Tag: ಬಸ್

  • ಬಿಸಿಲಿನ ಝಳಕ್ಕೆ ಬೆಂದುಹೋದ ಬಳ್ಳಾರಿ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಬಲಿ

    ಬಿಸಿಲಿನ ಝಳಕ್ಕೆ ಬೆಂದುಹೋದ ಬಳ್ಳಾರಿ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಬಲಿ

    ಬಳ್ಳಾರಿ: ಬಿಸಿಲಿನ ಝಳಕ್ಕೆ ಬಳ್ಳಾರಿಯಲ್ಲಿ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಆದ್ರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ರೆ ಅವರನ್ನು ಬದುಕಿಸಿಕೊಳ್ಳಬಹುದಿತ್ತು.

    ಹೂವಿನ ಹಡಗಲಿಯಿಂದ ಹೊಸಪೇಟೆಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಬಿಸಿಲಿನಿಂದ ಬಳಲಿ ಅಸ್ವಸ್ಥರಾದರು. ತಕ್ಷಣವೇ ಅವರನ್ನು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದ್ರೆ ವೈದ್ಯರು ಇಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅವರು ಮೃತಪಟ್ಟರು.

    ಬಳ್ಳಾರಿಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಉಷ್ಣಾಂಶ 40 ಡಿಗ್ರಿಯಿಂದ 43 ಡಿಗ್ರಿಗೆ ಏರಿಕೆಯಾಗಿದೆ. ಹೀಗಾಗಿ ಮಕ್ಕಳು ನಿರ್ಜಲೀಕರಣದಿಂದ ಬಳಲುತ್ತಿದ್ದು ವಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ನೀರಿನಂಶ ಕಡಿಮೆಯಾಗುತ್ತಿದೆ. ನವಜಾತ ಶಿಶುಗಳನ್ನು ತ್ರೀವ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗುವಿಗೆ ಎದೆಹಾಲು ಹೆಚ್ಚಿಗೆ ನೀಡಬೇಕು ಮತ್ತು ಮಕ್ಕಳ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಬಾಣಂತಿಯರು ನಿತ್ಯ ಎಳನೀರು ಸೇರಿದಂತೆ ತಂಪು ಪಾನೀಯಗಳನ್ನು ಸೇವಿಸಬೇಕು ಅಂತಾ ವೈದ್ಯರು ಸಲಹೆ ನೀಡುತ್ತಿದ್ದಾರೆ.

    ಭಿಕ್ಷುಕ ಸಾವು: ಕಲಬುರಗಿ ನಗರದ ಕೋಟೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಭಿಕ್ಷುಕ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಭಿಕ್ಷುಕನ ಶವ ಪತ್ತೆಯಾಗಿದ್ದು ರವಿವಾರ ಮೃತಪಟ್ಟಿರುವ ಶಂಕೆಯಿದೆ. ಮೃತ ಭಿಕ್ಷಕುಕನ ಹೆಸರು ಮತ್ತು ವಿಳಾಸದ ಬಗ್ಗೆ ಪೊಲೀಸರಿಗೆ ಲಭ್ಯವಾಗಿಲ್ಲ. ಸದ್ಯ ವೃದ್ಧ ಸತ್ತಿರುವ ಸ್ಥಿತಿ ನೋಡಿದ್ರೆ ಬಿಸಲಿನ ತಾಪಕ್ಕೆ ಬಲಿಯಾದಂತಿದೆ. ಸ್ಥಳಕ್ಕೆ ಚೌಕ್ ಪೊಲೀಸರು ಭೇಟಿ ನೀಡಿ ಶವದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನೇ ಕಾಣದ ಗ್ರಾಮ- ವಿದ್ಯಾರ್ಥಿಗಳಿಗೆ ಬೇಕಿದೆ ಬಸ್ ವ್ಯವಸ್ಥೆ

    ಬೀದರ್: ರಣ ಬಿಸಿಲಿನಲ್ಲಿ ತಲೆ ಮೇಲೆ ಪುಸ್ತಕ ಹಿಡಿದುಕೊಂಡು ಕಾಲೇಜಿಗೆ ಹೋರಟಿರುವ ವಿದ್ಯಾರ್ಥಿಗಳು. ಮೊತ್ತೊಂದು ಕಡೆ ಶಾಲೆಗೆ ಹೋಗಲು ವಿದ್ಯಾರ್ಥಿನಿಯರು ಮೈಲಿಗಟ್ಟಲೆ ಬ್ಯಾಗ್ ಹಾಕಿಕೊಂಡು ಸುಸ್ತಾಗಿ ನಡೆಯುತ್ತಿರುವ ದೃಶ್ಯ. ಸ್ವಾತಂತ್ರ್ಯ ಬಂದಾಗಿನಿಂದ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲಾ ಅಂದ್ರೆ ನಂಬುತ್ತಿರಾ? ನಂಬಲೇಬೇಕು ಸ್ವಾಮಿ.

    ಇದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮದ ಕಥೆ. 4 ಸಾವಿರಕ್ಕೂ ಹೆಚ್ಚು ಜನರಿರುವ ಈ ಗ್ರಾಮ ಬಸ್ಸನ್ನೇ ಕಾಣದೆ ಇರುವುದು ವಿಪರ್ಯಾಸ. ಮಸ್ಕಲ್ ಗ್ರಾಮದಿಂದ ಸಂತಪೂರ್ ಹೋಬಳಿಗೆ ಬರೋಕೆ 5 ಕೀಲೊಮೀಟರ್, ಠಾಣಾಕುಶನೂರ್ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗೋಕೆ ವಿದ್ಯಾರ್ಥಿಗಳು 10 ಕೀಲೋಮೀಟರ್ ನಡೆದುಕೊಂಡೆ ಹೋಗಬೇಕು. 600ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿದಿನದ ಗೋಳು ಇದು. ಈ ಗ್ರಾಮಕ್ಕೆ ಬಸ್ ಸಂಚಾರವಿಲ್ಲದ ಕಾರಣ ಎಷ್ಟೋ ವಿದ್ಯಾರ್ಥಿನಿಯರು ಶಿಕ್ಷಣವನ್ನೇ ತೊರೆದಿರುವುದು ಬೇಸರದ ಸಂಗತಿಯಾಗಿದೆ.

    ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿರುವುದು ಒಂದು ಕಡೆಯಾದ್ರೆ ಸಂಜೆಯಾಗುತ್ತಿದಂತ್ತೆ ಗ್ರಾಮಕ್ಕೆ ಮರಳಲು ವಿದ್ಯಾರ್ಥಿನಿಯರು ಭಯ ಪಡುತ್ತಿದ್ದಾರೆ. ರಾಜ್ಯದಲ್ಲಿ ಇಂದು ನಡೆಯುತ್ತಿರುವ ಅತ್ಯಾಚಾರಗಳು ವಿದ್ಯಾರ್ಥಿನಿಯರ ಭಯಕ್ಕೆ ಮತ್ತೊಂದು ಕಾರಣವಾಗಿದೆ. ಬಸ್ ಇಲ್ಲದಿದ್ರೂ ಈ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಗ್ರಾಮದಿಂದ ವಾಲಿಬಾಲ್ ಕ್ರೀಡೆಗೆ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

    ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಬಸ್ ವ್ಯವಸ್ಥೆ ಇಲ್ಲದೆ ಇರುವುದು ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ. ಇನ್ನು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿರುವುದು ಬೇಸರದ ಸಂಗತಿಯಾಗಿದೆ. ಬೆಳಕು ಕಾರ್ಯಕ್ರಮದಿಂದಾದ್ರೂ ನಮ್ಮ ಗ್ರಾಮದ ಮಕ್ಕಳಿಗೆ ಬೆಳಕು ಸಿಗಲಿ ಅಂತಾ ದೂರದ ಬೀದರ್‍ನಿಂದ ಬಂದಿದ್ದಾರೆ.

     

  • ಹಾವೇರಿಯ ಶಿಗ್ಗಾವಿಯಲ್ಲಿ ಭೀಕರ ಅಪಘಾತ- ಬಸ್ ಚಾಲಕ ಸಾವು, 15 ಪ್ರಯಾಣಿಕರಿಗೆ ಗಾಯ

    ಹಾವೇರಿಯ ಶಿಗ್ಗಾವಿಯಲ್ಲಿ ಭೀಕರ ಅಪಘಾತ- ಬಸ್ ಚಾಲಕ ಸಾವು, 15 ಪ್ರಯಾಣಿಕರಿಗೆ ಗಾಯ

    ಹಾವೇರಿ: ಹಿಂಬದಿಯಿಂದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಿಗ್ಗಾವಿ ತಾಲೂಕಿನ ನೀರಲಗಿ ಕ್ರಾಸ್ ಬಳಿ ಇರೋ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ಸಂಭವಿಸಿದೆ. 45 ವರ್ಷ ವಯಸ್ಸಿನ ಲವ್ ಮೃತ ಬಸ್ ಚಾಲಕ. ಘಟನೆಯಲ್ಲಿ 15 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಗೋವಾಕ್ಕೆ ಹೊರಟ್ಟಿತ್ತು ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ತಡಸ್ ಪೊಲೀಸ್ ಸಿಬ್ಬಂದಿ, ಪಿಎಸ್‍ಐ ಹಾಗೂ ಸಿಪಿಐ ಸಂತೋಷ ಪವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    ಕೋಲ್ಕತ್ತಾ: ದನದ ಸೆಗಣಿಯಿಂದ ಗ್ಯಾಸ್, ವಿದ್ಯುತ್ ಉತ್ಪಾದನೆ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕೆ ಈಗ ಹೊಸ ಸೇರ್ಪಡೆ ಎಂಬಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೆಗಣಿಯಿಂದ ತಯಾರಾದ ಬಯೋ ಗ್ಯಾಸ್‍ನಿಂದ ಚಲಿಸುವ ಬಸ್ ಸಂಚಾರ ವ್ಯವಸ್ಥೆ ಪಶ್ಚಿಮ ಬಂಗಾಳದಲ್ಲಿ ಆರಂಭಗೊಂಡಿದೆ.

