ಮೆಮೋರಿ ಕಾರ್ಡ್‍ನಲ್ಲಿ ನಟಿಯ ದೃಶ್ಯಾವಳಿಗಳು ಇದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿತ್ತು. ಆದ್ರೆ ಇದು ಫೋಟೋ ತೆಗೆಯಲಾದ ಮೊಬೈಲ್‍ನದ್ದೇ ಕಾರ್ಡ್ ಹೌದೋ ಅಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಫೋಟೋಗಳನ್ನು ಮೆಮೋರಿ ಕಾರ್ಡ್‍ಗೆ ರವಾನೆ ಮಾಡಿರಲೂಬಹುದು ಎಂದು ಹೇಳಲಾಗಿದೆ.

    ಪಲ್ಸರ್ ಸುನಿ ಕೋರ್ಟಿಗೆ ಹಾಜರಾಗಲು ಬಂದಿದ್ದಾಗ ಆತನ ಬ್ಯಾಗ್‍ನಲ್ಲಿದ್ದ ಮತ್ತೊಂದು ಮೆಮೊರಿ ಕಾರ್ಡನ್ನು ತನಿಖಾ ತಂಡ ವಶಪಡಿಸಿಕೊಂಡಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ತನಿಖಾ ತಂಡ ವಿಸ್ತೃತ ವರದಿಯನ್ನು ಸಲ್ಲಿಸಲಿದೆ.

    ಫೆಬ್ರವರಿ 17ರಂದು ಕೇರಳದಲ್ಲಿ ಶೂಟಿಂಗ್ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬಹುಭಾಷಾ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು.

  • ನಾನು ಏನು ನೋಡಬಾರದಿತ್ತೋ ಅದನ್ನು ಜೀವನ ತೋರಿಸಿದೆ, ಎಲ್ಲವನ್ನೂ ಮೆಟ್ಟಿ ನಿಲ್ತೀನಿ – ಬಹುಭಾಷಾ ನಟಿಯ ಮೊದಲ ಪ್ರತಿಕ್ರಿಯೆ

    ನಾನು ಏನು ನೋಡಬಾರದಿತ್ತೋ ಅದನ್ನು ಜೀವನ ತೋರಿಸಿದೆ, ಎಲ್ಲವನ್ನೂ ಮೆಟ್ಟಿ ನಿಲ್ತೀನಿ – ಬಹುಭಾಷಾ ನಟಿಯ ಮೊದಲ ಪ್ರತಿಕ್ರಿಯೆ

    ಕೊಚ್ಚಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಹುಭಾಷಾ ನಟಿ ಮೌನ ಮುರಿದಿದ್ದು, ನನ್ನ ಜೀವನದಲ್ಲಿ ಏನು ನೋಡಬಾರದಿತ್ತೋ ಅದನ್ನೇ ನನ್ನ ಬದುಕು ತೋರಿಸಿದೆ. ಆದರೆ ನಾನು ಅದನ್ನು ಮೆಟ್ಟಿ ನಿಲ್ತೀನಿ ಎಂಬ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ತನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿರುವ ನಟಿ, ಬದುಕು ಹಲವು ಬಾರಿ ನನ್ನನ್ನು ಕುಗ್ಗುವಂತೆ ಮಾಡಿದೆ. ನಾನು ಏನು ನೋಡಬಾರದಿತ್ತೋ ಅದನ್ನು ತೋರಿಸಿದೆ. ದುಃಖ ಮತ್ತು ಸೋಲಿನ ಅನುಭವ ನನಗಾಗಿದೆ. ಆದ್ರೆ ಒಂದು ಮಾತ್ರ ಸತ್ಯ. ನಾನು ಯಾವಾಗಲೂ ಎಲ್ಲವನ್ನೂ ಮೆಟ್ಟಿ ನಿಲ್ಲುತ್ತೀನಿ. ನಿಮ್ಮ ಪ್ರೀತಿಗೆ, ಹಾರೈಕೆಗೆ ಧನ್ಯವಾದ ಎಂದು ಇನ್ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟನ್ನು ಮಲಯಾಳಂ ನಟ ಪೃಥ್ವಿರಾಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಫೆಬ್ರವರಿ 17ರಂದು ಕೇರಳದ ತ್ರಿಶೂರ್‍ನಿಂದ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದ ಬಹುಭಾಷಾ ನಟಿಯ ಮೇಲೆ ಆಕೆಯ ಮಾಜಿ ಡ್ರೈವರ್ ಮತ್ತು ಆತನ ತಂಡದಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.