    ಹೌದು. ಕೋಲ್ಕತ್ತಾದ ಉಲ್ಟದಂಗದಿಂದ ಗರೀಯಾದವರೆಗೆ ಬಯೋಗ್ಯಾಸ್‍ನಿಂದ ಸಂಚರಿಸುವ ಬಸ್ ಸೇವೆ ಶುಕ್ರವಾರದಿಂದ ಆರಂಭವಾಗಿದೆ.

    ಟಿಕೆಟ್ ಬೆಲೆ ಎಷ್ಟು?
    ಬಸ್ ಆರಂಭಗೊಂಡಿದ್ದು ಏನೋ ಸರಿ ಅದರೆ ಅದರ ಟೆಕೆಟ್ ಬೆಲೆ ಎಷ್ಟು ಎಂದು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ. ಕೇವಲ 1 ರೂಪಾಯಿ ನೀಡಿದ್ರೆ ನೀವು ಈ ಬಸ್‍ನಲ್ಲಿ 17.5 ಕಿ.ಮೀ ಸಂಚರಿಸಬಹುದು. ಸದ್ಯಕ್ಕೆ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಂಚರಿಸುವ ಸಾರಿಗೆ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

    ತಯಾರಿಸಿದ್ದು ಯಾರು?
    ಪೋನೆಕ್ಸ್ ಇಂಡಿಯಾ ರಿಸರ್ಚ್ ಡೆವಲಪ್‍ಮೆಂಟ್ ಗ್ರೂಪ್ ವಾಹನಗಳ ತಯಾರಕಾ ಕಂಪೆನಿಯಾದ ಅಶೋಕ್ ಲೇಲ್ಯಾಂಡ್ ಜೊತೆಗೂಡಿ ಈ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದೆ. 54 ಆಸನಗಳುಳ್ಳ ಈ ಬಸ್ ನಿರ್ಮಾಣಕ್ಕೆ ಅಂದಾಜು 13 ಲಕ್ಷ ರೂ. ಖರ್ಚಾಗಿದೆ. ಈ ವರ್ಷ 15ಕ್ಕೂ ಹೆಚ್ಚು ಬಸ್‍ಗಳನ್ನು ವಿವಿಧ ಮಾರ್ಗದಲ್ಲಿ ಕಡಿಮೆ ದರದಲ್ಲಿ ಓಡಿಸಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

    ಮೈಲೇಜ್ ಎಷ್ಟು?
    ಬಿರ್‍ಭೂಮ್ ಜಿಲ್ಲೆಯಲ್ಲಿರುವ ನಮ್ಮ ಘಟಕದಲ್ಲಿ ಸೆಗಣಿ ಮೂಲಕ ನಾವು ಗ್ಯಾಸ್ ಉತ್ಪಾದನೆ ಮಾಡುತ್ತೇವೆ. ಉತ್ಪಾದನೆಯಾದ ಗ್ಯಾಸ್ ಟ್ಯಾಂಕರ್ ಮೂಲಕ ಕೋಲ್ಕತ್ತಾಕ್ಕೆ ಬರುತ್ತದೆ. ಒಂದು ಕೆಜಿ ಗ್ಯಾಸ್ ಉತ್ಪಾದನೆಗೆ 20 ರೂ. ಖರ್ಚಾಗುತ್ತದೆ. ಒಂದು ಕೆಜಿ ಗ್ಯಾಸ್‍ನಲ್ಲಿ ಬಸ್ 5 ಕಿ.ಮೀ ಸಂಚರಿಸುತ್ತದೆ ಎಂದು ಪೋನೆಕ್ಸ್ ಇಂಡಿಯಾ ರಿಸರ್ಚ್ ಆಂಡ್ ಡೆವಲೆಪ್‍ಮೆಂಟ್ ಗ್ರೂಪಿನ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ದಾಸ್ ಹೇಳಿದ್ದಾರೆ.

    ಜ್ಯೋತಿ ಪ್ರಕಾಶ್ ಸಸ್ಯಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿದ್ದು ಕಳೆದ 8 ವರ್ಷಗಳಿಂದ ಬಯೋಗ್ಯಾಸ್ ವಿಚಾರದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಮುಂದೆ ಜರ್ಮನಿಯ ತಂತ್ರಜ್ಞಾನವನ್ನು ಬಳಸಲು ನಾವು ಚಿಂತನೆ ನಡೆಸಿದ್ದೇವೆ. ಒಂದು ಕೆಜಿ ಗ್ಯಾಸ್ ತಯಾರಿಸಲು 20 ರೂ. ಖರ್ಚಾಗುತ್ತದೋ ಅಷ್ಟೇ ವೆಚ್ಚದಲ್ಲಿ 20 ಕಿ.ಮೀ ಓಡುವಂತಹ ಬಸ್ ನಿರ್ಮಿಸುವುದು ನಮ್ಮ ಮುಂದಿನ ಗುರಿ. ಪ್ರಸ್ತುತ ಬಸ್‍ನಲ್ಲಿ 80 ಕೆಜಿ ಸಾಮರ್ಥ್ಯದ  ಟ್ಯಾಂಕ್ ಇದೆ. ಒಂದು ಬಾರಿ ಫುಲ್ ಟ್ಯಾಂಕ್ ಗ್ಯಾಸ್ ತುಂಬಿದರೆ 1,600 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ನಮ್ಮ ಬಸ್‍ಗಳು ಹೊಂದಿದೆ ಎಂದು ವಿವರಿಸಿದ್ದಾರೆ.

    ನಿರ್ವಹಣೆ ಹೇಗೆ?
    ಟಿಕೆಟ್ ಬೆಲೆ ಕಡಿಮೆ ಇದ್ದ ಕಾರಣ ಡ್ರೈವರ್ ಮತ್ತು ನಿರ್ವಾಹಕರಿಗೆ ಸಂಬಳ ಹೇಗೆ ಕೊಡುತ್ತೀರಿ ಎನ್ನುವ ಪ್ರಶ್ನೆಗೆ ಬಸ್‍ನಲ್ಲಿರುವ ಜಾಹಿರಾತಿನಿಂದ ಸಿಗುವ ಹಣದಿಂದ ನೀಡುತ್ತೇವೆ ಎಂದು ಉತ್ತರಿಸಿದ್ದಾರೆ.

    ಬಯೋ ಗ್ಯಾಸ್ ಪಂಪ್‍ಗಳನ್ನು ಸ್ಥಾಪಿಸಲು ಅನುಮತಿ ಸಿಕ್ಕಿದ್ದು, ನಾವು 100 ಪಂಪ್‍ಗಳನ್ನು ಸ್ಥಾಪಿಸುತ್ತೇವೆ. ಅಷ್ಟೇ ಅಲ್ಲದೇ ಬಯೋ ಗ್ಯಾಸ್‍ನಿಂದಾಗಿ ವಾಹನಗಳ ಬಾಳಿಕೆಯ ಅವಧಿಯೂ ಹೆಚ್ಚಾಗುತ್ತದೆ ಎಂದು ಜ್ಯೋತಿ ಪ್ರಕಾಶ್ ದಾಸ್ ತಿಳಿಸಿದ್ದಾರೆ.

    ಕೋಲ್ಕತ್ತಾದಿಂದ 204 ಕಿ.ಮೀ ದೂರದಲ್ಲಿರುವ ಭಿರ್‍ಭೂಮ್ ಜಿಲ್ಲೆಯ ದುಬ್ರಜ್‍ಪುರ್ ಎಂಬಲ್ಲಿ ಪೋನೆಕ್ಸ್ ಗ್ಯಾಸ್ ತಯಾರಕಾ ಘಟಕವನ್ನು ಸ್ಥಾಪಿಸಿದ್ದು, ಈ ಘಟಕ ಈಗ 1 ಸಾವಿರ ಕೆಜಿ ಬಯೋ ಗ್ಯಾಸ್ ಉತ್ಪಾದಿಸುತ್ತಿದೆ.

  • ಈ ಬಾರಿ ಯುಗಾದಿಗೆ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್ ಇಲ್ಲ!

    ಈ ಬಾರಿ ಯುಗಾದಿಗೆ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್ ಇಲ್ಲ!

    – ಯುಗಾದಿಗೆ ಡಲ್ ಆಯ್ತು ಕೆಎಸ್‍ಆರ್‍ಟಿಸಿ ಬಿಸಿನೆಸ್

    ಬೆಂಗಳೂರು: ಹಬ್ಬಗಳು ಬಂತು ಅಂದ್ರೆ ಕೆಎಸ್‍ಆರ್‍ಟಿಸಿಯ ಎಲ್ಲ ಬಸ್‍ಗಳು ಪ್ರಯಾಣಿಕರಿಂದ ಭರ್ತಿಯಾಗುತ್ತಿದ್ದವು. ಹಬ್ಬದ ಸಮಯದಲ್ಲಿ ಹೆಚ್ಚು ಬಸ್‍ಗಳನ್ನು ರೋಡಿಗಿಳಿಸಿ ಬಂಪರ್ ಕಲೆಕ್ಷನ್ ಮಾಡ್ತಿದ್ದ ಕೆಎಸ್‍ಆರ್‍ಟಿಸಿಗೆ ಈ ಯುಗಾದಿ ಸ್ವಲ್ಪ ಕಹಿಯಾಗಿದೆ.

    ಹಬ್ಬಗಳು, ಸಾಲು ಸಾಲು ಸರ್ಕಾರಿ ರಜೆಗಳು ಬಂದ್ರೆ ಕೋಟಿ ಜನಸಂಖ್ಯೆಯ ಸಿಲಿಕಾನ್ ಸಿಟಿ ಬಿಕೋ ಅನ್ನುತ್ತೆ. ಅದ್ರಲ್ಲೂ ಮಕ್ಕಳಿಗೆ ಬೇಸಿಗೆ ರಜೆ ಇರೋ ಸಮಯದಲ್ಲಿ ಬರುವ ಯುಗಾದಿ ಹಬ್ಬ ಅಂದ್ರೆ ಮಿಸ್ ಮಾಡೋದೇ ಇಲ್ಲ. ಜನ ತಮ್ಮ ತಮ್ಮ ಊರುಗಳಿಗೆ ಹಬ್ಬದ ಆಚರಣೆಗೆ ತೆರಳುತ್ತಾರೆ. ಈ ಕಾರಣಕ್ಕಾಗಿ ಕೆಎಸ್‍ಆರ್‍ಟಿಸಿ ಸೇರಿದಂತೆ ಎಲ್ಲ ಖಾಸಗಿ ಬಸ್‍ಗಳು ಪ್ರಯಾಣಿಕರಿಂದ ತುಂಬಿ ಹೋಗುತಿತ್ತು. ಈ ಸಮಯದಲ್ಲಿ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ ಮೂಲಕ ಕೆಎಸ್‍ಆರ್‍ಟಿಸಿ ಭರ್ಜರಿ ಲಾಭ ಮಾಡಿಕೊಳ್ಳುತಿತ್ತು.

    ಆದರೆ ಈ ಬಾರಿ ಇದಕ್ಕೆ ತದ್ವಿರುದ್ಧ ಎನ್ನುವಂತೆ ಯುಗಾದಿಗೆ ಕೆಎಸ್‍ಆರ್‍ಟಿಸಿ ಹೆಚ್ಚುವರಿ ಬಸ್‍ಗಳನ್ನು ರೋಡಿಗಿಳಿಸುತ್ತಿಲ್ಲ. ಮಾಮೂಲಿಯಾಗಿ ಓಡಾಡುವ ಬಸ್‍ಗಳೇ ಇನ್ನೂ ಸಂಪೂರ್ಣ ಬುಕ್ ಆಗದೇ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‍ಗಳನ್ನು ಓಡಿಸದೇ ಇರುವ ನಿರ್ಧಾರಕ್ಕೆ ಕೆಎಸ್‍ಆರ್‍ಟಿಸಿ ಬಂದಿದೆ.

    ಹೆಚ್ಚುವರಿ ಬಸ್ ಯಾಕಿಲ್ಲ?
    ಈ ಬಾರಿಯ ಯುಗಾದಿ ವಾರದ ಮಧ್ಯೆ ಬಂದ ಕಾರಣ ಬೆಂಗಳೂರಿನಲ್ಲಿ ವಾಸವಾಗಿರುವ ಜನ ತಮ್ಮ ಊರುಗಳಿಗೆ ಹೋಗಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ತಮ್ಮ ಮಕ್ಕಳನ್ನು ಆರ್‍ಟಿಇ ಅಡಿ ದಾಖಲಿಸಲು ಅರ್ಜಿ ಸಲ್ಲಿಸಲು ಮಾರ್ಚ್ 31 ಕಡೆಯ ದಿನಾಂಕವಾದ ಹಿನ್ನೆಲೆಯಲ್ಲಿ ಕೆಲವರು ಊರಿಗೆ ಹೋಗದೇ ಇರುವ ನಿರ್ಧಾರ ಮಾಡಿದ್ದಾರೆ.

    ಎಲ್ಲದಕ್ಕಿಂತ ಪ್ರಮುಖವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು 30ನೇ ತಾರೀಕಿನಿಂದ ಶುರುವಾಗುತ್ತಿದೆ. ಹೀಗಾಗಿ ಹಬ್ಬದ ಬಗ್ಗೆ ಗಮನ ಹರಿಸುವುದಕ್ಕಿಂತ ಮಕ್ಕಳ ಪರೀಕ್ಷೆ ಕಡೆಗೆ ಪೋಷಕರು ಹೆಚ್ಚು ಗಮನ ಹರಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಾರದಿಂದ ಬೆಂಗಳೂರು ಟು ಹಾಸನ ಹೊಸ ರೈಲು ಸಂಚಾರ ಆರಂಭವಾಗಿದೆ. ಇನ್ನು ವಾರದಲ್ಲಿ ಮೂರು ದಿನ ಬೆಂಗಳೂರು ಟು ಶಿವಮೊಗ್ಗ ಹೊಸ ರೈಲು ಸಂಚರಿಸುವ ಕಾರಣ ಜನ ಮುಂಗಡ ಟಿಕೆಟ್ ಖರೀದಿ ಮಾಡಿಲ್ಲ.

    ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೌರಮಾನ ಯುಗಾದಿ(ವಿಷು) ಪ್ರಸಿದ್ಧ. ಏಪ್ರಿಲ್ ಎರಡನೇ ವಾರದಲ್ಲಿ ಈ ಯುಗಾದಿ ಬರುವ ಕಾರಣ ಈ ಪ್ರದೇಶಗಳ ಜನತೆ ಆ ವಾರ ಊರಿಗೆ ಹೋಗಲಿದ್ದಾರೆ.

    ಒಟ್ಟಿನಲ್ಲಿ ಪ್ರತಿವರ್ಷ ಯುಗಾದಿ ಹಬ್ಬಕ್ಕೆ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುತ್ತಿದ್ದ ಕೆಎಸ್‍ಆರ್‍ಟಿಸಿಗೆ ಈ ಬಾರಿ ವರ್ಷದ ದೊಡ್ಡ ಹಬ್ಬ ಕಹಿಯಾಗಿದೆ.

    ಇದನ್ನೂ ಓದಿ: KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!

  • ಮಂಡ್ಯ: ಕಾಲೇಜು ಬಸ್ಸಿನ ಬ್ರೇಕ್ ಫೇಲ್- ಚಾಲಕನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪಾರು

    ಮಂಡ್ಯ: ಕಾಲೇಜು ಬಸ್ಸಿನ ಬ್ರೇಕ್ ಫೇಲ್- ಚಾಲಕನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪಾರು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಬಳಿ ಬ್ರೇಕ್ ಫೇಲಾಗಿದ್ದ ಕಾಲೇಜಿನ ವಾಹನವನ್ನು ಯಾವುದೇ ಅಪಾಯ ಸಂಭವಿಸದಂತೆ ನಿಲ್ಲಿಸುವ ಮೂಲಕ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ.

    ಬಸ್ ಚಾಲಕ ಸುನಿಲ್ ಅವರ ಸಮಯ ಪ್ರಜ್ಞೆಯಿಂದ ಅಪಘಾತವೊಂದು ತಪ್ಪಿದೆ. ಮೈಸೂರಿನ ಎಂಐಟಿ ಕಾಲೇಜಿಗೆ ಸೇರಿದ ಬಸ್‍ನಲ್ಲಿ ಆರು ಜನ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಬಸ್‍ನ ಬ್ರೇಕ್ ಫೇಲ್ ಆಗಿದ್ದು ಚಾಲಕ ಸುನಿಲ್ ಗಮನಕ್ಕೆ ಬಂದಿದೆ. ಸುನಿಲ್ ಎದೆಗುಂದದೆ ವಾಹನದ ವೇಗವನ್ನ ನಿಧಾನಗತಿಗೆ ತಂದು ಸುಮಾರು ಒಂದು ಕಿಲೋಮೀಟರ್‍ನಷ್ಟು ದೂರ ವಾಹನ ಚಲಾಯಿಸಿದ್ದಾರೆ.

    ವಾಹನದ ವೇಗ ಕಡಿಮೆಯಾಗುತ್ತಿದ್ದಂತೆ ಸುನಿಲ್ ರಸ್ತೆಪಕ್ಕ ಬಸ್ ನಿಲ್ಲಿಸುವ ಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ವಾಹನ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗದೆ ಎಲ್ಲರೂ ಸುರಕ್ಷಿತವಾಗಿದ್ದಾರೆ.

     

  • ಬಸ್ ಚಾಲನೆ ಮಾಡ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ, ಸಾವು

    ಬಸ್ ಚಾಲನೆ ಮಾಡ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ, ಸಾವು

    – ಕ್ಲೀನರ್ ಸಮಯಪ್ರಜ್ಞೆಯಿಂದ 30 ಪ್ರಯಾಣಿಕರು ಪಾರು

    ತುಮಕೂರು: ಖಾಸಗಿ ಬಸ್ ಚಾಲಕನಿಗೆ ಬಸ್ ಚಾಲನೆ ಮಾಡುತ್ತಿದ್ದ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    56 ವರ್ಷದ ನಾಗರಾಜ್ ಬಸ್‍ನಲ್ಲೇ ಸಾವನ್ನಪ್ಪಿದ ಚಾಲಕ. ತುಮಕೂರಿನ ಶಿರಾ ತಾಲೂಕಿನ ಬರಗೂರು ಬಳಿಯ ಲಕ್ಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಆಂಧ್ರದ ಅಮರಾಪುರದಿಂದ ಶಿರಾ ಮೂಲಕ ತುಮಕೂರಿಗೆ ಬರುತ್ತಿದ್ದ ಬಸ್‍ನಲ್ಲಿ ಚಾಲಕ ನಾಗರಾಜ್‍ಗೆ ಹೃದಯಾಘಾತವಾದ್ದರಿಂದ ಬಸ್ ಹಳ್ಳಕ್ಕೆ ನುಗ್ಗಿದೆ. ಈ ವೇಳೆ ಬಸ್‍ನಲ್ಲಿದ್ದ ಕ್ಲೀನರ್ ಮಾರುತಿ ಓಡಿಬಂದು ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತವಾಗೋದು ತಪ್ಪಿದೆ.

    ಕ್ಲೀನರ್ ಮಾರುತಿ ಸಮಯ ಪ್ರಜ್ಞೆಯಿಂದ ಬಸ್‍ನಲ್ಲಿದ್ದ 30 ಜನ ಪ್ರಯಾಣಿಕರು ಪಾರಾಗಿದ್ದಾರೆ.

  • ನದಿಗೆ ಬಿದ್ದ ಬಸ್ – 6 ಜನರ ಸಾವು, 30 ಪ್ರಯಾಣಿಕರಿಗೆ ಗಾಯ

    ನದಿಗೆ ಬಿದ್ದ ಬಸ್ – 6 ಜನರ ಸಾವು, 30 ಪ್ರಯಾಣಿಕರಿಗೆ ಗಾಯ

    ಹೈದರಾಬಾದ್: ಖಾಸಗಿ ಬಸ್‍ವೊಂದು ನದಿಗೆ ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಬಳಿ ನಡೆದಿದೆ.

    ಇಂದು ಬೆಳಿಗ್ಗೆ ಭುವನೇಶ್ವರದಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ಬಸ್ ವಿಜಯವಾಡಾ ಬಳಿ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು ಸುಮಾರು 30 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಒಡಿಶಾದಿಂದ ತೆಲಂಗಾಣಕ್ಕೆ ಸುಮಾರು 1 ಸಾವಿರ ಕಿಮೀ ಕ್ರಮಿಸಬೇಕಿದ್ದ ಬಸ್ಸನ್ನು ವಿಜಯವಾಡ ಬಳಿ ನಿಲ್ಲಿಸಿ ಬೇರೊಬ್ಬ ಚಾಲಕ ಬಸ್ ಹತ್ತಿದ್ದರು. ಆದ್ರೆ ಬೆಳಿಗ್ಗೆ 5.30ರ ವೇಳೆಯಲ್ಲಿ ಮುಲ್ಲಪಾಡು ಬಳಿ ಸೇತುವೆಯ ಡಿವೈಡರ್‍ಗೆ ಬಸ್ ಡಿಕ್ಕಿ ಹೊಡೆದು ಮುಂದೆ ಹೋಗಿದ್ದು ಎರಡು ಪಥದ ಮಧ್ಯೆ ಇದ್ದ ಸಂದಿಯಲ್ಲಿ ನದಿಗೆ ಉರುಳಿ ಬಿದ್ದಿದೆ.

    ಗ್ಯಾಸ್ ಕಟ್ಟರ್‍ಗಳನ್ನು ಬಳಸಿ ಬಸ್‍ನಲ್ಲಿದ್ದ ಪ್ರಯಾಣಿಕರನ್ನ ರಕ್ಷಣೆ ಮಾಡಲಾಗಿದೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದು, ಆತನ ಅಜಾಗರೂಕತೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

  • ವೀಡಿಯೋ: ಬೆಂಕಿ ಹೊತ್ತಿ  ಧಗಧಗನೆ ಉರಿದ ಐಷಾರಾಮಿ ಬಸ್: 30 ಪ್ರಯಾಣಿಕರು ಪಾರು

    ವೀಡಿಯೋ: ಬೆಂಕಿ ಹೊತ್ತಿ ಧಗಧಗನೆ ಉರಿದ ಐಷಾರಾಮಿ ಬಸ್: 30 ಪ್ರಯಾಣಿಕರು ಪಾರು

    ಹೈದರಾಬಾದ್: 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಐಷಾರಾಮಿ ಬಸ್‍ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತುಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಮಂಗಳವಾರ ಮಧ್ಯಾಹ್ನ ಇಲ್ಲಿನ ಅಲೈರ್ ಬಳಿ ಈ ಘಟನೆ ನಡೆದಿದೆ. ವಾರಂಗಲ್‍ನಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ತೆಲಂಗಾಣದ ಸರ್ಕಾರಿ ಬಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಎಂಜಿನ್‍ನಿಂದ ಕಿಡಿ ಕಾಣಿಸಿಕೊಂಡಿದ್ದನ್ನು ನೋಡಿ ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರಿಗೆ ಕೆಳಗಿಳಿಯುವಂತೆ ಸೂಚಿಸಿದ್ರು. ಅದರಂತೆ ಪ್ರಯಾಣಿಕರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬಸ್ ಬೆಂಕಿಯಲ್ಲಿ ಸಂಪೂರ್ಣ ಭಸ್ಮವಾಗಿದ್ದು, ಇದರ ವೀಡಿಯೋ ದೃಶ್ಯಾವಳಿ ಲಭ್ಯವಾಗಿದೆ.

    ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ನೆಲಮಂಗಲದ ಬಳಿಯೂ ಕೆಎಸ್‍ಆರ್‍ಟಿಸಿ ಬಸ್ ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಸಜೀವ ದಹನವಾಗಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ.

  • 8 ತಿಂಗಳು ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡ್ರೂ ಬೆಂಕಿಯಿಂದ ಮಹಿಳೆಯನ್ನ ರಕ್ಷಿಸಿದ ದಿನೇಶ್

    8 ತಿಂಗಳು ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡ್ರೂ ಬೆಂಕಿಯಿಂದ ಮಹಿಳೆಯನ್ನ ರಕ್ಷಿಸಿದ ದಿನೇಶ್

    ಬೆಂಗಳೂರು: ಎಂಟು ತಿಂಗಳಿನಿಂದ ಕಷ್ಟಪಟ್ಟು ದುಡಿದ ಹಣಕ್ಕಿಂತ ಮಾನವೀಯತೆಗೆ ಬೆಲೆ ಕೊಟ್ಟು ಬೆಂಕಿಯಲ್ಲಿ ಬಿದ್ದವರನ್ನು ರಕ್ಷಿಸಿದ ದಿನೇಶ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಮಂಗಳವಾರ ತಡರಾತ್ರಿ ನಗರದ ಹೊರವಲಯದ ನೆಲಮಂಗಲ ಬಳಿ ಸಾರಿಗೆ ಬಸ್ ಬೆಂಕಿಗೆ ಆಹುತಿಯಾಯಿತು. ಈ ಬಸ್‍ನಲ್ಲಿ ದಿನೇಶ್ ಅವರು ಕೂಡ ಪ್ರಯಾಣಿಸುತ್ತಿದ್ದರು. ಬಸ್ಸಿನೊಳಗೆ ಬೆಂಕಿ ಕಾಣಿಸುತ್ತಲೇ ತಮ್ಮ ಪ್ರಾಣ ಒತ್ತೆಯಿಟ್ಟು ತಾವು ದುಡಿದ 72 ಸಾವಿರ ರೂ. ಕಳೆದುಕೊಂಡು ಮತ್ತೊಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ.

    ದಿನೇಶ್ ಬೆಂಗಳೂರು ನಗರದ ನಿವಾಸಿ. ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದರು. 8 ತಿಂಗಳ ಬಳಿಕ ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದರು. ಮಧ್ಯರಾತ್ರಿ ಕಾಣಿಸಿಕೊಂಡ ಬೆಂಕಿಯಿಂದ ಆಘಾತಕ್ಕೊಳಗಾದ ಪ್ರಯಾಣಿಕರು ಎದ್ನೋ ಬಿದ್ನೋ ಅಂತ ಪ್ರಾಣ ಉಳಿಸಿಕೊಳ್ಳೋಕೆ ಓಡಿ ಹೋಗ್ತಿದ್ರು. ಆದ್ರೆ ದಿನೇಶ್ ಮಾತ್ರ ಪ್ರಾಣ ಲೆಕ್ಕಿಸದೆ ಬೆಂಕಿಗೆ ಸಿಕ್ಕಿ ನರಳಾಡ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ರು. ಅಲ್ಲದೆ ಜೊತೆಗಿದ್ದ ಎಂಟು ವರ್ಷದ ಮಗುವಿಗೂ ಪುನರ್ಜನ್ಮ ನೀಡಿದ್ದಾರೆ.

    ದಿನೇಶ್ ಮುಂಬೈನಲ್ಲಿ ಕಷ್ಟಪಟ್ಟು ದುಡಿದ 72 ಸಾವಿರ ಹಣ ಈ ದುರಂತದಲ್ಲಿ ಭಸ್ಮವಾಗಿದೆ. ಮಹಿಳೆಯನ್ನ ರಕ್ಷಣೆ ಮಾಡೋಕೆ ಮುಂದಾದಾಗ ಬ್ಯಾಗ್‍ನಲ್ಲಿದ್ದ 72 ಸಾವಿರ ಬಸ್‍ನಲ್ಲೇ ಕರಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಪತ್ನಿ ನಾಗಮ್ಮ, ದುಡ್ಡು ಹೋದ್ರೆ ಹೋಯ್ತು ನನ್ನ ಗಂಡನ ಬಗ್ಗೆ ಹೆಮ್ಮೆಯಿದೆ ಎಂದು ಹೇಳ್ತಾರೆ.

    ಸದ್ಯ ದಿನೇಶ್ ಅವರಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ತನ್ನ ಜೀವ ಉಳಸಿಕೊಂಡ್ರೆ ಸಾಕಪ್ಪ ಅನ್ನೋ ಜನರ ಮಧ್ಯೆ ತಮ್ಮ ಜೀವ ಅಡವಿಟ್ಟು ಬೇರೊಬ್ಬರ ಜೀವ ಉಳಿಸಿದ ದಿನೇಶ್‍ಗೆ ನಮ್ಮದೊಂದು ಸಲಾಂ.

    https://www.youtube.com/watch?v=w2JNLF_DZ54